Tag: Halebidu

  • ವಿದ್ಯುತ್ ಬಿಲ್ ಪಾವತಿಸದ ಪುರಾತತ್ವ ಇಲಾಖೆ- ಕತ್ತಲಲ್ಲಿ ಹಳೇಬೀಡು ಹೊಯ್ಸಳೇಶ್ವರ ದೇವಾಲಯ

    ವಿದ್ಯುತ್ ಬಿಲ್ ಪಾವತಿಸದ ಪುರಾತತ್ವ ಇಲಾಖೆ- ಕತ್ತಲಲ್ಲಿ ಹಳೇಬೀಡು ಹೊಯ್ಸಳೇಶ್ವರ ದೇವಾಲಯ

    ಹಾಸನ: ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಜಿಲ್ಲೆಯ ಬೇಲೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಹಳೇಬೀಡು ಹೊಯ್ಸಳೇಶ್ವರ ದೇವಾಲಯದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಕತ್ತಲಲ್ಲೇ ದೇವರ ದರ್ಶನ ಮಾಡುವಂತಾಗಿದೆ.

    6 ತಿಂಗಳಿಂದ ಸುಮಾರು 45,000 ರೂ. ವಿದ್ಯುತ್ ಬಿಲ್‍ಅನ್ನು ಪುರಾತತ್ವ ಇಲಾಖೆ ವಿಭಾಗ ಪಾವತಿಸಬೇಕಿದೆ. ಪ್ರತಿನಿತ್ಯ ದೇಗುಲಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ದೇವಾಲಯದ ಒಳಗೆ ಕತ್ತಲೆಯ ಇರುವ ಕಾರಣ ದೇಗುಲದ ಒಳಭಾಗದ ಶಿಲ್ಪಕಲೆಯನ್ನು ಸವಿಯಲಾಗದೆ ನಿರಾಶರಾಗುತ್ತಿದ್ದಾರೆ. ಸಾವಿರಾರು ಜನ ಭೇಟಿ ನೀಡುವ ದೇಗುಲದ ವಿದ್ಯುತ್ ಬಿಲ್ ಭರಿಸಲಾಗದ ಪುರಾತತ್ವ ಇಲಾಖೆ ವಿರುದ್ಧ ಪ್ರವಾಸಿಗರು ಬೇಸರ ಹೊರಹಾಕುತ್ತಿದ್ದಾರೆ.

    ಮೂರು ತಿಂಗಳ ಹಿಂದೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಸೆಸ್ಕ್ ಸಿಬ್ಬಂದಿ ದೇವಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ರು. ಈ ವೇಳೆ ವಿದ್ಯುತ್ ಬಾಕಿ ಪಾವತಿಸುವುದಾಗಿ ಪುರಾತತ್ವ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದರು. ಹೀಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಅಂದಿನಿಂದಲೂ ಬಿಲ್ ಬಾಕಿ ಇದ್ದು, ಈಗ ಮೊತ್ತವೂ ಹೆಚ್ಚಾಗಿರುವ ಕಾರಣ ನಿಯಮಾನುಸಾರ ಕನೆಕ್ಷನ್ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಇತಿಹಾಸ ಪ್ರಸಿದ್ಧ ದೇಗುಲದ ವಿದ್ಯುತ್ ಬಿಲ್ ಪಾವತಿಸುವಷ್ಟು ಹಣ ಸರ್ಕಾರದ ಬೊಕ್ಕಸದಲ್ಲಿ ಇಲ್ಲವೇ ಎಂದು ಪ್ರವಾಸಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

  • ನಂದಿಬೆಟ್ಟ, ಚಾಮುಂಡಿಬೆಟ್ಟ, ಬೇಲೂರು, ಹಳೇಬೀಡಿಗೆ ಕೆಎಸ್‍ಟಿಡಿಸಿಯಿಂದ ಪ್ರವಾಸ ಆಯೋಜನೆ

    ನಂದಿಬೆಟ್ಟ, ಚಾಮುಂಡಿಬೆಟ್ಟ, ಬೇಲೂರು, ಹಳೇಬೀಡಿಗೆ ಕೆಎಸ್‍ಟಿಡಿಸಿಯಿಂದ ಪ್ರವಾಸ ಆಯೋಜನೆ

    ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎರಡು ವಿಶೇಷ ಪ್ರವಾಸವನ್ನು ಆಯೋಜಿಸಿದೆ.

    ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಕೈಗೆಟಕುವ ದರದಲ್ಲಿ ನಂದಿಬೆಟ್ಟ ಮತ್ತು ಮೈಸೂರು, ಹಾಸನ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸವನ್ನು ಆಯೋಜಿಸಿದೆ. ಏಪ್ರಿಲ್ 1ರಿಂದ ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

    1.ಬೆಂಗಳೂರು-ದೇವನಹಳ್ಳಿ-ನಂದಿಬೆಟ್ಟ ಪ್ರವಾಸ: ಒಂದು ದಿನದ ಪ್ರವಾಸವಾಗಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಈ ಪ್ರವಾಸವನ್ನು ಆಯೋಜಿಸಲಾಗುತ್ತಿದೆ. ಈ ಪ್ರವಾಸವು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ನಿರ್ಗಮಿಸಿ ದೇವನಹಳ್ಳಿ ಕೋಟೆ-ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಜನ್ಮಸ್ಥಳ-ನಂದಿಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ಸಾಯಂಕಾಲ 5 ಗಂಟೆವರೆಗೆ ನಂದಿಬೆಟ್ಟದ ವೀಕ್ಷಣೆ ಮಾಡುವ ವ್ಯವಸ್ಥೆ ಇರುತ್ತದೆ. ಈ ಪ್ರವಾಸದ ದರವು ಪ್ರತಿಯೊಬ್ಬರಿಗೆ ಊಟದ ವ್ಯವಸ್ಥೆ ಸೇರಿ 700 ರೂ. ಆಗಿರುತ್ತದೆ.

    2.ಬೆಂಗಳೂರು-ಮೈಸೂರು-ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ-ಪ್ರವಾಸ: ಇದು 2 ದಿನಗಳ ಪ್ರವಾಸವಾಗಿದ್ದು, ಮೊದಲನೆ ದಿನ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಶ್ರೀರಂಗಪಟ್ಟಣ-ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆ.ಆರ್ ಸಾಗರ ವೀಕ್ಷಣೆ ಮತ್ತು ಕೆ.ಆರ್ ಸಾಗರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡನೇ ದಿನ ಬೆಳಿಗ್ಗೆ ಕೆ.ಆರ್ ಸಾಗರದಿಂದ ಹೊರಟು ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ ವೀರನಾರಾಯಣಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡುವ ವ್ಯವಸ್ಥೆ ಇದೆ. ಈ ಪ್ರವಾಸದ ದರವು ಊಟದ ವ್ಯವಸ್ಥೆ ಸೇರಿ ಪ್ರತಿಯೊಬ್ಬರಿಗೆ 1,900 ರೂ. ಆಗಿದೆ.

    ಪ್ರವಾಸಿಗರು ಇದೇ ರೀತಿ ಮುಂಬರುವ ಬೇಸಿಗೆ ರಜೆ ಹಿನ್ನೆಲೆಯಲ್ಲಿ ನಿಗಮದಿಂದ ಮೈಸೂರು-ಊಟಿ-ಕೊಡೆಕೆನಾಲ್-ಕೊಡಗಿನ ಪ್ರವಾಸಿ ಸ್ಥಳಗಳಿಗೆ ಬೇಡಿಕೆಗೆ ಅನುಗುಣವಾಗಿ ಪ್ರವಾಸಗಳನ್ನು ಆಯೋಜಿಸಲಾಗಿದೆ. ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಲು, ಬುಕ್ಕಿಂಗ್ ಗಾಗಿ
    www.kstdc.co  ವೆಬ್ ಸೈಟ್ ಹಾಗೂ ದೂರವಾಣಿ ಸಂಖ್ಯೆ – 89706 50070, 080-43344334 ಸಂಪರ್ಕಿಸಬಹುದಾಗಿದೆ.