Tag: Haladi Srinivas Shetty

  • ಹಾಲಾಡಿ ಶ್ರೀನಿವಾಸ ಶೆಟ್ಟಿ ಒಂದು ಸಾವಿರ ಅಂತರದಿಂದ ಕೊನೆಗೆ ಲಕ್ಷ ಮತ ಪಡೆದ ರೋಚಕ ಕಥೆ!

    ಹಾಲಾಡಿ ಶ್ರೀನಿವಾಸ ಶೆಟ್ಟಿ ಒಂದು ಸಾವಿರ ಅಂತರದಿಂದ ಕೊನೆಗೆ ಲಕ್ಷ ಮತ ಪಡೆದ ರೋಚಕ ಕಥೆ!

    ಉಡುಪಿ: ಕರಾವಳಿಯ ವಾಜಪೇಯಿ ಎಂಬೂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಜನ ಬಿರುದು ಕೊಟ್ಟಿದ್ದು ಸುಮ್ ಸುಮ್ನೆ ಅಲ್ಲ. ಕುಂದಾಪುರದ ಕರ್ಣ ಅಂತ ಕಳೆದ ಐದು ಟರ್ಮ್ ನಲ್ಲಿ ಹಾಲಾಡಿ ಹೆಸರುವಾಸಿಯಾಗಿದ್ದಾರೆ ಅಂದ್ರೆ ಜನ ಹಾಲಾಡಿಯನ್ನು ಕೇವಲ ರಾಜಕಾರಣಿಯಾಗಿ ಎಂದೂ ಪರಿಗಣಿಸಲೇ ಇಲ್ಲ. ಶ್ರೀನಿವಾಸ ಶೆಟ್ರು ಮನೆ ಮಗ ಅಂತ ಕುಂದಾಪುರದ ಜನ ಭಾವಿಸಿದ್ದಾರೆ. ಪ್ರೀತಿ ತೋರಿದ್ದಾರೆ. ಕಾಂಗ್ರೆಸ್‍ನ ಭದ್ರಕೋಟೆಯನ್ನು ಭೇದಿಸಿ ಹಾಲಾಡಿ ಐದು ಬಾರಿ ಶಾಸಕ ಕುರ್ಚಿ ಮೇಲೆ ಕುಳಿತುಕೊಂಡದ್ದು ಒಂದು ದೊಡ್ಡ ಸಾಹಸವೇ.

    ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ (Haladi Srinivas Shetty) ಇಡೀ ಕರಾವಳಿ ಬಿಜೆಪಿಗೆ ಒಂದು ದೊಡ್ಡ ಶಕ್ತಿ. ಅದೊಂದು ಎಷ್ಟು ದೊಡ್ಡ ಶಕ್ತಿ ಎಂದರೆ ಅವರ ರಾಜೀನಾಮೆಯಿಂದ ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತಳಮಳಕ್ಕೊಳಗಾಗಿದೆ. ಆಯ್ದಕ್ಕೈದು ನಾವೇ ಗೆದ್ದು ಬಿಡುತ್ತೇವೆ ಎಂದು ಎನ್ನುವ ಕಾರಿನಲ್ಲಿ ಓಡಾಡುತ್ತಿದ್ದ ಬಿಜೆಪಿಯ ಮುಖಂಡರು ದಿಕ್ಕು ತೋಚದಂತಾಗಿದ್ದಾರೆ ನಾಲ್ವರು ಶಾಸಕರು ಗಲಿಬಿಲಿಗೊಂಡಿದ್ದಾರೆ. ಉಡುಪಿಯ ಐದು ಸೀಟುಗಳನ್ನು ಗೆದ್ದೇ ಬಿಡುತ್ತೇವೆ ಎಂದು ಅಂದುಕೊಂಡಿದ್ದ ಬಿಜೆಪಿಯ ಪಂಡಿತರು ಈಗ ಲೆಕ್ಕಾಚಾರ ಹಾಕುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಹಾಲಾಡಿ ಎಂಬ ರಾಜಕಾರಣಿಯ ನಿವೃತ್ತಿ.

    ಶ್ರೀನಿವಾಸ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಜನಸೇವೆ ಸಲ್ಲಿಸಿದ್ದರೂ, ಉಡುಪಿ ಕಾರ್ಕಳ, ಬೈಂದೂರು, ವಿಧಾನಸಭಾ ಕ್ಷೇತ್ರಗಳ ಮೇಲೆ ಪ್ರಭಾವ ಹೊಂದಿದ್ದರು. ಹಿಂದೆ ಕಾಪು ವಿಧಾನಸಭಾ ಕ್ಷೇತ್ರದಲ್ಲೂ ಅಭ್ಯರ್ಥಿಯ ಪರ ಒಂದು ವಾರ ಪ್ರಚಾರ ಮಾಡಿ ಗೆಲ್ಲಿಸಿದ್ದರು. ಸಜ್ಜನ ಮತ್ತು ಸಾಮಾಜಿಕ ನ್ಯಾಯ ಈ ಎರಡು ವರ್ಚಸ್ಸುಗಳು ಹಾಲಾಡಿ ಅವರನ್ನು ಮತ್ತು ಅವರು ಬೆಂಬಲಿಸಿದ ಅಭ್ಯರ್ಥಿಗಳನ್ನ ನಿರಂತರವಾಗಿ ಗೆಲ್ಲಿಸುತ್ತಾ ಬಂದಿದೆ.

    ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಚುನಾವಣಾ ರಾಜಕೀಯಕ್ಕೆ ವಿದಾಯದ ಘೋಷಿಸುವುದರ ಮೂಲಕ ಜಿಲ್ಲೆಯ ರಾಜಕಾರಣದೊಳಗೆ ಬದಲಾವಣೆಗಳಿಗೆ ಇದೀಗ ಕಾರಣವಾಗಿದ್ದಾರೆ. ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಕುಂದಾಪುರ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಲು ಹಾಲಾಡಿ ಶ್ರೀನಿವಾಸ ಶೆಟ್ಟರೇ ಕಾರಣ. ಬಂಟ ಸಮುದಾಯ ಬಹುಕಾಲ ಬಿಜೆಪಿ ಜೊತೆ ಇರಲು ಹಾಲಾಡಿಯೇ ಕಾರಣ. ಇದೀಗ ಈ ಎಲ್ಲಾ ಲೆಕ್ಕಾಚಾರಗಳು ಜಿಲ್ಲೆಯ ರಾಜಕೀಯ ಪಂಡಿತರಲ್ಲಿ ಕೇಳಿಬರುತ್ತಿದೆ.

    ಸದ್ಯ ಹಾಲಾಡಿ ಶ್ರೀನಿವಾಸ ಶೆಟ್ಟರು ತಮ್ಮ ಆಪ್ತಮಿತ್ರ, ಸಹೋದರ ಸಮಾನ ಎಂದು ಗುರುತಿಸಿಕೊಂಡಿರುವ ಕಿರಣ್ ಕುಮಾರ್ ಕೊಡ್ಗಿ (Kiran Kumar Kodgi) ಯವರ ರಾಜಕೀಯ ಭವಿಷ್ಯಕ್ಕಾಗಿ, ಕ್ಷೇತ್ರವನ್ನು ತ್ಯಾಗ ಮಾಡುವುದರೊಂದಿಗೆ ತನ್ನ ಸುಖ, ದುಃಖದಲ್ಲಿ ಭಾಗಿಯಾಗಿ 25 ವರ್ಷಗಳ ಕಾಲ ತನಗಾಗಿ, ತನ್ನ ಚುನಾವಣೆಗಾಗಿ ದುಡಿದ ಕಿರಣ್ ಕೊಡ್ಗಿಯವರಿಗಾಗಿ ಈ ತೀರ್ಮಾನ ಎಂದು ಹೇಳಲಾಗುತ್ತಿದೆ. ಹಾಲಾಡಿ ಮತ್ತು ಕೊಡ್ಗಿಯ ಪರಿಚಯ, ಗೆಳೆತನ 40 ವರ್ಷದ್ದು.

    ಬಿಜೆಪಿ ಪಕ್ಷವು 9BJP Party) ಹಿಂದಿನಿಂದಲೂ ಜಿಲ್ಲೆಯಲ್ಲಿ ಬಂಟರಿಗೆ ಸ್ಥಾನಮಾನವನ್ನು ನೀಡುತ್ತಾ ಬಂದಿದೆ. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿರುಷ್ಟು ಕಾಲ ಯಾವ ಬಂಟರಿಗೂ ಬಿಜೆಪಿಯಲ್ಲಿ ಟಿಕೇಟ್ ಪಡೆಯುವ ಅವಕಾಶ ಸಾಧ್ಯ ಆಗಿಲ್ಲ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಂಟ ಮತ ಹೆಚ್ಚಿದ್ದು ಕೊಡ್ಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಬಂಟ ಮತಗಳನ್ನು ಬಿಜೆಪಿಯ ಒಳಗೆ ಇಟ್ಟುಕೊಳ್ಳಬೇಕಾದರೆ ಹಾಲಾಡಿಯ ವಿಶ್ವಾಸವನ್ನು ಗಳಿಸಲೇಬೇಕಾಗಿದೆ. ಜಿಲ್ಲಾ ಬಿಜೆಪಿ ಹಾಲಾಡಿಯವರನ್ನು ಹೊರತುಪಡಿಸಿ ಯಾವುದೇ ನಿರ್ಧಾರವನ್ನು ಕೈಗೊಳ್ಳುವುದು ಸುಲಭವಿಲ್ಲ. ಹೀಗಾಗಿ ಕುಂದಾಪುರ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿ ಯಾರೆಂಬುದರ ಮೂಲಕ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಯಾರಿಗೆ ಸೀಟು ನೀಡಲಿದೆ ಎಂಬುದು ಸ್ಪಷ್ಟಗೊಳ್ಳುತ್ತದೆ.

    ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ವಿದಾಯ ಪತ್ರದೊಂದಿಗೆ ಮುಂದೆಯೂ ಬಿಜೆಪಿಗೆ ಬೆಂಬಲಿಸಿ ಎಂದು ಕರೆ ನೀಡಿದ್ದಾರೆ. ಸದ್ಯ ಕುಂದಾಪುರ ಕ್ಷೇತ್ರದ ಹಾಲಾಡಿಯವರ ಅಭಿಮಾನಿಗಳು ಕಿರಣ್ ಕೊಡ್ಗಿಯವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ನಾಲ್ಕು ಬಾರಿ ಬಿಜೆಪಿಯಲ್ಲಿ, ಒಂದು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರತೀ ಚುನಾವಣೆಯಲ್ಲೂ ಗೆಲುವಿನ ಅಂತರ ಹೆಚ್ಚಿಸಿಕೊಂಡು ಹೋಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ 8 ರಿಂದ 10 ಸಾವಿರ ಹೆಚ್ಚು ಲೀಡ್ ಬರುತ್ತದೆ ಎಂದು ಲೆಕ್ಕಾಚಾರವಿತ್ತು. ಇದನ್ನೂ ಓದಿ: ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

    ಹಾಲಾಡಿ 1999ರಲ್ಲಿ ಕಾಂಗ್ರೆಸ್‍ (Congress)  ನ ಹಿರಿಯ ನಾಯಕ ಪ್ರತಾಪ್‍ ಚಂದ್ರ ಶೆಟ್ಟಿ (PratapChandra Shetty) ವಿರುದ್ಧ 1,021 ಅಂತರದ ಗೆಲುವು ಸಾಧಿಸಿದ್ದರು. ಇದು ಶ್ರೀನಿವಾಸ ಶೆಟ್ಟರ ಮೊದಲ ಗೆಲುವು. 2004 ರಲ್ಲಿ ಕಾಂಗ್ರೆಸ್‍ನ ಅಶೋಕ್ ಕುಮಾರ್ ಹೆಗ್ಡೆ ವಿರುದ್ಧ 19,665 ಅಂತರದ ಗೆಲುವಾಯಿತು. ಎರಡನೇ ಬಾರಿಗೆ ಹಾಲಾಡಿ ಶಾಸಕರಾದರು. 2008ರ ಚುನಾವಣೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಬಿಜೆಪಿ ಪರ 71695 ಮತ ಸಿಕ್ಕಿತು. ಜಯಪ್ರಕಾಶ್ ಹೆಗ್ಡೆಗೆ – ಕಾಂಗ್ರೆಸ್ ಮೂಲಕ 46612 ಮತ ಸಿಕ್ಕಿ ಸೋಲಾಯಿತು. ಆಗ ಗೆಲುವಿನ ಅಂತರ 25,083.

    ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನದ ಭರವಸೆ ನೀಡಿ ತಪ್ಪಿಸಿದರು ಎಂಬ ಕಾರಣಕ್ಕೆ ಕ್ಷೇತ್ರದ ಮತದಾರರು ಮತ್ತು ಅಭಿಮಾನಿಗಳ ಅಭಿಪ್ರಾಯದಂತೆ 2013 ರಲ್ಲಿ ಹಾಲಾಡಿ- ಪಕ್ಷೇತರರಾಗಿ ಸ್ಪರ್ಧೆ ಮಾಡಿದರು. 80563 ಮತ ಪಡೆದರೆ, ಮಲ್ಯಾಡಿ ಶಿವರಾಮ ಶೆಟ್ಟಿ- ಕಾಂಗ್ರೆಸ್ ನಿಂದ 39952 ಮತ ಪಡೆದರು. ಗೆಲುವಿನ ಅಂತರ – 40611 ಆಯ್ತು. ಶ್ರೀನಿವಾಸ್ ಶೆಟ್ಟಿ ಅವರ ವರ್ಚಸ್ಸು ಬೆಳೆಯುತ್ತಲೇ ಹೋಯಿತು. ಅವರ ಸಿಂಪ್ಲಿಸಿಟಿ ಜನರ ಜೊತೆಗೆ ಇರುವ ನಿರಂತರ ಸಂಪರ್ಕ ಶಾಸಕರಾದ ನಂತರ ಜನಸಂಪರ್ಕ, ಸ್ಪಂದಿಸುವ ರೀತಿ ಇತರೆ ರಾಜಕಾರಣಿಗಳಿಗೆ ಇಲ್ಲದ ಗುಣಗಳು ಹಾಲಾಡಿಗೆ ಇರುವುದನ್ನು ಜನ ಮೆಚ್ಚಿಕೊಂಡರು.

    2018ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಜೀವಮಾನದಲ್ಲೇ ಅತಿ ದೊಡ್ಡ ಅಂತರ ತಂದುಕೊಟ್ಟ ಚುನಾವಣೆ. ಹಾಲಾಡಿ ಮತ್ತೆ ಬಿಜೆಪಿಯಿಂದ ಸ್ಪರ್ಧೆ ಮಾಡಿದರು. 103434 ಲಕ್ಷ ಮತ ಪಡೆದರು. ಕಾಂಗ್ರೆಸ್ ನಿಂದ ರಾಕೇಶ್ ಮಲ್ಲಿ 40029 ಪಡೆದರು. ಗೆಲುವಿನ ಅಂತರ 56,405 ಆಗಿತ್ತು. ಚುನಾವಣೆಗೆ ಬಿಜೆಪಿ ಇವರಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಹಾಲಾಡಿಗೆ ಒಲವಿರುವ ಅಭ್ಯರ್ಥಿ ಗೆ ಬಿಜೆಪಿ ಮಣೆ ಹಾಕದಿದ್ದರೆ ಕುಂದಾಪುರ ವಿಧಾನಸಭಾ ಕ್ಷೇತ್ರ 2013ರ ಚುನಾವಣೆಯನ್ನು ಮತ್ತೆ ನೆನಪಿಸಿಕೊಳ್ಳಬೇಕಾದೀತು.

  • ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

    ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

    ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಘೋಷಣೆಯಾದ ತಕ್ಷಣ ಬೇರೆ ಬೇರೆ ರಾಜಕೀಯ ವಿದ್ಯಮಾನಗಳ ನಡೆಯುತ್ತಿದೆ. ಕೆಲ ಪಕ್ಷದ ಶಾಸಕರು ರಾಜೀನಾಮೆ ನೀಡಿ ಬೇರೆ ಪಕ್ಷ ಸೇರುತ್ತಿದ್ದಾರೆ. ಈ ನಡುವೆ ಕರಾವಳಿಯ ರಾಜಕಾರಣಿಗಳ ಪೈಕಿ ಛಾಪು ಮೂಡಿಸಿದ್ದ ಹಾಲಾಡಿ ರಾಜಕೀಯ ನಿವೃತ್ತಿಯ ಘೋಷಣೆ ಮಾಡಿದ್ದಾರೆ. ಗುರುವಿನ ಋಣ ತೀರಿಸಲು ನಿರ್ಧರಿಸಿದ್ದಾರೆ.

    ಹಾಲಾಡಿ ಶ್ರೀನಿವಾಸ ಶೆಟ್ಟಿ (Halady Srinivas Shetty) ಕುಂದಾಪುರದ ವಾಜಪೇಯಿ ಎಂದೇ ಫೇಮಸ್. ಕಳೆದ ಐದು ಅವಧಿ ಅಂದರೆ 25 ವರ್ಷಗಳ ಕಾಲ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರದ ಶಾಸಕ. ಈ ಬಾರಿ ಕೂಡ ಹಾಲಾಡಿ ಶ್ರೀನಿವಾಸ ಶೆಟ್ಟಿ ತನ್ನ ಕೊನೆಯ ಚುನಾವಣೆಯನ್ನು ಎದುರಿಸುತ್ತಾರೆ ಎಂಬ ಮಾತುಗಳಿದ್ದವು. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ. ಈಗಿನ ರಾಜಕೀಯಕ್ಕೆ ನನ್ನ ಮನಸ್ಸು ಒಪ್ಪುವುದಿಲ್ಲ ಎಂಬ ಅಭಿಪ್ರಾಯಗಳನ್ನು ಹಾಲಾಡಿ ತಮ್ಮ ಆಪ್ತರ ಜೊತೆ ಹೇಳಿಕೊಂಡಿದ್ದಾರಂತೆ.

    ಭಾನುವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ (BJP) ಕೋರ್ ಕಮಿಟಿ ಸಭೆಯಲ್ಲೂ ಹಾಲಾಡಿ ಭಾಗವಹಿಸಿದ್ದರು. ರಾಜ್ಯದ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಮುಂದೆ ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ತಮ್ಮ ಆಪ್ತರ ಜೊತೆ ನಿವೃತ್ತಿಯ ಮಾತುಗಳನ್ನಾಡಿ ಸೋಮವಾರ ಸಂಜೆ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: 25 ವರ್ಷಗಳಿಂದ ಸೋಲಿಲ್ಲದ ಸರದಾರ – ಕರಾವಳಿಯ ವಾಜಪೇಯಿ ಶ್ರೀನಿವಾಸ ಶೆಟ್ಟಿ

     

    ಪ್ರಕಟಣೆಯಲ್ಲಿ ಏನಿದೆ?
    ಕುಂದಾಪುರ ಕ್ಷೇತ್ರದ( Kundapura Assembly constituency) ಜನ ನನ್ನನ್ನು ಐದು ಬಾರಿ ಆಯ್ಕೆ ಮಾಡಿದ್ದಾರೆ. ಗ್ರಾಮೀಣ ಭಾಗ ಹೆಚ್ಚಿರುವ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಅವಕಾಶ ಸಿಕ್ಕಿದೆ. ಕುಂದಾಪುರ ಕ್ಷೇತ್ರದ ಶಾಸಕನಾಗಿ ನಿಷ್ಠೆಯಿಂದ, ಪ್ರೀತಿಯಿಂದ ಕೆಲಸ ಮಾಡಿದ್ದೇನೆ. ಈ ಬಾರಿ ಸ್ವಇಚ್ಛೆಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಐದು ಬಾರಿ ದಾಖಲೆಯ ಮತಗಳಿಂದ ಗೆಲ್ಲಿಸಿದ್ದಕ್ಕೆ ಧನ್ಯವಾದ. ಅಧಿಕಾರಿ ವರ್ಗ, ಕುಂದಾಪುರ ಜನತೆ -ಮಾಧ್ಯಮಗಳಿಗೆ ಧನ್ಯವಾದ. ಪಕ್ಷದ ಕಾರ್ಯಕರ್ತರಿಗೆ, ಬಿಜೆಪಿ ನಾಯಕರಿಗೆ ಅಭಿಮಾನಿಗಳಿಗೆ ನಾನು ಚಿರಋಣಿ. ನಾಲ್ಕು ಬಾರಿ ಕುಂದಾಪುರದ ಟಿಕೆಟ್ ನೀಡಿದ ಬಿಜೆಪಿಗೆ ಧನ್ಯವಾದಗಳು. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಎಲ್ಲಾ ಮತಬಾಂಧವರು ಸಹಕರಿಸಿ.

    ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ಎ.ಜಿ ಕೊಡ್ಗಿ ರಾಜಕೀಯಕ್ಕೆ ಕರೆದುಕೊಂಡು ಬಂದಿದ್ದರು. ಆರಂಭದ ಎರಡು ಅವಧಿಗಳಲ್ಲಿ ಹಾಲಾಡಿಯ ಗೆಲುವಿನ ಹಿಂದೆ ಕೊಡ್ಗಿ ಬೆಂಬಲ ಇತ್ತು. ಗುರುವಿನ ಋಣವನ್ನು ತೀರಿಸಲು ಎ ಜಿ ಕೊಡ್ಗಿ (AG Kodgi) ಅವರ ಪುತ್ರ ಕಿರಣ್ ಕೊಡ್ಗಿ ಅವರಿಗೆ ಈ ಬಾರಿ ಕುಂದಾಪುರದ ಟಿಕೆಟ್ ಕೊಡಿಸಲು ಹಾಲಾಡಿ ಉತ್ಸುಕರಾಗಿದ್ದಾರೆ. ಹಾಲಾಡಿ ಅವರು ತಮ್ಮ ಹಿತೈಷಿಗಳ ಜೊತೆ ಆಪ್ತರ ಜೊತೆ ಈ ಮಾತುಗಳನ್ನು ಹೇಳಿದ್ದಾರೆ. ಇದನ್ನೂ ಓದಿ: ನನ್ನದು ಮೌನ ವೃತ, ಪ್ರತಿಭಟಿಸಿ ಸಚಿವನಾಗೋದು ಧರ್ಮವಲ್ಲ: ಹಾಲಾಡಿ

    ಹಾಲಾಡಿ ರಾಜಕೀಯ ನಿವೃತ್ತಿಯಾಗಿ ಕುಂದಾಪುರದ ಬಿಜೆಪಿ ಟಿಕೆಟ್ ಕೊಡ್ಗಿಗೆ ಸಿಕ್ಕರೆ ಇಡೀ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗುತ್ತದೆ. ಹಾಲಾಡಿ ಬಂಟ ಸಮುದಾಯಕ್ಕೆ ಸೇರಿದ್ದು ಆ ಸಮುದಾಯಕ್ಕೆ ಬೇರೆ ಕಡೆ ಟಿಕೆಟ್ ಕೊಡಬೇಕಾಗುತ್ತದೆ. ಈ ಎಲ್ಲಾ ಲೆಕ್ಕಾಚಾರವನ್ನು ಇಟ್ಟುಕೊಂಡು ಜಿಲ್ಲೆಯ ಕೆಲ ಹಾಲಿ ಶಾಸಕರ ಟಿಕೆಟ್ ತಪ್ಪುವ  ಸಾಧ್ಯತೆ ಇದೆ.

  • 25 ವರ್ಷಗಳಿಂದ ಸೋಲಿಲ್ಲದ ಸರದಾರ – ಕರಾವಳಿಯ ವಾಜಪೇಯಿ ಶ್ರೀನಿವಾಸ ಶೆಟ್ಟಿ

    25 ವರ್ಷಗಳಿಂದ ಸೋಲಿಲ್ಲದ ಸರದಾರ – ಕರಾವಳಿಯ ವಾಜಪೇಯಿ ಶ್ರೀನಿವಾಸ ಶೆಟ್ಟಿ

    ಉಡುಪಿ: ಸಾಮಾಜಿಕ ನ್ಯಾಯ ಎಂದು ಹೇಳುತ್ತಾ ಕುಂದಾಪುರ ವಿಧಾನಸಭಾ ಕ್ಷೇತ್ರದ (Kundapura Assembly Constituency) ಐದು ಬಾರಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ (Haladi Srinivas Shetty) ಕರಾವಳಿಯ ರಾಜಕೀಯದಲ್ಲೇ ಒಬ್ಬ ವಿಭಿನ್ನ ಜನಪ್ರತಿನಿಧಿ.

    ಜನ ಪ್ರೀತಿಯಿಂದ ಇವರಿಗೆ ʼಕರಾವಳಿಯ ವಾಜಪೇಯಿʼ ಎಂದು ಹೆಸರನ್ನಿಟ್ಟಿದ್ದಾರೆ. ಕ್ಷೇತ್ರದಲ್ಲಿ ಆಗುವ ಯಾವುದೇ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಗುದ್ದಲಿ ಪೂಜೆ ಮಾಡುವುದಿಲ್ಲ. ಉದ್ಘಾಟನೆ ನಡೆಸುವುದಿಲ್ಲ. 25 ವರ್ಷಗಳಿಂದ ಎಲ್ಲವೂ ಸರ್ಕಾರಿ ಅಧಿಕಾರಿಗಳ ಕೈಯಲ್ಲೇ ಮಾಡಿಸುತ್ತಿದ್ದಾರೆ.

    1999 ರಿಂದ ಆರಂಭಗೊಂಡು ಇಲ್ಲಿಯವರೆಗೆ ಸೋಲಿಲ್ಲದ ಸರದಾರ ಎಂದೇ ಎನಿಸಿಕೊಂಡಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಜಾತಿಯನ್ನು ಮೀರಿ ಹಾಲಾಡಿ ನಿರಂತರವಾಗಿ ಗೆದ್ದುಕೊಂಡು ಬಂದಿದ್ದಾರೆ‌. ಇದನ್ನೂ ಓದಿ: ರಾಜಕೀಯ ಅನುಭವ ಇಲ್ಲದೇ ಇದ್ರೂ ಶಿರಾದಲ್ಲಿ ತಾವರೆ ಅರಳಿಸಿದ ರಾಜೇಶ್‌ ಗೌಡ!

    ವರ್ಷದಿಂದ ವರ್ಷಕ್ಕೆ ಹಾಲಾಡಿಯ ಗೆಲುವಿನ ಅಂತರ ದೊಡ್ಡದಾಗುತ್ತಾ ಹೋಗುತ್ತಿರುವುದು ವಿಶೇಷ. ಹಿಂದೆ 2,500 ಮತಗಳ ಅಂತರ ಈಗ 50 ಸಾವಿರಕ್ಕೆ ಏರಿಕೆಯಾಗಿದೆ. ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂದು ಜನ ನಂಬಿದ್ದಾರೆ. ಕಷ್ಟ ಅಂತ ಮನೆಗೆ ಬಂದ ಜನರನ್ನು ಹಾಲಾಡಿ ಬರಿಗೈಯಲ್ಲಿ ವಾಪಸ್ ಕಳಿಸುವುದಿಲ್ಲ.

    ಶಾಸಕರ ಮನೆಗೆ ಬಂದವರಿಗೆ ದಿನಾ ಚಹಾ, ಆಪಲ್, ಬಾಳೆಹಣ್ಣು, ಆಮ್ಲೆಟ್ ಫಿಕ್ಸ್. ನಾಲ್ಕು ಬಾರಿ ಬಿಜೆಪಿಯಿಂದ 2013ರಲ್ಲಿ ಬಿಜೆಪಿಯ ಜೊತೆ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧೆ ಮಾಡಿ ಗೆದ್ದಿದ್ದರು.

    2018ರಲ್ಲಿ ಹಾಲಾಡಿಗೆ 1,03,434 ಮತ ಬಿದ್ದರೆ ಕಾಂಗ್ರೆಸ್‌ನ ರಾಕೇಶ್ ಮಲ್ಲಿಗೆ 40,029 ಮತಗಳು ಬಿದ್ದಿದ್ದವು. 2013 ಪಕ್ಷೇತರವಾಗಿ ಸ್ಪರ್ಧಿಸಿದ್ದಾಗ ಶ್ರೀನಿವಾಸ ಶೆಟ್ಟಿ ಅವರಿಗೆ 80,563 ಕಾಂಗ್ರೆಸ್ಸಿನ ಮಲ್ಯಾಡಿ ಶಿವರಾಮ ಶೆಟ್ಟಿಗೆ 39,952 ಮತಗಳು ಸಿಕ್ಕಿತ್ತು. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಾಡಿಗೆ 71,695 ಮತಗಳು ಬಿದ್ದರೆ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗಡೆಗೆ 46,612 ಮತಗಳು ಬಿದ್ದಿದ್ದವು.

  • ಕುಂದಾಪುರದಿಂದ ಹೊರಟಿದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ಪತ್ರ

    ಕುಂದಾಪುರದಿಂದ ಹೊರಟಿದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ಪತ್ರ

    ಉಡುಪಿ: ಇನ್ನೆರಡು ದಿನಗಳಲ್ಲಿ ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಗುರುವಾರ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಮಾಹಿತಿಯಿದೆ. ಈ ನಡುವೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿಸ್ಥಾನ ಕೊಡಬೇಕು ಎಂಬ ಕೂಗು ಜೋರಾಗಿದೆ. ಹಾಲಾಡಿ ಅಭಿಮಾನಿಗಳು ಯಡಿಯೂರಪ್ಪನವರಿಗೆ ನೇರ ಪತ್ರ ಬರೆದಿದ್ದಾರೆ.

    ನಾಲ್ಕು ಬಾರಿ ಬಿಜೆಪಿಯಲ್ಲಿ ಗೆದ್ದ ಒಂದು ಬಾರಿ ಪಕ್ಷೇತರರಾಗಿ ಗೆದ್ದು ಬಿಜೆಪಿಗೆ ಬೆಂಬಲಿಸಿದ ಉಡುಪಿ ಜಿಲ್ಲೆ ಕುಂದಾಪುರ ಶಾಸಕ, ಕುಂದಾಪುರದ ವಾಜಪೇಯಿ ಎಂಬ ಹೆಗ್ಗಳಿಕೆ ಗಳಿಸಿರುವ ಹಾಲಾಡಿಗೆ ಈ ಬಾರಿ ಮೋಸ ಆಗಬಾರದು ಎಂಬ ಅಭಿಯಾನ ಶುರುವಾಗಿದೆ. ಪತ್ರವೊಂದನ್ನು ಅಭಿಮಾನಿಗಳು ಮಾಜಿ ಸಿಎಂ ಯಡಿಯೂರಪ್ಪ ಅವರಿಗೇ ಬರೆದಿದ್ದಾರೆ.

    ಯಡಿಯೂರಪ್ಪನವರಿಗೆ ತಲುಪಿಸಿ ಬಿಡಿ ಪ್ಲೀಸ್:
    ಇದನ್ನ ಯಡಿಯೂರಪ್ಪನವರಿಗೆ ಮತ್ತು ಪಕ್ಷದ ವರಿಷ್ಠರಿಗೆ ನೀವು ತಲುಪಿಸಬೇಕು. ಆ ಕಾರಣಕ್ಕಾಗಿಯೇ ಬರೆಯುತ್ತಿದ್ದೇನೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಒಬ್ಬ ಮತದಾರನಾಗಿ ಬರೆಯುತ್ತಿರುವ ಪತ್ರವಿದು. ಇದನ್ನೂ ಓದಿ: ಕೋವಿಡ್ ಬರೋಕೆ ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ: ಸಿದ್ದರಾಮಯ್ಯ

    ಯಡಿಯೂರಪ್ಪನವರೇ ಕುಂದಾಪುರದಲ್ಲಿ ಹಾಲಾಡಿಯವರ ವಿರುದ್ಧ ಪ್ಲೇ ಕಾರ್ಡ್ ಹಿಡಿದಾಗ ನೀವೇ ಖುರ್ಚಿಯಿಂದ ಎದ್ದು ಬಂದು ಹಾಲಾಡಿ ಶ್ರೀನಿವಾಸ ಶೆಟ್ಟರು ನಮ್ಮ ಶಕ್ತಿ, ಅವರನ್ನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಅಬ್ಬರಿಸಿದ್ದೀರಿ. ಶೆಟ್ಟರಿಗೆ ಮೊದಲ ಸಲ ಬೆಂಗಳೂರಿಗೆ ಕರೆದು ಕೊನೆಯ ಹಂತದಲ್ಲಿ ಮಂತ್ರಿ ಪದವಿ ತಪ್ಪಿದಾಗ, ಶಾಸಕರ ಭವನದಲ್ಲಿ ಶೆಟ್ಟರ ಅಭಿಮಾನಿಗಳು ಜಮಾಯಿಸಿದಾಗ ಖುದ್ದು ನೀವೇ ಎದ್ದು ಬಂದಿರಿ. ಹಾಲಾಡಿ ಅಭಿಮಾನಿಗಳು ಆಕ್ರೋಶದಲ್ಲಿ ನಿಮಗೂ ಧಿಕ್ಕಾರ ಕೂಗಿದಾಗ ಹಾಲಾಡಿಯೇ ಹೊರಗೆ ಬಂದು ಅಬ್ಬರಿಸಿ ಬಿಟ್ಟಿದ್ದರು. ಅವರೊಂದಿಗೆ ಮಾತುಕತೆ ಮಾಡಿ ಹೊರ ಬಂದ ನೀವು ನಾಳೆಯೊಳಗೆ ಸಿಹಿ ಸುದ್ದಿ ಕೊಡುತ್ತೇವೆ ಎಂದಿದ್ದೀರಿ. ಆ ನಾಳೆ ಇಂದಿಗೂ ಬರಲಿಲ್ಲ, ನೀವು ಮರೆತಿರಿ, ಆದರೆ ನಾವು ಮರೆಯಲಿಲ್ಲ.

    ನೀವು ಕಿಂಗ್ ಮೇಕರ್ ಸಾರ್:
    ಸದಾನಂದ ಗೌಡರನ್ನ ಮುಖ್ಯಮಂತ್ರಿ ಮಾಡಿದ್ದು ನೀವು. ಕೊನೆಗೆ ಅವರು ನಿಮ್ಮ ಮಾತು ಕೇಳದೆ ತಿರುಗಿ ಬಿದ್ದಾಗ ಹಠಕ್ಕೆ ಬಿದ್ದು ಜಗದೀಶ್ ಶೆಟ್ಟರನ್ನ ತಂದು ಕೂರಿಸಿದ್ದೀರಿ. ಮೊನ್ನೆ ಬಸವರಾಜ್ ಬೊಮ್ಮಾಯಿಯೂ ನಿಮ್ಮ ಕೃಪೆಯಿಂದಲೇ ಮುಖ್ಯಮಂತ್ರಿಯಾದದ್ದು. ನಿಮ್ಮ ಸಂಪುಟದಲ್ಲಿ ಇದ್ದವರೆಲ್ಲಾ ಸುಭಗರ ಸ್ವಾಮಿ? ಒಮ್ಮೆಯೂ ಹಾಲಾಡಿಯವರನ್ನ ಮಂತ್ರಿಯಾಗಿಸಬೇಕು ಅಂತ ನಿಮಗೆ ಅನ್ನಿಸಲೇ ಇಲ್ಲವಾ? ಯಾಕೆ? ಹಾಲಾಡಿ ಬೇಕು ಎನ್ನುವುದಿಲ್ಲ, ಕೊಡದಿದ್ದರೆ ನಡೆಯೋತ್ತೆ ಎನ್ನುವ ನಿರ್ಲಕ್ಷ್ಯ ಅಲ್ಲವೇ?

    ಅವತ್ತು ಹಾಲಾಡಿಗೆ ಅವಕಾಶ ತಪ್ಪಿಸಿದ್ದು ಕಲ್ಲಡ್ಕ ಪ್ರಭಾಕರ ಭಟ್ಟರು ಎಂಬ ಸುದ್ದಿ ಹೊರಬಿತ್ತಲ್ಲಾ? ಅದು ನೀವು ಹಾಲಾಡಿಯವರ ರೂಮಿನಿಂದ ಹೊರಗೆ ಬಂದಮೇಲೇ ಬಿದ್ದ ಸುದ್ದಿ?! ಅದರ ಮೂಲ ಯಾವುದು ಎಂಬುದನ್ನ ನಾನು ಬಲ್ಲೆ, ರಾಜಕಾರಣ ನನಗೆ ಬಹಳ ಸೊಗಸಾಗಿ ಅರ್ಥವಾಗುತ್ತದೆ. ಮಂತ್ರಿ ಮಂಡಲ ರಚನೆಯ ಹಿಂದಿನ ದಿವಸ ಹರತಾಳ ಹಾಲಪ್ಪ ಶಾಸಕರ ಭವನದ ಮುಂದೆ ವಾಕಿಂಗ್ ಮಾಡುತ್ತಿದ್ದರು. ಅವರನ್ನೇ ಕೇಳಿ ಬೇಕಿದ್ದರೆ, ಆಗ ಅವರ ಕೈ ತುಂಡಾಗಿತ್ತು. ಬಹಳ ಗಂಭೀರವಾಗಿ ಚರ್ಚಿಸುತ್ತಿದ್ದರು, ನನಗೆ ಅದೆಲ್ಲವೂ ನಂತರ ಅರ್ಥವಾಗಿತ್ತು.

    ನಿಮ್ಮ ವಿರುದ್ಧ ಮತ್ತು ಹಾಲಪ್ಪ ವಿರುದ್ಧ ಸಿಡಿದೆದ್ದಿದ್ದ ಬೇಳೂರು ಗೋಪಾಲ ಕೃಷ್ಣರು ಈಡಿಗ ಕೋಟಾದಡಿ ಮಂತ್ರಿಯಾಗಬೇಕಿತ್ತು. ಹಾಲಪ್ಪ ಗೆಳೆಯನ ಹೆಂಡತಿಯ ಸೆರಗೆಳೆದ ಆರೋಪ ಹೊತ್ತು ಕಳಂಕಿತರಾಗಿದ್ದರು. ಶತಾಯಗತಾಯ ಬೇಳೂರಿಗೆ ಸ್ಥಾನ ಕೊಡಕೂಡದು ಅದಕ್ಕೆ ಪರ್ಯಾಯವಾಗಿ ಬಿಲ್ಲವ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಕೊಡಬೇಕು ಎಂದು ಬಲವಾಗಿ ನಿಮ್ಮ ಕಿವಿ ಊದಿದ್ದು ಹರತಾಳು ಎಂಬುದನ್ನು ನಾನು ಬಲ್ಲೆ. ನಿಮಗೂ ಅದೇ ಬೇಕಿತ್ತು. ನಿಮ್ಮ ಕಾರಣದಿಂದಾಗಿಯೇ ಹಾಲಾಡಿಯವರಿಗೆ ಮಂತ್ರಿ ಸ್ಥಾನ ತಪ್ಪಿತ್ತು. ದೇವರ ಮುಂದೆ ನಿಂತು ಇದನ್ನು ನಿರಾಕರಿಸಬಲ್ಲಿರಾ?

    ಮುಂದೆ ನೀವೇ ಹಾಲಾಡಿಯವರ ಮನೆಗೆ ಓಡೋಡಿ ಬಂದಿರಿ, ಆಗ ಶೋಭ ಕರಂದ್ಲಾಜೆ ಪರವಾಗಿ ಹಾಲಾಡಿ ಬೆಂಬಲ ಬೇಕಿತ್ತು. ರಾಜ್ಯದ ಪ್ರತೀ ನಾಯಕನೂ ನಿಮ್ಮ ಮನೆಗೇ ಬಂದರೆ ಅವತ್ತು ನೀವೇ ಹಾಲಾಡಿ ಮನೆಗೆ ಹೋಗಿ ವಿನಂತಿಸಿಕೊಂಡು ಬಿಟ್ಟಿರಿ. ಕೊಟ್ಟ ಮಾತು ತಪ್ಪಿಸದ ಹಾಲಾಡಿ ನೀವು ಹೇಳಿದಂತೆ ಕೆಲಸ ಮಾಡಿದರು, ದೊಡ್ಡ ಲೀಡ್ ಕೂಡ ತನ್ನ ಕ್ಷೇತ್ರದಲ್ಲಿ ಕೊಡಿಸಿದರು. ಮೊನ್ನೆ ಏನೇನೋ ಕಸರತ್ತು ಮಾಡಿ ಸರ್ಕಾರ ಮಾಡಿದಾಗ ನೀವು ಹಾಲಾಡಿಯವರನ್ನ ನೆನಪಿಸಿಕೊಳ್ಳುತ್ತೀರಿ ಎಂದು ಭಾವಿಸಿದ್ದೆವು. ನೀವು ಮರೆತಿರಿ, ಎರಡನೆ ಸಲವೂ ಮತ್ತೆ ಅದೇ ನಿಲುವಿಗೆ ಅಂಟಿಕೊಂಡಿರಿ. ಯಡಿಯೂರಪ್ಪನವರೇ ನೀವು ಖಂಡಿತ ತಪ್ಪು ಮಾಡಿದ್ದೀರಿ. ನಿಮಗಿದನ್ನು ವಿವರಿಸಿ ಹೇಳುವವರು ಯಾರು? ನನಗೂ ಗೊತ್ತಿಲ್ಲ.

    ಬಿಜೆಪಿ ವರಿಷ್ಠರೆ ಗಮನಿಸಿ:
    ಅಂದು ಹಾಲಾಡಿ ಪ್ರತಾಪ ಶೆಟ್ಟರನ್ನ ಸೋಲಿಸದೇ ಇದ್ದಿದ್ದರೆ ಅವರು ಗೆದ್ದು ಮಂತ್ರಿಯಾಗಿರುತ್ತಿದ್ದರು. ಆಗ ಇಡೀ ಉಡುಪಿ ಜಿಲ್ಲೆಯಲ್ಲಿ ಇದ್ದಿದ್ದೇ ಏಕೈಕ ಶಾಸಕ. ತಾನೂ ಗೆದ್ದು ಪಕ್ಷವನ್ನೂ ದೊಡ್ಡ ಎತ್ತರಕ್ಕೆ ಕೊಂಡೊಯ್ದ ಹಾಲಾಡಿಯವರು ನಿರ್ಮಲಾ ಸಿತಾರಾಮನ್ ರಾಜ್ಯಸಭೆಗೆ ಸ್ಪರ್ಧಿಸಿದಾಗ ತನ್ನ ಮತವನ್ನ ಮಾರಿಕೊಂಡಿದ್ದರೆ ಹಲವು ಕೋಟಿ ನಿರಾಯಸವಾಗಿ ಪಡೆಯಬಹುದಿತ್ತು. ಆಗ ಅವರು ಪಕ್ಷೇತರ ಶಾಸಕನಾಗಿದ್ದು, ಅಪವಾದವೂ ಬರುತ್ತಿರಲಿಲ್ಲ! ಲೇಹರ್ ಸಿಂಗ್ ನಿಮ್ಮ ಮನೆಗೇ ಬರುತ್ತೇನೆ ಎಂದಾಗ ಬರಗೊಡಲಿಲ್ಲ. ಆಗಲೂ ಬಾಜಪ ಪರವಾಗಿ ಕೆಲಸ ಮಾಡಿ ಎಲ್ಲಿಯೂ ಪಕ್ಷಕ್ಕೆ ಚ್ಯುತಿ ತರಲಿಲ್ಲ ಹಾಲಾಡಿ.

    ನಿಮ್ಮ ಪಕ್ಷದಲ್ಲಿರುವ ಅತ್ಯಂತ ಪ್ರಾಮಾಣಿಕರಲ್ಲೇ ಪ್ರಾಮಾಣಿಕ ರಾಜಕಾರಣಿ ಎಂದರೆ ಹಾಲಾಡಿ. ಇಂತಹ ಸಚ್ಚಾರಿತ್ರ್ಯವಂತನಿಗೆ ಈ ಸಾರಿಯೂ ಗೌರವ ನೀಡದೇ ಇದ್ದರೆ ದೇವರೂ ನಿಮ್ಮನ್ನು ಕ್ಷಮಿಸುವುದಿಲ್ಲ. ಈ ಸಾರಿಯೂ ಹಾಲಾಡಿಗೆ ಅವಮಾನವಾದರೆ ಯಾರೂ ಪ್ರತಿಭಟಿಸುವುದಿಲ್ಲ, ಪಕ್ಷ ಬಿಡುವುದಿಲ್ಲ, ಟಯರ್ ಸುಡುವುದಿಲ್ಲ, ಗಲಾಟೆಯಾಗುವುದಿಲ್ಲ ಆದರೆ ಯಾರೆಲ್ಲ ಇದರ ಹಿಂದಿದ್ದೀರೋ ನಿಮ್ಮೆಲ್ಲರಿಗೂ ಹಾಲಾಡಿ ಅಭಿಮಾನಿಗಳ ಶಾಪ ತಾಕದೇ ಇರುವುದಿಲ್ಲ. ಬಾಕಿ ಉಳಿದ ಒಂದು ವರ್ಷ ಆರು ತಿಂಗಳ ಅವಧಿಯ ಮಂತ್ರಿ ಪದವಿ ಕೊಡದಿದ್ದರೆ ಹಾಲಾಡಿ ಏನು ಅಳುವುದಿಲ್ಲ, ಇಂಥಹ ಮನುಷ್ಯನಿಗೆ ಅವಕಾಶ ನೀಡುವ ಅವಕಾಶವಿದ್ದೂ ಅದನ್ನು ಕಳೆದುಕೊಂಡ ನಿಮ್ಮ ನಿಲುವುಗಳು ಮುಂದೊಂದು ದಿನ ಪಶ್ಚಾತಾಪಕ್ಕೆ ಕಾರಣವಾಗಲಿದೆ.

    ಇತಿಹಾಸದ ಪುಟದಲ್ಲಿ ಇದೊಂದು ಕಪ್ಪು ಚುಕ್ಕೆಯಾಗದಿದ್ದರೆ ಕೇಳಿ. ನಮ್ಮದೇನು ಆಗ್ರಹವಿಲ್ಲ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ ಎಂದಾದರೆ ಏನೇನೂ ಅಭ್ಯಂತರವಿಲ್ಲ. ಈ ಸಾರಿ ಹಾಲಾಡಿಗೆ ಅವಕಾಶ ಕೊಟ್ಟರೆ ಕರಾವಳಿ ಮಾತ್ರವಲ್ಲ ರಾಜ್ಯದ ಕೋಟ್ಯಂತರ ಪ್ರಾಮಾಣಿಕ ಮನಸುಗಳು ನಿಮ್ಮನ್ನು ಮೆಚ್ಚಬಹುದು.

    ನಮಸ್ಕಾರ
    ಈ ಪತ್ರ ವಾಟ್ಸಪ್ ಫೇಸ್ಬುಕ್ ಇನ್ಸ್ಟಾಗ್ರಾಂ ಮೂಲಕ ಎಲ್ಲೆಡೆ ಹರಿದಾಡುತ್ತಿದೆ. ಹಾಲಾಡಿ ಅಭಿಮಾನಿಗಳು ಇದರ ಪ್ರಿಂಟ್ ಔಟ್ ತೆಗೆದು ಯಡಿಯೂರಪ್ಪನವರಿಗೆ ಪೋಸ್ಟ್ ಮಾಡುತ್ತಿದ್ದಾರೆ.

  • Exclusive: ಉಸಿರಿರೋತನಕ ಕೇಳಿ ಸಚಿವ ಸ್ಥಾನ ಪಡೆಯಲ್ಲ- ಕುಂದಾಪುರದ ವಾಜಪೇಯಿ ಹಾಲಾಡಿ ನೇರ ನುಡಿ

    Exclusive: ಉಸಿರಿರೋತನಕ ಕೇಳಿ ಸಚಿವ ಸ್ಥಾನ ಪಡೆಯಲ್ಲ- ಕುಂದಾಪುರದ ವಾಜಪೇಯಿ ಹಾಲಾಡಿ ನೇರ ನುಡಿ

    – ಪಬ್ಲಿಕ್ ಟಿವಿ ಜೊತೆ ಮನಸ್ಸು ಬಿಚ್ಚಿಟ್ಟ ಹಾಲಾಡಿ ಶ್ರೀನಿವಾಸ್ ಶೆಟ್ಟಿ

    ಉಡುಪಿ: ನಾನು ಸಚಿವ ಸ್ಥಾನವನ್ನು ಯಾರ ಬಳಿಯೂ ಕೇಳಲು ಹೋಗುವುದಿಲ್ಲ. ನನ್ನ ಉಸಿರು ಇರೋತನಕ ನಾನು ಬೆಂಗಳೂರಿಗೆ ಹೋಗಿ ಸಚಿವ ಸ್ಥಾನ ಕೇಳಲ್ಲ. ಯಾರ ಕಾಲಿಗೂ ಬೀಳುವುದಿಲ್ಲ ಎಂದು ಉಡುಪಿ ಜಿಲ್ಲೆಯ ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾವ ನಾಯಕನ ಹಿಂದೆ ಸುತ್ತು ಬರುತ್ತಾ ತಿರುಗಾಡಲು ಹೋಗುವುದಿಲ್ಲ. ನಾನು ರಾಜಕೀಯದಲ್ಲಿ ಸಮತೋಲನ ಕಳೆದುಕೊಳ್ಳುವುದಿಲ್ಲ. ನಾನು ರಾಜಕೀಯದಲ್ಲಿ ಸ್ವಾಭಿಮಾನ ಬಿಟ್ಟಿಲ್ಲ. ಈ ಹಿಂದೆ ನನ್ನನ್ನು ಕರೆದು ತಪ್ಪು ಮಾಡಿದ್ದರು. ಆಗಲೂ ನಾನು ಸಚಿವ ಸ್ಥಾನ ಕೇಳಿರಲಿಲ್ಲ. ಈಗಲೂ ಕೇಳಲು ಹೋಗಲ್ಲ ಎಂದರು.

    ಸರ್ಕಾರಿ ಕಾರು ಗನ್ ಮ್ಯಾನ್ ಮನೆ ಬೇಡ:
    ರಾಜಕೀಯ ಲಾಬಿ, ಜಾತಿವಾದಿತನ ನಾನು ಮಾಡುವುದಿಲ್ಲ. ಯಾರ ಕಾಲಿಗೆ ಬಿದ್ದು ನಾನು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ನಾನು ಅದನ್ನು ನಿಭಾಯಿಸುತ್ತೇನೆ. ಶ್ರದ್ಧೆಯಿಂದ ಮಾಡುತ್ತೇನೆ. ಶಾಸಕನಾಗಿ ಜನ ಸೇವೆಯನ್ನು ಐದು ಅವಧಿಯಲ್ಲೂ ಮಾಡುತ್ತಿದ್ದೇನೆ ಎಂದು ಹಾಲಾಡಿ ಹೇಳಿದರು.

    ನಾನು ಮಂತ್ರಿಯಾದರೆ ಸರ್ಕಾರಿ ಕಾರು, ಎಸ್ಕಾರ್ಟ್, ಗನ್ ಮ್ಯಾನ್ ತೆಗೆದುಕೊಳ್ಳುವುದಿಲ್ಲ. ನಾನು ಜನರ ಜೊತೆ ಕೆಲಸ ಮಾಡುವವನು ನನಗೆ ಯಾವ ಜೀವ ಭಯವಿಲ್ಲ. ಜೀವ ಭಯ ಇದ್ದವರು ಜನಸೇವೆ ಮಾಡಲು ಸಾಧ್ಯವಿಲ್ಲ. ನನಗೆ ಈವರೆಗೆ ಯಾರಿಂದಲೂ ಯಾವುದೇ ಕರೆಗಳು ಮಾಹಿತಿಗಳು ಬಂದಿಲ್ಲ. ಕರೆ ಬಂದರೆ ನಾನು ಇದನ್ನು ಹೇಳಲು ಸಿದ್ಧನಿದ್ದೇನೆ ಎಂದರು. ನಾನು ಹೆಡ್ ರಾಜಕಾರಣಿ ಅಲ್ಲ. ನನ್ನದು ನೇರನುಡಿಯ ರಾಜಕಾರಣ. ದುರಹಂಕಾರ ಅಲ್ಲ, ಯಾರ ಭಯದಲ್ಲೂ ಇಲ್ಲ. ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿರೋದು ಎಂದರು.

    ಸ್ಥಾನಮಾನ ಕೇಳುವುದು ಪ್ರಜಾಪ್ರಭುತ್ವ ಅಲ್ಲ
    ಕೇಳಿ ಸಚಿವ ಸ್ಥಾನವನ್ನ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ. ಕೇಳಿ ಅಧಿಕಾರವನ್ನು ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಲ್ಲ. ಶ್ವಾಸ ಇದ್ದರೆ ಸಚಿವ ಸ್ಥಾನ ಕೇಳಲು ಹೋಗಲ್ಲ. ನಾನು ಜಾತ್ಯಾತೀತ ರಾಜಕಾರಣಿ. ನನ್ನ ಹುಟ್ಟಿನಿಂದ ನಾನು ಜಾತಿ ಸಂಘರ್ಷಕ್ಕೆ ಹೋಗಿಲ್ಲ. ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ಧಾರಕ್ಕಾಗಿ ಜನ ನನ್ನನ್ನು ಗೆಲ್ಲಿಸಿದ್ದಲ್ಲ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು. ಇದನ್ನೂ ಓದಿ: ಇಂದಿನಿಂದ ಆಗಸ್ಟ್ 1ರವರೆಗೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಜಾತಿವಾದಿಗಳು ಶಾಸಕರಾಗಲೇಬಾರದು
    ಜಾತಿವಾದಿಗಳು ಜಾತಿಯ ಸಂಘಕ್ಕೆ ಸಚಿವರಾಗಬೇಕು. ಜಾತಿವಾದಿಗಳು ಯಾವುದೇ ಕಾರಣಕ್ಕೂ ಶಾಸಕರಾಗಬಾರದು. ಜಾತಿವಾದಿಗಳು ಸಾರ್ವತ್ರಿಕ ಚುನಾವಣೆಗೆ ಬರಬಾರದು. ನನ್ನಲ್ಲಿ ಯಾವುದೇ ನಾಟಕೀಯ ಮಾತುಗಳು ಇಲ್ಲ. ಉಪಯೋಗಕ್ಕೆ ಇಲ್ಲದ್ದನ್ನ ಕೊಟ್ಟರೆ ಕಿಸೆಗೆ ಹಾಕಿಕೊಂಡು ಬರುವುದಿಲ್ಲ. ಶಾಸಕರು ಹೆರಿಗೆ ಕೋಣೆಯ ದಾದಿಯ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಮಾರ್ಮಿಕವಾಗಿ ಹೇಳಿದರು. ನನ್ನ ಮಾತುಗಳನ್ನು ನೀವು ಹೇಗೆ ಬೇಕಾದರೂ ವಿಶ್ಲೇಷಣೆ ಮಾಡಿಕೊಳ್ಳಬಹುದು. ವಿಶ್ಲೇಷಣೆ ಮಾಡಲು ಮಾಧ್ಯಮಗಳಿಗೆ ಹಕ್ಕು ಇದೆ ಎಂದರು. ಇದನ್ನೂ ಓದಿ: ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗೋದು ನನಗೆ ಇಷ್ಟವಿಲ್ಲ: ಜಗದೀಶ್ ಶೆಟ್ಟರ್

    ಹಾಲಾಡಿ ಶ್ರೀನಿವಾಸ್ ಶೆಟ್ಟಿ ಉಡುಪಿ ಜಿಲ್ಲೆಯ ಕುಂದಾಪುರದ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಸಚಿವ ಸ್ಥಾನ ಕೊಡುವುದಾಗಿ ಬೆಂಗಳೂರಿಗೆ ಕರೆಸಿಕೊಂಡು ಬಿಜೆಪಿ ಒಮ್ಮೆ ಮೋಸ ಮಾಡಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿ ಸ್ಥಾನ ಕೊಡುವ ಬದಲು ಕೋಟ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ನೀಡಿತ್ತು. ಆ ಬೇಸರದಿಂದ ಪಕ್ಷೇತರರಾಗಿ ಹಾಲಾಡಿ ಸ್ಪರ್ಧೆ ಮಾಡಿ ಸುಮಾರು 40,611 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಬಿ.ಎಸ್ ಯಡಿಯೂರಪ್ಪ ಮತ್ತು ಟೀಂ ಸಂಧಾನ ಮಾಡಿ ಹಾಲಾಡಿ ತಣ್ಣಗಾಗಿದ್ದರು. ಪಕ್ಷೇತರರಾಗಿ ಗೆದ್ದ ನಂತರ ಐದು ವರ್ಷದ ಅವಧಿಯ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ತೇಜಸ್ವಿನಿ ಅನಂತ್ ಕುಮಾರ್, ಮಗಳು ಜೆಡಿಎಸ್‍ಗೆ ಬಂದ್ರೆ ಸ್ವಾಗತ, ಪಕ್ಷದಲ್ಲಿ ಉತ್ತಮ ಗೌರವ: ಎಚ್‍ಡಿಕೆ

  • ರಾಜ್ಯಾಧ್ಯಕ್ಷರ ಅಭಿನಂದನಾ ಸಭೆಗೆ ಉಡುಪಿಯ ಇಬ್ಬರು ಬಿಜೆಪಿ ಶಾಸಕರು ಗೈರು

    ರಾಜ್ಯಾಧ್ಯಕ್ಷರ ಅಭಿನಂದನಾ ಸಭೆಗೆ ಉಡುಪಿಯ ಇಬ್ಬರು ಬಿಜೆಪಿ ಶಾಸಕರು ಗೈರು

    – ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷರ ಮೊದಲ ಭೇಟಿ ಹೊತ್ತಲ್ಲೇ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದನಾ ಸಭೆಗೆ ಜಿಲ್ಲೆಯ ಎರಡು ಬಂಟ ಶಾಸಕರು ಗೈರಾಗಿದ್ದಾರೆ.

    ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನಳೀನ್ ಕುಮಾರ್ ಕಟೀಲ್ ಅವರು ಉಡುಪಿಗೆ ಆಗಮಿಸಿದ್ದರು. ಈ ಸಂದರ್ಭ ಜಿಲ್ಲಾ ಬಿಜೆಪಿ ನಾಯಕರಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಶೇಷಶಯನ ಸಭಾ ಭವನದಲ್ಲಿ ನಳೀನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನಾ ಸಭೆಯೂ ಆಯೋಜನೆಯಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಗೈರಾಗಿದ್ದ ಇಬ್ಬರು ಶಾಕಸಕರ ವಿಚಾರವೇ ಇಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯ್ತು.

    ಈ ಮೂಲಕ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗಗೊಂಡಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಈ ಸಭೆಗೆ ಗೈರು ಹಾಜರಾಗಿದ್ದಾರೆ. ವೇದಿಕೆಯಲ್ಲಿ ಹಾಲಾಡಿಗೆ ಕುರ್ಚಿ ಇಟ್ಟು, ಹೆಸರಿನ ಸ್ಟಿಕ್ಕರ್ ಅಂಟಿಸಿ ಬಿಜೆಪಿ ಕಾರ್ಯಕರ್ತರಯ ಕಾದದ್ದೇ ಬಂತು ವಿನಃ ಶಾಸಕರು ಮಾತ್ರ ಬರಲಿಲ್ಲ.

    ನಳಿನ್ ಕುಮಾರ್ ಕಟೀಲ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬೈಂದೂರು ಸುಕುಮಾರ ಶೆಟ್ಟಿ ಬಂಟ ಸಮುದಾಯದವರು. ಜಾತಿಗೆ ಜಾತಿ ಹಗೆ ಅನ್ನೋದು ಕರಾವಳಿಯಲ್ಲಿ ಚಾಲ್ತಿಯಲ್ಲಿರುವ ಗಾದೆಯಾಗಿದೆ. ಅದರಂತೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಯಡಿಯೂರಪ್ಪ ಬೆಂಬಲಿಗನಾಗಿರೋದರಿಂದ ಕಟೀಲ್ ಅವರ ಅಭಿನಂದನಾ ಸಭೆಗೆ ಬಂದಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸಂಪುಟ ರಚನೆ ಮಾಡುವಾಗ ಉಡುಪಿ ಜಿಲ್ಲೆಯಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟರಿಗೆ ಸ್ಥಾನ ಸಿಗುವ ನಿರೀಕ್ಷೆಯನ್ನು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ಬಂಟ ಸಮುದಾಯ ಇರಿಸಿತ್ತು. ಆದರೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಗೆ ಮಂತ್ರಿ ಸ್ಥಾನ ನೀಡಿದ್ದಕ್ಕೆ ಕುಂದಾಪುರ ಶಾಸಕರು ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು.

    ಜಿಲ್ಲೆಯ ಬಂಟ ಸಮುದಾಯ ಕೂಡ ಬಿಜೆಪಿ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿತ್ತು. ಹೀಗಾಗಿಯೇ ಇಂದು ಕುಂದಾಪುರ ಶಾಸಕರು ರಾಜ್ಯಾಧ್ಯಕ್ಷರ ಅಭಿನಂದನಾ ಸಭೆಗೆ ಗೈರಾಗಿದ್ದಾರೆ. ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ ಕೂಡ ಗೈರಾಗುವ ಮೂಲಕ ತಮ್ನ ಅಸಮಾಧಾನವನ್ನು ಹೊರಗೆಡವಿದ್ದಾರೆ. ಸಚಿವ ಸಂಪುಟ ರಚನೆ ಬಳಿಕ ಒಳಗೊಳಗೆ ಅಸಮಾಧಾನ ಕುದಿಯುತ್ತಿದ್ದರೂ ನಮ್ಮಲ್ಲಿ ಅಸಮಾಧಾನ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.