Tag: Hajj Pilgrimage

  • 370 ದಿನ, 8640 ಕಿ.ಮೀ – ಕಾಲ್ನಡಿಗೆಯಲ್ಲೇ ಮೆಕ್ಕಾ ತಲುಪಿದ ಕೇರಳದ ವ್ಯಕ್ತಿ

    370 ದಿನ, 8640 ಕಿ.ಮೀ – ಕಾಲ್ನಡಿಗೆಯಲ್ಲೇ ಮೆಕ್ಕಾ ತಲುಪಿದ ಕೇರಳದ ವ್ಯಕ್ತಿ

    ನವದೆಹಲಿ: ಜಗತ್ತಿನ ಜನರು ಹುಬ್ಬೇರಿಸಿ ನೋಡುವಂತ ನಿರ್ಧಾರ ತೆಗೆದುಕೊಂಡಿದ್ದ ಕೇರಳದ (Kerala) ಮಲಪ್ಪುರಂ ಜಿಲ್ಲೆಯ ವಲಂಚೇರಿ ಮೂಲದ ಶಿಹಾಬ್ ಚೋಟ್ಟೂರ್ (Shihab Chottur) ಕಾಲ್ನಡಿಗೆಯಲ್ಲಿಯೇ ಯಶಸ್ವಿಯಾಗಿ ಮೆಕ್ಕಾ (Mecca) ತಲುಪಿದ್ದಾರೆ. 2022ರ ಜೂನ್ 2 ರಂದು ಕಾಲ್ನಡಿಗೆ ಮೂಲಕ ಯಾತ್ರೆ ಕೈಗೊಂಡಿದ್ದ ಅವರು ಮದೀನಾ ಮೂಲಕ ಈಗ ಮೆಕ್ಕಾ ತಲುಪಿದ್ದಾರೆ.

    ಶಿಹಾಬ್ ಕೇರಳದಿಂದ ಕಾಲ್ನಡಿಗೆ ಆರಂಭಿಸಿ ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ಅನ್ನು ಕ್ರಮಿಸಿ, ಮೇ ಎರಡನೇ ವಾರದಲ್ಲಿ ಕುವೈತ್‌ನಿಂದ ಸೌದಿ ಅರೇಬಿಯಾದ ಗಡಿಯನ್ನು ದಾಟಿದರು. ಸೌದಿ ಅರೇಬಿಯಾವನ್ನು ಪ್ರವೇಶಿಸಿದ ನಂತರ ಶಿಹಾಬ್ ಪ್ರಮುಖ ಇಸ್ಲಾಮಿಕ್ ಯಾತ್ರಾ ಸ್ಥಳವಾದ ಮದೀನಾಕ್ಕೆ ತಲುಪಿ 21 ದಿನಗಳ ಕಾಲ ತಂಗಿ ಬಳಿಕ ಮೆಕ್ಕಾ ತಲುಪಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಹೊಸ ಬಾಂಬ್

    ಶಿಹಾಬ್ ಚೋಟ್ಟೂರ್ ಈ ಪ್ರಯಾಣ ಪೂರ್ಣಗೊಳಿಸಲು 370 ದಿನಗಳನ್ನು ತೆಗೆದುಕೊಂಡಿದ್ದು, 8640 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ. ಈ ಹಂತದಲ್ಲಿ ಅವರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಶಿಹಾಬ್ ವಾಘಾ ಗಡಿಯನ್ನು ತಲುಪುವ ಮೊದಲು ದೇಶದ ಹಲವಾರು ರಾಜ್ಯಗಳ ಮೂಲಕ ನಡೆದು ಪಾಕಿಸ್ತಾನವನ್ನು ಪ್ರವೇಶಿಸಲು ಬಯಸಿದ್ದರು.

    ಶಿಹಾಬ್ ವೀಸಾ ಹೊಂದಿಲ್ಲದ ಕಾರಣ ಪಾಕಿಸ್ತಾನದ ವಲಸೆ ಅಧಿಕಾರಿಗಳು ಅವರನ್ನು ತಡೆದರು. ಟ್ರಾನ್ಸಿಟ್ ವೀಸಾ ಪಡೆಯಲು ವಾಘಾದ ಶಾಲೆಯೊಂದರಲ್ಲಿ ತಿಂಗಳುಗಟ್ಟಲೆ ಕಾದ ಬಳಿಕ ಅಂತಿಮವಾಗಿ ವೀಸಾ ಪಡೆಯುವಲ್ಲಿ ಸಫಲರಾದರು. ಬಳಿಕ ಪಾಕಿಸ್ತಾನ ತಲುಪಿದ ಅವರು 4 ತಿಂಗಳ ನಂತರ ಹಜ್ ಯಾತ್ರೆಗಾಗಿ ಶಿಹಾಬ್ ಚೋಟ್ಟೂರ್ ತಮ್ಮ ಗಮ್ಯಸ್ಥಾನವನ್ನು ತಲುಪಿದರು. ಇದನ್ನೂ ಓದಿ: ದೇಶದ ಕೋಟ್ಯಂತರ ಜನ ಗಡ್ಡ ಬಿಟ್ಟಿದ್ದಾರೆ, ಅವರೆಲ್ಲ ಲಾಡೆನ್ ಆಗುತ್ತಾರಾ? – ಬಿಜೆಪಿಗೆ ಮನೋಜ್ ಝಾ ಪ್ರಶ್ನೆ

  • ಹಜ್ ಯಾತ್ರೆಗೆ ಕೂಡಿಟ್ಟಿದ್ದ 5 ಲಕ್ಷ ರೂ. ದೇಣಿಗೆ ನೀಡಿದ ಅಜ್ಜಿ

    ಹಜ್ ಯಾತ್ರೆಗೆ ಕೂಡಿಟ್ಟಿದ್ದ 5 ಲಕ್ಷ ರೂ. ದೇಣಿಗೆ ನೀಡಿದ ಅಜ್ಜಿ

    ಶ್ರೀನಗರ: ಕೊರೊನಾ ವೈರಸ್‍ನಿಂದ ಜಗತ್ತಿನಾದ್ಯಂತ ಹಲವಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಅನೇಕರು ಹಣದ ಸಹಾಯ ಮಾಡುತ್ತಿದ್ದಾರೆ. ಇದೀಗ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಹಜ್ ತೀರ್ಥಯಾತ್ರೆಗಾಗಿ ಕೂಡಿಟ್ಟಿದ್ದ 5 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.

    ಖಲೀದಾ ಬೇಗಂ (87) ಹಜ್ ತೀರ್ಥಯಾತ್ರೆಗಾಗಿ ಕೂಡಿಟ್ಟಿದ್ದ 5 ಲಕ್ಷ ರೂ. ಹಣವನ್ನು ಆರ್‌ಎಸ್‌ಎಸ್ ಅಂಗಸಂಸ್ಥೆಯಾದ ‘ಸೇವಾ ಭಾರತಿ’ಗೆ ದೇಣಿಗೆಯಾಗಿ ನೀಡಿದ್ದಾರೆ. ಕೊರೊನಾ ಭೀತಿಯಿಂದ ಲಾಕ್‍ಡೌನ್ ಆಗಿರುವ ಕಾರಣ ಹಜ್ ತೀರ್ಥಯಾತ್ರೆಯನ್ನು ಮುಂದಾಡಲಾಗಿದೆ. ಮುಸ್ಲಿಮರ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ವಾರ್ಷಿಕ ಹಜ್ ತೀರ್ಥಯಾತ್ರೆ ನಡೆಯುತ್ತದೆ.

    ಕೊರೊನಾ ವೈರಸ್‍ನಿಂದ ಅನೇಕ ಕೂಲಿ ಕಾರ್ಮಿಕರು, ದಿನಗೂಲಿ ಕೆಲಸಗಾರರು ಮಾಡಲು ಊಟವಿಲ್ಲದೆ ಪರದಾಡುತ್ತಿದ್ದರು. ಇಂತಹ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವಾ ಭಾರತಿ ಕಾರ್ಮಿಕರ ನೆರವಿಗೆ ಧಾವಿಸಿದೆ. ಅವರಿಗೆ ಊಟ, ನೀರು, ಆಶ್ರಯ ನೀಡಿದೆ. ಇದನ್ನು ನೋಡಿದ ಖಲೀದಾ ಬೇಗಂ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ ಸಂಸ್ಥೆಗೆ 5 ಲಕ್ಷ ರೂ. ದೇಣಿಗೆ ನೀಡಲು ನಿರ್ಧರಿಸಿದ್ದರು ಎಂದು RSS ಮಾಧ್ಯಮ ವಿಭಾಗ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದ ಮುಖ್ಯಸ್ಥ ಅರುಣ್ ಆನಂದ್ ಹೇಳಿದರು.

    ಈ ಹಣವನ್ನು ಸಂಸ್ಥೆ ಜಮ್ಮು ಮತ್ತು ಕಾಶ್ಮೀರದ ಬಡವರಿಗೆ ಮತ್ತು ನಿರ್ಗತಿಕರಿಗಾಗಿ ಬಳಸಬೇಕೆಂದು ಖಲೀದಾ ಬೇಗಂ ಜೀ ಬಯಸಿದ್ದಾರೆ. ಹಜ್ ಯಾತ್ರೆಗಾಗಿ ಈ ಹಣವನ್ನು ಉಳಿಸಿಕೊಂಡಿದ್ದರು. ಆದರೆ ಪ್ರಸ್ತುತ ಕೊರೊನಾ ಸೋಂಕಿನ ಪರಿಸ್ಥಿತಿಯಿಂದಾಗಿ ಯಾತ್ರೆ ಮುಂದೂಡಲಾಗಿದೆ ಎಂದು ಅರುಣ್ ಆನಂದ್ ಹೇಳಿದರು.

    ಖಲೀದಾ ಬೇಗಂ ಜೀ ಜಮ್ಮು ಮತ್ತು ಕಾಶ್ಮೀರದ ಇಂಗ್ಲಿಷ್ ಮಾಧ್ಯಮದಲ್ಲಿ ಕಾನ್ವೆಂಟ್ ಶಿಕ್ಷಣ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಜನ ಸಂಘದ ಅಧ್ಯಕ್ಷರಾಗಿದ್ದ ಕರ್ನಲ್ ಪೀರ್ ಮೊಹಮ್ಮದ್ ಖಾನ್ ಅವರ ಸೊಸೆಯಾಗಿದ್ದಾರೆ. ಇವರ ಮಗ ನಿವೃತ್ತ ಐಪಿಎಸ್ ಅಧಿಕಾರಿ ಫಾರೂಕ್ ಖಾನ್ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕೂಡ ಜಮ್ಮು ಮತ್ತು ಕಾಶ್ಮೀರದ ಮಹಿಳೆಯರ ಸುಧಾರಣೆ, ದೀನ ದಲಿತರಿಗೆ ಕಲ್ಯಾಣ ಕಾರ್ಯಗಳಲ್ಲಿ ತುಂಬಾ ಸಕ್ರಿಯರಾಗಿದ್ದರು ಎಂದು ಅರುಣ್ ಆನಂದ್ ತಿಳಿಸಿದರು.

    ಕೊರೊನಾದಿಂದ ಲಾಕ್‍ಡೌನ್ ಘೋಷಿಸಿದಾಗಿನಿಂದ ದೇಶಾದ್ಯಂತ ಸೇವಾ ಭಾರತಿ ಸ್ವಯಂಸೇವಕರು ಅಗತ್ಯವಿರುವವರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದಾರೆ.