Tag: hair

  • ಜಗಳವಾಡುತ್ತಾ ಪತ್ನಿಯ ಮೂಗು, ಕೂದಲು ಕತ್ತರಿಸಿದ ಪತಿ

    ಜಗಳವಾಡುತ್ತಾ ಪತ್ನಿಯ ಮೂಗು, ಕೂದಲು ಕತ್ತರಿಸಿದ ಪತಿ

    ಲಾಹೋರ್: ಪತಿಯೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಾ ಕೋಪಗೊಂಡು ಆಕೆಯ ಮೂಗು ಮತ್ತು ಕೂದಲನ್ನು ಕತ್ತರಿಸಿ ಕೌರ್ಯ ಮೆರೆದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ.

    ಮಂಗಳವಾರದಂದು ಈ ಘಟನೆ ನಡೆದಿದೆ. ಆರೋಪಿಯನ್ನು ಸಾಜಿದ್ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಆರೋಪಿ ಎಸ್ಕೆಪ್ ಆಗಿದ್ದಾನೆ. ಇತ್ತ ತೀವ್ರವಾಗಿ ಗಾಯಗೊಂಡ ಸಾಜಿದ್ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತ್ಯವೆಸೆಗಿ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಈ ಬಗ್ಗೆ ದಂಪತಿಯ ಮಗಳು ಪ್ರತಿಕ್ರಿಯಿಸಿ, ನನ್ನ ಅಮ್ಮ ಹಲವು ಸಂಘಗಳಲ್ಲಿ ಸದಸ್ಯರಾಗಿ ಅದರಲ್ಲಿ ಹಣ ಉಳಿಸುತ್ತಿದ್ದರು. ಆದರೆ ಈ ವಿಚಾರಕ್ಕೆ ಅಪ್ಪ ಯಾವಾಗಲೂ ಅಮ್ಮನ ಬಳಿ ಜಗಳ ಮಾಡುತ್ತಿದ್ದರು, ಅಮ್ಮನಿಗೆ ಹೊಡೆಯುತ್ತಿದ್ದರು. ಮಂಗಳವಾರ ಕೂಡ ಅಪ್ಪ-ಅಮ್ಮ ಜಗಳ ಮಾಡುತ್ತಿದ್ದಾಗ, ಸಿಟ್ಟಿನಿಂದ ಅಪ್ಪ ಮೊದಲು ಅಮ್ಮನಿಗೆ ಪೈಪ್‍ನಿಂದ ಹೊಡೆದರು. ಬಳಿಕ ಚಾಕುವಿನಿಂದ ಅಮ್ಮನ ಮೂಗು, ಕೂದಲು ಕತ್ತರಿಸಿದ್ದಾರೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.

    ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಜಗಳವಾಡುತ್ತಿದ್ದರು. ಪತಿಯ ಕಾಟವನ್ನು ತಾಳಲಾರದೆ ಪತ್ನಿ ಎರಡು ಬಾರಿ ಮನೆಬಿಟ್ಟು ಹೋಗಿದ್ದಳು. ಆದರೆ ಪತಿ ಆಕೆಯ ಮನವೊಲಿಸಿ, ಮುಂದೆ ಹೀಗೆ ಆಗಲ್ಲ ಎಂದು ಮಾತು ಕೊಟ್ಟು ವಾಪಸ್ ಕರೆತಂದಿದ್ದನು ಎಂದು ಕುಟುಂಬದ ಇತರೆ ಸದಸ್ಯರು ವಿಚಾರಣೆ ವೇಳೆ ಹೇಳಿದ್ದಾರೆ.

  • ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವ ಹೆಣ್ಮಕ್ಕಳೇ ಹುಷಾರ್

    ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವ ಹೆಣ್ಮಕ್ಕಳೇ ಹುಷಾರ್

    ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವ ಹೆಣ್ಣು ಮಕ್ಕಳೇ ಹುಷಾರಾಗಿರಿ, ಯಾಕೆಂದರೆ ಬಸ್ಸಿನಲ್ಲಿ ಕೂದಲು ಕಳ್ಳರಿದ್ದಾರೆ.

    ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ ನಿಮಗೆ ಗೊತ್ತಾಗದ ರೀತಿಯಲ್ಲಿ ನಿಮ್ಮ ತಲೆ ಕೂದಲಿಗೆ ಖದೀಮರು ಕತ್ತರಿ ಹಾಕುತ್ತಾರೆ. ಆದ್ದರಿಂದ ನಿಮ್ಮ ಕೂದಲಿನ ಬಗ್ಗೆ ಎಚ್ಚರಿಕೆ ಇರಲಿ. ಇಲ್ಲದೇ ಇದ್ದರೆ ನಿಮ್ಮ ಕೂದಲು ಕಟ್ ಮಾಡುತ್ತಾರೆ.

    ಬಿಎಂಟಿಸಿ ಬಸ್ಸಿನಲ್ಲಿ ಕೂದಲು ಕತ್ತರಿಸುತ್ತಿದ್ದ ರಾಜು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದು ಗೂಸ ತಿಂದಿದ್ದಾನೆ. ಬುಧವಾರ ಬಿಎಂಟಿಸಿ ಬಸ್ಸಿನಲ್ಲಿ ಮಹಿಳೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ರಾಜು ಮಹಿಳೆಗೆ ಗೊತ್ತಾಗದ ರೀತಿಯಲ್ಲಿ ಕೂದಲನ್ನು ಕತ್ತರಿಯಿಂದ ಕಟ್ ಮಾಡಿಕೊಂಡಿದ್ದಾನೆ. ಆಗ ಮಹಿಳೆಯ ಪಕ್ಕದಲ್ಲಿ ಕೂತಿದ್ದ ಸಂಬಂಧಿಕರಿಗೆ ಖದೀಮ ರಾಜುವಿನ ಕೈಚಳಕವನ್ನು ನೋಡಿದ್ದಾರೆ. ಬಳಿಕ ಮಹಿಳೆಯರೆಲ್ಲ ಸೇರಿ ರಾಜುವಿಗೆ ಬಸ್ಸಿನಲ್ಲೇ ಗೂಸಾ ಕೊಟ್ಟಿದ್ದಾರೆ.

    ಅಷ್ಟೇ ಅಲ್ಲದೇ ಸಾರ್ವಜನಿಕರು ಆರೋಪಿ ರಾಜುವನ್ನು ಹನುಮಂತ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕತ್ರಿಗುಪ್ಪೆ ಮೆಜೆಸ್ಟಿಕ್ ಮಾರ್ಗದ ಬಿಎಂಟಿಸಿ ಬಸ್ಸಿನಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಲೆ ಕೂದಲು ಮೇಲಿನ ಪ್ರೀತಿಗೆ ಯುವತಿ ಆತ್ಮಹತ್ಯೆ

    ತಲೆ ಕೂದಲು ಮೇಲಿನ ಪ್ರೀತಿಗೆ ಯುವತಿ ಆತ್ಮಹತ್ಯೆ

    ಮಡಿಕೇರಿ: 18 ವರ್ಷದ ಯುವತಿಯೊಬ್ಬಳು ತಲೆ ಕೂದಲು ಉದುರುತ್ತಿದೆ ಎಂದು ನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

    ಕೊಡಗು ಮೂಲದ ನೇಹಾ ಗಂಗಮ್ಮ(18) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮೂರು-ನಾಲ್ಕು ದಿನಗಳ ಹಿಂದೆ ಮನೆಗೆ ಹೋಗುತ್ತೇನೆ ಎಂದು ಪಿಜಿಯಿಂದ ಹೊರಟಿದ್ದಾಳೆ. ಆದರೆ ಮನೆಗೆ ಬಾರದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶನಿವಾರ ಈಕೆ ಮೃತದೇಹ ಪತ್ತೆಯಾಗಿದೆ.

    ನೇಹಾ ಗಂಗಮ್ಮ ಒಂದು ತಿಂಗಳ ಹಿಂದೆ ತನ್ನ ಕೂದಲನ್ನು ವಿ.ವಿ ಮೊಹಲ್ಲದ ರೋಹಿಣಿ ಬ್ಯೂಟಿಪಾರ್ಲರ್ ಎಂಬಲ್ಲಿ ಸ್ಟ್ರೈಟ್ನಿಂಗ್ ಮಾಡಿಸಿದ್ದಾಳೆ. ನಂತರ ಕೂದಲು ಉದುರಲಾರಂಭಿಸಿದೆ. ಇದರಿಂದ ದೃತಿಗೆಟ್ಟ ನೇಹಾ ಬ್ಯೂಟಿಪಾರ್ಲರ್ ಮಾಲೀಕರೊಂದಿಗೆ ಮಾತನಾಡಿದ್ದಾಳೆ. ಆದರೂ ಕೂದಲು ಉದುರುವಿಕೆ ಕಡಿಮೆಯಾಗಿಲ್ಲ. ನಂತರ ಮೈಸೂರಿನಿಂದ ಕೊಡಗಿಗೆ ಆಗಮಿಸಿದ್ದು, ಮನೆಗೆ ಬಂದಿರಲಿಲ್ಲ.

    ಮನೆಯವರು ಕೂಡ ಮಗಳು ಮೈಸೂರಿನಲ್ಲಿ ಇದ್ದಾಳೆ ಎಂದು ತಿಳಿದು ಮಗಳಿದ್ದ ಪಿಜಿಗೆ ಕರೆ ಮಾಡಿದ್ದಾರೆ. ಆದರೆ ಮಗಳು ಪಿಜಿಯಲ್ಲಿ ಇಲ್ಲದಿರುವುದು ತಿಳಿದು ಬಂದಿದೆ. ನಂತರ ಪೊಷಕರು ತಮಗೆ ಗೊತ್ತಿರುವ ಕಡೆಯೆಲ್ಲ ಹುಡುಕಾಡಿದ್ದಾರೆ. ಆದರೆ ಏನು ಪ್ರಯೋಜವಾಗಿಲ್ಲ, ಕೊನೆಗೆ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಪ್ರಕರಣ ದಾಖಲಿಸಿಕೊಂಡು ಯುವತಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಆದರೆ ಶನಿವಾರ ನೇಹಾ ಮೃತದೇಹ ತನ್ನ ಸ್ವಗ್ರಾಮ ಬಾಳೆಲೆಯ ಲಕ್ಷ್ಮಣ ತೀರ್ಥ ನದಿಯಲ್ಲಿ ಪತ್ತೆಯಾಗಿದೆ. ಆನೇಕ ಬಾರಿ ನೇಹಾ ತಮ್ಮ ಪೊಷಕರ ಬಳಿ ತನ್ನ ಅಳಲು ತೋಡಿಕೊಂಡಿದ್ದು, ನಾನು ಕಾಲೇಜಿಗೆ ಹೋಗಲ್ಲ ನನ್ನ ಕೂದಲು ಉದರುವಿಕೆ ಸರಿಯಾದ ನಂತರ ಹೋಗುತ್ತೇನೆ ಎಂದು ಹೇಳಿದ್ದಾಳೆ. ಆಗ ಪೋಷಕರು ಕೂಡ ಆಕೆಯನ್ನ ಸಮಾಧಾನ ಮಾಡಿ ಕಾಲೇಜಿಗೆ ಹೋಗು ಎಂದ ಹೇಳಿ ಮೈಸೂರಿಗೆ ಕಳುಹಿಸಿದ್ದಾರೆ. ಆದರೆ ಹೇರ್ ಫಾಲ್ ನಿಂದ ಕಂಗೆಟ್ಟ ನೇಹಾ ನೊಂದು ಸ್ವಗ್ರಾಮಕ್ಕೆ ಬಂದು ನದಿಗೆ ಹಾರಿ ಜೀವ ಕಳೆದುಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

    ಸದ್ಯಕ್ಕೆ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮಿತ್ ಶಾ ಮಾರ್ಗಕ್ಕೆ ಅಡ್ಡಿಪಡಿಸಿದ್ದಕ್ಕೆ ವಿದ್ಯಾರ್ಥಿನಿಯರ ಕೂದಲು ಹಿಡಿದು ಎಳೆದಾಡಿದ ಪೊಲೀಸರು

    ಅಮಿತ್ ಶಾ ಮಾರ್ಗಕ್ಕೆ ಅಡ್ಡಿಪಡಿಸಿದ್ದಕ್ಕೆ ವಿದ್ಯಾರ್ಥಿನಿಯರ ಕೂದಲು ಹಿಡಿದು ಎಳೆದಾಡಿದ ಪೊಲೀಸರು

    – ಶಾ ಮಾರ್ಗ ಮಧ್ಯೆ ಕಪ್ಪು ಬಾವುಟ ಬೀಸಲು ಸಿದ್ಧರಾಗಿದ್ದ ವಿದ್ಯಾರ್ಥಿನಿಯರು

    ಅಲಹಾಬಾದ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾರ್ಗ ಮಧ್ಯೆ ಕಪ್ಪು ಬಾವುಟ ಪ್ರದರ್ಶಿಸಲು ಸಿದ್ಧರಾಗಿದ್ದ ವಿದ್ಯಾರ್ಥಿನಿಯರ ಜೊತೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಶುಕ್ರವಾರ ಅಲಹಾಬಾದ್‍ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಅಮಾನವೀಯ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ವಿಡಿಯೋದಲ್ಲಿ ಏನಿದೆ?
    ಶುಕ್ರವಾರ ಅಮಿತ್ ಶಾ ಅಲಹಾಬಾದ್‍ಗೆ ಭೇಟಿ ನೀಡಿದ್ದರು. ಆ ವೇಳೆ ಅಲಹಾಬಾದ್ ವಿಶ್ವವಿದ್ಯಾಲಯದ ಒರ್ವ ವಿದ್ಯಾರ್ಥಿ ಮತ್ತು ಇಬ್ಬರು ವಿದ್ಯಾರ್ಥಿನಿಯರು ಮಾರ್ಗ ಮಧ್ಯೆ ಅಮಿತ್ ಶಾ ಅವರಿಗೆ ಕಪ್ಪು ಧ್ವಜವನ್ನು ತೋರಿಸಿ ಅಡ್ಡಗಟ್ಟಲು ಪ್ರಯತ್ನಿಸಿದ್ದರು. ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಡೆದು, ಕೂದಲು ಹಿಡಿದು ಎಳೆದಾಡಿ, ಲಾಠಿಯಿಂದ ಹೊಡೆದಿದ್ದಾರೆ. ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ನೇಹಾ ಯಾದವ್(25), ರಮಾ ಯಾದವ್(24) ಮತ್ತು ಕಿಶನ್ ಮೌರ್ಯ ಪೊಲೀಸರಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳು. ಈ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೂವರು ವಿದ್ಯಾರ್ಥಿಗಳು ಸಮಾಜವಾದಿ ಪಕ್ಷದ ಸಮಾಜವಾದಿ ಚಿತ್ರ ಸಭಾಗೆ ಸೇರಿದವರು ಎಂದು ಹೇಳಲಾಗಿದೆ. ನೇಹಾ ಯಾದವ್ ಪಿಎಚ್‍ಡಿ ಓದುತ್ತಿದ್ದು, ರಮಾ ಯಾದವ್ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

  • ಕ್ಯಾನ್ಸರ್ ನಿಂದಾಗಿ ನೀಳ ಕೂದಲಿಗೆ ಕತ್ತರಿ ಹಾಕಿದ ಸೋನಾಲಿ

    ಕ್ಯಾನ್ಸರ್ ನಿಂದಾಗಿ ನೀಳ ಕೂದಲಿಗೆ ಕತ್ತರಿ ಹಾಕಿದ ಸೋನಾಲಿ

    ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ಬ್ಯೂಟಿ ಕ್ವೀನ್ ಸೋನಾಲಿ ಬೇಂದ್ರೆ ತಮ್ಮ ನೀಳ ಕೂದಲಿಗೆ ಕತ್ತರಿ ಹಾಕಿದ್ದಾರೆ.

    ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ ವೈದ್ಯರ ಸಲಹೆ ಮೇರೆಗೆ ಬಾಬ್ ಕಟ್ ಮಾಡಿಸಿಕೊಂಡಿದ್ದಾರೆ.

    ತನ್ನ ಕೂದಲು ಕತ್ತರಿಸಿಕೊಂಡ ಬಳಿಕ ಸೋನಾಲಿ ಇನ್ ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಪಡೆದು ಮತ್ತೆ ನಾನು ಸ್ವದೇಶಕ್ಕೆ ಹಿಂದಿರುಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ಕ್ಯಾನ್ಸರ್ ಬಂದಿದ್ದು ಹೇಗೆ?: ನಟಿಯರು ತಮ್ಮ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಅತ್ಯಂತ ಕಾಳಜಿಯನ್ನು ಹೊಂದಿರುತ್ತಾರೆ. ಕ್ಯಾನ್ಸರ್ ದೊಡ್ಡದಾಗಿ ಕಾಣಿಸಿಕೊಳ್ಳಲು ಸೋನಾಲಿಯವರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಹಲವು ವರ್ಷಗಳಿಂದ ಸೋನಾಲಿಯವರಿಗೆ ದೇಹದಲ್ಲಿ ಒಂದು ರೀತಿಯ ನೋವು ಕಾಣಿಸುತ್ತಿತ್ತು. ಕೆಲಸದ ಒತ್ತಡದಿಂದ ನೋವುಗಳು ಸಾಮಾನ್ಯ ಗಮನ ಹರಿಸಿರಲಿಲ್ಲ. ಒಂದು ವೇಳೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದರೆ, ಕ್ಯಾನ್ಸರ್ ಕೊನೆಯ ಹಂತಕ್ಕೆ ಬರುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಈ ಮೊದಲು ಸೋನಾಲಿ ತಮ್ಮದೊಂದು ಫೋಟೋವನ್ನು ಹಾಕಿ, “ನಾವು ಜೀವನದಲ್ಲಿ ಹೆಚ್ಚು ವಿಶ್ವಾಸವನ್ನಿಟ್ಟಾಗ ಆಗ ಜೀವನ ದೊಡ್ಡದೊಂದು ಆಘಾತ ನೀಡುತ್ತದೆ. ನನಗೆ ಹೈ ಗ್ರೇಡ್ ಕ್ಯಾನ್ಸರ್ ಇದೆ ಎಂಬುದು ನನಗೆ ಇತ್ತೀಚಿಗೆ ತಿಳಿಯಿತು. ಈ ವಿಷಯ ತಿಳಿದು ನನ್ನ ಕುಟುಂಬದವರು ಹಾಗೂ ನನ್ನ ಸ್ನೇಹಿತರು ನನ್ನ ಜೊತೆಯಲ್ಲೇ ಇದ್ದಾರೆ. ನಾನು ಇವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    https://www.instagram.com/p/BlErxmFl7vL/?hl=en&taken-by=bollywood

    https://www.instagram.com/p/BlCuNJflovR/?hl=en&taken-by=iamsonalibendre

  • ಭಾವಿ ಪತಿ ಬಾಲ್ಡ್ ಆಗ್ತಿದ್ದಾನೆಂದು ಗೊತ್ತಾಗಿ ಸ್ಥಳದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ ವಧು

    ಭಾವಿ ಪತಿ ಬಾಲ್ಡ್ ಆಗ್ತಿದ್ದಾನೆಂದು ಗೊತ್ತಾಗಿ ಸ್ಥಳದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ ವಧು

    – ತರಕಾರಿ ವ್ಯಾಪರಿಯ ಮಗಳೊಂದಿಗೆ ವಿವಾಹವಾದ ಡಾಕ್ಟರ್ ವರ

    ಪಾಟ್ನಾ: ವರ ಬೋಳುಮಂಡೆಯವನಾಗ್ತಿದ್ದಾನೆಂದು ಗೊತ್ತಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.

    ವಧುವಿನ ತಂದೆ ವರ ರವಿಕುಮಾರ್ ಅವರ ತಂದೆಯ ಮನೆಯಲ್ಲಿ ಮೂರು ಬಾರಿ ಉಳಿದುಕೊಂಡಿದ್ದ ಬಳಿಕ 1 ವರ್ಷ ಮುಂಚಿತವಾಗಿಯೇ ಕುಟುಂಬಸ್ಥರು ಮದುವೆಯನ್ನ ನಿಶ್ಚಯಿಸಿದ್ದರು.

    ನಿಗದಿಪಡಿಸಿದಂತೆ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಅತಿಥಿಗಳು ಮದುವೆ ತಯಾರಿಯಲ್ಲಿ ತೊಡಗಿ, ಊಟೋಪಚಾರವೂ ನಡೆದಿತ್ತು. ವಧು ವರ ಹೂಮಾಲೆ ಬದಲಾಯಿಸಿಕೊಳ್ಳುವ ಶಾಸ್ತ್ರವನ್ನೂ ಮುಗಿಸಿದ್ದರು. ಆದ್ರೆ ಮತ್ತೊಂದು ಶಾಸ್ತ್ರ ಮಾಡುವಾಗ ವರ ರವಿಕುಮಾರ್ ತನ್ನ ಪೇಟವನ್ನು ತೆಗೆಯಬೇಕಿತ್ತು. ಹೀಗಾಗಿ ಅವರು ಪೇಟ ತೆಗೆದಿದ್ದು, ಮುಂದೆ ನಿಂತಿದ್ದ ವಧುಗೆ ಶಾಕ್ ಆಗಿತ್ತು. ತಾನು ಮದುವೆಯಾಗ್ತಿರೋ ಹುಡುಗ ಬಾಲ್ಡ್ ಆಗ್ತಿದ್ದಾನೆ ಎಂದು ಆಗಲೇ ವಧುವಿಗೆ ಗೊತ್ತಾಗಿದ್ದು. ಯಾಕಂದ್ರೆ ಅಲ್ಲಿಯವರೆಗೆ ಆಕೆ ರವಿಕುಮಾರ್ ಅವರನ್ನ ಫೋಟೋಗಳಲ್ಲಿ ಮಾತ್ರ ನೋಡಿದ್ದಳು.

    ವರನ ಕೂದಲ ಉದುರುವಿಕೆಯನ್ನೇ ದೊಡ್ಡದಾಗಿ ಪರಿಗಣಿಸಿದ ವಧು ಸ್ಥಳದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ್ದು, ಕುಟುಂಬಸ್ಥರು ಹಾಗೂ ಮದುವೆಗೆ ಬಂದಿದ್ದ ಅತಿಥಿಗಳು ಬೆರಗಾಗುವಂತೆ ಮಾಡಿದ್ದಾಳೆ.

    ಎರಡೂ ಕುಟುಂಬದವರು ಎಷ್ಟೇ ಹೇಳಿದ್ರೂ ವಧು ತನ್ನ ನಿರ್ಧಾರ ಬದಲಾಯಿಸಲು ಸಿದ್ಧಳಿರಲಿಲ್ಲ. ಆದ್ರೆ ವರ ರವಿಕುಮಾರ್ ಅಷ್ಟು ದೂರದಿಂದ ಬಂದು, ಮದುವೆಯಾಗಿಯೇ ಮನೆಗೆ ಹಿಂದಿರುಗಬೇಕು ಎಂದು ಸಂಕಲ್ಪ ಮಾಡಿದ್ದರು. ಹೀಗಾಗಿ ರವಿಕುಮಾರ್ ಕುಟುಂಬದವರು ಗ್ರಾಮ ಪಂಚಾಯ್ತಿಯ ಮೊರೆ ಹೋದ್ರು. ಅವರು ಗ್ರಾಮದ ಬಡ ತರಕಾರಿ ವ್ಯಾಪಾರಿಯ ಮಗಳಾದ ನೇಹಾ ಕುಮಾರಿಯನ್ನು ಮದುವೆಯಾಗುವಂತೆ ಸೂಚಿಸಿದ್ದರು.

    ಹೀಗಾಗಿ ಮದುವೆ ಮುರಿದು ಬಿದ್ದ ಎರಡು ದಿನಗಳ ಬಳಿಕ ರವಿಕುಮಾರ್‍ ದೇವಸ್ಥಾನವೊಂದರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನೇಹಾ ಕುಮಾರಿ ಜೊತೆ ಮದುವೆ ಆಗಿದ್ದಾರೆ.

  • ಮಹಿಳೆಯ ಹೊಟ್ಟೆಯಿಂದ ವೈದ್ಯರು 750 ಗ್ರಾಂ ಕೂದಲು ತೆಗೆದ್ರು!

    ಮಹಿಳೆಯ ಹೊಟ್ಟೆಯಿಂದ ವೈದ್ಯರು 750 ಗ್ರಾಂ ಕೂದಲು ತೆಗೆದ್ರು!

    ಮುಂಬೈ: ತನ್ನ ಕೂದಲನ್ನು ತಾನೇ ತಿಂದಿದ್ದ ಮಹಿಳೆಯ ಹೊಟ್ಟೆಯಿಂದ ಸುಮಾರು 750 ಗ್ರಾಂ ಕೂದಲಿನ ಉಂಡೆಯನ್ನು ಘಾಟ್ಕೋಪರ್ ದಲ್ಲಿನ ರಾಜವಾಡಿ ಆಸ್ಪತ್ರೆಯ ವೈದ್ಯರು ಹೊರತೆಗೆದಿದ್ದಾರೆ.

    ವಾರದ ಹಿಂದೆ 20 ವರ್ಷದ ಅರ್ಚನಾ(ಹೆಸರು ಬದಲಾಯಿಸಲಾಗಿದೆ) ಎಂಬವರು ತನಗೆ ಏನೂ ತಿಂದ್ರೂ ವಾಂತಿಯಾಗುತ್ತೆ. ಹಸಿವಿಲ್ಲ, ಹೀಗಾಗಿ ಕಳೆದ ಕೆಲ ತಿಂಗಳಿನಿಂದ ತುಂಬಾ ಸಣ್ಣ ಆಗ್ತಾ ಬರ್ತಿದ್ದೀನಿ ಅಂತಾ ವೈದ್ಯರ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ಅವರು 30 ಕೆಜಿ ತೂಕವಿದ್ದರು.

    ಅಂತೆಯೇ ವೈದ್ಯರು ಆಕೆಯನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ ಆಕೆಯ ಹೊಟ್ಟೆಯಲ್ಲಿ ಕೂದಲಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆಕೆಗೆ ವಾಂತಿ ಹಾಗೂ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನು ಸಾಧ್ಯವಾಗುತ್ತಿಲ್ಲ. ಶಶ್ತ್ರ ಚಿಕಿತ್ಸೆಯ ಮೂಲಕ ಕೂದಲನ್ನು ಹೊರತೆಗೆಯಬೇಕು. ಇಲ್ಲವೆಂದಲ್ಲಿ ಅವರ ಪ್ರಾಣಕ್ಕೆ ಅಪಾಯವಿದೆ ಅಂತ ವೈದ್ಯರು ಹೇಳಿದ್ದರು.

    ಅಂತೆಯೇ ಆಪರೇಷನ್ ನಡೆದಿದ್ದು, ಇದೀಗ ಸುಮಾರು 750 ಗ್ರಾಂ ಕೂದಲನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅರ್ಚನಾ ತೆಳ್ಳಗಿದ್ದರಿಂದ ಆಪರೇಷನ್ ಮೊದಲು ಅವರಿಗೆ ಹಿಮೋಗ್ಲೋಬಿನ್ ಹೆಚ್ಚಾಗ್ಲೆಂದು ರಕ್ತ ನೀಡಲಾಗಿತ್ತು. ಸದ್ಯ ಆಪರೇಷನ್ ಮೂಲಕ ಕೂದಲನ್ನು ಹೊರತೆಗೆದಿದ್ದು, ಆಕೆ ನೈಜ ಸ್ಥಿತಿಗೆ ಬರಲು ಕೆಲ ತಿಂಗಳುಗಳೇ ಬೇಕು. ಅಲ್ಲದೇ ಮನೋವೈದ್ಯರಿಂದ ಚಿಕಿತ್ಸೆ ಪಡೆಯುವ ಅವಶ್ಯಕತೆ ಇದೆ ಅಂತ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

    ಆಪರೇಷನ್ ಬಳಿಕ ಅರ್ಚನಾರನ್ನು ಮಹಿಳಾ ವಾರ್ಡ್ ಗೆ ಶಿಫ್ಟ್ ಮಾಡಲಾಗಿದ್ದು, ಸದ್ಯ ನಾನು ಆರೋಗ್ಯವಾಗಿದ್ದೇನೆ ಅಂತ ತಿಳಿಸಿದ್ದಾರೆ. ಹೊಟ್ಟೆಯೊಳಗಿದ್ದ ಕೂದಲನ್ನು ಕಂಡ ಅರ್ಚನಾ ತಾಯಿ ಕೂಡ ಶಾಕ್ ಆಗಿದ್ದು, ಮಗಳನ್ನು ಅಪಾಯದಿಂದ ಪಾರು ಮಾಡಿದ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.