Tag: hair fall

  • ಹೇರ್ ಫಾಲ್ ತಡೆಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡಳು

    ಹೇರ್ ಫಾಲ್ ತಡೆಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡಳು

    ಹೈದರಾಬಾದ್: ಸಾಮಾನ್ಯವಾಗಿ ತಲೆಗೂದಲು ಉದುರುವ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಹಾಗೆಯೇ 19 ವರ್ಷದ ಯುವತಿಯೊಬ್ಬರು ಹೇರ್ ಫಾಲ್ ಆಗೋದನ್ನು ತಡೆಯಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ಎಮ್ಮಿಗನೂರಿನಲ್ಲಿ ನಡೆದಿದೆ.

    ಮೌನಿಕ ಮೃತ ದುರ್ದೈವಿ ಯುವತಿ. ಈಕೆ ಎಮ್ಮಿನಗನೂರಿನ ಹರಿಜನವಾಡ ನಿವಾಸಿಗಳಾದ ಕದ್ರಿಕೋಟ ನರ್ಸನ್ನ ಹಾಗೂ ರಾಮೇಶ್ವರಮ್ಮ ದಂಪತಿಯ ಪುತ್ರಿಯಾಗಿದ್ದಾಳೆ. ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ತಲೆಯ ಕೂದಲು ಉದುರುವಿಕೆಯಿಂದ ಬೇಸತ್ತು ಔಷಧಿ ಪಡೆದುಕೊಂಡಿದ್ದಾಳೆ. ಆದರೆ ಆ ಔಷಧಿಯೇ ಆಕೆಯ ಪ್ರಾಣವನ್ನೇ ಬಲಿ ಪಡೆದುಕೊಂಡಿದೆ.

    ಮೌನಿಕ ತನಗೆ ಉದ್ದ ಕೂದಲು ಬೇಕು ಎಂದು ಆಸೆ ಪಟ್ಟಿದ್ದಳು. ಆದರೆ ದಿನ ಹೋದಂತೆ ಆಕೆಯ ಕೂದಲು ಸಾಕಷ್ಟು ಉದುರುತ್ತಿತ್ತು. ಹೀಗಾಗಿ ಆಕೆ ನೊಂದಿದ್ದಳು. ಅಲ್ಲದೆ ಹೇಗಾದರೂ ಮಾಡಿ ಕೂದಲು ಉದೋರನ್ನು ನಿಲ್ಲಿಸಿ, ಅದನ್ನು ಮತ್ತೆ ಬೆಳೆಯುವಂತೆ ಮಾಡಬೇಕೆಂದು ನಿರ್ಧರಿಸಿ ಚಿಕಿತ್ಸೆಯ ಮೊರೆ ಹೋಗಿದ್ದಾಳೆ.

    ಹೀಗಾಗಿ ತನ್ನ ಮನೆ ಸಮೀಪದ ವೈದ್ಯರೊಬ್ಬರನ್ನು ಸಂಪರ್ಕಿಸಿದ್ದಾಳೆ. ಹಾಗೆಯೇ ಕೂದಲು ಉದುರುವಿಕೆಯನ್ನು ತಡೆಯುತ್ತದೆ ಎಂದು ಡಾಕ್ಟರ್ ಔಷಧಿಯನ್ನೂ ನೀಡಿದ್ದಾರೆ. ಇದನ್ನು ತೆಗೆದುಕೊಂಡ ಬಳಿಕ ಮೌನಿಕಾ ದೇಹದಲ್ಲಿ ಗುಳ್ಳೆಗಳು ಬೀಳಲು ಆರಂಭವಾಗಿದೆ.

    ಇದರಿಂದ ಆತಂಕಗೊಂಡ ಆಕೆ ಕೂಡಲೇ ಔಷಧಿ ಬರೆದುಕೊಟ್ಟ ಡಾಕ್ಟರ್ ಹಾಗೂ ಮೆಡಿಕಲ್ ಅಂಗಡಿಯ ಮಾಲೀಕನ ಗಮನಕ್ಕೆ ತಂದಿದ್ದಾಳೆ. ಈ ವೇಳೆ ಮಡಿಕಲ್ ಮಾಲೀಕ, ಅದರಿಂದ ಯಾವುದೇ ತೊಂದರೆ ಆಗಲ್ಲ. ಸ್ವಲ್ಪ ಸಮಯ ಈ ರೀತಿ ಆಗುತ್ತದೆ. ಆ ನಂತರ ಸಹಜ ಸ್ಥಿತಿಗೆ ಬರುತ್ತದೆ ಎಂದು ಹೇಳಿದ್ದಾರೆ.

    ಇತ್ತ ಮೌನಿಕ ಪೋಷಕರು 3 ದಿನಗಳಿಂದ ನಿರಂತರವಾಗಿ ಮೆಡಿಕಲ್ ಗೆ ಬಂದು ಆಕೆಯ ಮೈಮೇಲೆ ಗುಳ್ಳೆಗಳು ಬೀಳೋದು ಕಡಿಮೆಯಾಗುವಂತೆ ಔಷಧಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಮೆಡಿಕಲ್ ಅವರು ಅವರ ಮನವಿಯನ್ನು ತಿರಸ್ಕರಿಸುವ ಮೂಲಕ ಅಸಡ್ಡೆ ತೋರಿದ್ದಾರೆ.

    ಕಳೆದ ಭಾನುವಾರ ಮೌನಿಕ ಸ್ಥಿತಿ ಚಿಂತಾಜನವಾಗಿ ಆಕೆ ಮೃತಪಟ್ಟಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಮೌನಿಕ ಪೋಷಕರು ಹಾಗೂ ಆಕೆಯ ಸಂಬಂಧಿಕರು ಮೆಡಿಕಲ್ ಶಾಪ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಮೆಡಿಕಲ್ ಬಂದ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ವೈದ್ಯ ಹಾಗೂ ಮೆಡಿಕಲ್ ಶಾಪ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.