ಲಕ್ನೋ: ಮುಂಬೈ ಸ್ಫೋಟದ ರೂವಾರಿ ಹಾಗೂ ಲಷ್ಕರ್ ಎ ತೊಯಿಬಾ ಸಂಘಟನೆಯ ಸಂಸ್ಥಾಪಕ ಮುಖಂಡನಾದ ಹಫೀಜ್ ಸಯೀದ್ ಬಿಡುಗಡೆ ಭಾಗ್ಯ ಸಿಕ್ಕಿದ ಬೆನ್ನಲ್ಲೇ ಉತ್ತರ ಪ್ರದೇಶದ ಯುವಕರ ಗುಂಪೊಂದು ಸಯೀದ್ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಾಚರಣೆ ನಡೆಸಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.
ಉತ್ತರ ಪ್ರದೇಶದ ಲಖೀಂಪುರ್ ಬೇಗಂ ಬಗ್ ಕಾಲೋನಿ ಪ್ರದೇಶದಲ್ಲಿ ನೆಲೆಸಿರುವ ಸಮುದಾಯವೊಂದರ ಯುವಕರ ಗುಂಪು ಸಂಭ್ರಮಾಚರಣೆ ಮಾಡಿದೆ. ಈಗಾಗಲೇ ಈ ಸಮುದಾಯದ ಯುವಕರು ತಮ್ಮ ಮನೆಯನ್ನು ಹಸಿರು ಧ್ವಜಗಳ ಮೂಲಕ ಅಲಂಕಾರ ಮಾಡಿದ್ದು, ಸಂಭ್ರಮಾಚರಣೆ ವೇಳೆ “ಪಾಕಿಸ್ತಾನ್ ಜಿಂದಾಬಾದ್, ಹಫೀಜ್ ಜಿಂದಾಬಾದ್” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಘಟನೆ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ವಿಷಯ ತಿಳಿದ ತಕ್ಷಣ ಪೊಲೀಸರು ಘಟನಾ ಪ್ರದೇಶ ದೌಡಾಯಿಸಿದ್ದಾರೆ.
ಹಫೀಜ್ ಬಿಡುಗಡೆಯ ಸಂಭ್ರಮಾಚರಣೆ ಸುದ್ದಿ ತಿಳಿದ ನಂತರ ಮತ್ತೊಂದು ಸಮುದಾಯದ ಜನ ಸ್ಥಳದಲ್ಲಿ ಜಮಾವಣೆಯಾಗಲು ಪ್ರಾರಂಭಿಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಶಾಂತಿ ಕಾಯ್ದಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ಆಕಾಶ್ ದೀಪ್ ಪೊಲೀಸರಿಗೆ ಘಟನೆ ಕುರಿತು ತನಿಖೆ ನಡೆಸಲು ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 20 ರಿಂದ 25 ಜನರ ಯುವರ ಗುಂಪು ಹಫೀಜ್ ಬಿಡುಗಡೆಯ ಕುರಿತು ಸಂಭ್ರಮಾಚರಣೆ ಮಾಡುತ್ತಿರುವ ಕುರಿತು ಕೋಟ್ವಾಲಿ ಪ್ರದೇಶದ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆದರೆ ಪೊಲೀಸರು ಈ ಕುರಿತು ನಿರ್ಲಕ್ಷ್ಯ ವಹಿಸಿದ್ದಾರೆ. ನಂತರ ಘಟನೆ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದು ತನಿಖೆ ನಡೆಸಲು ಆದೇಶ ನೀಡಿದ ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕೊತ್ವಾಲಿ ಪೊಲೀಸ್ ಅಧಿಕಾರಿ ಪ್ರದೀಪ್ ಶುಕ್ಲಾ ಘಟನಾ ಸ್ಥಳದಲ್ಲಿನ ಹಸಿರು ಬಣ್ಣದ ಧ್ವಜಗಳನ್ನು ತೆರವುಗೊಳಿಸಿರುದಾಗಿ ಹಾಗೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಸಂಭ್ರಮಾಚರಣೆ ನಡೆಸಿರುವ ಕುರಿತು ವಿಡಿಯೋ ದಲ್ಲಿ ಹಸಿರು ಧ್ವಜ ಹಾರಾಟ ನಡೆಸಿ, ಪಾಕ್ ಹಾಗೂ ಉಗ್ರ ಹಫೀಜ್ ಪರ ಘೋಷಣೆ ಮಾಡಿರುವ ದೃಶ್ಯಗಳು ಲಭಿಸಿದೆ ಎಂದು ಲಖೀಂಪುರ್ ಪ್ರದೇಶದ ಬಲಪಂಥೀಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಹೇಳಿಕೆ ನೀಡಿರುವ ಲಖೀಂಪುರ್ ನಿವಾಸಿ ಅಶ್ಫಾಕ್ ಖಾದ್ರಿ, ನನಗೆ ದೇಶ ವಿರೋಧಿ ಘೋಷಣೆಗಳು ಕೂಗಿರುವ ಕುರಿತು ಮಾಹಿತಿ ಇಲ್ಲ. ಇಲ್ಲಿ ಡಿಸೆಂಬರ್ 02 ರಂದು ನಡೆಯುವ ಜುಲೋಸ್ ಎ ಮೊಹಮ್ಮದಿ ಮೆರವಣಿಗೆ ಕುರಿತ ಸಂಭ್ರಮಾಚರಣೆ ನಡೆಯುತ್ತಿತ್ತು. ಪಾಕಿಸ್ತಾನ್ ಹಾಗೂ ಹಫೀಜ್ ಸಯೀದ್ ಬಗ್ಗೆ ಇಲ್ಲಿ ಯಾರು ಘೋಷಣೆ ಕೂಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಜನವರಿಯಿಂದ ಗೃಹಬಂಧನದಲ್ಲಿದ್ದ ಸಯೀದ್ ಬಂಧನದ ಅವಧಿಯನ್ನು ಮತ್ತೆ 3 ತಿಂಗಳು ವಿಸ್ತರಿಸುವಂತೆ ಪಾಕಿಸ್ತಾನದ ಪಂಜಾಬ್ ಪ್ರಾಂತ ಸರ್ಕಾರದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ನ್ಯಾಯಾಧೀಶರುಗಳನ್ನೊಳಗೊಂಡ ನ್ಯಾಯಾಂಗ ವಿಮರ್ಶಾ ಮಂಡಳಿ ಬುಧವಾರ ತಳ್ಳಿಹಾಕಿತ್ತು. ಯಾವುದೇ ಪ್ರಕರಣದಲ್ಲಿ ಸಯೀದ್ ವಿಚಾರಣೆ ಬಾಕಿ ಇಲ್ಲದೇ ಹೋದಲ್ಲಿ ಆತನನ್ನು ಬಿಡುಗಡೆಗೊಳಿಸುವಂತೆ ಸರಕಾರ ಆದೇಶ ನೀಡಿದೆ ಎಂದು ಮಂಡಳಿ ಹೇಳಿತ್ತು.
2008ರ ನವೆಂಬರ್ 26ರಂದು ದಕ್ಷಿಣ ಮುಂಬೈ 8 ಸ್ಥಳಗಳ ಮೇಲೆ 9 ಮಂದಿ ಉಗ್ರರು ದಾಳಿ ನಡೆಸಿ 166 ಮಂದಿಯನ್ನು ಹತ್ಯೆ ಮಾಡಿದ್ದರು. ಈ ಘಟನೆಗೆ 9 ವರ್ಷ ತುಂಬುತ್ತಿರುವಾಗ ಹಫೀಸ್ ಬಿಡುಗಡೆಯಾಗಿದ್ದಕ್ಕೆ ಹಲವು ಪ್ರಶ್ನೆ ಎದ್ದಿದ್ದು, ಮುಂಬೈ ದಾಳಿಯ ಸಂಭ್ರಮ ಆಚರಿಸಲು ಆತನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.