Tag: H5N1

  • PublicTV Explainer: ಕರ್ನಾಟಕದಲ್ಲಿ ಹೆಚ್ಚುತ್ತಿದೆ ಹಕ್ಕಿಜ್ವರ ಆತಂಕ; ಏನಿದು ಕಾಯಿಲೆ? ಮುಂಜಾಗ್ರತಾ ಕ್ರಮ ಏನು?

    PublicTV Explainer: ಕರ್ನಾಟಕದಲ್ಲಿ ಹೆಚ್ಚುತ್ತಿದೆ ಹಕ್ಕಿಜ್ವರ ಆತಂಕ; ಏನಿದು ಕಾಯಿಲೆ? ಮುಂಜಾಗ್ರತಾ ಕ್ರಮ ಏನು?

    * ಕೋಳಿ & ಮೊಟ್ಟೆ ತಿನ್ನುವುದರಿಂದ ಸೋಂಕು ಹರಡುತ್ತಾ?
    * ಹಕ್ಕಿಜ್ವರ ಸೋಂಕು ತಡೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲೇನಿದೆ?

    ರ್ನಾಟಕದಲ್ಲಿ ಹಕ್ಕಿಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಚಿಕ್ಕಬಳ್ಳಾಪುರದ ವರದನಹಳ್ಳಿಯಲ್ಲಿ ಹಕ್ಕಿಜ್ವರದ ಮೊದಲ ಪ್ರಕರಣ ಕಾಣಿಸಿಕೊಂಡಿತು. ಸೋಂಕಿಗೆ ನೂರಾರು ಜೀವಿಗಳು ಬಲಿಯಾದವು. ತಕ್ಷಣ ಎಚ್ಚೆತ್ತ ಆರೋಗ್ಯ ಇಲಾಖೆ ರಾಜ್ಯದೆಲ್ಲೆಡೆ ಹೈಅಲರ್ಟ್ ಘೋಷಿಸಿದೆ. ರಾಜ್ಯಾದ್ಯಂತ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು, ಸಾವಿರಾರು ಕೋಳಿಗಳ ಮಾರಣಹೋಮ ಮಾಡಲಾಗಿದೆ. ಗಡಿ ಭಾಗಗಳಲ್ಲಿ ನಿಗಾವಹಿಸಲಾಗಿದೆ. ಕಾಯಿಲೆ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಕೋಳಿ ಫಾರಂ, ಇತರೆ ಪಕ್ಷಗಳ ಸಾಕಾಣಿಕ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

    ಏನಿದು ಹಕ್ಕಿಜ್ವರ? ಇದರ ಇತಿಹಾಸ ಏನು? ಇದು ಸಾಂಕ್ರಾಮಿಕ ಕಾಯಿಲೆಯೇ? ಮನುಷ್ಯರಿಗೂ ಹರಡುತ್ತಾ? ರೋಗಲಕ್ಷಣ ಏನು? ಮುನ್ನೆಚ್ಚರಿಕೆ ಕ್ರಮಗಳೇನು ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ವಿವರ.

    ಹಕ್ಕಿಜ್ವರ ಎಂದರೇನು?
    ವೈಜ್ಞಾನಿಕವಾಗಿ ಹಕ್ಕಿಜ್ವರವನ್ನು ಹಕ್ಕಿ ಇನ್‌ಫ್ಲೂಯೆನ್‌ಜ ಅಥವಾ ಬರ್ಡ್ ಫ್ಲ್ಯೂ ಎನ್ನುತ್ತಾರೆ. ಈ ಸೋಂಕಿಗೆ ಮುಖ್ಯ ಕಾರಣ ಹೆಚ್5ಎನ್1 ಎಂಬ ಹೆಸರಿನ ವೈರಸ್. ಇದು ಮುಖ್ಯವಾಗಿ ಕೋಳಿ ಮತ್ತು ಇತರ ಕೆಲವು ಪಕ್ಷಿ ಪ್ರಭೇದಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹಕ್ಕಿಗಳನ್ನು ಹೆಚ್ಚು ಬಾಧಿಸುತ್ತದೆ. ಬಹುಬೇಗ ಹರಡುವ ಜ್ವರ ಇದಾಗಿದೆ.

    ಸೋಂಕಿನ ಇತಿಹಾಸವೇನು?
    ಉತ್ತರ ಇಟಲಿಯ ಎಡೋರ್ಡೊ ಪೆರೊನ್ಸಿಟೊ ಹೆಸರಿನ ಪ್ಯಾರಸಿಟಾಲಜಿಸ್ಟ್ ಮೊಟ್ಟಮೊದಲ ಬಾರಿಗೆ ಹಕ್ಕಿಜ್ವರ ಸೋಂಕನ್ನು ಪತ್ತೆಹಚ್ಚಿದರು. ಹಕ್ಕಿಗಳಲ್ಲಿ ಈ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತದೆ ಎಂದು ವಿವರಿಸಿದರು. ಆ ಸಂದರ್ಭದಲ್ಲಿ ಹಕ್ಕಿಜ್ವರಕ್ಕೆ ಅನೇಕ ಪಕ್ಷಗಳು ಬಲಿಯಾಗಿದ್ದವು. ಬಳಿಕ 1955ರಲ್ಲಿ ಹಕ್ಕಿಜ್ವರ ಉಂಟು ಮಾಡುವ ವೈರಸ್ ಅನ್ನು ಟೈಪ್ ಎ ಇನ್ಫ್ಲುಯೆನ್ಸ ವೈರಸ್ ಎಂದು ಗುರುತಿಸಲಾಯಿತು.

    1996ರಲ್ಲಿ ಹೆಚ್5ಎನ್1 ಹೆಚ್‌ಪಿಎಐ ವೈರಸ್ ಚೀನಾದ ಹೆಬ್ಬಾತುಗಳಲ್ಲಿ ಪತ್ತೆಯಾಯಿತು. 1997ರಲ್ಲಿ ಹಾಂಗ್ ಕಾಂಗ್‌ನಲ್ಲಿ ಹೆಚ್5ಎನ್1ಗೆ 18 ಮಂದಿ ತುತ್ತಾಗಿದ್ದರು. ಅವರ ಪೈಕಿ 6 ಮಂದಿ ಬಲಿಯಾದರು. ಲಕ್ಷಾಂತರ ಪಕ್ಷಿಗಳಿಗೆ ಸೋಂಕು ತಗುಲಿತು. ಬರುಬರುತ್ತಾ ಈ ವೈರಸ್ ಜಗತ್ತಿನ ಇತರೆ ದೇಶಗಳಿಗೆ ಹರಡಿತು. ಲಕ್ಷಾಂತರ ಪಕ್ಷಿಗಳು ಸೋಂಕಿಗೆ ಬಲಿಯಾದವು.

    ಸಾಂಕ್ರಾಮಿಕ ಕಾಯಿಲೆ?
    ಹೆಚ್5ಎನ್1 ವೈರಸ್‌ನಿಂದ ಹರಡುವ ರೋಗ ಹಕ್ಕಿಜ್ವರ. ಟರ್ಕಿ ಕೋಳಿ, ಗಿನಿ ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಇದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಬರುವ ಹಕ್ಕಿಗಳಲ್ಲಿ ಸೋಂಕಿದ್ದರೆ ಅವುಗಳ ಜೊತೆ ಸಂಪರ್ಕ ಬೆಳೆಸುವ ಹಕ್ಕಿಗಳಿಗೂ ತಗುಲುತ್ತದೆ. ಹಕ್ಕಿಗಳ ಗುಂಪಲ್ಲಿ ಸೋಂಕಿತ ಹಕ್ಕಿಯಿದ್ದರೂ ಹರಡುತ್ತದೆ.

    ಮನುಷ್ಯರಿಗೂ ಹರಡುತ್ತಾ?
    ಹೌದು, ಹೆಚ್5ಎನ್1 ವೈರಸ್ ಸೋಂಕಿತ ಪಕ್ಷಿಗಳಿಂದ ಮನುಷ್ಯರಿಗೂ ಹರಡುತ್ತದೆ. ಸೋಂಕಿತ ಪಕ್ಷಿಗಳ ನೇರ ಸಂಪರ್ಕಕ್ಕೆ ಬಂದರೆ ಪ್ರಾಣಿಗಳು ಮತ್ತು ಮನುಷ್ಯರಿಗೂ ಹರಡುತ್ತದೆ. 1997ರಲ್ಲಿ ಮಾನವರಲ್ಲೂ ಮೊಟ್ಟಮೊದಲ ಬಾರಿಗೆ ಹರಡಿದ್ದು ಕಂಡುಬಂತು. ಹಾಂಗ್ ಕಾಂಗ್‌ನಲ್ಲಿ ಹೆಚ್5ಎನ್1ಗೆ 18 ಮಂದಿ ತುತ್ತಾಗಿ, ಅವರಲ್ಲಿ 6 ಜನರು ಸಾವನ್ನಪ್ಪಿದರು.

    ವೈರಸ್ ಪರಿಣಾಮ ಹೇಗಿರುತ್ತೆ?
    ಸೋಂಕಿತ ಹಕ್ಕಿಯ ಮಲ, ಮೂತ್ರ, ಸಿಂಬಳ, ಉಸಿರು ರೋಗಾಣುಗಳಿಂದ ತುಂಬಿರುತ್ತದೆ. ಹಕ್ಕಿ ವಾಸಿಸುವ ಸ್ಥಳ, ಅಲ್ಲಿನ ಗಾಳಿ ಮತ್ತು ಅವುಗಳನ್ನು ಸಾಕಾಣಿಕೆಗೆ ಬಳಸುವ ಉಪಕರಣಗಳೂ ವೈರಸ್ ಮಯವಾಗಿರುತ್ತವೆ. ಕೋಳಿ ಫಾರಂಗಳಲ್ಲಿ ಕೆಲಸ ಮಾಡುವವರು, ಕೋಳಿ ಸಾಕುವವರು, ಪಕ್ಷಿಗಳು ಮತ್ತು ಅವುಗಳ ಮೊಟ್ಟೆ ಮಾರುವವರು, ಚಿಕನ್ ಅಂಗಡಿಯವರು, ಕೋಳಿ ಮಾಂಸದ ಅಡುಗೆ ಮಾಡುವವರಿಗೂ ಹಕ್ಕಿಜ್ವರ ಅಂಟುವ ಸಾಧ್ಯತೆ ಇರುತ್ತದೆ.

    ಸೋಂಕು ಹರಡುವುದು ಹೇಗೆ?
    ಈ ವೈರಸ್ ಮುಖ್ಯವಾಗಿ ಉಸಿರಾಡುವ ಗಾಳಿಯಿಂದ ಹರಡುತ್ತದೆ. ಹಕ್ಕಿಯಿಂದ ಹಕ್ಕಿಗೆ ಬಹುಬೇಗನೇ ಹರಡುತ್ತೆ. ಹಕ್ಕಿಗಳು ವಲಸೆ ಹೋದಾಗ, ಗುಂಪಿನಲ್ಲಿ ಸೋಂಕಿತ ಹಕ್ಕಿ ಇದ್ದರೆ ಇತರೆ ಹಕ್ಕಿಗಳಿಗೂ ತಗುಲುತ್ತದೆ. ಕೋಳಿ ಪಾರಂಗಳಲ್ಲಿ ಗಾಳಿ ಮೂಲಕ ಕುಕ್ಕುಟೋದ್ಯಮದಲ್ಲಿ ನಿರತರಾಗುವ ಸಿಬ್ಬಂದಿಯಲ್ಲಿ ಕಾಣಿಸಿಕೊಳ್ಳಬಹುದು. ಹಕ್ಕಿಗಳಿಂದ ಹಕ್ಕಿಗಳಿಗೆ ಹಾಗೂ ಹಕ್ಕಿಗಳಿಂದ ಮನುಷ್ಯರಿಗೆ ಇದು ಹರಡುತ್ತದೆ. ಇದುವರೆಗೂ ಮನುಷ್ಯರಿಂದ ಮನುಷ್ಯರಿಗೆ ಸೋಂಕು ತಗುಲಿರುವ ಉದಾಹರಣೆ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ವೈರಸ್ ಮನುಷ್ಯ ದೇಹಕ್ಕೆ ವರ್ಗಾವಣೆಗೊಂಡು ಬದುಕುಳಿಯುವ ಶಕ್ತಿ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.

    ರೋಗ ಲಕ್ಷಣಗಳೇನು?
    ಹಕ್ಕಿಜ್ವರ ಪೀಡಿತರಲ್ಲಿ ಜ್ವರ, ಕೆಮ್ಮು, ನೆಗಡಿ, ಶೀತ, ಗಂಟಲು ಕೆರೆತ, ತಲೆನೋವು, ಕೆಂಗಣ್ಣು, ಸ್ನಾಯುಗಳಲ್ಲಿ ನೋವು, ಆಯಾಸ ಕಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ, ಮೂಗು ಮತ್ತು ಒಸಡಿನಲ್ಲಿ ರಕ್ತ ಸ್ರಾವ, ಭೇದಿಯಾಗುತ್ತದೆ. ಸೋಂಕಿಗೆ ಒಳಗಾಗುವವರಲ್ಲಿ 2-3 ದಿನದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

    ಕೋಳಿಗಳಲ್ಲಿ ಸೋಂಕು ಪತ್ತೆ ಹೇಗೆ?
    ಸೋಂಕಿತ ಕೋಳಿಗಳು ಸಾಮಾನ್ಯವಾಗಿ ಆಹಾರ ತಿನ್ನಲ್ಲ. ಮೊಟ್ಟೆ ಇಡುವುದೂ ಕಡಿಮೆಯಾಗುತ್ತದೆ. ಹೆಚ್ಚು ಓಡಾಡದೇ ನಿತ್ರಾಣಗೊಂಡಂತಿರುತ್ತದೆ. ಅವುಗಳ ಕಣ್ಣುಗಳು ತೇವವಾಗಿರುತ್ತವೆ. ರೆಕ್ಕೆಗಳು ಕೆದರಿದಂತೆ ಇರುತ್ತವೆ. ನೆತ್ತಿ ಭಾಗದಲ್ಲಿ ದ್ರವ ಸಂಗ್ರಹವಾಗುತ್ತದೆ. ತಲೆ ಭಾಗ ಊದಿಕೊಳ್ಳುತ್ತದೆ. ಕಾಲಿನ ಚರ್ಮದ ಅಡಿಯಲ್ಲಿ ರಕ್ತಸ್ರಾವ ಆಗುತ್ತದೆ. ಕೋಳಿಗಳಿಗೆ ದಿಢೀರ್ ಸಾವು ಸಂಭವಿಸಬಹುದು.

    ಕೋಳಿ, ಮೊಟ್ಟೆ ತಿಂದರೆ ಹಕ್ಕಿಜ್ವರ ಹರಡುತ್ತಾ?
    ಸೋಂಕಿತ ಕೋಳಿ ಹಾಗೂ ಕೋಳಿ ಮೊಟ್ಟೆ ತಿನ್ನುವುದರಿಂದ ಸೋಂಕು ಹರಡುತ್ತದೆಯೇ ಎಂಬ ಗೊಂದಲ ಅನೇಕರಲ್ಲಿದೆ. ಸೋಂಕಿತ ಕೋಳಿ ಮತ್ತು ಮೊಟ್ಟೆಯನ್ನು ಬೇಯಿಸಿ ತಿನ್ನುವುದರಿಂದ ಸೋಂಕು ಹರಡುವುದಿಲ್ಲ. ಕೋಳಿ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು. ಬೇಯಿಸುವುದರಿಂದ ಅದರಲ್ಲಿನ ವೈರಸ್ ಸಾಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಯಾವುದೇ ಕಾರಣಕ್ಕೂ ಹಸಿ ಮೊಟ್ಟೆ ಸೇವಿಸಬಾರದು ಎಂಬುದು ತಜ್ಞರ ಎಚ್ಚರಿಕೆ ಮಾತು. ಹಕ್ಕಿಜ್ವರ ಸೋಂಕಿತ ಹಸುವಿನ ಹಾಲಿನಲ್ಲೂ ವೈರಸ್ ಇರುತ್ತದೆ. ಹಾಲನ್ನು ಕುದಿಸಿ ಕುಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ.

    ಮುಂಜಾಗ್ರತಾ ಕ್ರಮಗಳೇನು?
    * ಯಾವುದೇ ಹಕ್ಕಿಗೆ ಜ್ವರ ಕಂಡುಬಂದರೆ ತಕ್ಷಣ ಸುತ್ತಮುತ್ತಲಿನ ಹಕ್ಕಿಗಳನ್ನೆಲ್ಲ (ಕೋಳಿ) ಹತ್ಯೆ ಮಾಡಬೇಕು.
    * ಹಕ್ಕಿಜ್ವರ ಕಂಡುಬಂದ ಸ್ಥಳಕ್ಕೆ ಭೇಟಿ ನೀಡುವವರು ತಮಗೆ ಕಾಯಿಲೆ ಬರದಂತೆ ತಡೆಯಲು ದಿನಕ್ಕೊಂದರಂತೆ 7 ದಿನ ಟ್ಯಾಮಿಫ್ಲೂ ಮಾತ್ರೆ ಸೇವಿಸಬೇಕು.
    * ಕೋಳಿ ಸಾಕಾಣಿಕೆ ಮಾಡುವವರಿಗೆ ಹಕ್ಕಿಜ್ವರದ ಬಗ್ಗೆ ಜಾಗೃತಿ ಮೂಡಿಸಬೇಕು.
    * ಹಕ್ಕಿ ಸಾಕುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು.
    * ಹಕ್ಕಿಜ್ವರದಿಂದ ಸತ್ತ ಕೋಳಿಗಳನ್ನು ಐದಾರು ಪದರ ಸುಣ್ಣ ಹಾಗೂ ಮಣ್ಣು ಹಾಕಿ ಹೂಳಬೇಕು ಅಥವಾ ಸುಟ್ಟುಹಾಕಬೇಕು.
    * ಹಕ್ಕಿಜ್ವರದ ಸಮಯದಲ್ಲಿ ಯಾರಿಗಾದರೂ ಅತಿಯಾದ ಜ್ವರ, ಉಸಿರಾಟದ ತೊಂದರೆ ಕಂಡುಬಂದರೆ ನಿರ್ಲಕ್ಷಿಸದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು.

    ಸೋಂಕಿಗೆ ಲಸಿಕೆ ಇದೆಯೇ?
    ಹಕ್ಕಿಜ್ವರ ಸೋಂಕಿಗೆ ಯಾವುದೇ ಲಸಿಕೆ ಇಲ್ಲ. ವಿವಿಧ ಕಂಪನಿಗಳು ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ನಿರತವಾಗಿವೆ.

    ಆತಂಕ ಸೃಷ್ಟಿಸಿದ ಹಕ್ಕಿಜ್ವರ
    2023-24ರಲ್ಲಿ ಅಮೆರಿಕ ಸೇರಿದಂತೆ ಜಗತ್ತಿನ 108 ದೇಶಗಳಲ್ಲಿ ಹಕ್ಕಿಜ್ವರ ಭಾದಿಸಿದೆ. ಸೋಂಕಿಗೆ ಈಚೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಭಾರತದಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟç, ರಾಜಸ್ಥಾನ, ಕರ್ನಾಟದಲ್ಲಿ ಈಗ ಆತಂಕ ಮೂಡಿಸಿದೆ. ಸದ್ಯ ರಾಯಚೂರಿನ ಮಾನ್ವಿ, ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿಯ ಸಂಡೂರು ತಾಲೂಕಿನಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿಯಲ್ಲಿ ಇದುವರೆಗೆ 7 ಸಾವಿರ ಜೀವಂತ ಕೋಳಿಗಳನ್ನು ಸಾಮೂಹಿಕ ಹತ್ಯೆ ಮಾಡಲಾಗಿದೆ.

    ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲೇನಿದೆ?
    ರಾಜ್ಯದ ಹಲವೆಡೆ ಹಕ್ಕಿಜ್ವರ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳ ಮಾರ್ಗಸೂಚಿ ಹೊರಡಿಸಿದೆ.
    * ಹಕ್ಕಿಜ್ವರ ಕಂಡುಬಂದ ಸ್ಥಳದ 3 ಕಿಮೀ ವ್ಯಾಪ್ತಿಯಲ್ಲಿ ಮಾಂಸ ಮಾರುವಂತಿಲ್ಲ. (ಈ ವ್ಯಾಪ್ತಿಯಲ್ಲಿ ಯಾರೂ ಓಡಾಡುವಂತಿಲ್ಲ)
    * ಹಕ್ಕಿಜ್ವರ ಕಂಡುಬಂದ 10 ಕಿಮೀ ವ್ಯಾಪ್ತಿ ಸರ್ವಲೆನ್ಸ್ ಸ್ಥಳ ಎಂದು ಘೋಷಿಸಬೇಕು. ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹಾಕಬೇಕು.
    * ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಅರ್ಧಂಬರ್ಧ ಬೇಯಿಸಿದ ಮಾಂಸ ತಿನ್ನುವಂತಿಲ್ಲ.
    * ಪೌಲ್ಟ್ರಿಯಲ್ಲಿ ಕೆಲಸ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕು.
    * ಕೋಳಿ ಮಾಂಸ ಮಾರುವವರು ಮಾಸ್ಕ್, ಗ್ಲೌಸ್ ಧರಿಸಬೇಕು.
    * ಹಕ್ಕಿಗಳು, ಕೋಳಿಗಳ ಸಂಪರ್ಕದಲ್ಲಿ ಇರುವವರಿಗೆ ಔಷಧ ನೀಡಬೇಕು.
    * ರೋಗ ಪತೆಯಾದ ಸ್ಥಳದಿಂದ 1 ಕಿಮೀ ವ್ಯಾಪ್ತಿಯಲ್ಲಿ ಎಲ್ಲ ಕೋಳಿಗಳನ್ನು ಹತ್ಯೆ ಮಾಡಿ ಹೂಳುವಂತೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

  • ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ; ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗಿರಬೇಕು?

    ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ; ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗಿರಬೇಕು?

    ನೆರೆ ರಾಜ್ಯ ಕೇರಳದಲ್ಲಿ (Kerala) ಹಕ್ಕಿ ಜ್ವರ (Bird Flu) ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಅಲ್ಲದೇ ಗಡಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಸೋಂಕು ದೇಶೀಯ ಕೋಳಿಗಳಿಗೆ ಸುಲಭವಾಗಿ ಹರಡುತ್ತದೆ. ಸೋಂಕಿತ ಪಕ್ಷಿಗಳ ಮಲ, ಮೂಗಿನ ಸ್ರಾವ ಅಥವಾ ಬಾಯಿ ಅಥವಾ ಕಣ್ಣುಗಳಿಂದ ಸ್ರವಿಸುವಿಕೆಯ ಸಂಪರ್ಕದ ಮೂಲಕ ಈ ರೋಗವು ಮನುಷ್ಯರಿಗೆ ಹರಡುತ್ತದೆ. ಹಾಗಿದ್ರೆ ಈ ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ. 

    ಹಕ್ಕಿ ಜ್ವರ ಎಂದರೇನು?
    ಏವಿಯನ್ ಇನ್ ಫ್ಲುಯೆಂಜಾ (Avian Influenza) ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು. ಆದರೆ ಇದು ಮನುಷ್ಯರಿಗೆ ಕೂಡ ಹಬ್ಬುವ ಕಾರಣದಿಂದಾಗಿ ತುಂಬಾ ಭೀತಿಯ ವಾತಾವರಣ ಸೃಷ್ಟಿಯಾಗಿದೆ.

    ಹಲವಾರು ರೀತಿಯ ಹಕ್ಕಿ ಜ್ವರದ ಮಾದರಿಗಳನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ ನಾಲ್ಕು ಮಾದರಿಯಾಗಿರುವಂತಹ H5N1, H7N9, H5N6 ಮತ್ತು H5N8 ಮಾದರಿಯ ಹಕ್ಕಿ ಜ್ವರಗಳು ಇತ್ತೀಚಿನ ವರ್ಷಗಳಲ್ಲಿ ಆತಂಕ ಸೃಷ್ಟಿಸಿದೆ.

    H5N1, H7N9, H5N6 ಮಾದರಿಯ ಹಕ್ಕಿ ಜ್ವರದ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದೆ. ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ. ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುತ್ತದೆ.

    ಆದರೆ ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಇದುವರೆಗೆ ಹಬ್ಬಿರುವುದು ತಿಳಿದುಬಂದಿಲ್ಲ. H5N8 ಮಾದರಿಯ ಹಕ್ಕಿ ಜ್ವರದ ವೈರಸ್ ಇದುವರೆಗೆ ವಿಶ್ವದಲ್ಲಿ ಮನುಷ್ಯರಲ್ಲಿ ಕಂಡುಬಂದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ ತಿಳಿಸಿದೆ.

    2020ರಿಂದ H5N1 ವೈರಸ್ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಹರಡುತ್ತಿದೆ.  80ಕ್ಕೂ ಹೆಚ್ಚು ದೇಶಗಳಲ್ಲಿ (ಡಿಸೆಂಬರ್ 2023 ರಂತೆ) ಪಕ್ಷಿಗಳಿಗೆ ಈ ಸೋಂಕು ತಗುಲಿದೆ.  ಈ ವೈರಸ್‌ ಕಾಣಿಸಿಕೊಂಡ ಹಿನ್ನೆಲೆ ವಾಣಿಜ್ಯ ಕೋಳಿ ಸಾಕಣೆ ಕೇಂದ್ರಗಳಲ್ಲಿ ಲಕ್ಷಾಂತರ ಕೋಳಿಗಳನ್ನು ಕೊಲ್ಲಲಾಗಿದೆ.

    ಈ ವೈರಸ್ ಮೊದಲಿಗೆ 1996ರಲ್ಲಿ ಚೀನಾದಲ್ಲಿ ಪತ್ತೆಯಾಗಿದ್ದು, ನಂತರ ಜಗತ್ತಿನಾದ್ಯಂತ ಹರಡಿತು. ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಈ ರೋಗದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ. ಇಲ್ಲಿಯವರೆಗೆ ಮನುಷ್ಯನಿಂದ ಮನುಷ್ಯನಿಗೆ ಹರಡಿರುವ ಯಾವುದೇ ಪುರಾವೆಗಳಿಲ್ಲ.

    ರೋಗ ಲಕ್ಷಣಗಳೇನು?
    -ಕೆಮ್ಮು
    -ಉಸಿರಾಟದಲ್ಲಿ ತೊಂದರೆ
    -ತೀವ್ರ ಜ್ವರ
    -ತಲೆನೋವು
    -ಸ್ನಾಯುಗಳ ನೋವು
    -ಮೂಗು ಸೋರುವಿಕೆ
    -ಗಂಟಲಿನ ಊತ
    -ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ

    *ಕೆಲವರಲ್ಲಿ ವಾಕರಿಕೆ, ವಾಂತಿ ಮತ್ತು ಬೇಧಿಯು ಕಂಡುಬರುತ್ತದೆ ಎಂದು ಹೇಳಲಾಗಿದೆ. ಇನ್ನು ಕೆಲವರಲ್ಲಿ ಕಣ್ಣು ಕೆಂಪಾಗುವ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು. ಸೋಂಕು ದೇಹವನ್ನು ಒಗ್ಗಿಕೊಂಡು 2-5 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಅಪಾಯದಿಂದ ಪಾರಾಗಬಹುದು.

    *ಕೆಲವೊಂದು ವೈರಲ್ ವಿರೋಧಿ ಔಷಧಿಗಳಿಂದ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಸೋಂಕಿನ ತೀವ್ರತೆ ಕಡಿಮೆ ಆಗುತ್ತದೆ.

    ಮನುಷ್ಯರಿಗೆ ಹಕ್ಕಿ ಜ್ವರ ಹರಡುವುದು ಹೇಗೆ?
    ಸೋಂಕು ತಗುಲಿರುವಂತಹ ಹಕ್ಕಿಯನ್ನು ಸ್ಪರ್ಶಿಸುವುದು, ಅದರ ಹಿಕ್ಕೆಗಳು ಮತ್ತು ಹಾಸನ್ನು ಮುಟ್ಟುವುದು, ಸೋಂಕಿತ ಹಕ್ಕಿಯನ್ನು ಕೊಲ್ಲುವುದು ಅಥವಾ ಅದನ್ನು ಅಡುಗೆಗೆ ಬಳಸುವುದು ಇತ್ಯಾದಿಯಿಂದ ಸೋಂಕು ಹರಡುತ್ತದೆ.

    ಮಾಂಸಾಹಾರ ಸೇವಿಸುವವರು ಸರಿಯಾಗಿ ಬೇಯಿಸಿದ ಕೋಳಿ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಹಕ್ಕಿ ಜ್ವರ ಹರಡುವುದಿಲ್ಲ. ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಮೊಟ್ಟೆಗಳನ್ನು ಸೇವಿಸಬಾರದು.

    ರೋಗ ಬಾರದಂತೆ ತಡೆಯುವುದು ಹೇಗೆ?
    *ಕೈಗಳನ್ನು ನಿರಂತರವಾಗಿ ತೊಳೆಯುತ್ತಿರಿ. ಬಿಸಿ ನೀರು ಮತ್ತು ಸೋಪು ಬಳಸಿ. ಆಹಾರ ಸೇವನೆಗೆ ಮೊದಲು ಅಥವಾ ಅದನ್ನು ತಯಾರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ.
    *ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ನ್ನು ಪ್ರಯಾಣದ ವೇಳೆ ಬಳಸಿ.
    *ತೆರೆದ ಮಾರುಕಟ್ಟೆ ಅಥವಾ ಹಕ್ಕಿಗಳು ಹೆಚ್ಚಿರುವಂತಹ ಮಾರುಕಟ್ಟೆಯಿಂದ ದೂರವಿರಿ.
    *ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಬಾತುಕೋಳಿ ತಿನ್ನಬೇಡಿ.
    *ಹಸಿ ಮೊಟ್ಟೆ ಸೇವಿಸಬೇಡಿ.
    *ಪ್ರಯಾಣಕ್ಕೆ ಮೊದಲು ಜ್ವರದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಿರಿ. ನೀವು ಹಕ್ಕಿ ಜ್ವರ ಬರದಂತೆ ತಡೆಯಲು ಸಾಧ್ಯವಿಲ್ಲದೆ ಇದ್ದರೂ ಅದರ ಅಪಾಯವನ್ನು ಕಡಿಮೆ ಮಾಡಬಹುದು.
    *H5N1 ಹಕ್ಕಿಜ್ವರದ ವೈರಸ್ ಗೆ ಈಗಾಗಲೇ ಲಸಿಕೆ ಕಂಡು ಹಿಡಿಯಲಾಗಿದ್ದು, ಇದಕ್ಕೆ ಅಮೆರಿಕಾದ ಎಫ್ ಡಿಎಯಿಂದ ಅನುಮತಿ ಕೂಡ ಸಿಕ್ಕಿದೆ. ಆದರೆ ಇದನ್ನು ಸಾರ್ವಜನಿಕ ಬಳಕೆಗೆ ಇದುವರೆಗೆ ನೀಡಲಾಗಿಲ್ಲ.
    *ಪಾಶ್ಚರೀಕರಿಸಿದ ಡೈರಿ ಉತ್ಪನ್ನಗಳನ್ನೇ ಹೆಚ್ಚು ಬಳಸಬೇಕು.
    *ಮೊಟ್ಟೆ ಮತ್ತು ಹಾಲಿನಿಂದ ಹಕ್ಕಿಜ್ವರ ಬರುವ ಅಪಾಯ ತೀರಾ ಕಡಿಮೆ.