Tag: H.Y Meti

  • ಬಲೂನ್ ಊದುವ ವೇಳೆ ಕೆಮಿಕಲ್ ಮಿಶ್ರಿತ ನೀರು ಸೇವನೆ- ಎಚ್.ವೈ.ಮೇಟಿ ಪುತ್ರಿ ಅಸ್ವಸ್ಥ

    ಬಲೂನ್ ಊದುವ ವೇಳೆ ಕೆಮಿಕಲ್ ಮಿಶ್ರಿತ ನೀರು ಸೇವನೆ- ಎಚ್.ವೈ.ಮೇಟಿ ಪುತ್ರಿ ಅಸ್ವಸ್ಥ

    ಬಾಗಲಕೋಟೆ: ಬಲೂನ್ ಊದುವ ವೇಳೆ ಆಕಸ್ಮಿಕವಾಗಿ ಕೆಮಿಕಲ್ ಮಿಶ್ರಿತ ನೀರು ಸೇವಿಸಿದ ಮಾಜಿ ಸಚಿವ ಎಚ್.ವೈ.ಮೇಟಿ ಪುತ್ರಿ ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅಸ್ವಸ್ಥಗೊಂಡಿರುವ ಘಟನೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚಾಲನೆ ನೀಡಿದ್ದರು. ಬಳಿಕ ಶಾಲಾ ಶಿಕ್ಷರು ಬಲೂನ್ ಊದಲು ಮನವಿ ಮಾಡಿದ್ದು, ಈ ವೇಳೆ ಬಾಯಕ್ಕ ಅವರ ದೇಹದಲ್ಲಿ ಕೆಮಿಕಲ್ ಮಿಶ್ರಿತ ಬಲೂನ್ ನೀರು ಸೇರ್ಪಡೆಯಾಗಿದೆ.

    ಕಾರ್ಯಕ್ರಮದ ವೇದಿಕೆಯಲ್ಲೇ ಬಾಯಕ್ಕ ಅವರು ಅಸ್ವಸ್ಥರಾಗಿ ವಾಂತಿ ಮಾಡಿಕೊಂಡರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಶಾಲಾ ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಸದ್ಯ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಬಾಯಕ್ಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಬಲೂನ್‍ನಲ್ಲಿದ್ದ ಗ್ಲಿಸರಿನ್ ಹಾಗೂ ಶಾಂಪೂ ಮಿಶ್ರಿತ ನೀರು ಬಾಯಕ್ಕ ಅವರ ದೇಹ ಸೇರಿರುವುದು ಅವರು ಅಸ್ವಸ್ಥರಾಗಲು ಕಾರಣವಾಗಿದ್ದು, ಹೀಗಾಗಿ ವಾಂತಿ ಶುರುವಾಗಿದೆ. ಈಗಾಗಲೇ ಅವರ ದೇಹ ಸೇರಿದ್ದ ಕೆಮಿಕಲ್ ನೀರನ್ನು ಹೊರ ತೆಗೆಯಲಾಗಿದ್ದು, ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಪಿ.ಎ.ಬಿರಾದಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಎಚ್.ವೈ ಮೇಟಿ ಅಸ್ವಸ್ಥ – ಏರ್ ಅಂಬುಲೆನ್ಸ್ ಮೂಲಕ ಬೆಂಗ್ಳೂರಿಗೆ ರವಾನೆ

    ಎಚ್.ವೈ ಮೇಟಿ ಅಸ್ವಸ್ಥ – ಏರ್ ಅಂಬುಲೆನ್ಸ್ ಮೂಲಕ ಬೆಂಗ್ಳೂರಿಗೆ ರವಾನೆ

    ಬಾಗಲಕೋಟೆ: ಮಾಜಿ ಸಚಿವ ಎಚ್.ವೈ. ಮೇಟಿ ಅವರನ್ನು ಏರ್ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ.

    ಬಾಗಲಕೋಟೆಯ ನವನಗರದ ಹೆಲಿಪ್ಯಾಡ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನವೆಂಬರ್ 25ರಂದು ಎಚ್.ವೈ ಮೇಟಿ ಅವರು ಕಿಡ್ನಿ ಸ್ಟೋನ್ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲವು ದಿನಗಳಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಸ್ಟೋನ್ ಗಾತ್ರ 60 ಎಂಎಂ ಇದ್ದಿದ್ದರಿಂದ ನೋವು ತಾಳಲಾರದೇ ಮೇಟಿ ತೀವ್ರ ಅಸ್ವಸ್ಥಗೊಂಡಿದ್ದಾರೆ.

    ಆರೋಗ್ಯದಲ್ಲಾದ ಏರುಪೇರಿನಿಂದ ವಿಪರೀತ ಕಫ ಆಗಿದ್ದು, ಮೇಟಿಯವರಿಗೆ ವಾಂತಿ, ಬೇದಿಯೂ ಶುರುವಾಗಿತ್ತು. ಹೀಗಾಗಿ ಮೇಟಿಯವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುವಂತೆ ಬಾಗಲಕೋಟೆ ವೈದ್ಯರು ಕುಟುಂಬಸ್ಥರಿಗೆ ಸಲಹೆ ನೀಡಿದ್ದರು.

    ವೈದ್ಯರ ಸಲಹೆ ಬೆನ್ನಲ್ಲೇ ಕುಟುಂಬಸ್ಥರು ಏರ್ ಅಂಬುಲೆನ್ಸ್ ಮೂಲಕ ಮೇಟಿ ಅವರನ್ನು ಬೆಂಗಳೂರಿಗೆ ರವಾನಿಸಿದ್ದಾರೆ. ಕಿಡ್ನಿ ಸ್ಟೋನ್‍ನಿಂದ ಮಾಜಿ ಸಚಿವರು ಬಳಲುತ್ತಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.