Tag: H.Nagesh

  • ಬೆಂಗ್ಳೂರಿನಲ್ಲಿ ನೀರಾ ಮಾರಾಟದ ಮಾಹಿತಿಯೇ ನನಗಿಲ್ಲ- ಎಚ್.ನಾಗೇಶ್

    ಬೆಂಗ್ಳೂರಿನಲ್ಲಿ ನೀರಾ ಮಾರಾಟದ ಮಾಹಿತಿಯೇ ನನಗಿಲ್ಲ- ಎಚ್.ನಾಗೇಶ್

    ಉಡುಪಿ: ಬೆಂಗಳೂರಿನಲ್ಲಿ ಹತ್ತಕ್ಕೂ ಹಚ್ಚು ಪ್ರದೇಶಗಳಲ್ಲಿ ನೀರಾ ಬಾರ್‌ಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದು ಅಬಕಾರಿ ಸಚಿವ ಎಚ್.ನಾಗೇಶ್ ಅವರಿಗೆ ಈ ಮಾಹಿತಿಯೇ ಗೊತ್ತಿಲ್ವಂತೆ.

    ರಾಜಧಾನಿಯ ನೀರಾ ಬಾರ್ ಬಗ್ಗೆ ಶನಿವಾರ ಉಡುಪಿಯಲ್ಲಿ ಪ್ರಶ್ನಿಸುತ್ತಿದ್ದಂತೆ ಅಬಕಾರಿ ಸಚಿವ ನಾಗೇಶ್ ಅವರು ಅಚ್ಚರಿಗೊಂಡರು. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳು ಅನುಮತಿ ನೀಡಿರಬೇಕು. ಬೆಂಗಳೂರು ತಲುಪಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸುತ್ತೇನೆ ಎಂದರು.

    ತೆಂಗು ಬೆಳೆಗಾರರಿಗೆ ಉತ್ತೇಜನ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜಧಾನಿಯ ಹತ್ತಕ್ಕೂ ಅಧಿಕ ಕಡೆಗಳಲ್ಲಿ ನೀರಾ ಬಾರ್ ತೆರೆಯಲು ಇಲಾಖೆ ಅನುಮತಿ ನೀಡಿದ್ದಾರೆ. ಆದರೆ ಇಲಾಖೆಯ ಈ ಬಗ್ಗೆ ಬೆಂಗಳೂರಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಮಾಧ್ಯಮಗಳಿಗೆ ಬೆಂಗಳೂರಿನಲ್ಲೇ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.

    ಸಚಿವರಿಗೆ ಮಾಹಿತಿಯೇ ನೀಡದೆ ಅಧಿಕಾರಿಗಳು ಪರವಾನಿಗೆ ಕೊಟ್ರಾ? ರೈತರನ್ನು ಮುಂದಿಟ್ಟು ರಾಜಧಾನಿಯ ನಾಗರೀಕರಿಗೆ ನನೀರಾ ಕುಡಿಸಲು ಹೊರಟ್ರಾ ಎಂಬೂದು ಸದ್ಯ ಇರುವ ಪ್ರಶ್ನೆ.

  • ಅದನ್ನೆಲ್ಲ ನೀವು ಕೇಳ್ಬಾರ್ದು, ನಾನು ಹೇಳ್ಬಾರ್ದು ಅದು ಕಾಂಟ್ರವರ್ಸಿ ಆಗುತ್ತೆ – ನಾಗೇಶ್

    ಅದನ್ನೆಲ್ಲ ನೀವು ಕೇಳ್ಬಾರ್ದು, ನಾನು ಹೇಳ್ಬಾರ್ದು ಅದು ಕಾಂಟ್ರವರ್ಸಿ ಆಗುತ್ತೆ – ನಾಗೇಶ್

    ಕೋಲಾರ: ಅದನ್ನೆಲ್ಲ ನೀವು ಕೇಳ್ಬಾರ್ದು, ನಾನು ಹೇಳ್ಬಾರ್ದು, ಅದನ್ನು ಸರ್ಕಾರದ ಬಳಿ ಮಾತನಾಡುತ್ತೇನೆ, ನಾನು ಈಗ ಆ ವಿಚಾರ ಮಾತನಾಡಿದರೆ ಕಾಂಟ್ರವರ್ಸಿ ಆಗುತ್ತೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದರು.

    ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷೇತರ ಶಾಸಕರಾಗಿ, ಬಿಜೆಪಿ ಸರ್ಕಾರ ಬರಲು ಪ್ರಮುಖ ಕಾರಣರಾಗಿ ನಿಮಗೆ ಅಬಕಾರಿ ಖಾತೆ ನೀಡಿ ಪೂರ್ಣ ಸ್ವಾತಂತ್ರ್ಯ ನೀಡಿಲ್ಲ ಎನ್ನುವ ಆರೋಪ ನಿಜನಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

    ರೈತರ ಪೂರ್ಣ ಸಾಲಮನ್ನಾ ಸಾಧ್ಯವಿಲ್ಲ ಎನ್ನುವ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಕುರಿತ ಪ್ರಶ್ನೆಗೆ, ರಾಜ್ಯದ ಅಭಿವೃದ್ಧಿ ಕುರಿತು ನನಗೆ ಗೊತ್ತಿಲ್ಲ, ಯಾಕಂದರೆ ನಾನು ಕಳೆದ ಎರಡು ಮೂರು ದಿನದಿಂದ ಟಿವಿ ನೋಡಿಲ್ಲ. ನಿನ್ನೆ ರಾತ್ರಿ ನಾನು ಫಾರ್ಮ್ ಹೌಸ್ ನಲ್ಲಿದ್ದೆ, ನಮ್ಮ ಟಿವಿ ಔಟ್ ಆಫ್ ಸರ್ವೀಸ್ ನಲ್ಲಿದೆ, ಕತ್ತಲಾಗಿಬಿಟ್ಟಿತ್ತು, ಕರೆನ್ಸಿ ಹಾಕಿಸಿಲ್ಲ. 25 ರಂದು ಕೆಡಿಪಿ ಮೀಟಿಂಗ್ ಕರೆದಿದ್ದೇನೆ ಅದಾದ ನಂತರ ಸಿಎಂ ಏನು ಹೇಳಿದ್ದಾರೆ ಎಲ್ಲಾ ವಿಚಾರಗಳ ಕುರಿತು ತಿಳಿದುಕೊಳ್ಳುತ್ತೇನೆ ಎಂದು ಹಾರಿಕೆಯ ಉತ್ತರ ನೀಡಿದರು.

  • ಎಡವಟ್ಟು `ಎಣ್ಣೆ’ ಸಚಿವರಿಗೆ ಮಹಿಳೆಯರಿಂದ ಸ್ಪೆಷಲ್ ಗಿಫ್ಟ್ ರವಾನೆ

    ಎಡವಟ್ಟು `ಎಣ್ಣೆ’ ಸಚಿವರಿಗೆ ಮಹಿಳೆಯರಿಂದ ಸ್ಪೆಷಲ್ ಗಿಫ್ಟ್ ರವಾನೆ

    ಬೆಂಗಳೂರು: ಮನೆ ಮನೆಗೆ ಎಣ್ಣೆ ಪಾರ್ಸೆಲ್ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಹೇಳಿ ಇಂದು ಸರ್ಕಾರದ ಮುಂದೆ ಆ ಪ್ರಸ್ತಾಪವೇ ಇಲ್ಲ ಎಂದ ಅಬಕಾರಿ ಸಚಿವ ಎಚ್ ನಾಗೇಶ್ ವಿರುದ್ಧ ಮಹಿಳೆಯರು ಕಿಡಿಕಾರಿದ್ದಾರೆ.

    ಮನೆಯಲ್ಲಿ ಕುಡ್ಕೊಂಡು ಇರಿ. ಮಿನಿಸ್ಟರ್ ಆಗೋಕೆ ತಾವು ಲಾಯಕ್ಕಲ್ಲ ಎಂದು ಕುರುಬರಹಳ್ಳಿ ಮಹಿಳಾ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಟಾರ್ಗೆಟ್ ಹೆಚ್ಚಳ ಮಾಡಿ ಪರೋಕ್ಷವಾಗಿ ಜನರನ್ನು ಮದ್ಯ ವ್ಯಸನಿಯನ್ನಾಗಿ ಮಾಡಲು ಸಚಿವ ನಾಗೇಶ್ ರೆಡಿಯಾಗಿದ್ದಾರೆ ಎಂದು ಸಿಟ್ಟಿಗೆದ್ದ ಮಹಿಳೆಯರು ಎಣ್ಣೆ ಬಾಟಲಿ ಪಾರ್ಸೆಲ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಮದ್ಯಪಾನ ಮುಕ್ತ ಕರ್ನಾಟಕದ ಕನಸು ನಾವು ಕಾಣುತ್ತಿದ್ದರೆ ಸಚಿವರು ಬಾಯಿಗೆ ಬಂದ ಹಾಗೆ ಮಾತಾನಾಡುತ್ತಿದ್ದಾರೆ. ಇವರ ಪತ್ನಿಯಾದರೂ ಕೊಂಚ ಬುದ್ಧಿ ಹೇಳಲಿ ಎಂದು ಸಂಘಟನಾ ಸದಸ್ಯರು ಕಿಡಿಕಾರಿದ್ದಾರೆ.

    ಮದ್ಯಪಾನ ನಿಷೇಧ ಮಾಡಬೇಕು ಎಂದು ಮಹಿಳೆಯರು ಹಾಗೂ ಕೆಲ ಸ್ವಾಮೀಜಿಗಳು ಒತ್ತಾಯ ಮಾಡುತ್ತಿದ್ದಾರೆ. ಅವರು ಒಳ್ಳೆಯ ದೃಷ್ಟಿಯಿಂದಲೇ ಹೇಳುತ್ತಾರೆ. ಆದರೆ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಬೇಕಲ್ವ ಎಂದು ಸಚಿವರು ಪ್ರಶ್ನಿಸಿದ್ದರು. ಅಲ್ಲದೆ ಯಾರೋ ಕೆಲವು ಮಹಿಳೆಯರು ಹೇಳಿದ್ದಾರೆ ಎಂದು ಮದ್ಯ ನಿಷೇಧ ಮಾಡಲು ಸಾಧ್ಯವಿಲ್ಲ ಎಂದೂ ಹೇಳಿಕೆ ನೀಡಿದ್ದರು. ಸಚಿವರ ಈ ಹೇಳಿಕೆಯನ್ನು ಮಹಿಳಾ ಹೋರಾಟಗಾರ್ತಿಯರು ಖಂಡಿಸಿದ್ದಾರೆ.

    ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಸಚಿವರು, ಮನೆ ಮನೆಗೆ ಮದ್ಯ ಪಾರ್ಸೆಲ್ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂದು ತಿಳಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಅಬಕಾರಿ ಸಚಿವರು ಇಂದು ಮತ್ತೆ ಸುದ್ದಿಗೋಷ್ಠಿ ಕರೆದು ಬಾಯಿ ತಪ್ಪಿನಿಂದ ಹಾಗೆ ಆಗಿದೆ. ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.

  • ಡಿಕೆಶಿ ನನ್ನ ರಾಜಕೀಯ ಗುರು, ಅವರಿಗೆ ದೈವ ಶಕ್ತಿ ಇದೆ – ಎಚ್.ನಾಗೇಶ್

    ಡಿಕೆಶಿ ನನ್ನ ರಾಜಕೀಯ ಗುರು, ಅವರಿಗೆ ದೈವ ಶಕ್ತಿ ಇದೆ – ಎಚ್.ನಾಗೇಶ್

    ಕೋಲಾರ: ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು ನನ್ನ ರಾಜಕೀಯ ಗುರುಗಳು ಅವರಿಗೆ ದೇವರು ಒಳ್ಳೆಯದು ಮಾಡುತ್ತಾನೆ. ಅವರಿಗೆ ದೈವ ಶಕ್ತಿ ಇದೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.

    ನೂತನ ಸಚಿವರಾದ ನಂತರ ಕೋಲಾರದ ಮುಳಬಾಗಲಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲಾ ದೇವರುಗಳ ಆಶೀರ್ವಾದ ಇದೆ. ಆ ದೈವ ಬಲದಿಂದ ಮುಂದೆ ಅವರಿಗೆ ಒಳ್ಳೆಯದಾಗುತ್ತದೆ ಎಂದು ಭವಿಷ್ಯ ನುಡಿದರು.

    ಡಿಕೆಶಿ ಅವರ ಮೇಲೆ ಇರುವ ಆರೋಪವನ್ನು ನಾನು ನಂಬುವುದಿಲ್ಲ. ವಿಚಾರಣೆ ಮುಗಿಯುವವರೆಗೂ ಊಹಾಪೋಹಗಳು ಇದ್ದೇ ಇರುತ್ತವೆ. ತನಿಖೆಯ ನಂತರ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ಸಿಗುತ್ತದೆ. ಡಿ.ಕೆ.ಶಿವಕುಮಾರ್ ಅವರು ನನಗೆ ರಾಜಕೀಯ ಗುರುಗಳು, ದೇವರು ಜೊತೆಗೆ ಗಾಡ್ ಫಾದರ್ ಎಲ್ಲವೂ ಆಗಿದ್ದವರು. ಕಷ್ಟದಲ್ಲಿರುವಾಗ ಅವರ ಬಗ್ಗೆ ಟೀಕೆ ಮಾಡುವುದು ಸುಲಭ, ಅವರ ವೈಯುಕ್ತಿಕ ವಿಚಾರಗಳ ಕುರಿತು ಕಷ್ಟದಲ್ಲಿದ್ದಾಗ ಮಾತನಾಡಬಾರದು ಎಂದು ಹೇಳಿದರು.

    ಒಂದು ವೇಳೆ ಶಿವಕುಮಾರ್ ಅವರು ಜೈಲಿಗೆ ಹೋದರೆ ನಾನು ಏನು ಮಾಡುವುದಕ್ಕೆ ಆಗುವುದಿಲ್ಲ. ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಅಷ್ಟೇ ಎಂದರು. ಅಬಕಾರಿ ಇಲಾಖೆಯಲ್ಲಿ ಹೊಸ ಲೈಸೆನ್ಸ್ ಗಳಿಗೆ ಬಹಳ ಬೇಡಿಕೆ ಇದೆ, ಹೀಗಾಗಿ ಮತ್ತಷ್ಟು ಲೈಸೆನ್ಸ್ ಗಳನ್ನು ಕೊಡುವ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳುವೆ ಎಂದು ತಿಳಿಸಿದರು.

    ಅದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಆಡಳಿತ ವರ್ಗದಲ್ಲಿದ್ದ ನಾನು ನನ್ನ ಅನುಭವಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಿದ್ದೇನೆ ಎಂದ ಅವರು, ರಾಜ್ಯದಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ನಿಲ್ಲಿಸುವಲ್ಲಿ ಕ್ರಮಕೈಗೊಳ್ಳುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಮುಳಬಾಗಿಲು ಪಟ್ಟಣದಲ್ಲಿ ನೂತರ ಪಶು ಆಸ್ಪತ್ರೆ ಕಟ್ಟಡ ಉದ್ಘಾಟನೆ, ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನಡೆಸಿದರು.

  • ಸಂಪುಟ ರಚನೆಗೂ ಮುನ್ನವೇ ಇಂಧನ ಖಾತೆಯ ಮೇಲೆ ಶಾಸಕ ನಾಗೇಶ್ ಕಣ್ಣು

    ಸಂಪುಟ ರಚನೆಗೂ ಮುನ್ನವೇ ಇಂಧನ ಖಾತೆಯ ಮೇಲೆ ಶಾಸಕ ನಾಗೇಶ್ ಕಣ್ಣು

    ಕೋಲಾರ: ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಅವರು ಸಂಪುಟ ರಚನೆಯ ಕುರಿತು ಕಸರತ್ತು ನಡೆಸುತ್ತಿದ್ದರೆ ಇತ್ತ ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಇಂಧನ ಖಾತೆಯ ಮೇಲೆ ಕಣ್ಣು ಹಾಕಿದ್ದಾರೆ.

    ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಕೂಡ ಇಂಧನ ಖಾತೆಗಾಗಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ರೇವಣ್ಣ ಅವರ ನಡುವೆ ಪೈಪೋಟಿ ನಡೆದಿತ್ತು. ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಈ ಖಾತೆಯನ್ನು ನಾನೇ ನಿಭಾಯಿಸುತ್ತೇನೆ ಎಂದು ಜವಾಬ್ದಾರಿ ತೆಗೆದುಕೊಂಡಿದ್ದರು. ಈಗ ಬಿಜೆಪಿ ಸರ್ಕಾರ ಬಂದ ಮೇಲೂ ಇಂಧನ ಖಾತೆ ಮೇಲೆ ಹಲವು ಮಂದಿ ಕಣ್ಣಿಟ್ಟಿದ್ದಾರೆ. ಅದರಲ್ಲೂ ಪಕ್ಷೇತರ ಶಾಸಕ ನಾಗೇಶ್ ಬಹಿರಂಗವಾಗಿಯೇ ಈ ಖಾತೆ ನೀಡಿದರೆ ಉತ್ತಮವಾಗಿ ಕೆಲಸ ಮಾಡಬಲ್ಲೆ ಎಂದು ಹೇಳಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡುವಾಗ ಈ ಬಗ್ಗೆ ನಾಗೇಶ್ ಅವರೇ ಬಾಯಿಬಿಟ್ಟಿದ್ದಾರೆ. ಸಚಿವರಾಗಲು ಎಲ್ಲರಿಗೂ ಆಸೆ ಇರುತ್ತದೆ. ಕಳೆದ ಬಾರಿ ಸಣ್ಣ ಕೈಗಾರಿಕೆ ಸಚಿವನಾಗಿದ್ದೆ. ಈ ಬಾರಿ ಒಳ್ಳೆಯ ಇಲಾಖೆ ಕೊಟ್ಟರೆ ನಿಭಾಯಿಸುವೆ. ಅದರಲ್ಲೂ ಇಂಧನ ಇಲಾಖೆ ಕೊಟ್ಟರೆ ನಿರ್ವಹಿಸುತ್ತೇನೆ. ಎಲ್ಲವೂ ಗೊತ್ತಿರುವುದರಿಂದ ಸುಲಭವಾಗಿ ನಿಭಾಯಿಸಬಲ್ಲೆ ಎಂದು ತಿಳಿಸಿದ್ದಾರೆ.

    ಸಿಎಂ ಯಡಿಯೂರಪ್ಪ ಅವರಿಗೆ ದೇವರು ಒಳ್ಳೆಯ ಶಕ್ತಿ ಕೊಟ್ಟಿದ್ದಾನೆ. ಅದಕ್ಕೆ ಪ್ರವಾಹ ಪರಿಸ್ಥಿತಿ ಎಲ್ಲವನ್ನೂ ಒಬ್ಬರೇ ನಿಭಾಯಿಸುತ್ತಿದ್ದಾರೆ. ಒಂದು ವಾರದಲ್ಲಿ ಎಲ್ಲವೂ ಸರಿ ಹೋಗುತ್ತದೆ. ಇಳಿ ವಯಸ್ಸಿನಲ್ಲೂ ಶಕ್ತಿ ಮೀರಿ ಬಿಎಸ್‍ವೈ ಕೆಲಸಮಾಡುತ್ತಿದ್ದಾರೆ ಎಂದು ಸಿಎಂ ಕಾರ್ಯವೈಖರಿಯನ್ನು ಹೊಗಳಿದರು.

    ಈ ಹಿಂದೆ ನನಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗಾಡ್ ಫಾದರ್ ಎಂದಿದ್ದ ನಾಗೇಶ್ ಅವರು, ಈಗ ನೋಡಿಕೊಂಡು ಒಳ್ಳೆಯ ಗಾಡ್ ಫಾದರ್ ಹುಡಕಿಕೊಳ್ತೇನೆ, ನಾನು ಮಾಜಿ ಶಾಸಕ ಮಂಜುನಾಥ್ ಲವ-ಕುಶ ಇದ್ದಂತೆ ಎಂದು ಹೇಳಿದ್ದಾರೆ.

    ಮಾಜಿ ಸಂಸದ ಎಚ್. ಮುನಿಯಪ್ಪ ಅವರ ಬಗ್ಗೆ ಪ್ರತಿಕ್ರಿಯಿಸಿ, ಅವರ ಬಗ್ಗೆ ಮಾತನಾಡುವುದು ಅಪ್ರಸ್ತುತ. ನಮ್ಮಂತವರ ಬಗ್ಗೆ ಮಾತನಾಡುವ ಅರ್ಹತೆ ಅವರಿಗೆ ಇಲ್ಲ. ನಮ್ಮ ಬೆಲೆ ಏನು ಅವರ ಬೆಲೆ ಏನು? ಅವರ 20 ವರ್ಷಗಳ ಜಮಾನ ಮುಗೀತು, ಈಗೇನಿದ್ದರು ಅವರು ವಾಚ್ ಮಾಡಬೇಕಷ್ಟೆ ಎಂದು ಸಲಹೆ ನೀಡುತ್ತಲೇ, ಕೈಲಾದ್ರೆ ಮಾಡಬೇಕು ಇಲ್ಲವಾದಲ್ಲಿ ಮನೆಯಲ್ಲಿರುಬೇಕು ಎಂದು ಟಾಂಗ್ ಕೊಟ್ಟರು.

  • ಮೋದಿಯಂತಹ ಲೀಡರ್ ಇರೋವಾಗ ಭಾರತಕ್ಕೆ ಯಾರ ಭಯವಿಲ್ಲ: ಎಚ್.ನಾಗೇಶ್

    ಮೋದಿಯಂತಹ ಲೀಡರ್ ಇರೋವಾಗ ಭಾರತಕ್ಕೆ ಯಾರ ಭಯವಿಲ್ಲ: ಎಚ್.ನಾಗೇಶ್

    ಕೋಲಾರ: ಭಾರತ ದೇಶವನ್ನು ಎಲ್ಲರೂ ಕಣ್ಣು ಬಿಟ್ಟು ನೋಡುವಂತೆ ಪ್ರಧಾನಿ ಮೋದಿ ಅಭಿವೃದ್ಧಿ ಮಾಡುತ್ತಿದ್ದಾರೆ ಹಾಗಾಗಿ ಅವರ ಹೆಜ್ಜೆಯಲ್ಲಿ ಸಾಗೋಣ, ಅವರ ಸಾಧನೆಗಳನ್ನು ಹೇಳೋಣ ಎಂದು ಬಿಜೆಪಿಗೆ ಬೆಂಬಲ ನೀಡಿದ್ದೇನೆ ಎಂದು ಮುಳಬಾಗಿಲಿನಲ್ಲಿ ಪಕ್ಷೇತರ ಶಾಸಕ ಎಚ್.ನಾಗೇಶ್ ಹೇಳಿದ್ದಾರೆ.

    ಇಂದಿರಾಗಾಂಧಿ ನಂತರ ದೇಶವನ್ನು ಯಾರು ಸರಿ ಮಾಡುತ್ತಾರೆ ಎಂಬ ಆತಂಕ ಇತ್ತು. ಮೋದಿ ಬಂದ ನಂತರ ದೇಶ ಸರಿಯಾಗಿದೆ. ಮೋದಿಯಂತಹ ಲೀಡರ್ ಇರುವಾಗ ನಮಗೆ, ನಮ್ಮ ದೇಶಕ್ಕೆ ಯಾವುದೇ ಭಯವಿಲ್ಲ. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಅಭಿವೃದ್ಧಿಗಾಗಿ ನಾನು ಈ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.

    ಸುಭದ್ರ ಸರ್ಕಾರ ಮಾಡುವವರಿಗೆ ನನ್ನ ಬೆಂಬಲ, ಕ್ಷೇತ್ರದ ಮುಖಂಡರು, ಮತದಾರರ ನಿರ್ಧಾರದಂತೆ ಈ ಹೆಜ್ಜೆ ಇಟ್ಟಿದ್ದೇನೆ. ಯಾರು ಬ್ಲಾಕ್ ಮೇಲ್ ಮಾಡಿಲ್ಲ, ಎಲ್ಲರೂ ಪರಿಚಯ ಇರುವವರು ಹಾಗಾಗಿ ನನ್ನ ಮೇಲೆ ಯಾರು ಒತ್ತಡ ಹಾಕಿಲ್ಲ ಎಂದು ಸ್ಪಷ್ಟ ಪಡಿಸಿದರು. ಕಾಂಗ್ರೆಸ್, ಜೆಡಿಎಸ್ ನಾಯಕರಾಗಲಿ ಯಾರೂ ನನ್ನ ಸಂಪರ್ಕ ಮಾಡಿಲ್ಲ, ಡಿ.ಕೆ ಶಿವಕುಮಾರ್ ಅವರನ್ನು ನಾನು ಟಿವಿಯಲ್ಲಿ ನೋಡಿದ್ದು ಅಷ್ಟೇ ಎಂದು ತಿಳಿಸಿದರು.

    ದೂರವಾಣಿ ಕದ್ದಾಲಿಕೆ ಸಾಧ್ಯತೆ ಇದೆ ಎಚ್ಚರವಾಗಿರಿ ಎಂದು ಹೇಳಿದ್ದರು. ಆದರೂ ಕೂಡ ನಾನು ನೇರವಾಗಿ ದೂರವಾಣಿಯಲ್ಲಿ ಮಾತನಾಡುತ್ತಿದ್ದೆ. ನಾನೇನು ವ್ಯವಹಾರ ಮಾಡಿಲ್ಲ, ಕಳ್ಳನು ಅಲ್ಲ. ಅತೃಪ್ತರು ನನಗೆ ಇನ್ನೂ ಸಿಕ್ಕಿಲ್ಲ. ಅವರಿಗೂ ನನಗೂ ಸಂಬಂಧ ಇಲ್ಲ. ಅವರದೆ ಒಂದು ಗ್ರೂಪ್ ನಾನೇ ಒಂದು ಗ್ರೂಪ್. ಮುಂಬೈ ವಿಚಾರ ನನಗೇನು ಗೊತ್ತಿಲ್ಲ, ಕರೆದರು ಹೋದೆ ಬಂದೆ ಅಷ್ಟೇ ಎಂದು ಹೇಳಿದರು.

  • ಪಕ್ಷೇತರ ಶಾಸಕರಿಬ್ಬರಿಗಾಗಿ ಕೈ-ಕಮಲ ಕಾರ್ಯಕರ್ತರ ಫೈಟ್

    ಪಕ್ಷೇತರ ಶಾಸಕರಿಬ್ಬರಿಗಾಗಿ ಕೈ-ಕಮಲ ಕಾರ್ಯಕರ್ತರ ಫೈಟ್

    ಬೆಂಗಳೂರು: ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ನಿತೀಶ್ ಅಪಾರ್ಟ್‍ಮೆಂಟ್ ನಲ್ಲಿರುವ ವಿಷಯ ತಿಳಿಯುತ್ತಿದ್ದಂತೆ ಇಬ್ಬರಿಗಾಗಿ ನಡುರಸ್ತೆಯಲ್ಲಿ ಹೈಡ್ರಾಮ ನಡೆದಿದೆ.

    ನಿತೇಶ್ ಅಪಾರ್ಟ್‍ಮೆಂಟ್ ಮುಂದೆ ಆಗಮಿಸಿದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರರು ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಯಿತು. ಅಪಾರ್ಟ್‍ಮೆಂಟ್ ಪ್ರವೇಶಕ್ಕೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕುಳಿತ ಕೈ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಇತ್ತ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.

    ಇದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚಿವ ಡಿ.ಕೆ.ಶಿವಕುಮಾರ್, ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ನಾಗೇಶ್ ಅವರನ್ನು ವಿಧಾನಸೌಧ ಒಂದು ಕಿ.ಮೀ. ಆಸುಪಾಸಿನಲ್ಲಿಯೇ ಇರಿಸಲಾಗಿದೆ. ನಾನು ಅವರಿಬ್ಬರು ಬರೋದನ್ನು ಕಾಯುತ್ತಿದ್ದೇನೆ. ವಿಧಾನಸೌಧದಲ್ಲಿ ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೆ ನೋಡೋಣ ಎಂದು ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ಸಂದೇಶ ರವಾನಿಸಿದ್ದರು.

  • ನಮ್ಮ ವಿರುದ್ಧ ಅದ್ಹೇಗೆ ಕೈ ಎತ್ತುತ್ತಾರೆ ನೋಡ್ತೀನಿ: ಡಿಕೆಶಿ

    ನಮ್ಮ ವಿರುದ್ಧ ಅದ್ಹೇಗೆ ಕೈ ಎತ್ತುತ್ತಾರೆ ನೋಡ್ತೀನಿ: ಡಿಕೆಶಿ

    ಬೆಂಗಳೂರು: ವಿಶ್ವಾಸಮತ ಯಾಚನೆ ಸಂಬಂಧಿಸಿದ ವಿಷಯದ ಮೇಲೆ ಸುದೀರ್ಘವಾಗಿ ಮಾತನಾಡಿ ಹೊರ ಬಂದ ಸಚಿವ ಡಿ.ಕೆ.ಶಿವಕುಮಾರ್, ಪಕ್ಷೇತರ ಶಾಸಕರು ನಮ್ಮ ವಿರುದ್ಧ ಹೇಗೆ ಕೈ ಎತ್ತುತ್ತಾರೆ ನೋಡೋಣ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.

    ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ನಾಗೇಶ್ ಅವರನ್ನು ವಿಧಾನಸೌಧ ಒಂದು ಕಿ.ಮೀ. ಆಸುಪಾಸಿನಲ್ಲಿಯೇ ಇರಿಸಲಾಗಿದೆ. ನಾನು ಅವರಿಬ್ಬರು ಬರೋದನ್ನು ಕಾಯುತ್ತಿದ್ದೇನೆ. ವಿಧಾನಸೌಧದಲ್ಲಿ ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೆ ನೋಡೋಣ ಎಂದರು.

    ಸಮ್ಮಿಶ್ರ ಸರ್ಕಾರದಲ್ಲಿ ಪಕ್ಷೇತರ ಶಾಸಕರಿಬ್ಬರಿಗೂ ಸಚಿವ ಸ್ಥಾನವನ್ನು ನೀಡಲಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಬೆನ್ನಲ್ಲೆ ತಮ್ಮ ನಿಲುವು ಬದಲಿಸಿಕೊಂಡು ಪಕ್ಷೇತರ ಶಾಸಕರು ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ತಮ್ಮ ಬೆಂಬಲ ಹಿಂಪಡೆದು ದೋಸ್ತಿಗಳಿಗೆ ಶಾಕ್ ನೀಡಿದ್ದರು.

  • ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ

    ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ

    ಬೆಂಗಳೂರು: ಮೈತ್ರಿ ಸಂಪುಟಕ್ಕೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದ ನೂತನ ಸಚಿವರಾದ ಆರ್.ಶಂಕರ್ ಹಾಗೂ ಎಚ್. ನಾಗೇಶ್ ಅವರಿಗೆ ಖಾತೆ ಹಂಚಿಕೆ ಮಾಡಿರುವ ಸರ್ಕಾರ, ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದೆ.

    ನಿರೀಕ್ಷೆಯಂತೆ ಶಂಕರ್ ಅವರಿಗೆ ಪೌರಾಡಳಿತ ಖಾತೆ ಲಭಿಸಿದ್ದು, ನಾಗೇಶ್ ಅವರಿಗೆ ಸಣ್ಣ ಕೈಗಾರಿಕೆ ಖಾತೆ ನೀಡಲಾಗಿದೆ. ಈ ಹಿಂದೆ ಸಣ್ಣ ಕೈಗಾರಿಕೆ ಖಾತೆ ಗುಬ್ಬಿ ಶ್ರೀನಿವಾಸ್ ಅವರ ಬಳಿ ಇತ್ತು. ಸದ್ಯ ಅವರಿಂದ ಈ ಸಣ್ಣ ಕೈಗಾರಿಕೆಯನ್ನು ಹಿಂಪಡೆದಿರುವ ಮುಖ್ಯಮಂತ್ರಿಗಳು ನಾಗೇಶ್ ಅವರಿಗೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಬಳಿ ಇದ್ದ ಪ್ರಾಥಮಿಕ ಶಿಕ್ಷಣ ಖಾತೆಯನ್ನ ಗುಬ್ಬಿ ಶ್ರೀನಿವಾಸ್ ಅವರಿಗೆ ನೀಡಿದ್ದಾರೆ.

    ಕುಂದಗೋಳ ಶಾಸಕ ಸಿಎಸ್ ಶಿವಳ್ಳಿ ಅವರ ನಿಧನದಿಂದ ಪೌರಾಡಳಿತ ಖಾತೆ ತೆರವಾಗಿತ್ತು. ಜೂನ್ 14 ರಂದು ಹಲವು ಗೊಂದಲಗಳ ನಡುವೆಯೂ ಪಕ್ಷೇತರ ಶಾಸಕರಾಗಿದ್ದ ಶಂಕರ್ ಹಾಗೂ ನಾಗೇಶ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಪಕ್ಷೇತರರಿಗೆ ಸಂಪುಟದಲ್ಲಿ ಸ್ಥಾನ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

  • ಶುಭ ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ

    ಶುಭ ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ

    – ಶಂಕರ್ ಗೆ ಪೌರಾಡಳಿತ, ನಾಗೇಶ್‍ಗೆ ಶಿಕ್ಷಣ ಸಾಧ್ಯತೆ

    ಬೆಂಗಳೂರು: ಮೈತ್ರಿ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಅವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬ ಮಾಹಿತಿ ಸಿಎಂ ಕಚೇರಿಯಿಂದ ಲಭ್ಯವಾಗಿದೆ.

    ರಾಜ್ಯಪಾಲ ವಿ.ಆರ್.ವಾಲಾ ಅವರು ಬೆಂಗಳೂರಿನಿಂದ ಹೊರ ಇರುವ ಹಿನ್ನೆಲೆಯಲ್ಲಿ ಸೋಮವಾರ ಖಾತೆ ಹಂಚಿಕೆ ಆಗಲಿದೆ ಎಂಬ ಮಾಹಿತಿ ಲಭಿಸಿದ್ದು, ನಾಳೆ ವಾಲಾ ಅವರಿಂದ ನೂತನ ಸಚಿವರ ಖಾತೆಗಳ ಪಟ್ಟಿಗೆ ಅಂಕಿತ ಬೀಳಲಿದೆ. ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾಗಿರುವ ಪೌರಾಡಳಿತ ಇಲಾಖೆಯ ಜವಾಬ್ದಾರಿಯನ್ನು ಆರ್.ಶಂಕರ್ ಅವರಿಗೆ ವಹಿಸುವ ಸಾಧ್ಯತೆಗಳಿವೆ. ಬಹು ದಿನಗಳಿಂದ ಸಚಿವರಿಲ್ಲದೇ ಉಳಿದುಕೊಂಡಿರುವ ಶಿಕ್ಷಣ ಇಲಾಖೆಗೆ ಹೆಚ್.ನಾಗೇಶ್ ಅವರ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ.

    ಜೂನ್ 14ರಂದು ಹಲವು ಗೊಂದಲಗಳ ನಡುವೆ ಪಕ್ಷೇತರರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪಕ್ಷೇತರರರಿಗೆ ಸಚಿವ ಸ್ಥಾನ ನೀಡಿದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಹಿರಿಯ ನಾಯಕರು ಮತ್ತು ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಪಕ್ಷೇತರ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲಾಯ್ತು ಎಂಬ ಮಾತುಗಳು ಕೇಳಿ ಬಂದಿವೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]