Tag: H.Nagesh

  • ಮಾಜಿ ಶಾಸಕ ವೈಎಸ್‌ವಿ ದತ್ತಾ, ಶಾಸಕ ಹೆಚ್.ನಾಗೇಶ್ ಕಾಂಗ್ರೆಸ್ ಸೇರ್ಪಡೆ

    ಮಾಜಿ ಶಾಸಕ ವೈಎಸ್‌ವಿ ದತ್ತಾ, ಶಾಸಕ ಹೆಚ್.ನಾಗೇಶ್ ಕಾಂಗ್ರೆಸ್ ಸೇರ್ಪಡೆ

    ಬೆಂಗಳೂರು: ಜೆಡಿಎಸ್ (JDS) ಮಾಜಿ ಶಾಸಕ ವೈಎಸ್‌ವಿ ದತ್ತಾ (YSV Datta) ಹಾಗೂ ಪಕ್ಷೇತರ ಶಾಸಕ ಹೆಚ್. ನಾಗೇಶ್ (H Nagesh) ಶನಿವಾರ ಕಾಂಗ್ರೆಸ್ (Congress) ಪಕ್ಷ ಸೇರ್ಪಡೆಗೊಂಡಿದ್ದಾರೆ.

    ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಾ, ನಾಗೇಶ್ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು, ಪಕ್ಷದ ಬಾವುಟ ನೀಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಮೈಸೂರು ಮುಡಾ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಸಹ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

    ನೂಕು ನುಗ್ಗಲು: ಪ್ರಬಲ ನಾಯಕರು ಪಕ್ಷ ಸೇರ್ಪಡೆಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸತೊಡಗಿದರು. ಆದ್ದರಿಂದ ನೂಕು ನುಗ್ಗಲು ಶುರುವಾಗಿತ್ತು. ಈ ವೇಳೆ ಕಾರ್ಯಕರ್ತರನ್ನ ಗದರಿಸಿದ ಡಿಕೆಶಿ, ಎಲ್ಲರೂ ಶಾಂತಿಯಿಂದ ಇದ್ದರೇ ಸಭೆ ಮಾಡುತ್ತೇನೆ ಇಲ್ಲದಿದ್ದರೆ ಮಾಡಲ್ಲ ಎಂದು ಹೇಳಿದರು. ಬಳಿಕ ಕಾರ್ಯಕರ್ತರು ಶಾಂತಿಯಾದರು. ಇದನ್ನೂ ಓದಿ: ಸ್ಯಾಂಟ್ರೋ ರವಿಗೆ 14 ದಿನ ನ್ಯಾಯಾಂಗ ಬಂಧನ

    ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ವೈಎಸ್‌ವಿ ದತ್ತಾ, ಇದು ಮಾತನಾಡುವ ಸಮಯವಲ್ಲ, ಕೆಲಸ ಮಾಡುವ ಸಮಯ. ಕಳೆದ ಹಲವು ದಶಕಗಳಿಂದ ನಾನು ಒಂದೇ ಪಕ್ಷದಲ್ಲಿದ್ದೆ. ಆದ್ರೆ ಈಗ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಇದು ನಮ್ಮ ರಾಷ್ಟ್ರದ ತುರ್ತು ಅಗತ್ಯವಾಗಿದೆ ಎಂದರು. ಇದನ್ನೂ ಓದಿ: ಎಲ್ಲರ ಜಾತಕ ನನ್ನ ಬಳಿ ಇದೆ ಹುಷಾರ್ – ಪೊಲೀಸರಿಗೇ ಅವಾಜ್ ಬಿಟ್ಟ ಸ್ಯಾಂಟ್ರೋ ರವಿ..!

    ಸಂವಿಧಾನ ಹಾಗೂ ಸೌಹಾರ್ದತೆಯನ್ನ ಬುಡಮೇಲು ಮಾಡುವ ಪ್ರಯತ್ನಗಳು ನಡೆದಿವೆ. ಸರ್ವಾಧಿಕಾರಿ ಶಕ್ತಿಗಳಿಗೆ ಸೋಲಾಗಲಿ ಅನ್ನೋ ಕಾರಣಕ್ಕೆ ಯಾವುದೇ ಶರತ್ತುಗಳಿಲ್ಲದೆ ಪಕ್ಷ ಸೇರುತ್ತಿದ್ದೇನೆ. ನಾನು ಮೊದಲಿನಿಂದಲೂ ಎಡಪಂಥೀಯ. ಹೀಗಾಗಿ ನನಗೆ ಅತ್ಯಂತ ಹತ್ತಿರ ಎನಿಸಿದ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ. ಕ್ಷೇತ್ರದಲ್ಲೂ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿದ್ದೇನೆ. ನಾನು ಕಾರ್ಯಕರ್ತನಾಗಿ ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ನನ್ನನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

    ಮಾಜಿ ಸಚಿವ, ಹಾಲಿ ಶಾಸಕ ಹೆಚ್. ನಾಗೇಶ್ ಮಾತನಾಡಿ, ನನಗೆ ಕಾಂಗ್ರೆಸ್ ಸಿದ್ಧಾಂತಗಳು ಇಷ್ಟ ಆಗಿ ಸೇರುತ್ತಿದ್ದೇನೆ. ನನ್ನ ತಂದೆ-ತಾಯಿ ಕೂಡ `ಕೈ’ಗೆ ಮತ ಕೊಡುತ್ತಿದ್ದರು. ರಾಜ್ಯಾದ್ಯಂತ ಪ್ರವಾಸ ಮಾಡಿ ನಮ್ಮ ಜನಾಂಗಕ್ಕೆ ತಿಳಿಹೇಳುತ್ತೇನೆ. ಕಾಂಗ್ರೆಸ್ ದಾರಿಯೇ ನನ್ನ ದಾರಿ. ಇನ್ಮುಂದೆ ನಾನು ಎಲ್ಲೂ ಹೋಗಲ್ಲ. ಸ್ವಂತ ಬಲದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶನಿವಾರ ಮುಳಬಾಗಿಲು ಶಾಸಕ ಎಚ್.ನಾಗೇಶ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

    ಶನಿವಾರ ಮುಳಬಾಗಿಲು ಶಾಸಕ ಎಚ್.ನಾಗೇಶ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

    ಕೋಲಾರ: ಬೆಂಗಳೂರಿನ ಕೆಪಿಸಿಸಿ ಕಚೇರಿ (Bengaluru KPCC Office) ಯಲ್ಲಿ ನಾಳೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ (Congress Party) ಸೇರುವುದಾಗಿ ಮುಳಬಾಗಿಲು ಪಕ್ಷೇತರ ಶಾಸಕ ಎಚ್. ನಾಗೇಶ್ (MLA H Nagesh) ಹೇಳಿದ್ದಾರೆ. ಮುಳಬಾಗಲು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನಗೆ ರಾಜಕೀಯ ಜೀವನ ಕೊಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಬಾವುಟ ಹಿಡಿದುಕೊಂಡೆ ನಾನು ರಾಜಕೀಯಕ್ಕೆ ಬಂದಿದ್ದು, ಮೊದಲಿನಿಂದಲೂ ನಾನು ಕಾಂಗ್ರೆಸ್ ನಲ್ಲಿದ್ದವನು. ಕಳೆದ ಬಾರಿ ನನಗೆ ಬಿ-ಫಾರಂ ಸಿಕ್ಕಿರಲಿಲ್ಲ ಅದಕ್ಕಾಗಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ, ಸದ್ಯ ನಾನು ಕಾಂಗ್ರೆಸ್ ನಲ್ಲಿರೋಣ ಎಂದುಕೊಂಡಿದ್ದೇನೆ ಎಂದಿದ್ದಾರೆ.

    ನಮ್ಮ ತಾತನವರ ಕಾಲದಿಂದಲೂ ನಾನು ಕಾಂಗ್ರೆಸ್, ನನ್ನ ತಾಲೂಕಿನಲ್ಲಿ ಕೆಲಸ ಕಾರ್ಯಗಳು ಆಗಲಿ ಅನ್ನೋ ಕಾರಣಕ್ಕೆ ಬಿಜೆಪಿ (BJP) ಗೆ ಬೆಂಬಲ ಸೂಚಿಸಿದ್ದೆ. ಪಕ್ಷೇತರನಾಗಿ ಗೆದ್ದು ನನಗೆ ಅನುದಾನಗಳು ಬೇಕು ಅದಕ್ಕಾಗಿ ನಾನು ಶಂಕರ್ ಬಿಜೆಪಿಗೆ ಬೆಂಬಲ ಸೂಚಿಸಿದ್ದೆವು ಎಂದು ಸ್ಪಷ್ಟ ಪಡಿಸಿದ್ರು. ಅಲ್ಲದೆ ಶನಿವಾರ ಬೆಂಗಳೂರಿನ ಕೆಪಿಸಿಸಿ ಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ, ಮಹದೇವ ಪುರ ನಾನು ಹುಟ್ಟು ಬೆಳೆದ ಊರು, ಮಹದೇವಪುರದ ಜನ ನನ್ನನ್ನು ಕರೆಯುತ್ತಾ ಇದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರನ್ನ ಭೇಟಿ ನೀಡಿ ಮಾತನಾಡಿದ್ದೇನೆ. ನೋಡೋಣಪ್ಪ ಬಾ ಎಂದು ಹೇಳಿದ್ದಾರೆ. ಮೊದಲು ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಬಳಿಕ ಪಕ್ಷ ನಿರ್ಧಾರ ಮಾಡಲಿದೆ ಎಂದರು. ಇದನ್ನೂ ಓದಿ: ಮೋದಿ ಬ್ರಹ್ಮಾಸ್ತ್ರದ ನಡುವೆ ಬಿಜೆಪಿ ಮಠದ ರಾಜಕೀಯ ಶುರು

    ಸಿದ್ದರಾಮಯ್ಯ (Siddaramaiah) ಕೋಲಾರಕ್ಕೆ ಬರೋದು ಒಳ್ಳೆಯದು, ಅವರು ನೂರಕ್ಕೆ ನೂರು ಗೆಲ್ಲುತ್ತಾರೆ. ಮಾಜಿ ಮುಖ್ಯಮಂತ್ರಿ ಆಗಿದ್ದವರು ಅವರು ಬಂದ್ರೆ ಬಹಳ ಒಳಿತಾಗುತ್ತೆ. ಬಿಜೆಪಿ ಪಕ್ಷ ಬಿಡೋದು ಅನ್ನೋದಕ್ಕಿಂತ ನನಗೆ ಕೆಲಸ ಆಗಬೇಕಿತ್ತು, ಜನರ ಅಭಿವೃದ್ಧಿ ಮುಖ್ಯ, ಚುನಾವಣೆ (Election) ಸಂದರ್ಭದಲ್ಲಿ ನನಗೂ ಒಂದು ನೆಲೆ ಬೇಕಲ್ಲ. ಪಕ್ಷ ಸೇರ್ಪಡೆಯಾಗಿ ನಾನು ಕಾಂಗ್ರೆಸ್ ಅಭ್ಯರ್ಥಿಯಾದ ಮೇಲೆ ಕೆಲವು ವಿಚಾರಗಳನ್ನ ಮಾತನಾಡುವೆ ಎಂದು ಹೇಳಿದ್ದಾರೆ.

    ಡಾ.ಬಿ.ಆರ್. ಅಂಬೇಡ್ಕರ್ (Dr. B R Ambedkar) ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಬೆಂಗಳೂರಿನ ಮಹದೇವಪುರದಿಂದ ಸ್ಪರ್ಧಿಸುವಂತೆ ಅಲ್ಲಿನ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುತ್ತದೆಯೋ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆಯಾದ್ರೆ ನಮ್ಮ ಸ್ನೇಹಿತರಿಗೂ ಸ್ಥಾನ ಸಿಗಲಿದೆ: ಬಿ.ಸಿ.ಪಾಟೀಲ್

    ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆಯಾದ್ರೆ ನಮ್ಮ ಸ್ನೇಹಿತರಿಗೂ ಸ್ಥಾನ ಸಿಗಲಿದೆ: ಬಿ.ಸಿ.ಪಾಟೀಲ್

    – ಸಂಕ್ರಾಂತಿಗೆ ವಿಸ್ತರಣೆ ಆದ್ರೆ ಇಂಧನ ಖಾತೆ ಕೊಟ್ರೆ ಒಳಿತು- ಸಚಿವ ನಾಗೇಶ್

    ಕೋಲಾರ: ಸಿಎಂ ತೆಗದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನನ್ನ ಖಾತೆ ಬದಲಾವಣೆ ಮಾಡಿದರೂ ಅಡ್ಡಿ ಇಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

    ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಬೇಕು. ನಮ್ಮ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಇನ್ನೂ ಮುನಿರತ್ನ, ಆರ್.ಶಂಕರ್ ಹಾಗೂ ಎಂಟಿಬಿಗೆ ಸಚಿವ ಸ್ಥಾನ ಸಿಗಬೇಕಿದೆ, ಸಿಗುತ್ತೆ. ವಿಶ್ವನಾಥ್ ಅವರಿಗೂ ಸಿಗುತ್ತೆ ಎಂದರು.

    ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೇಳೋದು ಶಾಸಕರ ಹಕ್ಕು. ಸಿಎಂ ಎಲ್ಲ ಶಾಸಕರ ಸಮಸ್ಯೆ ಆಲಿಸಿ ಆರ್ಥಿಕ ಸಂಕಷ್ಟದ ನಡುವೆ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಬಿಜೆಪಿ ಮೇಲೆ ಪ್ರೀತಿ ಹೆಚ್ಚಾಗಿದೆ. ಹೀಗಾಗಿ ನಮ್ಮ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಜೆಡಿಎಸ್ ಸಾಫ್ಟ್ ಕಾರ್ನರ್‍ನ್ನು ನಾವು ಸ್ವಾಗತ ಮಾಡುತ್ತೇವೆ. ಬಿಜೆಪಿಗೆ ಸಾಕಷ್ಟು ಸಂಖ್ಯಾಬಲವಿದೆ. ಹೊಂದಾಣಿಕೆ ಅವಶ್ಯಕತೆ ಇಲ್ಲ ಎಂದರು.

    ಬಜೆಟ್ ಮೇಲೆ ನಮ್ಮ ನಿರೀಕ್ಷೆ ಹೆಚ್ಚಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ 5 ಲಕ್ಷ ಕೊಡಬೇಕು. ಹಾವು ಕಚ್ಚಿ ಸಾವಿಗಿಡಾದರೆ ನೀಡುವ ಪರಿಹಾರವನ್ನು 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಬೇಕು. ಕೃಷಿ ವಿಶ್ವವಿದ್ಯಾಲಯದಲ್ಲಿ ರೈತರ ಮಕ್ಕಳಿಗಿರುವ ಮೀಸಲಾತಿಯನ್ನು ಶೇ.40ರಿಂದ 50ಕ್ಕೆ ಹೆಚ್ಚಿಸಲು ಮನವಿ ಮಾಡಿದ್ದೇನೆ ಎಂದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಅಬಕಾರಿ ಸಚಿವ ನಾಗೇಶ್, ಸಚಿವ ಸಂಪುಟ ವಿಸ್ತರಣೆ ವೇಳೆ ಸಿಎಂ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ, ನಾಳೆ ನಾಳೆ ಎಂದು ಮುಂದೂಡಲಾಗುತ್ತಿದೆ. ಸಂಕ್ರಾಂತಿ ಮುಗಿದ ಬಳಿಕ ಸಂಪುಟ ವಿಸ್ತರಣೆ ಆಗುವುದರಲ್ಲಿ ಅನುಮಾನವಿಲ್ಲ. ಖಾತೆ ಬದಲಾವಣೆಯಾದರೆ ಇಂಧನ ಖಾತೆ ಕೊಡಲಿ. ಎಲ್ಲರಿಗಿಂತ ಚನ್ನಾಗಿ ನಾನು ನಿಭಾಯಿಸಬಲ್ಲೆ. ಇಂಧನ ಇಲಾಖೆಯಲ್ಲಿ ನನಗೆ 34 ವರ್ಷ ಅನುಭವವಿದೆ. ನನ್ನ ಹಿನ್ನೆಲೆ, ಟ್ರ್ಯಾಕ್ ರೆಕಾರ್ಡ್ ಅಧ್ಯಯನ ಮಾಡಿ ಸಿಎಂ ಇಂಧನ ಖಾತೆ ಕೊಡಲಿ. ಈ ಹಿಂದೆ ಕಾರಣಾಂತರಗಳಿಂದ ನನಗೆ ಇಂಧನ ಖಾತೆ ತಪ್ಪಿತು. ಸಿಎಂಗೂ ನನ್ನ ಬಗ್ಗೆ ಗೊತ್ತಿದೆ ಕೊಟ್ಟರೆ ನಿಭಾಯಿಸುವೆ ಎಂದರು.

  • ನಿಷೇಧಾಜ್ಞೆಯಿಂದಾಗಿ ಹೊಸ ವರ್ಷಕ್ಕೆ 40 ಕೋಟಿ ನಷ್ಟ: ಅಬಕಾರಿ ಸಚಿವ ನಾಗೇಶ್

    ನಿಷೇಧಾಜ್ಞೆಯಿಂದಾಗಿ ಹೊಸ ವರ್ಷಕ್ಕೆ 40 ಕೋಟಿ ನಷ್ಟ: ಅಬಕಾರಿ ಸಚಿವ ನಾಗೇಶ್

    ಕೋಲಾರ: ಕೊರೊನಾ ಹಾಗೂ ಸರ್ಕಾರದ ನಿಷೇಧಾಜ್ಞೆಯಿಂದ ಅಬಕಾರಿ ಇಲಾಖೆಗೆ ಹೊಸ ವರ್ಷದಂದು ಸುಮಾರು 40 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದರು.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಷೇಧಾಜ್ಞೆಯಿಂದಾಗಿ ಹೊಸ ವರ್ಷದಂದು ಅಬಕಾರಿ ಇಲಾಖೆಗೆ ಕೇವಲ 161 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ಬಾರಿ ಹೊಸ ವರ್ಷಕ್ಕೆ 200 ಕೋಟಿ ರೂಪಾಯಿ ಆದಾಯ ಬಂದಿತ್ತು. ಆದರೆ ಈ ಬಾರಿ ಹಲವು ಗೊಂದಲಗಳಿಂದ ಸುಮಾರು 40 ಕೋಟಿ ರೂಪಾಯಿಯಷ್ಟು ನಷ್ಟ ಆಗಿದೆ ಎಂದು ಅವರು ಹೇಳಿದರು.

    ಈ ನಷ್ಟಕ್ಕೆ ಸರ್ಕಾರದ ನಿಷೇಧಾಜ್ಞೆ ಜಾರಿ ಮಾಡದ್ದೇ ಕಾರಣ. ಜಿಲ್ಲೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದಾರೆ, ಹಾಗಾಗಿ ಜಿಲ್ಲೆಯ ಹಲವು ವಿಚಾರಗಳನ್ನ ಚರ್ಚೆ ಮಾಡುವ ನಿಟ್ಟಿನಲ್ಲಿ ಎಲ್ಲ ಶಾಸಕರನ್ನು ಕರೆದು ವಿಚಾರ ಮಾಡುವೆ. ಅಲ್ಲದೆ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡುವುದು ಹಾಗೂ ರಿಂಗ್ ರಸ್ತೆ ಮಾಡುವಂತೆ ಮನವಿ ಮಾಡುವುದಾಗಿ ಅವರು ಹೇಳಿದರು.

  • ಅಬಕಾರಿ ಸಚಿವ ನಾಗೇಶ್ ವಿರುದ್ಧ ಮೋದಿಗೆ ದೂರು

    ಅಬಕಾರಿ ಸಚಿವ ನಾಗೇಶ್ ವಿರುದ್ಧ ಮೋದಿಗೆ ದೂರು

    ಕೋಲಾರ: ರಾಜ್ಯದ ಬಿಜೆಪಿ ಸರ್ಕಾರದಲ್ಲಿ ವರ್ಗಾವಣೆ ದಂಧೆ ಜೋರಾಗಿದೆಯಾ ಅನ್ನೋ ಅನುಮಾನ ಇದೀಗ ಮೂಡಿದೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಹೆಚ್ ನಾಗೇಶ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಸಚಿವರ ವಿರುದ್ದದ ದೂರು ನೇರವಾಗಿ ಪ್ರಧಾನ ಮಂತ್ರಿ ಕಚೇರಿಗೆ ತಲುಪಿದೆ.

    ಹೌದು. ಅಧಿಕಾರಿಯೊಬ್ಬರ ವರ್ಗಾವಣೆಗೆ ಒಂದು ಕೋಟಿ ರುಪಾಯಿ ಲಂಚಕ್ಕೆ ಒತ್ತಾಯಿಸಿರುವ ಸಚಿವ ಹೆಚ್.ನಾಗೇಶ ವಿರುದ್ಧ ದೇಶದ ಪ್ರಧಾನಿ ಕಾರ್ಯಾಲಯಕ್ಕೆ ನೇರವಾಗಿ ದೂರು ದಾಖಲಾಗಿದೆ. ಅಷ್ಟೆ ಅಲ್ಲ ರಾಜ್ಯದ ಇ-ಜನಸ್ಪಂದನ ವಿಭಾಗದಲ್ಲಿಯೂ ಅಧಿಕೃತವಾಗಿ ದೂರು ದಾಖಲಾಗಿದೆ.

    ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿಯೊಬ್ಬರ ಪುತ್ರಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರಿನ ಜಂಟಿ ಆಯುಕ್ತರ ಹುದ್ದೆಗೆ ವರ್ಗಾವಣೆ ಬಯಸಿದ್ದಾರೆ. ಜುಲೈ ತಿಂಗಳ ಅವಧಿಯಲ್ಲಿ ಬೆಂಗಳೂರಲ್ಲಿ ಖಾಲಿಯಿದ್ದ ಜಂಟಿ ಆಯುಕ್ತರ ಹುದ್ದೆಗಾಗಿ ಸಚಿವರ ಬಳಿ ತಮ್ಮ ಮನವಿ ಮಾಡಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದ ಈ ಅಧಿಕಾರಿ ಆರೋಗ್ಯದ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಈ ಬಗ್ಗೆ ಮನವಿ ಮಾಡಿದಾಗ ಅಬಕಾರಿ ಸಚಿವ ಹೆಚ್ ನಾಗೇಶ್ ಒಂದು ಕೋಟಿ ರೂಪಾಯಿ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದರು. ಲಂಚ ಕೊಡುವುದಕ್ಕೆ ಅಧಿಕಾರಿಯು ನಿರಾಕರಿಸಿದ್ದಕ್ಕಾಗಿ ರಜೆ ಮೇಲೆ ತೆರಳಲು ಸಚಿವ ಹೆಚ್.ನಾಗೇಶ್  ಅವರು ಬಲವಂತ ಮಾಡಿದರು ಎಂದು ಅಧಿಕಾರಿಯ ಪುತ್ರಿ ಬೆಂಗಳೂರು ವಾಸಿ ಸ್ನೇಹಾ ಎಂಬವರು ದೂರಲ್ಲಿ ವಿವರಿಸಿದ್ದಾರೆ.

    ಸಚಿವ ಹೆಚ್.ನಾಗೇಶ್ ಅವರ ಲಂಚಗುಳಿತನ ಬಗ್ಗೆ ಡಿಸಿಎಂ ಅಶ್ವತ್ಥನಾರಾಯಣ್ ಅವರಿಗೆ ಮಾಹಿತಿಯನ್ನು ಕೊಟ್ಟರೂ ಪ್ರಯೋಜನವಾಗಲಿಲ್ಲ. ಕಳೆದ ಒಂದು ತಿಂಗಳಿನಿಂದಲೂ ಅಬಕಾರಿ ಇಲಾಖೆಯಲ್ಲಿ ಲಂಚದ ಹಣವನ್ನು ಪಡೆದುಕೊಳ್ಳುವ ಮೂಲಕವೇ ಆರು ನೂರಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಯು ಆಗಿದೆ. ಕೋಲಾರದ ಮೂಲದ ಎಲ್.ಎ ಮಂಜುನಾಥ್ ಮತ್ತು ಶಿವಮೊಗ್ಗ ಮೂಲದ ಕಚೇರಿಯ ಸಿಬ್ಬಂದಿ ಹರ್ಷ ಎನ್ನುವ ದಲ್ಲಾಳಿಗಳನ್ನು ಇರಿಸಿಕೊಂಡು ಸಚಿವರು ಅಕ್ರಮ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ತಮ್ಮ ಆದರ್ಶಗಳನ್ನು ಪಾಲಿಸುತ್ತಿರುವ ನಾನು ಇದೀಗ ತಮ್ಮ ಮೇಲೆ ಕೊನೆಯ ಭರವಸೆಯನ್ನು ಇರಿಸಿಕೊಂಡು ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದು ಅಧಿಕಾರಿಯ ಪುತ್ರಿ ಸ್ನೇಹ ಎಂಬುವರು ಪತ್ರ ಬರೆದಿದ್ದಾರೆ. ಪ್ರಧಾನಿ ಕಚೇರಿಗೆ ದೂರನ್ನು ಬರೆದಿರುವ ಸ್ನೇಹ ಅವರು ರಾಜ್ಯದ ಸಚಿವರುಗಳಿಗೆ, ವಿರೋಧ ಪಕ್ಷದ ಮುಖಂಡರಿಗೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಹ ಪತ್ರವನ್ನು ಟ್ಯಾಗ್ ಮಾಡಿದ್ದಾರೆ.

    ಒಟ್ಟಿನಲ್ಲಿ ವರ್ಗಾವಣೆ ದಂಧೆ ಎನ್ನುವುದು ಸರ್ಕಾರಗಳಿಗೆ ಕಾಡುವ ಭೂತ, ಈಗ ರಾಜ್ಯದಲ್ಲಿ ಅಧಿಕಾರಾರೂಢ ಬಿಜೆಪಿ ಸರ್ಕಾರಕ್ಕೂ ಆರೋಪದ ಸರದಿ ಬಂದಿದ್ದು, ಅದರಲ್ಲೂ ದೂರು ನೇರವಾಗಿ ಪ್ರದಾನಿ ಮೋದಿಯವರಿಗೆ ತಲುಪಿದ್ದು, ಅಬಕಾರಿ ಸಚಿವ ಮತ್ತು ಸರ್ಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿಗಳೆ ಇದಕ್ಕೆ ಉತ್ತರ ನೀಡಬೇಕಿದೆ.

  • ಯಡಿಯೂರಪ್ಪರನ್ನು ಕೈ ಬಿಟ್ಟರೆ ಕಾಂಗ್ರೆಸ್, ದಳದವರು ಅಧಿಕಾರಕ್ಕೆ ಬರ್ತಾರೆ: ನಾಗೇಶ್

    ಯಡಿಯೂರಪ್ಪರನ್ನು ಕೈ ಬಿಟ್ಟರೆ ಕಾಂಗ್ರೆಸ್, ದಳದವರು ಅಧಿಕಾರಕ್ಕೆ ಬರ್ತಾರೆ: ನಾಗೇಶ್

    – ಯತ್ನಾಳ್ ಆಗಾಗ ಈ ರೀತಿ ಹೇಳುವುದು ಸಹಜ

    ಕೋಲಾರ: ಯಡಿಯೂರಪ್ಪ ಇಲ್ಲದೆ ಬಿಜೆಪಿಗೆ ಅಸ್ಥಿತ್ವವಿಲ್ಲ, ಅವರು ಪೂರ್ಣಾವಧಿ ಸಿಎಂ ಅಗಿ ಕಾರ್ಯನಿರ್ವಹಿಸುತ್ತಾರೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್ ನಾಗೇಶ್ ಹೇಳಿದ್ದಾರೆ.

    ಇಂದು ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಅವರು ಈ ರೀತಿ ಹೇಳಿಕೆ ನೀಡುವುದು ತಪ್ಪು ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣ ಹೋಗವಂತಹ ವೇಳೆ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಜೊತೆಗೆ ಯತ್ನಾಳ್ ಅವರು ಆಗಾಗ ಈ ರೀತಿ ಹೇಳಿಕೆ ನೀಡುವುದು ಸಹಜ. ಅದೊಂದು ಅವರಿಗೆ ಅಭ್ಯಾಸವಾಗಿದೆ ಎಂದು ತಿಳಿಸಿದರು.

    ಅಲ್ಲದೆ ಯಡಿಯೂರಪ್ಪ ಅವರು ಒಂಟಿ ಸಲಗದಂತೆ ಓಡಾಡಿ, ಬಿಜೆಪಿಯನ್ನು ಕಟ್ಟಿ ಬೆಳೆಸಿರುವಂತಹವರು. ಹೀಗಾಗಿ ಯಡಿಯೂರಪ್ಪ ಇಲ್ಲದೆ ಬಿಜೆಪಿಗೆ ಅಸ್ಥಿತ್ವವಿಲ್ಲ. ಜೊತೆಗೆ ಉಳಿಗಾಲವಿಲ್ಲ. ಯಡಿಯೂರಪ್ಪ ಅವರನ್ನು ಕೈ ಬಿಟ್ಟರೆ ಕಾಂಗ್ರೆಸ್ ಹಾಗೂ ದಳದವರು ಅಧಿಕಾರಕ್ಕೆ ಬರುತ್ತಾರೆ. ಹೀಗಾಗಿ ಯತ್ನಾಳ್ ಈ ರೀತಿ ಹೇಳಿಕೆ ನೀಡುವುದು ತಪ್ಪು. ಬಿಜೆಪಿ ಶಿಸ್ತಿನ ಪಕ್ಷ, ಹೀಗಾಗಿ ಯತ್ನಾಳ್ ವಿರುದ್ಧ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿತ್ತೇವೆ ಎಂದರು.

  • ವಿಶ್ವನಾಥ್ ತಾಳ್ಮೆಯಿಂದ ಇದ್ದರೆ ಮುಂದೆ ಒಳ್ಳೆಯ ಭವಿಷ್ಯವಿದೆ: ನಾಗೇಶ್

    ವಿಶ್ವನಾಥ್ ತಾಳ್ಮೆಯಿಂದ ಇದ್ದರೆ ಮುಂದೆ ಒಳ್ಳೆಯ ಭವಿಷ್ಯವಿದೆ: ನಾಗೇಶ್

    ಕೋಲಾರ: ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ವಿಶ್ವನಾಥ್ ಅವರನ್ನು ಬಿಜೆಪಿ ಹೈಕಮಾಂಡ್ ಕೈಬಿಟ್ಟಿರುವುದು ಬೇಸರ ತಂದಿದೆ. ಆದರೆ ಅವರು ತಾಳ್ಮೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ.

    ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂದ ಅಧಿಕಾರಿಗಲ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಮಯ ರಾಜಕೀಯದಲ್ಲಿ ಏರುಪೇರುಗಳು ಆಗುತ್ತವೆ. ಅದು ಒಬ್ಬರ ನಿರ್ಧಾರ ಅಲ್ಲ. ಮುಖ್ಯಮಂತ್ರಿಗಳಿಗೂ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಲು ಒಲವಿತ್ತು, ಆದ್ರೆ ಹೈ ಕಮಾಂಡ್ ಕೈ ಬಿಟ್ಟಿರುವುದು ಬೇಸರ ತಂದಿದೆ ಎಂದರು.

    ಕಾರಣಾಂತರಗಳಿಂದ ವಿಶ್ವನಾಥ್ ಅವರ ಹೆಸರನ್ನ ಕೈ ಬಿಡಲಾಗಿದೆ. ಅವರು ಒಂದು ಪಕ್ಷದ ಅಧ್ಯಕ್ಷರಾಗಿದ್ದವರು, ಅವರ ಆಗಮನ ಬಿಜೆಪಿಗೆ ಆನೆ ಬಲ ಬಂದಂತಾಗಿತ್ತು. ಆದರೆ ಸ್ವಲ್ಪ ತಾಳ್ಮೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯ ಇದೆ ಎಂದರು.

    ಪಕ್ಷಕ್ಕೆ ದುಡಿದವರನ್ನ ಬಿಟ್ಟು, ಮೂಲ ಬಿಜೆಪಿಗರಿಗೆ ಇಬ್ಬರಿಗೆ ಟಿಕೆಟ್ ನೀಡುವ ಮೂಲಕ ಕಾಂಪ್ರಮೈಸಿಂಗ್ ಫಾರ್ಮುಲಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಬಳಿ ಮಾತನಾಡಿ ಮನವೊಲಿಸಲು ಪ್ರಯತ್ನ ಮಾಡುವೆ ಎಂದು ನಾಗೇಶ್ ತಿಳಿಸಿದರು.

    ಬುಧವಾರ ತಡರಾತ್ರಿ ಬಿಜೆಪಿ ತನ್ನ ಮೇಲ್ಮನೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಬಿಜೆಪಿ ಬಿಗ್ ಶಾಕ್ ನೀಡಿದೆ. ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ಈ ನಾಲ್ವರಿಗೆ ಟಿಕೆಟ್ ಸಿಕ್ಕಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್ ಗೆ ನೀಡಿದ ಮಾತನ್ನು ಸಿಎಂ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ವಿಫಲವಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

  • ಮದ್ಯದಗಂಡಿ ತೆರೆಯಲು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ: ಎಚ್.ನಾಗೇಶ್

    ಮದ್ಯದಗಂಡಿ ತೆರೆಯಲು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ: ಎಚ್.ನಾಗೇಶ್

    ಕೋಲಾರ: ಮೂರನೇ ತಾರೀಖಿನಿಂದ ಮದ್ಯದಂಗಡಿ ತೆರೆಯುವ ಚಿಂತನೆ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಒಪ್ಪಿಲ್ಲ. ಹೀಗಾಗಿ ಸದ್ಯಕ್ಕೆ ಮದ್ಯದಂಗಡಿ ತೆರೆಯೋದು ಸಾಧ್ಯವಿಲ್ಲ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಂದರ್ಭದಲ್ಲಿ ಕೆಲ ರಾಜ್ಯಗಳ ಸಿಎಂಗಳು ಈ ಕುರಿತು ಕೇಳಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ನಾವು ಮೂರನೇ ತಾರೀಖಿನಿಂದ ಮದ್ಯದಂಗಡಿ ತೆರೆಯುವ ಚಿಂತನೆ ಇದ್ದರೂ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮೋದಿ ಅವರ ನಿರ್ಧಾರದ ವರೆಗೂ ಮದ್ಯದಂಗಡಿ ತೆರಯಲು ಅವಕಾಶ ಇಲ್ಲ ಎಂದರು.

    ಮದ್ಯ ವ್ಯಸದನಿಗಳು ಮಾನಸಿಕವಾಗಿ ಕುಗ್ಗದೆ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಪಡೆಯಲು ಸೂಚನೆ ನೀಡಿದ್ದೇನೆ ಅದರಂತೆ ಒಂದಷ್ಟು ಜನ ನನ್ನ ಮನವಿಯನ್ನು ಪಾಲಿಸುತ್ತಿದ್ದಾರೆ, ಅದು ಖುಷಿ ತಂದಿದೆ. ನಮ್ಮದು ಗಡಿ ಜಿಲ್ಲೆಯಾದ್ದರಿಂದ ಗ್ರೀನ್ ಝೋನ್‍ನಲ್ಲಿದೆ ಎಂದ ಮಾತ್ರಕ್ಕೆ ಸಡಿಲಿಕೆ ನೀಡಲು ಸಾಧ್ಯವಿಲ್ಲ. ಇದರಿಂದ ಅಕ್ಕಪಕ್ಕದ ಜಿಲ್ಲೆಗಳವರು ಹಾಗೂ ಹೊರ ರಾಜ್ಯದವರು ನುಸುಳುತ್ತಾರೆ. ಹೀಗಾಗಿ ಕೆಲ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದರು.

    ಗ್ರೀನ್ ಝೋನ್‍ನಲ್ಲಿರುವುದರಿಂದ ಕೋಲಾರದಲ್ಲಿ ಸ್ವಲ್ಪ ಮಟ್ಟಿಗೆ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ಕಾರ್ಖಾನೆಗಳು ನಿಬಂಧನೆಗಳಿಗೆ ಒಳಪಟ್ಟು ತೆರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಕೈಗಾರಿಕೆಗಳಲ್ಲಿ ಅರ್ಧದಷ್ಟು ಸಿಬ್ಬಂದಿ ಇಟ್ಟುಕೊಂಡು ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕರಿಗೆ ಸ್ಥಳೀಯವಾಗಿ ಮೂಲಭೂತ ಸೌಲಭ್ಯಗಳನ್ನು ಉದ್ಯಮದಾರರೇ ಒದಗಿಸಬೇಕಾಗಿದೆ. ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು, ಅದರಲ್ಲಿ ಕೆಲವು ತಿದ್ದುಪಡಿ ತರಲು ಚಿಂತಿಸಲಾಗಿದೆ. ದೊಂಬಿಯಾಗದಂತೆ ಪ್ರತಿ ದಿನ ಆಲ್ಟರ್ ನೆಟ್ ಶಾಪ್‍ಗಳನ್ನು ತೆರೆಯುವಂತೆ ನಿಯಮ ತರಲಾಗುತ್ತಿದೆ. ಯಾವುದೇ ಕಾರಣಕ್ಕೂ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಹೋಟೆಲ್‍ಗಳಲ್ಲಿ ಕೇವಲ ಪಾರ್ಸೆಲ್‍ಗೆ ಮಾತ್ರ ಅವಕಾಶವಿದೆ, ಉಳಿದಂತೆ ಬೇಕರಿ, ಮಟನ್, ಫಿಶ್ ಅಂಗಡಿಗಳಿಗೆ ಅವಕಾಶವಿದೆ ಎಂದು ತಿಳಿಸಿದರು.

  • ವೈದ್ಯರ ಸಲಹೆ ಪಡೆದು ಮದ್ಯ ಸೇವನೆ ಬಿಟ್ಬಿಡಿ: ಅಬಕಾರಿ ಸಚಿವ ನಾಗೇಶ್ ಸಲಹೆ

    ವೈದ್ಯರ ಸಲಹೆ ಪಡೆದು ಮದ್ಯ ಸೇವನೆ ಬಿಟ್ಬಿಡಿ: ಅಬಕಾರಿ ಸಚಿವ ನಾಗೇಶ್ ಸಲಹೆ

    ಕೋಲಾರ: ಮದ್ಯವ್ಯಸನಿಗಳೇ ಬೇರೆ ಮದ್ಯಪ್ರಿಯರೇ ಬೇರೆ ಎನ್ನುವ ಮೂಲಕ ಮದ್ಯಪಾನಿಗಳ ಬಗ್ಗೆ ಸಚಿವ ಎಚ್.ನಾಗೇಶ್ ವಿಭಿನ್ನ ರೀತಿಯಲ್ಲಿ ವಿಶ್ಲೇಷಣೆ ನೀಡಿದ್ದಾರೆ.

    ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನರ ಸುರಕ್ಷತೆಗಾಗಿಯೇ ಮದ್ಯ ಬಂದ್ ತೀರ್ಮಾನ ಮಾಡಿದ್ದೇವೆ. ವೈದ್ಯರಿಂದ ಸಲಹೆ ಪಡೆದುಕೊಂಡು ಚಟವನ್ನು ಬಿಟ್ಡು ಬಿಡಿ ಎಂದು ಕಿವಿ ಮಾತು ಹೇಳಿದ್ರು. ತಾಳ್ಮೆ, ಚಟ ತ್ಯಜಿಸಿ ಕೌನ್ಸಿಲಿಂಗ್ ಮಾಡಿಸಿಕೊಳ್ಳಿ. ಮದ್ಯ ಬಿಟ್ಟು ಕುಟುಂಬದ ಜೊತೆ ಚೆನ್ನಾಗಿರಿ. ಇನ್ನೂ ಇದೆ ವೇಳೆ ಕಳ್ಳಬಟ್ಟಿ ಹತೋಟಿಗೆ ತರಲು ಕಠಿಣ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ. ಮೇ-3 ವರೆಗೂ ಪ್ರಧಾನಿಗಳ ಮಾತಿಗೆ ಗೌರವಿಸಿ ಸಹಕರಿಸಿ ಎಂದು ಮದ್ಯಪ್ರಿಯರಿಗೆ ಸಲಹೆ ನೀಡಿದರು.

    ಲಾಕ್‍ಡೌನ್ ಆದಾಗಿನಿಂದ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಎಣ್ಣೆ ಸಿಗದೇ ಕುಡುಕರು ಮದ್ಯದಂಗಡಿಗಳಿಗೆ ಕನ್ನ ಹಾಕಿ ಹಣ ಮುಟ್ಟದೇ ತಮ್ಮ ಬ್ರ್ಯಾಂಡ್ ಕದ್ದು ತೆಗೆದುಕೊಂಡು ಹೋಗುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮದ್ಯ ಸಿಗದ್ದಕ್ಕೆ ಇಬ್ಬರು ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿರುವ ವರದಿ ಆಗಿದೆ. ಬುಧವಾರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಜಿ ಸಚಿವ, ಹೆಚ್.ವಿಶ್ವನಾಥ್, ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು. ಪ್ರತಿನಿತ್ಯ ನೀಡದಿದ್ದರೂ ವಾರದಲ್ಲಿ ಎರಡು ದಿನ ಎಂಎಸ್‍ಐಎಲ್ ಸೇರಿದಂತೆ ಬಾರ್ ಗಳಲ್ಲಿ ಪಾರ್ಸಲ್ ವ್ಯವಸ್ಥೆ ಕಲ್ಪಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದ್ದರು.

  • ಇನ್ನೂ ಸ್ವಲ್ಪ ಕಾಯಿರಿ, ಎಣ್ಣೆಗಿಂತ ಪ್ರಾಣ ಮುಖ್ಯ: ಸಚಿವ ನಾಗೇಶ್

    ಇನ್ನೂ ಸ್ವಲ್ಪ ಕಾಯಿರಿ, ಎಣ್ಣೆಗಿಂತ ಪ್ರಾಣ ಮುಖ್ಯ: ಸಚಿವ ನಾಗೇಶ್

    ಕೋಲಾರ: ರಾಜ್ಯದಲ್ಲಿ ಲಾಕ್ ಡೌನ್ ನಡುವೆ ಮದ್ಯ ಮಾರಾಟ ಮಾಡಬೇಕಾ, ಬೇಡವಾ ಎನ್ನವ ಗೊಂದಲ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಇನ್ನೊಂದೆಡೆ ಮದ್ಯದಂಗಡಿಗಳು ಓಪನ್ ಆಗುತ್ತವೆ ಎಂದು ಕಾತುರದಿಂದ ಕಾಯುತ್ತಿದ್ದ ಮದ್ಯಪ್ರಿಯರು ಚಿಂತೆಗೀಡಾಗಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ಅಬಕಾರಿ ಸಚಿವ ಎಚ್.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

    ಬೆಳಗ್ಗೆ, ಸಂಜೆ ವೇಳೆಗೆ ಮದ್ಯ ಮಾರಾಟ ಮಾಡುವ ಸಿದ್ಧತೆ ನಡೆದಿತ್ತು. ಆದರೆ ಮದ್ಯಾಹ್ನದ ಹೊತ್ತಿಗೆ ಅಬಕಾರಿ ಸಚಿವ ನಾಗೇಶ್ ಮಾತು ಬದಲಿಸಿದ್ದಾರೆ. ಬೆಳಗ್ಗೆ ಅಂಬೇಡ್ಕರ್ ಜಯಂತಿ ವೇಳೆ ಸಂಜೆ ವೇಳೆ ಮದ್ಯದಂಗಡಿಗಳನ್ನು ತೆರಯಲಾಗುವುದು ಎಂದಿದ್ದ ನಾಗೇಶ್, ಮಧ್ಯಾಹ್ನವಾಗುತ್ತಿದ್ದಂತೆ ಪ್ರಧಾನಿ ಮೋದಿ ಭಾಷಣದ ನಂತರ ತಮ್ಮ ವರಸೆ ಬದಲು ಮಾಡಿದ್ದಾರೆ.

    ಇದೀಗ ಏಪ್ರಿಲ್ 20ರ ವರೆಗೆ ವಿಸ್ತರಿಸುವ ಚಿಂತನೆ ನಡೆಸಿದ್ದಾರೆ. ಈ ಕುರಿತು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗೇಶ್, ಮದ್ಯದಂಗಡಿ ತೆರೆದರೆ ಜನಸಂದಣಿ ಹೆಚ್ಚಾಗುತ್ತದೆ. ಏಪ್ರಿಲ್ 20ರ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರಧಾನಿ ಮೋದಿ ಲಾಕ್‍ಡೌನ್‍ನ್ನು ಕಟ್ಟುನಿಟ್ಟಾಗಿ ಮುಂದುವರೆಸಿ ಎಂದಿದ್ದಾರೆ. ಹೀಗಾಗಿ ಸರ್ಕಾರವನ್ನು ಒತ್ತಾಯ ಮಾಡಲು ಅಗುವುದಿಲ್ಲ. ಇಷ್ಟು ದಿನ ಕಾದಿದ್ದೀರಿ, ಇನ್ನು ಸ್ವಲ್ಪ ದಿನ ಕಾಯಿರಿ ಎಂದು ಸಲೀಸಾಗಿ ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದಾರೆ. ಅಲ್ಲದೆ ಇನ್ನು ಸ್ವಲ್ಪ ದಿನ ಕಾಯಿರಿ ಎಣ್ಣೆಗಿಂತ ಜನರ ಪ್ರಾಣ ಮುಖ್ಯವಾಗಿದೆ ಎಂದಿದ್ದಾರೆ.