Tag: h k pateel

  • ಗದಗದಲ್ಲಿ ಡೆಂಘೀ ಭೀತಿಗೆ ಊರೇ ಖಾಲಿ!

    ಗದಗದಲ್ಲಿ ಡೆಂಘೀ ಭೀತಿಗೆ ಊರೇ ಖಾಲಿ!

    ಗದಗ: ಜಿಲ್ಲೆಯ ಮನೆಗಳಿಗೆ ಬೀಗ ಹಾಕಿದ್ದರಿಂದ ಊರು ಬಿಕೋ ಅಂತಿದೆ. ಅರ್ಧದಷ್ಟು ಮಂದಿ ಹಳ್ಳಿಯನ್ನೇ ತೊರೆದ್ರೆ ಉಳಿದರ್ಧ ಮಂದಿ ಆಸ್ಪತ್ರೆ ಬೆಡ್‍ಗಳಲ್ಲಿ ನರಳಾಡುತ್ತಿದ್ದಾರೆ. ಅಂದಹಾಗೆ ಇದು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಚ್‍ಕೆ ಪಾಟೀಲ್ ಉಸ್ತುವಾರಿಯಲ್ಲಿ ಬರುವ ಗದಗ ಜಿಲ್ಲೆಯ ರೋಣ ತಾಲೂಕಿನ ಬೈರಾಪೂರ ತಾಂಡದ ಕಥೆ.

    ಒಂದು ತಿಂಗಳಿಂದ ಬೈರಾಪೂರ ತಾಂಡದ ಮಂದಿ ವಿಚಿತ್ರ ರೋಗ-ರುಜಿನಗಳಿಂದ ಬಳಲುತ್ತಿದ್ದಾರೆ. ಇದ್ದಕ್ಕಿದ್ದಂತೆ ಜ್ವರ, ತಲೆನೋವು, ಕೀಲುನೋವು, ಹೊಟ್ಟೆ ನೋವು, ವಾಂತಿ ಕಾಣಿಸಿಕೊಳ್ತಿದ್ದು ಊರಿಗೆ ಊರೇ ಆಸ್ಪತ್ರೆ ಸೇರಿದೆ. ಅನೇಕರು ಡೆಂಘೀ ಜ್ವರದಿಂದ ಬಳಲುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ ವೈದ್ಯರು. ಗಜೇಂದ್ರಗಢ ಸರ್ಕಾರಿ ಆಸ್ಪತ್ರೆಯಲ್ಲಿ 70ಕ್ಕೂ ಅಧಿಕ ಮಂದಿ ದಾಖಲಾಗಿದ್ದಾರೆ. ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ದುರ್ಗತಿಗೆ ಸ್ವಚ್ಛ ಕುಡಿಯುವ ನೀರಿನ ಕೊರತೆ, ಸೊಳ್ಳೆ ಮತ್ತು ವಿಪರೀತ ಬಿಸಿಲೇ ಕಾರಣ ಅಂತಾ ಹಳ್ಳಿಯಲ್ಲಿ ಅಧ್ಯಯನ ನಡೆಸಿರುವ ವೈದ್ಯರ ತಂಡ ಹೇಳಿದೆ.

    ಸಿಎಂ ಸಿದ್ದರಾಮಯ್ಯ ಸರ್ಕಾರವೇನೋ ನಾಲ್ಕು ವರ್ಷ ಮುಗಿಸಿದ ಖುಷಿಯಲ್ಲಿದೆ. ತನ್ನ ಆಡಳಿತದಲ್ಲಿ ರಾಜ್ಯ ಸುಭಿಕ್ಷವಾಗಿದೆ ಅಂತಾ ಕಾಂಗ್ರೆಸ್ ಬೀಗ್ತಿದೆ. ಆದ್ರೆ ಗ್ರಾಮೀಣಾಭಿವೃದ್ಧಿ ಸಚಿವರ ಜಿಲ್ಲೆಯಲ್ಲಿನ ಗ್ರಾಮವೇ ರೋಗಪೀಡಿತವಾಗಿರುವುದು ಮಾತ್ರ ನಿಜಕ್ಕೂ ಶೋಚನೀಯ.

  • 3 ತಿಂಗಳು ಕಳೆಯೋದ್ರಲ್ಲಿ ರಸ್ತೆ ತುಂಬಾ ಗುಂಡಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ

    3 ತಿಂಗಳು ಕಳೆಯೋದ್ರಲ್ಲಿ ರಸ್ತೆ ತುಂಬಾ ಗುಂಡಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ

    ಗದಗ: ಎಲ್ಲೆಂದರಲ್ಲಿ ಗುಂಡಿಗಳಿಂದ ತುಂಬಿರೋ ರಸ್ತೆ ಒಂದೆಡೆಯಾದ್ರೆ ವಾಹನ ಓಡಿಸಲು ಪ್ರಯಾಸ ಪಡ್ತಿರೋ ಸವಾರರು ಇನ್ನೊಂದೆಡೆ. ಪಂಕ್ಚರ್ ಆದ ಬೈಕನ್ನು ತಳ್ತಿರೋ ಸವಾರ ಮತ್ತೊಂದೆಡೆ ಇದು ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಕ್ಷೇತ್ರದ ರಸ್ತೆಯ ಪರಸ್ಥಿತಿ.

    ಗದಗದಿಂದ 5 ಕಿಲೋಮೀಟರ್ ದೂರದಲ್ಲಿರೋ ಸಂಭಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಪಿಎಂಜಿಎಸ್‍ವೈ ಇಲಾಖೆ ಉಸ್ತುವಾರಿಯಲ್ಲಿ 4 ಕೋಟಿ 93 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಯೋಜನೆ ಪ್ರಕಾರ ಇದು 2016 ಜುಲೈ 3ರಂದು ಮುಗಿಯಬೇಕಾಗಿತ್ತು. ಆದ್ರೆ ಮೂರು ತಿಂಗಳ ಹಿಂದಷ್ಟೆ ಮುಕ್ತಾಯವಾಗಿದೆ. ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸೋ ಮುಖ್ಯ ರಸ್ತೆಯಲ್ಲಿ ಪ್ರತಿದಿನ ನೂರಾರು ಜನ ಓಡಾಡ್ತಾರೆ. ಆದ್ರೆ ಕೆಲಸ ಮುಗಿದ ಮೂರೇ ತಿಂಗಳಿಗೆ ಈ ರಸ್ತೆ ತನ್ನ ನಿಜ ರೂಪವನ್ನು ತೋರಿಸಿದೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ.

    ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಕಾಮಗಾರಿ ಬಗ್ಗೆ ದೂರುಗಳಿವೆ. ಹೀಗಾಗಿ ಹಣ ಬಿಡುಗಡೆ ಮಾಡಿಲ್ಲ. ಆಗಿರೋ ತಪ್ಪನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿ ಅಂತಾ ತಿಪ್ಪೇ ಸಾರಿಸುತ್ತಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತಾಡೋ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಜಿಲ್ಲೆಯಲ್ಲಿಯೇ ಇಂತಹ ಕಳಪೆ ಕಾಮಗಾರಿ ನಡೀತಿದ್ರೂ ಸಚಿವರೂ ಸೇರಿದಂತೆ ಯಾರೂ ಇತ್ತ ತಿರುಗಿ ನೋಡದೇ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.