Tag: H.D.Deve Gowda

  • ಮಂಡ್ಯ ಸಂಸದರ ಬಗ್ಗೆ ಕಮೆಂಟ್ ಮಾಡಲ್ಲ: ಸುಮಲತಾಗೆ ಎಚ್‍ಡಿಡಿ ಟಾಂಗ್

    ಮಂಡ್ಯ ಸಂಸದರ ಬಗ್ಗೆ ಕಮೆಂಟ್ ಮಾಡಲ್ಲ: ಸುಮಲತಾಗೆ ಎಚ್‍ಡಿಡಿ ಟಾಂಗ್

    – ಪ್ರಜ್ವಲ್ ರೈತನ ಹೊಟ್ಟೆಯಲ್ಲಿ ಹುಟ್ಟಿ ಬಂದವನು

    ಬೆಂಗಳೂರು: ಸಂಸತ್‍ನಲ್ಲಿ ನೀರಿನ ಬಗ್ಗೆ ಮಾತನಾಡದ ಮಂಡ್ಯ ಸಂಸದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಮಲತಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಸಂಸದರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ನಾನು ಯಾಕೆ ಅವರ ಬಗ್ಗೆ ಕಾಮೆಂಟ್ ಮಾಡಲಿ. ಸಂಸದ ಪ್ರಜ್ವಲ್ ರೇವಣ್ಣ ಮಂಡ್ಯ ಜಿಲ್ಲೆಗೆ ನೀರು ಬಿಡಿ ಎಂದು ಸಂಸತ್‍ನಲ್ಲಿ ಧ್ವನಿ ಎತ್ತಿದ್ದಾನೆ. ರೈತರ ಬೆಳೆಗಳಿಗೆ 2 ಟಿಎಂಸಿ ನೀರು ಕೊಡಿ ಅಂತ ಕೇಳಿಕೊಂಡಿದ್ದಾನೆ ಎಂದು ಹೇಳಿದರು.

    ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ತಂದೆ ಎಚ್.ಡಿ.ರೇವಣ್ಣ ಹಾಗೂ ಚಿಕ್ಕಪ್ಪ ಸಿಎಂ ಹೋರಾಟ ಗೊತ್ತಿದೆ. ಹೀಗಾಗಿ ಸಂಸತ್‍ನಲ್ಲಿ ಭ್ರಷ್ಟ ಸರ್ಕಾರ ಎಂಬ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರ ಮಾತಿಗೆ ಪ್ರಜ್ವಲ್ ಸಮರ್ಥ ಉತ್ತರ ಕೊಟ್ಟಿದ್ದಾನೆ ಎಂದು ಖುಷಿ ವ್ಯಕ್ತಪಡಿಸಿದರು.

    ಪ್ರಜ್ವಲ್ ರೈತನ ಹೊಟ್ಟೆಯಲ್ಲಿ ಹುಟ್ಟಿ ಬಂದವನು. ಅವನ ಊರಲ್ಲಿ ಅತ್ಯುತ್ತಮ ಬೆಳೆ ಬೆಳೆಯುತ್ತಾನೆ. ಈ ಮಾತು ಸುಳ್ಳು ಎನ್ನುವುದಾದರೆ ಬನ್ನಿ ನಾನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಅವರು ರೈತ ಕೆಲಸ ಮಾಡುತ್ತಿದ್ದಾರೆ. ಈಗ ಸಿಎಂ ಭೂಮಿ ಖರೀದಿ ಮಾಡಿದ್ದಾರೆ. ಈ ಮೂಲಕ ಕೃಷಿ ಚಟುವಟಿಕೆ ನಡೆಸುವ ಆಲೋಚನೆ ಹೊಂದಿದ್ದಾನೆ. ನಿಖಿಲ್ ಕೂಡ ಕೃಷಿ ಮಾಡಲು ಓಡಾಡುತ್ತಿದ್ದಾನೆ ಎಂದು ಹೇಳಿದರು.

  • ಸಿಎಂ ಆರೋಗ್ಯವನ್ನು ರಿಪೇರಿ ಮಾಡಲು ರವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರೇ – ಎಚ್‍ಡಿಡಿ ಕಿಡಿ

    ಸಿಎಂ ಆರೋಗ್ಯವನ್ನು ರಿಪೇರಿ ಮಾಡಲು ರವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರೇ – ಎಚ್‍ಡಿಡಿ ಕಿಡಿ

    – ಯಾಕೆ ಮಾತಾಡ್ತಾರೋ ಗೊತ್ತಿಲ್ಲ
    – ಪಾಪ ಸಿಎಂ ಮುಖ ನೋಡೊಕೆ ಆಗ್ತಾ ಇಲ್ಲ

    ಬೆಂಗಳೂರು: ಸಿಎಂ ಆರೋಗ್ಯವನ್ನು ಬಿಜೆಪಿಯ ಸಿ.ಟಿ.ರವಿ ರಿಪೇರಿ ಮಾಡುತ್ತಾರಾ? ಅವರೇನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಡಾಕ್ಟರಾ? ಯಾಕೆ ಈ ರೀತಿ ಎಲ್ಲಾ ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಿರುಗೇಟು ನೀಡಿದ್ದಾರೆ.

    ಸಿಎಂ ಹತಾಶರಾಗಿ ವರ್ತನೆ ಮಾಡುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಗ್ರಾಮ ವಾಸ್ತವ್ಯ ಸಹಿಸುವುದಕ್ಕೆ ಆಗದೆ, ಯಾವುದೋ ಒಂದು ಶಕ್ತಿ ಮೂಲಕ ಅಡಚಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ತಲುಪುವುದಕ್ಕೂ ಮುನ್ನವೇ ತಡೆದು ನಮ್ಮ ಕೆಲಸ ಈಗಲೇ ಮಾಡಿಕೊಡಿ ಎನ್ನುವುದು ಎಷ್ಟು ಸರಿ? ಅದು ಹೇಗೆ ಸಾಧ್ಯ? ಇದಕ್ಕೆ ಯಾರದ್ದೋ ಪ್ರೇರಣೆ ಇದೆ ಎಂದರು. ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ

    ನನಗೆ ಯಾಕೆ ಹೀಗೆ ಮಾಡುತ್ತೀರಾ? ಲಾಠಿ ಚಾರ್ಜ್ ಮಾಡಿಸಬೇಕಾ ಎಂದು ಸಿಎಂ ಪಾಪ ಪೇಚಾಡುತ್ತಿದ್ದಾರೆ. ಪ್ರತಿಭಟನೆಯನ್ನು ತಡೆದು ತಡೆದು ಪೊಲೀಸರಿಗೂ ಸಾಕಾಗಿದೆ. ಅವರಿಗೂ ತಾಳ್ಮೆ ಇರುತ್ತದೆ. ಈ ಪ್ರತಿಭಟನೆಯಿಂದ ಮುಖ್ಯಮಂತ್ರಿಗಳು ಒದ್ದಾಡುತ್ತಿದ್ದಾರೆ. ಸಿಎಂ ವಿನೂತನ ಗ್ರಾಮ ವಾಸ್ತವ್ಯ ಮಾಡುವುದಕ್ಕೆ ಹೊರಟಿದ್ದಾರೆ. ಆದರೆ ಇದನ್ನು ಸಹಿಸದ ಯಾವುದೋ ಒಂದು ಶಕ್ತಿ ಅದಕ್ಕೆ ಅಡಚಣೆ ಮಾಡಲು ಮುಂದಾಗುತ್ತಿದೆ ಎಂದು ಕಿಡಿಕಾರಿದರು.

    ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿಯವರ ಷಡ್ಯಂತ್ರವಿದೆ. ಪಾಪ ಮುಖ್ಯಮಂತ್ರಿಗಳ ಮುಖ ನೋಡುವುದಕ್ಕೆ ಆಗುತ್ತಿಲ್ಲ. ಅವರು ಜನರ ಸಮಸ್ಯೆ ಪರಿಹಾರ ಮಾಡುವುದಕ್ಕೆ ಹೋಗುತ್ತಿದ್ದಾರೆ. ಆದರೆ ದಾರಿ ಮಧ್ಯೆ ಹೀಗೆ ಪ್ರತಿಭಟನೆ ಮಾಡಿದರೆ ಸಿಎಂ ಏನು ಮಾಡಬೇಕು ಎಂದು ಪ್ರಶ್ನಿಸಿದರು.

    ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎರಡ್ಮೂರು ದಿನಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ನಮ್ಮ ಪಕ್ಷದಲ್ಲಿ ಆರು ಜನ ಪರಿಶಿಷ್ಟರು ಗೆದ್ದಿದ್ದಾರೆ. ನಮ್ಮನ್ನ ಏನೂ ಮಾಡಿಲ್ಲ ಎನ್ನುವ ಅಸಮಾಧಾನ ಅವರಲ್ಲಿದೆ. ಅದು ನನಗೆ ಗೊತ್ತಾಗುತ್ತದೆ. ಹೀಗಾಗಿ ಪರಿಶಿಷ್ಟರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಚಿಂತಿಸಿದ್ದೇನೆ. ಮಧು ಬಂಗಾರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದಾರೆ. ಅವರಿಗೆ ಪಕ್ಷದ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ಇದೆ. ಎಲ್ಲರನ್ನೂ ಕರೆದು ಸಭೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳುವ ಮೂಲಕ ಪರಿಶಿಷ್ಟರಿಗೆ ಸಚಿವ ಸ್ಥಾನದ ಸುಳಿವು ಬಿಚ್ಚಿಟ್ಟಿದ್ದಾರೆ.

    ಕಾಂಗ್ರೆಸ್‍ನವರು ಮಾಡಿದ ಅಪಪ್ರಚಾರದಿಂದ ಸಿಎಂ ಕೇವಲ 37 ಸೀಟು ಗೆದ್ದರು. ಆದರೂ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು, ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಜುಲೈ 30ರೊಳಗೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಯಾವನೊ ಒಬ್ಬ 10 ಲಕ್ಷ ರೂ. 20 ಲಕ್ಷ ರೂ. ಸಾಲ ತಗೊಂಡರೆ ಪಾಪ ಸಿಎಂ ಇದನ್ನು ತೀರಿಸುವುಕ್ಕೆ ಆಗುತ್ತಾ? ವರ್ಷಕ್ಕೆ 6 ಸಾವಿರ ರೂ. ಕೊಟ್ಟು ಇಡೀ ಹಿಂದೂಸ್ತಾನದಲ್ಲಿ ದೊಡ್ಡ ಪ್ರಚಾರ ಮಾಡುತ್ತೀರಿ. ಸುಮ್ಮನೆ ಮಾತನಾಡಲು ನಮಗೂ ಬರುತ್ತದೆ. ಜನರಿಗೆ ನಾವು ಸದಾ ಕಾಲ ಮೋಸ ಮಾಡುವುಕ್ಕೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದರು.

  • ದೇವೇಗೌಡರ ಆಶೀರ್ವಾದದಿಂದ ಸರ್ಕಾರ 4 ವರ್ಷ ಇರುತ್ತೆ: ಸತೀಶ್ ಜಾರಕಿಹೊಳಿ

    ದೇವೇಗೌಡರ ಆಶೀರ್ವಾದದಿಂದ ಸರ್ಕಾರ 4 ವರ್ಷ ಇರುತ್ತೆ: ಸತೀಶ್ ಜಾರಕಿಹೊಳಿ

    ಬಳ್ಳಾರಿ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರ ಆಶೀರ್ವಾದದರಿಂದ ಸಮ್ಮಿಶ್ರ ಸರ್ಕಾರ ಇರುತ್ತದೆ. ದೇವೇಗೌಡರು ಪ್ರತಿಯೊಂದು ವಿಷಯವನ್ನು ಅರ್ಥಗರ್ಭಿತವಾಗಿ, ತಳಮಟ್ಟದಲ್ಲಿಯಿಂದಲೂ ಮಾಹಿತಿ ಪಡೆದು, ಪ್ರತಿಯೊಂದನ್ನು ಕೂಲಂಕುಷವಾಗಿ ಪರಿಶೀಲಿಸಿ ಮಾತನಾಡುತ್ತಾರೆ. ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಹೇಳಲುನ ಸಾಧ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

    ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಹುಲಿ ಮತ್ತು ಸಿಂಹಗಳ ಸಫಾರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆ ನೆರೆವೇರಿದೆ. ಸದ್ಯಕ್ಕೆ ನಾಲ್ಕು ಹುಲಿ ಮತ್ತು ಸಿಂಹಗಳನ್ನು ತಂದು ಸಫಾರಿಯಲ್ಲಿ ಬಿಡಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಜಿಯೋಲಾಜಿಕಲ್ ಪಾರ್ಕ್ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಈ ಯೋಜನೆಗೆ ಬೆಳಗಾವಿಯಲ್ಲಿ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಶೀಘ್ರದಲ್ಲಿಯೇ ಬಳ್ಳಾರಿಯ ಕಿರು ಮೃಗಾಲಯವನ್ನು ಕಮಲಾಪುರಕ್ಕೆ ಶಿಫ್ಟ್ ಮಾಡಲಾಗುತ್ತದೆ ಎಂದು ತಿಳಿಸಿದರು.

    ಜಿಂದಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದೆ. ಉಪಸಮಿತಿ ನೀಡುವ ವರದಿಯನ್ನಾಧರಿಸಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಇನ್ನು ಅನಿಲ್ ಲಾಡ್ ಮತ್ತು ಆನಂದ್ ಸಿಂಗ್ ಜಿಂದಾಲ್ ಕುರಿತ ಹೇಳಿಕೆಗಳು ವೈಯಕ್ತಿಕ. ಅವರಿಬ್ಬರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಹೇಳಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಎಚ್‍ಡಿಡಿ ಪೂಜೆ ರಹಸ್ಯ ತಿಳಿಸಿದ ಸಚಿವ ರೇವಣ್ಣ

    ಎಚ್‍ಡಿಡಿ ಪೂಜೆ ರಹಸ್ಯ ತಿಳಿಸಿದ ಸಚಿವ ರೇವಣ್ಣ

    – ಬಿಎಸ್‍ವೈಗೆ ತಿರುಗೇಟು ನೀಡಿದ ಸಚಿವರು
    – ಸುಮ್ಮನೆ ಪ್ರಚಾರ ಕೊಟ್ರೆ ಬೇಡ ಅನ್ನೋಕೆ ಆಗುತ್ತಾ?

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮೊಮ್ಮಕ್ಕಳ ಗೆಲುವಿಗಾಗಿ ಪೂಜೆ ಮಾಡಿಸಿಲ್ಲ. ಅವರ ತಾಯಂದಿರಿಗೆ ಸದ್ಗತಿ ಸಿಗಲೆಂದು ದೇವರ ಮೊರೆಹೋಗಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ದೇವೇಗೌಡರಿಗೆ ಇಬ್ಬರು ತಾಯಂದಿರು. ಅವರು ಪ್ಲೇಗ್‍ನಿಂದ ಮೃತಪಟ್ಟಿದ್ದರು. 60-70 ವರ್ಷವಾದರೂ ಪೂಜೆ ಮಾಡಿಸಿರಲಿಲ್ಲವಂತೆ. ಹೀಗಾಗಿ ತಾಯಂದಿರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಚಿಕ್ಕಮಗಳೂರಿನ ಕಾಪು ಬಳಿ ಪೂಜೆ ಮಾಡಿಸಿದ್ದಾರೆ ಎಂದು ಹೇಳಿದರು.

    ರೇವಣ್ಣ ಎಲ್ಲಾ ಕೆಲಸದಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಅಳಿಯನನ್ನೆ ಹಾಕಿಕೊಟ್ಟಿದ್ದೇನೆ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಕೇಳಿದವರನ್ನು ಕೇಳಿದ ಜಾಗಕ್ಕೆ ಹಾಕಿಕೊಟ್ಟಿದ್ದೇನೆ. ಬೇಕಾದರೆ ಅವರನ್ನೇ ಕೇಳಿ. ಬಿ.ಎಸ್.ಯಡಿಯೂರಪ್ಪನವರಿಗೆ ಅರಳು-ಮರಳು. ಪಾಪ ಅವರಿಗೆ ವಯಸ್ಸಾಗಿದೆ. ಅದಕ್ಕೆ ಏನೇನು ಮಾತನಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.

    ನಾನು ಯಾವುದೇ ಕಳ್ಳ ವೋಟ್ ಹಾಕಿಸಿಲ್ಲ. ದೇವರಾಜ್ ಎಂತಹ ವ್ಯಕ್ತಿ ಅಂತ ತಿಳಿದುಕೊಂಡು ಮಾತನಾಡಿ. ದೂರು ಕೊಟ್ಟವರ ಮೇಲೆ ಎರಡು ಪ್ರಕರಣ ದಾಖಲಾಗಿವೆ. ಮತದಾನ ದಿನ ನಾನು ಮಾಧ್ಯಮಗಳ ಜೊತೆಗಿದ್ದೆ. ಸೂರಜ್ ಮಗನ ಕೈಯಲ್ಲಿ ವೋಟ್ ಹಾಕಿಸಿದ್ದಾರೆ ಅಂತ ಹೇಳಿದ್ದಾರೆ. ಸೂರಜ್‍ಗೆ ಮಗನೇ ಇಲ್ಲ. ಈ ಸಂಬಂಧ ಯಾವುದೇ ನೊಟೀಸ್ ಆಯೋಗದಿಂದ ಬಂದಿಲ್ಲ. ಯಾವುದೇ ತನಿಖೆ ಮಾಡಿಕೊಳ್ಳಲಿ. ನಾನು ತಪ್ಪು ಮಾಡಿಲ್ಲ ಎಂದು ಹೇಳಿದರು.

    ನಾನು ಕಳ್ಳ ವೋಟ್ ಹಾಕಿಸಿದ ವಿಡಿಯೋ ಇದ್ದರೆ ಕೊಡಲಿ. ಕುಟುಂಬ ಸಮೇತ ಬಂದು ಮತದಾನ ಮಾಡಿದ್ದೇನೆ. ಬೂತ್‍ನಲ್ಲಿ ಕೇಂದ್ರ ಮೀಸಲು ಪಡೆಯಿತ್ತು. ಕಳ್ಳ ವೋಟ್ ಹಾಕಿಸುತ್ತಿದ್ದರೆ ಅವರ ಮೂಲಕ ನಮ್ಮನ್ನ ತಡೆಯಬಹುದಿತ್ತು. ಯಾಕೆ ತಡೆಯಲಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದರು.

    ಹೆಚ್‍ಎಂಟಿ (ಹಾಸನ, ಮಂಡ್ಯ, ತುಮಕೂರು) ಬಗ್ಗೆ ಮಾತಾಡದೆ ಕೆಲವರಿಗೆ ಸಮಾಧಾನ ಆಗುವುದಿಲ್ಲ. ಸುಮ್ಮನೆ ಪ್ರಚಾರ ಕೊಟ್ಟರೆ ಬೇಡ ಎನ್ನುವುದಕ್ಕೆ ಆಗುತ್ತಾ? ಈ ವಿಷಯದಲ್ಲಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೆಚ್‍ಎಂಟಿ ದೆಹಲಿಗೆ ಹೋಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.

  • ಕಲ್ಪತರು ‘ಲೋಕ’ದ ನಾಡಲ್ಲಿ ರಾಜಕೀಯ ವರ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕ ಬಹಿರಂಗ

    ಕಲ್ಪತರು ‘ಲೋಕ’ದ ನಾಡಲ್ಲಿ ರಾಜಕೀಯ ವರ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕ ಬಹಿರಂಗ

    ಬೆಂಗಳೂರು: ರಾಜ್ಯದಲ್ಲಿ ಲೋಕ ಸಮರದ ಮತದಾನದ ಹಂತ ಪೂರ್ಣಗೊಂಡಿದ್ದು, ಮತ ಏಣಿಕೆಗೆ ದಿನ ಗಣನೆ ಆರಂಭವಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಖಾಸಗಿ ಏಜೆನ್ಸಿಗಳಿಂದ ಸಮೀಕ್ಷೆ ನಡೆಸಿದ್ದು, ಎಲ್ಲೆಲ್ಲಿ ಮುನ್ನಡೆ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಹಾಕಿವೆ.

    ಮೊಮ್ಮಗನಿಗಾಗಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ವಲಸೆ ಬಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಗೆಲುತ್ತಾರಾ? ಇಲ್ಲವೇ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಹಾಗೂ ಕೆ.ಎನ್.ರಾಜಣ್ಣ ಅವರ ಅತೃಪ್ತಿಗೆ ಒಳಗಾಗುತ್ತಾರಾ? ಅಥವಾ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಜಿ.ಎಸ್.ಬಸವರಾಜು ಗೆದ್ದು ಬರುತ್ತರಾ ಎನ್ನುವ ಪ್ರಶ್ನೆಗಳು ಶುರುವಾಗಿವೆ.

    ದೋಸ್ತಿ ಲೆಕ್ಕ: ತುಮಕೂರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಎಚ್.ಡಿ.ದೇವೇಗೌಡ ಅವರು ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ. ತುಮಕೂರು ಗ್ರಾಮಾಂತರ, ತುರುವೇಕೆರೆ ಹಾಗೂ ಕೊರಟಗೆರೆ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮುನ್ನಡೆ ಸಿಗಲಿದೆ ಎಂದು ದೋಸ್ತಿ ನಾಯಕರು ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ತುಮಕೂರು ನಗರದಲ್ಲಿ 5 ಸಾವಿರ, ತುಮಕೂರು ಗ್ರಾಮಾಂತರ 20 ಸಾವಿರ, ಚಿಕ್ಕನಾಯಕನಹಳ್ಳಿ, 10 ಸಾವಿರ, ತಿಪಟೂರು 15 ಸಾವಿರ, ತುರುವೇಕೆರೆ 20 ಸಾವಿರ, ಕೊರಟಗೆರೆ 20 ಸಾವಿರ, ಗುಬ್ಬಿ 10 ಸಾವಿರ, ಮಧುಗಿರಿ 15 ಸಾವಿರ ಮತಗಳ ಮುನ್ನಡೆ ಸಿಗಲಿದೆ. ಈ ಮೂಲಕ ಎಚ್.ಡಿ.ದೇವೇಗೌಡ ಅವರು 1.10 ಲಕ್ಷ ಮತಗಳ ಲೀಡ್ ನಿಂದ ಗೆಲ್ಲುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳಿದೆ.

    ಬಿಜೆಪಿ ಲೆಕ್ಕ: ಕಮಲ ಪಡೆಯ ಲೆಕ್ಕಾಚಾರದ ಪ್ರಕಾರ ತುಮಕೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಮುನ್ನಡೆ ಸಿಗಲಿದೆ. ಅಷ್ಟೇ ಅಲ್ಲದೆ ತಿಪಟೂರು, ತುರುವೇಕೆರೆ, ಕೊರಟಗೆರೆ ಹಾಗೂ ಗುಬ್ಬಿ ಕ್ಷೇತ್ರಗಳ ಮತದಾರರ ಮೇಲೆ ಭಾರೀ ನಿರೀಕ್ಷೆ ಇಟ್ಟಿರುವುದನ್ನು ಬಿಜೆಪಿ ಸಮೀಕ್ಷೆಯು ತಿಳಿಸುತ್ತದೆ.

    ಕೇಸರಿ ನಾಯಕರ ಸಮೀಕ್ಷೆ ಪ್ರಕಾರ ತುಮಕೂರು ನಗರ 10 ಸಾವಿರ, ತುಮಕೂರು ಗ್ರಾಮಾಂತರ 5 ಸಾವಿರ, ಚಿಕ್ಕನಾಯಕನಹಳ್ಳಿ 5 ಸಾವಿರ, ತಿಪಟೂರು 30 ಸಾವಿರ, ತುರುವೇಕೆರೆ 20 ಸಾವಿರ, ಕೊರಟಗೆರೆ 15 ಸಾವಿರ, ಗುಬ್ಬಿ 15 ಸಾವಿರ, ಮಧುಗಿರಿ 10 ಸಾವಿರ ಮತಗಳ ಲೀಡ್ ಸಿಗಲಿದೆ. ಈ ಮೂಲಕ ಜಿ.ಎಸ್.ಬಸವರಾಜು ಅವರು 1.10 ಲಕ್ಷ ಮತಗಳ ಅಂತರದಿಂದ ಜಯಶೀಲರಾಗಲಿದ್ದಾರೆ ಎಂದು ಬಿಜೆಪಿ ವರದಿ ಹೇಳಿದೆ.

  • ಸಿದ್ದರಾಮಯ್ಯ, ಎಚ್‍ಡಿಡಿ ಸಮಾವೇಶದಲ್ಲಿ ಭಿನ್ನಮತ ಸ್ಫೋಟ – ಧಿಕ್ಕಾರ ಕೂಗಿದ ಜೆಡಿಎಸ್ ಕಾರ್ಯಕರ್ತರು

    ಸಿದ್ದರಾಮಯ್ಯ, ಎಚ್‍ಡಿಡಿ ಸಮಾವೇಶದಲ್ಲಿ ಭಿನ್ನಮತ ಸ್ಫೋಟ – ಧಿಕ್ಕಾರ ಕೂಗಿದ ಜೆಡಿಎಸ್ ಕಾರ್ಯಕರ್ತರು

    ಚಿಕ್ಕಬಳ್ಳಾಪುರ: ನಗರದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಎದುರೇ ಮೈತ್ರಿಯಲ್ಲಿ ಭಿನ್ನಮತ ಸ್ಫೋಟವಾಗಿದೆ.

    ಪ್ರಚಾರ ಸಭೆಯ ವೇದಿಕೆ ಬ್ಯಾನರ್ ನಲ್ಲಿ ಮಾಜಿ ಶಾಸಕ ಕೆಪಿ ಬಚ್ಚೇಗೌಡ ಅವರ ಫೋಟೋ ಹಾಕಿಲ್ಲ. ಸ್ಥಳೀಯ ಜೆಡಿಎಸ್ ನಾಯಕರ ಹೆಸರನ್ನು ಕಾರ್ಯಕ್ರಮ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಪಕ್ಷದ ಕಾರ್ಯಕರ್ತರು ಆರೋಪಿಸಿದರು. ಅಷ್ಟೇ ಅಲ್ಲದೇ ಸಭೆಯಿಂದ ಹೊರ ನಡೆದ ಜೆಡಿಎಸ್ ಕಾರ್ಯಕರ್ತರು, ಧಿಕ್ಕಾರ ಕೂಗಿದರು.

    ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿ ಎದುರಿಸಲಾಗುತ್ತಿವೆ. ಹೀಗಾಗಿ ಎರಡೂ ಪಕ್ಷಗಳ ಪ್ರಮುಖ ಮುಖಂಡರ ಹೆಸರು, ಫೋಟೋವನ್ನು ವೇದಿಕೆಯ ಬ್ಯಾನರ್ ನಲ್ಲಿ ಹಾಕಿಸಬೇಕು. ಆದರೆ ಕಾಂಗ್ರೆಸ್‍ನವರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಹೀಗಾಗಿ ಸಭೆಯನ್ನು ಬಹಿಷ್ಕರಿಸಿ ಹೊರ ಬಂದಿದ್ದೇವೆ ಎಂದು ಜೆಡಿಎಸ್ ಕಾರ್ಯಕರ್ತರು ತಿಳಿಸಿದ್ದಾರೆ.

    ನಮ್ಮನ್ನು ಓಲೈಸಿ ಮತಪಡೆಯುವ ಕಾಂಗ್ರೆಸ್ ವಿಫಲವಾಗುತ್ತಿದೆ. ಸಣ್ಣ ಪುಟ್ಟ ವಿಚಾರದಲ್ಲಿ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಹೀಗೆ ಮಾಡಿದರೆ ನಾವು ಯಾಕೆ ಬೆಂಬಲ ನೀಡಬೇಕು ಎಂದು ಕಾರ್ಯತರು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

  • ಗುರುವನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ

    ಗುರುವನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ

    – ಬಿಜೆಪಿ ಪ್ರಣಾಳಿಕೆ ಓಲ್ಡ್ ವೈನ್ ಇನ್ ನ್ಯೂ ಬಾಟಲ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷ ಆಡಳಿತ ಮಾಡಿದರೂ ಜನ ನೆನಪಿಟ್ಟುಕೊಳ್ಳುವ ಒಂದೇ ಒಂದು ಕೆಲಸ ಮಾಡಲಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು 11 ತಿಂಗಳು ಮಾತ್ರ ಪ್ರಧಾನಿಯಾಗಿದ್ದರು. ಆಗ ಅವರು ಜನ ನೆನಪಿಸುವಂತಹ ಕೆಲಸ ಮಾಡಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಗುರುವನ್ನು ಹೊಗಳಿದ್ದಾರೆ.

    ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ, ಸಂಸದ ಡಿ.ವಿ.ಸದಾನಂದಗೌಡ ಅವರು ಬೆಂಗಳೂರಿಗೆ ನೀಡಿದ ಕೊಡುಗೆ ಏನು? ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ವೋಟ್ ಹಾಕಿ ಎಂದು ಹೇಳುತ್ತಿದ್ದಾರೆ. ಕ್ಷೇತ್ರದ ಜನತೆ ಮುಖ ತೋರಿಸಲು ಆಗದ ಸದಾನಂದಗೌಡ ಅವರು ಮೋದಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ಅನಾವಶ್ಯಕವಾಗಿ 40 ಸೈನಿಕರ ಸಾವಿಗೆ ಮೋದಿ ಕಾರಣರಾದ್ರು: ಕೃಷ್ಣಬೈರೇಗೌಡ

    ಬಿಜೆಪಿ ಪ್ರಣಾಳಿಕೆ ಓಲ್ಡ್ ವೈನ್ ಇನ್ ನ್ಯೂ ಬಾಟಲ್. ಸಂಕಲ್ಪ ಪತ್ರದಲ್ಲಿ ತಿಳಿಸಿರುವ ಕಲಂ 370 ವಿಚಾರ ಹೊಸದೇನಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವೂ ಹೊಸ ವಿಚಾರವಲ್ಲ. ಬಿಜೆಪಿಯವರು ಹಳೆಯ ವಿಚಾರಗಳನ್ನೇ ಮತ್ತೆ ಪ್ರಸ್ತಾಪ ಮಾಡಿದ್ದಾರೆ. ಅದೇನೋ ಸಂಕಲ್ಪ ಪತ್ರವಂತೆ ಸಂಕಲ್ಪ ಪತ್ರ. 2014ರಲ್ಲಿ ನೀಡಿದ ಭರವಸೆಗಳಲ್ಲಿ ಯಾವುದನ್ನು ಈಡೇರಿಸಿದ್ದಾರೆ ಅಂತ ಬಂದು ಹೇಳಲಿ ನೋಡೋಣ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

    ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮಾತನಾಡಿ, 5 ವರ್ಷಗಳಲ್ಲಿ ಪ್ರಧಾನಿ ಮೋದಿ ಏನು ಮಾಡಿದ್ದಾರೆ ಎನ್ನುವುದನ್ನು ವಿಮರ್ಶೆ ಮಾಡಬೇಕು. ದೇಶದ ಪ್ರಜೆಗಳು 2014ರಲ್ಲಿ ನೀಡಿದ ಬೆಂಬಲವನ್ನು ಈ ಬಾರಿ ನೀಡುವುದಿಲ್ಲ ಎನ್ನುವುದು ಬಿಜೆಪಿಯವರಿಗೆ ಗೊತ್ತಾಗಿದೆ. ಅದಕ್ಕಾಗಿ ಪುಲ್ವಾಮಾ ದಾಳಿಗೆ ಮತ್ತೊಂದು ಸ್ವರೂಪ ನೀಡಿದರು. ಬೇರೆ ದೇಶದವರು ನಮ್ಮ ಮೇಲೆ ದಾಳಿಗೆ ತಿರುಗೇಟು ನೀಡಲು ಸಿದ್ಧವಿದ್ದೇವೆ. ಎಲ್ಲವೂ ನಮ್ಮ ಕಾಲದಲ್ಲೇ ಆಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಿದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ಎಲ್ಲವನ್ನೂ ನಾನೇ ಮಾಡಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಯಂ ಪ್ರತಿಷ್ಠೆ ತೋರಿಸುತ್ತಿದ್ದಾರೆ. ಎಲ್ಲವೂ ನಾನೇ ನಾನೇ ಎನ್ನುವ ದುರಾಭ್ಯಾಸವನ್ನು ಅವರು ಇಟ್ಟುಕೊಂಡಿದ್ದಾರೆ. ಜನರು ಅತಂತ್ರ ಫಲಿತಾಂಶ ನೀಡುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದರು.

  • ನನ್ನ ಬದಲಾಗಿ ಜಮೀರ್ ಅಹ್ಮದ್ ಮಾತಾಡ್ತಾರೆ: ಎಚ್‍ಡಿಡಿ

    ನನ್ನ ಬದಲಾಗಿ ಜಮೀರ್ ಅಹ್ಮದ್ ಮಾತಾಡ್ತಾರೆ: ಎಚ್‍ಡಿಡಿ

    – ಅಲ್ಪಸಂಖ್ಯಾತರನ್ನ ಓಲೈಸಲು ಜಮೀರ್ ಅಹ್ಮದ್ ಮೊರೆಹೋದ ಗೌಡ್ರು

    ತುಮಕೂರು: ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ನನ್ನ ಬದಲಾಗಿ ಆಹಾರ ಹಾಗೂ ನಾಗರಿಗ ಪೂರೈಕೆ ಸಚಿವ ಜಮೀರ್ ಅಹ್ಮದ್ ಮಾತಾಡುತ್ತಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಅಲ್ಪಸಂಖ್ಯಾತರನ್ನ ಓಲೈಸಲು ಸಚಿವರ ಮೊರೆಹೋದರು.

    ನಗರದ ಗ್ರಂಥಾಲಯದ ಆವರಣದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ, ಶಿವಸೇನೆ, ಅಕಾಲಿದಳ ಬಿಟ್ಟರೆ ಎಲ್ಲರೂ ಮಹಾಘಟಬಂಧನ್ ಸೇರಿದ್ದಾರೆ. ಜೆಡಿಎಸ್‍ಗೆ ಕಡಿಮೆ ಶಕ್ತಿ ಹಾಗೂ ಕಾಂಗ್ರೆಸ್‍ಗೆ ಹೆಚ್ಚು ಶಕ್ತಿ ಇರಬಹದು. ಎರಡೂ ಶಕ್ತಿಯನ್ನು ಒಟ್ಟುಗೂಡಿಸಿ ಬಿಜೆಪಿಯನ್ನು ಕುಗ್ಗಿಸಬಹುದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡಂಕಿ ತಲುಪಲು ಬಿಜೆಪಿಗೆ ಅವಕಾಶ ಕೊಡಬಾರದು. ಈ ಸಾಧನೆಗೆ ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು.

    ಕಡಿಮೆ ಅವಧಿಯಲ್ಲಿ ಭಾಷಣ ಮುಗಿಸಿದ ಎಚ್.ಡಿ.ದೇವೇಗೌಡ ಅವರು, ನನ್ನ ಬದಲಾಗಿ ಜಮೀರ್ ಅಹ್ಮದ್ ಮಾತನಾಡುತ್ತಾರೆ ಎಂದು ತಿಳಿಸಿದರು. ಈ ಮೂಲಕ ಮಾಜಿ ಶಿಷ್ಯ ಜಮೀರ್ ಅಹ್ಮದ್ ಅವರ ಮೂಲಕ ಅಲ್ಪಸಂಖ್ಯಾತರನ್ನ ಓಲೈಸಲು ಯತ್ನಿಸಿದರು.

    ಇದಕ್ಕೂ ಮುನ್ನ ಎಚ್.ಡಿ.ದೇವೇಗೌಡ ಅವರು ಭಾಷಣ ಆರಂಭಿಸಿದ ಐದು ನಿಮಿಷದಲ್ಲೇ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದ ಧ್ವನಿ ಧ್ವನಿವರ್ಧಕದ ಮೂಲಕ ಕೇಳಿಸಿತು. ಇದರಿಂದಾಗಿ ಸ್ವಲ್ಪ ಸಮಯ ಭಾಷಣವನ್ನು ನಿಲ್ಲಿಸಿದರು. ಪಾರ್ಥನೆ ಮುಗಿದ ಬಳಿಕ ಪುನಃ ಭಾಷಣ ಆರಂಭಿಸಿ, ಕಡಿಮೆ ಸಮಯದಲ್ಲಿ ಮಾತು ನಿಲ್ಲಿಸಿ ಸಚಿವ ಜಮೀರ್ ಅಹ್ಮದ್ ಅವರಿಗೆ ಅವಕಾಶ ನೀಡಿದರು.

  • ಎಚ್‍ಡಿಡಿ ಸೋಲಿಸಲು ಮಾಜಿ ಸಿಎಂ ಪ್ಲಾನ್ : ಶ್ರೀರಾಮುಲು

    ಎಚ್‍ಡಿಡಿ ಸೋಲಿಸಲು ಮಾಜಿ ಸಿಎಂ ಪ್ಲಾನ್ : ಶ್ರೀರಾಮುಲು

    – ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯಗೆ ಮತಿಭ್ರಮಣೆಯಾಗಿದೆ

    ಮೈಸೂರು: ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಅವರನ್ನು ಸೋಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.

    ನಗರದಲ್ಲಿ ಸುದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಹಾವಿನ ದ್ವೇಷದಂತೆ ಸಿದ್ದರಾಮಯ್ಯ ಅವರು ಈ ಚುನಾವಣೆ ಮೂಲಕ ಸೇಡನ್ನು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಇತ್ತ ಸಚಿವ ಜಿ.ಟಿ.ದೇವೆಗೌಡರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸೋತರೆ ಜವಬ್ದಾರಿ ನಾನಲ್ಲ ಅಂತ ಈಗಾಗಲೇ ತಿಳಿಸಿದ್ದಾರೆ. ಈ ಮೂಲಕ ಮೈತ್ರಿಯಲ್ಲಿ ಸಮನ್ವಯತೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ತಿಳಿಸಿದರು.

    ಅಧಿಕಾರ ಕಳೆದುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತಿಭ್ರಮಣೆ ಉಂಟಾಗಿದೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಲೆಕ್ಕಕಿಟ್ಟಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೂಲೆಗುಂಪು ಮಾಡಲಾಗಿದೆ. ಬ್ಯಾನರ್ ಗಳಲ್ಲಿ ಮಾಜಿ ಸಿಎಂ ಹೆಸರು ಫೋಟೋ ಹಾಕುತ್ತಿಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಸೋತಿದ್ದರು. ಚಾಮುಂಡೇಶ್ವರಿ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಬದಾಮಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಜನ ಈಗ ದೂರುತ್ತಿದ್ದಾರೆ ಎಂದರು.

    ಜೆಡಿಎಸ್ ಸಭೆಯಲ್ಲಿಯೇ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಇದು ಮೈತ್ರಿ ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ಹೊಂದಾಣಿಕೆ ಇಲ್ಲ ಎನ್ನುವುದನ್ನು ತಿಳಿಸುತ್ತದೆ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದು ಹೇಳಿದರು.

  • ನಾನ್ಯಾಕೆ ಕಾಂಗ್ರೆಸ್ ಬಿಟ್ಟೆ ಅಂತ ಸಿದ್ದರಾಮಯ್ಯನವರನ್ನೇ ಕೇಳಿ: ಎಚ್.ವಿಶ್ವನಾಥ್

    ನಾನ್ಯಾಕೆ ಕಾಂಗ್ರೆಸ್ ಬಿಟ್ಟೆ ಅಂತ ಸಿದ್ದರಾಮಯ್ಯನವರನ್ನೇ ಕೇಳಿ: ಎಚ್.ವಿಶ್ವನಾಥ್

    – ಸಿದ್ದರಾಮಯ್ಯ ನಾನು ಕಣ್ಣಿನಲ್ಲೇ ಮಾತನಾಡುತ್ತೇವೆ

    ಬೆಂಗಳೂರು: ನಾನ್ಯಾಕೆ ಕಾಂಗ್ರೆಸ್ ಬಿಟ್ಟೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯನವರನ್ನೇ ಕೇಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

    ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಗ್ರಹಚಾರಕ್ಕೆ ಅವತ್ತು ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿತ್ತು. ಏನು ಮಾಡೋದು ಹೇಳಿ? ಆದರೆ ಈಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ನಾಯಕರಾಗಿದ್ದಾರೆ. ಹೀಗಾಗಿ ಅವರನ್ನು ನಾವು ಒಪ್ಪಿಕೊಂಡಿದ್ದೇವೆ ಎಂದರು.

    ಸಮನ್ವಯ ಸಮಿತಿಯಲ್ಲಿ ಸ್ಥಾನ ಪಡೆಯದ ವಿಚಾರವಾಗಿ ಮಾತನಾಡಿದ ಅವರು, ಸಮಿತಿಯಲ್ಲಿ ಎರಡು ಪಕ್ಷಗಳಿವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ನಾನು ಹೊರಗೆ ಇದ್ದೇವೆ. ಬಾಗಿಲನ್ನು ತೆರೆದು ಕೈ ಮುಗಿದು ನಿಂತಿದ್ದೇವೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ನಾನು ಕಣ್ಣಿನಲ್ಲೇ ಮಾತನಾಡುತ್ತೇವೆ. ಯಾವುದೇ ಭಿನ್ನಾಭಿಪ್ರಾಯ ನಮ್ಮಲ್ಲಿ ಇಲ್ಲ. ಮುಂದೆ ಇಬ್ಬರು ಕುಳಿತು ಮಾತನಾಡುತ್ತೇವೆ. ಅವರನ್ನ ಬೆಳೆಸಿದ್ದು ಒಕ್ಕಲಿಗರು. ಈ ಮೂಲಕ ಅಹಿಂದ ವರ್ಗಕ್ಕೆ ಬೆಂಬಲ ಸಿಕ್ಕಿದೆ. ಇದರಲ್ಲಿ ಅವಮಾನ ಎಲ್ಲಿಂದ ಬರುತ್ತೆ ಎಂದು ತಿಳಿಸಿದರು.

    ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯು ಬಿಜೆಪಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ. ನಮಗೆ ಯಾವುದೇ ಪ್ರತಿಷ್ಠೆ ಇಲ್ಲ. ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಅಂತ ಹೇಳಿಕೊಂಡು ಪ್ರತಿಷ್ಠೆ ತೋರಲ್ಲ. ಜನರು ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ ಎಂದರು.

    ಮಂಡ್ಯದಲ್ಲಿ ಕಾಂಗ್ರೆಸ್-ಬಿಜೆಪಿ ಬಾವುಟ ಒಟ್ಟಿಗೆ ಪ್ರಚಾರ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಶ್ವನಾಥ್ ಅವರು, ಇದರಲ್ಲಿ ತಪ್ಪೇನಿದೆ? ಒಟ್ಟಿಗೆ ಬಾವುಟ ಹಿಡಿದರೆ ವೋಟ್ ಬೀಳುತ್ತೆ ಅಂತ ಹೇಳುವುದಕ್ಕೆ ಆಗುತ್ತಾ? ಜನರು ಅದೆಲ್ಲನ್ನು ತೀರ್ಮಾನ ಮಾಡುತ್ತಾರೆ. ಸುಮಲತಾ ಬಿಜೆಪಿ ಅಭ್ಯರ್ಥಿಯಾಗಿದ್ದು, ಬಿಜೆಪಿ ಅವರಿಗೆ ಬೆಂಬಲ ನೀಡಿದೆ ಎಂದರು.

    ಎಚ್.ಡಿ.ದೇವೇಗೌಡರು ಇಡೀ ಭಾರತವನ್ನ ಪ್ರತಿನಿಧಿಸಿದ್ದರು. ಅವರು ಹಾಸನ, ಮಂಡ್ಯ, ತುಮಕೂರು ಅಂತ ಸೀಮಿತ ಆಗಲ್ಲ. ಅವರಿಗೆ ಇಡೀ ಭಾರತವೇ ಕ್ಷೇತ್ರವಾಗಿದ್ದು, ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂದು ದೇವೇಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದನ್ನು ಸಮರ್ಥಿಸಿಕೊಂಡರು.

    ದೋಸ್ತಿ ಸರ್ಕಾರದಲ್ಲಿ ಮಂಡ್ಯಕ್ಕೆ ಹೆಚ್ಚು ಅನುದಾನ ಕೊಟ್ಟರೆ ಏನು ತಪ್ಪು? ಬೇರೆ ಜಿಲ್ಲೆಗಳಿಗೂ ಅನುದಾನ ಕೊಟ್ಟಿದ್ದಾರೆ. ರಾಜ್ಯ ಯಾವ ಜಿಲ್ಲೆಗೂ ಅನ್ಯಾಯ ಮಾಡಿಲ್ಲ. ಆದರೆ ಹಾಸನ ಹಾಗೂ ಮಂಡ್ಯಗೆ ಸ್ವಲ್ಪ ಹೆಚ್ಚು ಅನುದಾನ ಕೊಟ್ಟಿರಬಹುದು ಎಂದರು.

    ಲೋಕಸಭೆ ಚುನಾವಣೆ ಬಳಿಕವೂ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇರುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ನಾಳೆ ಏನಾಗುತ್ತೋ ನೋಡೋಣ. ಈಗ ಅದು ಬೇಡ ಎಂದು ತಿಳಿಸಿದರು.

    ರಾಜ್ಯದ ಜನರು ಮಂಡ್ಯದಿಂದ ಬೇಜಾರು ಆಗಿಲ್ಲ. ಆದರೆ ಮಂಡ್ಯ ಬಗ್ಗೆ ತೋರಿಸುತ್ತಿರುವವರ ಬಗ್ಗೆ ಬೇಸರವಾಗಿದ್ದಾರೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ದೇವೇಗೌಡ, ಬಿಜೆಪಿ ಸಂಸದ ಸದಾನಂದಗೌಡ, ಬಿ.ಎಸ್.ಯಡಿಯೂರಪ್ಪ ಬಗ್ಗೆಯೂ ಯಾರು ತೋರಿಸುತ್ತಿಲ್ಲ. ಕೇವಲ ಮಂಡ್ಯ, ಮಂಡ್ಯ ಅಂತ ತೋರಿಸುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು.

    ನನ್ನ ಮೇಲೆ ಯಾಕೆ ಐಟಿ ದಾಳಿ ಮಾಡುತ್ತಾರೆ. ನನ್ನ ಬಳಿ ಏನಿದೆ? ನಾವು ತಿರುಗಾಡುವವರು. ನನ್ನ ಬಳಿಯೂ ಏನು ಇಲ್ಲ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಬಳಿಯೂ ಏನು ಇಲ್ಲ ಎಂದು ತಿಳಿಸಿದರು.