Tag: H.D.Deve Gowda

  • ಎಚ್‍ಡಿಡಿ ದಂಪತಿ ಗುಣಮುಖರಾಗಲೆಂದು ವಿಶೇಷ ಪೂಜೆ

    ಎಚ್‍ಡಿಡಿ ದಂಪತಿ ಗುಣಮುಖರಾಗಲೆಂದು ವಿಶೇಷ ಪೂಜೆ

    ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೊರೊನಾದಿಂದ ಬಳಲುತ್ತಿರುವ ಅವರ ಪತ್ನಿ ಚನ್ನಮ್ಮ ಗುಣಮುಖರಾಗಲೆಂದು ನಾಗಮಂಗಲದ ಶ್ರೀ ಸೌಮ್ಯಕೇಶವ ದೇವಸ್ಥಾನದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಎದೆಯಲ್ಲಿ ಸಣ್ಣ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೇವೇಗೌಡ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತ್ನಿ ಚನ್ನಮ್ಮ ಅವರನ್ನು ಇಲ್ಲೇ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಶೀಘ್ರವಾಗಿ ಇಬ್ಬರು ಗುಣಮುಖರಾಗಿ ಬರಬೇಕೆಂದು ಎಲ್.ಆರ್.ಶಿವರಾಮೇಗೌಡ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡರು.

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಮೇಗೌಡರು, ನಾವು ದೇವೇಗೌಡ ಅವರ ಆಶೀರ್ವಾದದಲ್ಲಿ ಬೆಳೆದವರು, ಅವರಿಂದ ನಾವು ಅಧಿಕಾರ ಅನುಭವಿಸಿದ್ದೇವೆ. ಈ ರಾಜ್ಯದಲ್ಲಿ ಆರೋಗ್ಯವನ್ನು ಲೆಕ್ಕಿಸದೇ ರೈತರ ಪರವಾಗಿ ಹೋರಾಟ ಮಾಡುವ ವ್ಯಕ್ತಿ ಎಂದರೆ ದೇವೇಗೌಡರು. ಹೀಗಾಗಿ ಅವರು ಹಾಗೂ ಅವರ ಧರ್ಮಪತ್ನಿ ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.

  • ರಾಜ್ಯಸಭೆಗೆ ನಾಲ್ವರು ಅವಿರೋಧ ಆಯ್ಕೆ- ಮತ್ತೆ ಸಂಸತ್‍ಗೆ ಎಚ್‍ಡಿಡಿ, ಖರ್ಗೆ ಎಂಟ್ರಿ

    ರಾಜ್ಯಸಭೆಗೆ ನಾಲ್ವರು ಅವಿರೋಧ ಆಯ್ಕೆ- ಮತ್ತೆ ಸಂಸತ್‍ಗೆ ಎಚ್‍ಡಿಡಿ, ಖರ್ಗೆ ಎಂಟ್ರಿ

    ನವದೆಹಲಿ: ರಾಜ್ಯಸಭೆ ಚುನಾವಣಾ ಕಣದಲ್ಲಿ ರಾಜ್ಯದ 4 ಅಭ್ಯರ್ಥಿಗಳು ಮಾತ್ರ ಇದ್ದಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ. ಈ ಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್‍ಗೆ ಮತ್ತೆ ಪ್ರವೇಶ ಮಾಡಿದ್ದಾರೆ.

    ಬಿಜೆಪಿಯ ಅಶೋಕ್ ಗಸ್ತಿ, ಈರಣ್ಣ ಕಡಾಡಿ, ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ಎಚ್.ಡಿ. ದೇವೇಗೌಡ ಅವರು ಅಷ್ಟೇ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆ ವಿಧಾನಸಭೆ ಕಾರ್ಯದರ್ಶಿ, ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರು ಅಧಿಕೃತವಾಗಿ ಈ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಘೋಷಿಸಿದರು.

    ಅವಿರೋಧವಾಗಿ ಆಯ್ಕೆಯಾದ ಅಧಿಕೃತ ಘೋಷಣಾ ಪತ್ರವನ್ನು ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಅಭ್ಯರ್ಥಿಗಳಾದ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಅವರು ಪಡೆದುಕೊಂಡಿದ್ದಾರೆ.

    ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ರಾಜ್ಯಸಭೆಗೆ ಕಳುಹಿಸಿದ್ದಾರೆ. ಅವರಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ರಾಜ್ಯದ, ದೇಶದ ಸಮಸ್ಯೆಗಳನ್ನು ಸಮರ್ಥವಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.

    ಹಿಂಭಾಗಿಲಿನ ಮೂಲಕ ರಾಜ್ಯಸಭೆಗೆ ಪ್ರವೇಶಿಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿ ನೀಡಿದ ಅವರು, ನನ್ನಷ್ಟು ವರ್ಷ ವಿಧಾನಸಭೆಗೆ ಆಯ್ಕೆಯಾದವರು ಬಿಜೆಪಿಯಲ್ಲಿ ಯಾರಿದ್ದಾರೆ? ಬಿಜೆಪಿಯವರು ನನ್ನಷ್ಟು ವರ್ಷ ರಾಜಕಾರಣ ಮಾಡಲಿ ನೋಡೋಣ. ಅವರ ಪಕ್ಷ ಅವಕಾಶ ನೀಡುತ್ತೋ ಇಲ್ಲವೋ ನೊಡೋಣ. ಒಬ್ಬರ ಮೇಲೋಬ್ಬರು ರಾಜಕಾರಣ ಮಾಡೊದು ಬೇಡ ಎಂದು ಕುಟುಕಿದರು.

    2019ರ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಅವರು ಹಾಸನ ಕ್ಷೇತ್ರವನ್ನು ಮೊಮಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ತುಮಕೂರಿನಿಂದ ಸ್ಪರ್ಧಿಸಿದ್ದರು. ಆದರೆ ಅಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರ ವಿರುದ್ಧ ಸೋಲು ಕಂಡಿದ್ದರು. ಇತ್ತ ಮಲ್ಲಿಕಾರ್ಜುನ ಖರ್ಗೆ ಅವರು ಡಾ.ಉಮೇಶ್ ಜಾಧವ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಸದ್ಯ ರಾಜ್ಯಸಭಾ ಚುನಾವಣೆ ಮೂಲಕ ಈ ಇಬ್ಬರು ನಾಯಕರು ಸಂಸತ್ ಪ್ರವೇಶ ಮಾಡಿದ್ದಾರೆ.

  • ಮುತ್ತೈದೆಯರ ಆಶೀರ್ವಾದ ಪಡೆದ ದೇವೇಗೌಡ ದಂಪತಿ

    ಮುತ್ತೈದೆಯರ ಆಶೀರ್ವಾದ ಪಡೆದ ದೇವೇಗೌಡ ದಂಪತಿ

    ಚಿಕ್ಕಮಗಳೂರು: ಶೃಂಗೇರಿ ಮಠದಲ್ಲಿ ಕೆಲಸ ಮಾಡುವ 50ಕ್ಕೂ ಹೆಚ್ಚು ಮುತ್ತೈದೆಯರಿಂದ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಆಶೀರ್ವಾದ ಪಡೆದಿದ್ದಾರೆ.

    ಮುತ್ತೈದೆಯರಿಗೆಲ್ಲ ಅರಿಶಿನ-ಕುಂಕುಮ, ಬಳೆ, ಸೀರೆ, ತೆಂಗಿನಕಾಯಿ, ಬಾಳೆಹಣ್ಣು ನೀಡಿ ಆಶೀರ್ವಾದ ಪಡೆದರು. ದೇವೇಗೌಡರ ಪತ್ನಿ ಚನ್ನಮ್ಮ ಒಬ್ಬೊಬ್ಬರಿಗೆ ನೀಡಿ ಅರಿಶಿನ-ಕುಂಕುಮ ನೀಡಿ, ಅಕ್ಷತೆ ಹಾಕಿ ನಮಸ್ಕರಿಸಿದರು. ನಂತರ ದೇವೇಗೌಡರು ಕೂಡ ಮುತ್ತೈದೆಯರು ಕುಳಿತ ಜಾಗಕ್ಕೆ ಬಂದು ನೆಲ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.

    ಕಳೆದ ಐದು ದಿನಗಳಿಂದ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಿ ಸಹಸ್ರ ಚಂಡಿಕಾ ಯಾಗ ನಡೆಸುತ್ತಿರುವ ದೇವೇಗೌಡ ದಂಪತಿ ಐದು ದಿನಗಳಿಂದಲೂ ಬೆಳಗ್ಗೆ ಸಂಜೆ ಪೂಜೆಯಲ್ಲಿ ಭಾಗಿಯಾಗುತ್ತಿದ್ದಾರೆ. 10 ಜನ ಋತ್ವಿಜರು, 108 ಪುರೋಹಿತರು ಬೆಳಗ್ಗೆ ಸಂಜೆ ಯಾಗದ ವಿಶೇಷ ಪೂಜೆ ಮಾಡುತ್ತಿದ್ದಾರೆ. ಐದು ದಿನದ ಯಾಗ ನಾಳೆಗೆ ಪೂರ್ಣಾಹುತಿಗೊಳ್ಳಲಿದೆ. ಆದರೆ ಇಂದೇ ಶ್ರೇಷ್ಠ ದಿನವಾಗಿದೆ. ಹಾಗಾಗಿ, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಇಂದಿನ ಪೂಜೆಯಲ್ಲಿ ಭಾಗಿಯಾದರು. ಇಂದಿನ ಪೂಜೆಗೆ ಶೃಂಗೇರಿ ಮಠದ ಕಿರಿಯ ಗುರುಗಳಾದ ವಿಧುಶೇಖರ ಶ್ರೀಗಳು ಸಹ ಭಾಗಿಯಾದರು. ಈ ವೇಳೆ ದೇವೇಗೌಡ ದಂಪತಿ ಗುರುಗಳ ಆಶೀರ್ವಾದ ಪಡೆದರು.

    ಮಾಜಿ ಸಿಎಂ ಕುಮಾರಸ್ವಾಮಿ ಜಿಲ್ಲೆಯ ಕೊಪ್ಪ ತಾಲೂಕಿನ ಜೆಡಿಎಸ್ ಮುಖಂಡ ಗುಡ್ಡೆತೋಟದ ರಂಗನಾಥ್ ಅವರ ಹೋಂಸ್ಟೇನಲ್ಲಿ ಇಂದು ತಂಗಿದ್ದು, ನಾಳೆ ಬೆಳಗ್ಗೆ ಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸಲಿದ್ದಾರೆ. ಯಾಗಕ್ಕೆ ಮಾಜಿ ಸಚಿವ ರೇವಣ್ಣ ಸಹ ಬಂದು ಹೋಗಿದ್ದಾರೆ. ನಾಳೆ ದೇವೇಗೌಡ, ಚನ್ನಮ್ಮ ಹಾಗೂ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಯಾಗ ಪೂರ್ಣಾಹುತಿಯಾಗಲಿದೆ. ದೇವೇಗೌಡರು ಕುಟುಂಬದ ಶ್ರೇಯೋಭಿವೃದ್ಧಿಗೆ ಪೂಜೆ ಅಂದ್ರೆ, ಕುಮಾರಸ್ವಾಮಿಯವರು ಮನ:ಶಾಂತಿಗೆ ಅಂದಿದ್ದಾರೆ. ಆದರೆ ಈ ಯಾಗ ರಾಜಮಹಾರಾಜರ ಕಾಲದಲ್ಲಿ ಕುಟುಂಬ ಹಾಗೂ ಸೈನ್ಯ ಶಕ್ತಿ ಹೆಚ್ಚಲು ನಡೆಸಲಾಗುತಿತ್ತು. ಹಾಗಾಗಿ ದೇವೇಗೌಡರ ಈ ಯಾಗ ಜೆಡಿಎಸ್‍ಗೆ ಶಕ್ತಿ ತುಂಬಲು ಎಂದೇ ವಿಶ್ಲೇಷಿಸಲಾಗುತ್ತಿದೆ.

  • ದೇವೇಗೌಡರ ಸಮ್ಮುಖದಲ್ಲಿ ಎಚ್‍ಡಿಕೆಗೆ ಸ್ವಪಕ್ಷೀಯರಿಂದಲೇ ಕ್ಲಾಸ್

    ದೇವೇಗೌಡರ ಸಮ್ಮುಖದಲ್ಲಿ ಎಚ್‍ಡಿಕೆಗೆ ಸ್ವಪಕ್ಷೀಯರಿಂದಲೇ ಕ್ಲಾಸ್

    – ನಾವು ಪಕ್ಷಕ್ಕಾಗಿ ದುಡಿದಿಲ್ಲವೇ?
    – ಹೊರಟ್ಟಿ ನೇತೃತ್ವದ  ಸಭೆಯಲ್ಲಿ ತರಾಟೆ

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ವಪಕ್ಷೀಯರೇ ತರಾಟೆ ತಗೆದುಕೊಂಡಿದ್ದಾರೆ.

    ಪದ್ಮನಾಭನಗರದ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಎಸ್.ಎಲ್.ಭೋಜೇಗೌಡ, ಕಾಂತರಾಜು, ಅಪ್ಪಾಜಿಗೌಡ, ಮರಿ ತಿಬ್ಬೇಗೌಡ, ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಅನೇಕರು ಶಾಸಕರ ಭವನದಿಂದ ಒಟ್ಟಾಗಿ ಆಗಮಿಸಿದ್ದರು. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ದೇವೇಗೌಡರ ನಿವಾಸಕ್ಕೆ ಬಂದಿದ್ದರು. ಆದರೆ ಸಭೆಗೆ 17 ಮೇಲ್ಮನೆಯ ಜೆಡಿಎಸ್ ಸದಸ್ಯರ ಪೈಕಿ ರಮೇಶ್ ಗೌಡ ಮತ್ತು ಬಿ.ಎಂ.ಫಾರೂಕ್ ಗೈರಾಗಿದ್ದರು.

    ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯರು ಅಸಮಾಧಾನ ಹೊರ ಹಾಕಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಸರ್ಕಾರ ಇದ್ದಾಗಲೂ ಸರಿಯಾಗಿ ನಡೆಸಿಕೊಂಡಿಲ್ಲ. ಸರ್ಕಾರ ಹೋದ ಮೇಲೂ ಸರಿಯಾಗಿ ನಡೆಸಿಕೊಂಡಿಲ್ಲ. ಕಳೆದ ವಾರ ನಡೆದ ಮಾಧ್ಯಮ ಸಂವಾದದಲ್ಲಿ, ಅವರ ರೋಗ ಏನು ಅಂತ ಹೇಳಿಕೊಂಡರೆ ತಾನೆ ಚಿಕಿತ್ಸೆ ನೀಡುವುದಕ್ಕೆ ಸಾಧ್ಯ ಅಂತ ಕಿಚಾಯಿಸಿದ್ದರು. ಇಂತಹ ಹೇಳಿಕೆ ಕೊಟ್ಟರೆ ಹೇಗೆ ಎಂದು ಗುಡುಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ನೀವು ಸಮಾಧಾನ ಮಾಡುತ್ತೀರಾ. ಎಚ್.ಡಿ.ಕುಮಾರಸ್ವಾಮಿ ಬೈತಾರೆ. ಹೀಗಿದ್ದರೆ ನಾವು ಹೇಗೆ ನಿಮ್ಮ ಜೊತೆ ಇರುವುದು ಎಂದು ಪರಿಷತ್ ಸದಸ್ಯರು ದೇವೇಗೌಡ ಅವರ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

    ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿಗಮ ಮಂಡಳಿ ಸ್ಥಾನ ಕೇಳಿದ್ದೇವು. ಆದರೆ ಅವರು ಕೊಡಲಿಲ್ಲ. ವರ್ಗಾವಣೆಗಾಗಿ ನಾವು ಮಾಡಿದ್ದ ಶಿಫಾರಸುಗಳನ್ನ ಅಧಿಕಾರಿಗಳು ಮಾಡಿಕೊಟ್ಟಿಲ್ಲ. ಈ ಬಗ್ಗೆ ಮಾತನಾಡುವುದಕ್ಕೆ ಕುಮಾರಸ್ವಾಮಿ ಅವರು ನಮಗೆ ಸಮಯನ್ನೇ ಕೊಡಲಿಲ್ಲ. ನಾವು ಪಕ್ಷಕ್ಕಾಗಿ ದುಡಿದಿಲ್ಲವೇ? ಸರ್ಕಾರ ಇದ್ದಾಗ ನಮ್ಮನ್ನ ದೂರ ಇಟ್ಟರು, ನಮ್ಮ ಸಮಸ್ಯೆಯನ್ನೆ ಕೇಳಿಲ್ಲ. ಕಾಂಗ್ರೆಸ್ ಸಚಿವರು ನಮ್ಮ ಕೆಲಸಗಳನ್ನ ಮಾಡಿಕೊಡಲಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಗಮನಕ್ಕೆ ತಂದರೂ ಏನು ಪ್ರಯೋಜನವಾಗಲಿಲ್ಲ. ಹೀಗಿದ್ದರೆ ನಾವು ಹೇಗೆ ಪಕ್ಷದ ಜೊತೆ ಇರಬೇಕು ಹೇಳಿ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಹುದ್ದೆ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ವಿಧಾನ ಪರಿಷತ್ ಸದಸ್ಯರ ತರಾಟೆಯಿಂದ ಹೆಚ್ಚೆತ್ತುಕೊಂಡ ಎಚ್.ಡಿ.ಕುಮಾರಸ್ವಾಮಿ ಅವರು, ನನ್ನಿಂದ ತಪ್ಪು ಆಗಿದ್ದರೆ, ನಿಮ್ಮ ಮನಸ್ಸು ನೊಂದಿದ್ದರೆ ಕ್ಷಮೆ ಕೋರುತ್ತೇನೆ. ನಾನು ಸಿಎಂ ಆಗಿದ್ದಾಗ 24 ಗಂಟೆಯೂ ಒತ್ತಡದಲ್ಲಿ ಇರುತ್ತಿದ್ದೆ. ಶಾಸಕರು, ಸಚಿವರು ಮತ್ತು ಅಧಿಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿತ್ತು. ಈ ಸಂದರ್ಭದಲ್ಲಿ ನಿಮ್ಮನ್ನು ಕಡೆಗಣನೆ ಮಾಡಿದ್ದರೆ ಇದಕ್ಕೆ ಕ್ಷಮೆ ಕೋರುತ್ತೇನೆ. ಮುಂದೆ ಎಚ್.ಡಿ.ದೇವೇಗೌಡರ ಅಣತಿಯಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಅಂತ ಕೇಳಿದರು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಈ ವೇಳೆ ಮಧ್ಯೆ ಪ್ರವೇಶಿಸಿ ಎಲ್ಲರನ್ನೂ ಕೈ ಮುಗಿದು ಕೇಳಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಣ್ಣ ಮನಸ್ತಾಪದಿಂದ ನಾವು ಪ್ರಾದೇಶಿಕ ಪಕ್ಷವನ್ನು ಹಾಳು ಮಾಡುವುದು ಬೇಡ. ನಮ್ಮನ್ನು ನಂಬಿ ಸಾವಿರಾರು ಕಾರ್ಯಕರ್ತರು ಇದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾನು ಬುದ್ಧಿ ಹೇಳುತ್ತೇನೆ. ಮುಂದೆ ಹೀಗೆ ಆಗದಂತೆ ನಾನು ಭಾಷೆ ಕೊಡುತ್ತೇನೆ ಎಂದು ಸಭೆಯಲ್ಲಿ ಭಾವುಕರಾದರು.

    ಎಚ್.ಡಿ.ದೇವೇಗೌಡ ಅವರ ಮಾತಿಗೆ ಹಾಗೂ ಎಚ್.ಡಿ.ಕುಮಾರಸ್ವಾಮಿ ಕ್ಷಮೆಗೆ ಬೆಲೆ ನೀಡಿ ಪಕ್ಷದ ಸಂಘಟನೆಗೆ ಮುಂದಾಗುತ್ತೇವೆ ಎಂದು ವಿಧಾನಸಭೆಯ ಜೆಡಿಎಸ್ ಸದಸ್ಯರು ಪ್ರಮಾಣ ಮಾಡಿದರು. ಈ ಮೂಲಕ ಸಂಧಾನ ಸಭೆ ಸಫಲವಾಗಿದೆ.

  • ಮೋದಿಗೆ ದೇಶದ ಆರ್ಥಿಕತೆಗಿಂತ 370ರ ಬಗ್ಗೆಯೇ ಹೆಚ್ಚು ನಂಬಿಕೆ: ಎಚ್‍ಡಿಡಿ ಟಾಂಗ್

    ಮೋದಿಗೆ ದೇಶದ ಆರ್ಥಿಕತೆಗಿಂತ 370ರ ಬಗ್ಗೆಯೇ ಹೆಚ್ಚು ನಂಬಿಕೆ: ಎಚ್‍ಡಿಡಿ ಟಾಂಗ್

    – ಐಟಿಗೆ ಪತ್ರ ಬರೆದ್ರೆ ನನ್ನ ವ್ಯಕ್ತಿತ್ವ ನನ್ನಿಂದಲೇ ಹಾಳಾಗುತ್ತೆ
    – ರಾಜಣ್ಣಗೆ ಎಚ್‍ಡಿಡಿ ತಿರುಗೇಟು
    – ನಾನು ಮಾಜಿ ಪ್ರಧಾನಿ ಅನ್ನೋದನ್ನ ಕೆಲವ್ರು ಮರೆತಿದ್ದಾರೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಆರ್ಥಿಕತೆಗಿಂತ ಸಂವಿಧಾನದ 370 ವಿಧಿ ಬಗ್ಗೆಯೇ ಹೆಚ್ಚು ನಂಬಿಕೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಲೇವಡಿ ಮಾಡಿದ್ದಾರೆ.

    ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ನಿರ್ಮಲಾ ಸೀತರಾಮನ್ ಪತಿ ಬಿಜೆಪಿ ಪಕ್ಷದವರಲ್ಲ. ಆದರೆ ಸದ್ಯ ದೇಶದ ಆರ್ಥಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ ಅವರ ಹೇಳಿಕೆ ಸರಿಯಾಗಿದೆ. ವಿಶ್ಚ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳು ಪರಿಸ್ಥಿತಿ ಸರಿ ಇಲ್ಲ ಅಂತ ಹೇಳಿದ್ದಾರೆ. ಪ್ರಧಾನಿ ಮೋದಿ ಅವರಿಗೂ ಇದರ ಬಗ್ಗೆ ಗೊತ್ತಿದೆ. ಆದರೆ ಮೋದಿ ಅವರಿಗೆ 370 ವಿಧಿಯನ್ನು ರದ್ದುಗೊಳಿಸಿದ್ದರ ಬಗ್ಗೆ ಹೆಚ್ಚಿನ ನಂಬಿಕೆ ಇದೆ. ಇದನ್ನೆ ಮುಂದಿಟ್ಟುಕೊಂಡು ಎರಡು ರಾಜ್ಯಗಳ ಚುನಾವಣೆ ಮೋದಿ ಮಾಡುತ್ತಿದ್ದಾರೆ ಎಂದು ಕುಟುಕಿದರು.

    ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಮಸೂದೆ ಪಾಸಾಗಿದೆ. ಈಗ ರದ್ದು ಗೊಳಿಸಿದ ವಿಧಿಯನ್ನು ಯಾರು ವಾಪಸ್ ತರುತ್ತೀರಾ ಅಂತ ಮೋದಿ ಸವಾಲು ಹಾಕುತ್ತಾರೆ. ಈಗ ಅದರ ಮೇಲೆ ಚುನಾವಣೆ ಆಗುತ್ತಿದೆ. ಸ್ಥಳೀಯ ವಿಷಯಗಳನ್ನು ಮುಖ್ಯವಾಗಿ ಪ್ರಚಾರಕ್ಕೆ ಬಳಸಬೇಕು. ಆದರೆ ಈಗ ಅದು ಆಗುತ್ತಿಲ್ಲ ಎಂದು ಪರೋಕ್ಷವಾಗಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ನನ್ನ ಮೇಲೆ ಐಟಿ ದಾಳಿಗೆ ಕಾರಣ ಅಂತ ಹೇಳಿದ್ದ ಮಾಜಿ ಶಾಸಕ ರಾಜಣ್ಣ ಅವರಿಗೆ ಎಚ್.ಡಿ.ದೇವೇಗೌಡ ತಿರುಗೇಟು ಕೊಟ್ಟಿದ್ದಾರೆ. ರಾಜಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ದೇಶದ ಪ್ರಧಾನಿ ಆದವನು ನಾನು. ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯುವುದಕ್ಕೆ ಆಗುತ್ತಾ? ಪತ್ರ ಬರೆದರೆ ನನ್ನ ವ್ಯಕ್ತಿತ್ವಕ್ಕೆ ನಾನೇ ಕುಂದು ಮಾಡಿಕೊಂಡಂತೆ. ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

    ರೈತರ ಸಾಲಮನ್ನಾ ಸಂಪೂರ್ಣ ಮಾಡಲು ಆಗಲ್ಲ ಎನ್ನುವ ಸಿಎಂ ಯಡಿಯೂರಪ್ಪ ಹೇಳಿಕೆಗೆ ಎಚ್.ಡಿ. ದೇವೇಗೌಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಸಿಎಂ ಯಡಿಯೂರಪ್ಪ ಹಾಗೇ ಮಾಡುವುದಿಲ್ಲ ಅಂತ ನಂಬಿಕೆ ಇದೆ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ 24 ಗಂಟೆಯೊಳಗೆ ಸಾಲಮನ್ನಾ ಮಾಡಬೇಕು ಅಂತ ಯಡಿಯೂರಪ್ಪ ಒತ್ತಾಯ ಮಾಡಿದ್ದರು. ಕುಮಾರಸ್ವಾಮಿ ಸಿಎಂ ಆದಾಗ ಸಹಕಾರಿ ಬ್ಯಾಂಕುಗಳ ಸಾಲಮನ್ನಾಕ್ಕೆ ಹಣ ಎತ್ತಿಟ್ಟಿದರು. ಸಹಕಾರಿ ಬ್ಯಾಂಕ್‍ನ ಸಾಲ ಬಹುತೇಕ ಪೂರ್ಣವಾಗಿದೆ. ಶೆಡ್ಯುಲ್ಡ್ ಬ್ಯಾಂಕ್ ಸಾಲದ ಬಗ್ಗೆ ಸ್ವಲ್ಪ ಗೊಂದಲವಿದೆ. ನಾನು ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತಾಡಿದ್ದೇನೆ. ಸಹಕಾರ ಬ್ಯಾಂಕ್ ಸಾಲಮನ್ನಾಗೆ ಇಟ್ಟಿದ್ದ ಹಣದಲ್ಲಿ ಇನ್ನು ಸ್ವಲ್ಪ ಉಳಿದಿದೆ. ಉಳಿದ ಹಣ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಬಳಸಿಕೊಳ್ಳಲಾಗುತ್ತಿದೆ ಅನ್ನಿಸುತ್ತದೆ.

    ಕಾಂಗ್ರೆಸ್ ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದೇವೇಗೌಡ ಅವರು, ಕಾಂಗ್ರೆಸ್ ತೀರ್ಮಾನದ ಬಗ್ಗೆ ನನಗೇನು ಗೊತ್ತಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ವಾಪಸ್ ಬಂದರೆ ಕರೆದುಕೊಳ್ಳುತ್ತೇವೆ ಅಂತ ಹೇಳಿದ್ದನ್ನು ಕೇಳಿದ್ದೇನೆ. ಆದರೆ ಅವ್ರ ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತದೆ ಎನ್ನುವುದು ನನಗೇನು ಗೊತ್ತು. ಆ ಬಗ್ಗೆ ಅವರ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

    ನಮ್ಮ ಪಕ್ಷದಲ್ಲಿ ಮೂವರು ಮಾತ್ರ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಅನರ್ಹ ಶಾಸಕರನ್ನು ವಾಪಸ್ ಕರೆಯುವುದಿಲ್ಲ. ಈಗಾಗಲೇ ಅಭ್ಯರ್ಥಿ ಹಾಕುತ್ತೇವೆ ಅಂತ ಘೋಷಣೆ ಮಾಡಿದ್ದೇವೆ. ಅವರನ್ನು ಮತ್ತೆ ಯಾಕೆ ವಾಪಸ್ ಕರೆಯೋಣ? 15 ಕ್ಷೇತ್ರದಲ್ಲೂ ಅಭ್ಯರ್ಥಿ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಪತನ ಆಗುವ ವಿಷಯಕ್ಕೆ ನಾನು ಏನು ಮಾತನಾಡುವುದಿಲ್ಲ. ಪ್ರಧಾನಿ ಮೋದಿ ಹೆಸರು ಬಳಸಿಕೊಂಡು ಅವರು ಚುನಾವಣೆ ಎದುರಿಸುತ್ತಾರೆ. ಉಪ ಚುನಾವಣೆಯಲ್ಲೂ ಅದನ್ನೇ ಮಾಡುತ್ತಾರೆ. ಮೋದಿ ಅವರಿಗೆ ಪರ್ಯಾಯ ನಾಯಕರು ಬೇಕು. ಆದರೆ ನಮ್ಮದು ಪ್ರಾದೇಶಿಕ ಪಕ್ಷ, ರಾಷ್ಟ್ರೀಯ ಪಕ್ಷ ಅಲ್ಲ. ನಾವು ಪ್ರಾದೇಶಿಕ ನಾಯಕರು. ನಾನು ಮಾಜಿ ಪ್ರಧಾನಿ ಎನ್ನುವುದು ಕೆಲವರಿಗೆ ಮರೆತೇ ಹೋಗಿದೆ ಎಂದು ಪರೋಕ್ಷವಾಗಿ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಆಗುತ್ತದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.

  • ಇವ್ರ ಕೆಟ್ಟ ರಾಜಕಾರಣಕ್ಕೆ ನಾನು ಭಾಗಿಯಾಗಲ್ಲ: ಎಚ್‍ಡಿಡಿ

    ಇವ್ರ ಕೆಟ್ಟ ರಾಜಕಾರಣಕ್ಕೆ ನಾನು ಭಾಗಿಯಾಗಲ್ಲ: ಎಚ್‍ಡಿಡಿ

    – ಜವರಾಯಿಗೌಡ ಕಾಂಗ್ರೆಸ್‍ಗೆ ಹೋಗಲ್ಲ

    ಬೆಂಗಳೂರು: ಮಾಜಿ ಸಚಿವ ಸಾರಾ ಮಹೇಶ್ ಹಾಗೂ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರ ಕೆಟ್ಟ ರಾಜಕಾರಣಕ್ಕೆ ನಾನು ಭಾಗಿಯಾಗಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.

    ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಮತ್ತು ಸಾರಾ ಮಹೇಶ್ ಮಾತುಗಳನ್ನು ರಾಜ್ಯದ ಜನ ಕೇಳಿದ್ದಾರೆ. ಸಾರಾ ಮಹೇಶ್ ರಾಜೀನಾಮೆ ನೀಡಿದ್ದು ಸತ್ಯ. ಅವರು ಸ್ಪೀಕರ್ ಸೆಕ್ರೆಟರಿಗೆ ರಾಜೀನಾಮೆ ಪತ್ರ ಕೊಟ್ಟಿದ್ದಾರೆ. ಆದರೆ ಸ್ಪೀಕರ್ ಈ ಪಂಥಾಹ್ವಾನ ಯಾಕೆ ಅಂತ ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ವಾಪಸ್ ಪಡೆಯುತ್ತೇನೆ ಅಂತ ಸಾರಾ ಮಹೇಶ್ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ವಿಶ್ವನಾಥ್, ಮಹೇಶ್ ವಾರ್- ನಾಳೆ ಬೆಳಗ್ಗೆ 9ಕ್ಕೆ ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ

    ಒಬ್ಬರು ಚಾಮುಂಡಿಬೆಟ್ಟಕ್ಕೆ ಬನ್ನಿ ಅಂತ ಹೇಳುತ್ತಾರೆ. ಇನ್ನೊಬ್ಬರು ಅದರ ಅವಶ್ಯಕತೆ ಇಲ್ಲ ಎನ್ನುತ್ತಾರೆ. ನಾನು ಎಚ್.ವಿಶ್ವನಾಥ್ ಬಗ್ಗೆ ಮಾತನಾಡುವುದಿಲ್ಲ. ಆಣೆ-ಸತ್ಯ-ಪ್ರಮಾಣ ಇವೆಲ್ಲ ಯಾಕೆ ಬೇಕು? ಆವೇಶದಿಂದ ಎಲ್ಲರೂ ಮಾತನಾಡುತ್ತಾರೆ. ಇದರಿಂದ ಏನು ಪ್ರಯೋಜನವಾಗುತ್ತದೆ? ಸಾರಾ ಮಹೇಶ್ ಜೊತೆ ಮಾತನಾಡಿದ್ದೇನೆ. ಬುಧವಾರ ಅವರು ರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂದು ಸ್ಪಷ್ಟನೆ ನೀಡಿದರು.

    ವಿಧಾನ ಪರಿಷತ್‍ನ 4 ಪದವೀಧರ ಕ್ಷೇತ್ರಗಳ ಚುನಾವಣೆ ಜೂನ್‍ನಲ್ಲಿ ನಡೆಯುತ್ತದೆ. ನಮ್ಮ ಅಭ್ಯರ್ಥಿಗಳ ಸಭೆಯನ್ನು 18ರಂದು ಕರೆದಿದ್ದೇನೆ. ಅಭ್ಯರ್ಥಿಗಳು, ಮಾಜಿ, ಹಾಲಿ ಶಾಕರಿಗೆ ಪತ್ರ ಬರೆದು, ಸಭೆಗೆ ಆಹ್ವಾನ ನೀಡಿದ್ದೇನೆ. ಎಲ್ಲರ ಜೊತೆಗೆ ಸಮಾಲೋಚನೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

    ಪಕ್ಷದ ಮುಖಂಡ ಜವರಾಯಿಗೌಡ ಕಾಂಗ್ರೆಸ್‍ಗೆ ಹೋಗುವುದಿಲ್ಲ. ಎಲ್ಲಾ ಕಡೆ ತಪ್ಪು ಸುದ್ದಿ ಹರಡಿಸಲಾಗುತ್ತದೆ. ಕ್ಷೇತ್ರದ ಪಟ್ಟಭದ್ರ ಹಿತಾಸಕ್ತಿಗಳು ಸುಮ್ಮನೆ ಈ ಸುದ್ದಿ ಹರಡಿಸುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಈ ಬಾರಿ ಕಾರ್ಯಕರ್ತರು ಅವರಿಗಾಗಿಯೇ ದುಡಿಯುತ್ತಾರೆ ಎಂದು ಸ್ಪಷ್ಟನೆ ನೀಡಿದರು.

    ಅನರ್ಹ ಶಾಸಕರ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ 17 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ ಹಾಕುತ್ತೇವೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಮುಖಂಡರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

    ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ಮಾಡುತ್ತೆ ಅಂತ ಕೆಲವರು ಹೇಳುತ್ತಿದ್ದಾರೆ. ಆದರೆ ಎಲ್ಲಾ ಕ್ಷೇತ್ರದಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ. ಯುವಕರು ನಾವು ಸ್ಪರ್ಧೆ ಮಾಡುತ್ತೇವೆ ಅಂತ ಮುಂದೆ ಬರುತ್ತಿದ್ದಾರೆ. ಹೀಗಾಗಿ 17 ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುತ್ತೇವೆ ಎಂದು ಹೇಳಿದರು.

  • ಸುಪ್ರೀಂ ದೇವೇಗೌಡರ ಅನುಕೂಲಕ್ಕೆ ತಕ್ಕಂತೆ ತೀರ್ಪು ಕೊಡಬೇಕಿತ್ತಾ?: ಬಿಎಸ್‍ವೈ ಕಿಡಿ

    ಸುಪ್ರೀಂ ದೇವೇಗೌಡರ ಅನುಕೂಲಕ್ಕೆ ತಕ್ಕಂತೆ ತೀರ್ಪು ಕೊಡಬೇಕಿತ್ತಾ?: ಬಿಎಸ್‍ವೈ ಕಿಡಿ

    ಬೆಂಗಳೂರು: ಸುಪ್ರೀಂಕೋರ್ಟ್ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಅನುಕೂಲಕ್ಕೆ ತಕ್ಕಂತೆ ತೀರ್ಪು ಕೊಡಬೇಕಿತ್ತಾ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಎಚ್.ಡಿ.ದೇವೇಗೌಡ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ದೇವೇಗೌಡರ ಪ್ರತಿಯೊಂದ ಶಬ್ದಕ್ಕೂ ಗೌರವ ಇದೆ. ಸುಪ್ರೀಂಕೋರ್ಟ್ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ? ಅವರಿಂದ ಇಂತಹ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ದೇವೇಗೌಡರ ಹೇಳಿಕೆಯಿಂದ ನನಗೆ ತುಂಬ ನೋವಾಗಿದೆ. ಅವರು ತಮ್ಮ ಹೇಳಿಕೆ ವಾಪಸ್ ತೆಗೆದುಕೊಳ್ಳಲಿ ಎಂದು ಹೇಳಿದರು.

    ವಿಪಕ್ಷಗಳು ಅನಗತ್ಯವಾಗಿ ಸುಪ್ರೀಂಕೋರ್ಟ್ ತೀರ್ಮಾನದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ತೀರ್ಪು ಬರುವವರೆಗೂ ಕಾದು ನೋಡಿ ಮಾತನಾಡಬೇಕು. ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ ಎಂದು ಹೇಳಿದರು.

    ಉಪಚುನಾವಣೆಗೆ ತಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಸುಪ್ರೀಂಕೋರ್ಟ್ ಕೂಲಂಕುಶವಾಗಿ ಪರಿಶೀಲನೆ ಮಾಡಿ ಅನರ್ಹ ಶಾಸಕರ ಬಗ್ಗೆ ತೀರ್ಮಾನ ಕೈಗೊಂಡಿದೆ. ಚುನಾವಣೆಯನ್ನು ಮುಂದಿನ ತಿಂಗಳು 22 ರವರೆಗೆ ವಿಚಾರಣೆ ಮುಂದೂಡಿದೆ. ವಿರೋಧ ಪಕ್ಷಗಳು ಸುಪ್ರೀಂಕೋರ್ಟ್ ಮೇಲೆಯೇ ಅನುಮಾನ ವ್ಯಕ್ತಪಡಿಸುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಉಪ ಚುನಾವಣೆ ತಡೆಯಿಂದ ಅನರ್ಹ ಶಾಸಕರಿಗೆ ರಿಲೀಫ್ ಸಿಕ್ಕಿದೆ ಎಂದು ಹೇಳಿದರು.

    ಎಚ್‍ಡಿಡಿ ಹೇಳಿದ್ದೇನು?:
    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಚ್.ಡಿ.ದೇವೇಗೌಡ ಅವರು, ಸುಪ್ರೀಂಕೋರ್ಟಿನಲ್ಲಿ ಚುನಾವಣೆ ಆಯೋಗ ಈ ಚುನಾವಣೆಯನ್ನು ಮುಂದೂಡಬಹುದು ಎಂದು ಹೇಳಿದೆ. ಹೀಗಾಗಿ ಉಪಚುನಾವಣೆ ಮುಂದೂಡಿಕೆಯಾಗಿದೆ. ಆಯೋಗಕ್ಕೆ ಕೇಂದ್ರ ಸರ್ಕಾರ ಸೂಚಿಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಈ ಬೆಳವಣಿಗೆಯಿಂದಾಗಿ ಸ್ವಾಯತ್ತ ಸಂಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪ್ರಭಾವ ಕೇಂದ್ರ ಸರ್ಕಾರದ ಮೇಲೆ ಇರಬಹುದು. ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಮೂಲಕ ಹೀಗೆ ಮಾಡಿಸಿರಬಹುದು. ಹೀಗಾಗಿ ಚುನಾವಣಾ ಆಯೋಗ ಅನರ್ಹ ಶಾಸಕರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಸ್ಥಿಕೆವಹಿಸಿದೆ ಅನ್ನಿಸುತ್ತಿದೆ ಎಂದು ಎಚ್‍ಡಿಡಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು.

  • ಕಾರ್ಯಕರ್ತರಿಗೆ ಸ್ಥಾನಮಾನ ಕೊಡ್ಲಿಲ್ಲವೆಂದು ಎಚ್‍ಡಿಡಿ ಕಣ್ಣೀರು ಹಾಕಿದ್ದಾರೆ: ದತ್ತಾ

    ಕಾರ್ಯಕರ್ತರಿಗೆ ಸ್ಥಾನಮಾನ ಕೊಡ್ಲಿಲ್ಲವೆಂದು ಎಚ್‍ಡಿಡಿ ಕಣ್ಣೀರು ಹಾಕಿದ್ದಾರೆ: ದತ್ತಾ

    – ಸಮಾವೇಶ ಪ್ರಾರಂಭಕ್ಕೆ ಟೈಂ, ಘಳಿಗೆ ನೋಡಿದ ಜೆಡಿಎಸ್
    – ಜೆಡಿಎಸ್ ಪಾದಯಾತ್ರೆ ಎರಡು ತಿಂಗಳು ಮುಂದೂಡಿಕೆ
    – ಪ್ರಾದೇಶಿಕ ಪಕ್ಷ ಬೆಳೆಯಲು ಕುಟುಂಬ ರಾಜಕಾರಣ ಬೇಕು

    ಬೆಂಗಳೂರು: ಪಕ್ಷದ ಕಾರ್ಯಕರ್ತರಿಗೆ ಸ್ಥಾನಮಾನ ನೀಡಲಿಲ್ಲ ಅಂತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಣ್ಣೀರು ಹಾಕಿದ್ದಾರೆ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತಾ ಹೇಳಿದ್ದಾರೆ.

    ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷ ಇವತ್ತು ಸಂಕಷ್ಟದಲ್ಲಿ ಇದೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ. ಮತ್ತೆ ಪಕ್ಷ ಕಟ್ಟೋಣ. ಅಧಿಕಾರಿಕ್ಕೆ ಬಂದಾಗಲೆಲ್ಲ ನಮ್ಮ ಜೊತೆ ಸೇರಿಕೊಂಡವರು ಸರಿಯಾಗಿ ಮೆರೆಯುತ್ತಾರೆ. ಆದರೆ ನಮ್ಮ ಕಾರ್ಯಕರ್ತರಿಗೆ ಏನು ಸಿಗುವುದಿಲ್ಲ. ಆಗಿದ್ದು ಈಗ ಆಗಿ ಹೋಯಿತು. ಮತ್ತೆ ಪಕ್ಷ ಸಂಘಟನೆ ಮಾಡೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ.

    ರಾಜ್ಯದಲ್ಲಿ ಸಂಪುಟ ರಚನೆ ಮಾಡಲು ಬಿಜೆಪಿ ಹೈಕಮಾಂಡ್‍ಗೆ 15 ದಿನಗಳಿಂದ ಆಗಿಲ್ಲ. ನಮ್ಮ ರಾಜ್ಯದ ಮಂತ್ರಿಗಳು ಯಾರು ಆಗಬೇಕು ಅಂತ ಪ್ರಧಾನಿ ಮೋದಿ ತೀರ್ಮಾನ ಮಾಡುವುದು ಅಂದರೆ ನಮಗೆ ನಾಚಿಕೆ ಆಗಬೇಕು. ಇದು ಕರ್ನಾಟಕಕ್ಕೆ ಅವಮಾನ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅದನ್ನು ನಿಭಾಯಿಸಲು ಯಾವ ಸಚಿವರೂ ಇಲ್ಲ. ಆದರೆ ಜೆಡಿಎಸ್ ರಾಜ್ಯದಿಂದಲೇ ಅಧಿಕಾರ ಮಾಡುತ್ತದೆ. ಹೀಗಾಗಿ ರಾಜ್ಯಕ್ಕೆ ಜೆಡಿಎಸ್ ಬೇಕು ಎಂದು ಬಿಜೆಪಿ ವಿರುದ್ಧ ಗುಡುಗಿದರು.

    ಜೆಡಿಎಸ್ ಪಾದಯಾತ್ರೆಯು ಆಗಸ್ಟ್ 20ರಿಂದ ಆರಂಭವಾಗಬೇಕಿತ್ತು. ಆದರೆ ಮಳೆಗಾಲ, ಹಬ್ಬ ಹರಿದಿನ ಹಿನ್ನೆಲೆಯಲ್ಲಿ ಎರಡು ತಿಂಗಳು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.

    ಪಕ್ಷ ಬೆಳೆಯಬೇಕಾದರೆ 18ರಿಂದ 35 ವರ್ಷದ ಯುವಕರು ಅವಶ್ಯಕತೆ ಇದೆ. ಅಂತಹ ಯುವಕರು ನಮ್ಮ ಪಕ್ಷಕ್ಕೆ ಸೇರಬೇಕು. ಯುವಕರ ಪಡೆ ನಿರ್ಮಾಣ ಮಾಡಿ ಪಕ್ಷ ಸಂಘಟನೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟರು.

    ಕುಟುಂಬ ರಾಜಕಾರಣ ತಪ್ಪಲ್ಲ. ತಮಿಳುನಾಡು, ಆಂಧ್ರಪ್ರದೇಶ, ಒಡಿಶಾದಲ್ಲಿ ಕುಟುಂಬ ರಾಜಕಾರಣ ಪಕ್ಷ ಆಡಳಿತ ಮಾಡುತ್ತಿಲ್ಲವೇ. ಕುಟುಂಬ ರಾಜಕಾರಣ ಹಣೆ ಪಟ್ಟಿಯನ್ನು ಜೆಡಿಎಸ್‍ಗೆ ಯಾಕೆ ಕೊಡಬೇಕು. ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಬೇಕು. ಪ್ರಾದೇಶಿಕ ಪಕ್ಷ ಬೆಳೆಯಲು ಕುಟುಂಬ ರಾಜಕಾರಣ ಬೇಕು ಎಂದು ದೇವೇಗೌಡರ ಕುಟುಂಬ ರಾಜಕಾರಣ ಪರವಾಗಿ ಬ್ಯಾಟ್ ಬೀಸಿದರು.

    ಪ್ರಾದೇಶಿಕ ಪಕ್ಷಕ್ಕೆ ಕುಟುಂಬ ರಾಜಕಾರಣ ಎಂಬ ಆರೋಪ ಮಾಡುವುದು ಸುಲಭ. ಆದರೆ ಪಕ್ಷ ಕಟ್ಟುವ ಕಷ್ಟ ನಮಗೆ ಗೊತ್ತು. ಬಿಜು ಪಟ್ನಾಯಕ್ ಅವರ ಪುತ್ರ ಹಾಗೂ ಕರುಣಾನಿಧಿ ಅವರ ಮಗ ಅಲ್ಲಿನ ಪ್ರಾದೇಶಿಕ ಪಕ್ಷ ಮುಂದುವರಿಸಬೇಕಾಗಿ ಬಂತು. ತಂದೆ ಕಟ್ಟಿದ ಪಕ್ಷವನ್ನು ಮಕ್ಕಳೇ ಮುಂದುವರಿಸುತ್ತಿದ್ದಾರೆ. ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಕುಟುಂಬ ರಾಜಕಾರಣ ಎನ್ನುವುದಾ? ಪಕ್ಷ ಕಟ್ಟಲು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಕಳಿಸಿದರೆ ಏನು ಅಂದುಕೊಳ್ಳುತ್ತಾರೋ ಎಂದು ಯೋಚಿಸಬೇಡಿ. ಹೀಗೆ ಯೋಚಿಸಿ ಯಾರನ್ನೋ ಕಳಿಸಿದರೆ ಪಕ್ಷ ಸಂಘಟನೆ ಆಗಲ್ಲ. ಮುಖ ಪರಿಚಯ ಇರುವ ವ್ಯಕ್ತಿಯೇ ಆಗಬೇಕು ಎಂದು ಹೇಳಿದರು.

    ಇಂದು 12 ಗಂಟೆ ನಂತರ ರಾಹುಕಾಲ ಪ್ರಾರಂಭವಾಗುತ್ತಿತ್ತು. ಹೀಗಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖಂಡರು ಬಾರದೇ ಇದ್ದರೂ ದೀಪ ಬೆಳಗಿಸಿ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಬಳಿಕ ಎಚ್.ಡಿ.ದೇವೇಗೌಡ ಅವರು ಬಂದ ನಂತರ ಕಾರ್ಯಕ್ರಮ ಮುಂದುವರಿಸಲು ನಿರ್ಧಾರ ಮಾಡಲಾಯಿತು.

  • ಒಪ್ಪಂದದಂತೆ 5 ವರ್ಷ ಅಧಿಕಾರ ನೀಡಿದ್ರೆ ಮಾತ್ರ ಬೆಂಬಲ: ‘ಕೈ’ ನಾಯಕರಿಗೆ ಎಚ್‍ಡಿಡಿ ಎಚ್ಚರಿಕೆ

    ಒಪ್ಪಂದದಂತೆ 5 ವರ್ಷ ಅಧಿಕಾರ ನೀಡಿದ್ರೆ ಮಾತ್ರ ಬೆಂಬಲ: ‘ಕೈ’ ನಾಯಕರಿಗೆ ಎಚ್‍ಡಿಡಿ ಎಚ್ಚರಿಕೆ

    – ಸಿದ್ದರಾಮಯ್ಯ ಸಿಎಂ ಆಗೋದಾದ್ರೆ ಜೆಡಿಎಸ್ ಬೆಂಬಲ ಇಲ್ಲ
    – ಖರ್ಗೆ ಸಿಎಂ ಮಾಡೋಕೂ ಎಚ್‍ಡಿಡಿ ವಿರೋಧ

    ಬೆಂಗಳೂರು: ಒಪ್ಪಂದದ ಪ್ರಕಾರ ಐದು ವರ್ಷ ಜೆಡಿಎಸ್‍ಗೆ ಅಧಿಕಾರ ಕೊಟ್ಟರೆ ಮಾತ್ರ ಬೆಂಬಲ ಕೊಡುತ್ತೇವೆ. ಇಲ್ಲ ಅಂದರೆ ನಾವು ಸರ್ಕಾರಕ್ಕೆ ಕೊಟ್ಟ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಕಾಂಗ್ರೆಸ್ ಹೈಕಮಾಂಡ್‍ಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

    ಪದ್ಮನಾಭನಗರದ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಟ್ರಬಲ್ ಶೂಟರ್, ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಎಚ್.ಡಿ.ದೇವೇಗೌಡ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಶಿಷ್ಯರ ವಿರುದ್ಧ ಗುಡುಗಿದ್ದಾರೆ. ಅಷ್ಟೇ ಅಲ್ಲದೆ ಸಿಎಂ ಹುದ್ದೆ ಬದಲಾವಣೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಕೆಲ ಶಾಸಕರು ಸಿದ್ದರಾಮಯ್ಯ ಅವರು ಸಿಎಂ ಆಗಲಿ ಎನ್ನುತ್ತಿದ್ದಾರೆ ಎಂದು ದೇವೇಗೌಡರ ಮುಂದೆ ಸಚಿವ ಡಿಕೆ ಶಿವಕುಮಾರ್ ಅವರು ವಿಷಯ ಪ್ರಸ್ತಾಪಿಸಿದ್ದಾರೆ. ಇದರಿಂದ ಕೆಂಡಾಮಂಡಲವಾದ ಎಚ್‍ಡಿಡಿ, ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗುವುದಾದರೆ ನಮ್ಮ ಬೆಂಬಲವಿಲ್ಲ. ಈ ಎಲ್ಲ ಬೆಳವಣಿಗೆಗೆ ಕಾರಣವೇ ಸಿದ್ದರಾಮಯ್ಯ. ಹೀಗಿದ್ದೂ ನಾವು ಅವರಿಗೆ ಸಿಎಂ ಸ್ಥಾನ ಕೊಡುವುದಕ್ಕೆ ಹೇಗೆ ಸಾಧ್ಯ? ಅವರ ಶಿಷ್ಯಂದಿರೇ ರಾಜೀನಾಮೆ ಕೊಟ್ಟಿದ್ದಾರೆ. ಮಾಜಿ ಸಿಎಂ ಶಿಷ್ಯರ ಮೂಲಕ ಹೀಗೆ ಹೇಳಿಸುತ್ತಿದ್ದಾರೆ. ನಮ್ಮವರು ಯಾರೂ ಅದಕ್ಕೆ ಒಪ್ಪುವುದಿಲ್ಲ. ನಾಲ್ಕಾರು ಶಾಸಕರು ಹೇಳಿದಾಕ್ಷಣ ಸಿಎಂ ಮಾಡುವುಕ್ಕೆ ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದ್ದಾರೆ.

    ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೂ ಎಚ್.ಡಿ.ದೇವೇಗೌಡ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾಡುವುಕ್ಕೂ ನಾವು ಒಪ್ಪುವುದಿಲ್ಲ. ದಲಿತ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಮಾಡಿಲ್ಲ. ಈಗ ನಾವ್ಯಾಕೆ ಮಾಡಬೇಕು. ಸರ್ಕಾರ ರಚಿಸಲು ಆಸಕ್ತಿ ತೋರಿದ್ದೇ ಕಾಂಗ್ರೆಸ್. ಈಗ ಸಿಎಂ ಬದಲಾವಣೆ ವಿಚಾರವನ್ನು ಪ್ರಸ್ತಾಪ ಮಾಡುವುದು ಎಷ್ಟು ಸರಿ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನಿಸಿದ್ದಾರೆ.

    ನೀವೇ ಸರ್ಕಾರ ಮಾಡಿ ಅಂದು ನಿಮ್ಮವರೇ ರಾಜೀನಾಮೆ ಕೊಡುತ್ತಿದ್ದಾರೆ. ನಿಮ್ಮ ಶಾಸಕರ ಜೊತೆ ನಮ್ಮ ಶಾಸಕರನ್ನು ಹಾಳು ಮಾಡಿದ್ದೀರಿ. ನಾವು ಬೇಡ ಅಂದರೂ ಸಿಎಂ ಆಗಿ ಅಂತ ಮಾಡಿ ಕೈ ಬಿಟ್ಟಿರಿ. ಸಿದ್ದರಾಮಯ್ಯ ಅವರ ಶಿಷ್ಯರೇ ಸರ್ಕಾರ ಬೀಳಿಸಲು ಪ್ಲ್ಯಾನ್ ಮಾಡಿದರೆ ಹೇಗೆ? ಸಿಎಂ ಬೆಂಗಳೂರಿಗೆ ಆಗಮಿಸಿದ ಮೇಲೆ ತೀರ್ಮಾನ ಕೈಗೊಳ್ಳುತ್ತೇವೆ. ಇನ್ನು ನಿಮ್ಮ ಸಹವಾಸ ಸಾಕು. ಕಾಂಗ್ರೆಸ್ ಹೈಕಮಾಂಡ್ ಜೊತೆ ನಾನೇ ಮಾತನಾಡುತ್ತೇನೆ. ಕಾಂಗ್ರೆಸ್ ಶಾಸಕರೇ ಮೈತ್ರಿ ಸರ್ಕಾರಕ್ಕೆ ಶತ್ರುಗಳಾಗಿದ್ದಾರೆ. ಹೀಗಾಗಿ ಸರ್ಕಾರ ಉಳಿಯಬೇಕು ಅಂತ ನಿಮಗೆ ಅನಿಸುತ್ತಿದೆಯಾ? ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತಿದ್ದೇನೆ. ನಾವು ಎಷ್ಟು ಸಮಾಧಾನವಾಗಿ ಇದ್ದರೂ ನೀವೇ ತೊಂದರೆ ಕೊಡುತ್ತೀದ್ದೀರಾ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

    ಸರ್ಕಾರ ಇರಬೇಕಾ? ಬೇಡವೇ ಎನ್ನುವುದನ್ನು ನೀವೇ ನಿರ್ಧಾರ ಮಾಡಿ. ನಿಮ್ಮ ನಾಯಕರ ಜೊತೆ ಮಾತನಾಡಿ ಫೈನಲ್ ಮಾಡಿ ಹೇಳಿ. ಸರ್ಕಾರದಿಂದ ಹಿಂದೆ ಸರಿಯಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ನಿಮ್ಮ ಶಾಸಕರನ್ನು ಮನವೊಲಿಸುವುದು, ಬಿಡುವುದು ನಿಮಗೆ ಬಿಟ್ಟ ವಿಚಾರ. ಇಂದು ಸಂಜೆ ಒಳಗೆ ಒಂದು ಫೈನಲ್ ನಿರ್ಧಾರ ಹೇಳಿ. ನಿಮ್ಮ ನಾಯಕರು ಶಾಸಕರ ಮನವೊಲಿಸಲು ವಿಫಲವಾದರೆ ಸಿಎಂ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಭಾನುವಾರ ಸಂಜೆ ನಮ್ಮ ಶಾಸಕರ ಸಭೆ ಇದೆ. ಸಭೆಯಲ್ಲಿ ನಮ್ಮ ನಿರ್ಧಾರ ಫೈನಲ್ ಮಾಡುತ್ತೇವೆ. ಇಷ್ಟೆಲ್ಲ ಗೊಂದಲ ಇಟ್ಟುಕೊಂಡು ಸರ್ಕಾರ ಮುನ್ನಡೆಸುವುದು ನಮಗೂ ಇಷ್ಟ ಇಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆ ಮಾತನಾಡಿ ನಿಮ್ಮ ನಿರ್ಧಾರ ತಿಳಿಸಿ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಸಂದೇಶ ರವಾನಿಸಿದ್ದಾರೆ.

    ಎಚ್.ಡಿ.ದೇವೇಗೌಡ ಅವರ ಮಾತನ್ನು ಆಲಿಸಿದ ಸಚಿವರು, ಕೆ.ಸಿ.ವೇಣುಗೋಪಾಲ್ ಅವರ ಜೊತೆ ಸಭೆ ನಡೆಸಿ ನಿರ್ಧಾರ ತಿಳಿಸುವುದಾಗಿ ಹೊರಗಡೆ ಬಂದಿದ್ದಾರೆ. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಕೆಶಿ, ಸುಮಾರು ದಿನಗಳಿಂದ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿರಲಿಲ್ಲ. ಇಂದು ಭೇಟಿ ಮಾಡಲು ಬಂದಿದ್ದೇನೆ. ಇದು ಸೌಹಾರ್ದ ಭೇಟಿಯಷ್ಟೇ. ಬೇರೆ ಏನು ಕಾರಣವಿಲ್ಲ. ನಮ್ಮ ಪಕ್ಷದ ನಾಯಕರು ಸಂಜೆ ಸಭೆ ಮಾಡುತ್ತೇವೆ. ಈ ಮೂಲಕ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

  • ಎಚ್‍ಡಿಡಿ ಎದುರೇ ಜೆಡಿಎಸ್‍ನ ಅಲ್ಪಸಂಖ್ಯಾತ ಮುಖಂಡರ ನಡುವೆ ಜಟಾಪಟಿ

    ಎಚ್‍ಡಿಡಿ ಎದುರೇ ಜೆಡಿಎಸ್‍ನ ಅಲ್ಪಸಂಖ್ಯಾತ ಮುಖಂಡರ ನಡುವೆ ಜಟಾಪಟಿ

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಎದುರೇ ಅಲ್ಪಸಂಖ್ಯಾತ ಮುಖಂಡರು ಜಗಳಾಡಿಕೊಂಡ ಪ್ರಸಂಗ ಇಂದು ಜೆಪಿ ಭವನದಲ್ಲಿ ನಡೆದಿದೆ.

    ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಚಾಮರಾಜಪೇಟೆ ಪರಾಜಿತ ಅಭ್ಯರ್ಥಿ ಅಲ್ತಾಫ್ ಖಾನ್ ಅವರು, ಲೋಕಸಭೆ ಚುನಾವಣೆಯಲ್ಲಿ ನಮ್ಮವರೇ ಕಾಂಗ್ರೆಸ್‍ಗೆ ಮತ ಹಾಕಿಲ್ಲ. ಹೀಗಾಗಿ ಮೈತ್ರಿ ಅಭ್ಯರ್ಥಿ ಸೋತರು. ಚಾಮರಾಜಪೇಟೆ ಕ್ಷೇತ್ರದಲ್ಲಿ ನಮ್ಮವರೇ ಕಾಂಗ್ರೆಸ್ ಪರವಾಗಿ ನಿಂತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

    ಅಲ್ತಾಫ್ ಖಾನ್ ಅವರ ಮಾತಿಗೆ ತಿರುಗಿಬಿದ್ದ ಕಾರ್ಯಕರ್ತರು, ನೇರವಾಗಿ ಕಿಡಿಕಾರಿದರು. ಅಷ್ಟೇ ಅಲ್ಲದೆ ಭಾಷಣ ನಿಲ್ಲಿಸುವಂತೆ ಕೂಗಿದರು. ತಕ್ಷಣವೇ ವೇದಿಕೆ ಮೇಲಿದ್ದ ನಾಯಕರು ಅಲ್ತಾಫ್ ಅವರಿಗೆ ಕುಳಿತುಕೊಳ್ಳಲು ಸೂಚನೆ ನೀಡಿದರು. ಇತ್ತ ಎಚ್.ಡಿ.ದೇವೇಗೌಡ ಅವರು ಎಲ್ಲವನ್ನೂ ಮೌನವಾಗಿ ಕುಳಿತು ನೋಡಿದರು.

    ಈ ಘಟನೆಯಿಂದಾಗಿ ಮುಜುಗುರಕ್ಕೆ ಒಳಗಾದ ಜೆಡಿಎಸ್ ಮುಖಂಡರು ತಕ್ಷಣವೇ ಮಾಧ್ಯಮದವರನ್ನು ಹೊರಗೆ ಕಳುಹಿಸಿದರು. ವೇದಿಕೆಯ ಮೇಲೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಮಾಜಿ ಶಾಸಕ ಮಧು ಬಂಗಾರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಸೇರಿಂದತೆ ಪ್ರಮುಖರು ಉಪಸ್ಥಿತರಿದ್ದರು.

    ಸಭೆ ಬಳಿಕ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರದಂತೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 37 ಸ್ಥಾನ ಮಾತ್ರ ಬಂತು. ಆದರೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸಿಎಂಗೆ ಅವಕಾಶ ನೀಡಿದರು. ಕಾಂಗ್ರೆಸ್ ಹಿರಿಯ ನಾಯಕರು ಸಮ್ಮುಖದಲ್ಲಿ ಈ ತೀರ್ಮಾನ ಆಯಿತು. ಹೀಗಾಗಿ ಸರ್ಕಾರ ರಚನೆಗೊಂಡು ಒಂದು ವರ್ಷ ಪೂರೈಸಿದೆ ಎಂದು ಹೇಳಿದರು.

    ಇಬ್ಬರು ರಾಜೀನಾಮೆ ಕೊಟ್ಟರು. ಮತ್ತೆ ಐದಾರು ಶಾಸಕರು ಹೋಗುತ್ತಾರೆ ಅಂತ ಮಾತನಾಡುತ್ತಿದ್ದಾರೆ. ಸಿಎಂ ಅಮೆರಿಕದಲ್ಲಿ ಇದ್ದುಕೊಂಡು ಎಲ್ಲರನ್ನೂ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಅವರು ಕೂಡ ಎಲ್ಲವನ್ನೂ ಸರಿಪಡಿಸುತ್ತಿದ್ದಾರೆ ಎಂದು ತಿಳಿಸಿದರು.

    ಎರಡು-ಮೂರು ದಿನಗಳಲ್ಲಿ ಅಲ್ಪಸಂಖ್ಯಾತ ಘಟಕಗಳ ನೇಮಕ ಮಾಡುತ್ತೇವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮನಸ್ಸಿಗೆ ನೋವಾಗಿರಬಹುದು. ಅವರಲ್ಲಿ ಫೈಟಿಂಗ್ ನೇಚರ್ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಹೆಚ್ಚು ಪ್ರಚಾರ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಹಲವಾರು ವಿಷಯಗಳನ್ನು ಎತ್ತಿಕೊಂಡು ಹೋರಾಟ ಮಾಡಿದರು. ಆದರೆ ಜನ ಮೋದಿ ಅವರಿಗೆ ಆಶೀರ್ವಾದ ಮಾಡಿದರು ಎಂದರು.

    ಪಿರಿಯಾಪಟ್ಟಣ ಶಾಸಕರಿಗೆ ಹಣದ ಆಮಿಷ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಅವರು, ಇಂತಹ ವಿಚಾರದ ಬಗ್ಗೆ ನನಗೆ ಏನು ಕೇಳಬೇಡಿ. ಇಂತಹದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದರು.