Tag: H.D.Deve Gowda

  • ಹಾಸನದಲ್ಲಿ ಬ್ರಿಟೀಷರ ಆಡಳಿತ, ಸ್ವಾತಂತ್ರ್ಯಕ್ಕೆ ಬಿಜೆಪಿಗೆ ಮತ ನೀಡಿ: ಎ.ಮಂಜು

    ಹಾಸನದಲ್ಲಿ ಬ್ರಿಟೀಷರ ಆಡಳಿತ, ಸ್ವಾತಂತ್ರ್ಯಕ್ಕೆ ಬಿಜೆಪಿಗೆ ಮತ ನೀಡಿ: ಎ.ಮಂಜು

    ಹಾಸನ: ಹಾಸನ ಜಿಲ್ಲೆಯಲ್ಲಿ ಬ್ರಿಟೀಷರ ಆಡಳಿತದಂತೆ ಅಧಿಕಾರ ನಡೆಯುತ್ತಿದೆ. ಹೀಗಾಗಿ ಜನರಿಗೆ ಸ್ವಾತಂತ್ರ್ಯ ಸಿಗಬೇಕೆಂಬ ಉದ್ದೇಶದಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದ್ದಾರೆ.

    ಹಾಸನದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎಚ್.ಡಿ.ದೇವೇಗೌಡರ ವಿರುದ್ಧವೇ ನಾನು 4.9 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದೆ. ಈಗ ಅಹಿಂದ ವರ್ಗದ ಜೊತೆಗೆ ಸೇರಿ ಕುಟುಂಬ ರಾಜಕಾರಣ ಕೊನೆಗಾಣಿಸಲು ತೀರ್ಮಾನ ಮಾಡಿದ್ದೇನೆ. ಅಧಿಕಾರ ಶಾಶ್ವತವಲ್ಲ. ಹೀಗಾಗಿ ಅಧಿಕಾರದಲ್ಲಿ ಇರುವಾಗ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ದೇವೇಗೌಡರು ಇಲ್ಲಿನ ಜನರಿಂದ ವೋಟ್ ಮಾತ್ರ ಹಾಕಿಸಿಕೊಳ್ಳುತ್ತಾರೆ. ಆದರೆ ಅಧಿಕಾರವನ್ನು ಮಕ್ಕಳು ಮೊಮ್ಮಕ್ಕಳು, ಸೊಸೆಯಂದಿರು, ಬೀಗರಿಗೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಕೊಡುವ ಬದಲು ಪಕ್ಷದ ಕಾರ್ಯಕರ್ತರಿಗೆ ಕೊಡಬಹುದಿತ್ತು. ರಾಜಕೀಯವಾಗಿ ಇವರನ್ನು ತೆಗೆದು ಹಾಕಿದರು ಎಲ್ಲಾ ಪಕ್ಷಗಳ ಕೆಳಹಂತದ ನಾಯಕರು ಉಳಿಯುತ್ತಾರೆ ಎಂದ ಅವರು, ನಾನು ಸ್ಪರ್ಧಿಸದಂತೆ ದೊಡ್ಡ ದೊಡ್ಡವರಿಂದ ಒತ್ತಡ ಹಾಕಿಸಿದರು. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ. ಬೆಂಗಳೂರು ಉತ್ತರ ಲೋಕಸಭಾ ಟಿಕೆಟ್ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದರು. ಆದರೆ ನಾನು ಒಪ್ಪಿಲ್ಲ. ಜಿಲ್ಲೆಯ ಜನರ ಪರವಾಗಿ ಹೋರಾಟ ಮಾಡಲು ಬಂದಿದ್ದೇನೆ ಎಂದು ತಿಳಿಸಿದರು.

    ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲಿದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬರಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

  • ಎಚ್‍ಡಿಡಿ ಬಗ್ಗೆ ಗೌರವವಿದೆ, ನಂಬಿಕೆ ಇಲ್ಲ: ವಿ.ಶ್ರೀನಿವಾಸ್ ಪ್ರಸಾದ್

    ಎಚ್‍ಡಿಡಿ ಬಗ್ಗೆ ಗೌರವವಿದೆ, ನಂಬಿಕೆ ಇಲ್ಲ: ವಿ.ಶ್ರೀನಿವಾಸ್ ಪ್ರಸಾದ್

    – ಐಟಿ ರೇಡ್ ಮತದಾರರ ಮೇಲೆ ಪರಿಣಾಮ ಬಿರಲ್ಲ

    ಮೈಸೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಬಗ್ಗೆ ತುಂಬಾ ಗೌರವವಿದೆ. ಆದರೆ ನಂಬಿಕೆ ಇಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ದಾಳಿ ವಿಚಾರವಾಗಿ ದೇವೇಗೌಡರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು. ರಾಜಕೀಯವಾಗಿ ಅವರು ನಂಬಿಕೆ ಉಳಿಸಿಕೊಂಡಿಲ್ಲ. ಮಾಜಿ ಪ್ರಧಾನಿಯಾಗಿರುವ ಎಚ್.ಡಿ.ದೇವೇಗೌಡ ಅವರು ರಾಷ್ಟದ ಹಿರಿಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ತಮ್ಮ ಸ್ಥಾನಕ್ಕೆ ತಕ್ಕಂತೆ ನಂಬಿಕೆ ಬರುವ ಹಾಗೆ ಜನರಲ್ಲಿ ಭಾವನೆ ಉಳಿಸಿಕೊಂಡಿಲ್ಲ ಎಂದರು.

    ಐಟಿ ಇಲಾಖೆಯ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಕೇಂದ್ರ ಸಂಸ್ಥೆಯಾಗಿರುವ ಐಟಿ ಇಲಾಖೆ ತನ್ನದೇ ಆದ ಜವಬ್ದಾರಿ ಹೊಂದಿದೆ. ಐಟಿ ಅಧಿಕಾರಿಗಳು ಮಾಹಿತಿ ಆಧರಿಸಿ ದಾಳಿ ಮಾಡುತ್ತಾರೆ. ಅದನ್ನು ಪ್ರಶ್ನಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದು ಸರಿಯಲ್ಲ. ಅದರಲ್ಲೂ ಮುಖ್ಯಮಂತ್ರಿ ಸ್ಥಾನದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ಪ್ರತಿಭಟನೆ ಮಾಡಿದ್ದು ಅಕ್ಷಮ್ಯ ಎಂದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ನಾಯಕರು ಐಟಿ ದಾಳಿ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದು ಸೂಕ್ತವಲ್ಲ. ಐಟಿ ರೇಡ್ ಮತದಾರರ ಮೇಲೆ ಪರಿಣಾಮ ಬಿರುವುದಿಲ್ಲ ಎಂದು ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.

  • ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ? ಎಂ.ಟಿ.ಕೃಷ್ಣಪ್ಪ

    ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ? ಎಂ.ಟಿ.ಕೃಷ್ಣಪ್ಪ

    ತುಮಕೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ದೈವಭಕ್ತರು. ಹೀಗಾಗಿ ದೈವ ಶಕ್ತಿಯಿಂದ ದೆಹಲಿಯಲ್ಲಿ ಉನ್ನತ ಸ್ಥಾನ ಅಲಂಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಪರೋಕ್ಷವಾಗಿ ದೇವೇಗೌಡರು ಪ್ರಧಾನಿ ಆಗಬಹುದು ಎಂದು ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಮಾಜಿ ಶಾಸಕರು, ಎಚ್.ಡಿ.ದೇವೇಗೌಡ ಅವರು ತುಮಕೂರು ಕ್ಷೇತ್ರದಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಿ ಸಂಸತ್‍ಗೆ ಹೋದರೆ ಒಂದು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರ್ಯಕರ್ತರು ದೇವೇಗೌಡರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು.

    ಹೇಮಾವತಿ ನದಿಯ ನೀರು ಹಂಚಿಕೆ ವಿಚಾರದಲ್ಲಿ ದೇವೇಗೌಡರಿಂದ ತುಮಕೂರಿಗೆ ಯಾವುದೇ ರೀತಿ ಅನ್ಯಾಯವಾಗಿಲ್ಲ. ಹೇಮಾವತಿಯ ನೀರು ಸರಿಯಾಗಿ ಹಂಚಿಕೆ ಆಗುತ್ತಿರಲಿಲ್ಲ. ಹೀಗಾಗಿ ಹೋರಾಟ ಮಾಡುತ್ತಿದ್ದೇವು. ಸುಖಾಸುಮ್ಮನೆ ಎಚ್.ಡಿ.ದೇವೇಗೌಡರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

    ಹೇಮಾವತಿ ನದಿ ನೀರು ಹಂಚಿಕೆಯಲ್ಲಿ ಹಾಸನದ ರಾಜಕಾರಣಿಗಳಿಂದಲೂ ಯಾವುದೇ ರೀತಿಯ ತೊಂದರೆ ಆಗುತ್ತಿರಲಿಲ್ಲ. ಎರಡು ಜಿಲ್ಲೆಯ ಅಧಿಕಾರಿಗಳೇ ನಿರ್ಲಕ್ಷ್ಯ ತೋರುತ್ತಿದ್ದರು. ಹೀಗಾಗಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೆವು. ಈಗ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಯಥೇಚ್ಛವಾಗಿ ಹರಿಯುತ್ತಿದೆ ಎಂದು ಎಂ.ಟಿ.ಕೃಷ್ಣಪ್ಪ ಅವರು, ದೇವೇಗೌಡರನ್ನು ಸಮರ್ಥಿಸಿಕೊಂಡರು.

  • ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎರಡಂಕಿ ದಾಟದಂತೆ ನೋಡಿಕೊಳ್ತೀವಿ: ಎಚ್‍ಡಿಡಿಗೆ ಈಶ್ವರಪ್ಪ ತಿರುಗೇಟು

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎರಡಂಕಿ ದಾಟದಂತೆ ನೋಡಿಕೊಳ್ತೀವಿ: ಎಚ್‍ಡಿಡಿಗೆ ಈಶ್ವರಪ್ಪ ತಿರುಗೇಟು

    – ಸಿದ್ದರಾಮಯ್ಯ, ದೇವೇಗೌಡ ಧೃತರಾಷ್ಟ್ರರಿದ್ದಂತೆ

    ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎರಡಂಕಿ ದಾಟದಂತೆ ನೋಡಿಕೊಳ್ಳುತ್ತೇವೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ರಾಜ್ಯದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್, 8 ಕ್ಷೇತ್ರಗಳಿಂದ ಜೆಡಿಎಸ್ ಸ್ಪರ್ಧೆ ಮಾಡುತ್ತಿವೆ. ಆದರೆ ಎರಡು ಪಕ್ಷಗಳ ಕಾರ್ಯಕರ್ತರೇ ಮೈತ್ರಿ ಅಭ್ಯರ್ಥಿಯನ್ನು ಸೋಲಿಸುತ್ತಾರೆ. ಕಾಂಗ್ರೆಸ್‍ನಲ್ಲಿರುವ ಭಿನ್ನಮತ ಕೂಡ ಕೈ ಅಭ್ಯರ್ಥಿಗಳ ಸೋಲಿಗೆ ಪ್ರಮುಖ ಕಾರಣವಾಗಲಿದೆ ಎಂದರು. ಇದನ್ನು ಓದಿ: ರಾಜ್ಯದಲ್ಲಿ ಎರಡು ಅಂಕಿ ದಾಟಲು ಬಿಜೆಪಿಯನ್ನ ಬಿಡಲ್ಲ: ಎಚ್‍ಡಿಡಿ ಶಪಥ

    ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಇಬ್ಬರೂ ಧೃತರಾಷ್ಟ್ರರಿದ್ದಂತೆ. ಈಗ ಇಬ್ಬರೂ ಒಬ್ಬರನೊಬ್ಬರು ಅಪ್ಪಿಕೊಂಡಿದ್ದಾರೆ. ಯಾರ ಕಥೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ವ್ಯಂಗ್ಯವಾಡಿದರು.

    ಶಾಸಕ ಉಮೇಶ್ ಜಾದವ್ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಏಕೆ ತಡ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಮುಖ್ಯಮಂತ್ರಿಗಳಿಗೆ ಬುದ್ಧಿವಾದ ಹೇಳುವ ವ್ಯಕ್ತಿ. ಅವರು ಕಾನೂನು ತಿಳಿದವರು. ಆದರೂ ರಾಜೀನಾಮೆ ಅಂಗೀಕರಿಸಲು ತಡ ಏಕೆ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

    ಈ ಚುನಾವಣೆಯಲ್ಲಿ ಬಿಜೆಪಿಯ ಬಹುಪಾಲು ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ಕೊಡಲು ನಿರ್ಧರಿಸಲಾಗಿದೆ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಪಟ್ಟಿ ಬಿಡುಗಡೆ ಆಗಲಿದೆ ಎಂದರು.

  • ಜೆಡಿಎಸ್‍ಗೆ ಕಾಂಗ್ರೆಸ್ ಅನಿವಾರ್ಯವಲ್ಲ. ಆದರೆ ಕಾಂಗ್ರೆಸ್‍ಗೆ ಜೆಡಿಎಸ್ ಅನಿವಾರ್ಯ: ಶಿವರಾಮೇಗೌಡ

    ಜೆಡಿಎಸ್‍ಗೆ ಕಾಂಗ್ರೆಸ್ ಅನಿವಾರ್ಯವಲ್ಲ. ಆದರೆ ಕಾಂಗ್ರೆಸ್‍ಗೆ ಜೆಡಿಎಸ್ ಅನಿವಾರ್ಯ: ಶಿವರಾಮೇಗೌಡ

    – ದೇವೇಗೌಡರ ಶಕ್ತಿ ರಾಹುಲ್ ಗಾಂಧಿಗೆ ಗೊತ್ತಿದೆ ಆದರೆ ರಾಜ್ಯದವರಿಗೆ ಗೊತ್ತಿಲ್ಲ
    – ಎಚ್‍ಡಿಡಿ ನಂಬಿದವರು ಯಾರೂ ಬದುಕಿಲ್ಲ

    ಮಂಡ್ಯ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಶಕ್ತಿ ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಗೊತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ಸಿಗರಿಗೆ ದೇವೇಗೌಡರ ಶಕ್ತಿ ಅರ್ಥವಾಗುತ್ತಿಲ್ಲ ಎಂದು ಹಾಲಿ ಸಂಸದ ಶಿವರಾಮೇಗೌಡ ವಾಗ್ದಾಳಿ ನಡೆಸಿದರು.

    ನಗರದ ಸಿಲ್ವರ್ ಜ್ಯುಬಲಿ ಪಾರ್ಕಿನಲ್ಲಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ನಡೆದಿದ್ದ ಜೆಡಿಎಸ್ ಸಮಾವೇಶದಲ್ಲಿ ಸಂಸದರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್‍ಗೆ ಕಾಂಗ್ರೆಸ್ ಅನಿವಾರ್ಯವಲ್ಲ. ಆದರೆ ಕಾಂಗ್ರೆಸ್‍ಗೆ ಜೆಡಿಎಸ್ ಅನಿವಾರ್ಯ ಎಂದರು.

    ನಾವೆಲ್ಲರೂ ಒಪ್ಪಿ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ಎಚ್.ಡಿ.ದೇವೇಗೌಡ ಅವರು ನನ್ನನ್ನು ಕರೆದು ಲೋಕಸಭಾ ಉಪಚುನಾವಣೆಯ ಟಿಕೆಟ್ ನೀಡಿದರು. ಅವರ ಆಶೀರ್ವಾದದಿಂದ ಸಂಸದನಾದೆ. ಕೆಲವು ವಿಚಾರ ಹೇಳದಿದ್ದರೆ ತಪ್ಪಾಗುತ್ತೆ. ಬೇರೆ ಬೇರೆ ಕಾರಣದಿಂದ ಜಿಲ್ಲೆಯ ಅಭಿವೃದ್ಧಿಗಾಗಿ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ನನ್ನನ್ನು ಗೆಲ್ಲಿಸಿದಕ್ಕಿಂತ ಹೆಚ್ಚು ಮತಗಳಿಂದ ನಿಖಿಲ್ ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಅವರು ಮನವಿ ಮಾಡಿಕೊಂಡರು.

    ದೇವೇಗೌಡ ಅವರದ್ದು ಕುಟುಂಬ ರಾಜಕಾರಣ ಎಂಬ ರೀತಿ ಬಿಂಬಿಸಲಾಗಿದೆ. ಇದು ಕುಟುಂಬ ರಾಜಕಾರಣವಲ್ಲ. ಎಚ್.ಡಿ.ದೇವೇಗೌಡ ಅವರು ಸ್ವಂತ ಆಸ್ತಿ ಮಾಡಿಕೊಳ್ಳಲಿಲ್ಲ ಎಂದು ಸಂಸದರು ಹೊಗಳಿದರು. ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕೆ ನನಗೆ ಕಿಂಚಿತ್ತು ನೋವಿಲ್ಲ. ಐದು ಲಕ್ಷ ಬಹುಮತದಿಂದ ನಿಖಿಲ್ ಅವರನ್ನು ಗೆಲ್ಲಿಸುತ್ತೇವೆ ಎಂದರು.

    ಎಚ್.ಡಿ.ದೇವೇಗೌಡ ಅವರನ್ನು ನಂಬಿದವರು ಯಾರೂ ಬದುಕಿಲ್ಲ ಎಂದು ಸಂಸದರು ಹೇಳಿ ಎಡವಟ್ಟು ಮಾಡಿಕೊಂಡರು. ಆದರೆ ತಮ್ಮ ಹೇಳಿಕೆ ಮೇಲೆ ಗಮನ ಹರಿಸದೇ ಮಾತು ಮುಂದುವರಿಸಿದರು. ಬಳಿಕ ಎಚ್.ಡಿ.ದೇವೇಗೌಡ ಅವರ ಗರಡಿಯಲ್ಲಿ ಪಳಗಿ ಬಳಿಕ ಪಕ್ಷ ತ್ಯಜಿಸಿ ಅಧಿಕಾರ ಹಿಡಿದವರ ಹೆಸರನ್ನು ಶಿವರಾಮೇಗೌಡ ಪ್ರಸ್ತಾಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಮ್ಮದು ಭಾವನಾತ್ಮಕ ಕುಟುಂಬ: ಎಚ್‍ಡಿಡಿ ಕಣ್ಣೀರು ಸಮರ್ಥಿಸಿಕೊಂಡ ಸಿಎಂ

    ನಮ್ಮದು ಭಾವನಾತ್ಮಕ ಕುಟುಂಬ: ಎಚ್‍ಡಿಡಿ ಕಣ್ಣೀರು ಸಮರ್ಥಿಸಿಕೊಂಡ ಸಿಎಂ

    ಬೆಂಗಳೂರು: ನಮ್ಮದು ಭಾವನಾತ್ಮಕ ಕುಟುಂಬ. ಹಾಸನ ರಾಜಕೀಯದ ಜೊತೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಮಾರು 60 ವರ್ಷಗಳ ಸಂಬಂಧ ಹೊಂದಿದ್ದಾರೆ. ತಮ್ಮ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಹಸ್ತಾಂತರ ಮಾಡುವಾಗ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ಯೋಧರು ಹುತಾತ್ಮರಾದಾಗ ಕಣ್ಣೀರು ಹಾಕಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಳಲಿಲ್ಲ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಹಾವೇರಿಯಲ್ಲಿ 75 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮನೆಗೆ ಯಾವ ನಾಯಕರೂ ಹೋಗಲಿಲ್ಲ. ನಾನು ಮಾತ್ರ ಹೋಗಿಬಂದಿದ್ದೆ. ಆತ್ಮಹತ್ಯೆಗೆ ಶರಣಾಗಿದ್ದ 75 ಜನ ರೈತರ ಕುಟುಂಬಗಳಿಗೆ 50 ಲಕ್ಷ ರೂ. ಪರಿಹಾರ ನೀಡಿದ್ದೇನೆ ಎಂದು ಹೇಳಿ ತಿರುಗೇಟು ನೀಡಿದರು. ಇದನ್ನು ಓದಿ: ಚುನಾವಣಾ ಪ್ರಚಾರದಲ್ಲಿ ಸಚಿವ ರೇವಣ್ಣ, ಬಾಲಕೃಷ್ಣ ಕಣ್ಣೀರು

    ರಾಯಚೂರು, ಕಲಬುರಗಿಯಲ್ಲಿ 50 ರಿಂದ 60 ಜನ ರೈತರಿಗೆ ಹಣ ಕೊಟ್ಟು ಬಂದಿದ್ದೇನೆ. ಮಂಡ್ಯದಲ್ಲಿ 200 ಜನ ರೈತ ಕುಟುಂಬಗಳಿಗೆ 50 ಸಾವಿರದಿಂದ 1 ಲಕ್ಷ ರೂ. ಕೊಟ್ಟಿದ್ದೇನೆ. ರೈತರ ಹಾಗೂ ನಾಡಿನ ಜನತೆಯ ನೋವನ್ನು ನಮ್ಮ ಕುಟುಂಬದ ನೋವೆಂದು ಭಾವಿಸುತ್ತೇವೆ. ಹಾವೇರಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗ ಬಿಜೆಪಿ ಮುಖಂಡ ಆರ್.ಅಶೋಕ್ ಎಲ್ಲಿ ಹೋಗಿದ್ದ ಎಂದು ಏಕವಚನದಲ್ಲಿ ಸಂಭೋದಿಸಿದ ಸಿಎಂ, ದೇವೇಗೌಡರ ಬಗ್ಗೆ ಚರ್ಚೆ ಮಾಡುತ್ತಾರೆ ಅಲ್ವಾ? ಯಾವ ರೈತರ ಮನೆಗೆ ಅಶೋಕ್ ಹೋಗಿದ್ದಾನೆಂದು ಹೇಳಲಿ ಎಂದು ಖರವಾಗಿ ಪ್ರಶ್ನಿಸಿದರು. ಇದನ್ನು ಓದಿ: ಈ ಬಾರಿ ನಾನು ಚುನಾವಣೆಗೆ ನಿಲ್ಲಲ್ಲ: ದೇವೇಗೌಡ

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎಂದು ಎಚ್.ಡಿ.ದೇವೇಗೌಡ ಅವರು ಗುರುವಾರ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಹೀಗಾಗಿ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಸಿಎಂ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಈ ಮೂಲಕ ಮಂಡ್ಯದಲ್ಲಿ ನಾಳೆ ನಿಖಿಲ್ ಕುಮಾರಸ್ವಾಮಿ ಪರ ಎಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಭರ್ಜರಿ ಪ್ರಚಾರ ಮಾಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದೇವೇಗೌಡ್ರಿಗೆ ಎಷ್ಟು ಜನ ಮಕ್ಕಳೆಂದು ನನಗೆ ನಿಜವಾಗಿಯೂ ಗೊತ್ತಿಲ್ಲ: ಈಶ್ವರಪ್ಪ

    ದೇವೇಗೌಡ್ರಿಗೆ ಎಷ್ಟು ಜನ ಮಕ್ಕಳೆಂದು ನನಗೆ ನಿಜವಾಗಿಯೂ ಗೊತ್ತಿಲ್ಲ: ಈಶ್ವರಪ್ಪ

    – ಕುಟುಂಬ ರಾಜಕಾರಣ ಬಗ್ಗೆ ಎಚ್‍ಡಿಡಿ ಪುಸ್ತಕ ಬರೆಯಲಿ

    ಶಿವಮೊಗ್ಗ: ಕುಟುಂಬ ರಾಜಕಾರಣ ಅಂದ್ರೆ ಏನು ಎಂದು ಡಿಕ್ಷನರಿ ಹಿಡಿದು ವಿವರಿಸಲಿ ಅಥವಾ ಅದರ ಬಗ್ಗೆ ಪುಸ್ತಕ ಬರೆಯಲಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ವಿರುದ್ಧ ಕಿಡಿಕಾರಿದ್ದಾರೆ.

    ನಗರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಕುಟುಂಬ ರಾಜಕಾರಣ ಮಾಡುತ್ತಿಲ್ಲವೆಂದು ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ಹಾಗಾದರೆ ಇಬ್ಬರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ನನ್ನ ಕುಟುಂಬವಲ್ಲ ಹಾಗೂ ನಾನು ಬ್ರಹ್ಮಚಾರಿ ಎಂದು ದೇವೇಗೌಡ ಅವರು ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

    ದೇವೇಗೌಡ ಅವರಿಗೆ 24 ಜನ ಮಕ್ಕಳು ಇದ್ದರೂ ಸಾಕಿತ್ತು. ರಾಜ್ಯದ ಎಲ್ಲಾ ಸ್ಥಾನಗಳಿಂದ ದೇವೇಗೌಡರ ಕುಟುಂಬವೇ ಸ್ಪರ್ಧಿಸಿದ ದಾಖಲೆಯಾಗುತ್ತಿತ್ತು ಎಂದ ಅವರು, ದೇವೇಗೌಡರಿಗೆ ಒಟ್ಟು ಎಷ್ಟು ಜನ ಮಕ್ಕಳು ಎನ್ನುವುದು ನಿಜವಾಗಿಯೂ ನನಗೆ ಗೊತ್ತಿಲ್ಲ. ಆದರೆ ಅವರ ಕುಟುಂಬದಲ್ಲಿ 28 ಜನ ಇಲ್ಲದಿರುವ ಬಗ್ಗೆ ನನಗೆ ಬೇಸರವಿದೆ ಲೇವಡಿ ಮಾಡಿದರು.

    ಮಂಡ್ಯ ಅಭ್ಯರ್ಥಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ ಅವರು, ನಮ್ಮ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಬೇಕೋ? ಬೇಡವೋ ಎಂದು ಕಾದು ನೋಡುತ್ತೇವೆ. ಸುಮಲತಾ ಅಂಬರೀಶ್ ಅವರು ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಅಥವಾ ಕಾಂಗ್ರೆಸ್, ಜೆಡಿಎಸ್ ನಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಖಚಿತ ಅಗಿಲ್ಲ ಎಂದರು.

    ಜೆಡಿಎಸ್- ಕಾಂಗ್ರೆಸ್ ಮೈತ್ರಿಗೆ ಗ್ರಹಣ ಹಿಡಿದಿದೆ. ಅವರು ಯಾರಿಗೆ ಯಾವ ಕ್ಷೇತ್ರ ಎಂಬುದು ಇನ್ನೂ ಅಂತಿಮಗೊಳಿಸಿಲ್ಲ. ಅಷ್ಟೇ ಅಲ್ಲ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೋ, ಜೆಡಿಎಸ್ ಅಭ್ಯರ್ಥಿಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಯಾರೇ ಬಂದು ತಲೆಕೆಳಗಾಗಿ ನಿಂತರೂ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯೇ ಜಯ ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಡಿಸಿದರು.

    ಭಯೋತ್ಪಾದಕರ ಮೇಲೆ ನಡೆಸಿದ ಪ್ರತಿ ದಾಳಿಯಿಂದ ದೇಶಭಕ್ತಿ ಇಮ್ಮಡಿಸಿದೆ. ರಾಷ್ಟ್ರ ಭಕ್ತಿಯ ಪ್ರತಿರೂಪವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಜವಾಗಿ ಬೆಂಬಲ ವ್ಯಕ್ತವಾಗಿದೆ. ಈ ಬೆಳವಣಿಗೆ ಬಿಜೆಪಿ ವಿಶ್ವಾಸ ಹೆಚ್ಚಿಸಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರೈತರ ಆತ್ಮಹತ್ಯೆಯ ವೇಳೆ ಅಳಲಿಲ್ಲ, ಚುನಾವಣೆ ಬಂದಾಗ ಮಾತ್ರ ಕಣ್ಣೀರು: ಬಿಜೆಪಿ ವ್ಯಂಗ್ಯ

    ರೈತರ ಆತ್ಮಹತ್ಯೆಯ ವೇಳೆ ಅಳಲಿಲ್ಲ, ಚುನಾವಣೆ ಬಂದಾಗ ಮಾತ್ರ ಕಣ್ಣೀರು: ಬಿಜೆಪಿ ವ್ಯಂಗ್ಯ

    ಬೆಂಗಳೂರು: ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಹಾಸನದ ಅಭ್ಯರ್ಥಿ ಎಂದು ಘೋಷಣೆ ಮಾಡುವ ವೇಳೆ ಕಣ್ಣೀರು ಹಾಕಿದ್ದ ಎಚ್.ಡಿ.ದೇವೇಗೌಡ ಕುಟುಂಬದ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ.

    ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಳಲಿಲ್ಲ. ಪುಲ್ವಾಮಾ ದಾಳಿಯಾಗಿ ಯೋಧರು ಮಡಿದಾಗ ಕಣ್ಣೀರು ಬರಲಿಲ್ಲ. ಚುನಾವಣೆ ಬಂದಾಗ ಮಾತ್ರ ಮನೆಮಂದಿಗೆಲ್ಲ ವೇದಿಕೆಯಲ್ಲಿ ಕಣ್ಣೀರು. ರಾಜ್ಯದ ಜನ ಈಗಲೂ ಮರುಳಾಗುವರೇ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ ಪ್ರಶ್ನಿಸಿದೆ.

    2019ರ ಲೋಕಸಭಾ ಚುನಾವಣೆಯ ಮೊದಲ ಡ್ರಾಮಾ ಇದು. ಅಳುವುದು ಎಚ್.ಡಿ.ದೇವೇಗೌಡ ಅವರಲ್ಲಿರುವ ಕಲೆ. ದೇವೇಗೌಡ ಅವರ ಕುಟುಂಬವು ಅಳುತ್ತಲೇ ಜನರನ್ನು ಮೋಸ ಮಾಡುತ್ತಾರೆ. ಚುನಾವಣೆಗೂ ಮುನ್ನ ಇವರು ಅಳುತ್ತಾರೆ. ಅಯ್ಕೆಯಾಗಿ ಬಂದ ಬಳಿಕ ದೇವೇಗೌಡ ಅವರ ಕುಟುಂಬಕ್ಕೆ ಮತ ಹಾಕಿದವರು ಕಣ್ಣೀರು ಹಾಕುತ್ತಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.

    ಎಚ್.ಡಿ.ದೇವೇಗೌಡ ಅವರು ಕಣ್ಣೀರು ಹಾಕಿದ್ದನ್ನು ಸಮರ್ಥಿಸಿಕೊಂಡ ಜೆಡಿಎಸ್, ಹಾಸನ ಕ್ಷೇತ್ರದೊಂದಿಗೆ ದೇವೇಗೌಡ ಅವರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಹೀಗಾಗಿ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದಕ್ಕೆ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ ಎಂದು ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಡೀ ರಾಜ್ಯ, ದೇಶ ಆಳ್ಬೇಕು ಎನ್ನುವ ಸ್ವಾರ್ಥಿಗಳು ಎಚ್‍ಡಿಡಿ ಕುಟುಂಬಸ್ಥರು: ಶಾಸಕ ಯತ್ನಾಳ್

    ಇಡೀ ರಾಜ್ಯ, ದೇಶ ಆಳ್ಬೇಕು ಎನ್ನುವ ಸ್ವಾರ್ಥಿಗಳು ಎಚ್‍ಡಿಡಿ ಕುಟುಂಬಸ್ಥರು: ಶಾಸಕ ಯತ್ನಾಳ್

    – 224 ಮರಿ ಮೊಮ್ಮಕ್ಕಳು ಇದ್ದಿದ್ರೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ನಿಲ್ಲಿಸ್ತಿದ್ರು

    ವಿಜಯಪುರ: ಇಡೀ ರಾಜ್ಯ ಹಾಗೂ ದೇಶ ಆಳಬೇಕು ಎನ್ನುವ ಸ್ವಾರ್ಥ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕುಟುಕಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಅವರಿಗೆ 28 ಮೊಮ್ಮಕ್ಕಳು ಇದ್ದಿದ್ದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಂದ ಅವರನ್ನು ಕಣಕ್ಕೆ ಇಳಿಸುತ್ತಿದ್ದರು. ಅಷ್ಟೇ ಅಲ್ಲದೆ 224 ಮರಿ ಮೊಮ್ಮಕ್ಕಳು ಇದ್ದಿದ್ದರೆ ವಿಧಾನಸಭೆಗೆ ನಿಲ್ಲಿಸುತ್ತಿದ್ದರು ಎಂದು ಕುಟುಂಬ ರಾಜಕಾರಣದ ವಿರುದ್ಧ ಗುಡುಗಿದರು.

    ವಿಶ್ವ ಮಹಿಳಾ ದಿನದಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಸುಮಲತಾ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸಚಿವರು ಕೇವಲ ಸುಮಲತಾ ಅಂಬರೀಶ್ ಅವರಿಗೆ ಅಷ್ಟೇ ಅಲ್ಲ, ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ರೇವಣ್ಣ ಅವರ ಹೇಳಿಕೆ ದೇವೇಗೌಡ ಅವರ ಕುಟುಂಬಕ್ಕೆ ಶೋಭೆ ತರುವುದಿಲ್ಲ. ಹೀಗಾಗಿ ಸಚಿವ ರೇವಣ್ಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಜೊತೆಗೆ ಸಚಿವರು ಮಾಡಿದ ತಪ್ಪಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಕೂಡ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ಈ ಹಿಂದೆ ಜೆಡಿಎಸ್‍ನ ಶಾಸಕರೊಬ್ಬರು ನಿಧನರಾದ ಬಳಿಕ ಅವರ ಪತ್ನಿಗೆ ಟಿಕೆಟ್ ನೀಡಿದ್ದಾರೆ. ಅನುಕಂಪ ಹಾಗೂ ಜನರ ಒತ್ತಾಯದಿಂದ ಮೃತ ಶಾಸಕರ ಕುಟುಂಬದವರಿಗೆ ಅವಕಾಶ ನೀಡಲಾಗುತ್ತದೆ. ಅಂಬರೀಶ್ ಕಲಿಯುಗದ ದಾನಸೂರ ಕರ್ಣ. ಅಂಬರೀಶ್ ನಿಧನದ ಬಳಿಕ ಅವರ ಪತ್ನಿ ಸುಮಲತಾ ಅವರಿಗೆ ಟಿಕೆಟ್ ನೀಡಬೇಕು ಎಂದು ಸುಮಲತಾ ಪರ ಶಾಸಕರು ಬ್ಯಾಟ್ ಬೀಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವೇಗೌಡರ ವಿಕೆಟ್ ಉರುಳುತ್ತೆ ಎಂದ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ

    ದೇವೇಗೌಡರ ವಿಕೆಟ್ ಉರುಳುತ್ತೆ ಎಂದ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ

    – ಮನೆಗೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು

    ಹಾಸನ: ಆಪರೇಷನ್ ಕಮಲದ ಆಡಿಯೋದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ವಿಕೆಟ್ ಉರುಳುತ್ತೆ ಎಂದು ಹೇಳಿದ್ದ ಬಿಜೆಪಿಯ ಹಾಸನ ಶಾಸಕ ಪ್ರೀತಮ್‍ಗೌಡ ಮನೆಗೆ ಕಲ್ಲು ಎಸೆದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕ್ಷೇತ್ರದ ಅಭಿವೃದ್ಧಿಯನ್ನು ಬಿಟ್ಟು ಮಾಜಿ ಪ್ರಧಾನಿ ದೇವೇಗೌಡ ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಒಬ್ಬ ಹಿರಿಯ ನಾಯಕನ ಕುರಿತು ಅಸಭ್ಯವಾಗಿ ಮಾತನಾಡುವುದು ಸರಿಯಲ್ಲ. ಶಾಸಕ ಪ್ರೀತಮ್‍ಗೌಡ ಮನೆಯಿಂದ ಹೊರ ಬಂದು ಕ್ಷಮೆ ಕೇಳಬೇಕು ಎಂದು ಪ್ರತಿಭಟನಾ ನಿರತ ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    ಶಾಸಕ ಪ್ರೀತಮ್‍ಗೌಡ ವಿರುದ್ಧ ಘೋಷಣೆ ಕೂಗುತ್ತಿದ್ದಾಗ ಬಿಜೆಪಿ ಶಾಸಕರು ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಆದರೂ ಎರಡೂ ಪಕ್ಷಗಳು ಕಾರ್ಯಕರ್ತರು ಪರಸ್ಪರ ವಾಗ್ದಾಳಿ ನಡೆಸಿ ತಳ್ಳಾಡಿದ್ದಾರೆ.

    ಪ್ರೀತಮ್‍ಗೌಡ ಹೇಳಿದ್ದೇನು?:
    ಸೂರ್ಯ ಚಂದ್ರ ಇರುವವರೆಗೂ ರಾಷ್ಟ್ರೀಯ ಪಕ್ಷ ದೇಶದಲ್ಲಿ ಇರುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ವಿಕೆಟ್ ಹೋಗುತ್ತೆ. ಸಿಎಂ ಕುಮಾರಸ್ವಾಮಿ ಆರೋಗ್ಯವೂ ಸರಿಯಿಲ್ಲ. ಇದರಿಂದಾಗಿ ಜೆಡಿಎಸ್ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಮೈತ್ರಿ ಸರ್ಕಾರ ಈಗಂತೂ ಬಿದ್ದರೆ ಸಾಕು ಎನ್ನುವಂತಿದೆ. ನನಗೂ ಈಗ 35-36ನೇ ವಯಸ್ಸು, ಶಾಸಕನಾಗಿ ಇದ್ದೇನೆ. ನಿನಗೆ 30 ವರ್ಷವಾಗಿದೆ. ಇನ್ನೂ 40 ವರ್ಷ ರಾಜಕಾರಣ ಮಾಡಬೇಕು. ಎಲ್ಲಾ ಒಟ್ಟಿಗೆ ಇರೋಣ ಎಂದು ಅನಾಮಿಕ ವ್ಯಕ್ತಿಯ ಜೊತೆಗೆ ಫೋನಿನಲ್ಲಿ ಪ್ರೀತಮ್‍ಗೌಡ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv