Tag: Guwahati

  • ನಿಷೇಧದ ಬಳಿಕ ಕಮ್‍ಬ್ಯಾಕ್ ಪಂದ್ಯದಲ್ಲೇ ಮಿಂಚಿದ ಪೃಥ್ವಿ ಶಾ

    ನಿಷೇಧದ ಬಳಿಕ ಕಮ್‍ಬ್ಯಾಕ್ ಪಂದ್ಯದಲ್ಲೇ ಮಿಂಚಿದ ಪೃಥ್ವಿ ಶಾ

    – ಕೊಹ್ಲಿಯನ್ನು ಅನುಕರಿಸಿದ ಪೃಥ್ವಿ ಶಾ

    ಗುವಾಹತಿ: ಬಿಸಿಸಿಐ ನಿಂದ ನಿಷೇಧಕ್ಕೆ ಒಳಗಾಗಿ ಕಳೆದ 8 ತಿಂಗಳಿನಿಂದ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಯುವ ಆಟಗಾರ ಪೃಥ್ವಿ ಶಾ, ಸೈಯದ್ ಮಷ್ತಾಕ್ ಅಲಿ ಟ್ರೋಫಿಯಲ್ಲಿ ಕಮ್ ಬ್ಯಾಕ್ ಮಾಡಿದ್ದು, ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.

    ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಭಾಗವಾಗಿ ಭಾನುವಾರ ಅಸ್ಸಾಂ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಪರ ಶಾ ಬ್ಯಾಟಿಂಗ್ ನಡೆಸಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ತಂಡದ ಪರ ಬ್ಯಾಟಿಂಗ್ ಇಳಿದ ಪೃಥ್ವಿ ಶಾ, ಅದಿತ್ಯ ತಾರೆ ಇನ್ನಿಂಗ್ಸ್ ಆರಂಭಿಸಿದ್ದರು.

    20 ವರ್ಷದ ಪೃಥ್ವಿ ಶಾ ಪಂದ್ಯದಲ್ಲಿ 39 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 63 ರನ್ ಗಳಿಸಿದರೆ, ಆದಿತ್ಯ ತಾರೆ 48 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ನೆರವಿನಿಂದ 82 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್ 138 ರನ್ ಗಳ ಜೊತೆಯಾಟವನ್ನು ನೀಡಿತ್ತು. ನಿಷೇಧಿತ ಔಷಧಿ ಸೇವಿಸಿದ್ದ ಪೃಥ್ವಿ ಶಾ ಬಿಸಿಸಿಐನಿಂದ 8 ತಿಂಗಳ ಕಾಲ ನಿಷೇಧ ಮಾಡಿದ ಅವರಿಗೆ ಇದು ಕಮ್‍ಬ್ಯಾಕ್ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಮುಂಬೈ 83 ರನ್ ಅಂತರದಿಂದ ಗೆಲುವು ಪಡೆದಿದ್ದು, ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 206 ರನ್ ಸಿಡಿಸಿತ್ತು. ಆ ಬಳಿಕ ಗುರಿ ಬೆನ್ನತ್ತಿದ್ದ ಅಸ್ಸಾಂ 8 ವಿಕೆಟ್ ನಷ್ಟಕ್ಕೆ 123 ಗಳನ್ನು ಮಾತ್ರ ಗಳಿಸಿ ಸೋಲುಂಡಿತು. ಇದರೊಂದಿಗೆ ಮುಂಬೈ ಸರಣಿಯಲ್ಲಿ ಮತ್ತೊಂದು ಗೆಲುವು ಪಡೆಯಿತು. ಅರ್ಧ ಶತಕ ಗಳಿಸಿದ ಪೃಥ್ವಿ ಶಾ ಟೀಂ ಇಂಡಿಯಾ ನಾಯಕ ಕೊಹ್ಲಿರಂತೆ ಅನುಕರಣೆ ಮಾಡಿ ಬ್ಯಾಟ್ ಮಾತನಾಡುತ್ತಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

    ಅಂದಹಾಗೇ ಶಾ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಗಳಿಸಿದ 2ನೇ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಕಳೆದ ವರ್ಷ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ ರಾಜ್ ಕೋಟ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 134 ರನ್ ಸಿಡಿಸಿದ್ದರು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟೂರ್ನಿಯಲ್ಲಿ ಗಾಯಗೊಂಡು ತಂಡದಿಂದ ಹೊರ ನಡೆದಿದ್ದರು. ಆ ಬಳಿಕ ಐಪಿಎಲ್‍ನಲ್ಲಿ ಡೆಲ್ಲಿ ತಂಡದ ಪರ ಆಡಿ 16 ಪಂದ್ಯಗಳಲ್ಲಿ 353 ರನ್ ಗಳಿಸಿದ್ದರು.

    https://twitter.com/shortarmjab_18/status/1196037686542290946

  • ಗೆಳತಿಯನ್ನ ಹತ್ಯೆಗೈದ ಪ್ರಿಯಕರನಿಗೆ ಮರಣ ದಂಡನೆ

    ಗೆಳತಿಯನ್ನ ಹತ್ಯೆಗೈದ ಪ್ರಿಯಕರನಿಗೆ ಮರಣ ದಂಡನೆ

    – ಸಹಾಯ ಮಾಡಿದ್ದ ಆರೋಪಿಯ ತಾಯಿ, ಅಕ್ಕನಿಗೆ ಜೀವಾವಧಿ ಶಿಕ್ಷೆ

    ಗುವಾಹಟಿ: ಗೆಳತಿಯನ್ನು ಹತ್ಯೆಗೈದು ಪ್ರಕರಣಕ್ಕೆ ತಿರುವು ನೀಡಲು ಯತ್ನಿಸಿದ್ದ ಆರೋಪಿಗೆ ಅಸ್ಸಾಂನ ಗುವಾಹಟಿ ಕೋರ್ಟ್ ಮರಣ ದಂಡನೆ ವಿಧಿಸಿದೆ.

    ಶ್ವೇತಾ ಅಗರ್ವಾಲ್ ಕೊಲೆಯಾಗಿದ್ದ ವಿದ್ಯಾರ್ಥಿನಿ. ಗೋವಿಂದ್ ಸಿಂಘಾಲ್ ಮರಣ ದಂಡನೆಗೆ ಗುರಿಯಾದ ಅಪರಾಧಿ. ಗೋವಿಂದ್ ಸಿಂಘಾಲ್ ಸಹಾಯ ಮಾಡಿದ್ದ ತಾಯಿ ಕಮಲಾ ದೇವಿ ಹಾಗೂ ಅಕ್ಕ ಭುವಾನಿ ಸಿಂಘಾಲ್ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ವಿದ್ಯಾರ್ಥಿನಿ ಶ್ವೇತಾ ಅಗರ್ವಾಲ್ 2015ರ ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದ ಟಾಪರ್ ಆಗಿದ್ದರು. ಬಳಿಕ ಗುವಾಹಟಿಯ ಕೆಸಿ ದಾಸ್ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಶ್ವೇತಾಗೆ ಗೋವಿಂದ್ ಪರಿಚಯವಾಗಿದ್ದ.

    ಚಾರ್ಜ್ ಶೀಟ್ ಪ್ರಕಾರ, 2017 ಡಿಸೆಂಬರ್ 4ರಂದು ಶ್ವೇತಾ ಗೆಳೆಯ ಗೋವಿಂದ್ ಸಿಂಘಾಲ್‍ನ ಬಾಡಿಗೆ ಮನೆಗೆ ಹೋಗಿದ್ದಳು. ಇಬ್ಬರು ಮನೆಯಲ್ಲಿ ಕುಳಿತು ಮದುವೆ ವಿಚಾರವಾಗಿ ಮಾತನಾಡುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದರು. ಕೋಪಗೊಂಡ ಗೋವಿಂದ್ ಶ್ವೇತಾಗೆ ಹೊಡೆದು ತಳ್ಳಿದ್ದ. ಪರಿಣಾಮ ಶ್ವೇತಾ ಗೋಡೆಗೆ ಡಿಕ್ಕಿ ಹೊಡೆದಿದ್ದರಿಂದ ತಲೆಗೆ ಭಾರೀ ಹೊಡೆತ ಬಿದ್ದು ಪ್ರಜ್ಞೆ ತಪ್ಪಿದ್ದರು.

    ಪ್ರಕರಣಕ್ಕೆ ಟ್ವಿಸ್ಟ್ ನೀಡಲು ಮುಂದಾಗಿದ್ದ ಗೋವಿಂದ್‍ಗೆ ತಾಯಿ ಹಾಗೂ ಅಕ್ಕ ಸಹಾಯಕ್ಕೆ ಮುಂದಾಗಿದ್ದರು. ಶ್ವೇತಾ ಅವರನ್ನು ಬಾತ್ ರೂಂನಲ್ಲಿ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಆದರೆ ಪೊಲೀಸ್ ವಿಚಾರಣೆ ವೇಲೆ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಗೋವಿಂದ್, ಆತನ ತಾಯಿ ಹಾಗೂ ಅಕ್ಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಆರೋಪಿಗಳ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಮೂವರನ್ನು ಅಪರಾಧಿಗಳೆಂದು ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ.

  • ಅಕ್ರಮವಾಗಿ ಸಾಗಿಸುತ್ತಿದ್ದ 43 ಲಕ್ಷ ರೂ. ಮೌಲ್ಯದ 1.3 ಕೆಜಿ ಚಿನ್ನ ವಶ

    ಅಕ್ರಮವಾಗಿ ಸಾಗಿಸುತ್ತಿದ್ದ 43 ಲಕ್ಷ ರೂ. ಮೌಲ್ಯದ 1.3 ಕೆಜಿ ಚಿನ್ನ ವಶ

    ಗುವಾಹಟಿ: ಅಕ್ರಮವಾಗಿ 43 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

    ಕೇರಳದ ಕಣ್ಣೂರಿನ ಮೂಲದ ಮೊಹಮ್ಮದ್ ಹ್ಯಾರಿಸ್ (51) ಬಂಧಿತ ಆರೋಪಿ. ಗುವಾಹಟಿ ರೈಲ್ವೇ ನಿಲ್ದಾಣದಲ್ಲಿ ಮೊಹಮ್ಮದ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಮೊಹಮ್ಮದ್ ಕಾಮ್ರಪ್ ಏಕ್ಸ್‌ಪ್ರೆಸ್ ರೈಲಿನ ಬೋಗಿ ಸಂಖ್ಯೆ ಬಿ-3ರ 11ನೇ ಸೀಟ್‍ನಲ್ಲಿ ಪ್ರಯಾಣಿಸುತ್ತಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಆತನ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ರೈಲು ಇಂದು ಬೆಳಗ್ಗೆ 7.45 ಗಂಟೆಗೆ ಗುವಾಹಟಿ ರೈಲು ನಿಲ್ದಾಣದ ಪ್ಲ್ಯಾಟ್‍ಫಾರಂ ನಂಬರ್ 1ರಲ್ಲಿ ಬಂದು ನಿಂತಿತ್ತು. ತಕ್ಷಣವೇ ರೈಲು ಹತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಬಂಧಿತ ಮೊಹಮ್ಮದ್ ಬಳಿ 8 ಚಿನ್ನದ ಬಿಸ್ಕೆಟ್‍ಗಳು ಸಿಕ್ಕಿದ್ದು, ಅವುಗಳ ಒಟ್ಟು ತೂಕ 1.3 ಕೆಜಿ ಆಗಿದೆ. ಸುಮಾರು 43 ಲಕ್ಷ ರೂ. ಮೌಲ್ಯದ ಚಿನ್ನ ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

    ಗುವಾಹಟಿ ರೈಲ್ವೇ ನಿಲ್ದಾಣದಲ್ಲಿ ಏಪ್ರಿಲ್ 13ರಂದು 12 ಚಿನ್ನದ ಬಿಸ್ಕೆಟ್‍ಗಳನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದರು. ಅದರ ಮೌಲ್ಯವು 60 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಅಷ್ಟೇ ಅಲ್ಲದೆ 2018 ಮಾರ್ಚ್ 23ರಲ್ಲಿ 12 ಚಿನ್ನದ ಬಿಸ್ಕೆಟ್, ಅದೇ ತಿಂಗಳ 15ರಂದು 1.5 ಕೆಜಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

  • ಕಳ್ಳಬಟ್ಟಿ ಸಾರಾಯಿ ಸೇವಿಸಿ 80 ಮಂದಿ ದುರ್ಮರಣ- 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಕಳ್ಳಬಟ್ಟಿ ಸಾರಾಯಿ ಸೇವಿಸಿ 80 ಮಂದಿ ದುರ್ಮರಣ- 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಗುವಾಹಟಿ: ಕಳ್ಳಬಟ್ಟಿ ಸಾರಾಯಿ ಸೇವಿಸಿ 80 ಮಂದಿ ಟೀ ಎಸ್ಟೇಟ್ ಕಾರ್ಮಿಕರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ದುರ್ಘಟನೆ ಪೂರ್ವ ಅಸ್ಸಾಂನ ಗೊಲ್ಘಾಟ್ ಹಾಗೂ ಜೊರ್ಹಟ್ ಜಿಲ್ಲೆಯಲ್ಲಿ ನಡೆದಿದೆ.

    ಗುರುವಾರ ರಾತ್ರಿ ಸಲ್ಮರಾ ಟೀ ಎಸ್ಟೇಟ್‍ನಲ್ಲಿ ಕಾರ್ಮಿಕರು ಕಳ್ಳಬಟ್ಟಿ ಸಾರಾಯಿ ಸೇವಿಸಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಸ್ಥಳೀಯ ಸ್ವಾಹಿದ್ ಕುಶಾಲ್ ಕೊನ್ವಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇವರೆಗೆ ಚಿಕಿತ್ಸೆ ಫಲಕಾರಿಯಾಗದೇ 80 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

    ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿರುವ ಅಸ್ವಸ್ಥ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಸುತ್ತಮುತ್ತಲಿನ ವೈದ್ಯಕೀಯ ಕಾಲೇಜುಗಳ ವೈದ್ಯರು ಕೂಡ ಆಗಮಿಸುತ್ತಿದ್ದಾರೆ. ಈ ಕುರಿತು ಅಸ್ಸಾಂ ಆರೋಗ್ಯ ಸಚಿವರು ಪ್ರತಿಕ್ರಿಯಿಸಿ, ಆಸ್ಪತ್ರೆಯಿಂದ ಪ್ರತಿ 10 ನಿಮಿಷಕ್ಕೊಮ್ಮೆ ನಾವು ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, ಅಸ್ಸಾಂನ ಗುವಾಹಟಿಯಲ್ಲಿಯಾದ ದುರಂತದಿಂದ ಬೇಸರವಾಗಿದೆ. ಮೃತರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು ಬೇಗನೇ ಚೇತರಿಸಿಕೊಳ್ಳಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಸದ್ಯ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ವೇಳೆ ಗೊಲ್ಘಾಟ್‍ನ ದ್ರೌಪದಿ ಓರನ್ (65) ಹಾಗೂ ಆಕೆಯ ಮಗ ಸಂಜು ಓರಾನ್ ಮನೆಯಲ್ಲಿ ಕಳ್ಳಬಟ್ಟಿಯನ್ನು ತಯಾರಿಸಲಾಗಿತ್ತು. ಅಲ್ಲದೆ ಈ ಘಟನೆಯಲ್ಲಿ ತಾಯಿ, ಮಗ ಇಬ್ಬರೂ ಕೂಡ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೋರ್ಹಟ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ಮಿಕರಲ್ಲಿ 9 ಮಂದಿ ಮಹಿಳೆಯರು ಹಾಗೂ 11 ಮಂದಿ ಪುರುಷರು ಸಾವನ್ನಪ್ಪಿದ್ದಾರೆ. ಟೀ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಅವರ ವಾರದ ಸಂಬಳ ದೊರಕಿತ್ತು ಆದರಿಂದ ಅವರು ಮದ್ಯಪಾನ ಮಾಡಿದ್ದಾರೆ. ಆಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೋಗಿಬೆಲ್ ಸೇತುವೆ ನೋಡುವ ಸಂಭ್ರಮದಲ್ಲಿ ಜೀವ ಕಳೆದುಕೊಂಡ ಬಾಲಕ..!

    ಬೋಗಿಬೆಲ್ ಸೇತುವೆ ನೋಡುವ ಸಂಭ್ರಮದಲ್ಲಿ ಜೀವ ಕಳೆದುಕೊಂಡ ಬಾಲಕ..!

    – ಅಪಘಾತದ ವಿಡಿಯೋ ವೈರಲ್

    ಗುವಾಹಟಿ: ದೇಶದಲ್ಲೇ ಅತ್ಯಂತ ಉದ್ದವಾಗಿರುವ ಅಸ್ಸಾಂನ ಬೋಗಿಬೆಲ್ ಸೇತುವೆಯನ್ನು ನೋಡುವ ಸಂಭ್ರಮದಲ್ಲಿ 7 ವರ್ಷದ ಬಾಲಕನೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿದ್ದು, ಅಪಘಾತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮೃತಪಟ್ಟ ಬಾಲಕನನ್ನು ಸೌರಭ್ ಮೋರನ್ ಎಂದು ಗುರುತಿಸಲಾಗಿದ್ದು, ಈತ ತಿನ್ಸುಕ್ ಬಾಘಜನ್‍ನ ಗ್ರಾಮದ ನಿವಾಸಿಯಾಗಿದ್ದಾನೆ. ಹೊಸದಾಗಿ ಉದ್ಘಾಟನೆಗೊಂಡಿದ್ದ ಸೇತುವೆಯನ್ನು ನೋಡಲು ಬಾಲಕ ತನ್ನ ಕುಟುಂಬದೊ0ದಿಗೆ ಆಗಮಿಸಿದ್ದನು. ಸೇತುವೆಯ ಇನ್ನೊಂದು ಬದಿಗೆ ಹೋಗಲು ರಸ್ತೆ ಮೇಲೆ ಏಕಾಏಕಿ ಓಡಿದ್ದಾನೆ. ಈ ವೇಳೆ ಕಾರೊಂದು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದನು. ಕೂಡಲೇ ಬಾಲಕನನ್ನು ದಿಬ್ರುಘರ್‍ನ ಅಸ್ಸಾಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಬಾಲಕ ಮಾರ್ಗಮಧ್ಯೆಯೇ ಅಸುನೀಗಿದ್ದಾನೆ.

    ಇದೇ ಕ್ರಿಸ್‍ಮಸ್ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂನ ಬೋಗಿಬೆಲ್ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು. ಆದರೆ ಇಂದು ಸೇತುವೆ ನೋಡುವ ಭರದಲ್ಲಿ ಬಾಲಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಬಾಲಕನಿಗೆ ಕಾರು ಡಿಕ್ಕಿ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಓದಿ: ದೇಶದ ಉದ್ದದ ರೈಲು, ರಸ್ತೆ ಸೇತುವೆ ಉದ್ಘಾಟಿಸಿ ಕಾಂಗ್ರೆಸ್ಸಿಗೆ ಟಾಂಗ್ ಕೊಟ್ಟ ಮೋದಿ

    ವಿಡಿಯೋದಲ್ಲಿ ಏನಿದೆ?
    ಕಾರಿನಲ್ಲಿದ್ದ ಪ್ರಯಾಣಿಕರು ಸೇತುವೆ ಮೇಲಿನ ತಮ್ಮ ಮೊದಲ ಪ್ರಯಾಣವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದರು. ಈ ವೇಳೆ ರಸ್ತೆಯ ಬದಿ ನಿಂತಿದ್ದ ಮತ್ತೊಂದು ಕಾರಿನ ಮುಂಭಾಗದಿಂದ ಬಾಲಕನೋರ್ವ ಏಕಾಏಕಿ ಬಲಬದಿಗೆ ಓಡಿ ಬಂದಿದ್ದಾನೆ. ಕಾರ್ ಅಡ್ಡ ಇದ್ದ ಕಾರಣ ಚಾಲಕನಿಗೆ ಬಾಲಕ ಬಂದಿದ್ದು ಗಮನಕ್ಕೆ ಬಂದಿರಲಿಲ್ಲ. ಪರಿಣಾಮ ಕಾರ್ ಬಾಲಕನಿಗೆ ಗುದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಂಡೀಸ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಜಯ

    ವಿಂಡೀಸ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಜಯ

    ಗುವಾಹಟಿ: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ರೋಹಿತ್ ಶರ್ಮಾ ಭರ್ಜರಿ ಶತಕಗಳ ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ.

    ಟಾಸ್ ಸೋತು ಬ್ಯಾಟಿಂಗ್ ನಡೆಸಿ 323 ರನ್‍ಗಳ ಬೃಹತ್ ರನ್ ಗುರಿ ನೀಡಿದ ವೆಸ್ಟ್ ಇಂಡೀಸ್‍ಗೆ ಕೇವಲ 42.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿ ಟೀಂ ಇಂಡಿಯಾ ಭರ್ಜರಿಯಾಗಿ ಉತ್ತರ ನೀಡಿತು. ಟೀಂ ಇಂಡಿಯಾ ಪರ ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೇವಲ 117 ಎಸೆತಗಳಲ್ಲಿ 15 ಬೌಂಡರಿ, 8 ಸಿಕ್ಸರ್ ನೆರವಿನಿಂದ ಔಟಾಗದೇ 152 ರನ್ ಸಿಡಿಸಿದರು. ಇತ್ತ ನಾಯಕ ವಿರಾಟ್ ಕೊಹ್ಲಿ 107 ಎಸೆತಗಳಲ್ಲಿ 140 ರನ್ ಸಿಡಿಸಿದರು. ಇಬ್ಬರ ಜೋಡಿ 2ನೇ ವಿಕೆಟ್‍ಗೆ 200 ಪ್ಲಸ್ ರನ್ ಜೊತೆಯಾಟ ನೀಡಿದರು.

    ಇದಕ್ಕು ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ ಪರ ಶಿಮ್ರಾನ್ ಹೆಟ್ಮಾಯೆರ್ 106 ರನ್ ಸಿಡಿಸಿ ಶತಕ ಗಳಿಸಿದರು. ಉಳಿದಂತೆ ಕೀರನ್ ಪೊವೆಲ್ ಆಕರ್ಷಕ 51 ರನ್ ಸಿಡಿಸಿದರು. ಇಬ್ಬರ ಆಟಗಾರರ ಬ್ಯಾಟಿಂಗ್ ನೆರವಿನಿಂದ ವಿಂಡೀಸ್ ನಿಗದಿತ 50 ಓವರ್‍ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ರನ್ 322 ಗಳಿಸಿತು. ಇದನ್ನು ಓದಿ: ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಟೀಂ ಇಂಡಿಯಾ ಪರ ಯಜವೇಂದ್ರ ಚಹಲ್ 41 ರನ್ ನೀಡಿ 3 ವಿಕೆಟ್, 81 ರನ್ ನೀಡಿ ಶಮಿ 2 ವಿಕೆಟ್, ಜಡೇಜಾ 2, ಖಲೀಲ್ ಅಹ್ಮದ್ 1 ವಿಕೆಟ್ ಪಡೆದರು. ಪಂದ್ಯದಲ್ಲಿ 140 ರನ್ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಗುವಾಹಟಿ : ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ ದಾಖಲಿಸಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

    386 ಇನ್ನಿಂಗ್ಸ್ ಗಳಲ್ಲಿ 60 ಶತಕ ಸಿಡಿಸಿದ ದಾಖಲೆ ಹೆಗ್ಗಳಿಕೆ ಕೊಹ್ಲಿ ಪಡೆದಿದ್ದು, ಸಚಿನ್ ಅವರಗಿಂತ 40 ಕಡಿಮೆ ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ ಸಿಡಿಸಿದ 36ನೇ ಶತಕ, ತವರು ನೆಲದಲ್ಲಿ 15ನೇ ಶತಕ ಹಾಗೂ ನಾಯಕನಾಗಿ 14ನೇ ಶತಕ ಇದಾಗಿದೆ.

    ದಾಖಲೆಯ ಜೊತೆಯಾಟ: ಆರಂಭದಿಂದಲೂ ಬಿರುಸಿನ ಆಟಕ್ಕೆ ಮುಂದಾದ ಕೊಹ್ಲಿ 35 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. 88 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಅಲ್ಲದೇ ರೋಹಿತ್ ಶರ್ಮಾ ಅವರೊಂದಿಗೆ ದಾಖಲೆಯ ಜೊತೆಯಾಟ ನೀಡಿ ಸಚಿನ್, ಸೆಹ್ವಾಗ್ ದಿಗ್ಗಜರ ಸಾಲಿಗೆ ಸೇರಿದರು. ಕೊಹ್ಲಿ 107 ಎಸೆತಗಳಲ್ಲಿ 21 ಬೌಂಡರಿ, 2 ಸಿಕ್ಸರ್ ನೆರವಿನಿಂದ 140 ರನ್ ಸಿಡಿಸಿ ಔಟಾದರು. ಇತ್ತ ರೋಹಿತ್ ಶರ್ಮಾ 81 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

    ಎರಡನೇ ವಿಕೆಟ್ ಗೆ 246 ರನ್ ಕೂಡಿ ಹಾಕಿದ ರೋಹಿತ್, ಕೊಹ್ಲಿ ಜೋಡಿ 8ನೇ ಬಾರಿಗೆ 100 ಪ್ಲಸ್ ರನ್ ಜೊತೆಯಾಟ ನೀಡಿದ ಸಾಧನೆ ಮಾಡಿದರು. ಸಚಿನ್, ಸೆಹ್ವಾಗ್ ಜೋಡಿಯೂ 8 ಬಾರಿ 100 ಪ್ಲಸ್ ರನ್ ಜೊತೆಯಾಟ ನೀಡಿದೆ. ಉಳಿದಂತೆ ಪಟ್ಟಿಯಲ್ಲಿ ಗಂಗೂಲಿ, ಸಚಿನ್ ಜೋಡಿ 26 ಬಾರಿ, ಶ್ರೀಲಂಕಾ ಆಟಗಾರ ದಿಲ್ಶಾನ್, ಕುಮಾರ ಸಂಗಕ್ಕರ ಜೋಡಿ 20 ಬಾರಿ, ಆಸೀಸ್ ನ ಅಡಂ ಗಿಲ್‍ಕ್ರಿಸ್ಟ್, ಮಾಥ್ಯೂ ಹೇಡನ್ ಜೋಡಿ 16 ಬಾರಿ ಶತಕದ ಜೋತೆಯಾಟ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭರ್ಜರಿ ಸ್ವಾಗತ ಪಡೆದ ಹಿಮಾದಾಸ್

    ಭರ್ಜರಿ ಸ್ವಾಗತ ಪಡೆದ ಹಿಮಾದಾಸ್

    -ಅಭಿಮಾನಿಗಳು ನೀಡಿದ್ರು ಬಿರುದು

    ಗುವಾಹತಿ: ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದು ಹೆಮ್ಮೆ ತಂದಿದ್ದ ಹಿಮಾದಾಸ್ ತವರಿಗೆ ಆಗಮಿಸಿದ್ದು, ಅಸ್ಸಾಂ ಸರ್ಕಾರ ಹಾಗೂ ಅಭಿಮಾನಿಗಳು ಹಿಮಾದಾಸ್‍ಗೆ ಭರ್ಜರಿ ಸ್ವಾಗತ ಕೋರಿದ್ದಾರೆ.

    18 ವರ್ಷದ ಹಿಮಾದಾಸ್ ಏಷ್ಯನ್ ಗೇಮ್ಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹಾರಾಡುವಂತೆ ಮಾಡಿದ್ದರು. ಏಷ್ಯನ್ ಗೇಮ್ಸ್ ಬಳಿಕ ಮೊದಲ ಬಾರಿಗೆ ಅಸ್ಸಾಂಗೆ ಭೇಟಿ ನೀಡಿದ ಹಿಮಾದಾಸ್‍ಗೆ ಸಿಎಂ ಸರಬಾನಂದ ಸೊನೋವಾಲ್ ಸ್ವಾಗತ ಕೋರಿದರು. ಈ ವೇಳೆ ಹಿಮಾದಾಸ್‍ಗೆ ‘ಧಿಂಗ್ ಎಕ್ಸ್ ಪ್ರೆಸ್’ ಎಂಬ ಬಿರುದು ನೀಡಿ ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಹಲವು ರಾಜಕೀಯ ಮುಖಂಡರು ಹಾಜರಿದ್ದರು.

    ವಿಮಾನ ನಿಲ್ದಾಣದಲ್ಲಿ ಹಿಮಾದಾಸ್ ಆಗಮನಕ್ಕಾಗಿಯೇ ವಿಶೇಷ ರೆಡ್ ಕಾರ್ಪೆಟ್ ವ್ಯವಸ್ಥೆ ಮಾಡಲಾಗಿತ್ತು. ಅದರ ಮೇಲೆ 1.2.3.4.5 ಎಂದು ಸಂಖ್ಯೆ ನೀಡಿ, ರನ್ನಿಂಗ್ ಪಥದಂತೆ ಮಾಡಲಾಗಿತ್ತು. ಈ ವೇಳೆ 25 ಮಂದಿಯ ಅಸ್ಸಾಂ ವಿಶೇಷ ಮಹಿಳಾ ಪೊಲೀಸ್ ಪಡೆ ಹಿಮಾದಾಸ್‍ಗೆ ಸ್ವಾಗತ ಕೋರಿದರು. ಸಿಎಂ ಸರ್ಬಾನಂದ ಅವರು ಸಾಂಪ್ರದಾಯಿಕ ಶಾಲು ನೀಡಿ ಹಿಮಾದಾಸ್‍ಗೆ ಗೌರವ ನೀಡಿದರು.

    ಈ ವೇಳೆ ಐಷಾರಾಮಿ ಕಾರಿನಲ್ಲಿ ಮೆರವಣಿಗೆ ಮೂಲಕ ಹಿಮಾದಾಸ್‍ರನ್ನು ಕರೆದುಕೊಂಡು ಹೋಗಲಾಯಿತು. ರಸ್ತೆ ಎರಡು ಬದಿ ನೆರೆದಿದ್ದ ಅಭಿಮಾನಿಗಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ರಾಜಕೀಯ ನಾಯಕರು, ಸಾರ್ವಜನಿಕರು ಹಿಮಾದಾಸ್ ಹೆಸರು ಕರೆದು ಘೋಷಣೆ ಕೂಗಿದರು.

    ಹಿಮಾದಾಸ್ ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀ ಓಟವನ್ನು 51.46 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಬೆಳ್ಳಿ ಪದಕ ಪಡೆದಿದ್ದರು. ಅಲ್ಲದೇ 4*400 ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹಿಮಾದಾಸ್ ರನ್ನು ಅಸ್ಸಾಂ ಸರ್ಕಾರ ಕ್ರೀಡಾ ರಾಯಭಾರಿಯಾಗಿ ಆಯ್ಕೆ ಮಾಡಿ ಈ ಹಿಂದೆಯೇ ಗೌರವಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಬರೋಬ್ಬರಿ 40 ಸಾವಿರಕ್ಕೆ 1 ಕೆ.ಜಿ ಚಹಾ ಪುಡಿ ಮಾರಾಟ!

    ಬರೋಬ್ಬರಿ 40 ಸಾವಿರಕ್ಕೆ 1 ಕೆ.ಜಿ ಚಹಾ ಪುಡಿ ಮಾರಾಟ!

    ಗುವಾಹಟಿ: ಅರುಣಾಚಲ ಪ್ರದೇಶ ರಾಜ್ಯದ ರಾಜಧಾನಿಯಲ್ಲಿ ವಿಶೇಷ ಚಹಾ ಪುಡಿಯೊಂದು ಪ್ರತಿ ಕೆಜಿಗೆ ಬರೋಬ್ಬರಿ 40 ಸಾವಿರಕ್ಕೆ ಮಾರಾಟವಾಗುವ ಮೂಲಕ ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದೆ.

    ಕಳೆದ ಗುರುವಾರ ಗುವಾಹಟಿಯ ಚಹಾ ಪುಡಿ ಹರಾಜು ಪ್ರಕ್ರಿಯೆಯಲ್ಲಿ ಗೋಲ್ಡನ್ ನೀಡಲ್ಸ್ ಟೀ ತಳಿಯ ಚಹಾ ಎಲೆಯ ಪುಡಿಯು ಪ್ರತಿ ಕೆಜಿಗೆ 40,000 ರೂ.ಗೆ ಮಾರಾಟವಾಗುವ ಮೂಲಕ ವಿಶ್ವದಲ್ಲೇ ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಚಹಾ ತಳಿಯಾಗಿ ಹೆಸರು ಪಡೆದುಕೊಂಡಿದೆ.

    ದೋನಿ ಪೋಲೊ ಎಂಬ ಎಸ್ಟೇಟ್‍ನಲ್ಲಿ ಅಭಿವೃದ್ಧಿ ಪಡಿಸಿ ಬೆಳೆದ ಗೋಲ್ಡನ್ ನೀಡಲ್ಸ್ ಟೀ ತಳಿಯು ಅತ್ಯಂತ ಉತ್ಕೃಷ್ಟ ಮಟ್ಟದ ಚಹಾ ಪುಡಿ ಎಂದು ಖ್ಯಾತಿ ಪಡೆದುಕೊಂಡಿದೆ. ಈ ಎಸ್ಟೇಟ್ ಕಳೆದ 1987 ರಿಂದಲೂ ಸಾಂಪ್ರದಾಯಿಕ ಶೈಲಿಯ ಚಹಾ ಬೆಳೆಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಚಹಾ ಪುಡಿಗಳು ವಿಶ್ವದಲ್ಲಿಯೇ ಉನ್ನತ ದರ್ಜೆಯನ್ನು ಪಡೆದುಕೊಂಡಿವೆ. ಇದನ್ನೂ ಓದಿ:ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!

    ಈ ಕುರಿತು ಪ್ರತಿಕ್ರಿಯಿಸಿದ ಗುವಾಹಟಿ ಚಹಾ ಹರಾಜು ಖರೀದಿದಾರ ಸಂಘದ ಕಾರ್ಯದರ್ಶಿ ದಿನೇಶ್ ಬಿಹಾನಿರವರು, ಗೋಲ್ಡನ್ ನೀಡಲ್ಸ್ ಚಹಾ ತಳಿಯು ಪ್ರತಿ ಕೆಜಿಗೆ 40 ಸಾವಿರಕ್ಕೆ ಮಾರಾಟವಾಗುವ ಮೂಲಕ ವಿಶ್ವದಲ್ಲಿಯೇ ಅತಿಹೆಚ್ಚು ಮೊತ್ತ ಪಡೆದ ಚಹಾಪುಡಿ ಎಂದೆನಿಸಿಕೊಂಡಿದೆ. ಅಲ್ಲದೇ ಈ ಮೊದಲು ಜುಲೈ 24ರಂದು ಅಸ್ಸಾಂನ ಚಹಾ ಎಲೆಯು 39 ಸಾವಿರಗಳಿಸುವ ಮೂಲಕ ದಾಖಲೆ ನಿರ್ಮಿಸಿತ್ತು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾತ್ರಿಯಿಡಿ ಜೋಡಿಯನ್ನು ಥಳಿಸಿ, ಬಟ್ಟೆ ಹರಿದು ಮಹಿಳೆಯ ತಲೆ ಬೋಳಿಸಿದ ಗ್ರಾಮಸ್ಥರು!

    ರಾತ್ರಿಯಿಡಿ ಜೋಡಿಯನ್ನು ಥಳಿಸಿ, ಬಟ್ಟೆ ಹರಿದು ಮಹಿಳೆಯ ತಲೆ ಬೋಳಿಸಿದ ಗ್ರಾಮಸ್ಥರು!

    ಗುಹಾವಟಿ: ಅಕ್ರಮ ಸಂಬಂಧ ಹೊಂದಿದ್ದಾರೆಂದು ಗ್ರಾಮಸ್ಥರು ಜೋಡಿಯನ್ನು ಇಡೀ ರಾತ್ರಿ ಥಳಿಸಿ ಮಹಿಳೆಯ ತಲೆ ಬೋಳಿಸಿದ ಘಟನೆ ಭಾನುವಾರ ಅಸ್ಸಾಂನ ನಾಗಂನ್‍ನಲ್ಲಿ ನಡೆದಿದೆ.

    ಶನಿವಾರ ರಾತ್ರಿ ಜುಮುರ್ಮೂರ್ ನಲ್ಲಿ ಗ್ರಾಮಸ್ಥರು ಆ ಜೋಡಿಯನ್ನು ಥಳಿಸಲು ಶುರು ಮಾಡಿದ್ದರು. ಭಾನುವಾರ ಬೆಳಗ್ಗೆ ಗಂಭೀರವಾಗಿ ಗಾಯಗೊಂಡಿದ್ದ ಜೋಡಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಹಲ್ಲೆಗೊಳಗಾದ ಜೋಡಿಯನ್ನು ಕತಿಯಾಟೋಲಿಯಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ನಾಗಂನ್‍ನ ಭೋಗೇಶ್ವರಿ ಪುಕನಾನಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭಾನುವಾರ ಬೆಳಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಪಡೆದ ಬಳಿಕ ನಮ್ಮ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಜೋಡಿಯನ್ನು ನಮಗೆ ಒಪ್ಪಿಸಿದ್ದರು. ಆ ಜೋಡಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎಸ್‍ಪಿ ರಿಪುಲ್ ದಾಸ್ ಹೇಳಿದ್ದಾರೆ.

    ಪಕ್ಕದ ತುಬುಕಿ ಗ್ರಾಮದ ವ್ಯಕ್ತಿಯೊಬ್ಬ ಶನಿವಾರ ರಾತ್ರಿ ಮಹಿಳೆ ಮನೆಗೆ ಹೋಗಿದ್ದಾನೆ. ಆಗ ಗ್ರಾಮಸ್ಥರು ಇಬ್ಬರ ನಡುವೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ವ್ಯಕ್ತಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಗ ಗ್ರಾಮಸ್ಥರು ಆತ ಮತ್ತು ಮಹಿಳೆಯನ್ನು ಹಿಡಿದು ಥಳಿಸಿದ್ದಾರೆ. ಕೊನೆಗೆ ಗ್ರಾಮದ ಮಹಿಳೆಯೊಬ್ಬರು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ತಲೆ ಬೊಳಿಸಿದ್ದಾರೆ. ಅಲ್ಲದೇ ಅವರ ಬಟ್ಟೆ ಹರಿದು ರಾತ್ರಿಯಿಡಿ ಕಿರುಕುಳ ನೀಡಿದ್ದಾರೆ.

    ಇಬ್ಬರಿಗೂ ಮದುವೆಯಾಗಿದೆ. ಇಬ್ಬರು ಅಕ್ರಮ ಸಂಬಂಧ ಹೊಂದುವ ಮೂಲಕ ತಮ್ಮ ಜೀವನ ಸಂಗಾತಿಗೆ ಮೋಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಗ್ರಾಮಸ್ಥರು ಅವರನ್ನು ಥಳಿಸಿದ್ದಾರೆ. ಸದ್ಯ ಪ್ರಾಥಮಿಕ ತನಿಖೆ ನಡೆಸಿ ನಂತರ ಕೇಸ್ ದಾಖಲಿಸಿಕೊಳ್ಳಲಿದ್ದೇವೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.