Tag: Guwahati

  • ದರೋಡೆ ಸಮಯದಲ್ಲಿ ಕಿಚಡಿ ಮಾಡಿ ಸಿಕ್ಕಿಬಿದ್ದ ಕಳ್ಳ

    ದರೋಡೆ ಸಮಯದಲ್ಲಿ ಕಿಚಡಿ ಮಾಡಿ ಸಿಕ್ಕಿಬಿದ್ದ ಕಳ್ಳ

    ದಿಸ್ಪುರ್: ಮನೆಯೊಂದರಲ್ಲಿ ದರೋಡೆ ನಡೆಸಲು ಹೋಗಿದ್ದ ಕಳ್ಳನಿಗೆ ಹಸಿವೆಯಾಗಿದ್ದ ಕಾರಣ ಅಡುಗೆ ಮನೆಯಲ್ಲಿ ಕಿಚಡಿ ಬೇಯಿಸಲು ಹೋಗಿ ಸಿಕ್ಕಿ ಬಿದ್ದಿರುವ ಹಾಸ್ಯಕರ ಘಟನೆ ಗುವಾಹಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಕಳ್ಳ ರಾತ್ರಿ ಹೊತ್ತು ಮನೆಯೊಂದಕ್ಕೆ ನುಗ್ಗಿದ್ದಾನೆ. ಈ ಸಂದರ್ಭದಲ್ಲಿ ಹಸಿದಿದ್ದ ಆತ ಮನೆಯ ಅಡುಗೆ ಮನೆಗೆ ಹೋಗಿ ಕಿಚಡಿ ಬೇಯಿಸಲು ಪ್ರಾರಂಭಿಸಿದ್ದಾನೆ. ಅಡುಗೆ ಮನೆಯಿಂದ ಬರುತ್ತಿದ್ದ ಶಬ್ಧವನ್ನು ಆಲಿಸಿದ ಮನೆಯವರು ತಕ್ಷಣ ಎಚ್ಚೆತ್ತುಕೊಂಡು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಎತ್ತರದ ಆದಿಗುರು ಶಂಕರಚಾರ್ಯರ ಪ್ರತಿಮೆ ಸ್ಥಾಪನೆ!

    ಸ್ಥಳೀಯರು ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಲಾಗಿದೆ. ಈ ಹಾಸ್ಯಕರ ದರೋಡೆಯ ಘಟನೆಯನ್ನು ಅಸ್ಸಾಂ ಪೊಲೀಸರು ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಆಹಾರ ಕಳ್ಳನ ಕುತೂಹಲಕಾರಿ ಪ್ರಕರಣ! ಆಹಾರ ನಿಮ್ಮ ಆರೋಗ್ಯಕ್ಕೆ ಪ್ರಯೋಜನ ಉಂಟುಮಾಡುತ್ತದೆಯಾದರೂ ಕಳ್ಳತನದ ಸಮಯದಲ್ಲಿ ಕಿಚಡಿ ಬೇಯಿಸುವುದು ನಿಮ್ಮ ಯೋಗಕ್ಷೇಮಕ್ಕೆ ಹಾನಿಯುಂಟುಮಾಡುತ್ತದೆ. ಕಳ್ಳನನ್ನು ಬಂಧಿಸಲಾಗಿದೆ. ಹಾಗೂ ಗುವಾಹಟಿ ಪೊಲೀಸರು ಅವನಿಗೆ ಬಿಸಿ ಊಟವನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಟ್ಟಿಟ್ಟರ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಓಮಿಕ್ರಾನ್‌ ಹರಡುತ್ತೆ, ಬೂಸ್ಟರ್‌ನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ: ICMR ವೈದ್ಯ

  • ಪಾನಿಪುರಿ ಪ್ರಿಯರಿಗೆ ಶಾಕಿಂಗ್ ನ್ಯೂಸ್- ನೀರಿಗೆ ಮೂತ್ರ ಬೆರೆಸಿದ ವೀಡಿಯೋ ವೈರಲ್

    ಪಾನಿಪುರಿ ಪ್ರಿಯರಿಗೆ ಶಾಕಿಂಗ್ ನ್ಯೂಸ್- ನೀರಿಗೆ ಮೂತ್ರ ಬೆರೆಸಿದ ವೀಡಿಯೋ ವೈರಲ್

    ದಿಸ್ಪುರ್: ಪಾನಿಪುರಿ, ಗೋಲ್‍ಗಪ್ಪಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿಯನ್ನಂತೂ ಯುವಕ- ಯುವತಿಯರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದೀಗ ಇಂತಹ ಪಾನಿಪುರಿ, ಗೋಲ್‍ಗಪ್ಪಾ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ವರದಿಯಾಗಿದೆ.

    ಹೌದು. ರಸ್ತೆ ಬದಿ ಪಾನಿಪುರಿ ಮಾರಾಟ ಮಾಡುತ್ತಿರುವ ವ್ಯಕ್ತಿಯೊಬ್ಬ ಪಾನಿಗೆ ತನ್ನ ಮೂತ್ರ ಬೆರೆಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಇದನ್ನೂ ಓದಿ: ಕಾಬೂಲ್‍ನಿಂದ ಭಾರತಕ್ಕೆ ಮರಳ್ತಿದ್ದಂತೆ ತಮ್ಮನಿಗೆ ಕಿಸ್ ಕೊಟ್ಟ ಅಕ್ಕ- ಭಾವನಾತ್ಮಕ ವೀಡಿಯೋ ವೈರಲ್

    ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕೈ ಗಾಡಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದಾನೆ. ಈ ವ್ಯಕ್ತಿ ಮಗ್ ಗೆ ಮೂತ್ರ ಮಾಡಿ ಅದನ್ನು ಪಾನಿಗೆ ಮಿಕ್ಸ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ 20 ಸೆಕೆಂಡ್ ವೀಡಿಯೋ ನೋಡಿದ ನೆಟ್ಟಿಗರು ವ್ಯಾಪಾರಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ ಕೂಡಲೇ ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.  ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ: ಹೆಚ್.ಡಿ. ಕುಮಾರಸ್ವಾಮಿ

    ಒಟ್ಟಿನಲ್ಲಿ ಗೋಲ್‍ಗಪ್ಪಾ ನೀರಿಗೆ ವ್ಯಕ್ತಿ ಮೂತ್ರ ಬೆರೆಸುವುದು ಕ್ಲೀಯರ್ ಆಗಿ ಕಾಣುತ್ತಿದೆ. ಹೀಗಾಗಿ ನೆಟ್ಟಿಗರು ವ್ಯಾಪಾರಿಯ ನಡತೆಯನ್ನು ಖಂಡಿಸಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ವ್ಯಾಪಾರಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಆತನನ್ನು ಬಂಧಿಸಿರುವುದಾಗಿ ವರದಿಯಾಗಿದೆ.  ಇದನ್ನೂ ಓದಿ: ತಾನು ಸೆಲೆಕ್ಟ್ ಮಾಡಿದ ಹಾಡು ಹಾಕೋವರೆಗೂ ಮದುವೆ ಹಾಲ್‍ಗೆ ತೆರಳಲು ನಿರಾಕರಿಸಿದ ವಧು!

  • ವಿಳಾಸ ಕೇಳುವ ನೆಪದಲ್ಲಿ ಕಿರುಕುಳ – ಪುಂಡನ ಗಾಡಿ ಚರಂಡಿಗೆ ತಳ್ಳಿದ ಮಹಿಳೆ

    ವಿಳಾಸ ಕೇಳುವ ನೆಪದಲ್ಲಿ ಕಿರುಕುಳ – ಪುಂಡನ ಗಾಡಿ ಚರಂಡಿಗೆ ತಳ್ಳಿದ ಮಹಿಳೆ

    ಡಿಸ್ಪುರ್: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯನ್ನು ತಡೆದು ಪುಂಡನೊಬ್ಬ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ವಿಚಲಿತರಾಗದೇ ಆತನ ಸ್ಕೂಟರ್ ಎಳೆದು ಚರಂಡಿಗೆ ತಳ್ಳಿ ಆತ ಎಲ್ಲೂ ತಪ್ಪಿಸಿಕೊಳ್ಳದಂತೆ ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಭಾವನಾ ಕಶ್ಯಪ್ ಎಂಬವರು ಈ ವೀಡಿಯೋವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅಡ್ರಸ್ ತಿಳಿದಿಲ್ಲ ಎಂದು ಎಷ್ಟು ಬಾರಿ ಹೇಳಿದರೂ ಪದೇ ಪದೇ ಆರೋಪಿ ಪೀಡಿಸುತ್ತಿದ್ದ, ಅಲ್ಲದೇ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳಲು ಆರಂಭಿಸಿದ, ಈ ವೇಳೆ ನಾನು ಒಂದು ಕ್ಷಣ ಏನಾಯಿತು ಎಂಬುದರ ಪ್ರಜ್ಞೆಯನ್ನು ಕಳೆದುಕೊಂಡೆ. ಆದರೆ ಯಾವಾಗ ನನ್ನ ಬಾಯಿಯಿಂದ ಮಾತುಗಳು ಬರಲಾರಂಭಿಸತೋ ಆಗ ಆತ ಭಯಭೀತಗೊಂಡ ಎಂದು ಭಾವನಾ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಮಹಿಳೆ ಸ್ಕೂಟರ್‍ನನ್ನು ಚರಂಡಿಗೆ ತಳ್ಳಿದ ನಂತರ ರೆಕಾರ್ಡ್ ಆಗಿರುವ ಈ ವೀಡಿಯೋದಲ್ಲಿ ಆರೋಪಿ ತನ್ನ ಸ್ಕೂಟರ್‍ನನ್ನು ಹಿಂದೆಗೆದುಕೊಳ್ಳಲು ಸ್ಥಳೀಯರಲ್ಲಿ ಸಹಾಯ ಕೇಳುತ್ತಿರುವುದನ್ನು ಕಾಣಬಹುದಾಗಿದೆ.

    ಘಟನೆ ವೇಳೆ ಆರೋಪಿ ವೇಗವಾಗಿ ಸ್ಕೂಟರನ್ನು ಚಲಾಯಿಸಲು ಪ್ರಯತ್ನಿಸಿದಾಗಲೂ ಮಹಿಳೆ ಅದನ್ನು ಹಿಡಿದು ಚರಂಡಿಗೆ ಎಳೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಗಲಾಟೆ ಮಾಡುತ್ತಿದ್ದ ವೇಳೆ ಸ್ಥಳೀಯರು ಸೇರುತ್ತಿದ್ದಂತೆ, ಮಹಿಳೆ ಮಧುಶನ ರಾಜ್ ಕುಮಾರ್ ಎಂಬ ವ್ಯಕ್ತಿಗೆ ನಡೆದ ಎಲ್ಲಾ ವಿಚಾರವನ್ನು ವಿವರಿಸಿದ್ದಾರೆ. ಆತನಿಂದ ಮಹಿಳೆ ಹೊರ ಹೋಗಲು ಹೆದರಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:2024ಕ್ಕೆ ಭಾರತದ ಪ್ರಧಾನಿ ಮಹಿಳೆಯಾಗಲಿ: ಜಯಾ ಬಚ್ಚನ್

  • ಅಸ್ಸಾಂ ಈಶಾನ್ಯ ಭಾಗದಲ್ಲಿ ಭಾರೀ ಭೂಕಂಪ

    ಅಸ್ಸಾಂ ಈಶಾನ್ಯ ಭಾಗದಲ್ಲಿ ಭಾರೀ ಭೂಕಂಪ

    ಗುವಾಹಟಿ: ಅಸ್ಸಾಂ ರಾಜ್ಯದ ಗುವಾಹಟಿ ಸೇರಿದಂತೆ ಈಶಾನ್ಯ ಭಾಗದಲ್ಲಿ ಭೂಕಂಪನವಾಗಿದೆ. ಇಂದು ಬೆಳಗ್ಗೆ 7 ಗಂಟೆ 55 ನಿಮಿಷಕ್ಕೆ ಭೂಮಿ ಕಂಪನವಾಗಿದೆ.

    ರಿಕ್ಟರ್ ಮಾಪನದಲ್ಲಿ 6.4ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ. ಅಸ್ಸಾಂನ ಸೋನಿತ್ಪುರ ಭೂಕಂಪನದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ. ಕಂಪನದ ಅನುಭವ ಆಗುತ್ತಿದ್ದಂತೆ ಭಯಗೊಂಡ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

    ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳು ಬಿರುಕು ಬಿಟ್ಟಿವೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಮಾಜಿ ಸಿಜೆಐ ರಂಜನ್ ಗೊಗೊಯಿ ಮುಂದಿನ ಅಸ್ಸಾಂ ಬಿಜೆಪಿ ಸಿಎಂ ಅಭ್ಯರ್ಥಿಯಾಗ್ತಾರೆ: ತರುಣ್ ಗೊಗೊಯಿ

    ಮಾಜಿ ಸಿಜೆಐ ರಂಜನ್ ಗೊಗೊಯಿ ಮುಂದಿನ ಅಸ್ಸಾಂ ಬಿಜೆಪಿ ಸಿಎಂ ಅಭ್ಯರ್ಥಿಯಾಗ್ತಾರೆ: ತರುಣ್ ಗೊಗೊಯಿ

    ಗುವಾಹಟಿ: ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಬಿಜೆಪಿ ಮುಖ್ಯಮಂತ್ರಿ ಆಗಿ ಆಯ್ಕೆಯಾಗುವ ಅವಕಾಶವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ತರುಣ್ ಗೊಗೊಯಿ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ತರುಣ್ ಗೊಗೊಯಿ ಅವರು, ಬಿಜೆಪಿ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ರಂಜನ್ ಗೊಗೊಯಿ ಅವರ ಹೆಸರಿಗೆ ಎಂಬ ಮಾಹಿತಿ ತಮ್ಮ ವಿಶ್ವಾಸನೀಯ ಮೂಲಗಳಿಂದ ಮಾಹಿತಿ ಲಭಿಸಿದೆ. ಮಾಜಿ ಸಿಐಜೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು, ಮುಂಬರುವ ನಿರೀಕ್ಷಿತ ಸಿಎಂ ಅಭ್ಯರ್ಥಿಯಾಗಿಯೂ ಕೂಡ ಅವರು ಅಂಗೀಕರಿಸಬಹುದು ಎಂದಿದ್ದಾರೆ.

    ‘ಎಲ್ಲವೂ ರಾಜಕೀಯ. ಅಯೋಧ್ಯೆ ರಾಮಮಂದಿರ ವಿವಾದ ಕುರಿತು ರಂಜನ್ ಗೊಗೊಯಿ ನೀಡಿದ ತೀರ್ಪಿನಿಂದ ಬಿಜೆಪಿ ಸಂತೋಷದಿಂದ ಇದೆ. ಈ ಹಿನ್ನೆಲೆಯಲ್ಲೇ ಅವರು ರಾಜಕೀಯ ಪ್ರವೇಶ ಮಾಡಿ ರಾಜ್ಯಸಭಾ ಸ್ಥಾನವನ್ನು ಅಂಗೀಕರಿಸಿದ್ದರು. ರಾಜ್ಯಸಭಾ ಸದಸ್ಯ ಸ್ಥಾನ ಅವರು ಏಕೆ ನಿರಾಕರಿಸಲಿಲ್ಲ? ಸುಲಭವಾಗಿ ಮಾನವ ಹಕ್ಕುಗಳ ಕಮಿಷನ್‍ನಲ್ಲಿ ಅಧ್ಯಕ್ಷರಾಗಬಹುದಿತ್ತು. ಅವರಿಗೆ ರಾಜಕೀಯ ಆಶ್ರಯವಿದ್ದು, ಆದ್ದರಿಂದಲೇ ನಾಮಿನೇಷನ್ ಅಂಗೀಕರಿಸಿದ್ದರು’ ಎಂದು ತರುಣ್ ಗೊಗೊಯಿ ಕಿಡಿಕಾರಿದ್ದಾರೆ.

    ಮುಂಬರುವ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಕಾಂಗ್ರೆಸ್ ಮೈತ್ರಿ ಒಕ್ಕೂಟದ ಸಲಹೆಗಾರನಾಗಿ ಇರುತ್ತೇನೆ. ಮೈತ್ರಿ ಒಕ್ಕೂಟದ ಪರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಣಯ ಮಾಡಲಾಗುತ್ತದೆ ಎಂದು ತರುಣ್ ಗೊಗೊಯಿ ಸ್ಪಷ್ಟಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಮಾಜಿ ಶಾಸಕ ರಾಣಾ ಗೋಸ್ವಾಮಿ ಬೇರೆಯದ್ದೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾನು ತರುಣ್ ಗೊಗೊಯ್ ಅವರೊಂದಿಗೆ ಮಾತನಾಡಿದ್ದೇನೆ. ಎಐಯುಡಿಎಫ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಸೂಕ್ತವಲ್ಲ ಎಂದು ಹೇಳಿದ್ದು, ಮಹಾ ಮೈತ್ರಿ ಸಾಧ್ಯವಾದರೆ ಪರಿಸ್ಥಿತಿ ಬದಲಾಗಬಹುದು ಎಂದಿದ್ದಾರೆ. ಅಸ್ಸಾಂನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.

  • ‘ಇನ್ವೆಸ್ಟ್ ಕರ್ನಾಟಕ’ಕ್ಕೆ ಗುವಾಹಟಿ ಕೈಗಾರಿಕೋದ್ಯಮಿಗಳನ್ನ ಆಹ್ವಾನಿಸಿದ ಜಗದೀಶ್ ಶೆಟ್ಟರ್

    ‘ಇನ್ವೆಸ್ಟ್ ಕರ್ನಾಟಕ’ಕ್ಕೆ ಗುವಾಹಟಿ ಕೈಗಾರಿಕೋದ್ಯಮಿಗಳನ್ನ ಆಹ್ವಾನಿಸಿದ ಜಗದೀಶ್ ಶೆಟ್ಟರ್

    ಬೆಂಗಳೂರು: ಎಫ್‍ಎಂಸಿಜಿ(ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್) ಕ್ಲಸ್ಟರ್ ನಿರ್ಮಾಣದ ಕುರಿತು ಮಾಹಿತಿ ಪಡೆಯಲು ಹಾಗೂ ‘ಇನ್ವೆಸ್ಟ್ ಕರ್ನಾಟಕ’ ಹುಬ್ಬಳ್ಳಿ ಸಮಾವೇಶಕ್ಕೆ ಆಗಮಿಸುವಂತೆ ಗುವಾಹಟಿ ಎಫ್‍ಎಂಸಿಜಿ ವಲಯದ ಕೈಗಾರಿಕೋದ್ಯಮಿಗಳನ್ನು ಇಂದು ಆಹ್ವಾನಿಸಲಾಯಿತು.

    ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಗುವಾಹಟಿ ಎಫ್‍ಎಂಸಿಜಿ ವಲಯಕ್ಕೆ ಭೇಟಿ ನೀಡಿ, ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಿದರು. ಫಿಕ್ಕಿಯ ಕರ್ನಾಟಕ ಚಾಪ್ಟರ್ ಹಾಗೂ ‘ಇನ್ವೆಸ್ಟ್ ಕರ್ನಾಟಕ’ ಫೋರಂ ವತಿಯಿಂದ ಏರ್ಪಡಿಸಿದ್ದ ಹೂಡಿಕೆದಾರರು ಮತ್ತು ಉದ್ಯಮಿಗಳ ಸಭೆಯಲ್ಲಿ ಗುವಾಹಟಿ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಸದಸ್ಯರು ಪಾಲ್ಗೊಂಡಿದ್ದರು.

    ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಇದೆ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಹೂಡಿಕೆಗೆ ವಿಫುಲ ಅವಕಾಶವಿದೆ. ಹುಬ್ಬಳ್ಳಿ-ಧಾರವಾಡ ವಲಯದಲ್ಲಿ ಎಫ್‍ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಸರ್ಕಾರ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ ಎಂದು ಜಗದೀಶ್ ಶೆಟ್ಟರ್ ಕೈಗಾರಿಕೋದ್ಯಮಿಗಳಿಗೆ ಜಗದೀಶ್ ಶೆಟ್ಟರ್ ವಿವರಣೆ ನೀಡಿದರು.

    ಇದೇ ವೇಳೆ ಜಗದೀಶ್ ಶೆಟ್ಟರ್ ಅವರು ಗುವಾಹಟಿಯಲ್ಲಿ ಉಜಾಲ ಘಟಕ, ಗೋದ್ರೇಜ್, ಮಾರ್ಗೋ ಸೇರಿದಂತೆ ಇನ್ನಿತರೆ ಕೈಗಾರಿಕಾ ಘಟಕಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಣೆಯನ್ನು ಅವಲೋಕಿಸಿದರು. ಸಚಿವರ ಜೊತೆಯಲ್ಲಿ ಇನ್ವೆಸ್ಟ್ ಕರ್ನಾಟಕ ಫೋರಂನ ಸಿಓಓ ಶ್ರೀಮತಿ ಸ್ವರೂಪ ಟಿ.ಕೆ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

  • ಗಣರಾಜೋತ್ಸವ ದಿನದಂದೇ ಅಸ್ಸಾಂನಲ್ಲಿ ಐದು ಕಡೆ ಸ್ಫೋಟ

    ಗಣರಾಜೋತ್ಸವ ದಿನದಂದೇ ಅಸ್ಸಾಂನಲ್ಲಿ ಐದು ಕಡೆ ಸ್ಫೋಟ

    ಗುವಾಹಟಿ: ಗಣರಾಜೋತ್ಸವ ದಿನದಂದೇ ಅಸ್ಸಾಂನಲ್ಲಿ 5 ಕಡೆ ಗ್ರೆನೇಡ್ ಸ್ಫೋಟ ಸಂಭವಿಸಿದ್ದು, ಸ್ಫೋಟದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ ಸಂಘಟನೆ ಸ್ಫೋಟ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಇಂದು ಬೆಳಗ್ಗೆ ಡಿಬ್ರುಗರ್‌ನಲ್ಲಿ 2 ಐಇಡಿ, ಸೋನಾರಿ, ದುಲಿಯಾಜನ್ ಮತ್ತು ದೂಮ್‍ಡೋಮದಲ್ಲಿ ತಲಾ ಒಂದು ಗ್ರೆನೇಡ್ ಸ್ಫೋಟಿಸಿದೆ ಎಂದು ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಒಂದು ಗಂಟೆಯ ಅವಧಿಯಲ್ಲಿ 5 ವಿವಿಧ ಪ್ರದೇಶಗಳಲ್ಲಿ ಸ್ಫೋಟ ನಡೆದಿದೆ. ಜನರು ಭಯೋತ್ಪಾದಕ ಗುಂಪುಗಳನ್ನು ತಿರಸ್ಕರಿಸಿದ ಪರಿಣಾಮ ಭಯೋತ್ಪಾದಕರು ನಿರಾಸೆಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸ್ಫೋಟಕ್ಕೆ ಕಾರಣರಾದವರನ್ನು ಪತ್ತೆ ಮಾಡಿ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಟ್ವೀಟ್ ಮಾಡಿದ್ದಾರೆ.

    ಕೆಲ ದುಷ್ಕರ್ಮಿಗಳು ಬೈಕ್‍ನಲ್ಲಿ ಬಂದಿದ್ದರು ಅವರೇ ಗ್ರೆನೇಡ್ ಇಟ್ಟು ಹೋಗಿದ್ದಾರೆ. ಸ್ಫೋಟದ ಸದ್ದು ಕೇಳಿದ ತಕ್ಷಣ ನಾವು ಸ್ಥಳಕ್ಕೆ ಹೋದೆವು ಎಂದು ಸ್ಥಳೀಯರು ತಿಳಿಸಿದ್ದಾರೆ.

  • ಖೇಲೋ ಇಂಡಿಯಾ: ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದ ಯುವಕ

    ಖೇಲೋ ಇಂಡಿಯಾ: ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದ ಯುವಕ

    ಧಾರವಾಡ: ಖೇಲೋ ಇಂಡಿಯಾ ಕ್ರೀಡಾಕೂಟದ ಜಿಮ್ನಾಸ್ಟಿಕ್‍ನಲ್ಲಿ ಧಾರವಾಡ ಯುವಕ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    ಆಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಧಾರವಾಡ ಅಮೃತ ಮುದ್ರಬೆಟ್ಟ ಅವರು ಚಿನ್ನದ ಪದಕ ಪಡೆದಿದ್ದಾರೆ. ಜಿಮ್ನಾಸ್ಟಿಕ್‍ನ ಫ್ಲೋರ್ ಎಕ್ಸಸೈಜ್ ವಿಭಾಗದಲ್ಲಿ ಚಿನ್ನ ಪದಕ ಗಳಿಸಿ ಕೀರ್ತಿ ತಂದಿದ್ದಾರೆ.

    ಧಾರವಾಡದ ಬಾಲ ಮಾರುತಿ ಜಿಮ್ನಾಸ್ಟಿಕ್‍ನ ಕ್ರೀಡಾಪಟುವಾಗಿರುವ ಮುದ್ರಬೆಟ್ಟ ಅವರು, ಖೇಲೋ ಇಂಡಿಯಾದ ಜಿಮ್ನಾಸ್ಟಿಕ್ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಉಳಿದಂತೆ ಜಿಮ್ನಾಸ್ಟಿಕ್‍ನ ಫ್ಲೋರ್ ಎಕ್ಸಸೈಜ್‍ನಲ್ಲಿ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ಕ್ರೀಡಾಪಟುಗಳು ಕ್ರಮವಾಗಿ 2 ಮತ್ತು 3ನೇ ಪಡೆದುಕೊಂಡಿದ್ದಾರೆ.

    ಅಮೃತ ಮುದ್ರಬೆಟ್ಟ ಅವರು ಚಿನ್ನ ಗೆಲ್ಲುತಿದ್ದಂತೆಯೇ ತಂದೆ ನಾಗೇಶ್ ಅವರೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ. ಮುದ್ರಬೆಟ್ಟ ಅವರ ಸಾಧನೆಗೆ ಇಡೀ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಅಮೃತ ಮುದ್ರಬೆಟ್ಟ ಅವರು ಟೆಬಲ್ ವಾಲ್ಟ್ ಹಾಗೂ ಪಾಮೆಲ್ ಹಾರ್ಸ್ ಪಂದ್ಯ ಕೂಡಾ ಆಡಲಿದ್ದು, ಅದರಲ್ಲಿ ಕೂಡಾ ಟಾಪ್ 8 ರಲ್ಲಿದ್ದಾರೆ ಎಂದು ನಾಗೇಶ್ ಅವರು ಮಾಹಿತಿ ನೀಡಿದರು. ಈ ವಿಭಾಗಳಲ್ಲಿ ಅಮೃತ ಬೆಟ್ಟ ಅವರು ಚಿನ್ನ ಗೆಲ್ಲಲಿ ಎಂದು ಕುಟುಂಬಸ್ಥರು ಆಶಯ ವ್ಯಕ್ತಪಡಿಸಿದ್ದಾರೆ.

  • ಸಿಎಎ ಪ್ರತಿಭಟನೆಗಳ ಕುರಿತು ಕೊಹ್ಲಿ ಪ್ರತಿಕ್ರಿಯೆ

    ಸಿಎಎ ಪ್ರತಿಭಟನೆಗಳ ಕುರಿತು ಕೊಹ್ಲಿ ಪ್ರತಿಕ್ರಿಯೆ

    ಗುವಾಹಟಿ: ದೇಶದಲ್ಲಿ ಪೌರತ್ವ ಕಾಯ್ದೆಯ ಪರ ಹಾಗೂ ವಿರೋಧಿ ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿದೆ. ಇದೇ ವೇಳೆ ಪೌರತ್ವ ಕಾಯ್ದೆಯ ಕುರಿತು ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ಶ್ರೀಲಂಕಾ ವಿರುದ್ಧ ನಡೆಯಲಿರುವ ಮೊದಲ ಟಿ20 ಪಂದ್ಯ ಹಿನ್ನೆಲೆಯಲ್ಲಿ ಇಂದು ನಾಯಕ ಕೊಹ್ಲಿ ಮಾಧ್ಯಮಗಳ ಎದುರು ಹಾಜರಾಗಿದ್ದರು. ಈ ವೇಳೆ ಕೊಹ್ಲಿ ಅವರಿಗೆ ಸಿಎಎ ಕಾಯ್ದೆಯ ಕುರಿತ ಪ್ರಶ್ನೆ ಎದುರಾಗಿತ್ತು. ಇದಕ್ಕೂತ್ತರಿಸಿ ಮಾತನಾಡಿದ ಕೊಹ್ಲಿ, ಸಿಎಎ ವಿಚಾರದಲ್ಲಿ ನಾನು ಬೇಜವಾಬ್ದಾರಿಯಾಗಿ ಮಾತನಾಡಲು ಬಯಸುವುದಿಲ್ಲ. ಯಾವುದೇ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದ ಸಂದರ್ಭದಲ್ಲಿ ಮಾತ್ರ ನಾವು ಬಹಿರಂಗವಾಗಿ ಮಾತನಾಡಬೇಕು. ಸಿಸಿಎ ಬಗ್ಗೆ ನಾನು ಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ. ಆ ಬಳಿಕವೇ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

    2016 ರಲ್ಲಿ ಮೋದಿ ಸರ್ಕಾರ ನೋಟು ರದ್ದು ಮಾಡಿ ಆದೇಶ ನೀಡಿತ್ತು. ಆ ವೇಳೆ ಪ್ರತಿಕ್ರಿಯೆ ನೀಡಿದ್ದ ಕೊಹ್ಲಿ, ಭಾರತೀಯ ರಾಜಕೀಯ ಇತಿಹಾಸದಲ್ಲಿ ಇದು ಶ್ರೇಷ್ಠ ನಡೆ ಎಂದಿದ್ದರು. ಅಸ್ಸಾಂನಲ್ಲಿ ಸಿಸಿಎ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಕೊಹ್ಲಿಗೆ ಈ ಪ್ರಶ್ನೆಯನ್ನು ಕೇಳಲಾಗಿತ್ತು.

    ಇದೇ ವೇಳೆ ಕೊಹ್ಲಿ ಗುವಾಹಟಿ ಪಂದ್ಯಕ್ಕೆ ನೀಡಲಾಗಿರುವ ಭದ್ರತೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಈ ನಗರ ಅತ್ಯಂತ ಸುರಕ್ಷಿತ ಎಂದು ಹೇಳಿದ್ದಾರೆ.

    ಅಸ್ಸಾಂ ಕ್ರಿಕೆಟ್ ಮಂಡಳಿ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯವನ್ನು ಮುಂದಿನ ಐಪಿಎಲ್ ಆವೃತ್ತಿಗೆ ‘ಕರ್ಟೆನ್ ರೈಸರ್’ ಆಗಿ ಬಳಕೆ ಮಾಡಿಕೊಳ್ಳುತ್ತಿದೆ. 2020ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗುವಾಹಟಿ ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗುವಾಹಟಿ ಪಂದ್ಯಕ್ಕೆ ಕರವಸ್ತ್ರ ಹಾಗೂ ಟವೆಲ್ ತರುವುದಕ್ಕೆ ನಿಷೇಧ ಹೇರಲಾಗಿದೆ. ಅಸ್ಸಾಂ ಸಂಪ್ರದಾಯವಾದಿಗಳು ಕರವಸ್ತ್ರ ಹಾಗೂ ಟವೆಲ್ ಗಳನ್ನು ಸಿಎಎ ವಿರುದ್ಧದ ಪ್ರತಿಭಟನೆಗಳಲ್ಲಿ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

  • ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಮೈಸೂರು: ಜಯ ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದ್ದು, ಪ್ರಾಣಿ ವಿನಿಮಯ ಪದ್ಧತಿಯಡಿ ವಿವಿಧ ಪ್ರಾಣಿಗಳನ್ನು ಮೃಗಾಯಲಕ್ಕೆ ತರಲಾಗಿದೆ.

    ಅಸ್ಸಾಂನ ಗುವಾಹತಿ ಮೃಗಾಲಯದಿಂದ ಒಂದು ಹೆಣ್ಣು ಘೇಂಡಾಮೃಗ, ಒಂದು ಕಪ್ಪು ಚಿರತೆ, ಒಂದು ಜೋಡಿ ಹೂಲಾಕ್ ಗಿಬ್ಬನ್ ಪ್ರಾಣಿಗಳು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ. ಪ್ರಾಣಿ ವಿನಿಮಯ ಪದ್ಧತಿಯಡಿ ಮೈಸೂರು ಮೃಗಾಲಯದಿಂದ ಜಯಚಾಮರಾಜೇಂದ್ರ ಎಂಬ ಹೆಸರಿನ ಗಂಡು ಜಿರಾಫೆಯನ್ನು ಗುವಾಹಟಿ ಮೃಗಾಲಯಕ್ಕೆ ನೀಡಿ ಅಲ್ಲಿಂದ ಈ ಪ್ರಾಣಿಗಳನ್ನು ಮೈಸೂರು ಮೃಗಾಲಯಕ್ಕೆ ಪಡೆಯಲಾಗಿದೆ.

    ಗುವಾಹಟಿ ರಸ್ತೆ ಮಾರ್ಗವಾಗಿ ಪ್ರಾಣಿಗಳನ್ನು ಮೈಸೂರು ಮೃಗಾಲಯಕ್ಕೆ ಸುರಕ್ಷಿತವಾಗಿ ತರಲಾಗಿದೆ. ಒಂದು ವಾರಗಳ ಕಾಲ ಈ ಪ್ರಾಣಿಗಳನ್ನು ಇಲ್ಲಿನ ಪರಿಸರಕ್ಕೆ ಹೊಂದಿಸುವ ಕಾರ್ಯ ನಡೆಸಲಾಗುತ್ತೆ. ನಂತರ ಇವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತೆ. ಅಲ್ಲಿಗೆ ಈ ವರ್ಷಾಂತ್ಯಕ್ಕೆ ಮೈಸೂರಿಗೆ ನೀವು ಪ್ರವಾಸಕ್ಕೆ ಬಂದರೆ ಈ ಹೊಸ ಅತಿಥಿಗಳನ್ನು ನೀವು ನೋಡಬಹುದಾಗಿದೆ.  ಇದನ್ನು ಓದಿ: ಮೈಸೂರು ಝೂ ವಿಚಾರದಲ್ಲಿ ಸಿಹಿ-ಕಹಿ ಸುದ್ದಿ