Tag: Gururaj Shetty Gantihole

  • ಉಡುಪಿ ಬೈಂದೂರಿನಲ್ಲಿ ಗೆದ್ದ ಬರಿಗಾಲ ಸಂತ – ಜಿದ್ದಾಜಿದ್ದಿ ಹೇಗಿತ್ತು?

    ಉಡುಪಿ ಬೈಂದೂರಿನಲ್ಲಿ ಗೆದ್ದ ಬರಿಗಾಲ ಸಂತ – ಜಿದ್ದಾಜಿದ್ದಿ ಹೇಗಿತ್ತು?

    ಉಡುಪಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ (Election) ಕಾಂಗ್ರೆಸ್ (Congress) ಕಳೆದ ಮೂರು ದಶಕದಲ್ಲೇ ದಾಖಲೆಯ ಸಾಧನೆ ಮಾಡಿದೆ. ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಿದ್ದು, 65 ಸೀಟು ಗೆದ್ದ ಬಿಜೆಪಿ (BJP) ಅಧಿಕಾರದಿಂದ ಹೊರಬಿದ್ದಿದೆ. ಜೆಡಿಎಸ್ (JDS) 19 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ರಾಜ್ಯದ ಚಿತ್ರಣ ಅದಲು ಬದಲಾದರೂ ಕೂಡ ಉಡುಪಿಯಲ್ಲಿ (Udupi) ಬಿಜೆಪಿಯ ಹಿಂದಿನ ದಾಖಲೆ ಹಾಗೆಯೇ ಉಳಿದಿದೆ. ಉಡುಪಿಯಲ್ಲಿ ಐದಕ್ಕೆ ಐದು ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.

    ಕಾಂಗ್ರೆಸ್ ಉಡುಪಿಯ ಕೇಸರಿ ಕೋಟೆಗೆ ದಾಳಿ ಮಾಡುವಲ್ಲಿ ವಿಫಲಯತ್ನ ಮಾಡಿದ್ದು, ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಿದೆ. ಐದರಲ್ಲಿ ನಾಲ್ಕು ಹೊಸ ಮುಖಗಳಿಗೆ ಅವಕಾಶ ನೀಡಿದ್ದ ಬಿಜೆಪಿಯ ಹೊಸ ಪ್ರಯೋಗವು ಉಡುಪಿಯಲ್ಲಿ ಗೆಲುವನ್ನು ಸಾಧಿಸಿದೆ. ಇದನ್ನೂ ಓದಿ: ನನ್ನ ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕಿದ್ರು: ಪರಾಜಿತ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಸ್ವ ಪಕ್ಷದ ವಿರುದ್ಧ ಕಿಡಿ

    ಇದು ಕಾರ್ಯಕರ್ತರ ಗೆಲುವು. ಬಿಜೆಪಿ ಪಕ್ಷದ ಗೆಲುವು. ಕೇವಲ ಒಂದು ತಿಂಗಳೊಳಗೆ ಇಡೀ ವಿಧಾನಸಭಾ ಕ್ಷೇತ್ರದ ಮನೆಗಳಿಗೆ ಜನರ ಮನಗಳಿಗೆ ನನ್ನನ್ನು ಮುಟ್ಟಿಸುವಲ್ಲಿ ಯಶಸ್ವಿ ಆಗಿದ್ದಾರೆ. ಶಾಸಕ ಸುಕುಮಾರ ಶೆಟ್ಟಿ ಬಹಿರಂಗ ಪ್ರಚಾರ ನಡೆಸದಿದ್ದರೂ ಅಂತರಂಗದಿಂದ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಜನರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಸರ್ಕಾರದ ಕೆಲಸದ ಜೊತೆಗೆ ಸಂಘಟನೆಯ ಕೆಲಸಗಳೂ ಬಹಳ ಮುಖ್ಯವಾಗಿದೆ ಎಂದು ಗುರುರಾಜ ಶೆಟ್ಟಿ ಗಂಟಿಹೊಳೆ (Gururaj Shetty Gantihole) ಹೇಳಿದ್ದಾರೆ. ಇದನ್ನೂ ಓದಿ: ಈ ಬಾರಿ ಸಿಎಂ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕು: ಉಮಾಪತಿ ಶ್ರೀನಿವಾಸ ಗೌಡ

    ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ, ಇದೊಂದು ಅಚ್ಚರಿಯ ಫಲಿತಾಂಶವಾಗಿದ್ದು, ನಾವು ಇದನ್ನು ನಿರೀಕ್ಷೆಯೇ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 2018ರಲ್ಲಿ ಸೋತ ನಂತರ ಐದು ವರ್ಷ ಕ್ಷೇತ್ರದಲ್ಲೇ ಓಡಾಡಿ ಜನರ ಜೊತೆಗಿದ್ದೆ. ಚುನಾವಣೆಯಲ್ಲಿ ಸೋತು ನನ್ನ ರಾಜಕೀಯ ಜೀವನ ಮುಗಿಸುವ ಬದಲು, ಜನಸೇವೆ ಮಾಡುವ ಅವಕಾಶವನ್ನು ಕೇಳಿದ್ದೆ. ಈ ಫಲಿತಾಂಶದಿಂದ ನನಗೆ ನೋವಾಗಿದೆ. ಬೈಂದೂರು ಜನತೆಯ ಪ್ರೀತಿಗೆ, ಈಗ ನೀಡಿರುವ ಅಭಿಪ್ರಾಯಕ್ಕೆ ನನ್ನ ಎರಡು ಮಾತುಗಳು ಇಲ್ಲ. ನಾನು ಜನರ ಜೊತೆ ಇರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸರ್‌.. ಭಯ ಪಡಬೇಡಿ, ನಿಮ್ಮ ಜೊತೆ ನಾವಿದ್ದೇವೆ: ಸೋತು ಮಂಕಾಗಿದ್ದ ಸಿ.ಟಿ.ರವಿ ಸಂತೈಸಿದ ಬಾಲಕ

    ಬೈಂದೂರಿನ ಜಿದ್ದಾಜಿದ್ದಿ ಹೇಗಿತ್ತು? ಯಾರಿಗೆಷ್ಟು ಮತ?
    ಬೈಂದೂರು (Byndoor) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು 98,628 ಮತಗಳನ್ನು ಪಡೆದು 16,153 ಮತಗಳ ಅಂತರದಿಂದ ಜಯಗಳಿಸಿರುತ್ತಾರೆ. ಕಾಂಗ್ರೆಸ್‌ನ ಗೋಪಾಲ ಪೂಜಾರಿ ಅವರು 82,475 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಉಳಿದಂತೆ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ 841 ಮತಗಳನ್ನು ಪಡೆದಿದ್ದರೆ, ಆಮ್ ಆದ್ಮಿ ಪಕ್ಷದ ಸಿ.ಎ ರಮಾನಂದ ಪ್ರಭು 187 ಮತಗಳನ್ನು ಪಡೆದಿದ್ದಾರೆ. ಅಲ್ಲದೇ ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್.ಎಸ್ 626 ಮತಗಳು, ರಾಷ್ಟ್ರೀಯ ಸಮಾಜದಳ (ಆರ್) ಪಕ್ಷದ ಕೊಲ್ಲೂರು ಮಂಜುನಾಥ ನಾಯಕ್ 171, ಪಕ್ಷೇತರ ಅಭ್ಯರ್ಥಿಗಳಾದ ಜಿ. ಚಂದ್ರಶೇಖರ 613, ಬಿ.ಶ್ಯಾಮ 296 ಹಾಗೂ ಬಿ.ಹೆಚ್ ಸುರೇಶ್ ಪೂಜಾರಿ ಅವರು 638 ಮತಗಳನ್ನು ಪಡೆದಿರುತ್ತಾರೆ. ಇಷ್ಟು ಮಾತ್ರವಲ್ಲದೇ 1,208 ನೋಟಾ ಮತದಾನವಾಗಿರುತ್ತದೆ. ಇದನ್ನೂ ಓದಿ: ಗುರುವನ್ನು ಸೋಲಿಸಿದ ಶಿಷ್ಯ: ಸಿಟಿ ರವಿ ಸೋತಿದ್ದು ಎಲ್ಲಿ?

    ಕಾಂಗ್ರೆಸ್ ಗೆಲ್ಲುತ್ತದೆ ಎಂಬ ನಂಬಿಕೆ ಇದ್ದ ಕ್ಷೇತ್ರದಲ್ಲಿ ಬೈಂದೂರು ಕೂಡ ಒಂದು ಆದರೆ ಬರಿಗಾಲ ಸಂತ 20 ದಿನದಲ್ಲಿ ಮ್ಯಾಜಿಕ್ ಮಾಡಿ ಕ್ಷೇತ್ರದ ಜನರ ಮನ ಗೆದ್ದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೇಡಿಕೆಗಳು ಇರುವ ಕ್ಷೇತ್ರವೆಂದರೆ ಅದು ಬೈಂದೂರು. ವಿಪಕ್ಷದಲ್ಲಿ ಕೂತು ಜನಸೇವೆ ಮಾಡುವುದು ಗುರುರಾಜ ಶೆಟ್ಟಿ ಗಂಟಿ ಹೊಳೆ ಅವರ ಮುಂದೆ ಇರುವ ದೊಡ್ಡ ಸವಾಲು. ಇದನ್ನೂ ಓದಿ: ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ

  • ಪತ್ರಿಕೋದ್ಯಮ ಓದಿದ ಬರಿಗಾಲ ಸಂತನಿಗೆ ಬಿಜೆಪಿ ಟಿಕೆಟ್

    ಪತ್ರಿಕೋದ್ಯಮ ಓದಿದ ಬರಿಗಾಲ ಸಂತನಿಗೆ ಬಿಜೆಪಿ ಟಿಕೆಟ್

    ಉಡುಪಿ: ಬಿಜೆಪಿಯಲ್ಲಿ ಒಬ್ಬ ಕಾರ್ಯಕರ್ತನಿಗೂ ಅವಕಾಶ ಇದೆ ಎಂಬ ದೊಡ್ಡ ಸಂದೇಶವನ್ನು ವರಿಷ್ಠರು ಕರ್ನಾಟಕಕ್ಕೆ (Karnataka) ರವಾನೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಐದು ಹಾಲಿ ಶಾಸಕರ ಬದಲು ನಾಲ್ಕು ಹೊಸ ಮುಖಕ್ಕೆ ಅವಕಾಶ ಕೊಡುವ ಮೂಲಕ ಇದು ಕಾರ್ಯಕರ್ತರ ಪಕ್ಷ ಎಂದು ಕಾಂಗ್ರೆಸ್‌ಗೂ (Congress) ಟಾಂಗ್ ನೀಡಿದೆ.

    ಬೈಂದೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸುಕುಮಾರ ಶೆಟ್ಟಿಗೆ ಜಾಗಕ್ಕೆ 39 ವರ್ಷದ ಗುರುರಾಜ್ ಶೆಟ್ಟಿ ಗಂಟಿಹೊಳೆ (Gururaj Shetty Gantihole) ಅವರಿಗೆ ಬಿಜೆಪಿ (BJP) ಮಣೆ ಹಾಕಿದೆ. ಪಕ್ಷದ ಪ್ರಮುಖರು, ಸಂಘ ಪರಿವಾರದ ಹಿರಿಯರು, ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿರುವ ಗುರುರಾಜ್ ಗಂಟಿಹೊಳೆ ಹೆಸರು ಈಗ ಬೈಂದೂರು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ‌.

    ಗುರುರಾಜ್ ಅವರ ಹುಟ್ಟೂರು ಬೈಂದೂರು (Baindur) ತಾಲೂಕು ಉಪ್ಪುಂದದ ಗಂಟಿಹೊಳೆ.‌ ಗುರುರಾಜ್ ಶೆಟ್ಟಿ ಆರಂಭಿಕ ಶಿಕ್ಷಣವನ್ನು ಪೂರೈಸುವಾಗಲೇ ರಾಷ್ಟ್ರೀಯ ಸ್ವಯಂ ಸೇವಕ (RSS) ಸಂಘದ ಉಪ್ಪುಂದ ನಿತ್ಯ ಶಾಖೆಗೆ ಹೋಗುತ್ತಿದ್ದರು. ನಂತರ ಉನ್ನತ ಶಿಕ್ಷಣಕ್ಕಾಗಿ ಮಂಗಳೂರಿನತ್ತ ಮುಖ ಮಾಡಿ ಸಂಘನಿಕೇತನದಲ್ಲಿ ಬೆಳೆದರು. ಪತ್ರಿಕೋದ್ಯಮದಲ್ಲಿ ಎಂ.ಎ ಪೂರೈಸಿದ ನಂತರ 10 ವರ್ಷಗಳ ಕಾಲ ಆರ್‌ಎಸ್‌ಎಸ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ ಓಡಾಡಿದರು.  ಇದನ್ನೂ ಓದಿ: ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

    ಈ ದೇಶಕ್ಕಾಗಿ ಕೆಟ್ಟದನ್ನು ನಾನೇ ಮೆಟ್ಟಿ ನಿಲ್ಲುತ್ತೇನೆ ಎಂದು ಶಪಥ ಮಾಡಿದ ಗುರುರಾಜ್ ಶೆಟ್ಟಿ ಗಂಟಿಹೊಳೆ ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ಸಂಘಟನೆ ಒಳಗೆ ಬರಿಗಾಲ ಸಂತ ಎಂದೇ ಫೇಮಸ್‌ ಆಗಿದ್ದಾರೆ. ಪೂರ್ಣಾವಧಿ ಕಾರ್ಯಕರ್ತನಾಗಿ ಮಡಿಕೇರಿಯ ಉಳಿದುಕೊಂಡಿದ್ದ ಇವರು ನಂತರ ಬೆಳ್ತಂಗಡಿಗೆ ಬಂದು, ಸಂಘದ ಕಾರ್ಯಕ್ಕೆ ಮುಡಿಪಾಗಿಟ್ಟರು. ಸಂಘಟನೆಯಲ್ಲಿ ತಾಲೂಕು, ಜಿಲ್ಲಾ ಜವಾಬ್ದಾರಿಗಳು ನಿಭಾಯಿಸಿದ್ದಾರೆ. ನಾಗಪುರದಲ್ಲಿ ಒಟಿಸಿ ಕ್ಯಾಂಪ್ ಮುಗಿಸಿ ಶಿಕ್ಷಣ ಪೂರೈಸಿ ಬಂದ ಗುರುರಾಜ್ ಗೆ 3 ವರ್ಷ ಉಡುಪಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ 3 ವರ್ಷ ಬಿಜೆಪಿ ಉಪಾಧ್ಯಕ್ಷ ಹುದ್ದೆ ಸಿಕ್ಕಿತ್ತು.

    ಈ ಮಧ್ಯೆ ಉದ್ಯಮದತ್ತ ಹೊರಳಿ ನೂರಾರು ಜನರಿಗೆ ಉದ್ಯೋಗ ಕೊಟ್ಟರು. ಉದ್ಯಮ ವಿಸ್ತರಿಸಲು ಪ್ರಯತ್ನಿಸಿ ಸೋತರು‌. ಮಣಿಪುರ (Manipura) ಭಾಗದ ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆಯಿತ್ತು.‌ ಆ ಮಕ್ಕಳಿಗೆ ಹಣವಿಲ್ಲ ಎಂಬ ಕಾರಣಕ್ಕೆ ವಿದ್ಯಾಭ್ಯಾಸ ನಿಲ್ಲಿಸಬೇಡಿ ಎಂದು ಭರವಸೆ ನೀಡಿದರು. ಆ ಮಕ್ಕಳನ್ನು ಬೈಂದೂರಿಗೆ ಕರೆತಂದು ಮಣಿಪುರ ನೂರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ.

    ಅಖಿಲ ಭಾರತ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯನಾಗಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ರಾಜ್ಯಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ಎರಡು ಪುಸ್ತಕ ಬರೆದಿದ್ದಾರೆ. ನೂರಾರು ಆರ್‌ಎಸ್‌ಎಸ್‌ (RSS) ಶಾಖೆ ತೆರೆದು ಸಂಘಟನೆ ಮಾಡಿದ್ದಾರೆ. 2013 ಮತ್ತು 2018ರಲ್ಲಿಯೇ ಶಾಸಕರಾಗುವ ಆಯ್ಕೆಗಳು ಇತ್ತು. ಪಕ್ಷ ಸಂಘಟನೆಯೇ ಎಲ್ಲಕ್ಕಿಂತ ಮಿಗಿಲು ಎಂಬ ಕಾರಣಕ್ಕೆ ಬೈಂದೂರಿನ ಪ್ರತಿ ಹಳ್ಳಿ ಹಳ್ಳಿಗೂ ಸಂಚರಿಸಿ ಕಾರ್ಯಕರ್ತರನ್ನು ಗುರುತಿಸಿ, ಪ್ರಮುಖರನ್ನು ಹುರಿದುಂಬಿಸಿ ಬಿಜೆಪಿಯನ್ನು ಚಿಗುರಿಸಿದ್ದಾರೆ ಎಂದು ಗುರುರಾಜ್ ಶೆಟ್ಟಿ ಗಂಟಿಹೊಳೆ ಬಗ್ಗೆ ಆಪ್ತ ಪ್ರವೀಣ್ ಮಾಹಿತಿ ನೀಡಿದರು.