Tag: gurubhavan

  • ತುಮಕೂರಲ್ಲಿಂದು ವಿ. ಸೋಮಣ್ಣ ಶಕ್ತಿಪ್ರದರ್ಶನ- ಕಾಂಗ್ರೆಸ್ ಸೇರುತ್ತಾರಾ ಮಾಜಿ ಸಚಿವ?

    ತುಮಕೂರಲ್ಲಿಂದು ವಿ. ಸೋಮಣ್ಣ ಶಕ್ತಿಪ್ರದರ್ಶನ- ಕಾಂಗ್ರೆಸ್ ಸೇರುತ್ತಾರಾ ಮಾಜಿ ಸಚಿವ?

    ತುಮಕೂರು: ಸಿದ್ದಗಂಗಾ ಮಠದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನದಿಂದ ನಿರ್ಮಾಣಗೊಂಡ ಗುರುಭವನ ಇಂದು ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ತೊಡೆತಟ್ಟಿರುವ ವಿ.ಸೋಮಣ್ಣ ಈ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರಾ ಎಂಬ ಕುತೂಹಲ ಹುಟ್ಟಿದೆ. ಗೃಹ ಸಚಿವ ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ ಉಪಸ್ಥಿತರಿರುವ ಈ ವೇದಿಕೆಯಲ್ಲಿ ಸೋಮಣ್ಣ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸುತ್ತಾರಾ ಎಂಬ ಗುಸುಗುಸು ಚರ್ಚೆ ಶುರುವಾಗಿದೆ.

    ಸಿದ್ದಗಂಗಾ ಮಠದಲ್ಲಿ (Siddaganga Mutt) ಯತಿವರ್ಯರ ವಾಸ್ತವ್ಯ ಹಾಗೂ ಪೂಜಾ ಕೈಂಕರ್ಯಕ್ಕೆ ಅನುಕೂಲ ಆಗುವ ಉದ್ದೇಶದಿಂದ ವಿ.ಸೋಮಣ್ಣ ಪ್ರತಿಷ್ಠಾನದಿಂದ ಗುರುಭವನ ನಿರ್ಮಾಣಗೊಂಡಿದೆ. ಇಂದು ಬೆಳಗ್ಗೆ ಗುರುಭವನ ಲೋಕಾರ್ಪಣೆಯಾಗಲಿದೆ. ಈ ನೆಪದಲ್ಲಿ ವಿ.ಸೋಮಣ್ಣ (V Somanna) ಬಿಜೆಪಿ ನಾಯಕರಿಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ರಾಜ್ಯ ಬಿಜೆಪಿ (BJP) ನಾಯಕತ್ವದ ವಿರುದ್ಧ ತೊಡೆ ತಟ್ಟಿರುವ ವಿ.ಸೋಮಣ್ಣ ಕಾಂಗ್ರೆಸ್ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಕೈ ಪಕ್ಷದ ಸಖ್ಯ ಬೆಳೆಸಲು ಮುಂದಾದ್ರಾ ಎಂಬ ಪ್ರಶ್ನೆ ಎದ್ದಿದೆ. ಇದು ಖಾಸಗಿ ಕಾರ್ಯಕ್ರಮ ಆದರೂ ಹಠಕ್ಕೆ ಬಿದ್ದ ಸೋಮಣ್ಣ ಅವರು ಜಿ.ಪರಮೇಶ್ವರ್ (G Parameshwar), ಕೆ.ಎನ್. ರಾಜಣ್ಣರನ್ನು (KN Rajanna) ಆಹ್ವಾನಿಸಿದ್ದಾರೆ. ಅಧಿವೇಶನ ಇದ್ದರೂ ಈ ಸಚಿವದ್ವಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಕುತೂಹಲ ಹುಟ್ಟಿಸಿದೆ. ಇದನ್ನೂ ಓದಿ: ಹೆಬ್ಬಾಳ್ಕರ್ ಜೊತೆಗಿನ ಹಣಕಾಸು ವಿಚಾರ ಬಹಿರಂಗಗೊಳಿಸ್ತಾರಾ ರಮೇಶ್ ಜಾರಕಿಹೊಳಿ?

    ಕಳೆದ ಬಾರಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ವಿ.ಸೋಮಣ್ಣ ಅವರು ಶ್ರೀಗಳ ಎದುರಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ವಿ.ಸೋಮಣ್ಣ ಕಾಂಗ್ರೆಸ್ (Congress) ಸೇರುತ್ತಾರೆ ಎಂಬ ಪಿಸುಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಕಾರ್ಯಕ್ರಮದ ನೆಪದಲ್ಲಿ ಕಾಂಗ್ರೆಸ್ ನಾಯಕರ ಜೊತೆ ವೇದಿಕೆ ಹಂಚಿಕೊಂಡು ಪಕ್ಷ ಸೇರುವ ನಿರ್ಧಾರ ಸೂಚ್ಯವಾಗಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದನ್ನು ಸೋಮಣ್ಣ ಪುತ್ರ ಅರುಣ್ ತಳ್ಳಿ ಹಾಕಿದ್ದಾರೆ.

    ಸಿದ್ದಗಂಗಾ ಮಠ ಮಾಜಿ ಸಿಎಂ ಯಡಿಯೂರಪ್ಪರ ಒಂದು ರೀತಿಯ ರಾಜಕೀಯ ಶಕ್ತಿ ಕೇಂದ್ರ. ಬಿಎಸ್‍ವೈ ಕುಟುಂಬದ ವಿರುದ್ದ ಅಸಮಾಧಾನಗೊಂಡಿರುವ ವಿ.ಸೋಮಣ್ಣ ಇದೇ ಮಠದಿಂದ ತಮ್ಮ ಪಾಂಚಜನ್ಯ ಮೊಳಗಿಸಲು ಮುಂದಡಿ ಇಟ್ಟಂತಿದೆ.