Tag: Guru Wife Kalawati

  • ಕುಟುಂಬದಲ್ಲಿ ಹಣ ಹಂಚಿಕೆ ಕುರಿತು ಜಗಳ ಆಗಿರೋದು ಸತ್ಯ: ಗುರು ಪತ್ನಿ ಕಲಾವತಿ

    ಕುಟುಂಬದಲ್ಲಿ ಹಣ ಹಂಚಿಕೆ ಕುರಿತು ಜಗಳ ಆಗಿರೋದು ಸತ್ಯ: ಗುರು ಪತ್ನಿ ಕಲಾವತಿ

    ಮಂಡ್ಯ: ಪುಲ್ವಾಮ ಉಗ್ರರ ದಾಳಿಯಿಂದ ಹುತಾತ್ಮರಾಗಿರುವ ಮಂಡ್ಯದ ಯೋಧ ಗುರು ಅವರ ಕುಟಂಬದಲ್ಲಿ ಹಣದ ವಿಚಾರದಲ್ಲಿ ಕಲಹ ಉಂಟಾಗಿದ್ದು ಸತ್ಯ ಎಂದು ತಿಳಿದು ಬಂದಿದೆ. ಇಷ್ಟು ದಿನಗಳ ಕಾಲ ಗುರು ವೀರ ಮರಣಹೊಂದಿದ ಬಳಿಕ ಬಂದ ಪರಿಹಾರ ಹಣದ ಹಂಚಿಕೆ ವಿಚಾರದಲ್ಲಿ ಗುರು ತಾಯಿ ಮತ್ತು ಪತ್ನಿ ನಡುವೆ ಜಗಳ ಉಂಟಾಗಿದೆ ಎಂದು ಹೇಳಲಾಗುತ್ತಿತ್ತು. ಈ ವಿಚಾರ ಸತ್ಯ ಎಂದು ಗುರು ಪತ್ನಿ ಕಲಾವತಿ ತಿಳಿಸಿದ್ದಾರೆ.

    ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿರುವ ಗುರು ಅವರ ಸಮಾಧಿಯ ಬಳಿ ಕಲಾವತಿ ಅವರು ಗಂಡನ ಒಂದು ವರ್ಷದ ಪುಣ್ಯ ಸ್ಮರಣೆ ಮಾಡಿದರು. ತಮ್ಮ ತವರು ಮನೆಯ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆ ಗುರು ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಕಲಾವತಿ, ಹಣದ ವಿಚಾರಕ್ಕಾಗಿ ಮನೆಯಲ್ಲಿ ಜಗಳ ಆಗಿದ್ದು ನಿಜ. ನನ್ನ ಗಂಡ ಸತ್ತಾಗ ಸಾರ್ವಜನಿಕರು ನನ್ನ ಅಕೌಂಟ್‍ಗೆ ಹಣ ಹಾಕಿದ್ದರು. ಆ ವೇಳೆ ನನ್ನ ಅತ್ತೆ ಹಾಗೂ ಮನೆಯವರು ಹಣದ ಲೆಕ್ಕ ಕೊಡು ಎಷ್ಟು ಬಂದಿದೆ ಎಂದು ಕೇಳ್ತಾ ಇದ್ದರು.

    ನಗದು ಹಣ ಬಂದ ವಿಚಾರದಲ್ಲಿ ಆ ಹಣ ಎಲ್ಲಿ ಈ ಹಣ ಎಲ್ಲಿ ಎಂದು ಅನುಮಾನ ಪಟ್ಟು ನನಗೆ ಬೈಯ್ಯುತ್ತಾ ಇದ್ದರು. ಎಲ್ಲವನ್ನೂ ನಾನು ಅವರಿಗೆ ಕೊಟ್ಟಿದ್ದೆ. ನಂತರ ಅವರನ್ನು ನನ್ನ ತಂದೆ ಎಷ್ಟು ಬಂದಿದೆ ಎಂದು ಕೇಳಿದ್ದರು. ಮೊದಲು 13 ಲಕ್ಷ ಬಂದಿದೆ ಅಂದ್ರು ನಂತರ 33 ಲಕ್ಷ ಎಂದಿದ್ರು. ಆಗ ನಮ್ಮ ತಂದೆ ಅಷ್ಟೇನಾ ಎಂದು ಅವರನ್ನು ಕೇಳಿದ್ರು. ಇಷ್ಟಕ್ಕೆ ನಿಮಗೆ ಎಲ್ಲಾ ನಾವು ಏಕೆ ಲೆಕ್ಕಾ ಕೊಡಬೇಕು ಎಂದು ಅತ್ತೆ ಮಾವ ಹಾಗೂ ಮೈದುನಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು. ಅಲ್ಲದೇ ಮನೆಯಲ್ಲಿ ನನ್ನ ನಿಂದನೆ ಮಾಡ್ತಾ ಇದ್ದರು. ನಂತರ ನಾನು ನನ್ನ ಗಂಡನ ಹಾಗೂ ನನ್ನ ವಸ್ತುಗಳನ್ನು ತೆಗೆದುಕೊಂಡು ಬಂದೆ.

    ಮನೆಯಿಂದ ನಾನು ಯಾವ ಹಣವನ್ನು ತೆಗೆದುಕೊಂಡು ಬಂದಿಲ್ಲ. ಸರ್ಕಾರ ಕೊಟ್ಟ ಹಣ ಹಾಗೂ ಸಾರ್ವಜನಿಕರು ನನ್ನ ಅಕೌಂಟ್‍ಗೆ ಬಂದ ಹಣ ಮಾತ್ರ ನನ್ನ ಹತ್ತಿರ ಇದೆ. ಬೇರೆ ಯಾವ ಹಣವು ನನ್ನ ಹತ್ತಿರ ಇಲ್ಲ. ದಯವಿಟ್ಟು ನನ್ನ ಮೇಲೆ ಸುಮ್ಮ ಸುಮ್ಮನೆ ಆರೋಪ ಬೇಡಿ ಎಂದು ಕಲಾವತಿ ಕೈ ಮುಗಿದರು.

    ಅಲ್ಲದೇ ನನ್ನ ಗಂಡ ಸಾವನ್ನಪ್ಪಿದ ಬಳಿಕ ಗುರು ಅವರ ತಮ್ಮನೊಂದಿಗೆ ಮದುವೆ ಮಾಡಲು ಪ್ರಸ್ತಾಪ ಮಾಡಿದ್ದರು. ಈ ರೀತಿ ಅವರಿಗೆ ಯೋಚನೆ ಮಾಡಲು ಮನಸ್ಸು ಹೇಗೆ ಬಂತು ನನಗೆ ಗೊತ್ತಿಲ್ಲ. ನನ್ನ ಗಂಡ ಸತ್ತಿಲ್ಲ, ಈಗಲೂ ನನ್ನ ಜೊತೆಗಿದ್ದಾರೆ. ನನ್ನ ಪತಿ ಈಗಲೂ ಸೈನ್ಯದಲ್ಲಿ ಇದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಕಲಾವತಿ ಕಣ್ಣೀರಿಟ್ಟರು.