Tag: Guru Dutt

  • ವಯಸ್ಸಾದ ಅಂಬಿ ಬಗ್ಗೆ ಮಾಲಾಶ್ರೀ ಹೇಳಿದ್ದೇನು?

    ವಯಸ್ಸಾದ ಅಂಬಿ ಬಗ್ಗೆ ಮಾಲಾಶ್ರೀ ಹೇಳಿದ್ದೇನು?

    ರೆಬೆಲ್ ಸ್ಟಾರ್ ಅಂಬರೀಶ್ 14 ವರ್ಷಗಳ ನಂತರ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೋ. ಅಂಬರೀಶ್ ಅವರ ವಯಸ್ಸಿಗೆ, ಮಾಗಿದ ಅಭಿನಯಕ್ಕೆ ಪಕ್ಕಾ ಹೇಳಿ ಮಾಡಿಸಿದಂಥಾ ಕಥೆಯಿರೋ ಚಿತ್ರವಿದು. ಇದೀಗ ಈ ಚಿತ್ರದ ಹಾಡುಗಳು ಎಲ್ಲೆಡೆ ಮೆಚ್ಚುಗೆ ಗಳಿಸಿಕೊಂಡಿವೆ. ಚಿತ್ರರಂಗದ ತಾರೆಯರೂ ಕೂಡಾ ಈ ಹಾಡುಗಳನ್ನು ಕೇಳಿ ತಲೆದೂಗಿದ್ದಾರೆ.

    ನಟಿ ಮಾಲಾಶ್ರೀಯವರಂತೂ ಈ ಚಿತ್ರದ ಹಾಡುಗಳನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಹಾಡುಗಳನ್ನು ಕೇಳಿದ ನಂತರ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾನು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಹಾಡುಗಳನ್ನು ಕೇಳಿದೆ. ಅಂಬರೀಶ್ ಅವರ ನಟನೆಯ ಬಗೆಗಂತೂ ಮಾತನಾಡಲು ಪದಗಳಿಲ್ಲ. ದೊಡ್ಡ ಯಶಸ್ಸು ಈ ಚಿತ್ರಕ್ಕೆ ಸಿಗಲಿ’ ಅಂತ ಮಾಲಾಶ್ರೀಯವರು ಹಾರೈಸಿದ್ದಾರೆ.

    ಈ ಚಿತ್ರದ ಹಾಡುಗಳು ಈ ಪಾಟಿ ಮೆಚ್ಚುಗೆ ಗಳಿಸಿಕೊಳ್ಳಲು ಕಾರಣ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸೃಷ್ಟಿಸಿರುವ ಮಾಂತ್ರಿಕ ಟ್ಯೂನುಗಳು. ಅರ್ಜುನ್ ಆರಂಭದಿಂದಲೂ ಈ ಚಿತ್ರದ ಬಗ್ಗೆ ವಿಶೇಷವಾದ ಆಸಕ್ತಿಯಿಂದಲೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರಂತೆ. ಯಾವ ಹೋಲಿಕೆಗೂ ಸಿಗದ ಭಿನ್ನವಾದ ಹಾಡುಗಳನ್ನು ಸೃಷ್ಟಿಸಬೇಕೆಂಬ ಹಂಬಲದಿಂದಲೇ ಎಲ್ಲ ಹಾಡುಗಳನ್ನೂ ರೂಪಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಗುರುದತ್ ಗಾಣಿಗ, ಅಂಬಿ ಮತ್ತು ಕಿಚ್ಚ ಸುದೀಪ್ ಕೂಡಾ ಸಂತಸಗೊಂಡಿದ್ದಾರೆ.

  • ಕಿಚ್ಚನ ಭೇಟಿ ಈ ಹುಡುಗನ ಬದುಕು ಬದಲಿಸಿತು!

    ಕಿಚ್ಚನ ಭೇಟಿ ಈ ಹುಡುಗನ ಬದುಕು ಬದಲಿಸಿತು!

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೂಲಕ ಇಪ್ಪತ್ತಾರು ವರ್ಷದ ಗುರುದತ್ ಗಾಣಿಗ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ. ಇಷ್ಟು ಚಿಕ್ಕ ವಯಸಿನಲ್ಲಿಯೇ ಈ ಹುಡುಗನ ಅದೃಷ್ಟ ಕಂಡು ಅನೇಕರು ಬೆರಗಾಗಿದ್ದಾರೆ. ಆದರೆ ಗುರುದತ್ ನಡೆದು ಬಂದ ಹಾದಿಯನ್ನು ಗಮನಿಸಿದರೆ ಖಂಡಿತಾ ಇದು ಅದೃಷ್ಟವಲ್ಲ, ಬದಲಾಗಿ 10 ವರ್ಷಗಳ ಕಠಿಣ ಪರಿಶ್ರಮದ ಪ್ರತಿಫಲ ಎಂಬ ವಿಚಾರ ಯಾರಿಗಾದರೂ ಮನದಟ್ಟಾಗುತ್ತದೆ!

    ಕುಂದಾಪುರದ ನಾಗೂರಿನ ಗುರುದತ್ ಗೆ ತಾನು ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ಹತ್ತಿಕೊಂಡಿದ್ದು ಹೈಸ್ಕೂಲು ದಿನಗಳಲ್ಲಿಯೇ. ಓದಿನಲ್ಲಿ ಹೇಳಿಕೊಳ್ಳುವಂಥಾದ್ದೇನೂ ಆಸಕ್ತಿ ಇಲ್ಲದಿದ್ದ ಗುರುದತ್ ಮನೆ ಮಂದಿಯ ಒತ್ತಾಸೆಯ ಮೇರೆಗೆ ಪಿಯುಸಿ ಸೇರಿಕೊಂಡಿದ್ದರು. ಆದರೆ ಪಿಯುಸಿ ಫಲಿತಾಂಶ ಬರುವ ಮುನ್ನವೇ ನಾನು ಸಿನಿಮಾಗೆ ಸೇರ್ತೀನಿ ಅಂತ ಮನೆಯಲ್ಲಿ ಘೋಷಿಸಿದವರೇ ಹೆತ್ತವರಿಗೆ ಇಷ್ಟವಿಲ್ಲದಿದ್ದರೂ ಬೆಂಗಳೂರಿಗೆ ಹೊರಟಿದ್ದರು. ಹಾಗೆ ಗುರುದತ್ ಗುರುತು ಪರಿಚಯವೇ ಇಲ್ಲದಿದ್ದ ಬೆಂಗಳೂರಿಗೆ ಬಂದಿಳಿಯುವಾದ ಅವರಿಗೆ ಕೇವಲ ಹದಿನಾರು ವರ್ಷ!

    ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಆ ದಿನಗಳಲ್ಲಿ ಒಂದು ನರಪಿಳ್ಳೆಯ ಪರಿಚಯವೂ ಗುರುದತ್ ಗಿರಲಿಲ್ಲ. ಈ ಊರಿನಲ್ಲಿ ಹತ್ತಿರ ಸಂಬಂಧಿಗಳೂ ಇರಲಿಲ್ಲ. ಗುರಿ ಚಿತ್ರರಂಗವಾದರೂ ಗಾಂಧಿನಗರ ಯಾವ ದಿಕ್ಕಿನಲ್ಲಿದೆ ಎಂಬುದೂ ಅವರಿಗೆ ಗೊತ್ತಿರಲಿಲ್ಲ. ಒಂದಷ್ಟು ದಿನ ಹೊಟ್ಟೆ ಹೊರೆಯಲು ಅದೂ ಇದೂ ಕೆಲಸ ಮಾಡಿಕೊಂಡಿದ್ದ ಅವರು ಕಡೆಗೂ ಮೇಕಪ್ ಸಹಾಯಕರಾಗಿ ಚಿತ್ರರಂಗಕ್ಕೆ ಅಡಿಯಿರಿಸಿದ್ದರು. ಅಲ್ಲಿಂದಲೇ ಸಂಪರ್ಕ ಸಾಧಿಸಿ ನಿರ್ದೇಶನ ವಿಭಾಗಕ್ಕೆ ತೂರಿಕೊಳ್ಳಬೇಕೆಂಬುದು ಆ ದಿನಗಳಲ್ಲಿ ಗುರುದತ್ ಗಿದ್ದ ಏಕಮೇವ ಕನಸು!

    ಹೀಗೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಗುರುದತ್ ಅದೊಂದು ದಿವ್ಯ ಘಳಿಗೆಯಲ್ಲಿ ಕಿಚ್ಚ ಸುದೀಪ್ ಅವರನ್ನು ಸಂಧಿಸಿದ್ದರು. ಬಳಿಕ ಅವರ ಬಳಿಯೇ ಕೆಲಸ ಗಿಟ್ಟಿಸಿಕೊಂಡಿದ್ದರು. ಒಂದಷ್ಟು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿದ್ದುಕೊಂಡು ಸುದೀಪ್ ಅವರ ಶಿಸ್ತು, ನಿಖರವಾದ ಕಸುಬುದಾರಿಕೆ ಕಲಿತುಕೊಂಡ ಗುರುದತ್ ಗುರಿಯ ನೇರಕ್ಕೆ ಬಂದು ನಿಂತಿದ್ದು, ಅವರ ಬದುಕಿನಲ್ಲಿಯೂ ಬದಲಾವಣೆಯ ಗಾಳಿ ಬೀಸಲಾರಂಭಿಸಿದ್ದು ಆವಾಗಿನಿಂದಲೇ.

    ಆರಂಭದಲ್ಲಿ ಕಿಚ್ಚ ಸುದೀಪ್ ಅವರು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನು ನಿರ್ದೇಶನ ಮಾಡಲು ಒಂದಷ್ಟು ಮಂದಿಗಾಗಿ ಅರಸಿದ್ದರಂತೆ. ಅದು ತನ್ನದಾಗುತ್ತದೆ ಎಂಬ ಕನಸಾಗಲೀ, ನಿರೀಕ್ಷೆಯಾಗಲಿ ಗುರುದತ್‍ಗಿರಲಿಲ್ಲ. ಆದರೆ ಅದೊಂದು ದಿನ ಇದ್ದಕ್ಕಿದ್ದಂತೆ ಗುರುದತ್ ರನ್ನು ಕರೆದ ಸುದೀಪ್ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಜವಾಬ್ದಾರಿಯನ್ನು ಹೊರಿಸಿದ್ದರು. ಹಾಗೆ ಮಹಾ ಜವಾಬ್ದಾರಿಯೊಂದನ್ನು ವಹಿಸಿಕೊಂಡ ಗುರುದತ್ ಗೀಗ ಅದನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆಯಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಣ್ಣದ ಲೋಕದಿಂದ ದೂರ ಸರಿಯೋ ಸುಳಿವು ನೀಡಿದ ಅಂಬರೀಶ್

    ಬಣ್ಣದ ಲೋಕದಿಂದ ದೂರ ಸರಿಯೋ ಸುಳಿವು ನೀಡಿದ ಅಂಬರೀಶ್

    ಬೆಂಗಳೂರು: ಸ್ಯಾಂಡಲ್‍ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಚಿತ್ರರಂಗದಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ. ಹೌದು, ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ತಮ್ಮ ಕೊನೆಯ ಸಿನಿಮಾ ಆಗಲಿದೆ ಎಂದು ಅಂಬರೀಶ್ ಹೇಳಿದ್ದಾರೆ.

    ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಈ ಚಿತ್ರ ಮಾಡುವಾಗಲೇ ಕರೆ ಮಾಡಿ ಅಂಬರೀಶ್ ನೀನು ಈ ಚಿತ್ರ ಮಾಡು ಎಂದು ಹೇಳಿದ್ದರು. ಆದರೆ ಈ ವೇಳೆ ನಾನು ಸುಮ್ಮನೆ ಇರಪ್ಪ ಅಂದಿದ್ದೆ. ಬಳಿಕ ಆ ಸಿನಿಮಾ ನೋಡಿ ಒಪ್ಪಿಕೊಂಡೆ. ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಬಹಳ ಇಷ್ಟ ಆಯ್ತು ಎಂದ್ರು.

    ಈ ವೇಳೆ ಪತ್ರಕರ್ತರಿಂದ ತೂರಿಬಂದ ನಿಮ್ಮ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿ, ಇದೇ ನನ್ನ ಕೊನೆ ಸಿನಿಮಾ ಅಂತಾ ಹೇಳಬಹುದು. ಏಕೆಂದರೆ ಈ ಹಿಂದೆ ವಿಷ್ಣುವರ್ಧನ್ ಅವರೊಂದಿಗೆ ದಿಗ್ಗಜರು ಸಿನಿಮಾ ಮಾಡಿದ್ದೆ. ಆದಾದ ಬಳಿಕ ಸಾಕಷ್ಟು ಮಂದಿ ಮತ್ತೆ ಸಿನಿಮಾ ಮಾಡಲು ಬಂದರು. ಆದನ್ನು ನಿರಾಕರಿಸಿದ್ದೆ. ಏಕೆಂದರೆ ದಿಗ್ಗಜರು ಸಿನಿಮಾ ಮೀರಿಸುವ ಕಥೆ ಬಂದಿರಲಿಲ್ಲ. ಒಂದೊಮ್ಮೆ ಉತ್ತಮ ಪಾತ್ರ ಬಂದರೆ ಮುಂದೆ ಮಾಡಬಹುದು. ಆದರೆ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಂತಹ ಕಥೆಯ ಪಾತ್ರ ಮುಂದೆ ಬರಲ್ಲ ಅಂದುಕೊಂಡಿದ್ದೇನೆ ಎಂದು ಹೇಳಿದರು.

    ಸಿನಿಮಾ ಪ್ರತಿಯೊಂದು ಸನ್ನಿವೇಶ ಅತ್ಯುತ್ತಮವಾಗಿ ಮೂಡಿಬಂದಿದೆ. ಚಿತ್ರದ ಪ್ರತಿಯೊಂದು ಪಾತ್ರವೂ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಈ ಸಿನಿಮಾ ಮಾಡಲು ಮೊದಲು ಸಿನಿಮಾ ಮಾಡಲು ನಿರ್ದೇಶಕರೊಬ್ಬರು ಕೇಳಿದ್ದರು. ಆದರೆ ಕೆಲ ಕಾರಣಗಳಿಂದ ನಿರ್ದೇಶಕರು ಬದಲಾದರು. ಆಗ ಸುದೀಪ್ ಅವರು ಯುವ ಅಸೋಸಿಯೇಟ್ ಡೈರೆಕ್ಟರ್ ಗುರುದತ್ ಅವರ ಪ್ರಸ್ತಾಪವಿಟ್ಟರು. ಇದಕ್ಕೆ ಒಪ್ಪಿ ಸಿನಿಮಾ ಆರಂಭಿಸಿದೆ. ಮೊದಲ ದಿನವೇ ನನಗೆ ಯುವ ನಿರ್ದೇಶಕರ ಕಾರ್ಯ ಇಷ್ಟ ಆಯಿತು. ಹೆದರಿಕೊಂಡು ಸಿನಿಮಾ ಮಾಡಬೇಡ ಅಂತಾ ಧೈರ್ಯ ತುಂಬಿದೆ. ಸುಹಾಸಿನಿ ಅವರು ಚಿತ್ರದ ಕೈ ಹಿಡಿದಿದ್ದಾರೆ. ಅವರ ಜೊತೆ ಚಿತ್ರ ಮಾಡಿರುವುದು ಸಂತಸ ತಂದಿದೆ. ಎಲ್ಲರೂ ಬಾಹುಬಲಿ ಮಾಡೋದಕ್ಕೆ ಆಗಲ್ಲ, ಚಿಕ್ಕ ಚಿಕ್ಕ ಶಾಟ್ ಆದರೂ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ ಎಂದರು.

    ಇದೇ ತಿಂಗಳ 27ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಬಹುಭಾಷಾ ನಟಿ ಸುಹಾಸಿನಿ ಸೇರಿದಂತೆ ಶೃತಿ ಹರಿಹರನ್, ವೀಣಾ ಪೊನ್ನಪ್ಪ, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಚಿತ್ರ ತಂಡದ ಪ್ರಮುಖರು ಭಾವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬರೀಶ್ ಬಗ್ಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ನಿರ್ದೇಶಕ ಹೇಳಿದ್ದೇನು?

    ಅಂಬರೀಶ್ ಬಗ್ಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ನಿರ್ದೇಶಕ ಹೇಳಿದ್ದೇನು?

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಸಂಭಾಳಿಸೋದು ಕಷ್ಟ ಎಂಬುದು ಚಿತ್ರರಂಗದಲ್ಲಿ ಜನಜನಿತವಾಗಿರುವ ಅಭಿಪ್ರಾಯ. ಈ ಹಿರಿಯ ನಟನನ್ನು ಸಂಭಾಳಿಸಲು ಚಿಕ್ಕ ವಯಸ್ಸಿನ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಏನು ಮಾಡಿರಬಹುದು ಎಂಬ ಕ್ಯೂರಿಯಾಸಿಟಿ ಅನೇಕರಲ್ಲಿದ್ದದ್ದು ಸುಳ್ಳಲ್ಲ!

    ಈ ಬಗ್ಗೆ ಇದೀಗ ಸ್ವತಃ ನಿರ್ದೇಶಕ ಗುರುದತ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಂಬರೀಶ್ ಅವರ ಜೊತೆ ಚಿತ್ರ ಮಾಡೋವಾಗ ಗುರುದತ್ ಆರಂಭದಲ್ಲಿ ಇದು ಕನಸೇನೋ ಅಂದುಕೊಂಡಿದ್ದರಂತೆ. ಅವರ ನಟನೆಯನ್ನು ನಿರ್ದೇಶನ ಮಾಡೋ ಸವಾಲನ್ನು ಎದುರುಗೊಳ್ಳಲು ತಮ್ಮಿಂದ ಸಾಧ್ಯವಾಗುತ್ತಾ ಅಂತಲೂ ಭಯಗೊಂಡಿದ್ದರಂತೆ. ಅವರ ಸಿಟ್ಟು ಸೆಡವುಗಳ ಕಥೆಗಳನ್ನೂ ಕೇಳಿರುವುದರಿಂದ ಆ ಬಗೆಗೂ ಗುರುದತ್ ಭಯ ಹೊಂದಿದ್ದರಂತೆ.

    ಆದರೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದುದ್ದಕ್ಕೂ ಗುರುದತ್‍ಗೆ ಸಿಕ್ಕಿದ್ದು ಅಪ್ಪನಂಥಾ ಅಂಬರೀಶ್ ಯಾಕೆಂದರೆ ಅವರು ಒಂದು ಹಂತದಲ್ಲಿಯೂ ಸಿಟ್ಟು ಮಾಡಿಕೊಂಡಿಲ್ಲವಂತೆ. ಆದಷ್ಟು ಸಮಯವನ್ನೂ ಕೂಡಾ ಮೇಂಟೇನ್ ಮಾಡಿದ್ದಾರಂತೆ. ಇದೆಲ್ಲದರಿಂದ ಥ್ರಿಲ್ ಆಗಿರೋ ಗುರುದತ್ ಅಂಬಿ ಜೊತೆ ಕೆಲಸ ಮಾಡೋದೆಂದರೆ ಅಪ್ಪನ ಜೊತೆ ಕೆಲಸ ಮಾಡಿದಷ್ಟೇ ಕಂಫರ್ಟ್ ಫೀಲ್ ಕೊಟ್ಟಿದೆ ಅಂತ ಹೇಳಿಕೊಂಡಿದ್ದಾರೆ.