Tag: Gurmeet Ram Rahim

  • ರೇಪ್‌ ಅಪರಾಧಿ ರಾಮ್ ರಹೀಮ್‌ಗೆ 14ನೇ ಪೆರೋಲ್ – 3 ತಿಂಗಳ ಬಳಿಕ ಮತ್ತೆ 40 ದಿನ ರಜೆ!

    ರೇಪ್‌ ಅಪರಾಧಿ ರಾಮ್ ರಹೀಮ್‌ಗೆ 14ನೇ ಪೆರೋಲ್ – 3 ತಿಂಗಳ ಬಳಿಕ ಮತ್ತೆ 40 ದಿನ ರಜೆ!

    ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಹರಿಯಾಣದ ಡೇರಾ ಸಚ್ಚಾ ಸೌದಾ (Dera Sacha Sauda) ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ (Gurmeet Ram Rahim) 40 ದಿನಗಳ ಪೆರೋಲ್ (Parole) ಸಿಕ್ಕಿದೆ. ಆತ ಇಂದು (ಆ.5) ಬೆಳಿಗ್ಗೆ ಹರಿಯಾಣದ (Haryana) ರೋಹ್ಟಕ್‌ನಲ್ಲಿರುವ ಸುನಾರಿಯಾ ಜೈಲಿನಿಂದ ಸಿರ್ಸಾ ಡೇರಾ ಆಶ್ರಮಕ್ಕೆ ತೆರಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್‌ಗೆ ಇದು 2017 ರಿಂದ 14ನೇ ಬಾರಿ ಪೆರೋಲ್‌ ಮಂಜುರಾಗಿರುವುದು. ಮೂರು ತಿಂಗಳ ಹಿಂದೆ ಸಹ ಆತನಿಗೆ 21 ದಿನಗಳ ಕಾಲ ಪೆರೋಲ್‌ ನೀಡಲಾಗಿತ್ತು. ಏ.9 ರಂದು, ರಾಮ್ ರಹೀಮ್‌ಗೆ 21 ದಿನಗಳ ರಜೆ ನೀಡಲಾಗಿತ್ತು. ಇದಕ್ಕೂ ಮುನ್ನ ಈ ವರ್ಷ ಜನವರಿಯಲ್ಲಿ 20 ದಿನಗಳ ಪೆರೋಲ್ ನೀಡಲಾಗಿತ್ತು.

    ಡೇರಾ ಸಚ್ಚಾ ಸೌದಾದಲ್ಲಿ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 2017ರಲ್ಲಿ ಆತನಿಗೆ 20 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. 2019 ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣದಲ್ಲೂ ರಾಮ್‌ ರಹಿಮ್‌ ಸೇರಿದಂತೆ ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

    ಈ ಹಿಂದೆ ಪಂಜಾಬ್, ಹರಿಯಾಣ ಮತ್ತು ನೆರೆಯ ರಾಜ್ಯಗಳಲ್ಲಿ ಚುನಾವಣೆಗಳ ಸಮಯದಲ್ಲಿ ಆತನಿಗೆ ಪೆರೋಲ್‌ ನೀಡಲಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಹರಿಯಾಣ ಉಪಚುನಾವಣೆಯ ಸಮಯದಲ್ಲಿ 40 ದಿನಗಳವರೆಗೆ. ಅದಕ್ಕೂ ಮೊದಲು, 2020 ರಲ್ಲಿ ಹರಿಯಾಣ ವಿಧಾನಸಭಾ ಚುನಾವಣೆ ಸಮಯದಲ್ಲಿ 40 ದಿನ ಪೆರೋಲ್‌ ನೀಡಲಾಗಿತ್ತು. ಅಲ್ಲದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆಯೂ ಪೆರೋಲ್‌ ಮಂಜೂರು ಮಾಡಲಾಗಿತ್ತು.

    ಚುನಾವಣೆ ಸಮಯದಲ್ಲಿ ಪೆರೋಲ್‌ ನೀಡಿದ್ದರೂ ಸಹ, ರಾಮ್‌ ರಹೀಮ್‌ಗೆ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಭಾಷಣ ಮಾಡುವುದು ಮತ್ತು ಚುನಾವಣೆ ಇರುವ ರಾಜ್ಯಗಳಲ್ಲಿ ಉಳಿಯುವುದನ್ನು ನಿಷೇಧಿಸಲಾಗಿತ್ತು.

  • ಬಾಬಾಗೆ 20 ವರ್ಷ ಜೈಲು ಶಿಕ್ಷೆ ಆಗಿದ್ದು ಹೇಗೆ? ಇಂದು ಕೋರ್ಟ್ ನಲ್ಲಿ ಏನಾಯ್ತು?

    ಬಾಬಾಗೆ 20 ವರ್ಷ ಜೈಲು ಶಿಕ್ಷೆ ಆಗಿದ್ದು ಹೇಗೆ? ಇಂದು ಕೋರ್ಟ್ ನಲ್ಲಿ ಏನಾಯ್ತು?

    ಪಂಚಕುಲಾ: ನಾನು ದೇವರ ಅಪರಾವತರ. ದೇವರ ಸಂದೇಶಗಾರ ಎಂದು ಸ್ವಂಘೋಷಿತ ದೇವಮಾನವನ ಸೋಗಿನಲ್ಲಿ ಅತ್ಯಾಚಾರ ನಡೆಸಿದ ಡೇರಾ ಸಚ್ಛಾಸೌದದ ಗುರ್ಮಿತ್ ರಾಮ್ ರಹೀಂ ಸಿಂಗ್‍ಗೆ ಕೋರ್ಟ್ 20 ವರ್ಷ ಜೈಲು ಶಿಕ್ಷೆ ಮತ್ತು ಒಟ್ಟು 29 ಲಕ್ಷ ರೂ.ದಂಡ ವಿಧಿಸಿದೆ.

    ಸಿರ್ಸಾ ಆಶ್ರಮದಲ್ಲಿ ಇಬ್ಬರು ಸಾಧ್ವಿಗಳ ಮೇಲೆ ಮೂರು ವರ್ಷ ನಿರಂತರ ಅತ್ಯಾಚಾರ ಎಸಗಿದ್ದ ಅಪರಾಧಿ ಬಾಬಾಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) 506(ಜೀವ ಬೆದರಿಕೆ) ಅಡಿ ಕಠಿಣ ಜೈಲುಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಜಡ್ಜ್ ಜಗದೀಪ್ ಸಿಂಗ್ ಆದೇಶಿಸಿದ್ದಾರೆ.

    ಮೊದಲಿಗೆ 10 ವರ್ಷ ಅಷ್ಟೇ ಎಂದೇ ಸುದ್ದಿಯಾಗಿತ್ತು. ಮಧ್ಯಾಹ್ನ 3.30ಕ್ಕೆ ಮೊದಲ ಮತ್ತು 4.30ಕ್ಕೆ ಎರಡನೇ ತೀರ್ಪು ಪ್ರಕಟಿಸಿದರು. ಕೋರ್ಟ್ ಆದೇಶ ಓದಿದ ಬಳಿಕ 2 ಅತ್ಯಾಚಾರ ಕೇಸ್‍ಗಳಲ್ಲಿ ತಲಾ 10ರಂತೆ 20 ವರ್ಷ ಶಿಕ್ಷೆ ಮತ್ತು 15 ಲಕ್ಷ ದಂಡ ಹಾಗೂ 14 ಲಕ್ಷವನ್ನ ಸಂತ್ರಸ್ತೆಯರಿಗೆ ನೀಡುವಂತೆ ಜಡ್ಜ್ ಒಟ್ಟು 29 ಲಕ್ಷ ದಂಡ ವಿಧಿಸಿದ್ದಾರೆ.

    ಸಿಬಿಐ ಕೋರ್ಟ್ ತೀರ್ಪನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸುತ್ತೇವೆ ಎಂದು ರಾಮ್ ರಹೀಮ್ ಪರ ವಕೀಲರು ಸ್ಪಷ್ಟ ಪಡಿಸಿದ್ದಾರೆ. ಶಿಕ್ಷೆಯಲ್ಲಿ ಗೊಂದಲ ಇಲ್ಲ ಎಂದು ಸಿಬಿಐ ವಕ್ತಾರರು ಸಹ ಖಾತ್ರಿ ಪಡಿಸಿದರು. ಆದರೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಸಂತ್ರಸ್ತೆಯೊಬ್ಬರು ಹೈಕೋರ್ಟ್‍ಗೆ ಹೋಗುವುದಾಗಿ ಹೇಳಿದ್ದಾರೆ.

    ತೀರ್ಪಿನ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಅದೇ ಜೈಲಿನಲ್ಲಿ ರಾಮ್ ರಹೀಂಗೆ ಜೈಲು ಉಡುಪು ಕೊಡಲಾಯ್ತು. ಆಗಸ್ಟ್ 25ಕ್ಕೆ ತೀರ್ಪಿನಂತೆ ಹಿಂಸಾಚಾರ ಇವತ್ತು ನಡೆಯಲು ಭದ್ರತಾ ಪಡೆಗಳು ಆಸ್ಪದ ಕೊಡಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪಂಜಾಬ್-ಹರ್ಯಾಣ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಇವತ್ತು ಕರ್ಫ್ಯೂ ವಿಧಿಸಿ ಕಂಡಲ್ಲಿ ಗುಂಡು ಹೊಡೆಯಲು ಆದೇಶಿಸಲಾಗಿತ್ತು. ಆದಾಗ್ಯೂ, ಸಿರ್ಸಾದ ಪುಲ್ಕನ್ ಗ್ರಾಮದ ಬಳಿ 2 ಕಾರುಗಳಿಗೆ ಭಕ್ತರು ಬೆಂಕಿ ಹಚ್ಚಿದ್ದರು.

    ಲೈಬ್ರರಿಯಲ್ಲಿ ಕಲಾಪ:
    ರೋಹ್ಟಕ್ ನ ಸುನಾರಿಯಾ ಜೈಲಿನ ಗ್ರಂಥಾಲಯದಲ್ಲಿ ತಾತ್ಕಾಲಿಕ ಕೋರ್ಟ್ ಹಾಲ್ ನಿರ್ಮಿಸಲಾಗಿತ್ತು. ಹೆಲಿಕಾಪ್ಟರ್ ಮೂಲಕ ಜಡ್ಜ್ ಜಗದೀಪ್ ಸಿಂಗ್ ಕೋರ್ಟ್ ಗೆ ಆಗಮಿಸಿದರು. ಶಿಕ್ಷೆ ಪ್ರಕಟಣೆಗೆ ಮುಂಚೆ ರೋಹ್ಟಕ್‍ನ ಸುನರಿಯಾ ಕೋರ್ಟ್ ನಲ್ಲಿ ಭಾರೀ ಹೈಡ್ರಾಮ ನಡೆಯಿತು. ಜಡ್ಜ್ ಜಗದೀಪ್ ಸಿಂಗ್, ಸಿಬಿಐ ಪರ ವಕೀಲ, ಬಾಬಾ ಪರ ವಕೀಲ, ಆರೋಪ ಬಾಬಾ ಸೇರಿ 7 ಮಂದಿ ಮಾತ್ರ ಕೋರ್ಟ್ ಹಾಲ್‍ನಲ್ಲಿದ್ದರು. 2.30ಕ್ಕೆ ಕಲಾಪ ಆರಂಭಿಸಿದ ಜಡ್ಜ್, ಇಬ್ಬರೂ ವಕೀಲರಿಗೆ ಹತ್ತತ್ತು ನಿಮಿಷ ಅವಕಾಶ ಕಲ್ಪಿಸಿದರು.

    ಸಿಬಿಐ ಪರ ವಕೀಲರ ವಾದ ಏನಿತ್ತು?
    ಧರ್ಮ ಮತ್ತು ನಂಬಿಕೆಯ ಹೆಸರಿನಲ್ಲಿ ಬಾಬಾ ರೇಪ್ ಮಾಡಿದ್ದು ತಮ್ಮನ್ನು ನಂಬಿ ಬಂದ ಹೆಣ್ಮಕ್ಕಳ ಜೀವನ ಹಾಳು ಮಾಡಿದ್ದಾರೆ. ಬಾಬಾ ಗುರ್ಮಿತ್ ಕೃತ್ಯವನ್ನು ಸಮಾಜ ಕ್ಷಮಿಸಲಾಗದು. ಅತ್ಯಾಚಾರ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ. ಬಾಬಾ ಬೆಂಬಲಿಗರು ತೀರ್ಪಿನ ದಿನ ದಾಂಧಲೆ ಮಾಡಿದ್ದು ಅಲ್ಲದೇ ಈಗಲೂ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಕನಿಷ್ಠ 10 ವರ್ಷ ಕಠಿಣ ಶಿಕ್ಷೆ ನೀಡಬೇಕು

    ಬಾಬಾ ಪರ ವಕೀಲರ ವಾದ ಏನಿತ್ತು?
    ಸಿಬಿಐ ಪರ ವಕೀಲರ ವಾದವನ್ನು ದಯವಿಟ್ಟು ಪರಿಗಣಿಸಬೇಡಿ. ನಮ್ಮ ಕಕ್ಷಿದಾರನಿಗೆ ವಯಸ್ಸಾಗಿದ್ದು ಆರೋಗ್ಯ ಬೇರೆ ಕೈಕೊಟ್ಟಿದೆ. ನಮ್ಮ ಕಕ್ಷಿದಾರ ಅಪಾರ ಸಮಾಜ ಸೇವೆ ಮಾಡಿದ್ದಾರೆ. ದಯವಿಟ್ಟು ಬಾಬಾ ಗುರ್ಮಿತ್‍ಗೆ ಕನಿಷ್ಠ ಶಿಕ್ಷೆಯನ್ನು ವಿಧಿಸಿ.

    ಬಾಬಾ ಮನವಿ ಏನಿತ್ತು?
    ಕೋರ್ಟ್ ಹಾಲ್‍ಗೆ ಎಂಟ್ರಿ ಕೊಡುತ್ತಲೇ ಭವಿಷ್ಯ ನೆನಪಿಸಿಕೊಂಡು ಕಣ್ಣೀರು ಹಾಕಿ ನನ್ನನ್ನು ಮನ್ನಿಸಬೇಕು. ದಯವಿಟ್ಟು ನನ್ನ ಮೇಲೆ ಕನಿಕರ ತೋರಿ ಕನಿಷ್ಠ ಶಿಕ್ಷೆ ವಿಧಿಸಿ. ನನ್ನ ನಂಬಿರುವ ಜನಕ್ಕೆ ಮತ್ತು ಸಮಾಜದ ಸೇವೆ ಸಲ್ಲಿಸಬೇಕಿದೆ. ಪ್ಲೀಸ್ ದಯವಿಟ್ಟು ನನ್ನನ್ನು ಕ್ಷಮಿಸಿ ಸಣ್ಣ ಪ್ರಮಾಣದ ಶಿಕ್ಷೆ ನೀಡಿ.

    ಜಡ್ಜ್ ತೀರ್ಪು ಏನು?
    ಅಪರಾಧಿ ಮಾಡಿದ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆಯೇ ಸರಿ(ಎರಡು ಕೇಸ್‍ನಲ್ಲಿ ತಲಾ ಹತ್ತತ್ತು ವರ್ಷ ಶಿಕ್ಷೆ). ಅಪರಾಧಿಗೆ ಜೈಲಿನಲ್ಲಿ ವಿವಿಐಪಿ ಸವಲತ್ತು ನೀಡುವಂತಿಲ್ಲ. ಅಷ್ಟೇ ಅಲ್ಲದೇ ಬಾಬಾಗೆ ಸಹಾಯಕನನ್ನು ಸಹ ನೀಡುವಂತಿಲ್ಲ. ನಂಬಿಕೆ ಹೆಸರಿನಲ್ಲಿ ಇಂತಹ ಕೃತ್ಯ ಎಸಗುವವರಿಗೆ ಇದು ಪಾಠ ಆಗಬೇಕು.

    ರೇಪಿಸ್ಟ್ ಬಾಬಾನ ಮುಂದಿನ ಹಾದಿ ಏನು?
    ಶಿಕ್ಷೆ ಅಮಾನತ್ತಿಡಲು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು. 20 ವರ್ಷ ಶಿಕ್ಷೆ ವಿಧಿಸಿರುವುದರಿಂದ ಶಿಕ್ಷೆ ಅಮಾನತ್ತಿನಲ್ಲಿಡುವುದು ಕಡಿಮೆ. ಸದ್ಯಕ್ಕೆ ಜಾಮೀನು ನೀಡುವ ಸಾಧ್ಯತೆ ಕಡಿಮೆ ಇರುವ ಕಾರಣ ಶೀಘ್ರದಲ್ಲೇ ವಿಚಾರಣೆ ನಡೆಸುವಂತೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು.

  • ರಕ್ತಮಯವಾಯ್ತು ತುರ್ತು ನಿಗಾ ಘಟಕ, ರಾತ್ರಿಯಿಡಿ ಮೃತವ್ಯಕ್ತಿಗಳ ಮೊಬೈಲ್‍ಗಳಿಗೆ ನಿರಂತರ ಕರೆ

    ರಕ್ತಮಯವಾಯ್ತು ತುರ್ತು ನಿಗಾ ಘಟಕ, ರಾತ್ರಿಯಿಡಿ ಮೃತವ್ಯಕ್ತಿಗಳ ಮೊಬೈಲ್‍ಗಳಿಗೆ ನಿರಂತರ ಕರೆ

    ಪಂಚಕುಲಾ: ಶುಕ್ರವಾರ ರಾತ್ರಿಯಿಡಿ ಮೊಬೈಲ್‍ಗಳ ರಿಂಗಣ. ಮೃತ ವ್ಯಕ್ತಿಗಳಿಗೆ ಬರುತ್ತಿರುವ ಮೊಬೈಲ್ ಕರೆಗಳಿಗೆ ಹೇಗೆ ಉತ್ತರಿಸಬೇಕು ಎಂದು ತಿಳಿಯದ ವೈದ್ಯರು. ತುರ್ತು ನಿಗಾ ಘಟಕದಲ್ಲಿ ಎಲ್ಲಿ ನೋಡಿದರಲ್ಲಿ ಕೆಂಪು ಕೆಂಪು ರಕ್ತ. ಸ್ಟ್ರೇಚರ್‍ನಲ್ಲಿ ನರಳಾಡುತ್ತಿರುವ ರೋಗಿಗಳು.

    ಇದು ಹರ್ಯಾಣದ ಪಂಚಕುಲಾ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಕಂಡುಬಂದ ದೃಶ್ಯ. ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಮೇಲಿನ ಅತ್ಯಾಚಾರ ಆರೋಪ ಸಾಬೀತಾದ ಬಳಿನ ನಡೆದ ಘರ್ಷಣೆಯಲ್ಲಿ ಪಂಚಕುಲದಲ್ಲಿ ಮೂವತ್ತಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಬಾಬಾನ ಭಕ್ತರ ಮೃತದೇಹಗಳನ್ನು ಪಂಚಕುಲದ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಈ ವ್ಯಕ್ತಿಗಳಿಗೆ ರಾತ್ರಿಯಿಡಿ ಕರೆ ಬರುತಿತ್ತು ಎಂದು ಆಸ್ಪತ್ರೆಯ ಸಿಬ್ಬಂದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಘರ್ಷಣೆಯಲ್ಲಿ ಮೃತಪಟ್ಟ 17 ಮಂದಿ ಮೃತದೇಹಗಳನ್ನು ಪಂಚಕುಲಾ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಈ ಮೃತದೇಹಗಳು ಯಾರದ್ದು ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ ಅವರ ಕಿಸೆಯಲ್ಲಿದ್ದ ಮೊಬೈಲ್ ಗಳಿಗೆ ನಿರಂತರ ಕರೆಗಳು ಬರುತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

    ಕರೆ ಬರುತ್ತಿದ್ದರೂ ನಾವು ಸ್ವೀಕರಿಸಲಿಲ್ಲ. ಒಂದು ವೇಳೆ ಮಾಹಿತಿ ನೀಡಿದರೆ ರಾತ್ರಿಯೇ ಮೃತಪಟ್ಟವರ ಸಂಬಂಧಿಕರು ಆಸ್ಪತ್ರೆಗೆ ಬರುವ ಸಾಧ್ಯತೆ ಇತ್ತು, ಪಂಚಕುಲಾದಲ್ಲಿ ನಿಷೇಧಾಜ್ಞೆ ಜಾರಿಯಾದ ಹಿನ್ನೆಲೆಯಲ್ಲಿ ನಾವು ಫೋನ್ ಕರೆಗಳನ್ನು ಸ್ವೀಕರಿಸಿಲಿಲ್ಲ. ಶನಿವಾರ ಬೆಳಗ್ಗೆ ಕರೆಗಳನ್ನು ಸ್ವೀಕರಿಸಿ ಮಾಹಿತಿ ನೀಡುತ್ತೇವೆ ಎಂದು ವೈದ್ಯರು ತಿಳಿಸಿದರು.

    ಮೃತಪಟ್ಟ 17 ಮಂದಿಯ ದೇಹದಲ್ಲಿ ಬುಲೆಟ್ ಹೊಕ್ಕಿದ್ದು, ಗಾಯಗಳಾಗಿವೆ. ಕೆಲವು ಮಂದಿಗೆ ಕಲ್ಲೇಟು ಬದ್ದಿದೆ. ಮೃತಪಟ್ಟವರ ದೇಹಗಳಲ್ಲಿ ಯಾವುದೇ ಗುರುತು ಪತ್ರಗಳಿಲ್ಲ. ಗ್ರಾಮಗಳಿಂದ ಬಂದಿರುವ ವ್ಯಕ್ತಿಗಳಾಗಿದ್ದು, ಕುರ್ತಾ ಮತ್ತು ಪೈಜಾಮ ಧರಿಸಿದ್ದಾರೆ. ದೇಹವನ್ನು ಗುರುತಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ಮುಂದಾಗಿದ್ದಾರೆ.

    ತರ್ತು ನಿಗಾ ಘಟಕದಲ್ಲಿ ಭಯಾನಕ ಸ್ಥಿತಿ ನಿರ್ಮಾಣವಾಗಿತ್ತು. 100ಕ್ಕೂ ಹೆಚ್ಚು ಮಂದಿ ಸ್ಟ್ರೆಚರ್ ನಲ್ಲಿ ಮಲಗಿದ್ದರೆ, ಅದರಲ್ಲಿ ಹಲವು ಮಂದಿ ಮೃತಪಟ್ಟಿದ್ದರು. ತುರ್ತು ನಿಗಾ ಮಳಿಗೆಯಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಮುಂದಿನ ಕೆಲ ದಿನಗಳ ವರೆಗೆ ಎಲ್ಲ ವೈದ್ಯರ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

    ಕಲ್ಲು ತೂರಾಟದಿಂದಾಗಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದು, ಕೆಲ ಐಪಿಎಸ್ ಅಧಿಕಾರಿಗಳು ಸಹ ದಾಖಲಾಗಿದ್ದಾರೆ. ದಾಖಲಾದವರ ಪೈಕಿ 55ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರೆಲ್ಲರನ್ನು ಚಂಡೀಗಢದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿವರೆಗೂ ಹೊತ್ತಿ ಉರಿದ ಹರ್ಯಾಣದಲ್ಲಿ ಸದ್ಯ ಹಿಂಸಾಚಾರ ನಿಂತಿದೆ. ಆದ್ರೆ ಬೂದಿ ಮುಚ್ಚಿದ ಕೆಂಡದಂತಿದೆ ಪರಿಸ್ಥಿತಿ. ಹೀಗಾಗಿಯೇ ಸಿಎಂ ಖಟ್ಟರ್ ಸರ್ಕಾರ ಶಾಂತಿ ಭದ್ರತೆಗೆ ಕೇಂದ್ರದ ಮೊರೆ ಹೋಗಿದೆ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದ್ದು, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.