Tag: Guntkal station

  • ಆಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ರೈಲ್ವೇ ಇಲಾಖೆ ಕೆಟ್ಟ ಹೆಸರು ತರಲು ಯತ್ನಿಸಿ ಸಿಕ್ಕಿಬಿದ್ದ ವೃದ್ಧ

    ಆಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ರೈಲ್ವೇ ಇಲಾಖೆ ಕೆಟ್ಟ ಹೆಸರು ತರಲು ಯತ್ನಿಸಿ ಸಿಕ್ಕಿಬಿದ್ದ ವೃದ್ಧ

    ನವದೆಹಲಿ: ಭಾರತೀಯ ರೈಲ್ವೇಗೆ ಕೆಟ್ಟ ಹೆಸರು ತರಲು ಆಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ಸುಳ್ಳು ದೂರು ನೀಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಸುರೇಂದ್ರ ಪಾಲ್ (70) ಆಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ಕಳ್ಳಾಟ ಆಡುತ್ತಿದ್ದ ವೃದ್ಧ. ರೈಲಿನಲ್ಲಿ ಉಚಿತ ಊಟ ಪಡೆಯುವ ಉದ್ದೇಶದಿಂದ ಸುರೇಂದ್ರ ಪಾಲ್ ಹೀಗೆ ಸುಳ್ಳ ಹೇಳಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

    ಗುಂಟ್ಕಲ್ ನಿಲ್ದಾಣದಲ್ಲಿ ಖರೀದಿಸಿದ್ದ ವೆಜ್ ಬಿರಿಯಾನಿಯಲ್ಲಿ ಹಲ್ಲಿ ಪತ್ತೆಯಾಗಿದೆ. ಅದನ್ನು ಸೇವಿಸಿದ ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಎಂದು ಸುರೇಂದ್ರ ಪಾಲ್ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ದೂರಿದ್ದ. ತಕ್ಷಣವೇ ಆತನನ್ನು ರೈಲ್ವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

    ವೃದ್ಧನ ನಡೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರೊಬ್ಬರು ಪಾಲ್ ಪ್ರಕರಣ ಎತ್ತಿಕೊಂಡಿದ್ದರು. ಬಳಿಕ ವಿವಿಧ ವಿಭಾಗಗಳಲ್ಲಿ ವರದಿಯಾದ ಇತರ ಪ್ರಕರಣಗಳನ್ನು ಹೋಲಿಕೆಯನ್ನು ಗಮನಿಸಿದರು. ತೀರಾ ಇತ್ತೀಚಿಗೆ ಜಬಲ್ಪುರದಲ್ಲಿ ವರದಿಯಾಗಿತ್ತು.

    ಜಬಲ್ಪುರಕ್ಕೆ ಸಂಪರ್ಕಿಸಿದಾಗ ಅಲ್ಲಿನ ಅಧಿಕಾರಿಗಳು, ತಮ್ಮ ಸಮೋಸಾದಲ್ಲಿ ಹಲ್ಲಿ ಸಿಕ್ಕಿತ್ತು ಎಂದು ದೂರಿದ್ದ ವ್ಯಕ್ತಿಯ ಫೋಟೋವನ್ನು ಕಳುಹಿಸಿದರು. ಅದು ಸುರೇಂದ್ರ ಪಾಲ್‍ದೆ ಆಗಿತ್ತು. ಮಿರಾಜ್ ನಿಲ್ದಾಣದಲ್ಲಿಯೂ ಪಾಲ್, ಇಡ್ಲಿಯಲ್ಲಿ ಬ್ಲೇಡ್ ಬಂದಿತ್ತು ಅಂತ ಹೇಳಿಕೊಂಡಿದ್ದ ಎಂದು ಪುಣೆ ವಿಭಾಗವು ಮಾಹಿತಿ ನೀಡಿತು. ಅಷ್ಟೇ ಅಲ್ಲದೆ ಇತರ ಎರಡು ಪ್ರಕರಣಗಳಲ್ಲಿ, ಪಾಲ್ ಅಂಗಡಿ ಮಾಲೀಕರಿಗೆ ದೂರು ನೀಡಿ ಬೆದರಿಕೆ ಹಾಕಿದ್ದು ಮತ್ತು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದ ವಿಚಾರಗಳು ಬೆಳಕಿಗೆ ಬಂದಿವೆ.

    ರೈಲ್ವೇ ಇಲಾಖೆಗೆ ಕೆಟ್ಟ ಹೆಸರು ತಂದಿದ್ದಕ್ಕೆ ಪಾಲ್‍ನನ್ನು ಶಿಕ್ಷಿಸಲಾಯಿತು. ಆದರೆ ಪಾಲ್, ತನ್ನ ಮಾರ್ಗಗಳನ್ನು ಬದಲಾಯಿಸುವ ಭರವಸೆ ನೀಡಿದ್ದಾನೆ. ಹೀಗಾಗಿ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

    ತಪ್ಪು ಕೆಲಸ ಮಾಡಿದ್ದೇನೆ. ನಾನು ವೃದ್ಧ, ಮಾನಸಿಕವಾಗಿ ಅಸ್ತಿತ್ವ ಕಳೆದುಕೊಂಡಿದ್ದೇವೆ. ನನಗೆ ರಕ್ತ ಕ್ಯಾನ್ಸರ್ ಇದೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ. ಪಂಜಾಬ್‍ನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಹೋಗುತ್ತಿರುವೆ ಎಂದು ಸುರೇಂದ್ರ ಪಾಲ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾನೆ.

    ಪಾಲ್ ಹೇಳಿಕೊಂಡಂತೆ ಮಾನಸಿಕವಾಗಿ ಅಸ್ಥಿರವಾಗಿದ್ದಾನೆಯೇ ಅಥವಾ ರಕ್ತ ಕ್ಯಾನ್ಸರ್ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.