Tag: gunman

  • PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಅಫ್ಜಲ್‌ಪುರ ಎಂಎಲ್‌ಎ ಎಂ.ವೈ.ಪಾಟೀಲ್ ಗನ್‌ಮ್ಯಾನ್‌ನನ್ನು ಬಂಧಿಸಲಾಗಿದೆ.

    ಶಾಸಕ ಎಂ.ವೈ.ಪಾಟೀಲ್ ಅವರು ಪರಿಚಯಸ್ಥರ ಮದುವೆಗೆ ತೆರಳುತ್ತಿದ್ದ ವೇಳೆ, ಕಲಬುರಗಿ ನಗರದ ರಾಮಮಂದಿರ ಬಳಿ ಗನ್‌ಮ್ಯಾನ್ ಅಣ್ಣಯ್ಯ ದೇಸಾಯಿಯನ್ನು ಬಂಧಿಸಲಾಗಿದೆ. ಶಾಸಕರನ್ನು ಕಾರಿನಿಂದ ಇಳಿಸಿದ ಪೊಲೀಸರು, ಅವರ ಮುಂದೆಯೇ ಬಂಧಿಸಿದ್ದಾರೆ. ಬಳಿಕ ಶಾಸಕರಿಗೆ ಮತ್ತೊಬ್ಬ ಗನ್‌ಮ್ಯಾನ್‌ನನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ನಾಳೆಯಿಂದ 2 ದಿನ ಬಿಜೆಪಿ ಕೋರ್ ಕಮಿಟಿ ಸಭೆ – ಸಿಎಂ ಸೇರಿ ಹಲವರು ಭಾಗಿ

    MLA

    ಪಿಎಸ್‌ಐ ಪರೀಕ್ಷೆ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಈವರೆಗೆ ಮೂವರು ಕೊಠಡಿ ಮೇಲ್ವಿಚಾರಕರು, ನಾಲ್ವರು ಅಭ್ಯರ್ಥಿಗಳು ಹಾಗೂ ಜ್ಞಾನಜೋತಿ ಇಂಗ್ಲಿಷ್ ಶಾಲೆ ಅಧ್ಯಕ್ಷ ರಾಜೇಶ್ ಹಾಗರಗಿ ಸೇರಿ 8 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪೈಕಿ 6 ಆರೋಪಿಗಳನ್ನು 3 ದಿನಗಳ ಕಾಲ ವಿಚಾರಣೆ ನಡೆಸಲಾಗಿದೆ. ಆದರೂ ಅಭ್ಯರ್ಥಿಗಳು ಸತ್ಯ ಬಾಯಿಬಿಟ್ಟಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ

    Karnataka PSI exam scam (3)

    ತಮಗೇನೂ ಗೊತ್ತಿಲ್ಲ, ತಾವು ಅಕ್ರಮ ಮಾಡಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ವೀರೇಶ್ ಎಂಬ ಅಭ್ಯರ್ಥಿ ಹಣ ನೀಡಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ. ಕಿಂಗ್‌ಪಿನ್ ಮಂಜುನಾಥ ಎಂಬವನಿಗೆ 39 ಲಕ್ಷ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಅಕ್ರಮದ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಬಂಧಿತ ಅಭ್ಯರ್ಥಿಗಳ ಬ್ಯಾಂಕ್ ಡಿಟೈಲ್ಸ್, ಹಣದ ವರ್ಗಾವಣೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

  • ನಟ ಚೇತನ್ ಗೆ ಬೆದರಿಕೆ ಕರೆ ಮಾಡ್ತಿರೋದು ಯಾರು?

    ನಟ ಚೇತನ್ ಗೆ ಬೆದರಿಕೆ ಕರೆ ಮಾಡ್ತಿರೋದು ಯಾರು?

    ಸಾಮಾಜಿಕ ಹೋರಾಟಗಾರ, ನಟ ಚೇತನ್ ಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ರಾಶಿ ರಾಶಿ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿರುವ ಕುರಿತು ಅವರು ಮಾತನಾಡಿದ್ದಾರೆ.

    “ಒಂದು ಸಂಘಟನೆ, ಒಂದು ವ್ಯಕ್ತಿಯಂಥ ಹೇಳುವುದು ಕಷ್ಟವಾಗತ್ತೆ. ಅಷ್ಟೊಂದು ಬೆದರಿಕೆಯ ಕರೆಗಳು ಬರುತ್ತಿವೆ. ನನ್ನ ಹತ್ತಿರ ಎಲ್ಲ ದಾಖಲೆಗಳನ್ನೂ ಇಟ್ಟುಕೊಂಡಿದ್ದೇನೆ. ಆಧಾರವಿಲ್ಲದೇ ನಾನು ಯಾವತ್ತೂ ಮಾತನಾಡಿಲ್ಲ. ಸೂಕ್ತ ರೀತಿಯಲ್ಲಿ ಎಲ್ಲದಕ್ಕೂ ಉತ್ತರ ಕೊಡುವೆ’ ಎಂದಿದ್ದಾರೆ ಚೇತನ್. ಇದನ್ನೂ ಓದಿ : ಬಾಲಿವುಡ್ ಪಾಪ ತೊಳೆದ ದಿ ಕಾಶ್ಮೀರ್ ಫೈಲ್ಸ್: ಕಂಗನಾ ರಣಾವತ್

    ನ್ಯಾಯಾಧೀಶರ ಬಗ್ಗೆ ಅವಹೇಳನವಾಗಿ ಟ್ವಿಟ್ ಮಾಡಿದ್ದಕ್ಕೆ ಜೈಲಿಗೂ ಹೋಗಿ ಬಂದಿರುವ ಚೇತನ್, ಆ ಸಮಯದಲ್ಲಿ ಸರಕಾರ ಅವರ ಭದ್ರತೆಗಾಗಿ ಕೊಟ್ಟಿದ್ದ ಗನ್ ಮ್ಯಾನ್ ವಾಪಸ್ಸು ಪಡೆದಿತ್ತು. ಈ ಕುರಿತು ಅವರು ಮಾತನಾಡಿದ್ದಾರೆ. ‘ನನಗೆ ಸೂಕ್ತ ಭದ್ರತೆ ಈ ಹೊತ್ತಿನಲ್ಲಿ ಬೇಕಾಗಿದೆ. ಹಾಗಾಗಿ ಪೊಲೀಸ್ ಅಧಿಕಾರಿಗಳ ಜತೆಯೂ ಮಾತನಾಡಿದ್ದೇನೆ. ಕಮಿಷ್ನರ್ ಗೆ ಮನವಿ ಮಾಡಿಕೊಂಡಿದ್ದೇನೆ. ನನಗೆ ಈಗ ಸೂಕ್ತ ಭದ್ರತೆ ಬೇಕಾಗಿದೆ’ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಮೇಲಿಂದ ಮೇಲೆ ಅವರನ್ನು ಗಡಿಪಾರು ಮಾಡುವಂತಹ ವಿಷಯ ಪ್ರಸ್ತಾಪ ಆಗುತ್ತಿದೆ. ಈ ಕುರಿತು ನನಗೇನೂ ಗೊತ್ತಿಲ್ಲ ಎಂದಿರುವ ಚೇತನ್, ಅದು ಕೇವಲ ಗಾಳಿ ಸುದ್ದಿ ಎಂದು ಪ್ರತಿಕ್ರಿಯಿಸಿದ್ದಾರೆ.

  • ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ

    ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ

    ಗೌರಿ ಲಂಕೇಶ್ ಹತ್ಯ ಬಳಿಕೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರಿಗೆ ನೀಡಲಾಗಿದ್ದ ಗನ್ ಮ್ಯಾನ್ ಅನ್ನು ಸರ್ಕಾರ ಹಿಂಪಡೆದಿದೆ. ಈ ನಡೆಗೆ ಅವರು ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ತಮಗೆ ಈಗಲೂ ಜೀವಕ್ಕೆ ಅಪಾಯವಿದ್ದರೂ, ಗನ್ ಮ್ಯಾನ್ ಹಿಂಪಡೆದಿದ್ದಕ್ಕಾಗಿ ಚೇತನ್, ಶುಕ್ರವಾರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಭೇಟಿ ಮಾಡಿದರು. ಇದನ್ನೂ ಓದಿ : ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೇತನ್, “ನನಗೆ ಈಗಲೂ ಜೀವ ಬೆದರಿಕೆ ಇದೆ. ಗೌರಿ ಲಂಕೇಶ್ ಹತ್ಯ ಬಳಿಕೆ ನೀಡಲಾಗಿದ್ದ ಗನ್ ಮ್ಯಾನ್ ಅನ್ನು ಏಕಾಏಕಿ ಹಿಂಪಡೆದಿದ್ದಾರೆ. ಹಾಗಾಗಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಗನ್ ಮ್ಯಾನ್ ವಾಪಸ್ಸು ಕಳುಹಿಸುವಂತೆ ಮನವಿ ಮಾಡಿದ್ದೇನೆ’ ಎಂದರು. ಇದೇ ಸಂದರ್ಭದಲ್ಲಿಯೇ ಅವರು ತಮ್ಮ ಮನೆಯ ಹತ್ತಿರ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸುವಂತೆಯೂ ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು

    ನ್ಯಾಯಾಧೀಶರ ಬಗ್ಗೆ ಅವಹೇಳನ ರೀತಿಯಲ್ಲಿ ಟ್ವಿಟ್ ಮಾಡಿದ್ದ ಚೇತನ್, 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಅವರಿಗೆ ಜಾಮೀನು ಸಿಕ್ಕಿತ್ತು. ಜೈಲಿನಿಂದ ಆಚೆ ಬಂದ ಮೇಲೂ ತಾವು ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ, ಅವರ ಮೇಲೆ ಇನ್ನೂ ಎರಡು ಕೇಸ್‍ಗಳು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಈ ಎಲ್ಲದರ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಗನ್ ಮ್ಯಾನ್ ಸೆಕ್ಯುರಿಟಿಯನ್ನು ಸರ್ಕಾರ ಹಿಂಪಡೆದಿದೆ ಎನ್ನಲಾಗುತ್ತಿದೆ.

  • ಕಂಗನಾ ರಣಾವತ್ ಗನ್ ಮ್ಯಾನ್ ಮಂಡ್ಯದಲ್ಲಿ ಅರೆಸ್ಟ್

    ಕಂಗನಾ ರಣಾವತ್ ಗನ್ ಮ್ಯಾನ್ ಮಂಡ್ಯದಲ್ಲಿ ಅರೆಸ್ಟ್

    ಮಂಡ್ಯ: ಪ್ರೀತಿಸುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಕೈ ಕೊಟ್ಟಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರ್ ಹೆಗ್ಗಡೆಯನ್ನು ಮುಂಬೈ ಪೊಲೀಸರು ಕರ್ನಾಟಕ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ.

    ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಮುಂಬೈ ಪೊಲೀಸರು ಕಿಕ್ಕೇರಿ ಪೊಲೀಸ್ ಠಾಣೆಯ ಪೊಲೀಸರ ಸಹಾಯದೊಂದಿದೆ ಕುಮಾರ್ ಹೆಗ್ಡೆಯನ್ನು ಬಂಧಿಸಿದ್ದಾರೆ. ಮೂಲತಃ ಕೆ.ಆರ್.ಪೇಟೆ ತಾಲೂಕಿ ಹೆಗ್ಗಡಹಳ್ಳಿ ಗ್ರಾಮದ ಕುಮಾರ್ ಹೆಗ್ಡೆ, ಹಲವು ವರ್ಷಗಳಿಂದ ಮುಂಬೈನಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ.

    ಈ ವೇಳೆ ಮುಂಬೈನಲ್ಲಿ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಲವ್ಬಿ ಡವ್ವಿ ನಡೆಸಿದ್ದ. ಇದಾದ ಬಳಿಕ ಆಕೆಗೆ ಕೈಕೊಟ್ಟು ಕಣ್ಮರೆಯಾಗಿದ್ದ. ಈ ವೇಳೆ ಸಂತ್ರಸ್ತ ಯುವತಿ ಮುಂಬೈನ ಅಂಧೇರಿ ಪೊಲೀಸ್ ಠಾಣೆಯಲ್ಲಿ ಕುಮಾರ್ ಹೆಗ್ಡೆ ವಿರುದ್ಧ ದೂರು ದಾಖಲು ಮಾಡಿದ್ದಳು. ಇದಾದ ಬಳಿಕ ಮುಂಬೈನ ಮಾಧ್ಯಮಗಳಲ್ಲಿ ಸುದ್ದಿಯಾಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

    ಈ ವೇಳೆ ಅಂಧೇರಿ ಪೊಲೀಸರು ಕುಮಾರ್ ಹೆಗ್ಡೆ ಬಂಧನಕ್ಕೆ ಬಲೆ ಬೀಸಿದ್ದರು. ಇಡೀ ಮುಂಬೈಯನ್ನು ಪೊಲೀಸರು ಹುಡುಕಿದರೂ ಕುಮಾರ್ ಹೆಗ್ಡೆ ಪತ್ತೆಯಾಗಿರಲಿಲ್ಲ. ಇದಾದ ಬಳಿಕ ಮುಂಬೈ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮಕ್ಕೆ ಬರುತ್ತಾರೆ. ಈ ವೇಳೆ ಕಿಕ್ಕೇರಿ ಪೊಲೀಸ್ ಠಾಣೆಯ ಪೊಲೀಸರ ಸಹಾಯದೊಂದಿಗೆ ಕುಮಾರ್ ಹೆಗ್ಡೆಯನ್ನು ಬಂಧನ ಮಾಡಿ ಕೆ.ಆರ್.ಪೇಟೆಯ ಜೆಎಂಎಫ್‍ಸಿ ಕೋರ್ಟ್‍ಗೆ ಹಾಜರುಪಡಿಸಿ ಕುಮಾರ್ ಹೆಗ್ಡೆಯನ್ನು ಮುಂಬೈ ಪೊಲೀಸರು ಕರೆದೊಯ್ದಿದ್ದಾರೆ.

  • ಯಾದಗಿರಿ ಡಿಸಿ ಗನ್‍ಮ್ಯಾನ್, ಕಾರು ಚಾಲಕನಿಗೆ ಕೊರೊನಾ

    ಯಾದಗಿರಿ ಡಿಸಿ ಗನ್‍ಮ್ಯಾನ್, ಕಾರು ಚಾಲಕನಿಗೆ ಕೊರೊನಾ

    – ಜಿಲ್ಲಾಡಳಿತ ಭವನ ಸೀಲ್‍ಡೌನ್

    ಯಾದಗಿರಿ: ಕಿಲ್ಲರ್ ಕೊರೊನಾದಿಂದ ಈಗಾಗಲೇ ದೇವಸ್ಥಾನ, ಮಾಲ್, ಚಿತ್ರಮಂದಿರ ಪ್ರವಾಸಿ ಸ್ಥಳಗಳನ್ನು ಮುಚ್ಚಿಸಿದೆ. ಇದೀಗ ಯಾದಗಿರಿ ಜಿಲ್ಲಾಡಳಿತ ಭವನದ ಬಾಗಿಲು ಸಹ ಮುಚ್ಚಲಾಗಿದೆ.

    ಜಿಲ್ಲಾಧಿಕಾರಿ ಕಚೇರಿಯ 20ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ಇರೋದು ಬೆಳಕಿಗೆ ಬಂದಿದೆ. ಇದರಲ್ಲಿ ಜಿಲ್ಲಾಧಿಕಾರಿ ಗನ್‌ಮ್ಯಾನ್ ಮತ್ತು ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಇದರಿಂದ ಇಡೀ ಜಿಲ್ಲಾಡಳಿತ ಭವನಕ್ಕೆ ಆತಂಕ ಎದುರಾಗಿದೆ.

    ಹೀಗಾಗಿ ಇಂದಿನಿಂದ ಮೂರು ದಿನಗಳವರೆಗೆ ಜಿಲ್ಲಾಡಳಿತ ಭವನವನ್ನು ಸೀಲ್‍ಡೌನ್ ಮಾಡಲಾಗಿದೆ. ಭವನದ ಸುತ್ತಮುತ್ತಲಿನ 500 ಮೀಟರ್ ಪ್ರದೇಶವನ್ನು ಬಫರ್ ಝೋನ್ ಮಾಡಲಾಗಿದ್ದು, ಭವನಕ್ಕೆ ನಗರಸಭೆಯಿಂದ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ.

    ಸೋಂಕಿನ ಆತಂಕದ ಮಧ್ಯೆ ಯಾದಗಿರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆ ಸಹ ನಡೆಯುತ್ತಿದೆ. ಹೀಗಾಗಿ ಪಂಚಾಯಿತಿ ಆವರಣದಲ್ಲಿ ಸದಸ್ಯರು ಮತ್ತು ಚುನಾವಣಾ ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

    ಕೊರೊನಾ ಆತಂಕದ ನಡುವೆ ಇಂದು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಆಯಾ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

  • ಶಾಸಕ ಯು.ಟಿ ಖಾದರ್ ಗನ್‍ಮ್ಯಾನ್‍ಗೂ ಕೊರೊನಾ ಪಾಸಿಟಿವ್

    ಶಾಸಕ ಯು.ಟಿ ಖಾದರ್ ಗನ್‍ಮ್ಯಾನ್‍ಗೂ ಕೊರೊನಾ ಪಾಸಿಟಿವ್

    ಮಂಗಳೂರು: ಶಾಸಕ ಯು.ಟಿ ಖಾದರ್ ಅವರ ಗನ್‍ಮ್ಯಾನ್‍ಗೂ ಕೊರೊನಾ ಪಾಸಿಟಿವ್ ಬಂದಿದ್ದು, ಇಂದು ದೃಢಪಟ್ಟಿದೆ.

    ಯು.ಟಿ ಖಾದರ್ ಅವರಿಗೆ ಗನ್‍ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ಡಿಎಆರ್ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಭಯಗೊಂಡ ಖಾದರ್ ಅವರು ನಾಲ್ಕು ಬಾರಿ ಕೊರೊನಾ ಪರೀಕ್ಷೆ ಮಾಡಿಸಿದ್ದು, ನಾಲ್ಕು ಬಾರಿಯೂ ವರದಿ ನೆಗೆಟಿವ್ ಬಂದಿದೆ.

    ಇಂದು ಕೊರೊನಾ ಪಾಸಿಟಿವ್ ಬಂದ ಗನ್‍ಮ್ಯಾನ್ ಖಾದರ್ ಜೊತೆ ಬೆಂಗಾವಲು ವಾಹನದಲ್ಲಿದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಳೆದ ಹತ್ತು ದಿನದ ಹಿಂದೆ ಅನಾರೋಗ್ಯ ಎಂದು ಮನೆಯಲ್ಲಿದ್ದ ಪೊಲೀಸ್ ಪೇದೆಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತನ ಜೊತೆ ಕಾರ್ಯನಿರ್ವಹಿಸುತ್ತಿದ್ದ ಉಳಿದ ಮೂವರು ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.

  • ನಾಲ್ವರು ಗನ್‍ಮ್ಯಾನ್‍ಗಳಿಗೂ ಕೊರೊನಾ ಪಾಸಿಟಿವ್ – ರೇವಣ್ಣನಿಗೆ ಆತಂಕ

    ನಾಲ್ವರು ಗನ್‍ಮ್ಯಾನ್‍ಗಳಿಗೂ ಕೊರೊನಾ ಪಾಸಿಟಿವ್ – ರೇವಣ್ಣನಿಗೆ ಆತಂಕ

    ಹಾಸನ: ಮಾಜಿ ಸಚಿವ ಹೆಚ್‍ಡಿ ರೇವಣ್ಣ ಅವರ ಗನ್‍ಮ್ಯಾನ್‍ಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ರೇವಣ್ಣವರಿಗೂ ಕೊರೊನಾ ಭೀತಿ ಎದುರಾಗಿದೆ.

    ಸೋಮವಾರ ರೇವಣ್ಣ ಅವರು ಗನ್‍ಮ್ಯಾನ್‍ಗಳು ಸೇರಿದಂತೆ ಅವರ 9 ಜನ ಸಿಬ್ಬಂದಿಗೆ ಕೊರೊನಾ ತಪಾಸಣೆ ಮಾಡಲಾಗಿತ್ತು. ಇಂದು ಬಂದ ವರದಿಯಲ್ಲಿ ರೇವಣ್ಣ ಅವರ ನಾಲ್ವರು ಗನ್‍ಮ್ಯಾನ್‍ಗಳಿಗೂ ಕೊರೊನಾ ಪಾಸಿಟಿವೆ ಬಂದಿದೆ.

    ಸದ್ಯ ರೇವಣ್ಣ ಅವರು ಬೆಂಗಳೂರಿನಲ್ಲಿ ಇದ್ದು, ಅವರ ಕೊರೊನಾ ತಪಾಸಣೆಯೂ ಒಳಪಡುವ ಸಾಧ್ಯತೆ ಇದೆ. ಕಳೆದ ಸೋಮವಾರ ರೇವಣ್ಣನವರ ಬೆಂಗಾವಲು ಪಡೆಯ 9 ಜನ ಪೊಲೀಸರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈಗ ಅವರ ಸೋಂಕಿತ ಮೂವರ ಜೊತೆ ಬೆಂಗಳೂರಿಗೆ ಬಂದಿದ್ದಾರೆ. ಇನ್ನೊಬ್ಬ ಸೋಂಕಿತ ಹಾಸನದಲ್ಲೇ ಇದ್ದಾರೆ.

    ಇಂದು ಹಾಸನದಲ್ಲಿ 15 ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಿವೆ ಎಂದು ಹಾಸನದ ಡಿಎಚ್‍ಒ ಸತೀಶ್ ಹೇಳಿದ್ದಾರೆ. ಹೊಳೆನರಸೀಪುರ ತಾಲೂಕು ಒಂದರಲ್ಲೇ 11 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 11 ಜನ ಪೊಲೀಸರಲ್ಲಿ ನಾಲ್ಕು ಜನ ಪೊಲೀಸರಿಗೆ ಪಾಸಿಟಿವ್ ಬಂದಿದೆ. ನಾಲ್ಕು ಜನ ಪೊಲೀಸರಲ್ಲಿ ಮೂವರು ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಂಡ ನಂತರ ಬೆಂಗಳೂರಿಗೆ ಹೋಗಿದ್ದಾರೆ. ಹೀಗಾಗಿ ಮೂವರು ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.

  • ಸಚಿವ ಶಿವಾನಂದ ಪಾಟೀಲ್ ಕಾರಿಗೆ ರೈತರ ಮುತ್ತಿಗೆ, ಗನ್‍ಮ್ಯಾನ್‍ನಿಂದ ಹಲ್ಲೆ

    ಸಚಿವ ಶಿವಾನಂದ ಪಾಟೀಲ್ ಕಾರಿಗೆ ರೈತರ ಮುತ್ತಿಗೆ, ಗನ್‍ಮ್ಯಾನ್‍ನಿಂದ ಹಲ್ಲೆ

    ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರ ಕಾರಿಗೆ ರೈತರು ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಸಚಿವರ ಗನ್‍ಮ್ಯಾನ್ ಪ್ರತಿಭಟನಕಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಇಂದು ಉದ್ದೇಶಿತ ಸಕ್ಕರೆ ಕಾರ್ಖಾನೆಗೆ ಭೂಸ್ವಾಧೀನ ಪಡೆಸಿಕೊಂಡಿದ್ದ ಕೆಐಎಡಿಬಿಗೆ ಭೂಮಿ ನೀಡಿದ್ದ ರೈತರಿಗೆ ಹಣ ಸಂದಾಯವಾಗದ ಹಿನ್ನೆಲೆ ರೈತರು ಪ್ರತಿಭಟನೆ ನಡೆಸಿ ಸಚಿವ ಶಿವಾನಂದ ಪಾಟೀಲರ ಕಾರಿಗೆ ಮುತ್ತಿಗೆ ಹಾಕಿದರು.

    ಈ ವೇಳೆ ಪ್ರತಿಭಟನೆ ಮಾಡುತ್ತಿದ್ದ ಮಾಜಿ ಸಚಿವ ಬೆಳ್ಳುಬ್ಬಿ ಪುತ್ರ ಮಲ್ಲನಗೌಡ ಬೆಳ್ಳುಬ್ಬಿ ಅವರ ಮೇಲೆ ಸಚಿವರ ಎದುರಲ್ಲೇ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ರೈತರು ಕಾರಿಗೆ ಮುತ್ತಿಗೆ ಹಾಕಿದಾಗ ಕೆಳಗಿಳಿದ ಸಚಿವ ಶಿವಾನಂದ ಪಾಟೀಲ್ ದಾರಿ ಬಿಡಲು ಸೂಚಿಸಿದರು. ಇದಕ್ಕೆ ದಾರಿ ಬಿಡುವುದಿಲ್ಲ ಎಂದು ಮಲ್ಲನಗೌಡ ಬೆಳ್ಳುಬ್ಬಿ ಹೇಳಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಸಚಿವರ ಗನ್‍ಮ್ಯಾನ್ ಹಲ್ಲೆ ಮಾಡಿದ್ದಾನೆ ಎಂದು ಮಲ್ಲನಗೌಡ ಬೆಳ್ಳುಬ್ಬಿ ಆರೋಪಿಸಿದ್ದಾರೆ.

    ಸಚಿವ ಶಿವಾನಂದ ಪಾಟೀಲ್ ಮುಂದೆಯೇ ಗನ್‍ಮ್ಯಾನ್ ಮತ್ತು ಮಲ್ಲನಗೌಡ ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಮಲ್ಲನಗೌಡರನ್ನು ವಶಕ್ಕೆ ಪಡೆದಿದ್ದಾರೆ.

  • ನಮ್ಮ ಸಾಹೇಬ್ರು ಗನ್ ಕೇಳಿಲ್ಲ – ಶಾಸಕ ಗಣೇಶ್ ಗನ್‍ಮ್ಯಾನ್

    ನಮ್ಮ ಸಾಹೇಬ್ರು ಗನ್ ಕೇಳಿಲ್ಲ – ಶಾಸಕ ಗಣೇಶ್ ಗನ್‍ಮ್ಯಾನ್

    ಬೆಂಗಳೂರು: ಈಗಲ್‍ಟನ್ ರೆಸಾರ್ಟಿನಲ್ಲಿ ಕಾಂಗ್ರೆಸ್ ಶಾಸಕರು ಹೊಡೆದಾಡಿಕೊಂಡ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಘಟನೆಯ ಬಳಿಕ ಕಾಣೆಯಾಗಿದ್ದ ಕಂಪ್ಲಿ ಶಾಸಕ ಗಣೇಶ್ ಅವರ ಗನ್‍ಮ್ಯಾನ್ ಕಾಣಿಸಿಕೊಂಡು ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಗನ್‍ಮ್ಯಾನ್ ಶರಣಪ್ಪ, ನಮ್ಮ ಸಾಹೇಬ್ರು (ಶಾಸಕ ಗಣೇಶ್) ಗನ್ ಕೊಡು ಅಂತ ನನ್ನ ಕೇಳಿಲ್ಲ. ಭೀಮಾನಾಯಕ್ ಅವರ ರೂಮ್‍ನಲ್ಲಿ ಘಟನೆ ನಡೆದಿದೆ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಇದನ್ನು ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

    ಗನ್‍ಮ್ಯಾನ್ ಹೇಳಿದ್ದೇನು?:
    ಶಾಸಕ ಆನಂದ್ ಸಿಂಗ್ ಅವರ ರೂಮ್‍ನಲ್ಲಿ ನಮ್ಮ ಸಾಹೇಬ್ರು ಪಾರ್ಟಿ ಮಾಡಿದ್ದರು. ಬಳಿಕ ರೂಮ್‍ಗೆ ಬಂದ ಶಾಸಕರು ಮಲಗಿ, ಬಾಗಿಲು ಹಾಕುವಂತೆ ತಿಳಿಸಿದ್ದರಿಂದ ನಾನು ಬಾಗಿಲು ಹಾಕಿದೆ. ಸ್ವಲ್ಪ ಸಮಯದ ಬಳಿಕ ಯಾರೋ ರೂಮ್ ಬಾಗಿಲು ಬಡಿದರು. ನಾನು ತೆರೆದು ನೋಡಿದಾಗ ಆನಂದ್ ಸಿಂಗ್ ಅವರು ಮುಂದೆ ನಿಂತಿದ್ದರು. “ನನಗೆ ಭೀಮಾನಾಯಕ್ ರೂಮ್ ತೋರಿಸು ಬಾ” ಅಂತ ಗಣೇಶ್ ಅವರಿಗೆ ಕೇಳಿದರು. ಆದರೆ ಅದಕ್ಕೆ ಒಪ್ಪದ ಶಾಸಕರು,”ಇವತ್ತು ಮದ್ಯದ ಮತ್ತಿನಲ್ಲಿದ್ದೇವೆ. ಹೀಗಾಗಿ ಭೀಮಾನಾಯಕ್ ಜೊತೆಗೆ ನಾಳೆ ಮಾತನಾಡೋಣ” ಅಂತ ಹೇಳಿದರು.

    ಈ ಉತ್ತರಕ್ಕೆ ಒಪ್ಪದ ಆನಂದ್ ಸಿಂಗ್, “ನೀನು ರೂಮ್ ತೋರಿಸಲೇ ಬೇಕು” ಅಂತ ಪಟ್ಟು ಹಿಡಿದರು. ಇದರಿಂದಾಗಿ ಇಬ್ಬರು ಸೇರಿ ಭೀಮಾನಾಯಕ್ ಅವರ ರೂಮ್‍ಗೆ ಹೋದರು. ಆಗ ಗಣೇಶ್ ಅವರು ಭೀಮಾನಾಯಕ್ ಅವರನ್ನು ಕೂಗಿ ಎಚ್ಚರಿಸಿದರು. ಆದರೆ ಭೀಮಾನಾಯಕ್ ಅವರು,”ಇವತ್ತು ಬೇಡ ನಾಳೆ ಮಾತಾಡೋಣ” ಅಂತ ಹೇಳಿದರು. “ಇಲ್ಲ ಆನಂದ್ ಅಣ್ಣಾ ಬಂದಿದ್ದಾನೆ. ನಿನ್ನ ಜೊತೆಗೆ ಮಾತನಾಡಬೇಕು ಬಾಗಿಲು ಓಪನ್ ಮಾಡು” ಅಂತ ಕೇಳಿದರು. ಇದನ್ನು ಓದಿ: ಶಾಸಕರ ಬಡಿದಾಟಕ್ಕೆ ಆಪರೇಷನ್ ಕಮಲ ಕಾರಣ – ಎದೆ ನೋವು ಡೈಲಾಗ್ ಹೊಡೆದು ಉಲ್ಟಾ ಹೊಡೆದ ಡಿಕೆ ಸುರೇಶ್

    ಭೀಮಾನಾಯಕ್ ಬಾಗಿಲು ತೆಗೆದಾಗ ಇಬ್ಬರು ಶಾಸಕರು ಅವರ ರೂಮ್ ಒಳಗೆ ಹೋದರು. ತಕ್ಷಣವೇ ಆನಂದ್ ಸಿಂಗ್ ಅವರು ಭೀಮಾನಾಯಕ್ ಅವರ ಮೇಲೆ ಹಲ್ಲೆ ಮಾಡಿದರು. “ಸಿಎಲ್‍ಪಿ ಸಭೆಯಲ್ಲಿ ನನಗೆ ಮಗನ ಅಂತಿಯಾ” ಅಂತ ಆನಂದ್‍ಸಿಂಗ್ ಏಕವಚನದಲ್ಲಿಯೇ ಬೈಯಲು ಆರಂಭಿಸಿದರು. ಇದರಿಂದ ಗಾಬರಿಗೊಂಡ ಭೀಮಾನಾಯಕ್ ಅವರು,”ನನ್ನಿಂದ ತಪ್ಪಾಗಿದೆ ಕ್ಷಮಿಸಿ” ಅಂತ ಕೇಳಿಕೊಂಡರು. ಆಗ ಭೀಮಾನಾಯಕ್ ಅವರನ್ನು ಕೈಬಿಟ್ಟ ಆನಂದ್ ಸಿಂಗ್, ಗಣೇಶ್ ಅವರನ್ನು ಹಿಡಿದು,”ಅವನು ಕ್ಷಮೆ ಕೇಳಿದ್ದಾನೆ. ಈಗ ನೀನು ಕೇಳಬೇಕು” ಎಂದು ಹೇಳಿ ಹಲ್ಲೆಗೆ ಮುಂದಾದರು.

    “ಮುಂದಿನ ವಿಧಾನಸಭಾ ಚುನಾವಣೆಗೆ ನಿನ್ನ ಕ್ಷೇತ್ರದಿಂದ ಸಂದೀಪ್ ಸಿಂಗ್ ನನ್ನು ಕಣಕ್ಕೆ ಇಳಿಸುತ್ತೇನೆ” ಎಂದು ಆನಂದ್ ಸಿಂಗ್ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗಣೇಶ್ ಅವರು,”ಅಣ್ಣಾ ಬೇಕು ಅಂದ್ರೆ ನಿಮ್ಮ ಮಗನನ್ನು ನಿಲ್ಲಿಸಿ, ಇಲ್ಲವೇ ನೀವೇ ನಿಂತರೂ ನಾನು ಪ್ರೋತ್ಸಾಹ ಕೊಡುತ್ತೇನೆ. ಆದರೆ ಸಂದೀಪ್ ಸಿಂಗ್ ಮಾತ್ರ ಬೇಡ” ಅಂತ ಕೇಳಿಕೊಂಡರು. ಆದರೂ ಪಟ್ಟು ಬಿಡದ ಆನಂದ್ ಸಿಂಗ್,”ಸಂದೀಪ್‍ನನ್ನೇ ನಿನ್ನ ವಿರುದ್ಧ ನಿಲ್ಲಿಸಿ, ಗೆಲ್ಲಿಸುತ್ತೇನೆ” ಅಂತ ಹೇಳುತ್ತಲೇ ಹೆಡ್ ಲ್ಯಾಪ್ ಎತ್ತಿಕೊಂಡು ಶಾಸಕ ಗಣೇಶ್ ಅವರ ಮೇಲೆ ಹಲ್ಲೆ ಮಾಡಿದರು. ಬಳಿಕ ಗಣೇಶ್, ಆನಂದ್ ಸಿಂಗ್ ಅವರನ್ನು ದೂಡಿದರು. ಬಳಿಕ ಎದ್ದು ನಿಂತ ಆನಂದ್ ಸಿಂಗ್ ಟಿವಿ ಎತ್ತಿಕೊಂಡು ಎಸೆಯಲು ಮುಂದಾದರು. ಈ ವೇಳೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ ಎಂದು ಶರಣಪ್ಪ ವಿವರಿಸಿದರು.

    https://www.youtube.com/watch?v=5L0XG_zi3Ts

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • Exclsuive |ಆನಂದ್ ಸಿಂಗ್ ಮೇಲಿನ ಹಲ್ಲೆಗೂ ಮೊದಲು ಖಾಸಗಿ ಗನ್ ಮ್ಯಾನಿಗೆ ಥಳಿಸಿದ್ದ ಗಣೇಶ್!

    Exclsuive |ಆನಂದ್ ಸಿಂಗ್ ಮೇಲಿನ ಹಲ್ಲೆಗೂ ಮೊದಲು ಖಾಸಗಿ ಗನ್ ಮ್ಯಾನಿಗೆ ಥಳಿಸಿದ್ದ ಗಣೇಶ್!

    ಬೆಂಗಳೂರು: ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಗಣೇಶ್ ಮೇಲಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಘಟನೆ ವೇಳೆ ಸ್ಥಳದಲ್ಲಿದ್ದ ಖಾಸಗಿ ಗನ್ ಮ್ಯಾನ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಬಳಿಕ ಅವರನ್ನು ಬಚ್ಚಿಡಲಾಗಿದೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. 

    ಕಂಪ್ಲಿ ಶಾಸಕ ಗಣೇಶ್ ಹಾಗು ಆನಂದ್ ಸಿಂಗ್ ನಡುವಿನ ಬಡಿದಾಟದ ವೇಳೆ ಗಣೇಶ್ ನಿಯೋಜಿಸಿದ್ದ ಖಾಸಗಿ ಗನ್‍ಮ್ಯಾನ್ ಶರಣಪ್ಪ ಕೂಡ ಇದ್ದರು. ಈ ನಡುವೆ ಗಣೇಶ್ ಕೋಪದಲ್ಲಿ ಗನ್‍ಮ್ಯಾನ್ ಬಳಿ ಇದ್ದ ಗನ್ ಕೇಳಿದ್ದಾರೆ. ಗನ್ ನೀಡಿದ್ರೆ ಅನಾಹುತ ಸಂಭವಿಸಬಹುದು ಎಂದು ತಿಳಿದು ಸಮಾಧಾನ ಮಾಡಲು ಶರಣಪ್ಪ ಯತ್ನಿಸಿದ್ದಾರೆ. ಗನ್ ನೀಡದ್ದಕ್ಕೆ ಮತ್ತಷ್ಟು ಕೋಪಗೊಂಡಿದ್ದ ಗಣೇಶ್, ಶರಣಪ್ಪ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಗಣೇಶ್ ರೌದ್ರಾವತಾರವನ್ನು ಕಂಡ ಕಾಂಗ್ರೆಸ್ ಶಾಸಕರು ಕ್ಷಣ ಕಾಲ ಶಾಕ್‍ಗೆ ಒಳಗಾಗಿದ್ದು, ಆ ಬಳಿಕ ಗಲಾಟೆಯನ್ನು ಬಿಡಿಸಿ ಗಣೇಶ್ ಅವರನ್ನು ರೂಮಿಗೆ ಕಳುಹಿಸಿದ್ದಾರೆ. ಆ ಬಳಿಕ ಆನಂದ್ ಸಿಂಗ್ ಆಸ್ಪತ್ರೆಗೆ ಕೊಂಡ್ಯೊಯಲು ಹೋಟೆಲ್ ಸಿಬ್ಬಂದಿ ಕಾರ್ಯ ಪ್ರವೃತ್ತರಾದರೆ, ಇತ್ತ ಘಟನೆಯಲ್ಲಿ ಗಾಯಗೊಂಡಿದ್ದ ಗನ್ ಮ್ಯಾನ್‍ರನ್ನು ಕೂಡ ಹೋಟೆಲ್ ನಿಂದ ಕರೆದುಕೊಂಡು ಹೋಗಿ ಬಚ್ಚಿಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಶಾಸಕ ಆನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಶರಣಪ್ಪ ಅವರ ಆರೋಗ್ಯ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಆಗಿರುವ ಹಾಗೂ ಶರಣಪ್ಪ ಮೇಲೆ ಹಲ್ಲೆ ಮಾಡಿದ್ದಕ್ಕೆ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಾಗುತ್ತದೆ ಎನ್ನುವ ಭಯದಿಂದ ಗಣೇಶ್ ಅವರನ್ನು ಬಚ್ಚಿಟ್ಟಿದ್ದಾರೆ ಎನ್ನಲಾಗಿದೆ.

    ಘಟನೆ ನಡೆದ ಬಳಿಕ ರೆಸಾರ್ಟ್ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಗಣೇಶ್, ಸರ್ಕಾರಿ ಗನ್‍ಮ್ಯಾನ್‍ನನ್ನು ತೋರಿಸಿ, ಹಲ್ಲೆ ಮಾಡಿರುವ ಘಟನೆ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿರುವ ವರದಿ ಸುಳ್ಳು. ಯಾವುದೇ ಗನ್‍ಮ್ಯಾನ್ ಮೇಲೆ ಹಲ್ಲೆ ನಡೆದಿಲ್ಲ. ಸಣ್ಣ ವೈಯಕ್ತಿಕ ವಿಚಾರಕ್ಕೆ ಚರ್ಚೆ ನಡೆದಿದ್ದು, ಯಾವುದೇ ಕಾರಣಕ್ಕೂ ಹಲ್ಲೆ ನಡೆದಿಲ್ಲ ಎಂದು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.

    https://www.youtube.com/watch?v=pgwGXV3NmMA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv