ಚಾಮರಾಜನಗರ: ವೈಯಕ್ತಿಕ ದ್ವೇಷಕ್ಕೆ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಕೊಲೆ ನಡೆದಿದೆ.
ಜಾಕೀರ್ ಹುಸೇನ್ ನಿವಾಸಿಗಳಾದ ಜಕಾವುಲ್ಲಾ, ಇದ್ರೀಶ್, ಪೈಜಲ್ ಹಾಗೂ ಮತ್ತೋರ್ವ ಕೊಲೆಯಾದ ದುರ್ದೈವಿಗಳು. ಮೃತರು ಪಟ್ಟಣದ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನವರಾಗಿದ್ದರು. ಎರಡು ಕುಟುಂಬಗಳ ನಡುವಿನ ಕಲಹದಿಂದಾಗಿ ಕೊಲೆ ನಡೆದಿದೆ ಎನ್ನಲಾಗಿದೆ.
ರಂಜಾನ್ ಮುಗಿದ ಬಳಿಕ ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ನಡೆದ ಗಲಾಟೆಯಲ್ಲಿ ಅಸ್ಲಾಂ, ಜಮೀರ್ ಸಂಗಡಿಗರು ಜಕಾವುಲ್ಲಾ, ಇದ್ರೀಶ್, ಪೈಜಲ್ ಮೇಲೆ ದಾಳಿ ಮಾಡಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೂವರು ಸ್ಥಳದಲ್ಲಿ ಮೃತಪಟ್ಟರೆ, ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೈದ ದುಷ್ಕರ್ಮಿಗಳು ತಲೆ ಮರೆಸಿಕೊಂಡಿದ್ದಾರೆ. ಕೊಲೆ ನಡೆದಿದ್ದು ಯಾಕೆ? ಯಾರೆಲ್ಲ ಭಾಗಿಯಾಗಿದ್ದರು ಎನ್ನುವ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಾತ್ರಿ ಸ್ಥಳದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು.
ಮೂಲಗಳ ಪ್ರಕಾರ ಪಟ್ಟಣದ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನ ಮತ್ತು ಮತ್ತೊಂದು ಗುಂಪಿನ ನಡುವೆ ಹಿಂದೆಯೂ ಘರ್ಷಣೆ ನಡೆದಿತ್ತು. ಆಗ ಕೆಲ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಎರಡು ಗುಂಪುಗಳ ನಡುವೆ ವೈಷಮ್ಯ ಜೋರಾಗಿಯೇ ವಿತ್ತು. ಇದೇ ವಿಚಾರವಾಗಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಮತ್ತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರ್ ಒಂದು ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ಘಟನೆ ನಡೆದಿದೆ.
ಗುಂಡ್ಲುಪೇಟೆಯ ಅಶೋಕ್ ಅವರಿಗೆ ಸೇರಿದ್ದ ಮಾರುತಿ ಓಮ್ನಿ ಕಾರ್ ಇದ್ದಾಗಿದ್ದು, ಭೀಮನಬೀಡು ಗ್ರಾಮದ ಬಳಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಅಶೋಕ್ ಹಾಗೂ ಅವರ ಪತ್ನಿ, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಶೋಕ್ ಅವರು ಪತ್ನಿ ಹಾಗೂ ಮಕ್ಕಳ ಜೊತೆಗೆ ಗುಂಡ್ಲುಪೇಟೆ ಕಡೆಗೆ ಹೊರಟಿದ್ದರು. ಈ ವೇಳೆ ಮಾರ್ಗಮಧ್ಯೆ ಒಕ್ಕಣೆ ಮಾಡಲು ರೈತರು ರಸ್ತೆಯ ಮೇಲೆ ಹುರುಳಿ ಸತ್ತೆ ಸುರಿದಿದ್ದರು. ಓಮ್ನಿ ಚಕ್ರಗಳಿಗೆ ಹುರುಳಿ ಸತ್ತೆ ಸುತ್ತಿಕೊಂಡು ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮಿಸಿದ ಅಶೋಕ್ ತಕ್ಷಣವೇ ಎಲ್ಲರನ್ನೂ ಕಾರಿನಿಂದ ಕೆಳಗಿಳಿಸಿದ್ದಾರೆ. ಅಶೋಕ್ ಅವರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ಕೈತಪ್ಪಿದೆ.
ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ವಾಹನ ಚಾಲಕರು, ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಒಕ್ಕಣೆ ಮಾಡುವವರಿಗೆ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಚಾಮರಾಜನಗರ: ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಶಿಕ್ಷಕರಿಗಾಗಿ ಗ್ರಾಮಗಳಲ್ಲಿ ವಸತಿ ಗೃಹ ನಿರ್ಮಿಸಲಾಗಿರುತ್ತದೆ. ಆದರೆ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಉಸ್ತುವಾರಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶಿಕ್ಷಕರ ವಸತಿ ಗೃಹಗಳು ಪಾಳು ಬಿದ್ದಿದೆ. ಅಷ್ಟೇ ಅಲ್ಲದೆ ವಸತಿ ಗೃಹಗಳು ಅನೈತಿಕ ಚಟುವಟಿಗಳ ಕೇಂದ್ರವಾಗಿ ಮಾರ್ಪಟ್ಟಿವೆ.
ಚಾಮರಾಜನಗರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಂಗಳ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರಿಗಾಗಿ 2015ರಲ್ಲಿ ವಸತಿ ಗೃಹಗಳನ್ನ ನಿರ್ಮಿಸಲಾಗಿದೆ. ಅಂದಿನ ಸ್ಥಳೀಯ ಶಾಸಕ, ಸಚಿವರಾಗಿದ್ದ ದಿವಂಗತ ಮಹದೇವ ಪ್ರಸಾದ್ ಅವರು, ಸುಮಾರು 8 ಕುಟುಂಬ ವಾಸಿಸುವ ಸುಸಜ್ಜಿತ ಶಿಕ್ಷಕರ ವಸತಿ ಗೃಹವನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿಕೊಟ್ಟಿದ್ದರು. ಉದ್ಘಾಟನೆಯಾದ 4 ವರ್ಷಗಳಲ್ಲಿ ಕಟ್ಟಡ ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಶಿಕ್ಷಕರು ಯಾರೂ ವಾಸಮಾಡಲು ಮುಂದೆ ಬಾರದ ಕಾರಣ ಅದು ಹಾಗೆ ಪಾಳು ಬಿದ್ದು ಕುಡುಕರ, ಜೂಜುಕೋರರ ಕೇಂದ್ರವಾಗಿ ಸುತ್ತ ಮುತ್ತಲಿನ ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಇದರಿಂದಾಗಿ ಸ್ಥಳೀಯರು ಶಿಕ್ಷಣ ಇಲಾಖೆಯ ನಿರ್ಲಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಒಂದು ಕೋಟಿ ರೂಪಾಯಿ ವೆಚ್ದದಲ್ಲಿ ಕಟ್ಟಿದ ವಸತಿ ಗೃಹದಲ್ಲಿ ಯಾರು ವಾಸವಿಲ್ಲದೆ ಇರುವುದರಿಂದ ಪಾಳು ಬಿದ್ದು ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಅದನ್ನ ಸರಿಪಡಿಸಬೇಕಿದೆ. ಪಾಳು ಬಿದ್ದು ಅನೈತಿಕ ಚಟುವಟಿಕೆ ಕೇಂದ್ರವಾಗಿರುವ ವಿಚಾರ ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ್ದೇನೆ. ಕಟ್ಟಡ ಈಗ ದುರಸ್ತಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಮೇಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಕಟ್ಟಡ ದರುಸ್ತಿಯ ಬಳಿಕ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಸರ್ಕಾರ ಯಾವುದೇ ಇಲಾಖೆಯ ಸಿಬ್ಬಂದಿ ತಾವು ಕೆಲಸ ಮಾಡುವ ಸ್ಥಳದಲ್ಲೇ ಇದ್ದು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಲಿ ಎನ್ನುವ ಸಲುವಾಗಿ ವಸತಿ ಗೃಹಗಳನ್ನ ನಿರ್ಮಾಣ ಮಾಡಲಾಗುತ್ತದೆ. ಆದರೆ ನಗರ ಪ್ರದೇಶಗಳ ವ್ಯಾಮೋಹಕ್ಕೆ ಒಳಗಾಗುವ ಸರ್ಕಾರಿ ನೌಕರರು ಬಾಡಿಗೆ ತೆತ್ತಾದರೂ ಪಟ್ಟಣ ಪ್ರದೇಶಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಇನ್ನಾದರೂ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟುವ ವಸತಿ ಗೃಹಗಳಲ್ಲೇ ಆಯಾ ಇಲಾಖೆಯ ನೌಕರರು ಕಡ್ಡಾಯವಾಗಿ ವಾಸ ಮಾಡುವಂತೆ ಕಟ್ಟಿನಿಟ್ಟಿನ ಕ್ರಮವಹಿಸಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ: ಭೂ ಮಂಡಲದಲ್ಲಿ ಸೂರ್ಯ ಚಂದ್ರ ಇರುವರೆಗೂ ಗುಂಡ್ಲುಪೇಟೆಯಲ್ಲಿ ಕುಟುಂಬ ರಾಜಕಾರಣ ಮುಂದುವರೆಯಲಿದೆ ಅಂತಾ ಸಚಿವೆ ಗೀತಾ ಮಹದೇವಪ್ರಸಾದ್ ಹೇಳಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕಗ್ಗಳ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ಮಾತನಾಡಿದ ಗೀತಾ ಮಹದೇವ ಪ್ರಸಾದ್, ನಮ್ಮ ಕುಟುಂಬ ಇಲ್ಲಿಯವರೆಗೆ 10 ಚುನಾವಣೆ ಎದುರಿಸಿದೆ. ಆರಂಭದಲ್ಲಿ ನಾಲ್ಕರಲ್ಲಿ ಸೋತ್ರು, ಮುಂದಿನ 6 ಚುನಾವಣೆಗಳಲ್ಲಿ ಸತತ ಗೆಲುವು ಕಂಡಿದೆ. ನಾನು ನೋಡುತ್ತಿರೋದು ಏಳನೇ ಚುನಾವಣೆ, ಕ್ಷೇತ್ರದ ಜನರು ನಮ್ಮ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ನಮಗೆ ಮತ ಹಾಕಿ ಗೆಲ್ಲಿಸುತ್ತಿದ್ದಾರೆ ಅಂತಾ ಅಂದ್ರು.
ಮಹದೇವ್ ಪ್ರಸಾದ್ ಅವರ ಅಭಿವೃದ್ಧಿ ಕಾರ್ಯಗಳಿಂದ ನಮಗೆ ಗೆಲವು ನಿಶ್ಚಿತ. ನಮ್ಮ ಎದುರು ಯಾರೇ ಸ್ಪರ್ಧಿಸಿದರೂ ಗೆಲುವಿನ ಮಾಲೆ ನಮಗೆ ಲಭಿಸಲಿದೆ. ಇಲ್ಲಿಯ ಜನರು ಕುಟುಂಬ ರಾಜಕಾರಣ ಬೇಕು ಅಂತಾ ನಮಗೆ ಮತ ನೀಡುತ್ತಿದ್ದಾರೆ. ಮಹದೇವ ಪ್ರಸಾದರ ಬಳಿಕ ನಾನು ಹೀಗೆ ನಮ್ಮ ಪರಿವಾರ ಸಮಾಜಸೇವೆಯಲ್ಲಿ ತೊಡಗಿಕೊಳ್ಳಲಿದೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಮುಂದುವರೆಯಲಿದೆ ಅಂತಾ ಭವಿಷ್ಯ ನುಡಿದ್ರು.
1994, 1999, 2004, 2008, 2013ರಲ್ಲಿ ಮಹಾದೇವ ಪ್ರಸಾದ್ ಈ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಪತಿ ಅಕಾಲಿಕ ನಿಧನನದಿಂದಾಗಿ 2017ರಲ್ಲಿ ತೆರವಾದ ಕ್ಷೇತ್ರಕ್ಕೆ ್ಲ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೀತಾ ಮಹಾದೇವ ಪ್ರಸಾದ್ ಸ್ಪರ್ಧಿಸಿ ಗೆದ್ದಿದ್ದರು. ಗೀತಾ ಮಹಾದೇವ ಪ್ರಸಾದ್ ಅವರಿಗೆ 90,258 ಮತಗಳು ಬಿದ್ದಿದ್ದರೆ, ಬಿಜೆಪಿಯ ನಿರಂಜನ್ ಕುಮಾರ್ ಅವರಿಗೆ 79,381 ಮತಗಳು ಬಿದ್ದಿತ್ತು.
ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಸೋಲಿನ ಬಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯರೂಪ್ಪ ನೇತೃತ್ವದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ ಹೊರ ಹೊಮ್ಮಿದೆ.
ಗುಂಡ್ಲಪೇಟೆ ಚುನಾವಣೆಯಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಇತ್ತು. ಆದರೆ ಗೀತಾ ಮಹದೇವ್ ಪ್ರಸಾದ್ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ ಚುನಾವಣೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಗೀತಾ ಅವರ ಪರ ಅನುಕಂಪ ಇರುವಾಗ ಇಂಥಹ ಹೇಳಿಕೆ ಬಿಜೆಪಿಗೆ ಸಾಕಷ್ಟು ಹಿನ್ನೆಡೆ ಉಂಟುಮಾಡಿತು. ಅಷ್ಟೇ ಅಲ್ಲದೇ ಪ್ರತಾಪ್ ಸಿಂಹ ಹೇಳಿಕೆಗೆ ಬಿಜೆಪಿ ಮುಖಂಡರಿಂದಲೇ ಖಂಡನೆ ವ್ಯಕ್ತವಾಯಿತು ಎಂದು ಪಬ್ಲಿಕ್ ಟಿವಿಗೆ ಮೂಲಗಳು ಮಾಹಿತಿ ನೀಡಿವೆ.
ಅಧಿಕಾರ ದುರುಪಯೋಗ: ಆತ್ಮಾವಲೋಕನ ಸಭೆ ಬಳಿಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಹಣದ ಹೊಳೆ ಹರಿಸಿದ ನಾಯಕರು ಮತದಾರರ ಖರೀದಿ ಮಾಡುವ ಮೂಲಕ ಅಕ್ರಮ ನಡೆಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಒಳ ಒಪ್ಪಂದ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಮುಂದಿನ ಚುನಾವಣೆಗೆ ಮಿಷನ್ 150 ಗುರಿ ಇಟ್ಟುಕೊಂಡು ಮುನ್ನಡೆಯುತ್ತೇವೆ. ಕೇಂದ್ರ ಬಿಜೆಪಿ ಸಾಧನೆಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಲಿಂಬಾವಳಿ ಹೇಳಿದರು.
ಸಭೆಯಲ್ಲಿ ಯಾರಿದ್ದರು: ಆತ್ಮಾವಲೋಕನ ಸಭೆಯಲ್ಲಿ ಅಭ್ಯರ್ಥಿಗಳಾಗಿದ್ದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ನಿರಂಜನ್, ಚುನಾವಣಾ ಉಸ್ತುವಾರಿ ಹೊತ್ತಿದ್ದ ವಿ.ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ, ಚುನಾವಣಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಬಿಜೆಪಿ ಮುಖಂಡರಾದ ಮಾಜಿ ಸಚಿವ ರಾಮದಾಸ್, ಉದಾಸಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಮೇಲ್ಮನೆ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಅರವಿಂದ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್, ತಾರಾ ಅನುರಾಧ, ಶೃತಿ, ನಂಜನಗೂಡು, ಗುಂಡ್ಲುಪೇಟೆ ಪಕ್ಷದ ಮುಖಂಡರು ಭಾಗಿಯಾಗಿದ್ದರು.
ನಾಯಕರು ಗೈರು: ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ, ಸಂಸದ ಪ್ರತಾಪ ಸಿಂಹ ಗೈರಾಗಿದ್ದರು.
ಪ್ರತಾಪ್ ಸಿಂಹ ಹೇಳಿದ್ದು ಏನು?
ಮಾಜಿ ಸಚಿವ ದಿವಂಗತ ಮಹದೇವ್ ಪ್ರಸಾದ್ ಅವರ ಪತ್ನಿ ಗೀತಾ ಅವರ ವಿರುದ್ಧ ಪ್ರತಾಪ್ ಸಿಂಹ,”ಗೀತಾ ಮಹಾದೇವ್ ಪ್ರಸಾದ್ ಅವರೇ ನಿಮ್ಮ ಪತಿ ಮೃತಪಟ್ಟು ಹಾಲು ತುಪ್ಪ ಬಿಡೋ ದಿನವೇ ನಿವೇ ಅಭ್ಯರ್ಥಿ ಎಂಬುದಾಗಿ ಘೋಷಿಸಿಕೊಂಡಿದ್ದೀರಿ. ನಿಮ್ಮ ಮನೆಯ ಅಭಿವೃದ್ಧಿಗೆ ಮತ ಕೇಳಬೇಡಿ” ಎಂದು ಹೇಳಿಕೆ ನೀಡಿದ್ದರು. ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ನಿಮಗೆ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇನೆ, ಹೇಳಿಕೆಯನ್ನೂ ಹಿಂಪಡೆಯುತ್ತೇನೆ. ರಾಜಕಾರಣಿಗಳು ಮೃತಪಟ್ಟಾಗ ಅವರ ಮನೆಯವರನ್ನು ಚುನಾವಣೆಗೆ ನಿಲ್ಲಿಸಿ ಅನುಕಂಪದ ಆಧಾರದಲ್ಲಿ ಮತ ಪಡೆಯಲಾಗುತ್ತದೆ. ನೋವಿಗಿಂತ ಅಧಿಕಾರವೇ ಮುಖ್ಯವಾಯಿತೇ ಎಂದು ಪ್ರಶ್ನಿಸಿದ್ದೆ. ಅದರಾಚೆಗೆ ನನ್ನ ಹೇಳಿಕೆಯಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದರು.
ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರತಿಕ್ರಿಯಿಸಿದ್ದ ಗೀತಾ ಮಹಾದೇವ್ ಪ್ರಸಾದ್, ನಾನು ಗೆಲುವನ್ನು ನಿರೀಕ್ಷೆ ಮಾಡಿದ್ದೆ. ನಿರೀಕ್ಷೆಯಂತೆ ಜಯಗಳಿಸಿದ್ದೇನೆ. ಸಂಸದ ಪ್ರತಾಪ್ ಸಿಂಹ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ನನ್ನ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಯು ಸಹ ನನ್ನ ಜಯಕ್ಕೆ ಕಾರಣ. ಸಂಸದರಾಗಿ ಅವರು ಒಬ್ಬ ಮಹಿಳೆಯ ಬಗ್ಗೆ ಈ ರೀತಿಯಾಗಿ ಮಾತಾಡಿದರೆ ಯಾರೂ ಕ್ಷಮಿಸುವುದಿಲ್ಲ. ಕೇವಲ ಮಹಿಳೆಯರಷ್ಟೇ ಅಲ್ಲದೇ ಪುರಷರು ಸಹ ಇದನ್ನು ಖಂಡಿಸುತ್ತಾರೆ. ಪ್ರತಾಪ್ ಸಿಂಹ ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳುವ ಮೂಲಕ ಸಂಸದರಿಗೆ ಟಾಂಗ್ ನೀಡಿದ್ದರು.
ಜನರು ನನ್ನ ಮೇಲೆ ನಂಬಿಕೆಯಿಟ್ಟು, ಗಲ್ಲಿಸಿದ್ದಾರೆ. ಮುಂದೆ ನಾನು ಮಹಾದೇವ ಪ್ರಸಾದ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುತ್ತೇನೆ. ಪ್ರತಾಪ್ ಸಿಂಹ ತಮ್ಮ ಹೇಳಿಕೆಯಿಂದ ಸುಮಾರು 40 ಸಾವಿರ ಮತಗಳನ್ನು ಕಳೆದುಕೊಂಡಿದ್ದಾರೆ. ಜಯದ ಸಮಯದಲ್ಲಿ ಪ್ರತಾಪ್ ಸಿಂಹ ಅವರನ್ನು ಕ್ಷಮಿಸುತ್ತೇನೆ. ತಮ್ಮ ವಿವಾದಾತ್ಮಕ ಹೇಳಿಕೆ ನಂತರ ನನ್ನ ಮಗನಿಗೆ ಫೋನ್ ಮಾಡಿ ಕ್ಷಮೆ ಕೇಳಿದ್ದರು. ಇಂದು ನಿಮ್ಮ ಮಾಧ್ಯಮಗಳ ಮುಖಾಂತರ ಅವರನ್ನು ಕ್ಷಮಿಸಿದ್ದೇನೆ ಎಂದು ತಿಳಿಸುತ್ತೇನೆ ಎಂದು ಅವರು ಹೇಳಿದ್ದರು.
ಉಡುಪಿ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಹಣದ ಹೊಳೆ ಗೆದ್ದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿಕೊಟ್ಟ ಅವರು ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಹೇಗಾದ್ರು ಮಾಡಿ ಗೆಲ್ಲಲೇ ಬೇಕು ಎಂದು ಅಂತ ಮುಖ್ಯಮಂತ್ರಿಗಳು ನಿರ್ಧಾರ ಮಾಡಿದ್ದರು. ಅದರಂತೆ ಹಣದ ಹೊಳೆಯನ್ನು ಹರಿಸಿ ಗೆದ್ದಿದ್ದಾರೆ ಎಂದು ಶೆಟ್ಟರ್ ಹೇಳಿದರು.
2018ರ ಚುನಾವಣೆಗೆ ಈ ರಿಸಲ್ಟ್ ದಿಕ್ಸೂಚಿಯಲ್ಲ. ಸ್ವತಃ ಸಿಎಂ ಚುನಾವಣೆಗೆ ಮುನ್ನ ಇದು ದಿಕ್ಸೂಚಿಯಲ್ಲ ಅಂತ ಹೇಳುತ್ತಿದ್ದರು. ಆದ್ರೆ ಈಗ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಇದೇ ದಿಕ್ಸೂಚಿ ಅನ್ನುತ್ತಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಮುಂದೆಯೂ ಚುನಾವಣೆ ಎದುರಿಸ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರೋದ್ರಿಂದ ಕಾಂಗ್ರೆಸ್ ಗೆದ್ದಿದೆ. ಮುಂದಿನ ಮಹಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುತ್ತದೆ ಎಂದು ತಿಳಿಸಿದರು.
ಶ್ರೀನಿವಾಸಪ್ರಸಾದ್ ಅವರು ಹಿರಿಯ ನಾಯಕರು, ಅವರಿಗೆ ಪಕ್ಷದಲ್ಲಿ ಸೂಕ್ತಸ್ಥಾನಮಾನ ಕೊಡುತ್ತೇವೆ. ಈಗ ಹೇಗೆ ನೋಡಿಕೊಳ್ಳುತ್ತೇವೋ ಅದರಂತೆಯೇ ಮುಂದೆಯೂ ಗೌರವದಿಂದ ನೋಡಿಕೊಳ್ಳುತ್ತೇವೆ. ಗೌರವಯುತವಾದ ಸ್ಥಾನಮಾನವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಬೆಂಗಳೂರು: ಕರ್ನಾಟಕದ ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ ಜಯಗಳಿಸಿದರೆ, ಗುಂಡ್ಲುಪೇಟೆಯಲ್ಲಿ ಗೀತಾ ಮಹಾದೇವಪ್ರಸಾದ್ ಜಯಗಳಿಸಿದ್ದಾರೆ.
ನಂಜನಗೂಡಿನಲ್ಲಿ ಮೊದಲ ಸುತ್ತಿನ ಮತ ಎಣಿಕೆ ಅಂತ್ಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಗೆ 5857ಮತಗಳು ಬಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಗೆ 3574 ಮತಗಳು ಬಿದ್ದಿದೆ.
ಗುಂಡ್ಲುಪೇಟೆಯಲ್ಲಿ ಮೊದಲ ಸುತ್ತಿನ ಎಣಿಕೆಯಲ್ಲಿ ಬಿಜೆಪಿಗೆ 4771 ಮತಗಳು ಬಿದ್ದರೆ, ಕಾಂಗ್ರೆಸ್ -6542 ಮತಗಳು ಬಿದ್ದಿವೆ. 86 ನೋಟಾ ಮತಗಳು ಬಿದ್ದಿವೆ.
ಬೆಂಗಳೂರು: ಇಡೀ ರಾಜ್ಯದ ಗಮನ ಸೆಳೆದಿರೋ, ಭಾರೀ ಪೈಪೋಟಿ ನಡುವೆ ಪ್ರತಿಷ್ಠೆಯ ಅಖಾಡವಾಗಿರೋ ಬೈ ಎಲೆಕ್ಷನ್ ಫಲಿತಾಂಶ ಇಂದು ಪ್ರಕಟವಾಗಲಿದೆ. ನಂಜನಗೂಡಿನ ಜೆಎಸ್‍ಎಸ್ ಕಾಲೇಜಿನಲ್ಲಿ ಹಾಗೂ ಗುಂಡ್ಲುಪೇಟೆಯ ಸೇಂಟ್ ಜಾನ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಮತಎಣಿಕೆ ಪ್ರಾರಂಭವಾಗಿದೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಪಷ್ಟ ಫಲಿತಾಂಶ ಸಿಗಲಿದೆ. ಪ್ರತಿಷ್ಠೆ, ಜಾತಿ ಲೆಕ್ಕಾಚಾರ ಹಾಗೂ ಅನುಕಂಪದ ಲೆಕ್ಕಾಚಾರಗಳ ಮೇಲೆ ಫಲಿತಾಂಶ ನಿಂತಿದೆ. ಆದರೂ ಸಾಕಷ್ಟು ಹಣಬಲ ಪ್ರದರ್ಶನವಾಗಿದೆ. ಮೂಲಗಳ ಪ್ರಕಾರ ನಂಜನಗೂಡು ಕ್ಷೇತ್ರದಲ್ಲಿ 35 ಕೋಟಿ ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ 40 ಕೋಟಿ ರೂಪಾಯಿ ಹಂಚಿದ್ದಾರೆ ಎನ್ನಲಾಗಿದೆ.
ಎರಡು ಕ್ಷೇತ್ರದಲ್ಲಿ ನಿಲ್ಲೋದು ಅಭಿವೃದ್ಧಿಯೋ, ಯಡಿಯೂರಪ್ಪ ಪ್ರತಿಷ್ಠೆಯೋ ಅಥವಾ ಸಿಎಂ ಸಿದ್ದರಾಮಯ್ಯನವರ ಪ್ರತಿಷ್ಠೆಯೋ ಅನ್ನೋದನ್ನ ಕಾದು ನೋಡಬೇಕು. ಈ ನಡುವೆ ಎರಡೂ ಕ್ಷೇತ್ರದಲ್ಲಿ ನಾವೇ ಗೆಲ್ತೀವಿ ಅಂತಾ ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ಕೂಡಾ ಇದೇ ಭರವಸೆಯಲ್ಲಿದೆ.
ಪ್ರತಿಷ್ಠೆಯ ಕಣವಾಗಿರುವ ಎರಡು ಕ್ಷೇತ್ರಗಳಲ್ಲಿ 2013ರಲ್ಲಿ ಯಾರು ಎಷ್ಟು ಅಂತರದಿಂದ ಗೆದ್ದಿದ್ದಾರೆ? ಎಷ್ಟು ಮಂದಿ ಮತ ಚಲಾಯಿಸಿದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು: ಪ್ರತಿಷ್ಠೆ, ಸವಾಲು, ಅನುಕಂಪದ ವಿಷಯವಾಗಿ ಭಾರೀ ಕುತೂಹಲ ಕೆರಳಿಸಿರೋ ನಂಜನಗೂಡಿನಲ್ಲಿ ಶೇ.77.56 ಹಾಗೂ ಗುಂಡ್ಲುಪೇಟೆಯಲ್ಲಿ ಶೇ.87.10 ಯಷ್ಟು ಮತದಾನವಾಗಿದೆ. ನಂಜನಗೂಡು ನಗರದಲ್ಲಿರುವ ಜೆಎಸ್‍ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆದ್ರೆ, ಗುಂಡ್ಲುಪೇಟೆಯಲ್ಲಿರುವ ಸೆಂಟ್ ಜಾನ್ ಫ್ರೌಢಶಾಲೆಯಲ್ಲಿ ಭದ್ರತಾ ಕೊಠಡಿ ಸ್ಥಾಪಿಸಲಾಗಿದೆ. ಸ್ಟ್ರಾಂಗ್‍ರೂಮ್‍ನಲ್ಲಿ ಭದ್ರವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಗುರುವಾರ ಹೊರಬರಲಿದೆ.
ಈಗಲೇ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆದಿದ್ದು, ಗೆಲುವು ನಮ್ಮದೇ ಅಂತ ಎದೆಯುಬ್ಬಿಸಿ ಬೀಗುತ್ತಿವೆ. ಮತದಾನದ ನಂತರ ನಂಜನಗೂಡಿನಲ್ಲಿ ಎರಡೂ ಪಕ್ಷಗಳು ಬೂತ್ ಮಟ್ಟದಲ್ಲಿ ಡಾಟಾ ಕಲೆಕ್ಷನ್ ಮಾಡ್ತಿವೆ. ಯಾವ್ಯಾವ ಬೂತ್‍ನಲ್ಲಿ ಎಷ್ಟೆಷ್ಟು ಬೆಂಬಲಿಗರಿದ್ದಾರೆ ಅಂತ ಲೆಕ್ಕಾಚಾರದಲ್ಲಿ ತೊಡಗಿವೆ.
ನಂಜನಗೂಡಿನ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವ್ರು ಮೈಸೂರಿನಲ್ಲೇ ಕುಳಿತು ವಿಶ್ಲೇಷಣೆ ಮಾಡ್ತಿದ್ರೆ, ಕಾಂಗ್ರೆಸ್‍ನ ಕಳಲೇ ಕೇಶವಮೂರ್ತಿ ನಂಜನಗೂಡಿನಲ್ಲಿ ಕಾರ್ಯಕರ್ತರಿಂದ ಮಾಹಿತಿ ತರಿಸಿಕೊಳ್ತಿದ್ದಾರೆ. ಗುಂಡ್ಲುಪೇಟೆಯಲ್ಲಿ ಆಯಾ ಪಕ್ಷದ ಕಚೇರಿಯಲ್ಲಿ ಮುಖಂಡರು ಲೆಕ್ಕಾಚಾರ ನಡೆಸ್ತಿದ್ದಾರೆ.
ಈ ಬಾರಿ ಮಹಿಳೆಯರು ಹೆಚ್ಚಾಗಿ ವೋಟ್ ಮಾಡಿರೋ ಕಾರಣ ಕಾಂಗ್ರೆಸ್‍ನ ಗೀತಾಪ್ರಸಾದ್ ಉತ್ಸುಕರಾಗಿದ್ದಾರೆ. ಆದರೆ ಇಬ್ಬರು ಅಭ್ಯರ್ಥಿಗಳು ಅನುಕಂಪದ ವಿಚಾರವಾಗಿ ಚುನಾವಣೆ ಎದುರಿಸಿರುವುದರಿಂದ ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಅನ್ನೋದನ್ನ ಏಪ್ರಿಲ್ 13ರವರೆಗೆ ಕಾದುನೋಡಬೇಕಿದೆ.
ಈ ಕೌತುಕ, ಆತಂಕ ಹೆಚ್ಚಾಗಿರುವ ಈ ಟೈಮಲ್ಲೇ ರಾಜ್ಯ ಮತ್ತು ಕೇಂದ್ರದ ಗುಪ್ತಚರ ಇಲಾಖೆಗಳು ಎರಡೂ ವಿಭಿನ್ನ ಮತ್ತು ವ್ಯತಿರಿಕ್ತ ವರದಿ ನೀಡಿರೋದು ಗೊತ್ತಾಗಿದೆ. ನಂಜನಗೂಡಿನಲ್ಲಿ 4 ರಿಂದ 5 ಸಾವಿರ ಮತಗಳಿಂದ ಕಾಂಗ್ರೆಸ್ ಗೆಲ್ಲಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ವರದಿ ನೀಡಿದರೆ, ಸಾವಿರ ಮತಗಳಿಂದ ಬಿಜೆಪಿಗೆ ಜಯ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಗುಂಡ್ಲುಪೇಟೆ 5 ರಿಂದ 6 ಸಾವಿರ ಮತಗಳಿಂದ ಕಾಂಗ್ರೆಸ್‍ಗೆ ವಿಜಯಮಾಲೆ ಸಿಗಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ವರದಿ ನೀಡಿದರೆ, 2000 ಮತಗಳಿಂದ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ವರದಿ ನೀಡಿದೆ.
– ಏಪ್ರಿಲ್ 13ಕ್ಕೆ ಹೊರ ಬೀಳಲಿದೆ ಫಲಿತಾಂಶ – ನಂಜನಗೂಡಿನಲ್ಲಿ ಶಾಂತಯುತ, ಗುಂಡ್ಲುಪೇಟೆಯಲ್ಲಿ ಘರ್ಷಣೆ, ಲಾಠಿಚಾರ್ಜ್
ಬೆಂಗಳೂರು: ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಖಾರವಾಗಿ ಮತದಾನ ಅಂತ್ಯವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತ ಮಧ್ಯೆ ಘರ್ಷಣೆ, ಪೊಲೀಸರು ಲಾಠಿಚಾರ್ಜ್ ಜೊತೆಗೆ ಗುಡುಗು ಸಹಿತವಾಗಿ ಮಳೆರಾಯನೂ ಬಂದಿದ್ದ. ಇನ್ನು, ಓಟ್ ಮಾಡಿದ ಬಳಿಕ ವೃದ್ಧೆಯೊಬ್ರು ಪ್ರಾಣಬಿಟ್ಟ ಘಟನೆಯೂ ನಡೀತು. ಇದೆಲ್ಲದ ಮಧ್ಯೆ, ಶೇಕಡಾ 78ರಷ್ಟು ಮತದಾನವಾಗಿದೆ.
ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಕೆಂಡಕಾರಿ ಕಮಲ ಸೇರಿದ್ದ ಶ್ರೀನಿವಾಸ್ ಪ್ರಸಾದ್ ಹಾಗೂ ಸ್ನೇಹಿತನೇ ಸವಾಲು ಹಾಕಿದ ಕಾರಣ ಪ್ರತಿಷ್ಠೆಯಾಗಿ ಸ್ವೀಕರಿಸಿದ ಸಿದ್ದರಾಮಯ್ಯ ಮಧ್ಯೆ ನಂಜನಗೂಡು ಭಾರೀ ಕುತೂಹಲ ಕೆರಳಿಸಿದೆ. ಇವತ್ತಿನ ಚುನಾವಣೆಯೂ ಗಮ್ಯತೆಯನ್ನ ಉಳಿಸಿಕೊಂಡಿದೆ. ಯಾಕಂದ್ರೆ, ಶಾಂತಿಯುತವಾಗಿ ನಡೆದಿರುವ ಮತದಾನದಲ್ಲಿ ಜನ ಉತ್ಸಾಹದಿಂದ ಓಟ್ ಮಾಡಿದ್ದಾರೆ. ನಂಜನಗೂಡಿನಲ್ಲಿ ಶೇ.76ರಷ್ಟು ಮತದಾನವಾಗಿದೆ.
ಮಾಜಿ ಸಚಿವ ಮಹದೇವ್‍ಪ್ರಸಾದ್ ಅಕಾಲಿಕ ನಿಧನದಿಂದ ತೆರವಾಗಿದ್ದ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಶೇ.78ರಷ್ಟು ಮತದಾನವಾಗಿದೆ. ಒಂದಷ್ಟು ಗಲಾಟೆ, ಗೊಂದಲ ಹಾಗೂ ಗುಡುಗು ಸಹಿತ ಮಳೆಯಿಂದ ಕೆಲಹೊತ್ತು ಮತದಾನ ವಿಳಂಬವಾಗಿತ್ತು. ಆದ್ರೆ, ಮತದಾನ ಪ್ರಮಾಣ ಹೆಚ್ಚಾಗಿರೋದ್ರಿಂದ ಸೋಲು ಗೆಲುವಿನ ಲೆಕ್ಕಾಚಾರ ಕೂಡ ಭರ್ಜರಿಯಾಗಿ ನಡೀತಿದೆ. ಕಾಂಗ್ರೆಸ್ ಅನುಕಂಪದ ಆಧಾರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ರೆ, ಬಿಜೆಪಿನೂ ಗೆಲುವಿನ ಭರವಸೆಯಲ್ಲಿದೆ.
ಗುಂಡ್ಲುಪೇಟೆಯ ಜನರ ಜೊತೆ ಅಭ್ಯರ್ಥಿಗಳು ಹಾಗೂ ಜನಪ್ರತಿನಿಧಿಗಳು ಸಹ ಹಕ್ಕು ಚಲಾಯಿಸಿದ್ರು. ಹಾಲಹಳ್ಳಿಯಲ್ಲಿ ಪತಿಯ ಸಮಾಧಿಗೆ ಪೂಜೆ ಮಾಡಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹ ದೇವಪ್ರಸಾದ್ ಮತದಾನ ಮಾಡಿದ್ರು. ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಕುಟುಂಬ ಸಮೇತ ಚೌಡಳ್ಳಿಯಲ್ಲಿ ಹಕ್ಕು ಚಲಾಯಿಸಿದ್ರು. ಬಳಿಕ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ರು.
ಕೇತ್ರದ ಬೇಗೂರಿನಲ್ಲಿ ಬೆಳಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೀತು. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೈ-ಕೈ ಮಿಲಾಯಿಸಿದ್ರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ರು. ಇದ್ರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ರು. ಇದರ ಮಧ್ಯೆ, ಕಂದೇಗಾಲ ಬೂತ್‍ನಲ್ಲಿ ಎರಡು ಗಂಟೆ ಮತದಾನ ಸ್ಥಗಿತಗೊಂಡ್ತು.
ರಾಘವಪುರ, ಮಡಹಳ್ಳಿ, ತೆಕಣಾಂಬಿ, ಭೀಮನಬೀಡು ಸೇರಿದಂತೆ ಹಲವು ಮತದಾನ ಕೇಂದ್ರದಲ್ಲಿ ಮತಯಂತ್ರಗಳು ಕೈಕೊಟ್ಟಿದ್ವು. ಕೆಲವೆಡೆ ಮತಯಂತ್ರಗಳನ್ನ ಬದಲಿಸಲಾಯ್ತು. ಇನ್ನೊಂದೆಡೆ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಮಹದೇವಪ್ರಸಾದ್ ನಗರದ ಮತದಾರರು ಮತ ಚಲಾವಣೆ ಮಾಡೋಕೆ ಹೆಚ್ಚಾಗಿ ಬರಲೇ ಇಲ್ಲ. ಈ ಮಧ್ಯೆ ಹಂಗಳ ಗ್ರಾಮದಲ್ಲಿ ಮತದಾನ ಮಾಡಿ ಮನೆಗೆ ಹೋದ 80 ವರ್ಷದ ವೃದ್ಧೆ ದೇವಮ್ಮ ಅನ್ನೋರು ಇಹಲೋಕ ತ್ಯಜಿಸಿದ್ದಾರೆ.
ಅಂತ್ಯವಾಯ್ತು ಪ್ರತಿಷ್ಠೆಯ ಕಣದ ಎಲೆಕ್ಷನ್
ಇಡೀ ರಾಜ್ಯ ಸರ್ಕಾರವೇ ಅಖಾಡದಲ್ಲಿ ಜಿದ್ದಿಗೆ ಬಿದ್ದಿತ್ತು. ಬಿಜೆಪಿಗೂ ಗೆಲ್ಲಲೇಬೇಕೆಂಬ ಹಠ. ಹೀಗಾಗಿ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿಂದೆಂದೂ ಕಂಡಿರದ ಪ್ರತಿಷ್ಠೆಯ ಕಣ. ಕೊನೆಗೂ ಎರಡೂ ಕ್ಷೇತ್ರಗಳಲ್ಲಿ ಇಂದು ಮತದಾನ ನಡೀತು. ಅದ್ರಲ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಮಧ್ಯೆ ಸ್ವಾಭಿಮಾನದ ಸಂಘರ್ಷ ಏರ್ಪಟ್ಟಿರೋ ನಂಜನಗೂಡಿನಲ್ಲಿ ಶಾಂತಯುತ ಮತದಾನವಾಗಿದೆ.
ಸುಡು ಬಿಸಿಲನ್ನು ಲೆಕ್ಕಿಸದೇ ಜನರು ಬೆಳಗ್ಗೆ 7ರಿಂದ ಸಂಜೆ 5 ಗಂಟೆ ತನಕ ಹಕ್ಕು ಚಲಾಯಿಸಿದ್ರು. ಜನರ ಜೊತೆ ಸರತಿನಲ್ಲಿ ನಿಂತ ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಸ್ವಗ್ರಾಮ ಕಳಲೆಯಲ್ಲಿ ಮತ ಹಾಕಿದ್ರು. ಮತದಾನ ಮಾಡುವಾಗ ಪಕ್ಷದ ಚಿಹ್ನೆ ಹಾಕಿಕೊಳ್ಳೋದಕ್ಕೆ ಅವಕಾಶ ಇಲ್ಲದಿದ್ರೂ ಕೇಶವಮೂರ್ತಿ ಕಾಂಗ್ರೆಸ್ ಶಾಲು ಧರಿಸಿದ್ರು.
ನಂಜನಗೂಡಿನಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿದ್ರೂ ಒಂದಷ್ಟು ಗೊಂದಲ, ಗದ್ದಲ ಗಲಾಟೆನೂ ಇತ್ತು. ಅಶೋಕಪುರದ ಮತಗಟ್ಟೆಯಲ್ಲಿ ಕೈ ಹಾಗೂ ಕಮಲ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೀತು. ಮತಗಟ್ಟೆ 49ರಲ್ಲಿ ಎಡಗೈ ಬದಲಿಗೆ ಬಲಗೈ ತೋರುಬೆರಳಿಗೆ ಶಾಹಿ ಹಾಕಿದ್ದು ವಿವಾದವಾಯ್ತು. ಇನ್ನೊಂದೆಡೆ, ಗೋಳೂರು ಗ್ರಾಮದಲ್ಲಿ ಮತದಾನಕ್ಕೆ ಬಂದಿದ್ದ 84 ವರ್ಷದ ವೃದ್ಧೆ ನಂಜಮ್ಮ ಹೆಸರು ಇಲ್ಲದ ಕಾರಣ ವಾಪಸ್ ಹೋದ್ರು. ಈ ಮಧ್ಯೆ, ಮಹದೇವನಗರದ ನಿವಾಸಿಗಳು ಅವೈಜ್ಞಾನಿಕವಾಗಿ ಚರಂಡಿ ಕಟ್ಟಿದ್ದನ್ನ ವಿರೋಧಿಸಿ ಮತದಾನವನ್ನೇ ಬಹಿಷ್ಕಾರ ಮಾಡಿದ್ದರು.
ಇನ್ನು, ಸಿಎಂ ಆಪ್ತ ಮರೀಗೌಡ ನಂಜನಗೂಡಿನಲ್ಲಿ ಆಯೋಗದ ಆದೇಶವನ್ನ ಉಲ್ಲಂಘಿಸಿದ್ದಾರೆ. ಮತದಾರರನ್ನ ಹೊರತುಪಡಿಸಿ ಬೇರೆಯವ್ರು ಕ್ಷೇತ್ರ ಬಿಡುವಂತೆ ಆಯೋಗ ಆದೇಶ ಮಾಡಿದ್ದರೂ ಮತದಾರರಲ್ಲದ ಮರೀಗೌಡ ಮಾತ್ರ ಲಿಂಗಣ್ಣ ಸರ್ಕಲ್ ಬಳಿ ಆಪ್ತರ ಜೊತೆ ಸುತ್ತಾಡ್ತಿದ್ರು. ಇದರ ವಿರುದ್ಧ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ದೂರು ಕೊಟ್ಟಿದೆ.
110 ವರ್ಷದ ದೇವಮ್ಮ ಅವರು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮುಕ್ಕದ ಹಳ್ಳಿಯಲ್ಲಿ ಮತದಾನ ಮಾಡಿದರು.