Tag: Gully Boy

  • ಬಾಲಿವುಡ್ ಗಲ್ಲಿ ಬಾಯ್ ಖ್ಯಾತಿಯ ರಾಪರ್ ಧರ್ಮೇಶ್ ಪರ್ಮಾರ್ ಇನ್ನಿಲ್ಲ

    ಬಾಲಿವುಡ್ ಗಲ್ಲಿ ಬಾಯ್ ಖ್ಯಾತಿಯ ರಾಪರ್ ಧರ್ಮೇಶ್ ಪರ್ಮಾರ್ ಇನ್ನಿಲ್ಲ

    ಮುಂಬೈ: ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ‘ಗಲ್ಲಿ ಬಾಯ್’ ಚಿತ್ರದ ರಾಪರ್ ಎಂಸಿ ಟಾಡ್ ಫೋಡ್ ಅಕಾ ಧರ್ಮೇಶ್ (24) ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಜೋಯಾ ಅಖ್ತರ್ ನಿರ್ದೇಶನದ ‘ಗಲ್ಲಿ ಬಾಯ್’ ಸಿನಿಮಾದ ಹಾಡಿನ ಮೂಲಕ ಖ್ಯಾತರಾಗಿದ್ದ ರಾಪರ್ ಧರ್ಮೇಶ್ ಪರ್ಮಾರ್ ನಿಧನಕ್ಕೆ ಬಾಲಿವುಡ್ ಕಂಬಿನಿ ಮೀಡಿದಿದೆ. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್‍ನ ತಾರೆಯರಾದ ಜೋಯಾ ಅಖ್ತರ್, ರಣವೀರ್ ಸಿಂಗ್, ಸಿದ್ಧಾಂತ್ ಚತುರ್ವೇದಿ ಸೇರಿದಂತೆ ಅನೇಕ ಕಲಾವಿದರು ಅಗಲಿದ ಗಾಯಕನಿಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ಬೈಕಾಟ್ : ಕನ್ನಡ ಪರ ಹೋರಾಟಗಾರರಿಗೇ ಜವಾಬ್ದಾರಿ ಕೊಟ್ಟ ರಾಜಮೌಳಿ ಟೀಮ್

     

    View this post on Instagram

     

    A post shared by Dharmesh Parmar (@todfod_)

    ಈ ಕುರಿತು ಮಾಧ್ಯಮವೊಂದರಲ್ಲಿ ಮಾತನಾಡಿರುವ ಎಂಸಿ ಟಾಡ್ ಫಾಡ್ ಅವರ ತಾಯಿ ಮಗನ ನಿಧನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ‘ಮಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ’ ಎಂದು ಖಚಿತ ಪಡಿಸಿದ್ದಾರೆ. “ನನ್ನ ಮಗನಿಗೆ ಕಳೆದ 4 ತಿಂಗಳಲ್ಲಿ ಎರಡು ಬಾರಿ ಹೃದಯಾಘಾತವಾಗಿತ್ತು. 24 ವರ್ಷದ ಗಾಯಕನಿಗೆ ನಾಲ್ಕು ತಿಂಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಲಡಾಖ್‍ನಲ್ಲಿದ್ದಾಗ ಮೊದಲ ಹೃದಯಾಘಾತವಾಗಿತ್ತು. ಹೀಗಾಗಿ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೂ ನನ್ನ ಮಗ ಎಂದಿಗೂ ವಿಶ್ರಾಂತಿ ಪಡೆಯಲಿಲ್ಲ. ಕೊನೆಗೂ ಉಳಿಯಲಿಲ್ಲ’ ಎಂದು ಕಣ್ಣೀರಾಕಿದ್ದಾರೆ. ಇದನ್ನೂ ಓದಿ:  ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

    ಅವರು ರಾಪ್ ಬಗ್ಗೆ ಅತೀವ ಪ್ರೀತಿ ಹೊಂದಿದ್ದರು. ಸಂಗೀತವನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ನನ್ನ ಮಗು ಈಗ ಕಣ್ಮರೆಯಾಯಿತು. ಅವನನ್ನು ಉಳಿಸಲು ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರ ತಾಯಿ ರೋಧಿಸಿದ್ದಾರೆ.

     

    View this post on Instagram

     

    A post shared by Dharmesh Parmar (@todfod_)

    ವರದಿಯ ಪ್ರಕಾರ, ಅವರಿಗೆ ಎರಡನೇ ಬಾರಿ ಹೃದಯಾಘಾತದ ನಂತರವೇ ಮಗನ ಸ್ಥಿತಿ ಕುಟುಂಬಕ್ಕೆ ತಿಳಿದಿದೆ. ನಾಸಿಕ್‍ಗೆ ಕೆಲಸಕ್ಕೆ ಸಂಬಂಧಿಸಿದ ಪ್ರವಾಸ ಹೊರಡುವ ಮುನ್ನ ಹೋಳಿ ಹಬ್ಬದ ಕೆಲವೇ ದಿನಗಳ ಮೊದಲು, ಧರ್ಮೇಶ್ ರಕ್ಷಾ ಬಂಧನವನ್ನೂ ಆಚರಿಸಿದ್ದರಂತೆ. ಅವನ ಸಾವು ಮೊದಲೇ ಅವನಿಗೆ ತಿಳಿದಿತ್ತಾ ಎನ್ನುವಂತೆ ಹಬ್ಬಗಳನ್ನು ರಾಪರ್ ಆಚರಿಸಿದ್ದರು.

    ‘ನನ್ನ ಮಗ ಹೋಳಿ ಹಬ್ಬಕ್ಕೂ ಒಂದು ದಿನದ ಮೊದಲು ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ. ಅವನಿಗೆ ಇಬ್ಬರು ತಂಗಿಯರಿದ್ದಾರೆ. ರಾಕಿ ಹಬ್ಬ ಇಲ್ಲದಿದ್ದರೂ, ಅವನು ಯಾಕೆ ಆ ರೀತಿ ಹಬ್ಬವನ್ನು ಆಚರಿಸಿದ ಎಂದು ಆಗ ತಿಳಿಯಲಿಲ್ಲ. ಆದರೆ ಅವನು ತನ್ನ ಸಹೋದರಿಯರೊಂದಿಗೆ ಮಾತ್ರವಲ್ಲದೆ ತನ್ನ ಚಿಕ್ಕಮ್ಮನ ಹೆಣ್ಣುಮಕ್ಕಳೊಂದಿಗೆ ರಾಖಿ ಹಬ್ಬ ಆಚರಿಸಿ ಹೋದ’ ಎಂದಿದ್ದಾರೆ ಅವರ ತಾಯಿ.

     

    View this post on Instagram

     

    A post shared by Dharmesh Parmar (@todfod_)

    ಟಾಡ್ ಫಾಡ್ ಅವರು ಅನೇಕ ದೇಶಿ ಹಿಪ್-ಹಾಪ್ ಹಾಡುಗಳನ್ನು ಹಾಡಿದ್ದಾರೆ. ಎಂಸಿ ಟಾಡ್ ಫಾಡ್ ‘ಇಂಡಿಯಾ 91’ ಗಾಗಿ ಒಂದು ಪದ್ಯವನ್ನೂ ಬರೆದಿದ್ದಾರೆ.

  • ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟ ಗಲ್ಲಿಬಾಯ್!

    ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟ ಗಲ್ಲಿಬಾಯ್!

    ಬೆಂಗಳೂರು: ಪದ್ಮಾವತ್ ಖ್ಯಾತಿಯ ನಟ ರಣ್‌ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರ ಗಲ್ಲಿ ಬಾಯ್. ಇದೇ ಫೆಬ್ರವರಿ ಹದಿನಾಲಕ್ಕರಂದು ಭಾರತದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ತಳಮಟ್ಟದಿಂದ ಮೇಲೆದ್ದು ಬಂದು ರಾಪ್ ಸಿಂಗಿಂಗ್‍ನಲ್ಲಿ ಸ್ಟಾರ್ ಆದ ಹುಡುಗನೊಬ್ಬನ ಮನಮಿಡಿಯುವ ಕಥೆಯೊಂದಿಗೆ ದೊಡ್ಡ ಮಟ್ಟದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಧಾರಾವಿಯ ಸ್ಲಂ ಪ್ರದೇಶದಿಂದ ಹುಟ್ಟಿಕೊಂಡಿದ್ದ ಈ ಕಥೆಯ ಆಳ, ವಿಸ್ತಾರ ಕಂಡು ಕೇವಲ ಭಾರತೀಯ ಸಿನಿಮಾ ಪ್ರೇಮಿಗಳು ಮಾತ್ರವಲ್ಲದೇ ವಿಶ್ವಾದ್ಯಂತ ಸಿನಿಮಾಸಕ್ತರು ಬೆರಗಾಗಿದ್ದರು. ಇಂಥಾ ಅಪರೂಪದ ಕಥೆಯ ಚಿತ್ರಕ್ಕೀಗ ಸರಿಯಾದ ಸಮ್ಮಾನ ಸಿಗುವ ಕ್ಷಣಗಳು ಹತ್ತಿರಾಗಿವೆ. ಈ ಚಿತ್ರ 2020ರ ಸಾಲಿನ ಆಸ್ಕರ್ ಪ್ರಶಸ್ತಿ ರೇಸಿಗೆ ಎಂಟ್ರಿ ಕೊಟ್ಟಿದೆ.

    ಈಗಾಗಲೇ ಭಾರತದಿಂದ ಆಸ್ಕರ್ ಪ್ರಶಸ್ತಿಗಾಗಿ ಕಳುಹಿಸಲಾಗೋ ಚಿತ್ರಗಳ ಪಟ್ಟಿ ಅಂತಿಮ ಹಂತ ತಲುಪಿಕೊಂಡಿದೆ. ಭಾರತದ ಬೇರೆ ಬೇರೆ ಭಾಷೆಗಳ ಹಲವಾರು ಚಿತ್ರಗಳು ಈ ಲಿಸ್ಟಿಗೆ ಸೇರಿಕೊಳ್ಳುವ ಸ್ಪರ್ಧೆಯಲ್ಲಿದ್ದವು. ಅದರಲ್ಲಿಯೂ ಹಿಂದಿಯಲ್ಲಿ ಮಾತ್ರ ಈ ಸಾಲಿನಲ್ಲಿ ಹೆಚ್ಚು ಚಿತ್ರಗಳಿದ್ದವು. ಅದರಲ್ಲಿ ಕಡೆಗೂ ಗಲ್ಲಿ ಬಾಯ್, ಉರಿ, ಬದ್ಲಾ, ಆರ್ಟಿಕಲ್ 15 ಮುಂತಾದ ಚಿತ್ರಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಈ ಎಲ್ಲ ಚಿತ್ರಗಳೂ ಕೂಡಾ ವಿಭಿನ್ನ ಕಥಾನಕದ ಮೂಲಕ ವಿಶ್ವಾದ್ಯಂತ ಗಮನ ಸೆಳೆದಂಥವುಗಳೇ. ಆದರೆ ಗಲ್ಲಿಬಾಯ್ ಚಿತ್ರದ ಕಥೆ, ಅದರ ಪ್ರಧಾನ ಪಾತ್ರಕ್ಕಾಗಿ ರಣ್‍ವೀರ್ ಸಿಂಗ್ ತಯಾರಾಗಿದ್ದ ರೀತಿ ಮಾತ್ರ ಸಲೀಸಾಗಿ ಯಾರೂ ಬೀಟ್ ಮಾಡಲು ಸಾಧ್ಯವಾಗದಿರುವಂಥಾದ್ದು.

    ಧಾರಾವಿಯ ಸ್ಲಂ ಪ್ರದೇಶವೊಂದರಿಂದ ಹೆತ್ತವರ ಆಸೆ ಆಕಾಂಕ್ಷೆಗಳನ್ನೆಲ್ಲ ಮೀರಿಕೊಂಡು ರಾಪ್ ಲೋಕದ ಕನಸು ಕಟ್ಟಿಕೊಂಡು ಹೊರಡೋ ಹುಡುಗನೊಬ್ಬನ ಕಥೆ ಗಲ್ಲಿ ಬಾಯ್ ಚಿತ್ರದ್ದು. ಇಲ್ಲಿ ರಣ್‍ವೀರ್ ಸಿಂಗ್ ಗಲ್ಲಿ ಬಾಯ್ ಆಗಿ ನಟಿಸಿದರೆ, ಆಲಿಯಾ ಭಟ್ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಎಲ್ಲರನ್ನೂ ಕಾಡುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೋಯಲ್ ಅಖ್ತರ್ ಅದೆಷ್ಟೋ ವರ್ಷಗಳ ಹಿಂದೆ ಈ ಕಥಾ ಎಳೆಯನ್ನು ಎದೆಗಿಳಿಸಿಕೊಂಡು, ಧಾರಾವಿ ಸ್ಲಂ ಪ್ರದೇಶದ ಪ್ರತಿಭಾವಂತರ ಯಶೋಗಾಥೆಗಳನ್ನು ಕಾಡಿಸಿಕೊಂಡು ಈ ಕಥೆ ಹೊಸೆದಿದ್ದಾರೆ. ಅದನ್ನು ಸಮರ್ಥವಾಗಿಯೇ ನಿರ್ದೇಶನ ಮಾಡಿದ್ದಾರೆ. ರಿತೇಶ್ ನಿಧ್ವಾನಿ ಮತ್ತು ಫರ್ಹಾ ಅಖ್ತರ್ ಗಲ್ಲಿ ಬಾಯ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಈ ಚಿತ್ರದಲ್ಲಿ ರಣ್‍ವೀರ್ ಸಿಂಗ್ ಗಲ್ಲಿ ಬಾಯ್ ಅವತಾರದಲ್ಲಿ ನಟಿಸಿರೋ ಬಗೆ, ಅದಕ್ಕಾಗಿ ಅವರು ಮಾಡಿಕೊಂಡಿರೋ ದೈಹಿಕ ರೂಪಾಂತರಗಳನ್ನು ಕಂಡು ಭಾರತೀಯ ಚಿತ್ರಪ್ರೇಮಿಗಳೆಲ್ಲ ನಿಬ್ಬೆರಗಾಗಿದ್ದರು. ಅದಾಗ ತಾನೇ ಪದ್ಮಾವತ್ ಚಿತ್ರಕ್ಕೆ ಕಟ್ಟುಮಸ್ತಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದ ರಣ್‌ವೀರ್, ಅದಾಗಿ ತಿಂಗಳು ಕಳೆಯೋದರೊಳಗೆ ಪೀಚು ಪೀಚಾದ ಹುಡುಗನಂತಾಗಿ ದೇಹ ದಂಡಿಸಿಕೊಂಡಿದ್ದರು. ಇದೊಂದು ಸ್ಯಾಂಪಲ್ ಅಷ್ಟೇ. ಈ ಚಿತ್ರದ ಹಿಂದೆ ಇಂಥಾ ಅಗಾಧ ಪರಿಶ್ರಮಗಳಿವೆ. ಇದು ಮೂಡಿ ಬಂದಿರೋ ರೀತಿಯೇ ಆಸ್ಕರ್ ಗರಿ ಮತ್ತೆ ಭಾರತಕ್ಕೆ ದಕ್ಕುವ ಭರವಸೆಯನ್ನು ಗಟ್ಟಿಗೊಳಿಸಿದೆ.

  • ಗಲ್ಲಿ ಬಾಯ್ ಜೊತೆ ಕಾರಿನಲ್ಲಿ ಕಾಣಿಸಿಕೊಂಡ ದೀಪಿಕಾ

    ಗಲ್ಲಿ ಬಾಯ್ ಜೊತೆ ಕಾರಿನಲ್ಲಿ ಕಾಣಿಸಿಕೊಂಡ ದೀಪಿಕಾ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರು ‘ಗಲ್ಲಿ ಬಾಯ್’ ರಣ್‍ವೀರ್ ಸಿಂಗ್ ಜೊತೆ ಕಾರಿನಲ್ಲೇ ರೊಮ್ಯಾನ್ಸ್ ಮಾಡಿದ್ದಾರೆ.

    ರಣ್‍ವೀರ್ ಸಿಂಗ್ ಹಾಗೂ ಅಲಿಯಾ ಭಟ್ ನಟನೆಯ ಗಲ್ಲಿ ಬಾಯ್ ಚಿತ್ರದ ಪ್ರೀಮಿಯರ್ ಶೋವನ್ನು ಬಾಲಿವುಡ್ ಕಲಾವಿದರಿಗಾಗಿ ಆಯೋಜಿಸಲಾಗಿತ್ತು. ಈ ವೇಳೆ ರಣ್‍ವೀರ್ ತಮ್ಮ ಪತ್ನಿ ದೀಪಿಕಾ ಜೊತೆ ಆಗಮಿಸಿದರೆ, ಅಲಿಯಾ ತಮ್ಮ ಗೆಳೆಯ ರಣ್‍ಬೀರ್ ಕಪೂರ್ ಜೊತೆ ಆಗಮಿಸಿದ್ದಾರೆ.

    ಗಲ್ಲಿ ಬಾಯ್ ಚಿತ್ರ ನೋಡಿ ಹಿಂತಿರುಗುವಾಗ ರಣ್‍ವೀರ್ ಹಾಗೂ ದೀಪಿಕಾ ಕಾರಿನಲ್ಲಿ ತಬ್ಬಿಕೊಂಡು ಕಿಸ್ ಮಾಡುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆ ಆಗಿದೆ. ಸದ್ಯ ಅವರಿಬ್ಬರು ಕಾರಿನಲ್ಲಿ ಜೊತೆಯಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ರಣ್‍ವೀರ್ ಹಾಗೂ ದೀಪಿಕಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಡ್ರೈವರ್ ಕಾರು ಚಲಾಯಿಸುತ್ತಿದ್ದರೆ, ಹಿಂದೆ ಕುಳಿತಿದ್ದ ರಣ್‍ವೀರ್ ಹಾಗೂ ದೀಪಿಕಾ ಮಾಧ್ಯಮದ ಕ್ಯಾಮೆರಾಗಳನ್ನು ನೋಡಿ ನಗುತ್ತಿದ್ದರು.

    ಗಲ್ಲಿ ಬಾಯ್ ಚಿತ್ರದ ಪ್ರಿಮಿಯರ್ ಶೋಗೆ ಶ್ವೇತಾ ಬಚ್ಚನ್ ನಂದ, ಅನನ್ಯ ಪಾಂಡೆ, ಕಿರಣ್ ರಾವ್, ದಿಯಾ ಮಿರ್ಜಾ, ಕುಬ್ರಾ ಸೇಠ್ ಹಾಗೂ ಅಲಿ ಫೆಜಲ್ ಆಗಮಿಸಿದ್ದರು. ಜೊತೆಗೆ ಚಿತ್ರದ ನಿರ್ದೇಶಕರಾದ ಜೋಯಾ ಅಖ್ತರ್ ಅವರ ತಂದೆ ಜಾವೀದ್ ಅಖ್ತರ್ ಹಾಗೂ ಸಹೋದರ ಫಾರ್ಹಾನ್ ಅಖ್ತರ್ ಕೂಡ ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv