Tag: gulihatti shekhar

  • ಮತಾಂತರದ ಪಿಡುಗಿನ ಮಧ್ಯೆ ಯುವತಿ ಸಾಧನೆಯನ್ನು ಕೊಂಡಾಡಿದ ಗೂಳಿಹಟ್ಟಿ

    ಮತಾಂತರದ ಪಿಡುಗಿನ ಮಧ್ಯೆ ಯುವತಿ ಸಾಧನೆಯನ್ನು ಕೊಂಡಾಡಿದ ಗೂಳಿಹಟ್ಟಿ

    – UPSC ಪರೀಕ್ಷೆಯಲ್ಲಿ ಮಮತಾಗೆ 707ನೇ ರ‍್ಯಾಂಕ್

    ಚಿತ್ರದುರ್ಗ: ಕೇಂದ್ರ ಲೋಕಸೇವಾ ಆಯೋಗ (UPSC) ಪರೀಕ್ಷೆಯಲ್ಲಿ 707ನೇ ರ‍್ಯಾಂಕ್ ಪಡೆದಿರುವ ಮಮತಾ ಅವರಿಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು ಸಂತಸದ ಜೊತೆಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ನಮ್ಮ ಕ್ಷೇತ್ರಕ್ಕೆ ಅಂಟಿಕೊಂಡಿರುವ ಮತಾಂತರ ಪಿಡುಗಿನ ನಡುವೇ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೇವಪುರ ಭೋವಿಹಟ್ಟಿ ಗ್ರಾಮದ ಮಮತಾ ಜಿ. ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ 707ನೇ ರ‍್ಯಾಂಕ್ ಪಡೆದಿರೋದು ಶ್ಲಾಘನೀಯ ಎಂದಿದ್ದಾರೆ.

    ದೇವಪುರ ಭೋವಿಹಟ್ಟಿ ಗ್ರಾಮದ ಯುವತಿ ಜಿ.ಮಮತಾ ಖಾಸಗಿ ಶಾಲಾ ಶಿಕ್ಷಕರಾದಗೋವಿಂದಪ್ಪನವರ ಪುತ್ರಿ. ಇವರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇಂತಹ ವೇಳೆ ಯಾವುದಕ್ಕೂ ಎದೆಗುಂದದೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ನನ್ನ ಕ್ಷೇತ್ರದ ಯುವತಿ ಸಾಧನೆ ನಮಗೆ ಅತೀವ ಸಂತೋಷ ತಂದಿದೆ. ಈ ಗ್ರಾಮದಲ್ಲಿ ಸುಮಾರು 20ಕ್ಕೂ ಅಧಿಕ ಕುಟುಂಬಗಳು ಮತಾಂತರ ಆಗಿವೆ. ಆದರೂ ಇದ್ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಶ್ರಮವಹಿಸಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಗಳಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ- ರಾಜ್ಯದ 18 ಮಂದಿ ಉತ್ತೀರ್ಣ

    ಈ ಹಿಂದೆ ಅಧಿವೇಶನದಲ್ಲಿ ಮತಾಂತರದ ಬಗ್ಗೆ ಸ್ವತಃ ಶಾಸಕರೇ ಪ್ರಸ್ತಾಪ ಮಾಡಿದ್ದು, ಇದೊಂದೇ ಗ್ರಾಮದಲ್ಲಿ ಬಹುಸಂಖ್ಯೆಯ ಜನರು ಮತಾಂತರ ಆಗಿದ್ದಾರೆ. ಆದರೆ ಇಂತಹ ಗೊಂದಲದ ಮಧ್ಯೆ ತನ್ನ ಸಾಧನೆಯನ್ನು ಸಾಧಿಸಿರುವ ಮಮತಾ ಅವರಿಗೆ ಅಭಿನಂದನೆಗಳ ಪೂರ ಹರಿದುಬರುತ್ತಿವೆ ಎಂದರು. ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್

    ಸದ್ಯ ಮಮತಾ ಸಾಧನೆಯ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಶಾಕರು ಸೇರಿದಂತೆ ಕೋಟೆನಾಡಿನ ಜನರು ವಾಟ್ಸಪ್ ಹಾಗೂ ಸೋಶಿಯಲ್ ಮೀಡಿಯಾ ಮುಖಪುಟದಲ್ಲಿ ಭಾವಚಿತ್ರ ಸಹಿತ ಬರೆದುಕೊಂಡು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

  • ನಾನು ಕಾಂಗ್ರೆಸ್ ಸೇರಲ್ಲ, ಬಿಜೆಪಿ ಬಿಡಲ್ಲ: ಗೂಳಿಹಟ್ಟಿ ಸ್ಪಷ್ಟನೆ

    ನಾನು ಕಾಂಗ್ರೆಸ್ ಸೇರಲ್ಲ, ಬಿಜೆಪಿ ಬಿಡಲ್ಲ: ಗೂಳಿಹಟ್ಟಿ ಸ್ಪಷ್ಟನೆ

    ಚಿತ್ರದುರ್ಗ: ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವ ಮಾತೇ ಇಲ್ಲ. ಅಲ್ಲದೆ ಇತ್ತ ಭಾರತೀಯ ಜನತಾ ಪಕ್ಷ(ಬಿಜೆಪಿ)ಯನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಸ್ಪಷ್ಟಪಡಿಸಿದ್ದಾರೆ.

    ಕಾಂಗ್ರೆಸ್‍ಗೆ ಸೇರಲಿದ್ದಾರೆಂಬ ವಿಚಾರದ ಕುರಿತು ಶಾಸಕರು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರದ ಜನರಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲಾ ವದಂತಿಗಳು ಸತ್ಯಕ್ಕೆ ದೂರವಾದದ್ದು. ನಾನು ಕಾಂಗ್ರೆಸ್ ಸೇರಲ್ಲ. ಬಿಜೆಪಿ ಬಿಡಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ

    ನನ್ನ ರಾಜಕೀಯ ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸುಳ್ಳುಸುದ್ದಿ ಹಬ್ಬಿಸಿ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ ಎನ್ನುವುದು ಕೂಡ ಸುಳ್ಳು. ಇಂತಹ ಅಪಪ್ರಚಾರದಿಂದ ಕ್ಷೇತ್ರದ ಜನರ ಎದುರು, ಸರ್ಕಾರದ ಮಟ್ಟದಲ್ಲಿ ಮುಜುಗರವಾಗುತ್ತಿದೆ. ವಿರೋಧಿಗಳು ಹಬ್ಬಿಸುವ ಇಂಥ ಆಧಾರರಹಿತ ಸುದ್ದಿಗಳನ್ನು ದಯಮಾಡಿ ಪ್ರಕಟಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.  ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

    2023ರ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ಗೇಮ್ ಪ್ಲಾನ್ ಶುರು ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸದ್ದಿಲ್ಲದೇ ಆಪರೇಷನ್ ಹಸ್ತ ಜಾರಿಯಲ್ಲಿದೆ. ಜೆಡಿಎಸ್, ಬಿಜೆಪಿ ಶಾಸಕರನ್ನು ಕಾಂಗ್ರೆಸ್ಸಿಗೆ ಸೆಳೆಯಲು ಕೈ ತಂತ್ರಗಾರಿಕೆ ಹೂಡಿದೆ ಎನ್ನಲಾಗುತ್ತಿದೆ. ಇತ್ತ ಆಪರೇಷನ್ ಕಾಂಗ್ರೆಸ್ ಬೆನ್ನಲ್ಲೇ ಯಡಿಯೂರಪ್ಪ ಅಲರ್ಟ್ ಆಗಿದ್ದಾರೆ. ಆಪರೇಷನ್ ಹಸ್ತದ ಮೂಲಕ ಬಿಜೆಪಿ ಶಾಸಕರನ್ನು ಸೆಳೆಯುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನು ಕಡೆಗಣಿಸಿದರೆ ಬಿಜೆಪಿಗೆ ದೊಡ್ಡ ನಷ್ಟ. ತಮ್ಮ ವಿಚಾರದಲ್ಲಿ ಹೈಕಮಾಂಡ್‍ನ ನಡೆ, ಧೋರಣೆಗಳು ಸಕಾಲಿಕ ಅಲ್ಲ ಎಂದು ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್ ಆಪರೇಷನ್ ಬಗ್ಗೆ ಯಡಿಯೂರಪ್ಪ ವಾರ್ನಿಂಗ್

  • ಕೋವಿಡ್ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಪಬ್ಲಿಕ್ ಟಿವಿ ಇತಿಹಾಸ ಸೃಷ್ಟಿಸಿದೆ: ಗೂಳಿಹಟ್ಟಿ ಶೇಖರ್

    ಕೋವಿಡ್ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಪಬ್ಲಿಕ್ ಟಿವಿ ಇತಿಹಾಸ ಸೃಷ್ಟಿಸಿದೆ: ಗೂಳಿಹಟ್ಟಿ ಶೇಖರ್

    ಚಿತ್ರದುರ್ಗ: ಕೋವಿಡ್ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಅಭಿಯಾನದ ಮೂಲಕ ಇತಿಹಾಸ ಸೃಷ್ಟಿಸಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಮೆಚ್ಚುಗೆ ಸೂಚಿಸಿದರು.

    ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಯುತ್ತಿರುವ ಟ್ಯಾಬ್ ವಿತರಣೆ ಕಾರ್ಯಕ್ರಮ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿ ನಡೆಯಿತು. ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಶಿಕ್ಷಣ ಪ್ರೇಮಿಗಳ ನೇತೃತ್ವದಲ್ಲಿ ಗೂಳಿಹಟ್ಟಿ ಪ್ರೌಢಶಾಲೆ ಮತ್ತು ನಾಗತಿಹಳ್ಳಿ ಸರ್ಕಾರಿ ಶಾಲೆಯ 80 ಜನ ವಿದ್ಯಾರ್ಥಿಗಳಿಗೆ 40 ಟ್ಯಾಬ್ ಗಳನ್ನು ಇಂದು ವಿತರಿಸಲಾಯಿತು.

    ಟ್ಯಾಬ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಗೂಳಿಹಟ್ಟಿ ಶೇಖರ್ ಅವರು, ಕೋವಿಡ್ ನಿಂದಾಗಿ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಆಸಕ್ತಿ ತುಂಬಾ ಹಿನ್ನಡೆಯಾಗಿತ್ತು. ಈ ವೇಳೆ ಪಬ್ಲಿಕ್ ಟಿವಿ ರಾಜ್ಯದ ಇತಿಹಾಸದಲ್ಲಿ ಉಳಿಯುವಂತಹ ದೊಡ್ಡ ಅಭಿಯಾನ ಮಾಡಿದೆ. ಪಾಠ ಕೇಳಲಾಗದೇ ಗೊಂದಲಕ್ಕೀಡಾಗಿದ್ದ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಯಶಸ್ವಿಯಾಗಿದೆ. ಅವರಿಗೆ ಹೊಸದುರ್ಗ ಕ್ಷೇತ್ರ ಹಾಗೂ ಗೂಳಿಹಟ್ಟಿ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಇದೇ ವೇಳೆ ಎಲ್ಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ, ಮಾತನಾಡಿದ ದಾನಿಗಳಲ್ಲೊಬ್ಬರಾದ ಹೊಸದುರ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯ್ಯಪ್ಪ ಸಹ, ಕೋವಿಡ್ ಮಹಾ ಮಾರಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುವ ಮೂಲಕ ಪಬ್ಲಿಕ್ ಟಿವಿ ದೊಡ್ಡ ಕ್ರಾಂತಿ ಮಾಡ್ತಿದೆ. ಕರ್ನಾಟಕ ರಾಜ್ಯಾದ್ಯಂತ ಸಮರೋಪಾದಿಯಾಗಿ ನಡೆಯುತ್ತಿರುವ ಈ ಟ್ಯಾಬ್ ವಿತರಣೆ ಕಾರ್ಯ ಶ್ಲಾಘನೀಯ ಎಂದರು.

    ವಿದ್ಯಾರ್ಥಿಗಳು ಕೂಡ ಟ್ಯಾಬ್ ಪಡೆದು ಸಂತಸದಿಂದ ಪುಳಕಿತರಾಗಿದ್ದರು. ಈ ವೇಳೆ ಅವರ ಅನಿಸಿಕೆ ತಿಳಿಸಿದ ವಿದ್ಯಾರ್ಥಿಗಳಾದ ಅವಿನಾಶ್, ವಿನಯ್ ಮತ್ತು ಪೂಜಾ ಕೋವಿಡ್ ಸಂಕಷ್ಟದ ವೇಳೆ ನಾವು ಆನ್‍ಲೈನ್ ಪಾಠದಿಂದ ವಂಚಿತರಾಗಿದ್ದೇವು. ಶಾಲೆಯಲ್ಲಿ ಪಾಠ ಕೇಳಲಾಗದೇ ಆತಂಕಗೊಂಡಿದ್ದೇವು. ಅಲ್ಲದೇ ಆನ್‍ಲೈನ್ ಪಾಠ ಕೇಳಲು ಕರೆಂಟ್ ಸಮಸ್ಯೆ, ಕೇಬಲ್ ಸಮಸ್ಯೆ ಹಾಗು ನೆಟ್ ವರ್ಕ್ ಸಮಸ್ಯೆ ಎದುರಾಗಿತ್ತು. ಹೀಗಾಗಿ ಪಾಠ ಕೇಳದೇ ಪರೀಕ್ಷೆ ಹೇಗೆ ಬರೆಯೋದೆಂಬ ಭಯ ನಮ್ಮಲ್ಲಿತ್ತು. ಇಂತಹ ಸಮಯದಲ್ಲಿ ಪಬ್ಲಿಕ್ ಟಿವಿ ನಮಗೆ ಟ್ಯಾಬ್ ವಿತರಿಸಿ ಉತ್ತಮಕಾರ್ಯ ಮಾಡಿದೆ. ಆದ್ದರಿಂದ ಪಬ್ಲಿಕ್ ಟಿವಿ ಹಾಗೂ ಟ್ಯಾಬ್ ದಾನಿಗಳಾದ ಶಾಸಕ ಶೇಖರ್ ಅವರಿಗೆ ಧನ್ಯವಾದ ತಿಳಿಸಿದರು. ಜೊತೆಗೆ ನಾವುಗಳು ಈ ಟ್ಯಾಬ್ ಗಳ ಸಹಾಯದಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತೇವೆ. ಶಾಲೆಗೆ, ಶಿಕ್ಷಕರಿಗೆ ಹಾಗೂ ನಮಗೆ ನೆರವಾದ ಎಲ್ಲರಿಗೂ ಒಳ್ಳೆಯ ಹೆಸರು ತರುತ್ತೇವೆಂದು ಪ್ರಮಾಣ ಮಾಡಿದರು.

    ಕಾರ್ಯಕ್ರಮದಲ್ಲಿ ಎಸ್.ಡಿ ಎಂಸಿ ಅಧ್ಯಕ್ಷ ಸಿದ್ದಪ್ಪ, ತಾಪಂ ಸದಸ್ಯ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕರಾದ ಸೂರಜ್ ಕುಮಾರ್ ಹಾಗೂ ತಿಪ್ಪೇಸ್ವಾಮಿ, ಶಿಕ್ಷಕಿಯರಾದ ಹೇಮಲತ, ಮಮತ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • ಬಿಜೆಪಿ ವಿರುದ್ಧ ಮತ್ತೆ ಮುನಿದ ಗೂಳಿಹಟ್ಟಿ – ಮುಂದಿನ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸೋ ಇಂಗಿತ

    ಬಿಜೆಪಿ ವಿರುದ್ಧ ಮತ್ತೆ ಮುನಿದ ಗೂಳಿಹಟ್ಟಿ – ಮುಂದಿನ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸೋ ಇಂಗಿತ

    ಚಿತ್ರದುರ್ಗ: ಅನರ್ಹ ಶಾಸಕರು ಬಿಜೆಪಿಯಿಂದ ಗೆದ್ದು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕಮಲದ ಭದ್ರಕೋಟೆ ಎನಿಸಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿಗೆ ತಲೆನೋವು ಶುರುವಾಗಿದೆ. ಸಚಿವ ಸ್ಥಾನ ಸಿಗಲ್ಲ ಅಂತ ಬಿಜೆಪಿಗೆ ಸೆಡ್ಡು ಹೊಡೆಯಲು ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ರೆಡಿಯಾಗ್ತಿದ್ದಾರೆ.

    ಹೊಸದುರ್ಗದ ಬನಶಂಕರಿ ಭವನದಲ್ಲಿ ಸ್ವಾಭಿಮಾನಿ ಗೂಳಿಹಟ್ಟಿ ಶೇಖರ್ ಅಭಿಮಾನಿಗಳ ಬಳಗದಿಂದ ಪ್ರತ್ಯೇಕ ಸಭೆ ನಡೆಸಲಾಗಿದೆ. ಮುಂದಿನ ರಾಜಕೀಯ ನಿರ್ಧಾರಗಳ ಬಗ್ಗೆ ಸಾರ್ವಜನಿಕರ ಸಭೆಯಲ್ಲಿ ಚರ್ಚಿಸಲಾಯಿತು. 2008ರಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬರಲು ಮೊಟ್ಟ ಮೊದಲು ಬಿಜೆಪಿ ಜೊತೆ ಕೈಜೋಡಿಸಿದ್ದ ಅಂದಿನ ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು ಸಹ ಸಚಿವ ಸ್ಥಾನ ನೀಡದೇ ವಂಚಿಸಲಾಗ್ತಿದೆ ಎಂಬ ಬೇಸರದಿಂದ ಬಿಜೆಪಿ ಸರ್ಕಾರದ ವಿರುದ್ಧ ಮುನಿದಿದ್ದಾರೆ.

    ಈವರೆಗೆ ಬೋವಿ ಸಮುದಾಯಕ್ಕೆ ಆದ್ಯತೆ ನೀಡಬೇಕೆಂಬ ಅಜೆಂಡಾದೊಂದಿಗೆ ಸಚಿವ ಸ್ಥಾನ ಕೇಳುತ್ತಿದ್ದ ಗೂಳಿಹಟ್ಟಿ ಶೇಖರ್ ಈಗ ಅನರ್ಹ ಶಾಸಕರಿಗೆ ನೀಡಿರೋ ಗೌರವ ಹಾಗೂ ಸ್ಥಾನಮಾನ ತಮಗೂ ನೀಡುವಂತೆ ಕೇಳುತ್ತಿದ್ದಾರೆ. 2008ರಲ್ಲಿ ಸರ್ಕಾರ ಬರಲು ಬೆಂಬಲ ನೀಡಿದ್ದ ನನಗೆ ಮೆಡಿಕಲ್ ಕಾಲೇಜು, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಹ ನೀಡಲಿಲ್ಲ. ಆದರೆ ಇದೀಗ ಬಿಜೆಪಿಗೆ ಸರ್ಕಾರ ಬರಲು ಕಾರಣರಾದ ಅನರ್ಹ ಶಾಸಕರಿಗೆ ರೆಡ್ ಕಾರ್ಪೆಟ್ ಹಾಕಿ ಬಿಜೆಪಿ ನಾಯಕರು ಸ್ವಾಗತಿಸಿದ್ದೂ, ಹಣ, ಅಧಿಕಾರ ನೀಡುತ್ತಿದ್ದಾರೆ. ಆದರೆ ನನಗೆ ಮಾತ್ರ ತಾರತಮ್ಯ ಮಾಡುತ್ತಿರುವ ಬಿಜೆಪಿ ನಾಯಕರು ತಮ್ಮನ್ನು ಸಹ 18ನೇ ಅನರ್ಹ ಶಾಸಕ ಅಂತ ಪರಿಗಣಿಸಿ ಸಚಿವ ಸ್ಥಾನ ನೀಡಲಿ ಎಂದು ಇತ್ತೀಚೆಗೆ ಗೂಳಿಹಟ್ಟಿ ಶೇಖರ್ ಆಕ್ರೋಶ ಹೊರಹಾಕಿದ್ದರು.

    ಹೊಸದುರ್ಗದಲ್ಲಿ ಬೆಂಬಲಿಗರ ಸಭೆಯಲ್ಲಿ ತಮ್ಮ ಮನಸಿನ ನೋವನ್ನು ವ್ಯಕ್ತಪಡಿಸಿದ ಗೂಳಿಹಟ್ಟಿ ಶೇಖರ್ ಅವರು, ನಾನೊಬ್ಬ ಶಾಸಕನಾದರೂ ಬಿಜೆಪಿ ನನ್ನನ್ನು ಕಡೆಗಣಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಹೊಸದುರ್ಗ ತಾಲೂಕು ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ನಾಮಕಾವಸ್ಥೆಗೂ ಸಹ ಶಾಸಕರ ಅಭಿಪ್ರಾಯವನ್ನು ಕೇಳಿಲ್ಲ. ಬಿಜೆಪಿ ಪಕ್ಷದ ನಾಯಕರ ಕಪಿಮುಷ್ಟಿಯಲ್ಲೇ ಇರಲಿ ಅಂತ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ತೆರೆಮರೆಯಲ್ಲಿ ಅತೀ ಬೇಗ ಶಾಸಕರಾಗುವ ಬಯಕೆಯುಳ್ಳ ತಾಲೂಕಿನ ಬಿಜೆಪಿ ನಾಯಕರು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಪಕ್ಷದ ವರಿಷ್ಠರಲ್ಲಿ ಚಾಡಿ ಹೇಳುತ್ತಿದ್ದಾರೆ. ಆದರೆ ಅವರಿಗೆ ಶಾಸಕರಾಗಲು ಅಷ್ಟೊಂದು ಬಯಕೆ ಇದ್ದರೆ ನನ್ನ ವಿರುದ್ಧ ಬಿಜೆಪಿಯಿಂದ ಸರ್ಧಿಸಲಿ ಅಂತ ಸವಾಲು ಹಾಕಿದರು. ಜೊತೆಗೆ ನಾನು ಇನ್ನೂ ಮೂರು ವರ್ಷ ಎಲ್ಲೂ ಹೋಗಲ್ಲ. ಬಿಜೆಪಿಯಲ್ಲಿ ಎಷ್ಟೇ ಕಿರುಕುಳವಿದ್ದರೂ ಇಲ್ಲೇ ಇರುತ್ತೇನೆ. ಆದರೆ ಮುಂದಿನ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸುವ ಸಾಧ್ಯತೆ ಇರುವ ಬಗ್ಗೆ ಗೂಳಿಹಟ್ಟಿ ಶೇಖರ್ ತಿಳಿಸಿದರು.

    ಒಂದು ವೇಳೆ ನಾನು ಬಿಜೆಪಿ ಬಿಟ್ಟರೆ ಮಾಜಿ ಶಾಸಕ ಗೋವಿಂದಪ್ಪ ಅವರ ಗೆಲುವು ಈ ಕ್ಷೇತ್ರದಲ್ಲಿ ಸುಲಭವಾಗಲಿದೆ. ಹೀಗಾಗಿ ನನ್ನ ಜೀವನಪರ್ಯಂತ ಗೋವಿಂದಪ್ಪನ ವಿರುದ್ಧ ಸ್ಪರ್ಧಿಸುತ್ತೇನೆ. ಗೋವಿಂದಪ್ಪ ಎಲ್ಲಿಯ ತನಕ ರಾಜಕಾರಣದಲ್ಲಿ ಇರುತ್ತಾರೋ ಅಲ್ಲಿಯ ತನಕ ನಾನು ರಾಜಕಾರಣ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು.

  • ಆತ್ಮಹತ್ಯೆಗೆ ಯತ್ನಿಸಿದ ಕಾರಣ ಬಿಚ್ಚಿಟ್ರು ಶಾಸಕ ಗೂಳಿಹಟ್ಟಿ..!

    ಆತ್ಮಹತ್ಯೆಗೆ ಯತ್ನಿಸಿದ ಕಾರಣ ಬಿಚ್ಚಿಟ್ರು ಶಾಸಕ ಗೂಳಿಹಟ್ಟಿ..!

    ಶಿವಮೊಗ್ಗ: ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಪೊಲೀಸ್ ಠಾಣೆಯ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಆತ್ಮಹತ್ಯೆಗೆ ಯತ್ನಿಸಿರುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

    ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅವರು, 5 ವರ್ಷದಿಂದ ನಮ್ಮ ತಾಲೂಕಿನಲ್ಲಿ ಪ್ರತಿದಿನ 100 ರಿಂದ 150 ಟಿಪ್ಪರ್ ಗಳಲ್ಲಿ ಅಕ್ರಮವಾಗಿ ಮರಳು ಲೋಡ್ ಆಗುತ್ತಿತ್ತು. ಪೊಲೀಸ್ ಇಲಾಖೆಯೂ ಒಂದು ಟಿಪ್ಪರಿಗೆ 1 ಲಕ್ಷ ರೂ. ಫಿಕ್ಸ್ ಮಾಡಿತ್ತಂತೆ. ಸಬ್ ಇನ್ಸ್ ಪೆಕ್ಟರ್, ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಡಿವೈಎಸ್‍ಪಿ ಮತ್ತು ಆಗಿ ಎಸ್‍ಪಿಗಳು ಈ ಹಣವನ್ನು ಫಿಕ್ಸ್ ಮಾಡಿದ್ದರಂತೆ. 2, 3 ಬಾರಿ ನಾನೇ ಸ್ವತಃ ಹೋಗಿ ಹಿಡಿದ್ರೆ 2, 3 ಟಿಪ್ಪರ್ ಗಳು ಸಿಗುತ್ತಿದ್ದವು. ವ್ಯವಸ್ಥಿತವಾಗಿ ಅವುಗಳು ಹೋಗುತ್ತಿದ್ದವು ಅಂತ ತಿಳಿಸಿದ್ದಾರೆ.

    ನಾನು ಶಾಸಕನಾದ ಬಳಿಕ ಅವಾಗದಿಂದ ಇವಾಗಿನವರೆಗೂ ಮರಳು ಸಾಮಾನ್ಯ ಜನ, ಮನೆ ಕಟ್ಟುವವರಿಗೆ, ಬಡವರಿಗೆ ಹಾಗೂ ದೇವಸ್ಥಾನಗಳನ್ನು ಕಟ್ಟಲು ಮರಳು ಸಿಗುತ್ತಿಲ್ಲ. ಮರಳನ್ನೆಲ್ಲ ಈವಾಗ ಸಿಗದಂತೆ ಮಾಡಿಬಿಟ್ಟಿದ್ದಾರೆ. ಹೀಗಾಗಿ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದರು.

    ಕೆರೆ ಕುಂಟೆಗಳಲ್ಲಿ ಸಿಗುವ ಮಣ್ಣನ್ನು ಮನೆ ಕಟ್ಟಲೆಂದು ತೆಗೆದುಕೊಂಡು ಬಂದವರ ಮೇಲೆ ಕೇಸ್ ಹಾಕ್ತಾರೆ. ನಮಗೆ ಕೆಟ್ಟ ಹೆಸರು ಬರಲೆಂದು ಒಂದೇ ಒಂದು ಉದ್ದೇಶ ಹಾಗೂ ಪೊಲೀಸಿನವರಿಗೆ ದುಡ್ಡು ಸಿಗಲ್ಲ ಅನ್ನುವ ಉದ್ದೇಶದಿಂದ ನಾವು ಆಪಾದನೆ ಮಾಡಲು ಆರಂಭಿಸಿದ ಬಳಿಕ ಬೇಕಂತಲೇ ಅವರು ಪೊಲೀಸ್ ಡ್ಯೂಟಿ ಮಾಡೋದು ಬಿಟ್ಟು ಟ್ರ್ಯಾಕ್ಟರ್ ಗಳನ್ನು ಬೆನ್ನತ್ತೋದು, ಸಾಮಾನ್ಯ ಜನರಿಗೆ ತೊಂದರೆ ಕೊಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಅಲ್ಲದೇ ಡಬಲ್ ಕೇಸ್ ಕೂಡ ಹಾಕುತ್ತಿದ್ದಾರೆ ಅಂತ ಅವರು ಆರೋಪಿಸಿದ್ರು. ಇದನ್ನೂ ಓದಿ: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ

    ನಾನು ಬರುತ್ತಾ ಪೆಟ್ರೋಲ್ ಬಂಕ್ ನಲ್ಲಿ 1 ಲೀಟರ್ ಪೆಟ್ರೋಲ್ ತೆಗೆದುಕೊಂಡೆ. ಅಲ್ಲಿ ಸ್ವಲ್ಪ ದೂರ ಬಂದು ಬೆಂಕಿ ಪೊಟ್ಟಣ ತೆಗೆದುಕೊಂಡೆ. ಅವಾಗಲೇ ನನಗೆ ಸಿಟ್ಟು ತಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಏನಪ್ಪಾ ಇದು ಪ್ರತಿ ಬಾರಿಯೂ ಶಾಸಕರನ್ನು ಕೆಲಸ ಮಾಡಲು ಬಿಡೋದೇ ಇಲ್ಲ. ಬರೀ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅನಿಸಿತ್ತು.

    1 ಲಕ್ಷ ವೋಟ್ ಹಾಕಿರುವ ಜನ ಅವರಿಗೆ ನ್ಯಾಯ ಕೊಡಿಸಬೇಕಂದ್ರೆ ಸಾಮಾನ್ಯ ಜನರಿಗೆ ನ್ಯಾಯ ಕೊಡಿಸಬೇಕಲ್ಲ. ವಿಧಿ ಇಲ್ಲದೇ ಈ ತೀರ್ಮಾನ ಮಾಡಿದ್ದೇನೆ. ಹೀಗಾಗಿ ಪೊಲೀಸ್ ಠಾಣೆಯ ಬಳಿ ಬಂದು ಏಕಾಏಕಿ ಆತ್ಮಹತ್ಯೆಗೆ ಮುಂದಾಗಿದ್ದೇನೆ. ನಾನು ಈ ಮೊದಲೇ ಹೇಳಿದ್ದೆ. ಹೀಗಾಗಿ ಹತಾಶನಾಗಿ ಬಂದು ಠಾಣೆಯ ಮುಂದೆ ಬಂದು ಪೆಟ್ರೋಲನ್ನು ತನ್ನ ತಲೆಯ ಮೇಲೆ ಹೊಯ್ದುಕೊಂಡೆ. ಅಷ್ಟಾಗುವಾಗಲೇ ಕೆಲವರು ಬಂದು ನನ್ನ ಜೇಬಿನಲ್ಲಿದ್ದ ಬೆಂಕಿ ಪೊಟ್ಟಣವನ್ನು ಕಿತ್ತುಕೊಂಡರು. ಆದ್ರೆ ಪೆಟ್ರೋಲ್ ಕಣ್ಣಿಗೆ ಹೋಗಿದೆ. ಹೀಗಾಗಿ ಕಣ್ಣು ಉರಿಯುತ್ತದೆ ಎಂದು ಗೂಳಿಹಟ್ಟಿ ವಿವರಿಸಿದ್ರು.

    https://www.youtube.com/watch?v=A_WmrMG6F1k

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv