Tag: Gulihatti Shekar

  • ಚುನಾವಣೆಗೆ‌ ಸ್ಪರ್ಧಿಸಲು ಗೂಳಿಹಟ್ಟಿ ಶೇಖರ್‌ಗೆ ದೇಣಿಗೆ ನೀಡಿದ ಮತದಾರರು

    ಚುನಾವಣೆಗೆ‌ ಸ್ಪರ್ಧಿಸಲು ಗೂಳಿಹಟ್ಟಿ ಶೇಖರ್‌ಗೆ ದೇಣಿಗೆ ನೀಡಿದ ಮತದಾರರು

    ಚಿತ್ರದುರ್ಗ: ಚುನಾವಣೆಗೆ ‌ಸ್ಪರ್ಧಿಸುವಂತೆ ಒತ್ತಾಯಿಸಿ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ಗೆ (Gulihatti Shekar) ಕ್ಷೇತ್ರದ ಮತದಾರರು‌ ದೇಣಿಗೆ‌ ನೀಡಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾಡದಕೆರೆ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಯ ಪೂಜೆ ಕಾರ್ಯಕ್ರಮದ‌ ವೇಳೆ ಸ್ಥಳಕ್ಕೆ ಆಗಮಿಸಿದ್ದ ಕೂಲಿ ಕಾರ್ಮಿಕ ಮಹಿಳೆಯರು ಹಾಗೂ ಸ್ತ್ರೀ ಸಂಘಗಳ ಕೆಲ ಮಹಿಳೆಯರು ಶಾಸಕ‌ಗೂಳಿಹಟ್ಟಿ ಶೇಖರ್ ಚುನಾವಣೆ (Election) ಖರ್ಚಿಗಾಗಿ ಹಣ ಕೊಟ್ಟು‌ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಬಡ ಕೂಲಿ ಕಾರ್ಮಿಕರು ಹಾಗೂ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ದಿಢೀರ್ ಅಂತ ಹಣ ನೀಡಲು ಬಂದಾಗ ಕ್ಷಣಕಾಲ ಶಾಸಕ ಶೇಖರ್ ಮುಜುಗರಕ್ಕೊಳಗಾದರು. ಈ ವೇಳೆ ಮಾಡದಕೆರೆ ಹೋಬಳಿಯ ಬಿಜೆಪಿ ‌(BJP) ಮುಖಂಡರು‌ ಹಾಗೂ ಶಾಸಕರ‌ ಬೆಂಬಲಿಗರು ಇದ್ದರು.

    ಕಳೆದ 2018ರ ಚುನಾವಣೆಯಲ್ಲೂ ಸಹ ಹೊಸದುರ್ಗ ಕ್ಷೇತ್ರದಾದ್ಯಂತ ಶಾಸಕ ಶೇಖರ್‌ಗೆ ಜನರು ದೇಣಿಗೆ ನೀಡಿದ್ದರು. ಆದರೆ ಈ ಬಾರಿ ಚುನಾವಣೆಗೂ ಮುನ್ನವೇ ದೇಣಿಗೆ ನೀಡಿ, ಶಾಸಕರಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಗಗನಸಖಿ ಗೆಳತಿಯನ್ನು ಅಪಾರ್ಟ್‌ಮೆಂಟ್‌ನಿಂದ ತಳ್ಳಿ ಆತ್ಮಹತ್ಮೆ ನಾಟಕವಾಡಿದ್ದ ಟೆಕ್ಕಿ ಅರೆಸ್ಟ್‌

    ಈ ಬಾರಿ ಕ್ಷೇತ್ರದಲ್ಲಾಗಿರುವ ಏರುಪೇರು ಹಾಗೂ ಸ್ವಪಕ್ಷ‌ ಬಿಜೆಪಿ ಸರ್ಕಾರದ ವಿರುದ್ಧವೇ ಟೆಂಡರ್‌ ವಿಚಾರದಲ್ಲಿ ಶಾಸಕ‌ ಶೇಖರ್ ಗುಡುಗಿದ್ದನ್ನೆ ದಾಳವಾಗಿ ಬಳಸಿಕೊಂಡು ಅವರಿಗೆ ಟಿಕೆಟ್ ತಪ್ಪಿಸಲು ಕೆಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು‌ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್‌ಗಾಗಿ ಮುಖಂಡರಾದ ಲಿಂಗಮೂರ್ತಿ ಹಾಗೂ ಶಾಸಕ ಶೇಖರ್ ಮಧ್ಯೆ ಬಾರಿ ಪೈಪೋಟಿ‌ ಶುರುವಾಗಿದೆ. ಇದನ್ನೂ ಓದಿ: ಮೋದಿ ಬಂದ ಬೆನ್ನಲ್ಲೇ ಅಖಾಡಕ್ಕಿಳಿದ ಎಚ್‌ಡಿಡಿ – ಮಂಡ್ಯ ನಾಯಕರಿಗೆ ಖಡಕ್‌ ಸೂಚನೆ

  • ಹೊಸದುರ್ಗದಲ್ಲಿ 4 ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್‌

    ಹೊಸದುರ್ಗದಲ್ಲಿ 4 ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್‌

    – ತಾಯಿ ಮರಳಿದ್ದಾರೆ ಎಂದ ಗೂಳಿಹಟ್ಟಿ ಶೇಖರ್‌
    – ಹಾಲುರಾಮೇಶ್ವರ ದೇಗುಲದಲ್ಲಿ ಹಿಂದೂ ಧರ್ಮಕ್ಕೆ ಸ್ವಾಗತ

    ಚಿತ್ರದುರ್ಗ: ಆಮಿಷಗಳಿಗೆ ಬಲಿಯಾಗಿ ಅನ್ಯ ಧರ್ಮಕ್ಕೆ ಮತಾಂತರವಾಗಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರದ ನಾಲ್ಕು ಕುಟುಂಬಗಳು ಇಂದು ಹಿಂದೂ ಧರ್ಮಕ್ಕೆ ಮರಳಿದ್ದಾರೆ.

    ಕುಟುಂಬದ ಆಧಾರಸ್ತಂಭವಾಗಿದ್ದ ಮನೆಯ ಯಜಮಾನನಿಗೆ ವಕ್ಕರಿಸಿದ್ದ ಕ್ಯಾನ್ಸರ್ ರೋಗವನ್ನೇ ಬಂಡವಾಳ ಮಾಡಿಕೊಂಡು ಪ್ರದೀಪ್ ಎಂಬವರ ಕುಟುಂಬವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಮತಾಂತರವಾಗಿ ಎರಡು ವರ್ಷ ಕಳೆದರೂ ಸಹ ಅವರ ತಂದೆಗೆ ರೋಗ ನಿವಾರಣೆ ಆಗಲಿಲ್ಲ. ಹೀಗಾಗಿ ಇಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸಮ್ಮುಖದಲ್ಲಿ ನಾಲ್ಕು ಕುಟುಂಬಗಳು ಸ್ವಪ್ರೇರಣೆಯಿಂದ ಹಿಂದೂ ಧರ್ಮಕ್ಕೆ ಮರಳಿವೆ. ಇದನ್ನೂ ಓದಿ: ವಿದ್ಯುತ್‌ಗೆ ಸಮಸ್ಯೆ ಆಗಲ್ಲ, ದೇಶದಲ್ಲಿ ಕಲ್ಲಿದ್ದಲು ದಾಸ್ತಾನಿದೆ- ಪ್ರಹ್ಲಾದ್‌ ಜೋಷಿ ಸ್ಪಷ್ಟನೆ

    ಹಾಲುರಾಮೇಶ್ವರ ದೇಗುಲದಲ್ಲಿ ಕೇಸರಿ ಬಟ್ಟೆಯನ್ನು ಹಾಕುವ ಮೂಲಕ ಹಿಂದೂ ಧರ್ಮಕ್ಕೆ ಅವರನ್ನು ಸ್ವಾಗತಿಸಲಾಯಿತು. ಹಾಲು ರಾಮೇಶ್ವರನಿಗೆ ಪೂಜೆ ಸಲ್ಲಿಸಿ,ಪ್ರಸಾದ ಸ್ವೀಕರಿಸುವ ಮೂಲಕ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಆಗಿದ್ದಾರೆ. ಇದನ್ನೂ ಓದಿ: ಚೀನಾ ಕೈಯಿಂದ ನಾರ್ವೆಯ ಸೋಲಾರ್‌ ಕಂಪನಿ ಖರೀದಿಸಿದ ರಿಲಯನ್ಸ್‌ 

    ಕಾಳ್ಗಿಚ್ಚಿನಂತೆ ನಮ್ಮ ಕ್ಷೇತ್ರದಲ್ಲಿ ಮತಾಂತರ ಹರಡುತ್ತಿದೆ ಎಂದು ಕ್ರೈಸ್ತ ಮಿಷಿನರಿಗಳ ವಿರುದ್ಧ ವಿಧಾನಸೌಧದಲ್ಲಿ ಗುಡುಗಿದ್ದ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಹುಟ್ಟಿನಿಂದಲೂ ಕ್ರೈಸ್ತ ಧರ್ಮದಲ್ಲಿರುವವರಿಗೆ ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಬೇಕು ಅಂತ ಕ್ಷಮೆಯಾಚಿಸಿದ್ದಾರೆ. ಸ್ವತಃ ಅವರ ತಾಯಿಯೇ ಮತಂತಾರವಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದ್ದ ಅವರು, ಹೊಸದುರ್ಗ ಕ್ಷೇತ್ರದಲ್ಲಿ ಮತಾಂತರದ ವಿರುದ್ಧ ಸಮರ ಸಾರಿದ್ದಾರೆ. ಹೀಗಾಗಿ ಇಂದು ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದಲ್ಲಿ ಮತಾಂತರವಾಗಿದ್ದ ನಾಲ್ಕು ಕುಟುಂಬಗಳನ್ನು ಇಂದು ವಾಪಸ್ ಹಿಂದೂ ಧರ್ಮಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕ್ಷೇತ್ರದಾದ್ಯಂತ ಹಿಂದೂ ಧರ್ಮಕ್ಕೆ ವಾಪಸ್ ಕರೆ ತರಲು ಘರ್ ವಾಪ್ಸಿ ಕಾರ್ಯಕ್ರಮ ನಡೆಸುತ್ತಿದ್ದೇನೆ. ಮತಾಂತರವಾಗಿದ್ದ ನನ್ನ ತಾಯಿ ಸಹ ಮರಳಿ ನಮ್ಮ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ನನ್ನ ಮನೆಯಲ್ಲಿ ತಾಯಿ ಕ್ಷೇಮವಾಗಿದ್ದಾರೆ. ಹಾಗೆಯೇ ಮತಾಂತರ ಮಾಡುತ್ತಿರುವ ಮಿಷನರಿಗಳ ವಿರುದ್ಧ ನಾನು ಗುಡುಗಿದ್ದೇನೆ ಹೊರತು ಹುಟ್ಟಿನಿಂದಲೇ ಕ್ರೈಸ್ತ ಧರ್ಮದಲ್ಲಿರುವವರ ವಿಚಾರದಲ್ಲಿ ನನಗೆ ಸೋದರತೆಯ ಭಾವವಿದೆ. ಆದರೂ ಸಹ ನನ್ನ ಈ ಹೋರಾಟದಿಂದ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಮತಾಂತರ ವಿಚಾರ ಇಟ್ಟುಕೊಂಡು ನಾನು ಹೊಸದುರ್ಗದಲ್ಲಿ ರಾಜಕೀಯ ಗಿಮಿಕ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಬ್ಲಾಕ್‍ಮೇಲ್, ಶಾಸಕರೊಂದಿಗೆ ಟೀ ಪಾರ್ಟಿ ಮಾಡಿದವರೆಲ್ಲಾ ಮಂತ್ರಿ ಆಗ್ತಾರೆ: ಗೂಳಿಹಟ್ಟಿ ಶೇಖರ್

    ಬ್ಲಾಕ್‍ಮೇಲ್, ಶಾಸಕರೊಂದಿಗೆ ಟೀ ಪಾರ್ಟಿ ಮಾಡಿದವರೆಲ್ಲಾ ಮಂತ್ರಿ ಆಗ್ತಾರೆ: ಗೂಳಿಹಟ್ಟಿ ಶೇಖರ್

    ಚಿತ್ರದುರ್ಗ: ಬ್ಲಾಕ್‍ಮೇಲ್ ಹಾಗೂ ಕೆಲ ಶಾಸಕರೊಂದಿಗೆ ಟೀಪಾರ್ಟಿ ಮಾಡಿದವರೆಲ್ಲಾ ಮಂತ್ರಿ ಆಗುತ್ತಾರೆಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ.

    ಚಿತ್ರದುರ್ಗದಲ್ಲಿ ಮಾತನಾಡಿದ ಗೂಳಿಹಟ್ಟಿ ಶೇಖರ್ ಅವರು, 2008ರಲ್ಲಿ ಪಕ್ಷೇತರನಾಗಿ ಗೆದ್ದು ಬಿಜೆಪಿ ಸರ್ಕಾರ ರಚನೆಗೆ ನಾನು ಮೊದಲು ಬೆಂಬಲ ನೀಡಿದ್ದೇನೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಕಳೆದ ಬಿಜೆಪಿ ಸರ್ಕಾರದ ವೇಳೆ ನನಗೆ ಅನ್ಯಾಯ ತೀವ್ರ ಆಗಿತ್ತು. ಕೇವಲ ಜವಳಿ ಮತ್ತು ಕ್ರೀಡಾ ಇಲಾಖೆ ನೀಡಿದ್ದ ಸಿಎಂ ಯಡಿಯೂರಪ್ಪ ಕಡಿಮೆ ಅವಧಿಯಲ್ಲಿ ನನ್ನ ಸ್ಥಾನವನ್ನು ವಾಪಸ್ ಪಡೆದಿದ್ದರು. ಆದರೆ ಆಪರೇಷನ್ ಕಮಲದಿಂದ ಬಂದವರಿಗೆ ಪ್ರಮುಖ ಖಾತೆ ನೀಡಿ ರಾಜಾತಿಥ್ಯ ನೀಡಿದ್ದರು ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ದಕ್ಷಿಣ ಕನ್ನಡ ಸೇರಿದಂತೆ ಹೈ ರಿಸ್ಕ್ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ

    ಈ ಬಾರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನನಗೂ ಮಂತ್ರಿ ಸ್ಥಾನ ನೀಡುವ ನಿರೀಕ್ಷೆಯಿದೆ. ಆದರೆ ನಮಗೆ ಬಿಜೆಪಿಯಲ್ಲಿ ಯಾರು ಸಹ ಗಾಡ್ ಫಾದರ್‍ಗಳು ಇಲ್ಲ ಹೀಗಾಗಿ ಯಾರ ಮನೆಯ ಕದವನ್ನು ತಟ್ಟಿ ಲಾಭಿ ನಡೆಸಿಲ್ಲ. ಕೇಂದ್ರ ಸರ್ಕಾರದ ಸಂಪುಟ ಮಾದರಿಯಲ್ಲಿ ಸರ್ವೆ ಮಾಡಿ ಸಂಪುಟ ರಚನೆಯಾದರೆ ನನಗೂ ಅವಕಾಶದ ನಿರೀಕ್ಷೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

     

  • ಗೂಳಿಹಟ್ಟಿ ಶೇಖರ್​ಗೆ ಸಚಿವ ಸ್ಥಾನ ನೀಡದಿದ್ರೆ ತಕ್ಕ ಪಾಠ ಎಂದ ಬೆಂಬಲಿಗರು

    ಗೂಳಿಹಟ್ಟಿ ಶೇಖರ್​ಗೆ ಸಚಿವ ಸ್ಥಾನ ನೀಡದಿದ್ರೆ ತಕ್ಕ ಪಾಠ ಎಂದ ಬೆಂಬಲಿಗರು

    ಚಿತ್ರದುರ್ಗ: ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪಗೆ ನೆರವಾದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‍ಗೆ ಸಚಿವ ಸ್ಥಾನ ನೀಡದಿದ್ದರೆ ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆ ವೇಳೆ ತಕ್ಕ ಪಾಠ ಕಲಿಸುವುದಾಗಿ ಅವರ ಬೆಂಬಲಿಗರು ಬಿಜೆಪಿ ಹೈಕಮಾಂಡ್‍ಗೆ ಎಚ್ಚರಿಕೆ ನೀಡಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದ ಗಾಂಧಿವೃತ್ತದಿಂದ ತಾಲೂಕು ಕಚೇರಿವರೆಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಗೂಳಿಹಟ್ಟಿ ಶೇಖರ್ ಅಭಿಮಾನಿಗಳು ಹಾಗೂ ಬೆಂಬಲಿಗರು ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರ ಬೆಂಬಲಿಗ ಚಿತ್ತಯ್ಯ, ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರಲು ನಿಸ್ವಾರ್ಥದಿಂದ ಕೈಜೋಡಿಸಿದ ಶೇಖರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಅಲ್ಲದೆ ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸಹ ಇವರಿಗೆ ಸಚಿವ ಸ್ಥಾನ ನೀಡದೇ ಪಕ್ಷ ವಂಚಿಸಿದೆ. ಆದರೂ ಭದ್ರಾ ನೀರು ಕ್ಷೇತ್ರಕ್ಕೆ ಹರಿಸಿದರೆ ಸಾಕೆಂಬ ನಿಟ್ಟಿನಲ್ಲಿ ಪಕ್ಷನಿಷ್ಟೇ ತೋರಿರುವ ನಮ್ಮ ಶಾಸಕರು ಜಿಲ್ಲೆಯಲ್ಲಿ ಕಮಲ ಅರಳಿಸಲು ಶ್ರಮವಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮೆಟ್ಟಿಲು ಇಳಿಯುವಾಗ ಕಾಲು ಜಾರಿಬಿದ್ದು ಮಾಜಿ ಸಚಿವ ಸುಧಾಕರ್ ಸಹೋದರ ಸಾವು

    ಜಿಲ್ಲೆಯಲ್ಲಿ ನಡೆದ ಎಂ.ಪಿ, ಎಂ.ಎಲ್.ಸಿ ಹಾಗೂ ನಗರಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಗೂಳಿಹಟ್ಟಿ ಶೇಖರ್ ಅವರು ಸಹಕರಿಸಿದ್ದಾರೆ. ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ. ಗ್ರಾಮಪಂಚಾಯತ್ ಚುನಾವಣೆ ವೇಳೆಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಿಜೆಪಿಗ ಬಲ ತಂದಿದ್ದಾರೆ. ಆದ್ದರಿಂದ ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಗೂಳಿಹಟ್ಟಿ ಶೇಖರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಇಲ್ಲವಾದರೆ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ವೇಳೆ ತಕ್ಕ ಪಾಠಕಲಿಸುವುದಾಗಿ ಹಾಗೂ ಸಚಿವ ಸ್ಥಾನ ಸಿಗುವವರೆಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

  • ಹೇಳಕ್ಕೂ ಆಗಲ್ಲ, ಬಿಡಕ್ಕೂ ಆಗಲ್ಲ, ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ- ಸರ್ಕಾರದ ವಿರುದ್ಧ ಗೂಳಿಹಟ್ಟಿ ಶೇಖರ್ ಗುಟುರು

    ಹೇಳಕ್ಕೂ ಆಗಲ್ಲ, ಬಿಡಕ್ಕೂ ಆಗಲ್ಲ, ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ- ಸರ್ಕಾರದ ವಿರುದ್ಧ ಗೂಳಿಹಟ್ಟಿ ಶೇಖರ್ ಗುಟುರು

    ಬೆಂಗಳೂರು: ಸರ್ಕಾರದ ವಿರುದ್ಧ ಶಾಸಕರು ಅಸಮಾಧಾನ ಹೊರ ಹಾಕುತ್ತಲೇ ಇದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಸಭೆ ಕರೆದು ಚರ್ಚಿಸುತ್ತಿದ್ದಾರೆ. ಇದೇ ವೇಳೆ ಇದೀಗ ಸರ್ಕಾರದ ವಿರುದ್ಧ ಮಾಜಿ ಸಚಿವ, ಶಾಸಕ ಗೂಳಿಹಟ್ಟಿ ಶೇಖರ್ ಅಸಮಾಧಾನ ಹೊರ ಹಾಕಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಶಾಸಕರೆಲ್ಲ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇವೆ. ಹೇಳೋದಕ್ಕೂ ಆಗೊಲ್ಲ, ಬಿಡೋದಕ್ಕೂ ಆಗಲ್ಲ. ಅಂತಹ ಪರಿಸ್ಥಿತಿ ನಮ್ಮದಾಗಿದೆ. ಒಂದು ಮಾತನಾಡಿದರೆ ಅದು ದೊಡ್ಡದಾಗುತ್ತೆ, ಒಂದು ಮಾತು ಬಿಟ್ರೆ ಸಣ್ಣದಾಗುತ್ತೆ. ನಾವು ಏನೇ ಮಾತನಾಡಿದರೂ ಕಷ್ಟ ಆಗಿದೆ ಎಂದು ಅಳಲು ತೋಡಿಕೊಂಡರು.

    ನಮಗೂ ಅನೇಕ ಸಮಸ್ಯೆಗಳಿವೆ, ಕ್ಷೇತ್ರಕ್ಕೆ ಹೋದರೆ ಕೆಲಸ ಆಗುತ್ತಿಲ್ಲ ಎಂದು ಜನ ಬೈತಾರೆ. ಮಂತ್ರಿಗಳಿಗೆ ಹೇಳಿಕೊಳ್ಳೋಕೆ ಅವರೇ ಸಿಗುತ್ತಿಲ್ಲ. ನಾವು ಮಾತನಾಡಿದರೆ ಬೇರೆ ಬಣ್ಣ ಕಟ್ತಾರೆ. ಹೀಗಾಗಿ ಜಿಲ್ಲಾವಾರು ಸಭೆ ಕರೆದಿದ್ದಾರೆ. ಸಭೆಯಲ್ಲಿ ನಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳುತ್ತೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅಂತಹ ಸಂದಿಗ್ಧ ಪರಿಸ್ಥಿಯಲ್ಲಿ ನಾವಿದ್ದೇವೆ. ನಾವು ಏನೇ ಮಾತನಾಡಿದರೂ ತಪ್ಪಾಗುತ್ತದೆ. ನಾನು 2009 ರಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯೇ, ಸಿಎಂ, ವರಿಷ್ಠರು ಇದರ ಬಗ್ಗೆ ನಿರ್ಧಾರ ಮಾಡುತ್ತಾರೆ. ಬಡವ ನೀ ಮಡಗ್ದಂಗೆ ಇರು ಅಂತ ಸುಮ್ಮನಿದ್ದೇವೆ ಎಂದು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದರು.

  • ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಇಬ್ಬರ ದುರ್ಮರಣ

    ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಇಬ್ಬರ ದುರ್ಮರಣ

    ಚಿತ್ರದುರ್ಗ: ಕೊರೊನ ವೈರಸ್‍ನಿಂದ ರಾಜ್ಯದ ಎಲ್ಲೆಡೆ ಲಾಕ್‍ಡೌನ್ ಜಾರಿ ಇದ್ದು, ಈ ಲಾಕ್‍ಡೌನ್‍ನಿಂದ ಕಳೆದ ಒಂದು ತಿಂಗಳಿಂದ ಮನೆಯಲ್ಲೇ ಉಳಿದಿದ್ದ ಇಬ್ಬರು ರೈತರ ಜೀವವನ್ನು ವರುಣ ಬಲಿ ಪಡೆದಿದ್ದಾನೆ.

    ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿನಾದ್ಯಂತ ಇಂದು ಭಾರೀ ಗಾಳಿ ಸಹಿತ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ಅಬ್ಬರಿಸಿದ ವರುಣನ ಆರ್ಭಟಕ್ಕೆ ಶ್ರೀರಾಂಪುರ ಹೋಬಳಿಯ ಆಲ್ಗಟ್ಟ ಗ್ರಾಮದ ರೇಣುಖಾರಾಧ್ಯ (35) ಎಂಬ ರೈತನ ಮೇಲೆ ತೆಂಗಿನ ಮರವೊಂದು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಇತ್ತ ಹೊಸದುರ್ಗ ತಾಲೂಕಿನ ಕಸಬಾ ಹೋಬಳಿಯ ಮಧುರೆ ಗ್ರಾಮದ ರಿ. ಸರ್ವೆ ನಂಬರು 78 ರಲ್ಲಿ ಬರುವ ಜಮೀನಿನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರ ನೆಲ್ಲಕ್ಕುರುಳಿದೆ. ಈ ವೇಳೆ ಮರದ ಕೆಳಗೆ ಕುಳಿತಿದ್ದ ಗ್ರಾಮದ ನಿವಾಸಿ ಗೀತಮ್ಮ(45) ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಗಳಿಗೆ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ತಹಶೀಲ್ದಾರ್ ತಿಪ್ಪೇಸ್ವಾಮಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

    ಉಳಿದಂತೆ ಮಾಡದಕೆರೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಗಾಳಿ ಸಹಿತ ಮಳೆ ಸುರಿದ ಹಿನ್ನಲೆಯಲ್ಲಿ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ನೀರು ಕುಡಿಯಲು ಹೋದ ಎರಡು ಎಮ್ಮೆಗಳು ಸಾವನ್ನಪಿದ್ದಾವೆ.

  • ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ತಿರುಗೇಟು

    ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ತಿರುಗೇಟು

    -ಚಾಡಿ ಹೇಳಿ ಅನುಧಾನ ನಿಲ್ಲಿಸೋ ಥರ್ಡ್ ಕ್ಲಾಸ್ ನಾನಲ್ಲ ಎಂದ ಜಿಲ್ಲಾಧ್ಯಕ್ಷ

    ಚಿತ್ರದುರ್ಗ: ಒಗ್ಗಟ್ಟಿನ ಮಂತ್ರ ಜಪಿಸುತ್ತಾ ವಿಧಾನಸಭೆ ಚುನಾವಣೆಯಲ್ಲಿ ಗೂಳಿಹಟ್ಟಿ ಶೇಖರ್ ಪರ ಓಡಾಡಿದ್ದ ಚಿತ್ರದುರ್ಗ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದೆ. ಈ ನಡುವೆ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಜಿಲ್ಲಾಧ್ಯಕ್ಷ ನವೀನ್ ತಿರುಗೇಟು ನೀಡಿದ್ದಾರೆ.

    ಹೊಸದುರ್ಗದ ಬನಶಂಕರಿ ಭವನದಲ್ಲಿ ಭಾನುವಾರ ಸ್ವಾಭಿಮಾನಿ ಗೂಳಿಹಟ್ಟಿ ಶೇಖರ್ ಬಳಗದಿಂದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಗೂಳಿಹಟ್ಟಿ ಶೇಖರ್ ಜಿಲ್ಲಾಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದರು. ಈ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಚಿತ್ರದುರ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ, ಹೊಸದುರ್ಗ ಬಿಜೆಪಿ ಟಿಕೆಟ್ ಆಕಾಂಕ್ಷಿ ನವೀನ್, ತಮ್ಮ ವಿರುದ್ಧ ವರಿಷ್ಠರ ಬಳಿ ಇಲ್ಲಿನ ಬಿಜೆಪಿ ಮುಖಂಡರು ಚಾಳಿ ಹೇಳುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದ್ದರು. ಗೂಳಿಹಟ್ಟಿ ಶೇಖರ್ ಹೇಳುವಂತೆ ನಾವು, ಚಾಡಿ ಹೇಳಿ ಅನುದಾನ ನಿಲ್ಲಿಸುವಂತಹ ಥರ್ಡ್ ಕ್ಲಾಸ್ ಮೆಂಟಾಲಿಟಯವರಲ್ಲ. ನಾನು ಯಾರ ಬಗ್ಗೆಯೂ ಚಾಡಿ ಹೇಳುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

    ಇದೇ ವೇಳೆ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕರ ಕಡೆಗಣನೆ ವಿಚಾರವಾಗಿ ಪ್ರತಿಕ್ರಿಯಿಸಿದ ನವೀನ್, ಈ ವಿಷಯವನ್ನು ಕಾರ್ಯಕರ್ತರ ಸಭೆಯಲ್ಲಿ ಹೇಳುವಂತಹ ಅವಶ್ಯಕತೆ ಇರಲಿಲ್ಲ. ಜೊತೆಗೆ ನಾವು ಶಾಸಕರನ್ನು ಸೈಡ್ ಲೈನ್ ಮಾಡಿಲ್ಲ. ರಾಜ್ಯದ ಯಾವುದೇ ಶಾಸಕರು ಕೂಡ ಈ ರೀತಿ ಬೆಂಬಲಿಗರ ಸಭೆ ಕರೆಯುವುದಿಲ್ಲ. ಆದರೆ ಇವರು ಮಾತ್ರ ನಾನು ಬಿಜೆಪಿಗೆ ಬಂದು ತಪ್ಪು ಮಾಡಿದೆ ಎಂದು ಈ ಹಿಂದೆಯೂ ಹೇಳಿಕೆ ಕೊಟ್ಟಿದ್ದರು. ಈ ರೀತಿಯ ಹೇಳಿಕೆಯನ್ನು ನೀಡಬೇಡಿ ಎಂದು ಮನವಿ ಮಾಡಿದ್ದೇವೆ. ಅಲ್ಲದೇ ನಿಮ್ಮ ಅಭಿಮಾನಿಗಳು ಎಷ್ಟು ಪ್ರೀತಿಯಿಟ್ಟು ಮತ ಹಾಕಿದ್ದಾರೋ, ಅದರ ಎರಡರಷ್ಟು ಅಭಿಮಾನ ಇಟ್ಟು ಬಿಜೆಪಿ ಕಾರ್ಯಕರ್ತರು ನಿಮಗೆ ಮತ ಹಾಕಿದ್ದಾರೆ ಎಂದು ಟಾಂಗ್ ಕೊಟ್ಟರು. ಇದನ್ನು ಓದಿ: ಬಿಜೆಪಿ ವಿರುದ್ಧ ಮತ್ತೆ ಮುನಿದ ಗೂಳಿಹಟ್ಟಿ – ಮುಂದಿನ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸೋ ಇಂಗಿತ

    ಶೇಖರ್ ಅವರು ತಮ್ಮ ಎಲ್ಲಾ ಸಭೆಗಳಲ್ಲಿ ನನ್ನ ಅಭಿಮಾನಿಗಳು ಬಿಜೆಪಿಗೆ ಹೊಂದಿಕೊಳ್ಳುತ್ತಿಲ್ಲ ಎಂದು ಹೇಳುತ್ತಾರೆ. ಅವರಿಗೆ ಇಂತವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಹೇಳುವ ನೈತಿಕತೆಯೇ ಇಲ್ಲ. ನಾನು ಬಿಜೆಪಿ, ನನ್ನ ಬೆಂಬಲಿಗರು ಬಿಜೆಪಿಯವರು ಎನ್ನುವ ಮನಸ್ಥಿತಿ ಅವರಲಿಲ್ಲ. ಇಂತಹ ಮನಸ್ಥಿತಿಯನ್ನು ಅವರು ಹೊಂದಿದ್ದಾರೆ ಎಂದು ಶಾಸಕರ ವಿರುದ್ಧ ನವೀನ್ ಗುಟುರು ಹಾಕಿದ್ದಾರೆ.

    ಕೆಲವರು ಶಾಸಕರಾಗಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಶಾಸಕ ಗೂಳಿಹಟ್ಟಿ ಶೇಖರ್ ಅವರ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಇಂತಹ ಮನೋಭವ ನನಗೆ ಇದ್ದಿದ್ದರೆ 2008 ರಲ್ಲೇ ಅವರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದೆ. ಆದರೆ ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಅವರ ಪಕ್ಷ ವಿರೋಧಿ ಹೇಳಿಕೆಗಳಿಗೆ ಸಮಯದ ಬಂದಾಗ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷೇತರವಾಗಿ ನಿಲ್ಲಬೇಕೆಂದಿರೋ ಶಾಸಕರಿಗೆ ಚುನಾವಣೆ ಸಂದರ್ಭದಲ್ಲಿ ತಕ್ಕ ಉತ್ತರ ಕೊಡುತ್ತೇವೆ. ಆದರೆ ನಮ್ಮ ಪಕ್ಷ ಅವರೇ ಬೇಕು ಎಂದರೂ ಸಹ ಅವರ ಪರವಾಗಿ ಕೆಲಸ ಮಡುತ್ತೇವೆ ಎಂದು ಪಕ್ಷನಿಷ್ಠೆಯನ್ನು ವ್ಯಕ್ತಪಡಿಸಿದರು.

  • ಸರ್ಕಾರ ಬರಲು ಮೊದಲು ಹಳ್ಳಕ್ಕೆ ಬಿದ್ದ ಕುರಿ ನಾನು, ಮಂತ್ರಿಗಿರಿ ಕೊಡಲೇಬೇಕು: ಗೂಳಿ ಹಟ್ಟಿ ಬಾಂಬ್

    ಸರ್ಕಾರ ಬರಲು ಮೊದಲು ಹಳ್ಳಕ್ಕೆ ಬಿದ್ದ ಕುರಿ ನಾನು, ಮಂತ್ರಿಗಿರಿ ಕೊಡಲೇಬೇಕು: ಗೂಳಿ ಹಟ್ಟಿ ಬಾಂಬ್

    ಚಿತ್ರದುರ್ಗ: 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಹಳ್ಳಕ್ಕೆ ಬಿದ್ದ ಮೊದಲ ವಿಕೇಟ್ ಹಾಗೂ ಕುರಿ ನಾನೆ. ಆದರೆ ನನಗೆ ಯಾವುದೇ ರೀತಿಯ ಉಡುಗೊರೆ ಕೊಡಲಿಲ್ಲ, ರೆಡ್ ಕಾರ್ಪೆಟ್ ಹಾಸಲಿಲ್ಲ ಎಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರಲ್ಲಿ ಪಕ್ಷೇತರ ಶಾಸಕನಾಗಿದ್ದ ನಾನು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಲು ಅವಶ್ಯವಿದ್ದ ಮೂರು ಸ್ಥಾನಗಳಲ್ಲಿ ಬಿಜೆಪಿ ಹಾಕಿದ ಗಾಳಕ್ಕೆ ಬಿದ್ದ ಮೊದಲ ವಿಕೆಟ್ ಹಾಗೂ ಮೊದಲ ಕುರಿ. ಈಗ ಸಿಎಂ ಬಿಎಸ್‍ವೈ ಜೊತೆ ಲೆಫ್ಟ್, ರೈಟ್ ಇದ್ದವರು ಅಂದು ಯಾರೂ ರಾಜೀನಾಮೆ ಕೊಟ್ಟು ಬಂದಿರಲಿಲ್ಲ. ಇಷ್ಟಾದರೂ ಪ್ರಬಲ ಖಾತೆ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ, ಮೆಡಿಕಲ್ ಕಾಲೇಜು ಮತ್ತು ಸಾವಿರಾರು ಕೋಟಿ ರೂ. ಅನುದಾನ ಯಾವುದನ್ನೂ ನನಗೆ ಕೊಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಅಂದು ಸರ್ಕಾರ ಬರಲು ನಾನೇ ಪ್ರಮುಖ ಕಾರಣ ಎಂದು ಎದೆ ತಟ್ಟಿ ಹೇಳುತ್ತೇನೆ. 2008ರಲ್ಲಿ ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ, ನೆಮ್ಮದಿಯಿಂದ ಶಾಸಕನಾಗಿ ಅಭಿವೃದ್ಧಿ ಮಾಡಲಾಗಲಿಲ್ಲ. ಹೀಗಾಗಿ ಆಗ ನನಗೆ ಆಗಿರೋ ಅನ್ಯಾಯವನ್ನು ಈಗ ಸರಿಪಡಿಸಬೇಕೆಂದು ಕೇಳುತ್ತೇನೆ. ನಾನು ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೂ ಸ್ಥಾನ ನೀಡುವರೆಂಬ ಭರವಸೆ ಇದೆ ಎಂದರು.

    17 ಜನರ ತ್ಯಾಗದಿಂದಾಗಿ ಈಗ ಬಿಜೆಪಿ ಸರ್ಕಾರ ಬಂದಿದೆ ಎಂದು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿದೆ. ಅವರಲ್ಲಿ ನಾನು ಒಬ್ಬನೆಂದು ಪರಿಗಣಿಸಿ 17 ಜನರಿಗೆ ನ್ಯಾಯ ನೀಡುವುದರ ಜೊತೆಗೆ 18 ನೇಯವನಾಗಿ ನನ್ನನ್ನೂ ಪರಿಗಣಿಸಬೇಕು. ಬೋವಿ ಸಮುದಾಯದ ಕೋಟದಲ್ಲಿ ನನಗೆ ಸಚಿವ ಸ್ಥಾನ ನೀಡುವುದು ಬೇಡ ನನ್ನನ್ನೂ ಅನರ್ಹ ಶಾಸಕರಂತೆ ಸರ್ಕಾರ ಬರಲು ಕಾರಣನೆಂದು ಪರಿಗಣಿಸಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.

    ಹನಿಟ್ರ್ಯಾಪ್ ಮಂತ್ರಿಗಿರಿ ತಪ್ಪಿಸುವ ಷಡ್ಯಂತ್ರ
    ಹನಿಟ್ರ್ಯಾಪ್ ಪ್ರಕರಣದಲ್ಲಿ ತಮ್ಮ ಹೆಸರೂ ಕೇಳಿ ಬಂದಿದ್ದರ ಕುರಿತು ಪ್ರತಿಕ್ರಿಯಿಸಿದ ಗೂಳಿಹಟ್ಟಿ ಶೇಖರ್, ನಾನು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಲ್ಲ. ಆ ರೀತಿ ಯಾರೊಂದಿಗು ಎಲ್ಲೂ ನಡೆದುಕೊಂಡಿಲ್ಲ. ಮಂತ್ರಿಗಿರಿ ತಪ್ಪಿಸುವ ಷಡ್ಯಂತ್ರ ನಡೆಯುತ್ತಿದೆ. ಯಾರೂ ನನಗೆ ಬ್ಲಾಕ್‍ಮೇಲ್ ಮಾಡಿಲ್ಲ. ಮಂತ್ರಿಗಿರಿ ರೇಸ್ ನಿಂದ ಹಿಂದೆ ಸರಿಸಲು ಈ ರೀತಿಯ ಷಡ್ಯಂತ್ರ ರೂಪಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

  • ಭೋವಿ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಅಂದ್ರೆ ರಾಜೀನಾಮೆ: ಬಿಜೆಪಿ ಶಾಸಕರಿಂದ ಎಚ್ಚರಿಕೆ

    ಭೋವಿ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಅಂದ್ರೆ ರಾಜೀನಾಮೆ: ಬಿಜೆಪಿ ಶಾಸಕರಿಂದ ಎಚ್ಚರಿಕೆ

    ಬೆಂಗಳೂರು: ಭೋವಿ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಅಂದ್ರೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಬಿಜೆಪಿಯ ಇಬ್ಬರು ಶಾಸಕರು ಎಚ್ಚರಿಕೆ ನೀಡಿದ್ದಾರೆ.

    ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಭೋವಿ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂದು ಜಿಲ್ಲೆಯ ಶಾಸಕರಾದ ಎಂ.ಚಂದ್ರಪ್ಪ ಹಾಗೂ ಗೂಳಿಹಟ್ಟಿ ಶೇಖರ್ ಒತ್ತಡ ಹೇರಿದ್ದಾರೆ. ಒಂದು ವೇಳೆ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡದಿದ್ದರೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ನಾಯಕರಿಗೆ ಖಡಕ್ ಸಂದೇಶ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಹೀಗಾಗಿ ಈ ಕ್ಷೇತ್ರದಿಂದ ಭೋವಿ ಸಮುದಾಯದ ನಾಯಕ ಆನೇಕಲ್ ನಾರಾಯಾಣಸ್ವಾಮಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಆದರೆ ಸಮುದಾಯದ ಯಾರಿಗೆ ಟಿಕೆಟ್ ನೀಡಿದರೂ ನಮಗೆ ಒಪ್ಪಿಗೆ ಇದೆ ಎಂದು ಶಾಸಕರು ಅಭ್ಯರ್ಥಿಯ ಹೆಸರು ಪ್ರಸ್ತಾಪಿಸದೆ ಬೇಡಿಕೆ ಇಟ್ಟಿದ್ದಾರಂತೆ.

    ಚಿತ್ರದುರ್ಗದಲ್ಲಿ ಇತ್ತೀಚೆಗೆ ಭೋವಿ ಸಮಾವೇಶ ನಡೆಸಿ ರಾಜ್ಯದಲ್ಲಿ ಐದು ಮೀಸಲಾತಿ ಕ್ಷೇತ್ರಗಳಿವೆ. ಅವುಗಳಲ್ಲಿ ಒಂದು ಕ್ಷೇತ್ರದ ಟಿಕೆಟ್ ಅನ್ನು ಭೋವಿ ಸಮುದಾಯದ ನಾಯಕರಿಗೆ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಆದರೂ ಸ್ಥಳೀಯ ಶಾಸಕರು, ಮುಖಂಡರ ಅಭಿಪ್ರಾಯ ಕೇಳದೆ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

     

  • 100 ರೂ. ದಂಡ ಕಟ್ಟಿ ಬಿಡುಗಡೆಯಾದ ಶಾಸಕ ಗೂಳಿಹಟ್ಟಿ ಶೇಖರ್

    100 ರೂ. ದಂಡ ಕಟ್ಟಿ ಬಿಡುಗಡೆಯಾದ ಶಾಸಕ ಗೂಳಿಹಟ್ಟಿ ಶೇಖರ್

    ಬೆಂಗಳೂರು: ಚೆಕ್ ಬೌನ್ಸ್ ಆರೋಪ ಎದುರಿಸುತ್ತಿದ್ದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪೊಲೀಸರ ವಶಕ್ಕೆ ನೀಡಿ, ಬಳಿಕ ಬಿಡುಗಡೆ ಮಾಡಿದೆ.

    ಜಾಮೀನು ರಹಿತ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಶಾಸಕರನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದರು. ತಕ್ಷಣವೇ ಪೊಲೀಸರು ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ವಶಕ್ಕೆ ಪಡೆದರು.

    ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ವಿಚಾರಣೆ ನಡೆಸಿದ ಕೋರ್ಟ್, ಗೈರು ಹಾಜರಾತಿಗೆ 100 ರೂ. ದಂಡ ವಿಧಿಸಿ ಬಿಡುಗಡೆ ಮಾಡಿತು. ಅಷ್ಟೇ ಅಲ್ಲದೆ ಮತ್ತೆ ವಿಚಾರಣೆಗೆ ಗೈರಾದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ.

    ಏನಿದು ಪ್ರಕರಣ?:
    ಶಾಸಕ ಗೂಳಿಹಟ್ಟಿ ಶೇಖರ್ ಅವರ ಮೇಲೆ ಮಹಾಲಕ್ಷ್ಮಿ ಲೇಔಟ್ ಜನತಾ ಕೋ-ಆಪರೇಟಿವ್ ಸೊಸೈಟಿಯು 1.25 ಕೋಟಿ ರೂ. ಚೆಕ್ ಬೌನ್ಸ್ ದೂರು ದಾಖಲಿಸಿತ್ತು. ಈ ಕುರಿತು ಜನತಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಶಾಸಕರು ಮಾತ್ರ ವಿಚಾರಣೆಗೆ ಹಾಜರಾಗದೇ ಗೈರಾಗುತ್ತಿದ್ದರು. ಇದರಿಂದಾಗಿ ಕೋರ್ಟ್ ಶಾಸಕ ಗೂಳಿಹಳ್ಳಿ ಶೇಖರ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಶಾಸಕರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv