Tag: gujrat elections

  • ಅಂದು ಚಾಯ್‍ವಾಲಾ, ಇಂದು ನೀಚ್ ಅಂದ್ರು: ಬಿಜೆಪಿ ಭರ್ಜರಿ ಗೆಲುವಿಗೆ ಕಾರಣವಾಗುತ್ತಾ?

    ಅಂದು ಚಾಯ್‍ವಾಲಾ, ಇಂದು ನೀಚ್ ಅಂದ್ರು: ಬಿಜೆಪಿ ಭರ್ಜರಿ ಗೆಲುವಿಗೆ ಕಾರಣವಾಗುತ್ತಾ?

    ನವದೆಹಲಿ: ಗುಜರಾತ್ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆಬೀಳುವ ಮುನ್ನ ಭಾರೀ ವಾಕ್ಸಮರ ನಡೆದಿದೆ. ಪ್ರಧಾನಿ ಮೋದಿ ಅವರನ್ನು ಮಾನಸಿಕವಾಗಿ ಆಘಾತಗೊಳಿಸುವ ಕಾಂಗ್ರೆಸ್ ಯತ್ನ ಮುಂದುವರಿದಿದೆ. 2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಅಭ್ಯರ್ಥಿ ಮೋದಿಯನ್ನು ಚಾಯ್‍ವಾಲಾ ಎಂದು ಹೀಗಳೆದಿದ್ದ ಮಣಿಶಂಕರ್ ಅಯ್ಯರ್ ಇವತ್ತು ಮತ್ತೆ ಹರಕುಬಾಯಿಯನ್ನು ಹರಿಬಿಟ್ಟು ವಿವಾದಕ್ಕೆ ಕಾರಣರಾಗಿದ್ದಾರೆ.

    ತಾನೊಬ್ಬ ಶಿವಭಕ್ತ ಎನ್ನುತ್ತಿರುವ ಕಾಂಗ್ರೆಸ್‍ನವರಿಗೆ ಈಗ ಬಾಬಾ ಸಾಹೇಬ್‍ಗಿಂತ ಬಾಬಾ ಬೋಲೆ ಅಂದ್ರೆ ಶಿವನ ನೆನಪು ಆಗುತ್ತಿದೆ ಎಂದು ಹೇಳಿ ಪ್ರಧಾನಿ ಮೋದಿ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡುವ ಯತ್ನದಲ್ಲಿ ಮೋದಿಯೊಬ್ಬ `ನೀಚ ಮನುಷ್ಯ’, ಅವರಿಗೆ ಮೌಲ್ಯಗಳೇ ಇಲ್ಲ. ಅಂಥವರ ಬಗ್ಗೆ ಏನು ಹೇಳಲಿಕ್ಕೆ ಆಗುತ್ತೆ ಎಂದು ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ.

    ಈ ಹೇಳಿಕೆಗೆ ಸೂರತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಇದು `ಗುಜರಾತ್ ಜನರಿಗೆ ಮಾಡಿದ ಅವಮಾನ’ ಎಂದು ತಿರುಗೇಟು ನೀಡಿದ್ದರೆ, ಪ್ರಧಾನಿ ವಿರುದ್ಧದ ಇಂಥ ಹೇಳಿಕೆಗಳು ನಾಚಿಕೆಗೇಡು. `ಮೊಘಲ್ ಮನಸ್ಥಿತಿ’ ಅಂತ ಸಚಿವ ರವಿಶಂಕರ್ ಪ್ರಸಾದ್ ಕಿಡಿ ಕಾರಿದರು.

    ಈ ವಿಚಾರ ದೊಡ್ಡದಾಗುತ್ತಿದ್ದಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮಣಿಶಂಕರ್ ಅಯ್ಯರ್ ಬಳಸಿದ ಭಾಷೆ ಸರಿಯಲ್ಲ, ಕಾಂಗ್ರೆಸ್ ಈ ಸಂಸ್ಕೃತಿಯನ್ನು ಬಯಸುವುದಿಲ್ಲ. ಹೀಗಾಗಿ ಮಣಿಶಂಕರ್ ಅಯ್ಯರ್ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಪ್ರತಿಕ್ರಿಯಿಸಿ ಕ್ಷಮೆ ಕೇಳಿ ನಾನು ಆ ಪದವನ್ನು ಜಾತಿ ಆಧಾರದಲ್ಲಿ ಬಳಸಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಮೋದಿ ತಿರುಗೇಟು: ತನ್ನ ವಿರುದ್ಧ ಮಾತನಾಡಿದವರ ಹೇಳಿಕೆಯನ್ನು ಬಳಸಿಕೊಂಡೇ ಅವರಿಗೆ ತಿರುಗೇಟು ನೀಡುವ ಅಭ್ಯಾಸ ಮಾಡಿಕೊಂಡಿರುವ ಮೋದಿ ಅಯ್ಯರ್ ಹೇಳಿಕೆಯನ್ನೇ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಹೌದು ನಾನು, ಕೆಳ ವರ್ಗದಲ್ಲಿ ಜನಿಸಿದ ವ್ಯಕ್ತಿ. ನನ್ನ ಜೀವನದ ಪ್ರತಿಕ್ಷಣವನ್ನು ಬಡವರ ಏಳಿಗೆಗಾಗಿ ಮುಡುಪಾಗಿಟ್ಟಿದ್ದೇನೆ. ಬಡವರು, ದಲಿತರು, ಬುಡಕಟ್ಟು ಜನಾಂಗ ಮತ್ತು ಹಿಂದೂಳಿದ ವರ್ಗಗಳ ಅಭಿವೃದ್ಧಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಅವರು ತನ್ನ ಬಗ್ಗೆ ಏನು ಬೇಕಾದರೂ ಹೇಳಲಿ ನಾನು ನನ್ನ ಕೆಲಸವನ್ನು ಮಾಡುತ್ತಿರುತ್ತೇನೆ. ನನ್ನ ಕೆಲಸ ಮೇಲ್ಮಟ್ಟ(ಉಂಚ್)ದಲ್ಲಿದೆ. ಅಯ್ಯರ್ ಹೇಳಿಕೆ ಗುಜರಾತ್ ಜನತೆಗೆ ಮಾಡಿದ ಅವಮಾನ. ಇದಕ್ಕೆ ಜನ ಬ್ಯಾಲೆಟ್ ಬಾಕ್ಸ್ ನಲ್ಲಿ ಸರಿಯಾದ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿ ವಾಗ್ದಾಳಿ ನಡೆಸಿದರು.

    ಪಾಠ ಕಲಿಯದ ಕಾಂಗ್ರೆಸ್:
    ಒಮ್ಮೆ ಇತಿಹಾಸವನ್ನು ನೋಡಿದಾಗ ಯಾವ ಪದ ಬಳಸಿ ಲೇವಡಿ ಮಾಡಲಾಗುತ್ತದೋ ಆ ಪದ ಮೋದಿ ಅವರ ಯಶಸ್ಸಿಗೆ ಕಾರಣವಾಗುತ್ತದೆ. ಮೋದಿ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡಿದಾಗ ಆ ದಾಳಿಗಳು ಮೋದಿ ಪರ ಅಲೆಯನ್ನು ಸೃಷ್ಟಿ ಮಾಡಿರುವುದು ನಮ್ಮ ಕಣ್ಣ ಮುಂದಿದೆ. 2007ರಲ್ಲಿ ಸೋನಿಯಾ ಗಾಂಧಿ ಮೌತ್ ಕಾ ಸೌದ್ಗಾರ್ (ಸಾವಿನ ಏಜೆಂಟ್) ಎಂದು ಮೋದಿಯನ್ನು ಟೀಕಿಸಿದ್ದರು. ಇದನ್ನೇ ಬಳಸಿಕೊಂಡಿದ್ದ ಮೋದಿ ಅಂದು ಗುಜರಾತ್ ವಿಧಾನಸಭೆ ಚುನಾವಣೆ ಹಿಂದೂ ಮತಗಳನ್ನು ಧ್ರುವೀಕರಣ ಮಾಡಿಕೊಂಡು ಗೆಲವು ಸಾಧಿಸಿ ಸಿಎಂ ಆಗಿದ್ದರು.

    2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಚಾಯ್ ವಾಲಾ ಎಂದು ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ `ಚಾಯ್ ಪೇ ಚರ್ಚಾ’ ಹೆಸರಿನಲ್ಲಿ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಗಿತ್ತು.

    ಈ ಚುನಾವಣೆಯಲ್ಲೇ ಯುವ ಕಾಂಗ್ರೆಸ್ ಕೆಲ ದಿನಗಳ ಹಿಂದೆ ಚಾಯ್‍ವಾಲಾ ಎಂದು ಬಿಂಬಿಸಿ ಗ್ರಾಫಿಕ್ಸ್ ಮಾಡಿದ ಫೋಟೋ ಒಂದನ್ನು ಟ್ವೀಟ್ ಮಾಡಿತ್ತು. ಈ ಟ್ವೀಟ್ ಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅದನ್ನು ಡಿಲೀಟ್ ಮಾಡಿತ್ತು. ಆದರೆ ಇದನ್ನೆ ಬಳಸಿಕೊಂಡ ಮೋದಿ ಹೌದು ನಾನು ಚಾಯ್‍ವಾಲ. ಚಹಾ ಮಾರಾಟ ಮಾಡಿದ್ದೇನೆ. ಆದರೆ ನಿಮ್ಮಂತೆ ನಾನು ದೇಶ ಮಾರಾಟ ಮಾಡಿಲ್ಲ. ಬೇಕಾದ್ರೆ ನೀವು ಚಹಾ ಮಾರಾಟ ಮಾಡಿ ದೇಶ ಮಾತ್ರ ಮಾರಬೇಡಿ ಎಂದು ಹೇಳಿ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ಈ ಚುನಾವಣೆ ಸಂದರ್ಭದಲ್ಲಿ ನಡೆದ ಮನ್ ಕೀ ಬಾತ್ ಕಾರ್ಯಕ್ರಮವನ್ನು ಗುಜರಾತ್ ಬಿಜೆಪಿ ನಾಯಕರು ಚಹಾ ಕುಡಿಯುತ್ತಾ ಕೇಳಿ ಕಾಂಗ್ರೆಸ್ ತಿರುಗೇಟು ನೀಡಿದ್ದರು.

     

     

  • ಸಮೀಕ್ಷೆಗಳು ಏನೇ ಹೇಳಲಿ ಗುಜರಾತ್‍ನಲ್ಲಿ ಗೆಲ್ಲೋದು ನಾವೇ: ಕೈ ಆತ್ಮವಿಶ್ವಾಸಕ್ಕೆ ಕಾರಣ ಏನು?

    ಸಮೀಕ್ಷೆಗಳು ಏನೇ ಹೇಳಲಿ ಗುಜರಾತ್‍ನಲ್ಲಿ ಗೆಲ್ಲೋದು ನಾವೇ: ಕೈ ಆತ್ಮವಿಶ್ವಾಸಕ್ಕೆ ಕಾರಣ ಏನು?

    ಎಲ್ಲ ಸಮೀಕ್ಷೆಗಳು ಗುಜರಾತ್ ನಲ್ಲಿ ಈ ಬಾರಿ ಮತ್ತೆ ಕಮಲ ಅರಳಲಿದೆ ಎಂದು ಹೇಳಿದ್ದರೂ ಕಾಂಗ್ರೆಸ್ ಮಾತ್ರ ಈ ಬಾರಿ ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸದಿಂದ ಪ್ರಚಾರದಲ್ಲಿ ತೊಡಗುತ್ತಿದೆ. ಮೋದಿ ಅಲೆ ಇಲ್ಲ, ಈಗ ಇಲ್ಲಿ ಇರುವುದು ಆಡಳಿತ ವಿರೋಧಿ ಅಲೆ. ಹೀಗಾಗಿ ಬಿಜೆಪಿ ಆಡಳಿತ ಈ ವರ್ಷಕ್ಕೆ ಕೊನೆಯಾಗಲಿದ್ದು ಮತ್ತ ಮತದಾರ ನಮ್ಮ ಕೈ ಹಿಡಿಯಲಿದ್ದಾನೆ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಇಷ್ಟು ಘಂಟಾಘೋಷವಾಗಿ ಕಾಂಗ್ರೆಸ್ ಹೇಳಿಕೊಳ್ಳಲು ಕಾರಣ ಏನಿರಬಹುದು ಎನ್ನುವುದಕ್ಕೆ ಇಲ್ಲಿ ಕೆಲ ಮಾಹಿತಿಗಳನ್ನು ನೀಡಲಾಗಿದೆ.

    1. ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ
    ಕಳೆದ ಇಪ್ಪತ್ತು ವರ್ಷದ ನಿರಂತರ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತೊಮ್ಮೆ ಗುಜರಾತ್ ಚುನಾವಣೆ ಹೋಗುತ್ತಿದೆ. ಸುದೀರ್ಘ ಕಾಲ ಆಡಳಿತ ನಡೆಸಿರುವ ಬಿಜೆಪಿ ಸಾಕಷ್ಟು ಕೆಲಸಗಳ ಮಾಡಿದರೂ ಅದರ ಹೊರತಾಗಿ ಆಡಳಿತ ವಿರೋಧಿ ಅಲೆ ಎದ್ದಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಹೆಚ್ಚು ರೈತ ವರ್ಗವಿರುವ ಅಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಬೆಲೆಗಳು ಇಳಿಕೆಯಾಗಿದ್ದರೂ ಕೆಲ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಜೊತೆಗೆ ಸರ್ಮಪಕ ನೀರಾವರಿ ಸೌಲಭ್ಯ ಕಲ್ಪಿಸಿದ್ದರೂ ಅದು ಕೆಲ ರೈತರ ಪಾಲಾಗಿದೆ. ಸಾಕಷ್ಟು ರೈತರು ನೀರಾವರಿ ಯೋಜನೆ ಲಾಭ ಪಡೆದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸಿಎಂ ಬದಲಾದರೂ ಪರಿಣಾಮಕಾರಿ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪವಿದೆ.

    2. ಮತ ಹಂಚಿಕೆಯಲ್ಲಿ ಕುಸಿತ
    2012ರಲ್ಲಿ 72.5% ಮತದಾನ ನಡೆದಿದ್ದು, 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 63.6% ಮತದಾನ ನಡೆದಿದ್ದು, ಎಲ್ಲ 26 ಸ್ಥಾನಗಳನ್ನು ಬಿಜೆಪಿ ಜಯಗಳಿಸಿತ್ತು. ಬಿಜೆಪಿಗೆ 60.1% ಮತ ಬಿದ್ದರೆ, ಕಾಂಗ್ರೆಸ್‍ಗೆ 33.5% ಮತ ಬಿದ್ದಿತ್ತು. ವಿಧಾನ ಸಭಾ ಚುನಾವಣೆಗೆ ಹೋಲಿಸಿದರೆ ಲೋಕಸಭೆಯಲ್ಲಿ ಬಿಜಿಪಿಗೆ ಬಿದ್ದ ಪ್ರಮಾಣ ಕಡಿಮೆಯಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ವಿವಿಧ ಚುನಾವಣೆಯಲ್ಲಿ ಬಿಜೆಪಿಗೆ ಬೀಳುತ್ತಿರುವ ಮತ ಪ್ರಮಾಣ ಕಡಿಮೆಯಾಗಿದೆ. ಕೆಲ ದಿನಗಳ ಹಿಂದೆ ಪ್ರಕಟವಾದ ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಸಾಬೀತಾಗಿದೆ.

    3. ನಾಯಕತ್ವದ ಸಮಸ್ಯೆ
    ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅವರಂತಹ ಡೈನಾಮಿಕ್ ಮುಖ್ಯಮಂತ್ರಿ ಅಭ್ಯರ್ಥಿ ಸದ್ಯ ಬಿಜೆಪಿಯಲ್ಲಿ ಯಾರು ಕಂಡು ಬರುತ್ತಿಲ್ಲ. ಮೋದಿ ಬಳಿಕ ಆನಂದಿ ಬೆನ್ ಮುಖ್ಯಮಂತ್ರಿ ಆದರೂ ನಂತರದ ಬೆಳವಣಿಗೆಯಲ್ಲಿ ಅವರನ್ನು ಕೆಳಗೆ ಇಳಿಸಿ ವಿಜಯ್ ರೂಪಾನಿ ಸಿಎಂ ಆಗಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇರುವುದು ಸ್ಪಷ್ಟವಾಗಿದೆ.

    4. ಬಹುಪಾಲು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳು
    ಸುಮಾರು 50% ಜನಸಂಖ್ಯೆ ಗುಜರಾತ್‍ನ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದೆ. ಸಾಂಪ್ರದಾಯಿಕವಾಗಿ ನಗರ ಪ್ರದೇಶಗಳಲ್ಲಿ ಬಿಜೆಪಿ ಶಕ್ತಿಶಾಲಿಯಾಗಿದೆ. ನಗರದ ಯುವ ಜನತೆ ಮೋದಿ ಪರವಾಗಿದ್ದರೆ ಹಳ್ಳಿ ಮಂದಿ ಇನ್ನು ಕಾಂಗ್ರೆಸ್ ಪರವಾಗಿದ್ದಾರೆ. ಬಿಜೆಪಿಯಲ್ಲಿ 54% ಶಾಸಕರು ನಗರ ಭಾಗದಿಂದ ಆಯ್ಕೆಯಾದರೆ, ಕಾಂಗ್ರೆಸ್ ನ 74% ಶಾಸಕರು ಗ್ರಾಮೀಣ ಭಾಗದಿಂದ ಆಯ್ಕೆಯಾಗಿ ಬರುತ್ತಾರೆ. ಈ ಹಿಂದೆ ಬಿಜೆಪಿ ಗೆದ್ದಿರುವ ಆರು ಮುನ್ಸಿಪಲ್ ಪ್ರದೇಶಗಳು ನಗರ ಪ್ರದೇಶ ವ್ಯಾಪ್ತಿಯದು. ಗ್ರಾಮೀಣ ಪ್ರದೇಶಗಳಲ್ಲಿ 79 ಸ್ಥಾನಗಳ ಪೈಕಿ ಕೇವಲ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಗುಜರಾತ್ ವಿಧಾನಸಭೆ ಸ್ಥಾನಗಳ ಸಂಖ್ಯೆ 182 ಈ ಪೈಕಿ ಗ್ರಾಮೀಣ ಭಾಗದಲ್ಲಿ 112 ಸೀಟುಗಳಿದ್ದರೆ, ನಗರ ಭಾಗದಲ್ಲಿ 70 ಸೀಟುಗಳಿವೆ. ಹೀಗಾಗಿ ಮೇಲಿನ ಮುನ್ಸಿಪಲ್ ಚುನಾವಣಾ ಫಲಿತಾಂಶದ ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿಗಿಂತ ಕಾಂಗ್ರೆಸ್ ಒಂದು ಕೈ ಮೇಲಿದೆ.

    5. ಕಾಂಗ್ರೆಸ್‍ನತ್ತ ಮುಸ್ಲಿಮರು ವಾಪಸ್?
    ಸುಮಾರು 20-25% ರಷ್ಟು ಪ್ರಮಾಣದಲ್ಲಿ ಮುಸ್ಲಿಮರು ಗುಜರಾತ್ ನಲ್ಲಿ ವಾಸವಾಗಿದ್ದಾರೆ. 2012 ರ ಮಾಹಿತಿ ಪ್ರಕಾರ 31% ಮತಗಳನ್ನು ಇವರು ಬಿಜೆಪಿ ಪರವಾಗಿ ಚಲಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸುತ್ತಿದ್ದು ಈ ಬಾರಿ ಒಬ್ಬರಿಗೂ ಟಿಕೆಟ್ ನೀಡಿಲ್ಲ. ಇತ್ತೀಚಿಗೆ ಗೋವು ಹಾಗೂ ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿ ಪರಿಣಾಮ ಬೀರಬಹುದು. ರಾಜ್ಯದ ಜನಸಂಖ್ಯೆಯಲ್ಲಿ 10% ಮುಸ್ಲಿಂ ಮತಗಳ ಪಾಲನ್ನು ಬಿಜೆಪಿ ಹೊಂದಿದೆ. ಹೀಗಾಗಿ ಮೂರನೇ ಎರಡು ಭಾಗದಷ್ಟು ಮತಗಳ ಕಳೆದುಕೊಂಡರೆ ಇದು ರಾಜ್ಯದ 36 ಸ್ಥಾನಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ:ಗುಜರಾತ್ ಚುನಾವಣೆ: ಮತ್ತೆ ಮೋದಿ ಗೆಲುವಿಗೆ ಕಾಂಗ್ರೆಸ್ ಹಾಕಿ ಕೊಟ್ಟಿತಾ ರೆಡ್ ಕಾರ್ಪೆಟ್?

    6. ಕೇಂದ್ರ ಸರ್ಕಾರದ ಪ್ರಭಾವ
    ಈ ವರ್ಷದ ಅಂತ್ಯದ ವೇಳೆಗೆ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮೂರುವರೆ ವರ್ಷಗಳನ್ನು ಪೂರೈಸಲಿದೆ. ಕೇಂದ್ರ ಸರ್ಕಾರದ ಆಡಳಿತವೂ ಕೂಡಾ ಗುಜರಾತ್ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯುಂತಿಲ್ಲ. ಗುಜರಾತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳಿದ್ದಾರೆ. ಹೀಗಾಗಿ ನೋಟ್‍ಬ್ಯಾನ್, ಜಿಎಸ್‍ಟಿ ಜಾರಿಯಿಂದ ತೊಂದರೆಯಾಗಿ ವ್ಯಾಪಾರ ಕುಂಠಿತಗೊಂಡಿದ್ದಲ್ಲಿ ಅವರ ಮತ ನಮಗೆ ಬಿದ್ದೇ ಬೀಳುತ್ತದೆ ಎಂದು ಹೇಳುತ್ತಿದ್ದಾರೆ ಕಾಂಗ್ರೆಸ್ ನಾಯಕರು.

    7. ಪಾಟೀದಾರ್ ಸಮುದಾಯದ ವಿರೋಧ
    ಪಾಟೀದಾರ್ ಮೀಸಲಾತಿ ಆಂದೋಲನವನ್ನು ನಿರ್ವಹಿಸುವಲ್ಲಿ ಬಿಜೆಪಿ ಆರಂಭದಲ್ಲಿ ಎಡವಿತ್ತು. ಇದರಿಂದ ಇದು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಈ ಆಂದೋಲನವಾಗಿ ಬೆಳೆಯತೊಡಗಿತು ಇದರ ಜೊತೆಗೆ ಆನಂದಿಬೇನ್ ಪಟೇಲ್ ಸಿಎಂ ಆದ ಬಳಿಕವೂ ಈ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಬೆಂಬಲ ವ್ಯಕ್ತವಾಗದ ಹಿನ್ನೆಲೆ ಪಾಟೀದಾರರು ಬದಲಿ ರಾಜಕೀಯ ಆಯ್ಕೆಗಳನ್ನು ಹುಡುಕಿಕೊಳ್ಳುವಂತೆ ಮಾಡಿದೆ. ಗುಜರಾತ್ ನಲ್ಲಿ ಸುಮಾರು 16% ಪಾಟೀದಾರ್ ಸಮುದಾಯವಿದೆ. ಇವರು ಸಾಂಪ್ರದಾಯಿಕವಾಗಿ ಬಿಜೆಪಿ ಬೆಂಬಲಿರಾಗಿದ್ದು ಕಳೆದ ಲೋಕಸಭೆಯಲ್ಲಿ 70% ಮತಗಳನ್ನು ಬಿಜೆಪಿ ಪರವಾಗಿ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಪಾಟೀದಾರ್ ಸಮುದಾಯ ಬಿಜೆಪಿಯ ಒಟ್ಟು ಮತಹಂಚಿಕೆಯಲ್ಲಿ ಐದನೇ ಒಂದು ಭಾಗವನ್ನು ಹೊಂದಿದ್ದು, 73 ಸ್ಥಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ಈ ಮತಗಳು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಐತಿಹಾಸಿಕ ಗೆಲುವಿಗೆ ಸಹಕಾರಿಯಾಗಲಿದೆ. 2012 ರಲ್ಲಿ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನೇತೃತ್ವದ ಗುಜರಾತ್ ಪರಿವರ್ತನಾ ಪಾರ್ಟಿ 3.6% ಮತಗಳನ್ನು ಪಡೆದುಕೊಂಡಿತು ಇದಷ್ಟೇ ಅಲ್ಲದೇ ಸೌರಾಷ್ಟ್ರ ಮತ್ತು ಕಚ್ ನಲ್ಲಿ 23 ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು. 2012ಕ್ಕೆ ಹೋಲಿಸಿಕೊಂಡರೆ ಇದರ ಪ್ರಮಾಣ ಮತ್ತಷ್ಟು ದೊಡ್ಡದಾಗಿದ್ದು ಪಾಟೀದಾರ್  ಅವರನ್ನು ನ್ನು ಯಾರೇ ಎದುರು ಹಾಕಿಕೊಂಡರು ಅಪಾಯ ಖಚಿತ. ಇದನ್ನೂ ಓದಿ: ಮತ್ತೆ ಗುಜರಾತ್‍ನಲ್ಲಿ ಕಮಲ ಅರಳೋದು ಖಚಿತ! ಯಾವ ಸಮೀಕ್ಷೆ ಏನು ಹೇಳಿದೆ?