Tag: GujaratTaitans

  • ಗುಜರಾತ್‌ ಟೈಟಾನ್ಸ್‌ಗೆ ನೂತನ ಸಾರಥಿ – ಕ್ಯಾಪ್ಟನ್‌ ಗಿಲ್‌ ಫಸ್ಟ್‌ ರಿಯಾಕ್ಷನ್‌ ಏನು?

    ಗುಜರಾತ್‌ ಟೈಟಾನ್ಸ್‌ಗೆ ನೂತನ ಸಾರಥಿ – ಕ್ಯಾಪ್ಟನ್‌ ಗಿಲ್‌ ಫಸ್ಟ್‌ ರಿಯಾಕ್ಷನ್‌ ಏನು?

    ಮುಂಬೈ: ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ತವರು ಮುಂಬೈ ಇಂಡಿಯನ್ಸ್‌ (Mumbai Indians) ಸೇರ್ಪಡೆಗೊಂಡ ಬಳಿಕ ಗುಜರಾತ್‌ ಟೈಟಾನ್ಸ್‌ ‌ಯುವ ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ಹೆಗಲಿಗೆ ನಾಯಕತ್ವದ ಹೊಣೆ ನೀಡಲಾಗಿದೆ.

    ಈ ಬಗ್ಗೆ ಗುಜರಾತ್‌ ಟೈಟಾನ್ಸ್‌ (GujaratTaitans) ತನ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಶುಭಮನ್‌ ಗಿಲ್‌ ಸಹ ನಾಯಕತ್ವದ ಹೊಣೆ ನೀಡಿದ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ್ದಾರೆ. ಗುಜರಾತ್ ಟೈಟಾನ್ಸ್‌ನ ನಾಯಕತ್ವ ವಹಿಸಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ. ಇಂತಹ ಉತ್ತಮ ತಂಡವನ್ನು ಮುನ್ನಡೆಸಲು ಫ್ರಾಂಚೈಸಿ ನನ್ನ ಮೇಲೆ ನಂಬಿಕೆಯಿಟ್ಟು ನಾಯಕತ್ವದ ಹೊಣೆ ನೀಡಿದೆ. ಇದನ್ನು ಕೇವಲ ಧನ್ಯವಾದ ಹೇಳಿ ಮುಗಿಸಲಾರೆ. ಈ ಟೂರ್ನಿಯನ್ನು ಸ್ಮರಣೀಯವಾಗಿಸೋಣ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    ಶುಭಮನ್‌ ಗಿಲ್‌ ಗುಜರಾತ್‌ ಟೈಟಾನ್ಸ್‌ ಪರ ಆಡಿರುವ 2 ಆವೃತ್ತಿಯ 33 ಇನ್ನಿಂಗ್ಸ್‌ಗಳಲ್ಲಿ, 47.34 ಸರಾಸರಿಯಲ್ಲಿ 1,373 ರನ್‌ ಬಾರಿಸಿದ್ದಾರೆ. ಅದರಲ್ಲೂ 2023ರ 16ನೇ ಆವೃತ್ತಿಯ ಐಪಿಎಲ್‌ನಲ್ಲಿ 17 ಪಂದ್ಯಗಳಿಂದ 59.33 ಸರಾಸರಿಯಲ್ಲಿ ಒಟ್ಟು 890 ರನ್‌ ಬಾರಿಸಿದ್ದರು. ಇದರಲ್ಲಿ 3 ಶತಕ, 4 ಅರ್ಧ ಶತಕಗಳೂ ಸೇರಿತ್ತು. ಈ ಆವೃತ್ತಿಯಲ್ಲಿ ಒಟ್ಟು 890 ರನ್‌ ಗಳಿಸುವ ಮೂಲಕ ಆರೆಂಜ್‌ ಕ್ಯಾಪ್‌ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಜೊತೆಗೆ ಅತಿಹೆಚ್ಚು ರನ್‌ ಗಳಿಸಿದ್ದಕ್ಕಾಗಿ 10 ಲಕ್ಷ ರೂ. ಬಹುಮಾನವನ್ನೂ ಗಿಟ್ಟಿಸಿಕೊಂಡರು. ಅದರಲ್ಲೂ ಸೆಮಿಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಅಬ್ಬರಿಸಿದ್ದ ಗಿಲ್‌ 60 ಎಸೆತಗಳಲ್ಲೇ 129 ರನ್‌ ಬಾರಿಸಿದ್ದರು. ಇದರಿಂದ ತಂಡವು ಅಧಿಕ ರನ್‌ಗಳ ಜಯ ಸಾಧಿಸಿತ್ತು.

    2 ಆವೃತ್ತಿಗಳಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿದ್ದ ಪಾಂಡ್ಯ ಪ್ರವೇಶಿಸಿದ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಹಾಗೂ 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಸ್ಥಾನ ತಂದುಕೊಟ್ಟಿದ್ದರು. ಇದನ್ನೂ ಓದಿ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಲ್ಲಿ ನಡೆಯುವುದು ಅನುಮಾನ

  • IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    ಮುಂಬೈ: ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ (Hardik Pandya) ಅಧಿಕೃತವಾಗಿ ಮುಂಬೈ ಇಂಡಿಯನ್ಸ್‌ (Mumbai Indians) ಬಳಗ ಸೇರಿದ್ದಾರೆ. ನಾಯಕನಾಗಿ 2 ವರ್ಷಗಳ ಕಾಲ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿದ್ದ ಪಾಂಡ್ಯ ತಂಡ ಪ್ರವೇಶಿಸಿದ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಹಾಗೂ 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಸ್ಥಾನ ತಂದುಕೊಟ್ಟಿದ್ದರು.

    ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್‌ ಟೈಟಾನ್ಸ್‌ (GujaratTaitans) ತಂಡ ಐಪಿಎಲ್ 2024 ಟೂರ್ನಿಗೆ ಪ್ರಕಟ ಮಾಡಿದ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಸೇರಿಸಿತ್ತು. ಆದ್ರೆ, ಇದಾದ ಕೆಲವೇ ಗಂಟೆಗಳಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಟ್ರೇಡಿಂಗ್ ವಿಂಡೋ ಮೂಲಕ ಮುಂಬೈ ಇಂಡಿಯನ್ಸ್‌ ಸೇರಿದ್ದಾರೆ. ಹಾರ್ದಿಕ್ ಸಲುವಾಗಿ ಟೈಟಾನ್ಸ್‌ ತಂಡಕ್ಕೆ ಮುಂಬೈ ಇಂಡಿಯನ್ಸ್‌ 15 ಕೋಟಿ ರೂ. ನೀಡಲಿದೆ ಎಂದು ವರದಿಯಾಗಿದೆ.

    ಗುಜರಾತ್‌ ಟೈಟಾನ್ಸ್‌ ತಂಡದಿಂದ ಹಾರ್ದಿಕ್ ಪಾಂಡ್ಯ ಹೊರಬಂದಿರುವ ಕಾರಣ ಯುವ ಆರಂಭಿಕ ಬ್ಯಾಟರ್‌ ಶುಭಮನ್ ಗಿಲ್‌ (Shubhman Gill) ತಂಡದ ಕ್ಯಾಪ್ಟನ್‌ ಆಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್‌ ತಾನು ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಿದ ಬಳಿಕ ತನ್ನ ಖಾತೆಯಲ್ಲಿ 15.25 ಕೋಟಿ ರೂ. ಮಾತ್ರವೇ ಹೊಂದಿತ್ತು. ಈಗ ಹಾರ್ದಿಕ್‌ ಪಾಂಡ್ಯ ಖರೀದಿ ಸಲುವಾಗಿ ತನ್ನ ಸ್ಟಾರ್‌ ಆಲ್‌ರೌಂಡರ್‌ ಕ್ಯಾಮರೂನ್‌ ಅವರನ್ನು ಆರ್‌ಸಿಬಿಗೆ (RCB) ಬಿಟ್ಟುಕೊಡುವ ಮೂಲಕ ಪರ್ಸ್‌ ಮೊತ್ತ ಹೆಚ್ಚಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿದೆ. ಈ ಸಲುವಾಗಿ ಉಳಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಲು ನವೆಂಬರ್‌ 26 ಅಂತಿಮ ದಿನವಾಗಿತ್ತು. ಆದರೂ, ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಇರುವ ಟ್ರೇಡಿಂಗ್‌ ವಿಂಡೋ ಡಿಸೆಂಬರ್‌ 12ರ ವರೆಗೆ ತೆರೆದಿರಲಿದೆ. ಹೀಗಾಗಿ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸುವ ಡೀಲ್‌ ಮುಗಿಸಲಾಗಿದೆ.

    ಐಪಿಎಲ್‌ 2014 ಟೂರ್ನಿಯಿಂದ 2021ರ ಆವೃತ್ತಿವರಗೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡಿ 5 ಬಾರಿ ಟ್ರೋಫಿ ಗೆದ್ದಿದ್ದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಬಳಿಕ ಹೊಸ ಫ್ರಾಂಚೈಸಿ ಗುಜರಾತ್‌ ಟೈಟಾನ್ಸ್‌ ಸೇರಿದ್ದರು. ಐಪಿಎಲ್ 2022 ಟೂರ್ನಿಯಲ್ಲಿ ಮೊದಲ ಪ್ರಯತ್ನದಲ್ಲೇ ಟೈಟಾನ್ಸ್‌ಗೆ ಟ್ರೋಫಿ ಗೆದ್ದುಕೊಟ್ಟರು. ಐಪಿಎಲ್ 2023 ಟೂರ್ನಿಯಲ್ಲೂ ಫೈನಲ್‌ಗೆ ಮುನ್ನಡೆಸಿದರಾದರೂ, ಸಿಎಸ್‌ಕೆ ಎದುರು ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು.

    ಹಾರ್ದಿಕ್ ಪಾಂಡ್ಯ ಈ ಮೂಲಕ ಐಪಿಎಲ್‌ ಟ್ರೇಡಿಂಗ್ ವಿಂಡೋ ಮೂಲಕ ಬೇರೆ ತಂಡ ಸೇರಿದ 3ನೇ ಕ್ಯಾಪ್ಟನ್‌ ಆಗಿದ್ದಾರೆ. ಐಪಿಎಲ್ 2020 ಟೂರ್ನಿ ವೇಳೆ ರವಿಚಂದ್ರನ್ ಅಶ್ವಿನ್ ಮತ್ತು ಅಜಿಂಕ್ಯ ರಹಾನೆ ಬೇರೆ ತಂಡಗಳನ್ನು ಸೇರಿದ ಕ್ಯಾಪ್ಟನ್‌ಗಳಾಗಿದ್ದರು.

    ಏನಿದು ಟ್ರೇಡ್‌ ವಿಂಡೋ ನಿಯಮ?
    ಫ್ರಾಂಚೈಸಿಗಳು ಪರಸ್ಪರ ಆಟಗಾರರನ್ನ ವಿನಿಮಯ ಮಾಡಿಕೊಳ್ಳಬಹುದು ಅಥವಾ ನಗದು ವ್ಯವಹಾರಗಳಲ್ಲಿ ಆಟಗಾರರನ್ನು ಖರೀದಿಸಬಹುದು. ಈ ಸಂಪೂರ್ಣ ವಿಷಯದಲ್ಲಿ ಐಪಿಎಲ್ ಆಡಳಿತ ಮಂಡಳಿಯು ಅಂತಿಮ ಅಧಿಕಾರ ನೀಡಿದೆ. ಹೆಚ್ಚಿನ ಫ್ರಾಂಚೈಸಿಗಳು ಒಂದೇ ಆಟಗಾರನನ್ನು ಖರೀದಿಸಲು ಬಯಸಿದರೆ. ಈ ಸಂದರ್ಭದಲ್ಲಿ ಫ್ರಾಂಚೈಸಿ ತನ್ನ ಆಟಗಾರ ಯಾವ ತಂಡಕ್ಕೆ ಹೋಗಬೇಕೆಂದು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತದೆ. ಆದರೆ ಆಟಗಾರನ ವ್ಯಾಪಾರ ಅಥವಾ ವರ್ಗಾವಣೆಯ ಮೊದಲು ಆಟಗಾರನ ಒಪ್ಪಿಗೆ ಕೂಡ ಅಗತ್ಯ. ಆಟಗಾರನು ನಿರಾಕರಿಸಿದರೆ, ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ.