Tag: gudi padwa

  • ಯುಗಾದಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆಲ್ಲಾ ಆಚರಿಸುತ್ತಾರೆ?

    ಯುಗಾದಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆಲ್ಲಾ ಆಚರಿಸುತ್ತಾರೆ?

    ಯುಗಾದಿ ಎಂದರೆ ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಮೊದಲ ದಿನ. ಯುಗಾದಿ (Ugadi) ಎಂಬ ಪದವು ಸಂಸ್ಕೃತದಿಂದ ಬಂದಿದೆ. ಹಿಂದೂಗಳು ಈ ದಿನವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯುಗಾದಿಯು ಒಂದು ಪ್ರಮುಖ ವಿಶ್ವ ಚಕ್ರದ ಆರಂಭವನ್ನು ಸೂಚಿಸುತ್ತದೆ. ಯುಗಾದಿಯನ್ನು ವಿಶೇಷವಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಜನರು ಆಚರಿಸುತ್ತಾರೆ.

    ಕರ್ನಾಟಕದಲ್ಲಿ ಯುಗಾದಿ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಎಂದು ಆಚರಿಸಿದರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ (Gudi Padwa), ತಮಿಳುನಾಡಿನಲ್ಲಿ ಪುತಂಡು, ಪಂಜಾಬ್‌ನಲ್ಲಿ ಬೈಸಾಕಿ, ಕೇರಳದಲ್ಲಿ ವಿಷು ಎಂದು ಆಚರಿಸಲಾಗುತ್ತದೆ. ಇದನ್ನೂ ಓದಿ: ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ

    ಆಂಧ್ರಪ್ರದೇಶ ಮತ್ತು ತೆಲಂಗಾಣದ ಯುಗಾದಿ

    ಪೂಜೆ ಮತ್ತು ಅಭ್ಯಂಗ ಸ್ನಾನದೊಂದಿಗೆ ಪ್ರಾರಂಭವ ಹಬ್ಬದ ಆಚರಣೆ. ಮನೆಗಳನ್ನು ಸ್ವಚ್ಛಗೊಳಿಸಿ ಮಾವಿನ ಎಲೆ ತೋರಣ ಮತ್ತು ರಂಗೋಲಿಗಳಿಂದ ಅಲಂಕರಿಸಲಾಗುತ್ತದೆ. ಮುಂದೆ ಪಂಚಾಂಗ ಓದುವಿಕೆಯೊಂದಿಗೆ ವರ್ಷದ ಒಳಿತುಗಳ ಬಗ್ಗೆ ತಿಳಿಯುತ್ತಾರೆ. ಜೀವನದ ವಿವಿಧ ಅನುಭವಗಳನ್ನು ಪ್ರತಿನಿಧಿಸುವ ಆರು ರುಚಿಗಳನ್ನು ಹೊಂದಿರುವ ʻಯುಗಾದಿ ಪಚಡಿʼ ಎಂಬ ಸಾಂಕೇತಿಕ ಖಾದ್ಯವನ್ನು ತಯಾರಿಸಲಾಗುತ್ತದೆ. ಇದನ್ನೂ ಓದಿ: ಯುಗಾದಿ ಸ್ಪೆಷಲ್;‌ ಆರೋಗ್ಯಕರ ಪಚಡಿ ರೆಸಿಪಿ!

    ಕರ್ನಾಟಕದ ಯುಗಾದಿ

    ಯುಗಾದಿಯಂದು ಪ್ರಾರ್ಥನೆ ಮತ್ತು ಎಣ್ಣೆ ಸ್ನಾನದೊಂದಿಗೆ ದಿನವನ್ನು ಆರಂಭಿಸುತ್ತಾರೆ. ನಂತರ ಬೇವು ಮತ್ತು ಬೆಲ್ಲದ ಸೇವಿಸುತ್ತಾರೆ. ಇದು ಜೀವನದ ಸಿಹಿ ಮತ್ತು ಕಹಿ ಕ್ಷಣಗಳನ್ನು ಸಂಕೇತಿಸುತ್ತದೆ. ಅಂದು ದೇವಾಲಯಗಳಿಗೆ ತೆರಳಿ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ.

    ಮಹಾರಾಷ್ಟ್ರ ಮತ್ತು ಗೋವಾದ ಗುಡಿ ಪಾಡ್ವ

    ವಸಂತ ಋತುವಿನ ಆಗಮನ ಮತ್ತು ರಬಿ ಬೆಳೆಗಳ ಕೊಯ್ಲಿಗೆ ಸೂಚಿಸುವ ಹಬ್ಬದಂದು ಮನೆಗಳಲ್ಲಿ ಗುಡಿ ಅಂದರೆ ಧ್ವಜ ಹಾರಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ದುಷ್ಟಶಕ್ತಿಗಳನ್ನು ದೂರವಿಡುತ್ತದೆ ಎಂದು ನಂಬಲಾದ ಗುಡಿಯನ್ನು ಉದ್ದವಾದ ಬಿದಿರಿನ ಕೋಲಿನ ಮೇಲೆ ಹಳದಿ, ಹಸಿರು ಅಥವಾ ಕೆಂಪು ಬಣ್ಣದ ರೇಷ್ಮೆ ಬಟ್ಟೆಯಿಂದ ಕಟ್ಟಲಾಗುತ್ತದೆ. ಗುಡಿಯ ಮೇಲೆ ಬೇವಿನ ಎಲೆ, ಮಾವಿನ ಎಲೆ, ಹೂವು ಮತ್ತು ಸಕ್ಕರೆ ಹರಳುಗಳ ಹಾರವನ್ನು ಹಾಕಿ, ತಲೆಕೆಳಗಾದ ಕಂಚು, ಬೆಳ್ಳಿ ಅಥವಾ ತಾಮ್ರದ ಕಲಶದಿಂದ ಅಲಂಕರಿಸುವ ಮೂಲಕ ಆಚರಿಸುತ್ತಾರೆ. ಇದನ್ನೂ ಓದಿ: ಯುಗಾದಿ ವಿಶೇಷ – ಏನಿದು ಗುಡಿಪಾಡ್ವ? ಯಾಕೆ ಈ ಆಚರಣೆ?

    ತಮಿಳುನಾಡಿನ ಪುತಂಡು

    ತಮಿಳರು ಹೊಸ ವರ್ಷವನ್ನು ಸ್ವಾಗತಿಸಲು ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಹಳೆಯ ವಸ್ತುಗಳನ್ನು ಎಸೆದು, ಮನೆಯ ಮುಂದೆ ರಂಗೋಲಿಯನ್ನು ಬಿಡಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ʻಮಾಂಗ ಪಚಡಿʼ ಎಂಬ ವಿಶೇಷ ಪದಾರ್ಥವನ್ನು ತಯಾರಿಸುತ್ತಾರೆ. 

    ಕೇರಳದ ವಿಷು

    ಕೇರಳದಲ್ಲಿ ಈ ಹಬ್ಬದಂದು ದೇವರ ಕೋಣೆಯಲ್ಲಿ ʻವಿಷು ಕಣಿʼ ಇಡುವ ಸಂಪ್ರದಾಯವಿದೆ. ವಿಷುಕಣಿ ವಿಷು ಹಬ್ಬದ ಪ್ರಮುಖ ಭಾಗವಾಗಿದೆ. ವಿಷು ಹಬ್ಬದ ಹಿಂದಿನ ದಿನವೇ ಮನೆಯನ್ನು ಶುಚಿಗೊಳಿಸಿ ಶೃಂಗಾರ ಮಾಡುತ್ತಾರೆ. ದೇವರ ಕೋಣೆಯಲ್ಲಿ ಕಣಿ ಕಾಣಲು ಬೇಕಾದ ವಸ್ತುಗಳನ್ನು ತಯಾರು ಮಾಡುತ್ತಾರೆ. ದೇವರ ವಿಗ್ರಹ, ಫಲ ವಸ್ತುಗಳು, ನವ ಧಾನ್ಯ, ಹೊಸ ಬಟ್ಟೆ, ಧನ ಇತ್ಯಾದಿಯನ್ನು ಹೊಸ ಮಡಿಕೆಯಲ್ಲಿ ಅಥವಾ ಉರುಳಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಹಾಗೂ ಕನ್ನಡಿಯನ್ನು ಇಡುತ್ತಾರೆ. ಇದನ್ನೂ ಓದಿ: ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ಈ ರೀತಿಯಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಾದ ಆಚರಣೆಗಳ ಮೂಲಕ ಯುಗಾದಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ನವ ಸಂವತ್ಸರದ ಯುಗಾದಿಯು ಕೆಡುಕನ್ನು ಹೋಗಲಾಡಿಸಿ ಒಳಿತನ್ನು ತರುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

  • ಯುಗಾದಿ ವಿಶೇಷ – ಏನಿದು ಗುಡಿಪಾಡ್ವ? ಯಾಕೆ ಈ ಆಚರಣೆ?

    ಯುಗಾದಿ ವಿಶೇಷ – ಏನಿದು ಗುಡಿಪಾಡ್ವ? ಯಾಕೆ ಈ ಆಚರಣೆ?

    ಯುಗಾದಿ (Ugadi) ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.

    ಯುಗಾದಿಯು ಚಾಂದ್ರಮಾನ ಪದ್ಧತಿಯ ಹೊಸವರ್ಷದ ಪ್ರಾರಂಭದ ದಿನ. ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ್ಯ. ಈ ದಿನ ಶ್ರೀರಾಮ (Sri Rama)  ರಾವಣನನ್ನು ಕೊಂದು ಅಯೋಧ್ಯೆಗೆ (Ayodhya) ಬಂದು ಪಟ್ಟಾಭಿಷೇಕನಾಗಿ ರಾಮರಾಜ್ಯವಾಳಲು ಆರಂಭಿಸಿದ ದಿನ.  ಅಯೋಧ್ಯೆಯ ಪ್ರಜೆಗಳು ಸಂತೋಷಪಟ್ಟು, ಮನೆಯ ಮುಂದೆ ವಿಜಯ ಪತಾಕೆ ಹಾರಿಸಿದರು ಎಂದು ಪುರಾಣ ಕಥೆ ಹೇಳುತ್ತದೆ. ಈ ಕಾರಣಕ್ಕೆ ಹಬ್ಬದ ದಿನ ಮನೆಯ ಮುಂದೆ ರಂಗೋಲಿ ಹಾಕಿ ಬಾವುಟ ಹಾರಿಸಿ ನಲಿಯುವ ಪದ್ಧತಿ ಈಗಲೂ ಇದೆ. ಈ ಕಾರಣಕ್ಕೆ ಇದಕ್ಕೆ ಗುಡಿಪಾಡ್ಯ (ಗುಡಿ ಅಂದರೆ ಬಾವುಟ) ಎನ್ನುತ್ತಾರೆ. ಗುಜರಾತ್, ಮಹಾರಾಷ್ಟ್ರಗಳಲ್ಲಿ ಗುಡಿಪಾಡ್ವವನ್ನು(Gudi Padwa) ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 

    ಯುಗಾದಿ ಶಕ್ತಿ ಉಪಾಸನೆಯ ಆರಂಭದ ದಿನ. ಈ ದಿನದಿಂದ ವಸಂತ ನವರಾತ್ರಿ (Vasant Navratri) ಅಥವಾ ಚೈತ್ರ ನವರಾತ್ರಿ ಆರಂಭ. ವರ್ಷಾದಿಯ ವಸಂತ ಮತ್ತು ವರ್ಷಮಧ್ಯದ ಶರದೃತುಗಳ ಆರಂಭಕಾಲ ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆಯಿದೆ. ಯುಗಾದಿಯ ದಿನ ಬೆಳಗಾಗೆದ್ದು ಶ್ರೀರಾಮನನ್ನು ಸ್ಮರಿಸಿ, ಮಂಗಳ ಸ್ನಾನಮಾಡಿ, ನವವಸ್ತ್ರ ಧರಿಸಿ, ಹಿರಿಯರ ಆಶೀರ್ವಾದ ಪಡೆದು ಬೇವು ಬೆಲ್ಲಗಳನ್ನು ತಿನ್ನಲಾಗುತ್ತದೆ.  ಇದನ್ನೂ ಓದಿ: ಯುಗಾದಿ ವಿಶೇಷ – ಪಂಚಾಂಗ ಪಠಣ ಮಾಡೋದು ಯಾಕೆ?

    ಬೇವಿನ ಎಲೆಗಳನ್ನು ಸೇವಿಸುವುದರಿಂದ ಸರ್ವ ಅನಿಷ್ಟಗಳೂ ನಾಶವಾಗಿ ದೇಹ ವಜ್ರದೇಹಿಯಾಗುತ್ತದೆ. ಸಂಪತ್ತು ಉಂಟಾಗುತ್ತದೆ; ಆಯಸ್ಸು ವೃದ್ಧಿಯಾಗುತ್ತದೆ ಎಂದು ಎಂದು ಹೇಳುತ್ತದೆ  ಆಯುರ್ವೇದ.

    ಯುಗಾದಿಯ ದಿನದಂದು ರೈತರು ಹೊಸದಾಗಿ ಸಿದ್ಧಪಡಿಸಿರುವ ಮರದ ನೇಗಿಲುಗಳನ್ನು ಪೂಜಿಸುತ್ತಾರೆ. ಬಿತ್ತನೆ ಮಾಡುವ ಎಲ್ಲಾ ಧಾನ್ಯಗಳ ಮಾದರಿ ಬೆಳೆಯನ್ನು ಬಿತ್ತಿ ಪೂಜಿಸುತ್ತಾರೆ. ಈ ಮಾದರಿ ಬೆಳೆ ಹುಲುಸಾಗಿ ಬಂದರೆ ಆ ವರ್ಷದ ಬೆಳೆಯೂ ಸಮೃದ್ದವಾಗಿ ಬರುತ್ತದೆ ಎಂಬ ನಂಬಿಕೆಯಿದೆ.

     

  • ಗುಡಿ ಪಾಡ್ವಾ – ಮಹಾರಾಷ್ಟ್ರದಲ್ಲಿ ಆಚರಣೆ ಹೇಗೆ?

    ಗುಡಿ ಪಾಡ್ವಾ – ಮಹಾರಾಷ್ಟ್ರದಲ್ಲಿ ಆಚರಣೆ ಹೇಗೆ?

    ಹಿಂದೂಗಳ ಹಬ್ಬ ಯುಗಾದಿಯನ್ನು (Ugadi) ಮಹಾರಾಷ್ಟ್ರದಲ್ಲಿ ʼಗುಡಿ ಪಾಡ್ವಾʼ (Gudi Padwa) ಎಂದು ಆಚರಿಸಲಾಗುತ್ತದೆ. ಗುಡಿ ಎಂದರೆ ಗೊಂಬೆ ಎಂದರ್ಥ. ಇದು ಮಹಾರಾಷ್ಟ್ರದಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಗುಡಿ ಪಾಡ್ವಾವನ್ನು ಮಹಾರಾಷ್ಟ್ರದ (Maharashtra) ಜನರು ಹೇಗೆ ಆಚರಿಸುತ್ತಾರೆ? ಈ ಹಬ್ಬದ ಹಿನ್ನೆಲೆ ಏನು ಎಂಬುದರ ಕುರಿತು ಸಣ್ಣ ಮಾಹಿತಿ ಇಲ್ಲಿದೆ.

    ಮರಾಠಿಯನ್ನರು ಗುಡಿ ಪಾಡ್ವಾದಂದು ಬೇವಿನ ಎಲೆ, ಬೆಲ್ಲವನ್ನು ದೇವರಿಗೆ ಅರ್ಪಿಸಿ ಕುಟುಂಬದವರು, ಅಕ್ಕಪಕ್ಕದ ಮನೆ ಮತ್ತು ನೆಂಟರಿಷ್ಟರಿಗೆ ಹಂಚುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ, ಈ ದಿನ ವಸಂತ ಕಾಲದ ಆರಂಭ ಎಂದರ್ಥ.

    ಗುಡಿ ಪಾಡ್ವಾ ಹಬ್ಬದ ಹಿನ್ನೆಲೆ ಏನು?
    ಈ ದಿನ ಬ್ರಹ್ಮ ದೇವರು ಜಗತ್ತನ್ನು ಮರು ಸೃಷ್ಟಿಸಿದ ಎಂಬ ಮಾತಿದೆ. ನೆರೆ ಬಂದು ಜಗತ್ತೆಲ್ಲಾ ನಾಶವಾಗಿರುತ್ತದೆ. ಆ ನಂತರ ಬ್ರಹ್ಮ ಜಗತ್ತನ್ನು ಮರು ಸೃಷ್ಟಿಸುತ್ತಾನೆ. ಈ ದಿನ ರಾಮ ದೇವರು ವಾಲಿಯನ್ನು ಕೊಂದು ಜಯಶಾಲಿಯಾದ ದಿನ. ಹೀಗಾಗಿ ಯುಗಾದಿ ಹಿಂದೂಗಳ ಪಾಲಿಗೆ ಅತ್ಯಂತ ವಿಶೇಷ ಹಬ್ಬವಾಗಿದೆ.

    ಚೈತ್ರ ಮಾಸದ ಆರಂಭದೊಂದಿಗೆ ಹೊಸ ವರ್ಷದ ಆರಂಭವನ್ನು ಘೋಷಿಸುವ ಗುಡಿ ಪಾಡ್ವಾ ಮಹಾರಾಷ್ಟ್ರದ ಪ್ರಮುಖ ಹಬ್ಬವಾಗಿದೆ. ಗುಡಿ ಪಾಡ್ವಾ ರಾಕ್ಷಸ ರಾಜ ರಾವಣನ ಮೇಲೆ ಶ್ರೀರಾಮನ ವಿಜಯದ ಆಚರಣೆಯನ್ನು ಸೂಚಿಸುತ್ತದೆ. ಆದರೆ ಹಿಂದೂ ಧರ್ಮದ ಮಹಾಕಾವ್ಯಗಳಲ್ಲಿ ಒಂದಾದ ಬ್ರಹ್ಮ ಪುರಾಣವು ಹೇಳುವಂತೆ ಗುಡಿ ಪಾಡ್ವಾವು ಇಡೀ ವಿಶ್ವವನ್ನು ಸೃಷ್ಟಿಸಿದ ದಿನವನ್ನು ಸೂಚಿಸುತ್ತದೆ.

    ಗುಡಿ ಪಾಡ್ವಾ ಹಬ್ಬವನ್ನು ಏಕೆ ಆಚರಿಸುತ್ತಾರೆ?
    ಜೋತಿಷ್ಯ ಮಹತ್ವ:
    ಚಂದ್ರನ ಪಂಚಾಂಗದ ಪ್ರಕಾರ ಸೂರ್ಯನು ರಾಶಿಚಕ್ರದ ಮೊದಲ ರಾಶಿಯಾದ ಮೇಷ ರಾಶಿಗೆ ಪ್ರವೇಶಿಸುವ ದಿನವನ್ನು ಗುಡಿ ಪಾಡ್ವಾ ಎಂದು ಕರೆಯುತ್ತಾರೆ. ಇದು ಹೊಸ ಆರಂಭಗಳಿಗೆ ಮಂಗಳಕರ ಸಮಯ ಎಂದು ಹೇಳಲಾಗುತ್ತದೆ.

    ಸಾಂಸ್ಕೃತಿಕ ಮಹತ್ವ:
    ಗುಡಿ ಪಾಡ್ವಾ ಹಬ್ಬ ವಸಂತ ಋತುವಿನ ಆರಂಭ ಮತ್ತು ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ದಿನವೆಂದು ಪರಿಗಣಿಸಲಾಗುತ್ತದೆ.

    ಐತಿಹಾಸಿಕ ಮಹತ್ವ:
    ಗುಡಿ ಪಾಡ್ವಾ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ಮೊಘಲರನ್ನು ಯಶಸ್ವಿಯಾಗಿ ಸೋಲಿಸಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪೌರಾಣಿಕ ವಿಜಯದೊಂದಿಗೆ ಗುಡಿ ಪಾಡ್ವಾ ಕೂಡ ಸಂಬಂಧಿಸಿದೆ.

    ಈ ಹಬ್ಬದ ದಿನದಂದು ಬಿದಿರಿನ ಕೋಲಿನಿಂದ ಅಲಂಕರಿಸಲ್ಪಟ್ಟ ಕಂಬವನ್ನು ಹೂಗಳು ಹಾಗೂ ಬೇವಿನ ಎಲೆಗಳಿಂದ ಅಲಂಕರಿಸಿ ಬಟ್ಟೆ ಮತ್ತು ತಲೆಕೆಳಗಾದ ಕಲಶದಿಂದ ಗುಡಿಯನ್ನು ಎತ್ತುತ್ತಾರೆ. ಈ ಗುಡಿಯನ್ನು ಮನೆಯ ಹೊರಗೆ ಇರಿಸಲಾಗುತ್ತದೆ. ಇದು ವಿಜಯ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ.

    ಗುಡಿ ಪಾಡ್ವಾದಂದು ಜನರು ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಈ ದಿನ ಮಹಾರಾಷ್ಟ್ರದ ಮಹಿಳೆಯರು ನೌವಾರಿ ಸೀರೆ ಮತ್ತು ಪುರುಷರು ಕುರ್ತಾ ಪೈಜಾಮ ಧರಿಸಿ ಕಂಗೊಳಿಸುತ್ತಾರೆ. ಈ ದಿನ ಮಹಾರಾಷ್ಟ್ರದ ರಸ್ತೆಗಳಲ್ಲಿ ರಂಗೋಲಿಗಳು ಕಣ್ಮನ ಸೆಳೆಯುತ್ತಿರುತ್ತವೆ. ಅಲ್ಲದೇ ಮಹಿಳೆಯರು ಹಾಗೂ ಪುರುಷರು ಮೆರವಣಿಗೆ ತೆರಳಿ ಹಾಡು ಕುಣಿತಗಳ ಮೂಲಕ ಹಬ್ಬವನ್ನು ಸಂಭ್ರಮಿಸುತ್ತಾರೆ.

  • ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

    ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

    ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಸಂವಿಧಾನನ್ನು ವಿಧಾಯ ಪೂರ್ವಕವಾಗಿ ಹಾಕಿಕೊಳ್ಳುವ ದಿನ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.

    ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ‘ಯುಗಾದಿ’ ಎಂಬ ಪದ ವ್ಯುತ್ಪತ್ತಿಯಾಗಿದೆ. ಈ ಯುಗಾದಿ ಕೃತಯುಗದ ಚೈತ್ರ, ಶುದ್ಧ, ಪಾಡ್ಯ, ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ. ಜೊತೆಗೆ ಬ್ರಹ್ಮ ದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ನಂಬಿಕೆಯೂ ಇದೆ. ಋತುಗಳು, ಗ್ರಹಗಳು, ನಕ್ಷತ್ರಗಳು ಈ ದಿನ ಸೃಷ್ಟಿ ಆಯಿತು ಎನ್ನುವ ನಂಬಿಕೆಯೂ ಇದೆ.

    ಯುಗಾದಿ ಹಬ್ಬವನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಜನ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ ಆಚರಿಸುತ್ತಾರೆ. ಹುಣ್ಣಿಮೆ ದಿನ ಚಂದ್ರನು ಯಾವ ನಕ್ಷತ್ರದಲ್ಲಿ ಇರುವನೋ ಆ ನಕ್ಷತ್ರದ ಹೆಸರಿನಿಂದ ಆ ಮಾಸ ಆರಂಭವಾಗುತ್ತದೆ.

    ಚಾಂದ್ರಮಾನ ಯುಗಾದಿ:
    ಚಿತ್ತ ನಕ್ಷತ್ರ ಇದ್ದರೆ ಚೈತ್ರ ಮಾಸ, ವಿಶಾಖ ನಕ್ಷತ್ರ ಇದ್ದರೆ ವೈಶಾಖ ಮಾಸ, ಜೇಷ್ಠ ನಕ್ಷತ್ರ-ಜೇಷ್ಠ ಮಾಸ, ಉತ್ತರಾಷಡ ನಕ್ಷತ್ರ-ಆಷಾಢ ಮಾಸ, ಶ್ರವಣ ನಕ್ಷತ್ರ- ಶ್ರಾವಣ ಮಾಸ, ಪೂರ್ವಭದ್ರ ನಕ್ಷತ್ರ-ಭಾದಪ್ರದ ಮಾಸ, ಅಶ್ವಿನಿ ನಕ್ಷತ್ರ-ಅಶ್ವಯುಜ ಮಾಸ, ಕೃತಿಕಾ ಮಾಸ-ಕಾರ್ತಿಕ ಮಾಸ, ಮೃಗಶಿರಾ ನಕ್ಷತ್ರ-ಮಾರ್ಗಶಿರ ಮಾಸ, ಪುಷ್ಯ ನಕ್ಷತ್ರ-ಪುಷ್ಯ ಮಾಸ, ಮಖಾ ನಕ್ಷತ್ರ-ಮಾಘ ಮಾಸ ಮತ್ತು ಉತ್ತರ ನಕ್ಷತ್ರ-ಪಾಲ್ಗುಣ ಮಾಸ ಹೀಗೆ 12 ಮಾಸಗಳು ಆಯಾ ನಕ್ಷತ್ರಗಳ ಹೆಸರಿನಿಂದ ಕರೆಯುತ್ತಾರೆ. ಈ ರೀತಿ ಚಂದ್ರನಿಂದಲೇ ಎಲ್ಲಾ ಲೆಕ್ಕಚಾರ ಮಾಡುವುದರಿಂದ ಇದಕ್ಕೆ ಚಂದ್ರಮಾನ ಯುಗಾದಿ ಎಂದು ಕರೆಯಲಾಗುತ್ತದೆ. ಚಾಂದ್ರಮಾನ ಯುಗಾದಿಯನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ.

    ಸೌರಮಾನ ಯುಗಾದಿ:
    ರವಿ ಗ್ರಹವು ಒಂದು ಕ್ರಾಂತಿಯಿಂದ ಮತ್ತೊಂದು ರಾಶಿಯ ಕ್ರಾಂತಿವರೆಗೆ ಭ್ರಮಣ ಮಾಡಲು ಸುತ್ತುವ ಕಾಲಕ್ಕೆ ಮಾಸ ಎಂದು ಹೇಳಲಾಗುತ್ತದೆ. ಅಂದರೆ ರವಿಯು ಅಮಾವಾಸ್ಯೆ ದಿವಸ ಮೇಷ ರಾಶಿಯಲ್ಲಿದ್ದರೆ ಆ ಮಾಸವನ್ನು ಚೈತ್ರ ಮಾಸ ಎನ್ನುವರು. ವೃಷಭ ರಾಶಿಗೆ ರವಿ ಬಂದರೆ ಅದನ್ನು ವೈಶಾಖ ಮಾಸ ಎಂದು ಕರೆಯಲಾಗುತ್ತದೆ. ಮಿಥುನ-ಜೇಷ್ಠ ಮಾಸ, ಕಟಕಕ್ಕೆ-ಆಷಾಢ ಮಾಸ, ಸಿಂಹ-ಶ್ರಾವಣ ಮಾಸ, ಕನ್ಯಾ-ಭಾದ್ರಪದ, ತುಲಾ-ಅಶ್ವಿಜ ಮಾಸ, ವೃಶ್ಚಿಕ-ಕಾರ್ತಿಕ ಮಾಸ, ಧನಸ್ಸು-ಮಾರ್ಗಶಿರಾ, ಮಕರ-ಪುಷ್ಯ ಮಾಸ, ಕುಂಭ-ಮಾಘ ಮಾಸ ಮತ್ತು ಮೀನ-ಪಾಲ್ಗುಣ ಮಾಸ ಎಂದು ಕರೆಯಲಾಗುತ್ತದೆ. ಈ ರೀತಿ ರವಿ ಗ್ರಹದಿಂದ ಎಲ್ಲ ಲೆಕ್ಕಾಚಾರ ಮಾಡುವುದರಿಂದ ಸೌರಮಾನ ಯುಗಾದಿ ಎಂದು ಕರೆಯಲಾಗುತ್ತದೆ.

    ಇವರೆಡು 15 ದಿನಗಳ ಅಂತರದಲ್ಲಿ ಬರುತ್ತವೆ. ಈ ಸೌರಮಾನ ಯುಗಾದಿಯನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಚರಿಸುತ್ತಾರೆ. ವೇದ ಕಾಲದಲ್ಲಿ ಸೌರಮಾನ ಅನುಸಾರವಾಗಿ ಮಾಸಗಳು ಪ್ರಚಾರದಲ್ಲಿದ್ದವು.

    ಇತಿಹಾಸ:
    ಯುಗಾದಿಯ ಚಂದ್ರಮಾನ ಪದ್ಧತಿಯ ಹೊಸ ವರ್ಷದ ಪ್ರಾರಂಭದ ದಿನ. ವರ್ಷದ ಫಸಲು ಕೈಗೆ ಬಂದು, ಆಗ ತಾನೇ ಸುಗ್ಗಿ ಮುಗಿದು ಹಿಗ್ಗಿನ ಬುಗ್ಗೆಯಾಗಿರುವ ಜನರಿಗೆ ‘ಉಂಡಿದ್ದೆ ಉಗಾದಿ ಮಿಂದಿದ್ದೆ ದೀಪಾವಳಿ’. ಈ ಹಬ್ಬದ ಹಿರಿಮೆ-ಗರಿಮೆ ಮಹಿಮೆಗಳನ್ನು ಅಥರ್ವ ವೇದ, ಶತಪಥಬ್ರಾಹಣ, ಧರ್ಮಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾಣಗಳಲ್ಲಿ ಹೇಳಲಾಗಿದೆ.

    ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು, ರಾಮರಾಜ್ಯವಾಳಲು ಆರಂಭಿಸಿದ. ಅಯೋಧ್ಯೆಯ ಪ್ರಜೆಗಳು ಸಂತೋಷದಿಂದ ಮನೆಯ ಮುಂದೆ ವಿಜಯ ಪತಾಕೆಯನ್ನು ಹಾರಿಸಿದರು. ಇಂದಿಗೂ ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ಧತಿ ಇದೆ. ಅದಕ್ಕಾಗಿಯೇ ಇದಕ್ಕೆ ಗುಡಿಪಾಡ್ಯ (ಗುಡಿ=ಬಾವುಟ) ಎನ್ನುತ್ತಾರೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಯುಗಾದಿಯನ್ನು ಗುಡಿಪಾಡ್ಯ ಹೆಸರಿನಲ್ಲಿ ಆಚರಿಸಲಾಗುತ್ತದೆ

    ರೋಮನ್ನರಿಗೆ ಜನವರಿಯ ಮೊದಲ ದಿನವಿದ್ದಂತೆ, ಹಿಂದೂಗಳಿಗೆ ‘ಯುಗಾದಿ’ ಆದಿಯ ದಿನವಾಗಿದೆ. ಯುಗಾದಿಯ ಶಕ್ತಿ ಉಪವಾಸನೆಯ ಆರಂಭದ ದಿನವಾಗಿದ್ದು, ಈ ದಿನದಿಂದ ವಸಂತ ನವರಾತ್ರಿ ಆರಂಭವಾಗುತ್ತದೆ. ವರ್ಷಾಧಿಯ ವಸಂತ ಮತ್ತು ವರ್ಷಮಧ್ಯದ ಶರದೃತುಗಳ ಆರಂಭ ಕಾಲ ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆ ಇದೆ. ಅಂದರೆ ಯುಗಾದಿಯ ದಿನ ಬೆಳಗ್ಗೆ ಎದ್ದು ಶ್ರೀರಾಮನನ್ನು ಸ್ಮರಿಸಿ, ಮಂಗಳ ಸ್ನಾನ ಮಾಡಿ, ನವವಸ್ತ್ರ ಧರಿಸಿ, ಹಿರಿಯರ ಆಶೀರ್ವಾದ ಪಡೆದು ಬೇವು-ಬೆಲ್ಲ ತಿನ್ನಲಾಗುತ್ತದೆ.

    ಯುಗಾದಿಯ ವಿಶೇಷತೆ:
    ಈ ಹಬ್ಬದಂದು ಬೆಲ್ಲ ಮತ್ತು ಕಹಿಯಾದ ಬೇವು ಮಿಶ್ರಣವನ್ನು ಸೇವಿಸುವ ಆಚರಣೆ ಹಲವು ಕಡೆಗಳಲ್ಲಿ ಇದೆ. ಬೆಲ್ಲವನ್ನು ಎಲ್ಲರೂ ಸುಖಕರ, ಕಹಿ ಬೇವನ್ನು ದುಃಖಕರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಜೀವನವು ಕ್ಷಣಕಾಲ ಉರಿದು ನಾಶವಾಗುವ ಮೇಣದ ಬತ್ತಿಯಲ್ಲ. ಸಂಪೂರ್ಣ ಸುಖ ಮತ್ತು ದು:ಖದ ನೆಲೆಯೂ ಅಲ್ಲ. ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆಯೇ ಸುಖ-ದುಃಖ, ಶೀತ-ಉಷ್ಣ, ಲಾಭ-ನಷ್ಟಗಳಿಂದಲೂ ಬದುಕು ಕೂಡಿದೆ. ಇವುಗಳ ಸಂಕೇತವೇ ಬೇವು ಬೆಲ್ಲ.

    ಬೇವು-ಬೆಲ್ಲದ ವಿಶೇಷತೆ ಏನು?
    * ಬೇವು-ಬೆಲ್ಲ ವೈದ್ಯಕೀಯ ಗುಣಗಳನ್ನು ಹೊಂದಿದೆ.
    * ಬೇವಿನ ಎಲೆಗಳನ್ನು ಸೇವಿಸುವದರಿಂದ ಸರ್ವ ಅನಿಷ್ಟಗಳೂ ನಾಶವಾಗುತ್ತದೆ.
    * ಮಾನವ ವಜ್ರದ್ರೇಹಿಯಾಗುತ್ತಾನೆ.
    * ಸಂಪತ್ತು ಉಂಟಾಗುತ್ತದೆ.
    * ಆಯಸ್ಸು ವೃದ್ಧಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.

    ಪಂಚಾಂಗ ಶ್ರವಣ:
    ಸಾಯಾಂಕಾಲ ಪಂಚಾಂಗ ಶ್ರವಣ ಮಾಡುವುದು ಈ ಹಬ್ಬದ ಮತ್ತೊಂದು ವಿಶೇಷ ಆಚರಣೆಯಾಗಿದೆ. ಪಂಚಾಂಗದ ಪ್ರಕಾರ ಫಲಾಫಲಗಳನ್ನು, ಉಪಯುಕ್ತ ದಿನಗಳನ್ನೂ ತಿಳಿದುಕೊಂಡು ವ್ಯಾಪಾರ, ವಹಿವಾಟು, ವ್ಯವಸಾಯ ನಿಯೋಜಿಸಿಕೊಳ್ಳಬಹುದು. ಯುಗಾದಿಯಂದು ಪಾಡ್ಯ ಬರುವಾಗ ಹೊಸ ಸಂವತ್ಸರದ ತಿಥಿ, ವಾರ, ನಕ್ಷತ್ರಾದಿಗಳು ಉದಯಿಸುತ್ತವೆ. ಆದ್ದರಿಂದ ಪಾಡ್ಯಮಿಯಂದು ಹಬ್ಬದ ಆಚರಣೆ ಮಾಡುತ್ತಾರೆ.

    ಯುಗಾದಿಯ ದಿನದಂದು ರೈತರು ಹೊಸದಾಗಿ ಸಿದ್ಧಪಡಿಸಿರುವ ಮರದ ನೇಗಿಲುಗಳನ್ನು ಪೂಜಿಸಿ, ಬಿತ್ತನೆ ಮಾಡುವ ಎಲ್ಲಾ ಧಾನ್ಯಗಳ ಮಾದರಿಯ ಬೆಳೆಯನ್ನು ಬಿತ್ತಿ ಪೂಜಿಸುತ್ತಾರೆ. ಈ ಮಾದರಿಯ ಬೆಳೆ ಹುಲುಸಾಗಿ ಬಂದರೆ ಆ ವರ್ಷದ ಬೆಳೆಯೂ ಸಮೃದ್ಧ ಎಂದರ್ಥ. ಸೌರಮಾನ ಯುಗಾದಿಯನ್ನು ಸೌರಮಾನದ ರೀತಿಯಲ್ಲಿ ಆಚರಿಸುವವರು. ಸೂರ್ಯ ಮೇಷ ಸಂಕ್ರಾಂತಿ ವೃತ್ತವನ್ನ ಪ್ರವೇಶಿಸುವ ದಿನ. ಈ ಹಬ್ಬದ ಆಚರಣೆ ಸಹ ಚಂದ್ರಮಾನ ಯುಗಾದಿಯಂತೆಯೇ ನಡೆಯುತ್ತದೆ. ಯುಗಾದಿಯ ದಿನ ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಳ್ಳುವುದು ವಾಡಿಕೆ.

  • 70 ಕಲಾವಿದರು ಸೇರಿ 9 ಗಂಟೆಯಲ್ಲಿ 18 ಸಾವಿರ ಚದರ ಅಡಿಯ ಸುಂದರ ರಂಗೋಲಿ ರಚಿಸಿದ್ರು!

    70 ಕಲಾವಿದರು ಸೇರಿ 9 ಗಂಟೆಯಲ್ಲಿ 18 ಸಾವಿರ ಚದರ ಅಡಿಯ ಸುಂದರ ರಂಗೋಲಿ ರಚಿಸಿದ್ರು!

    ಮುಂಬೈ: ಗುಡಿ ಪದ್ವಾ ಹಬ್ಬದ ಅಂಗವಾಗಿ ಮಹಾರಾಷ್ಟ್ರದಲ್ಲಿ 18 ಸಾವಿರ ಚದರ ಅಡಿಯಷ್ಟು ದೊಡ್ಡದಾದ ಸುಂದರವಾದ ರಂಗೋಲಿಯನ್ನ ರಚಿಸಲಾಗಿದೆ.

    ಥಾಣೆಯ ಗಾವೋದೇವಿ ಮೈದಾನ್ ನಲ್ಲಿ 900 ಕೆಜಿ ರಂಗೋಲಿ ಪುಡಿಯನ್ನ ಬಳಸಿ ಈ ಸುಂದರವಾದ ರಂಗೋಲಿ ಹಾಕಲಾಗಿದೆ. ಸುಮಾರು 70 ಕಲಾವಿದರು ಸೇರಿ 9 ಗಂಟೆಗಳ ಕಾಲ ಶ್ರಮಿಸಿ ವರ್ಣರಂಜಿತವಾದ ರಂಗೋಲಿಯನ್ನ ಚಿತ್ರಿಸಿದ್ದಾರೆ.

    ಭಾರತದಲ್ಲಿ ಹೊಸ ವರ್ಷವನ್ನ ಆಯಾ ಪ್ರದೇಶಕ್ಕೆ ಅನುಗುಣವಾಗಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಯುಗಾದಿ ಹಬ್ಬ ಆಚರಿಸಿದಂತೆ ಮಹಾರಾಷ್ಟ್ರದಲ್ಲಿ ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಮೊದಲ ದಿನವನ್ನ ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಇದಕ್ಕೆ ಗುಡಿ ಪದ್ವಾ ಎಂದು ಕರೆಯುತ್ತಾರೆ. ಕೊಂಕಣಿ ಸಮುದಾಯದವರು ಈ ದಿನವನ್ನ ಸಂವತ್ಸರ ಎಂದು ಕರೆಯುತ್ತಾರೆ.