Tag: guava

  • ಸೀಬೆ ಹಣ್ಣು ಕಿತ್ತಿದ್ದಕ್ಕೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಕೊಲೆ – ಇಬ್ಬರ ಬಂಧನ

    ಸೀಬೆ ಹಣ್ಣು ಕಿತ್ತಿದ್ದಕ್ಕೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಕೊಲೆ – ಇಬ್ಬರ ಬಂಧನ

    ಲಕ್ನೋ: ತೋಟದಿಂದ ಸೀಬೆ ಹಣ್ಣನ್ನು (Guava) ಕಿತ್ತಿದ್ದಕ್ಕೆ ದಲಿತ ವ್ಯಕ್ತಿಯನ್ನು (Dalit Man) ದೊಣ್ಣೆಯಿಂದ ಹೊಡೆದು ಕೊಂದಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ (Uttar Pradesh) ಅಲಿಗಢದಲ್ಲಿ (Aligarh) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಘಟನೆಯಲ್ಲಿ ಸಾವನ್ನಪ್ಪಿರುವ ವ್ಯಕ್ತಿ ಓಂ ಪ್ರಕಾಶ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಅವರ ಸಹೋದರ ಸತ್ಯ ಪ್ರಕಾಶ್ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಸಹೋದರ ಹಸಿವನ್ನು ತಣಿಸಿಕೊಳ್ಳಲು ಹೊರಗಡೆ ಹೋಗಿದ್ದ. ಆತ ಇತರರ ತೋಟದಿಂದ ಒಂದು ಸೀಬೆ ಹಣ್ಣನ್ನು ಕಿತ್ತು ತಿಂದಿದ್ದಕ್ಕೆ ಹೊಡೆದು ಸಾಯಿಸಿದ್ದಾರೆ. ಈ ವಿಚಾರವನ್ನು ಒಬ್ಬ ಹುಡುಗ ಬಂದು ಹೇಳಿದಾಗಲೇ ನಮಗೆ ವಿಷಯ ತಿಳಿಯಿತು ಎಂದಿದ್ದಾರೆ. ಇದನ್ನೂ ಓದಿ: ತಾಯಿಯನ್ನು ನಿಂದಿಸಿದ್ದಕ್ಕೆ ಜೈಲಿನಿಂದ ಬಂದ ಸ್ನೇಹಿತರಿಂದ್ಲೇ ಯುವಕ ಕೊಲೆಯಾದ

    crime

    ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಓಂ ಪ್ರಕಾಶ್‌ನನ್ನು ಮೊದಲಿಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಾಮಾಚಾರದ ಆರೋಪ – ನೆರೆಹೊರೆಯವರಿಂದಲೇ ಮಹಿಳೆ ಸಜೀವ ದಹನ

    ಇದೀಗ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಲ್ ಅಧಿಕಾರಿ ಅಭಯ್ ಕುಮಾರ್ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 302 (ಕೊಲೆ) ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆಯ 3(2)(ವಿ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮೊಮ್ಮಗಳ ಮಾತಿಗೆ ಮನನೊಂದು ಆ್ಯಸಿಡ್ ಕುಡಿದು ಪ್ರಾಣ ಬಿಟ್ಟ ಅಜ್ಜಿ

    ಮೊಮ್ಮಗಳ ಮಾತಿಗೆ ಮನನೊಂದು ಆ್ಯಸಿಡ್ ಕುಡಿದು ಪ್ರಾಣ ಬಿಟ್ಟ ಅಜ್ಜಿ

    ಭೋಪಾಲ್: ಐದು ವರ್ಷದ ಮೊಮ್ಮಗಳ ಮಾತಿನಿಂದ ಮನನೊಂದ ಅಜ್ಜಿ, ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ.

    ಆಸಿಡ್ ಕುಡಿದ ವೃದ್ಧೆಯನ್ನು ಮೀರಾ ಬಾಯಿ (75) ಎಂದು ಗುರುತಿಸಲಾಗಿದೆ. ಆ್ಯಸಿಡ್ ಸೇವನೆಗೆ ಕಾರಣ ಕೇಳಿದರೆ ಆಶ್ಚರ್ಯವಾಗಬಹುದು. ಐದು ವರ್ಷದ ಮೊಮ್ಮಗಳು ಎಲ್ಲಾ ಸೀಬೆ ಹಣ್ಣನ್ನು ನೀವು ತಿಂದಿದ್ದೀರಿ ಎಂದು ಹೇಳಿದ್ದಕ್ಕೆ ಅಜ್ಜಿ ಆ್ಯಸಿಡ್ ಕುಡಿದಿದ್ದಾಳೆ.

    ಮೃತ ವೃದ್ಧೆಯ ಮಗ ಕೈಲಾಶ್ ಹೇಳುವ ಪ್ರಕಾರ ನನ್ನ ಮಗಳು ಅಜ್ಜಿಯೊಂದಿಗೆ ಕುಳಿತಿದ್ದಳು. ಆ ಸಮಯದಲ್ಲಿ ನೀವು ಎಲ್ಲಾ ಸೀಬೆ ಹಣ್ಣನ್ನು ತಿಂದಿದ್ದೀರಿ ಎಂದು ಮಗಳು ಹೇಳಿದಳು. ಹೀಗೆ ಹೇಳಿದ್ದಕ್ಕೆ ನನ್ನ ತಾಯಿಗೆ ಕೋಪ ಬಂದಿದೆ.

    ನಾನು ತಿಂದಿಲ್ಲ ನೀವು ನನ್ನನ್ನು ಕೆಣಕುತ್ತಿದ್ದೀರಿ ಎಂದು ಹೇಳುತ್ತಾ ಆ್ಯಸಿಡ್ ಕುಡಿದರು. ನಂತರ ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಯಸ್ಸಾದ ಅಜ್ಜಿ ಮೊಮ್ಮಗಳು ಹೇಳಿದ ಸಣ್ಣ ವಿಷಯಕ್ಕಾಗಿ ಆ್ಯಸಿಡ್ ಕುಡಿದಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಮಾಡುತ್ತೇವೆ ಎಂದು ಬೆಟ್ಮಾ ಪೊಲೀಸರು ಹೇಳಿದ್ದಾರೆ.

  • ಆರೋಗ್ಯಕರವಾದ ಸೀಬೆಕಾಯಿ ಜ್ಯೂಸ್ ಮಾಡೋ ಸುಲಭ ವಿಧಾನ

    ಆರೋಗ್ಯಕರವಾದ ಸೀಬೆಕಾಯಿ ಜ್ಯೂಸ್ ಮಾಡೋ ಸುಲಭ ವಿಧಾನ

    ಸೀಬೆಕಾಯಿ ಅಥವಾ ಪೇರಳೆ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಚಿರಪರಿಚಿತ. ಕಡಿಮೆ ಬೆಲೆಗೆ ಸಿಗುವ ಈ ಹಣ್ಣಿನಲ್ಲಿ ಆರೋಗ್ಯ ಕಾಪಾಡುವ ಅನೇಕ ಅಂಶಗಳಿವೆ. ಸೀಬೆಕಾಯಿ ಜ್ಯೂಸ್ ಕೂಡ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಇದು ತಂಪಿನ ಜೊತೆ ಪೋಷಕಾಂಶಗಳನ್ನು ದೇಹಕ್ಕೆ ಪೂರೈಕೆ ಮಾಡುತ್ತದೆ. ಸೀಬೆ ಜ್ಯೂಸ್ ನಮ್ಮ ದೇಹದ ವಿಟಮಿನ್ ಸಿ ಕೊರತೆಯನ್ನು ಹೋಗಲಾಡಿಸುತ್ತದೆ. ಹೀಗಾಗಿ ಅಂಗಡಿಗಳಲ್ಲಿ ಜ್ಯೂಸ್ ಕೊಂಡು ಕುಡಿಯುವ ಬದಲಾಗಿ ಮನೆಯಲ್ಲಿಯೇ ಬೇಗನೇ ಜ್ಯೂಸ್ ತಯಾರಿಸಬಹುದು. ಸೀಬೆ ಜ್ಯೂಸ್ ತಯಾರಿಸುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    ತೊಳೆದು ಸಿಪ್ಪೆ ಬಿಡಿಸಿ ಹೆಚ್ಚಿದ ಸೀಬೆ ಹಣ್ಣು – 1 ಕಪ್
    ಸಕ್ಕರೆ- 1 ಟೀ ಚಮಚ
    ತಣ್ಣನೆಯ ನೀರು – 1/2 ಕಪ್
    ಪುದಿನ ಎಲೆಗಳು – 3
    ಐಸ್ ಕ್ಯೂಬ್

    ಮಾಡುವ ವಿಧಾನ:
    * ಸೀಬೆಹಣ್ಣುಗಳ ಸಿಪ್ಪೆಯನ್ನು ತೆಗೆದು ಸಣ್ಣದಾಗಿ 1 ಕಪ್ ನಷ್ಟು ಕತ್ತರಿಸಿಕೊಳ್ಳಬೇಕು.
    * ನಂತರ ಸೀಬೆ ಹಣ್ಣನ್ನು ಮಿಕ್ಸರ್‍ನಲ್ಲಿ ಮಿಕ್ಸಿ ಮಾಡಿ ತಣ್ಣನೆಯ ನೀರು ಮತ್ತು ಸಕ್ಕರೆಯನ್ನು ಹಾಕಬೇಕು. ಹಣ್ಣಿನ ಮಿಶ್ರಣ ನುಣುಪಾಗ ಬೇಕು.
    * ಮಿಕ್ಸಿಯಾದ ಮೇಲೆ ಅದನ್ನು 1 ಕಪ್‍ನಲ್ಲಿ ಸೋಸಿ ಬೀಜಗಳನ್ನು ಹೊರತೆಗೆಯ ಬೇಕು.
    * ಕೊನೆಗೆ ಜ್ಯೂಸ್‍ಗೆ ಐಸ್ ಕ್ಯೂಬ್ ಮತ್ತು ಪುದಿನ ಎಲೆಗಳನ್ನು ಸೇರಿಸಿದರೆ ರುಚಿ ರುಚಿಯಾದ ಸೀಬೆ ಹಣ್ಣಿನ ಜ್ಯೂಸ್ ಕುಡಿಯಲು ರೆಡಿ.

    ಉಪಯೋಗಗಳು:
    * ಸೀಬೆಕಾಯಿಯ ಸಿಪ್ಪೆ, ಬೀಜ ಯಾವುದನ್ನು ಬಿಸಾಡುವಂತಿಲ್ಲ. ಅವುಗಳಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳು ಇರುತ್ತವೆ. ಸೀಬೆಕಾಯಿಂದ ಮೊಡವೆಗಳು ಹೋಗುತ್ತದೆ, ಹಲ್ಲಿನ ತೊಂದರೆಗಳು ಮಾಯವಾಗುತ್ತದೆ.

    * ಸೀಬೆ ಹಣ್ಣಿನಲ್ಲಿ ಕಿತ್ತಳೆ ಹಣ್ಣಿಗಿಂತ ಹೆಚ್ಚು ವಿಟಮಿನ್ ಸಿ ಪೋಷಕಾಂಶವಿರುತ್ತದೆ. ಇದು ರಕ್ತದ ಒತ್ತಡವನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರವನ್ನುವಹಿಸುತ್ತದೆ ಮತ್ತು ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

    * ಸೀಬೆಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇರುವ ಕಾರಣ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ದಿನನಿತ್ಯದ ಆಹಾರದ ಭಾಗವಾಗಿ ಇದನ್ನು ಸೇರಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

    * ಈ ಜ್ಯೂಸ್ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಡುತ್ತದೆ. ದೇಹದಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ. ಇದರಲ್ಲಿ ಪೋಷಕಾಂಶಗಳು ಇರುವ ಕಾರಣ ಮುಖದಲ್ಲಿ ಮೊಡವೆಗಳ ಆಗದಂತೆ ನೋಡಿಕೊಳ್ಳುತ್ತದೆ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

    * ಸೀಬೆಕಾಯಿ ಜ್ಯೂಸ್ ಕಣ್ಣಿಗೆ ಸಂಬಂಧಿಸಿದ ತೊಂದರೆಗಳಿಗೆ ಬಹಳ ಉಪಯೋಗಕಾರಿ. ದೃಷ್ಟಿ ದೋಷವನ್ನು ತಡೆಯುವಲ್ಲಿ ಸಹಾಯಕಾರಿ.