Tag: GTvsMI

  • ಮುಂಬೈ ತಂಡಕ್ಕೆ ರೋಚಕ ಜಯ – 3ನೇ ಸೋಲಿನ ಕಹಿ ಅನುಭವಿಸಿದ ಗುಜರಾತ್‌

    ಮುಂಬೈ ತಂಡಕ್ಕೆ ರೋಚಕ ಜಯ – 3ನೇ ಸೋಲಿನ ಕಹಿ ಅನುಭವಿಸಿದ ಗುಜರಾತ್‌

    ಮುಂಬೈ: ಸತತ ಎಂಟು ಸೋಲುಗಳನ್ನು ಅನುಭವಿಸಿ ಕಳೆದ ಪಂದ್ಯದಲ್ಲಿ ಒಂದು ಗೆಲುವಿನ ಮೂಲಕ ಭರವಸೆ ಮೂಡಿಸಿದ್ದ ಮುಂಬೈ ಇಂಡಿಯನ್ಸ್‌ ಶುಕ್ರವಾರ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ರೋಚಕ ಜಯ ಸಾಧಿಸಿತು.

    ಐಪಿಎಲ್‌ 2022ರ ಅಂಕಪಟ್ಟಿಯಲ್ಲಿ ಮೊದಲ ಹಾಗೂ ಕೊನೆಯ ಸ್ಥಾನದಲ್ಲಿರುವ ತಂಡಗಳು ಕಾದಾಟ ನಡೆಸಿದವು. ಸತತ ಎಂಟು ಸೋಲುಗಳ ನಡುವೆ ಒಂದು ಗೆಲುವು ದಾಖಲಿಸಿ ಭರವಸೆ ಮೂಡಿಸಿದ್ದ ಮುಂಬೈ ಇಂಡಿಯನ್ಸ್‌ ಉತ್ತಮ ಪ್ರದರ್ಶನ ನೀಡುವ ಮೂಲಕ ಗುಜರಾತ್‌ ವಿರುದ್ಧ ಗೆದ್ದು ಬೀಗಿತು. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್‌ ಟೈಟಾನ್ಸ್‌ ಗೆಲುವು ದಾಖಲಿಸುವ ಭರವಸೆ ಹುಸಿಯಾಯಿತು.

    ಮುಂಬೈ ಇಂಡಿಯನ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವು ದಕ್ಕಿಸಿಕೊಳ್ಳುವಲ್ಲಿ ಸಫಲರಾದರು. ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಬಿರುಸಿನ ಆರಂಭವೊದಗಿಸಿದರು. ರೋಹಿತ್ ಆಕ್ರಮಣಕಾರಿ ಆಟವಾಡಿದರು. ಪವರ್ ಪ್ಲೇನಲ್ಲಿ 63 ರನ್ ಹರಿದು ಬಂತು. ರೋಹಿತ್ ಹಾಗೂ ಇಶಾನ್ ಮೊದಲ ವಿಕೆಟ್‌ಗೆ 7.3 ಓವರ್‌ಗಳಲ್ಲಿ 74 ರನ್ ಗಳಿಸಿದರು. ರೋಹಿತ್‌ ಶರ್ಮ 43 ರನ್‌ (28 ಎಸೆತ, 5 ಫೋರ್‌, 2 ಸಿಕ್ಸ್‌) ಸಿಡಿಸಿದರು. ಅವರಿಗೆ ಸಾಥ್‌ ನೀಡಿದ್ದ ಇಶಾನ್‌ ಕಿಶಾನ್‌ 45 ರನ್‌ (29 ಎಸೆತ, 5 ಫೋರ್‌, 1 ಸಿಕ್ಸ್‌) ಬಾರಿಸಿ ಮಿಂಚಿದರು.

    ಈ ಜೋಡಿ ವಿಕೆಟ್‌ ಪತನದ ಬೆನ್ನಲ್ಲೇ ಮುಂಬೈ ಹಿನ್ನಡೆ ಅನುಭವಿಸಿತು. ನಂತರ ಬಂದ ಸೂರ್ಯಕುಮಾರ್‌ ಯಾದವ್‌ ಕೇವಲ 13 ರನ್‌ ಗಳಿಸಿ ಕ್ಯಾಚ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಕೀರನ್‌ ಪೊಲಾರ್ಡ್‌ ಮಾತ್ರ ಕಳಪೆ ಪ್ರದರ್ಶನ ತೋರಿ ನಿರೀಕ್ಷೆ ಹುಸಿಗೊಳಿಸಿದರು. ಪೊಲಾರ್ಡ್‌ ಕೇವಲ 14 ಎಸೆತಕ್ಕೆ ಕೇವಲ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿ ನಡೆದರು. ರೋಹಿತ್ ಹಾಗೂ ಪೊಲಾರ್ಡ್ ಪ್ರಮುಖ ವಿಕೆಟ್ ಪಡೆದ ರಶೀದ್ ಖಾನ್ ಬೌಲಿಂಗ್‌ನಲ್ಲಿ ಮೋಡಿ ಮಾಡಿದರು. ಆದರೆ ಗುಜರಾತ್‌ಗೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

    ತಿಲಕ್ ವರ್ಮಾ (21 ರನ್, 16 ಎಸೆತ, 2 ಫೋರ್‌) ಅವರು ಟಿಮ್ ಡೇವಿಡ್ ಜೊತೆ ಉಪಯುಕ್ತ ಜೊತೆಯಾಟದಲ್ಲಿ ಭಾಗಿಯಾದರೂ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಇದರ ನಡುವೆ ಎದೆಗುಂದದೆ ಆಕ್ರಮಣಕಾರಿ ಆಟವಾಡಿದ ಡೇವಿಡ್, ಮುಂಬೈ 177 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಡೇವಿಡ್ (ಅಜೇಯ 44 ರನ್, 21 ಎಸೆತ, 2 ಬೌಂಡರಿ, 4 ಸಿಕ್ಸರ್) ಗಳಿಸಿ ಆರ್ಭಟಿಸಿದರು. ಆ ಮೂಲಕ ಮುಂಬೈ ಇಂಡಿಯನ್ಸ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 177 ರನ್‌ ಗಳಿಸಿತು.

    ಮುಂಬೈ ಇಂಡಿಯನ್ಸ್‌ ತಂಡ ನೀಡಿದ 178 ಟಾರ್ಗೆಟ್‌ ಬೆನ್ನತ್ತಿದ ಗುಜರಾತ್‌ ಟೈಟಾನ್ಸ್‌ ಅಷ್ಟೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಆರಂಭಿಕ ಆಟಗಾರರಾದ ವೃದ್ಧಿಮಾನ್‌ ಸಹಾ ಮತ್ತು ಶುಭಮನ್‌ ಗಿಲ್‌ ಇಬ್ಬರೂ ಅರ್ಧ ಶತಕ ಗಳಿಸಿ ಮೈದಾನದಲ್ಲಿ ಆರ್ಭಟಿಸಿದರು. ಸಹಾ, 55 ರನ್‌ (40 ಎಸೆತ, 6 ಫೋರ್‌, 2 ಸಿಕ್ಸ್‌) ಹಾಗೂ ಗಿಲ್‌, 52 ರನ್‌ (6 ಫೋರ್‌, 2 ಸಿಕ್ಸ್‌) ಸಿಡಿಸಿ ಮಿಂಚಿದರು. ಇಬ್ಬರೂ ಆರಂಭದಲ್ಲೇ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಜೊತೆಯಾಟದಲ್ಲಿ 72 ಎಸೆತಕ್ಕೆ 106 ರನ್‌ ಪೇರಿಸುವ ಮೂಲಕ ಸಹಾ ಮತ್ತು ಗಿಲ್‌ ತಂಡದ ಗೆಲುವಿಗೆ ಮುನ್ನುಡಿ ಬರೆದರು. ನಂತರ ಇಬ್ಬರೂ ವಿಕೆಟ್‌ ಒಪ್ಪಿಸಿ ಹೊರನಡೆದಾಗ ಪಂದ್ಯಕ್ಕೆ ಟ್ವಿಸ್ಟ್‌ ಸಿಕ್ಕಿತು.

    ಗುಜರಾತ್‌ ಗೆದ್ದೇಬಿಟ್ಟಿತು ಎನ್ನುವಂತಿದ್ದಾಗ ಸಾಯಿ ಸುದರ್ಶನ್‌ ಹಿಟ್‌ ವಿಕೆಟ್‌ ಮಾಡಿಕೊಂಡು ಕೇವಲ 14 ರನ್‌ ಗಳಿಸಿ ಮೈದಾನದಿಂದ ತೆರಳಿದರು. ತಂಡದ ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯ 24 ರನ್‌ (14 ಎಸೆತ, 4 ಫೋರ್‌) ಗಳಿಸಲಷ್ಟೇ ಶಕ್ತರಾದರು. ಒಂದು ರನ್‌ ಪಡೆಯುವ ದಾವಂತದಲ್ಲಿ ರನ್‌ ಔಟ್‌ ಆಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಈ ಬೆಳವಣಿಗೆ ಪಂದ್ಯಕ್ಕೆ ಮತ್ತಷ್ಟು ಟ್ವಿಸ್ಟ್‌ ನೀಡಿತು.

    ರನ್‌ ಪಡೆಯುವ ದಾವಂತದಲ್ಲಿ ರಾಹುಲ್‌ ತೆವಾಟಿಯಾ ರನ್‌ ಔಟ್‌ ಆದರು. ಇದು ತಂಡವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತು. ತಂಡಕ್ಕೆ ಭರವಸೆಯಾಗಿದ್ದ ಡೇವಿಲ್‌ ಮಿಲ್ಲರ್‌ (ಅಜೇಯ 19 ರನ್‌, 14 ಎಸೆತ, 1 ಫೋರ್‌, 1 ಸಿಕ್ಸ್‌) ಗೆಲುವು ತಂದುಕೊಡುವಲ್ಲಿ ಸಫಲರಾಗಲಿಲ್ಲ. ಮುಂಬೈ ಇಂಡಿಯನ್ಸ್‌ ಬೌಲರ್‌ ಡ್ಯಾನಿಯಲ್‌ ಸ್ಯಾಮ್‌ ಅವರು ಕೊನೆಯ ಓವರ್‌ನಲ್ಲಿ ಚುರುಕಿನ ಬೌಲಿಂಗ್‌ ಮಾಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಕೊನೆಯ ಎರಡು ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್‌ ಬೌಲರ್‌ಗಳು ಗುಜರಾತ್‌ ಟೈಟಾನ್ಸ್‌ ಬ್ಯಾಟ್ಸ್‌ಮನ್‌ಗಳಿಗೆ ದುಸ್ವಪ್ನವಾಗಿ ಕಾಡಿ ಜಯ ಸಾಧಿಸಿದರು.

    ಮುಂಬೈ ಇಂಡಿಯನ್ಸ್‌ ನೀಡಿದ್ದ 178 ರನ್‌ ಗುರಿ ಬೆನ್ನತ್ತಿದ್ದ ಗುಜರಾತ್‌ ಟೈಟಾನ್ಸ್‌ ರೋಚಕ ಅಂತ್ಯದಲ್ಲಿ ಸೋಲೊಪ್ಪಿಕೊಂಡಿತು. 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿ ಮುಂಬೈ ಇಂಡಿಯನ್ಸ್‌ಗೆ ಶರಣಾಯಿತು.