Tag: GT vs PBKS

  • ಶಿಖರ್‌, ರಬಾಡ ಅಮೋಘ ಆಟ- ಗುಜರಾತ್‌ ಟೈಟಾನ್ಸ್‌ ಧೂಳಿಪಟ

    ಶಿಖರ್‌, ರಬಾಡ ಅಮೋಘ ಆಟ- ಗುಜರಾತ್‌ ಟೈಟಾನ್ಸ್‌ ಧೂಳಿಪಟ

    ಮುಂಬೈ: ಪಂಜಾಬ್‌ ಕಿಂಗ್ಸ್‌ನ ಕಗಿಸೊ ರಬಾಡ ಬೌಲಿಂಗ್‌ ಮೋಡಿ ಹಾಗೂ ಶಿಖರ್‌ ಧವನ್‌ ಬ್ಯಾಟಿಂಗ್‌ ಆರ್ಭಟಕ್ಕೆ ಗುಜರಾತ್‌ ಟೈಟಾನ್ಸ್‌ ಹೀನಾಯ ಸೋಲನುಭವಿಸಿತು. ಈ ಬಾರಿಯ ಐಪಿಎಲ್‌ನಲ್ಲಿ ಸತತ ಗೆಲುವಿನ ಮೂಲಕ ಅಶ್ವಮೇಧ ಯಾಗವನ್ನೇ ಮಾಡುತ್ತಾ ಬಂದಿರುವ ಗುಜರಾತ್‌ ಟೈಟಾನ್ಸ್‌ ಮಂಗಳವಾರದ ಪಂದ್ಯದಲ್ಲಿ ಎರಡನೇ ಬಾರಿ ಮುಖಭಂಗ ಅನುಭವಿಸಿತು.

    ಮುಂಬೈನ ಇಲ್ಲಿನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ಟೈಟಾನ್ಸ್‌ ಮೊದಲು ಬ್ಯಾಟಿಂಗ್‌ ಆಯ್ದುಕೊಂಡರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು. ನಾಲ್ಕು ಓವರ್‌ ಬೌಲಿಂಗ್‌ ಮಾಡಿದ ಕಗಿಸೊ ರಬಾಡ, ಗುಜರಾತ್‌ ಟೈಟಾನ್ಸ್‌ ಬ್ಯಾಟರ್‌ಗಳ ಹೆಡೆಮುರಿ ಕಟ್ಟಿದರು. ಪಂದ್ಯದಲ್ಲಿ 4 ವಿಕೆಟ್‌ ಕಬಳಿಸಿ ಮಿಂಚಿದರು.

    ಗುಜರಾತ್‌ ಟೈಟಾನ್ಸ್‌ ಆರಂಭಿಕ ಆಟಗಾರ ಶುಭಮನ್‌ ಗಿಲ್‌ ಕೇವಲ 9 ರನ್‌ ಗಳಿಸಿ ರನ್‌ ಔಟ್‌ ಆಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಭರವಸೆಯ ಆಟ ಆರಂಭಿಸಿದ ವೃದ್ಧಿಮಾನ್‌ ಸಹಾ 21 ರನ್‌ (17 ಬಾಲ್‌, 3 ಫೋರ್‌, 1 ಸಿಕ್ಸ್‌) ಗಳಿಸಿ ರಬಾಡ ಬೌಲಿಂಗ್‌ನಲ್ಲಿ ಮಯಂಕ್‌ ಅಗರವಾಲ್‌ಗೆ ಕ್ಯಾಚ್‌ ನೀಡಿ ನಡೆದರು. ತಂಡದ ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯ ಈ ಪಂದ್ಯದಲ್ಲಿ ಕೇವಲ 1 ರನ್‌ ಗಳಿಸಿ ಶರ್ಮಾಗೆ ಕ್ಯಾಚ್‌ ನೀಡಿ ಮುಖಭಂಗ ಅನುಭವಿಸಿದರು.

    ಈ ವೇಳೆ ಬ್ಯಾಟರ್ ಸಾಯಿ ಸುದರ್ಶನ್‌ 50 ಎಸೆತಗಳಲ್ಲಿ 64 ರನ್‌ ಗಳಿಸಿ ( 5 ಫೋರ್‌, 1 ಸಿಕ್ಸ್‌) ಗಳಿಸುವ ಮೂಲಕ ಏಕೈಕ ಆಸರೆಯಾಗಿ ತಂಡದ ಮೊತ್ತ 143ಕ್ಕೆ ಏರಿಕೆಯಾಗುವಂತೆ ನೋಡಿಕೊಂಡರು. ಡೇವಿಡ್‌ ಮಿಲ್ಲರ್‌ ಹಾಗೂ ರಾಹುಲ್‌ ತೆವಾಟಿಯಾ ತಲಾ 11 ರನ್‌ ಗಳಿಸಲಷ್ಟೇ ಶಕ್ತರಾಗಿ ಕಳಪೆ ಪ್ರದರ್ಶನ ತೋರಿದರು. ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಕೊನೆಯ ಐದು ಓವರ್‌ಗಳಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಗುಜರಾತ್ ಟೈಟನ್ಸ್, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿತು.

    ಗುಜರಾತ್‌ ಟೈಟಾನ್ಸ್‌ ನೀಡಿದ 144 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಪಂಜಾಬ್‌ ಕಿಂಗ್ಸ್‌ನ ಆರಂಭಿಕ ಆಟಗಾರ ಜಾನ್‌ ಬೆಸ್ಟೊ ಕೇವಲ 1 ರನ್‌ ಗಳಿಸಿ ಮಹಮ್ಮದ್‌ ಶಮಿ ಬೌಲಿಂಗ್‌ನಲ್ಲಿ ಪ್ರದೀಪ್‌ ಸಂಗ್ವಾನ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ನತ್ತ ನಡೆದರು. ಈ ವೇಳೆ ಮೈದಾನದಲ್ಲಿ ಉತ್ತಮ ಪರ್ಫಾರ್ಮೆನ್ಸ್‌ ನೀಡಿದ ಶಿಖರ್‌ ಧವನ್‌ ಔಟಾಗದೆ 62 ರನ್‌ (53 ಬಾಲ್‌, 8 ಫೋರ್‌, 1 ಸಿಕ್ಸ್‌) ಗಳಿಸಿ ಗುಜರಾತ್‌ ಟೈಟಾನ್ಸ್‌ ಬೌಲರ್‌ಗಳ ಬೆವರಿಳಿಸಿದರು. ಇವರಿಗೆ ಭಾನುಕ ರಾಜಪಕ್ಸ (40 ರನ್‌, 28 ಬಾಲ್‌, 5 ಫೋರ್‌, 1 ಸಿಕ್ಸ್‌) ಸಾಥ್‌ ನೀಡಿದರು. ಶಿಖರ್‌ ಮತ್ತು ರಾಜಪಕ್ಸ್‌ 59 ಬಾಲ್‌ಗೆ 87 ರನ್‌ ಜೊತೆಯಾಟವಾಡಿ ತಂಡ ಸುಲಭ ಜಯ ಸಾಧಿಸಲು ನೆರವಾದರು.

    ಅರ್ಧ ಶತಕ ವಂಚಿತರಾದ ರಾಜಪಕ್ಸ ಅವರು ಫರ್ಗ್ಯೂಸನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗಿ ನಡೆದರು. ನಂತರ ಶಿಖರ್‌ಗೆ ಲಿಯಾಮ್‌ ಲಿವಿಂಗ್‌ಸ್ಟೋನ್‌ ಸಾಥ್‌ ನೀಡಿದರು. ಲಿವಿಂಗ್‌ಸ್ಟೋನ್‌ ಔಟ್‌ ಆಗದೆ 30 ರನ್‌ (10 ಬಾಲ್‌, 2 ಫೋರ್‌, 3 ಸಿಕ್ಸ್‌) ಗಳಿಸಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿ ಬಹುಬೇಗ ತಂಡದ ಗೆಲುವಿಗೆ ನೆರವಾದರು. ಆ ಮೂಲಕ ಪಂಜಾಬ್‌ ಕಿಂಗ್ಸ್‌ 16 ಓವರ್‌ನಲ್ಲೇ ಕೇವಲ 2 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸುಲಭ ಜಯ ಸಾಧಿಸಿತು.