Tag: Gruha Jyothi

  • ಸಮೀಕ್ಷೆಯಿಂದ ವಿದ್ಯುತ್ ಬಿಲ್ ವ್ಯತ್ಯಯವಾಗದು, ಗೃಹಜ್ಯೋತಿ ಫಲಾನುಭವಿಗಳಿಗೆ ತೊಂದರೆ ಇಲ್ಲ: ಬೆಸ್ಕಾಂ

    ಸಮೀಕ್ಷೆಯಿಂದ ವಿದ್ಯುತ್ ಬಿಲ್ ವ್ಯತ್ಯಯವಾಗದು, ಗೃಹಜ್ಯೋತಿ ಫಲಾನುಭವಿಗಳಿಗೆ ತೊಂದರೆ ಇಲ್ಲ: ಬೆಸ್ಕಾಂ

    ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (Caste Survey) ಮನೆಗಳನ್ನು ಗುರುತಿಸಿ ಪಟ್ಟಿ ಮಾಡುವ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್‌ಗಳು ನಿಯೋಜನೆಗೊಂಡಿದ್ದರಿಂದ ಕೆಲ ಗೃಹ ಜ್ಯೋತಿ(Gruha Jyothi) ಗ್ರಾಹಕರ ಬಿಲ್‌ನಲ್ಲಿ ಆಗಿದ್ದ ವ್ಯತ್ಯಯವನ್ನು ಸರಿಪಡಿಸಿ ಪರಿಷ್ಕೃತ ಬಿಲ್ ವಿತರಿಸಲಾಗುವುದು ಎಂದು ಬೆಸ್ಕಾಂ (BESCOM)  ಸ್ಪಷ್ಟಪಡಿಸಿದೆ.

    ಸೆಪ್ಟೆಂಬರ್ ತಿಂಗಳಲ್ಲಿ ಮೀಟರ್ ರೀಡರ್‌ಗಳು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಭಾಗವಾಗಿ ಮನೆಗಳನ್ನು ಪಟ್ಟಿ ಮಾಡುವ ಕಾರ್ಯ ಹಾಗೂ ಮೀಟರ್‌ ರೀಡಿಂಗ್‌ಅನ್ನು ಪ್ರೋಬ್‌ಗಳ ಮೂಲಕ ಮೊದಲ ಬಾರಿಗೆ ನಡೆಸುತ್ತಿರುವುದರಿಂದ ವಿದ್ಯುತ್‌ ಬಿಲ್‌ ವಿತರಣೆಯ ದಿನಾಂಕವನ್ನು ಸೆ.15ನೇ ತಾರಿಕಿನಿಂದ 25ನೇ ತಾರೀಕಿನವರೆಗೆ ವಿಸ್ತರಿಸಲಾಗಿತ್ತು.

     
    ಈ ಪ್ರಕ್ರಿಯೆಯಿಂದ ಕೆಲ ಪ್ರಕರಣಗಳಲ್ಲಿ ಗೃಹಜ್ಯೋತಿ ಗ್ರಾಹಕರಿಗೆ ಭಾಗಶಃ ಬಿಲ್‌ ಬಂದಿರುವುದು ಬೆಸ್ಕಾಂ ಗಮನಕ್ಕೆ ಬಂದಿದೆ. ಅವುಗಳನ್ನು ಕಳೆದ ತಿಂಗಳುಗಳ ಸರಾಸರಿಯಂತೆ ಲೆಕ್ಕ ಹಾಕಿ, ಪರಿಷ್ಕೃತ ಬಿಲ್‌ ನೀಡಲಾಗುತ್ತದೆ. ಈ ಮೂಲಕ ಗೃಹಜ್ಯೋತಿ ಫಲಾನುಭವಿಗಳಿಗೆ ಯೋಜನೆಯ ಲಾಭ ಪಡೆಯುವಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

  • ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಹೋಯ್ತು – ಇನ್ಮುಂದೆ ಮನೆ ಬೆಳಗೋದು ಗೃಹಜ್ಯೋತಿ ಮಾತ್ರ

    ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಹೋಯ್ತು – ಇನ್ಮುಂದೆ ಮನೆ ಬೆಳಗೋದು ಗೃಹಜ್ಯೋತಿ ಮಾತ್ರ

    ಬೆಂಗಳೂರು: ರಾಜ್ಯ ಸರ್ಕಾರದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳು ಗೃಹಜ್ಯೋತಿ (Gruha Jyothi) ಜೊತೆಗೆ ವಿಲೀನವಾಗಿದೆ.

    ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಫಲಾನುಭವಿಗಳು ಗೃಹಜ್ಯೋತಿ ಗೆ ನೋಂದಾಯಿಸಿಕೊಳ್ಳಲು ಎಸ್ಕಾಂಗಳು (ESCOM) ಮನವಿ ಮಾಡಿಕೊಂಡಿವೆ.

    ಭಾಗ್ಯಜ್ಯೋತಿ ಕುಟೀರ ಜ್ಯೋತಿಯಲ್ಲಿ 40 ಯೂನಿಟ್ ಹಾಗೂ ಅಮೃತ ಜ್ಯೋತಿಯಲ್ಲಿ ಎಸ್‌ಟಿ, ಎಸ್‌ಸಿ (ST, SC) ಸಮುದಾಯಕ್ಕೆ 75 ಯೂನಿಟ್ ಉಚಿತ ಸ್ಕೀಮ್ ಇತ್ತು. ಈಗ ಈ ಎಲ್ಲಾ ಯೋಜನೆಗಳು ಗೃಹಜ್ಯೋತಿಯ ಜೊತೆಗೆ ವಿಲೀನಗೊಂಡಿದೆ.  ಇದನ್ನೂ ಓದಿ: ಉಚಿತ ಬಸ್ ಪ್ರಯಾಣ ಎಫೆಕ್ಟ್ – ತಳ್ಳಾಟ, ನೂಕಾಟದಲ್ಲಿ ಅಸ್ವಸ್ಥಳಾದ ವಿದ್ಯಾರ್ಥಿನಿ

    ಬೇರೆ ಸ್ಕೀಮ್‌ಗಳ ಪ್ರಯೋಜನವನ್ನು ಪಡೆಯುತ್ತಿರುವ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸಿದರೆ ಮತ್ತೊಮ್ಮೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳುವಂತೆ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಅವರು ತಿಳಿಸಿದ್ದಾರೆ.

    ರಾಜ್ಯ ಸರ್ಕಾರದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳು ಗೃಹಜ್ಯೋತಿ ಜೊತೆಗೆ ವಿಲೀನವಾಗಿದೆ.

  • ನಿಮಗೆ ಉಚಿತ ವಿದ್ಯುತ್‌ ಬೇಕೇ ?-  ಷರತ್ತು ಓದಿ  ನೋಂದಣಿ ಮಾಡಿ

    ನಿಮಗೆ ಉಚಿತ ವಿದ್ಯುತ್‌ ಬೇಕೇ ?- ಷರತ್ತು ಓದಿ ನೋಂದಣಿ ಮಾಡಿ

    ಬೆಂಗಳೂರು: ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ (Congress) ಘೋಷಿಸಿದ ಗೃಹಜ್ಯೋತಿ (Gruha Jyothi) ಉಚಿತ ವಿದ್ಯುತ್‌ (Free Electricity) ಯೋಜನೆಯ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

    ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ / ಕುಟೀರ ಜ್ಯೋತಿ ಯೋಜನೆ ಮತ್ತು ಯೋಜನೆಯಡಿಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಗೃಹ ಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಟ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಹಾಕಲಾಗಿದೆ. ಶೇ.10ರ ಮಿತಿಯನ್ನು ದಾಟಿದರೆ ಎಷ್ಟು ಯೂನಿಟ್‌ ಖರ್ಚಾಗುತ್ತದೋ ಅಷ್ಟು ಯುನಿಟ್‌ಗೆ ಮಾತ್ರ ಬಿಲ್‌ ಪಾವತಿಸಬೇಕಾಗುತ್ತದೆ. 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ.

    ಈ ಯೋಜನೆಯನ್ನು ಜುಲೈ 2023ರ ತಿಂಗಳ ವಿದ್ಯುತ್‌ ಬಳಕೆಗೆ ಆಗಸ್ಟ್ 2023ರ ತಿಂಗಳಿಂದ ನೀಡುವ ಬಿಲ್‌ಗೆ ಅನ್ವಯವಾಗುವಂತೆ ಜಾರಿಯಾಗಿದೆ.

    ಷರತ್ತುಗಳೇನು?
    1. ಈ ಯೋಜನೆಯು ಗೃಹ ಬಳಕೆಯ ವಿದ್ಯುತ್‌ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ, ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್‌ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ

    2. ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸುವುದು.


    3. ಗೃಹ ವಿದ್ಯುತ್‌ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ ನೆಟ್‌ ಬಿಲ್‌ ನೀಡುವುದು ಹಾಗೂ ಗ್ರಾಹಕರು ನೆಟ್‌ ಬಿಲ್‌ ಪಾವತಿಸುವುದು

    4. ಅರ್ಹ ಯೂನಿಟ್ / ಮೊತ್ತಕ್ಕಿಂತ ಒಳಗೆ, ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು.

    5. ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

    6. ಪ್ರತಿ ಫಲಾನುಭವಿಯು ತನ್ನ Customer ID / Account ID ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು

    7. ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ – ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿ ಗ್ರಾಹಕರುಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸುವುದು.

    8. ಜೂನ್‌ 30ರ ಒಳಗಡೆ ಬಾಕಿ ಇರುವ ವಿದ್ಯುತ್‌ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸತಕ್ಕದ್ದು, ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

    9. ಗೃಹ ವಿದ್ಯುತ್‌ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು. ಗ್ರಾಹಕನಿಗೆ ನೀಡಿದ ಉಚಿತ ಮೊತ್ತವನ್ನು ಸರ್ಕಾರದಿಂದ ವಿದ್ಯತ್ ಸರಬರಾಜು ಕಂಪನಿಗಳಿಗೆ ಸಹಾಯಧನದ ಮೂಲಕ ಪಾವತಿಸಲಾಗುತ್ತದೆ.