Tag: grrom

  • ಟ್ರ್ಯಾಕ್ಟರ್ ಅಡಿ ಸಿಲುಕಿ 45 ದಿನಗಳ ಹಿಂದೆ ಮದ್ವೆಯಾಗಿದ್ದ ನವವಿವಾಹಿತ ದುರ್ಮರಣ

    ಟ್ರ್ಯಾಕ್ಟರ್ ಅಡಿ ಸಿಲುಕಿ 45 ದಿನಗಳ ಹಿಂದೆ ಮದ್ವೆಯಾಗಿದ್ದ ನವವಿವಾಹಿತ ದುರ್ಮರಣ

    ಚಿಕ್ಕಮಗಳೂರು: ಇಳಿಜಾರಿನಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನವವಿವಾಹಿತ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೇಕೋಟೆ ಬಳಿ ನಡೆದಿದೆ.

    ಮೃತನನ್ನು ಹರೀಶ್(28) ಎಂದು ಗುರುತಿಸಲಾಗಿದೆ. ಹರೀಶ್ ಕಳೆದ 45 ದಿನಗಳ ಹಿಂದಷ್ಟೆ ಮದುವೆಯಾಗಿದ್ದರು. ಆರ್.ಆರ್.ಎಸ್. ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಹರೀಶ್, ಶನಿವಾರ ಮಧ್ಯಾಹ್ನ ಹಳೇಕೋಟೆಯಿಂದ ಮೂಡಿಗೆರೆಗೆ ಬರುವಾಗ ಇಳಿಜಾರಿನಲ್ಲಿ ಟ್ರ್ಯಾಕ್ಟರ್ ಚಕ್ರ ಗುಂಡಿಗೆ ಇಳಿದಿದ್ದರಿಂದ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್ ಅಡಿ ಸಿಲುಕಿದ ಹರೀಶ್ ಮೇಲೇಳಲಾಗದೆ ಸಾವನ್ನಪ್ಪಿದ್ದಾರೆ.

    POLICE JEEP

    ಇತ್ತ ಮನೆಯವರು, ಸ್ನೇಹಿತರು ಫೋನ್ ಮಾಡಿದರು ಫೋನ್ ಪಿಕ್ ಮಾಡುತ್ತಿರಲಿಲ್ಲ. ಟ್ರ್ಯಾಕ್ಟರ್ ಕೂಡ ಇಲ್ಲ ಎಂದು ಮನೆಯವರು, ಸ್ನೇಹಿತರು ಹುಡುಕಾಡಿದಾಗ ಈ ದುರ್ಘಟನೆ ಸಂಭವಿಸಿರೋದು ರಾತ್ರಿ ಬೆಳಕಿಗೆ ಬಂದಿದೆ. ಮಲೆನಾಡಿನ ತಿರುವುಗಳಲ್ಲಿನ ಇಳಿಜಾರಿನಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೇವಸ್ಥಾನದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಿ ದೇಶವನ್ನು ಅದಾನಿ, ಅಂಬಾನಿಗೆ ಒತ್ತೆ ಇಡುತ್ತಿದೆ: ಸಿದ್ದರಾಮಯ್ಯ

    ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಹರೀಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಮಾಕೋನಹಳ್ಳಿಯ ಬಳಿಯೂ ಟಿಂಬರ್ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ರಸ್ತೆಯ ಅಪ್ ಹತ್ತಲಾಗದೆ ಇಳಿಜಾರಿನಲ್ಲಿ ಹಿಮ್ಮುಖವಾಗಿ ಸುಮಾರು 50 ಮೀಟರ್ ನಷ್ಟು ದೂರ ಬಂದು ಪಲ್ಟಿಯಾಗಿತ್ತು. ಈ ವೇಳೆ ಗಾಡಿ ಕಂಟ್ರೋಲ್‍ಗೆ ಸಿಗುತ್ತಿಲ್ಲ ಎಂದು ಡ್ರೈವರ್ ಗೆ ಅರಿವಾದಾಗ ಚಾಲಕ ಟ್ರ್ಯಾಕ್ಟರ್ ನಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ.

  • 50 ವರ್ಷದ ಅಮ್ಮನಿಗೆ ವರ ಬೇಕಾಗಿದೆ- ಮಗಳ ಟ್ವೀಟ್ ವೈರಲ್

    50 ವರ್ಷದ ಅಮ್ಮನಿಗೆ ವರ ಬೇಕಾಗಿದೆ- ಮಗಳ ಟ್ವೀಟ್ ವೈರಲ್

    ನವದೆಹಲಿ: 2015ರಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ಸೂಕ್ತ ವಧು ಬೇಕು ಎಂದು ಮ್ಯಾಟ್ರಿಮೊನಿಯಲ್ಲಿ ಜಾಹೀರಾತು ನೀಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಇದೀಗ ಯುವತಿಯೊಬ್ಬಳು ತನ್ನ 50 ವರ್ಷದ ತಾಯಿಗೆ ವರ ಹುಡುಕಲು ಹೊರಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಕಾನೂನು ವಿದ್ಯಾರ್ಥಿನಿ ಆಸ್ತಾ ವರ್ಮಾ ಗುರುವಾರ ಒಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ತನ್ನ ತಾಯಿಗೆ ಸೂಕ್ತ ವರ ಬೇಕಾಗಿದ್ದಾನೆ ಎಂದು ಬರೆದುಕೊಂಡು ತನ್ನ ತಾಯಿ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ವರ ಸಸ್ಯಾಹಾರಿಯಾಗಿರಬೇಕು, ಮದ್ಯ ಸೇವಿಸಬಾರದು ಹಾಗೆಯೇ ಉತ್ತಮ ವ್ಯಕ್ತಿಯಾಗಿರಬೇಕು ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಗ್ರೂಮ್ ಹಂಟಿಂಗ್ ಅಂತ ಪೋಸ್ಟ್ ಮಾಡಿದ್ದಾರೆ.

    https://twitter.com/AasthaVarma/status/1189915673897529345

    ಆಸ್ತಾ ಅವರು ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡುತ್ತಿದ್ದಂತೆಯೇ ಟ್ವೀಟ್ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಕೆಲವು ಸಲಹೆಗಳು ಕೂಡ ಬಂದವು. ಕೆಲವರು ತಾಯಿ ತನ್ನ ಮಗಳಿಗೆ ವರ ಹುಡುಕಬೇಕಾಗಿತ್ತು. ಆದರೆ ಇಲ್ಲಿ ಮಗಳೇ ತಾಯಿಗೆ ವರ ಹುಡುಕುತ್ತಿದ್ದಾರೆ. ನಿಜಕ್ಕೂ ಈ ವಿಚಾರ ನಮ್ಮ ಮನ ಕರಗಿಸಿತ್ತು ಎಂದು ಬರೆದುಕೊಂಡಿದ್ದಾರೆ.

    ಅಕ್ಟೋಬರ್ 31ರಂದು ಮಾಡಿದ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಇದುವರೆಗೂ 5 ಸಾವಿರ ಮಂದಿ ಪ್ರತಿಕ್ರಿಯಿಸಿದರೆ, 5,500ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ. ಸುಮಾರು 27 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ.

    ಹಲವರು ಈ ಪೋಸ್ಟನ್ನು ಇಷ್ಟಪಟ್ಟಿದ್ದಾರೆ. ಅಲ್ಲದೆ ಆಸ್ತಾ ಅವರ ಈ ಕೆಲಸಕ್ಕೆ ಶಹಬ್ಬಾಸ್ ಎಂದಿದ್ದಾರೆ. ಇನ್ನೂ ಕೆಲವರು ಈ ಒಳ್ಳೆಯ ಕೆಲಸಕ್ಕೆ ಶುಭಹಾರೈಸಿದ್ದಾರೆ. ಮತ್ತೆ ಕೆಲವರು ಇಷ್ಟೇ ವಯಸ್ಸಿನ ವಧು ಹುಡುಕುತ್ತಿರುವ ಬೇರೆ ಗಂಡಸರಿಗೆ ಟ್ಯಾಗ್ ಮಾಡಿದ್ದಾರೆ.