Tag: groundwater

  • ರಾಜ್ಯದ 15 ಜಿಲ್ಲೆಗಳ 252 ಗ್ರಾ.ಪಂ.ಗಳಲ್ಲಿ ʻನೀರಿದ್ದರೆ ನಾಳೆʼ ಯೋಜನೆ ಅನುಷ್ಠಾನ; ನಟ ವಸಿಷ್ಠ ಸಿಂಹ ರಾಯಭಾರಿ

    ರಾಜ್ಯದ 15 ಜಿಲ್ಲೆಗಳ 252 ಗ್ರಾ.ಪಂ.ಗಳಲ್ಲಿ ʻನೀರಿದ್ದರೆ ನಾಳೆʼ ಯೋಜನೆ ಅನುಷ್ಠಾನ; ನಟ ವಸಿಷ್ಠ ಸಿಂಹ ರಾಯಭಾರಿ

    – ನಾಳೆ ಸಿಎಂ, ಡಿಸಿಎಂ ರಿಂದ ಚಾಲನೆ: ಸಚಿವ ಬೋಸರಾಜು

    ಬೆಂಗಳೂರು: ರಾಜ್ಯದ 15 ಜಿಲ್ಲೆ, 27 ತಾಲ್ಲೂಕುಗಳಲ್ಲಿನ ಅಂತರ್ಜಲ ಅತಿಬಳಕೆಯ ಪಟ್ಟಿಯಲ್ಲಿರುವ 252 ಗ್ರಾಮ ಪಂಚಾಯ್ತಿಗಳಲ್ಲಿ ʻನೀರಿದ್ದರೆ ನಾಳೆʼ ಯೋಜನೆಯನ್ನು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಮಹತ್ವಕಾಂಕ್ಷಿ ಯೋಜನೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಚಾಲನೆ ನೀಡಲಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು (NS Boseraju) ತಿಳಿಸಿದರು.

    ವಿಕಾಸಸೌಧ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರಕೃತಿಯಿಂದ ವರದಾನವಾಗಿ ಬಂದಿರುವ ನೈಸರ್ಗಿಕ ಹಾಗೂ ನಮ್ಮ ಪೂರ್ವಜರು ನಿರ್ಮಿಸಿದ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಿ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುವ ಉದ್ದೇಶದಿಂದ ʻನೀರಿದ್ದರೆ ನಾಳೆʼ ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ನೀರಿನ ಮಹತ್ವ ತಿಳಿಸುವುದು, ರಾಜ್ಯದ ಜಲ ಮೂಲಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು, ನಾಗರಿಕರನ್ನ ನೀರಿನ ಸಂರಕ್ಷಣೆಯ ಅಭಿಯಾನದಲ್ಲಿ ಪಾಲುದಾರರನ್ನಾಗಿ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದರು.

    ಸಾಂದರ್ಭಿಕ ಚಿತ್ರ

    ಮೊದಲ ಹಂತದಲ್ಲಿ ರಾಜ್ಯದ 16 ಜಿಲ್ಲೆಗಳ 27 ತಾಲ್ಲೂಕುಗಳ 525 ಅಂತರ್ಜಲ (Groundwater) ಅತಿಬಳಕೆ ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೈಕಿ ಕಲ್ಯಾಣ ಕರ್ನಾಟಕ ಭಾಗದ 100ಕ್ಕೂ ಹೆಚ್ಚು ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯತಿಗಳಿವೆ ಎಂದರು.

    ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಸಿಷ್ಠ ಸಿಂಹ (Vasishta Simha) ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ. ನಾಳೆ ವಿಧಾನಸೌಧದ ಬ್ವಾಂಕ್ವೆಟ್‌ ಹಾಲ್‌ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ರಾಜ್ಯದಲ್ಲಿ ಅಂತರ್ಜಲ ಸಾಕ್ಷರತೆಗೆ ಒತ್ತು ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ದಿ ಇಲಾಖೆ ಕಾರ್ಯದರ್ಶಿಗಳಾದ ಬಿ.ಕೆ ಪವಿತ್ರ ಅವರು ಉಪಸ್ಥಿತರಿದ್ದರು.

  • ಭೂಮಿಗೆ ತಟ್ಟುವ ತಾಪ – ಅಂತರ್ಜಲಕ್ಕೆ ಶಾಪ!

    ಭೂಮಿಗೆ ತಟ್ಟುವ ತಾಪ – ಅಂತರ್ಜಲಕ್ಕೆ ಶಾಪ!

    ʻʻಎಲ್ಲಿ ನೀರು ಹರಿಯುವುದೋ, ಅಲ್ಲಿ ನಾಗರಿಕತೆ ಅರಳುತ್ತದೆ, ಅಂತರ್ಜಲ (Groundwater) ಅಮೂಲ್ಯ ಅದನ್ನು ಮಿತವಾಗಿ ಬಳಸಿದರೆ ಬಾಳು ಬಂಗಾರ, ಹನಿ ಹನಿ ಗೂಡಿದರೆ ಹಳ್ಳ. ಹನಿ ಹನಿ ಇಂಗಿದರೆ ಅದುವೇ ಅಂತರ್ಜಲʼʼ ಇದು ಕೇವಲ ನುಡಿಯಲ್ಲ, ಜೀವ ಕೋಟಿಗೆ ನೀರು ಅನಿವಾರ್ಯ, ನೀರಿಗೆ ಮಳೆಯೇ ಆಧಾರ, ಅಂತರ್ಜಲದಿಂದಲೇ ಜೀವ ಕುಲದ ಉದ್ಧಾರ ಎಂಬುದನ್ನು ಪ್ರಮಾಣಿಕರಿಸುವ ಪ್ರಯತ್ನ. ಯಾವುದೇ ಒಂದು ಚಟುವಟಿಕೆಗೂ ಅತ್ಯಗತ್ಯವಾದ ಸಂಪನ್ಮೂಲ ನೀರು. ಇಂದಿನ ಜಲಕ್ಷಾಮಕ್ಕೆ ಅಂತರ್ಜಲದ ಪೂರೈಕೆ ಹಾಗೂ ಬೇಡಿಕೆಗೆ ಇರುವ ಅಗಾಧವಾದ ಅಸಮತೋಲನವೇ ಪ್ರಮುಖ ಕಾರಣವಾಗಿದೆ. ಭೂಮಿಯ (Earth) ಮೇಲೆ ಬೀಳುವ ಮಳೆ ನೀರು ವ್ಯರ್ಥವಾಗಿ ಹರಿದು ಸಮುದ್ರಕ್ಕೆ ಸೇರುವುದನ್ನು ತಪ್ಪಿಸಿ ನೆಲದಾಳಕ್ಕೆ ಇಂಗುವಂತೆ ಮಾಡದಿದ್ದರೆ ಜನ-ಜಾನುವಾರುಗಳು ನಾಶವಾಗುವ ಮೂಲಕ ನಾಗರಿಕತೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ.

    ಅದರಲ್ಲೂ ಇತ್ತೀಚಿನ ಅಧ್ಯಯನವೊಂದು (Water Study) ಅಂತರ್ಜಲಕ್ಕೆ ಆಗುವ ಅಪಾಯಗಳನ್ನು ಗುರುತಿಸಿದೆ. ಅಂತರ್ಜಲವು ನಮ್ಮ ಪಾದದ ಅಡಿಯಲ್ಲೇ ಇದೆ, ಭೂಮಿಯನ್ನು ಕೊರೆದು ಪಂಪ್‌ ಮಾಡುವಾಗ ಅದು ನಮ್ಮ ಅರಿವಿಗೆ ಬರುತ್ತದೆ. ನಮ್ಮ ಜೀವ ಕೋಟಿ, ಪರಿಸರ ವ್ಯವಸ್ಥೆಗೆ ಆಧಾರವಾಗಿರುವ ಅಂತರ್ಜಲ ಅಪಾಯದಲ್ಲಿದೆ ಎಂದರೆ ನೀವು ನಂಬುತ್ತೀರಾ? ಅಷ್ಟಕ್ಕೂ ಏನದು ಅಪಾಯ? ಭೂಮಿಯ ಮೇಲ್ಮೈ ತಾಪ ಹೆಚ್ಚಿದಷ್ಟು ಅಂತರ್ಜಲಕ್ಕೆ ಏನು ಹಾನಿಯಾಗಲಿದೆ? ಕುಡಿಯುವ ನೀರಿನ ಮೇಲೂ ಇದು ಪರಿಣಾಮ ಬೀರಲಿದೆಯೇ? ಎಂಬುದನ್ನು ನಾವಿಲ್ಲಿ ತಿಳಿಯಬಹುದು.

    ಅಂತರ್ಜಲದ ತಾಪ ಹೆಚ್ಚಿದರೆ ಏನಾಗುತ್ತದೆ?

    ಹವಾಮಾನ ಬದಲಾವಣೆಯಿಂದ ಅಂತರ್ಜಲ ರಕ್ಷಿಸಲ್ಪಡುತ್ತದೆ ಎಂದು ನಾವು ಭಾವಿಸಬಹುದು. ಏಕೆಂದರೆ ಅದು ಭೂಗತವಾಗಿರುತ್ತದೆ. ಆದ್ರೆ ನಿಜಾಂಶವೇ ಬೇರೆ. ಭೂಮಿಯ ಮೇಲ್ಮೈ ವಾತಾವರಣವು ಬೆಚ್ಚಗಾಗುತ್ತಿದ್ದಂತೆ ಹೆಚ್ಚು ಹೆಚ್ಚು ಶಾಖವು ಭೂಗತಕ್ಕೆ ತೂರಿಕೊಳ್ಳುತ್ತದೆ. ಈಗಾಗಲೇ ಇದಕ್ಕೆ ಸಾಕಷ್ಟು ಸಾಕ್ಷ್ಯಗಳೂ ಇವೆ. ಬೋರ್ವೆಲ್‌ ಕೊರೆಸಿದ ನಂತರ ಕೆಲವರು ಅವುಗಳನ್ನು ಮುಚ್ಚದೇ ಹಾಗೆಯೇ ಬಿಟ್ಟುಬಿಡುತ್ತಾರೆ. ಅಲ್ಲದೇ ಉಕ್ಕಿನ ಪೈಪ್‌ಗಳನ್ನು ಬಳಸುವುದರಿಂದ ಅದಕ್ಕೆ ತಗುಲುವ ಶಾಖವು ಅಂತರ್ಜಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಜೊತೆಗೆ ಭೂಗತ ದ್ರವ್ಯರಾಶಿಗಳು ಬೆಚ್ಚಗಾಗುತ್ತವೆ. ಪ್ರದೇಶದಿಂದ ಪ್ರದೇಶಕ್ಕೆ ಈ ಹವಾಮಾನ ಬದಲಾದಂತೆ ಅದು ಭೂಗತ ಜೀವರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗುತ್ತದೆ. ಜೊತೆಗೆ ಕುಡಿಯುವ ನೀರಿನ ಕೊರತೆಗೂ ಕಾರಣವಾಗುತ್ತದೆ. ಮುಖ್ಯವಾಗಿ ಕೃಷಿ ಮತ್ತು ಕೈಗಾರಿಕೆಗಳು ಹೆಚ್ಚಾಗಿ ಈ ಅಂತರ್ಜಲವನ್ನು ಅವಲಂಬಿಸಿದ್ದು, ಅಂತರ್ಜಲದ ತಾಪ ಹೆಚ್ಚಿದಂತೆ ಈ ಎಲ್ಲ ಚಟುವಟಿಕೆಗಳ ಮೇಲೆಯೂ ಪರಿಣಾಮ ಬೀರಬಹುದು.

    ಅನೂಕೂಲವೂ ಇದೆ:

    ಕೆಲವೊಮ್ಮೆ ಬಿಸಿ ಅಂರ್ತಜಲ ಒಳ್ಳೆಯ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಭೂಮಿಯ ಮೇಲ್ಮೈ ತಾಪ ಹೆಚ್ಚಿದಂತೆ ಭೂಮಿಯೊಳಗೆ ಹತ್ತಾರು ಮೀಟರ್‌ ಆಳದಲ್ಲಿ ಶಾಖ ಹಿಡಿದಿಟ್ಟುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯುತ್‌ ಚಾಲಿತ ಪಂಪ್‌ಸೆಟ್‌ಗಳನ್ನು ಬಳಸುವುದರಿಂದ ಶಾಖವೂ ನೀರಿನೊಂದಿಗೆ ಹೊರಬರುತ್ತದೆ. ಈಗಾಗಲೇ ಯೂರೋಪಿನಾದ್ಯಂತ ಇದು ಬಳಕೆಯಲ್ಲಿದೆ ಎಂದು ತಜ್ಞರು ಹೇಳಿದ್ದಾರೆ.

    ಅನಾನುಕೂಲಗಳೇನು?

    ಅಂತರ್ಜಲ ಬಿಸಿಯಾದಷ್ಟೂ ಭೂಮಿಯ ಅಡಿಯಲ್ಲಿ ವಾಸಿಸುವ ಜೀವರಾಶಿಗಳ ಜೀವಕ್ಕೆ ಹಾನಿಯನ್ನುಂಟುಮಾಡುತ್ತದೆ. ಅಲ್ಲದೇ ಅಂತರ್ಜಲವನ್ನೇ ನಂಬಿ ಬದುಕುವ ರೈತರ ಬೆಳೆಗಳಿಗೆ ಇದರಿಂದ ಹಾನಿಯೂ ಸಂಭವಿಸಬಹುದು.

    ಬಿಸಿ ನೀರಿನಲ್ಲಿ ಆಮ್ಲಜನಕ ಕಡಿಮೆ:

    ಅಂತರ್ಜಲಗಳು ನದಿ ಮತ್ತು ಸರೋವರಗಳನ್ನು ಪೋಷಿಸಲು ನಿಯಮಿತವಾಗಿ ಹರಿಯುತ್ತದೆ. ಹಾಗೇಯೇ ಅಂತರ್ಜಲವನ್ನೇ ಅವಲಂಬಿಸಿರುವ ಪರಿಸರ ವ್ಯವಸ್ಥೆಯನ್ನೂ ಸಂರಕ್ಷಿಸುತ್ತದೆ. ಆದ್ರೆ ಈ ನದಿ ಮತ್ತು ಸರೋವರಗಳಿಗೆ ಹರಿಯುವ ಅಂತರ್ಜಲ ಜಲಚರಗಳ ಜೀವಕ್ಕೂ ಅಪಾಯ ತರುತ್ತದೆ. ಬಿಸಿನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುವ ಕಾರಣದಿಂದ ಅವು ಜೀವ ಕಳೆದುಕೊಳ್ಳಲಿವೆ ಎಂದು ತಜ್ಞರು ವಿವರಿಸಿದ್ದಾರೆ.

    ಈಗಾಗಲೇ ಆಸ್ಟ್ರೇಲಿಯಾದ ಮುರ್ರೆ ಡಾರ್ಲಿಗ್‌ನಂತರ ಜಲಾನಯನ ಪ್ರದೇಶಗಳಲ್ಲಿ ಈ ಸಮಸ್ಯೆ ಬಂದೊದಗಿದೆ. ಹೆಚ್ಚಿದ ಅಂತರ್ಜಲ ತಾಪದಿಂದ ಆಮ್ಲಜನಕದ ಕೊರತೆಯುಂಟಾಗಿ ಮೀನುಗಳು ಮತ್ತು ಇತರ ಜಲಚರಗಳ ಮಾರಣಹೋಮಕ್ಕೆ ಕಾರಣವಾಗಿದೆ. ಆದ್ರೆ ಅಟ್ಲಾಂಟಿಕ್‌, ಸಾಲ್ಮಾನ್‌ನಂತಹ ತಣ್ಣೀರಿನ ಸರೋವರಗಳು ಶೀತ ಅಂತರ್ಜಲ ವಿಸರ್ಜನೆಯೊಂದಿಗೆ ಆಗಾಗ್ಗೆ ನೀರಿನ ತಾಪದೊಂದಿಗೆ ಸಮತೋಲನ ಕಾಯ್ದುಕೊಳ್ಳುತ್ತಿವೆ.

    ಕರ್ನಾಟಕದಲ್ಲಿ ಸದ್ಯ ಬೋರ್ವೆಲ್‌ ಕೊರೆಯಲು ಇರುವ ನಿಯಮಗಳೇನು?

    ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಕಂಡಿಕೆ 11ರನ್ವಯ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಎಲ್ಲಿ ಕೊಳವೆಬಾವಿ ಕೊರೆಯಬೇಕೆಂದರೆ ಸಂಬಂಧಪಟ್ಟ ಪ್ರಾಧಿಕಾರಿ/ಮಂಡಳಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯುವುದು. ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ, ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು. ಕಂಡಿಕೆ 17ರ ಅನ್ವಯ ಯಾವ ಸ್ಥಳದಲ್ಲಿ ಕೊಳವೆಬಾವಿ ಕೊರೆಯಲು ಅನುಮತಿ ನೀಡಲಾಗುತ್ತದೆಯೋ, ಅದೇ ಸ್ಥಳದಲ್ಲಿ ಬೋರ್‌ ಕೊರೆಯುವುದು ಕಡ್ಡಾಯ. ಈ ನಿಯಮ ಉಲ್ಲಂಘಿಸಿದವರಿಗೆ ಕೊಳವೆಬಾವಿ ಕೊರೆಸಲು ನೀಡಿರುವ ಅನುಮತಿ ರದ್ದುಪಡಿಸಲಾಗುವುದು ಮತ್ತು ಕಾನೂನು ಕ್ರಮ ಜರುಗಿಸಲಾಗುವುದು. 36 ಪ್ರಕರಣಗಳಲ್ಲಿ ಕೊಳವೆಬಾವಿ ಕೊರೆಯುವ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಅವುಗಳನ್ನು ತಡೆಹಿಡಿಯಲಾಗಿದ್ದು, ಸಂಬಂಧಪಟ್ಟ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಲಮಂಡಳಿ ತಿಳಿಸಿದೆ.

    ಅನುಮತಿ ಪಡೆಯದಿದ್ದರೆ ಶಿಕ್ಷೆ ಏನು?

    ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆಯುವವರು ಮತ್ತು ಕೊರೆಸುವವರು ಇಬ್ಬರಿಗೂ ಶಿಕ್ಷೆಯಾಗಲಿದೆ. ನ್ಯಾಯಾಲಯ ಕನಿಷ್ಠ 6 ತಿಂಗಳು ಶಿಕ್ಷೆ ಅಥವಾ ದಂಡ ವಿಧಿಸಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಜೀವನಕ್ಕೆ ಅಗತ್ಯವಾಗಿ ಬೇಕಾದ ನೀರು, ಗಾಳಿ ಎಲ್ಲರಿಗೂ, ಎಲ್ಲಾ ಕಾಲಕ್ಕೂ ಸುಲಭವಾಗಿ ದೊರೆಯುವಂತಾಗಬೇಕು. ಇದು ಪ್ರಕೃತಿಯ ನಿಯಮವೂ ಹೌದು. ಆದರೆ ಮಾನವ ಕೇವಲ ಹಕ್ಕುಗಳಿಗೆ ಹೋರಾಡಿ, ಕರ್ತವ್ಯ ಮರೆಯುತ್ತಿರುವುದರಿಂದ ನೀರಿನ ಸಮಸ್ಯೆ ಗಂಭೀರ ಘಟ್ಟ ತಲುಪುವಂತಾಗಿದೆ. ಅಂತರ್ಜಲ ಸಂರಕ್ಷಣೆ ಆಗದಿರುವುದರಿಂದ ಹಾಗೂ ಅಭಿವೃದ್ಧಿಗೆ ಕೆಲವರು ಅಡ್ಡಗಾಲು ಹಾಕಿರುವುದರಿಂದ ಜನತೆಗೆ ಶುದ್ಧವಾದ ನೀರು ಸಿಗದೇ ಅನಾರೋಗ್ಯದಿಂದ ಬಳಲುವಂತಾಗಿದೆ. ಭೂಮಿಯ ಮೇಲೆ ಹರಿಯುವ ನೀರಿಗೂ, ಭೂಮಿಯ ಒಳಗಿರುವ ಅಂತರ್ಜಲಕ್ಕೂ ಮಳೆಯೇ ಆಧಾರ, ಮಳೆ ಬಂದಾಗ ಬಹುಪಾಲು ನೀರು ನಿಲ್ಲದೇ ಹರಿದು ವ್ಯರ್ಥವಾಗುತ್ತಿದೆ. ಇದಕ್ಕೆ ಕೆರೆ, ಕಟ್ಟೆಗಳ ಒತ್ತುವರಿ, ನೀರು ಹರಿಯುವ ರಾಜ ಕಾಲುವೆಗಳನ್ನು ಮುಚ್ಚಿ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದೇ ಕಾರಣವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

    ಅಂತರ್ಜಲ ಬಳಕೆ ಎಷ್ಟು ಮುಖ್ಯವೋ ಅದೇ ರೀತಿ ಸಂರಕ್ಷಣೆ ಮತ್ತು ಅಬಿವೃದ್ಧಿಯು ಅಷ್ಟೇ ಮುಖ್ಯ. ಮಳೆ ಕಾಲ ಕಾಲಕ್ಕೆ ಸರಿಯಾಗಿ ಆಗದೆ ಏರುಪೇರು ಉಂಟಾಗದೇ ಅಸಮತೋಲನ ಹೆಚ್ಚುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಕೃತಕ ಮರುಪೂರಣ ಕಾರ್ಯಕ್ರಮಗಳು ಮುಖ್ಯ, ಚೆಕ್ ಡ್ಯಾಮ್, ಸೋಸು ಕೆರೆ, ಇಂಗು ಬಾವಿಗಳ ರಚನೆ ಮಾಡುವುದು ಸರ್ಕಾರ ಮತ್ತು ಜನತೆಯ ಕರ್ತವ್ಯವೂ ಆಗಿದೆ.

  • ಸಂಪಾಜೆ ಘಾಟಿಯಲ್ಲಿ ಉಕ್ಕುತ್ತಿರುವ ಅಂತರ್ಜಲ – ರಸ್ತೆ ಕುಸಿಯುವ ಅತಂಕ

    ಸಂಪಾಜೆ ಘಾಟಿಯಲ್ಲಿ ಉಕ್ಕುತ್ತಿರುವ ಅಂತರ್ಜಲ – ರಸ್ತೆ ಕುಸಿಯುವ ಅತಂಕ

    – ರಸ್ತೆಯ ಮೇಲ್ಭಾಗದಲ್ಲಿಯೇ ಹರಿಯಲಾರಂಭಿಸಿದ ನೀರು
    – ಬೆಟ್ಟ ಕುಸಿತಕ್ಕೆ ಉಬ್ಬುತ್ತಿರುವ ಹೆದ್ದಾರಿಗಳು
    – ಮನೆ ಮೇಲೆ ಉರುಳಿದ ಬಂಡೆಗಳು

    ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಹಾಮಳೆಗೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಕುಸಿದು ಬಂದ್ ಆಗುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲದೇ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಹೆದ್ದಾರಿಗಳ ಮೇಲೆಯೇ ಇದೀಘ ಜಲಾದ ಮೂಲಗಳು ಹೆಚ್ಚಾಗಿದ್ದು, ರಸ್ತೆಯ ಮೇಲ್ಭಾಗದಲ್ಲಿ ನೀರು ಹರಿಯಲು ಅರಂಭಿಸಿದೆ.

    ಬೆಟ್ಟ ಕುಸಿತಕ್ಕೆ ಉಬ್ಬುತ್ತಿರುವ ಹೆದ್ದಾರಿಗಳು:
    ಕಳೆದ ಒಂದು ವಾರದವರೆಗೆ ಜಿಲ್ಲೆಯಲ್ಲಿ 1,600 ಮಿಲಿ ಮೀಟರ್ ಗೂ ಅಧಿಕ ಮಳೆ ಸುರಿದಿದೆ. ಪರಿಣಾಮವಾಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೂರು ಕಡೆಗಳಲ್ಲಿ ಅತ್ಯಂತ ಅಪಾಯಕಾರಿ ಮತ್ತು ತೀವ್ರ ಕುಸಿಯುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈಗಾಗಲೇ ಮೂರು ಕಡೆಗಳಲ್ಲಿ ಬಿರುಕು ಮೂಡಿದೆ. ಎರಡನೇ ಮೊಣ್ಣಂಗೇರಿಯಲ್ಲಿ ಎರಡು ಕಡೆ ಬಿರುಕು ಬಿಟ್ಟಿದ್ದರೆ, ಮದೆನಾಡು ಬಳಿ ರಸ್ತೆ ಉಬ್ಬುತ್ತಿದೆ. ಕರ್ತೋಜಿ ಬೆಟ್ಟ ಕುಸಿಯುತ್ತಿರುವುದರಿಂದ ಅದರ ಒತ್ತಡಕ್ಕೆ ಹೆದ್ದಾರಿ ಉಬ್ಬುತ್ತಿದೆ. ಹೀಗೆ ಉಬ್ಬಿದಂತೆಲ್ಲಾ ಮಣ್ಣು ತೆಗೆಯಲಾಗುತ್ತಿದ್ದು, ಕಳೆದ ಮೂರು ದಿನಗಳಿಂದ 100 ಲೋಡಿಗೂ ಹೆಚ್ಚು ಮಣ್ಣನ್ನು ಉಬ್ಬಿದ ಸ್ಥಳದಿಂದ ತೆಗೆಯಲಾಗಿದೆ.

    ಉಕ್ಕುತ್ತಿರುವ ಅಂತರ್ಜಲ:
    ಜೊತೆಗೆ ಎರಡನೇ ಮೊಣ್ಣಂಗೇರಿಯಿಂದ ಮದೆನಾಡುವರೆಗೆ ಹೆದ್ದಾರಿಯಲ್ಲೇ ಅಂತರ್ಜಲ ಉಕ್ಕುತ್ತಿದೆ. ಇದರ ಜೊತೆಗೆ ಬೆಟ್ಟದ ಕೆಳ ಭಾಗದಲ್ಲಿಯೂ ಜಲ ಹೊರ ಬರುತ್ತಿದೆ. ಇದರಿಂದಾಗಿ ಈ ಬಾಗದ ಜನರಲ್ಲಿ ಅತಂಕ ಶುರುವಾಗಿದೆ. ಕಾರಣ ಕಳೆದ ವರ್ಷ ತಲಕಾವೇರಿಯಲ್ಲಿ ನಡೆದ ಭೀಕರ ದುರಂತಕ್ಕೂ ಮೊದಲು ಗಜಗಿರಿ ಬೆಟ್ಟದಿಂದ ಭಾರೀ ಪ್ರಮಾಣದಲ್ಲಿ ಅಂತರ್ಜಲ ಹರಿಯಲಾರಂಭಿಸಿತ್ತು. ಹೀಗೆ ಅಂತರ್ಜಲ ಹರಿದ ಕೆಲವೇ ತಿಂಗಳಲ್ಲಿ ಇಡೀ ಗಜಗಿರಿ ಬೆಟ್ಟ ಕುಸಿದು ಹೋಗಿತ್ತು. ಇದೀಗ ಮದೆನಾಡು, ಮೊಣ್ಣಂಗೇರಿಗಳಲ್ಲಿ ಒಂದೆಡೆ ಹೆದ್ದಾರಿ ಕುಸಿದ್ದಿದ್ರೆ, ಮತ್ತೊಂದೆಡೆ ಭಾರೀ ಪ್ರಮಾಣದಲ್ಲಿ ಅಂತರ್ಜಲ ಉಕ್ಕಿ ಹರಿಯುತ್ತಿರುವುದು ಆತಂಕ ಮೂಡಿಸಿದೆ.

    ಇನ್ನೂ ಮಡಿಕೇರಿ ಸೋಮವಾರಪೇಟೆ ನಡುವೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಟ್ಟಿಹೊಳೆ ಸಮೀಪ ಬರೋಬ್ಬರಿ ಅರ್ಧ ಕಿಲೋಮೀಟರ್ ದೂರದವರೆಗೆ ಭಾರೀ ಬಿರುಕುಬಿಟ್ಟಿದೆ. ಮತ್ತೊಂದೆಡೆ ಮಡಿಕೇರಿಯಿಂದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಚೆಟ್ಟಳ್ಳಿ ಬಳಿ ಕುಸಿದಿದ್ದು, ಮಣ್ಣನ್ನು ತೆರವು ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

    ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ರಣಭೀಕರ ಮಳೆ ಸುರಿಯುವ ಸಾಧ್ಯತೆ ಇದೆ. ಒಂದು ವೇಳೆ ಭಾರೀ ಮಳೆಯಾದಲ್ಲಿ ಈ ಎಲ್ಲಾ ರಸ್ತೆಗಳು ಕುಸಿದು ಹೋಗುವ ಸಾಧ್ಯತೆ ಇದ್ದು ಮಡಿಕೇರಿ ಕುಶಾಲನಗರ ಸಂಪರ್ಕವನ್ನು ಬಿಟ್ಟು ಉಳಿದೆಲ್ಲಾ ಸಂಪರ್ಕವನ್ನು ಕಡಿದುಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಹೆದ್ದಾರಿ ಸಂಪರ್ಕದ ಬಗ್ಗೆ ನಿತ್ಯ ಪರಿಶೀಲನೆಗೆ ಸೂಚಿಸಲಾಗಿದ್ದು, ಭಾರೀ ವಾಹನಗಳ ನಿಯಂತ್ರಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಉರುಳಿದ ಬಂಡೆಗಳು:
    ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮಪಂಚಾಯತಿ ವ್ಯಾಪ್ತಿಯ ನವಗ್ರಾಮದಲ್ಲಿ ಬಸಪ್ಪ ಮತ್ತು ಮಂಜುಳ ದಂಪತಿ ಮನೆ ಪಕ್ಕದಲ್ಲೇ ಬೆಟ್ಟ ಕುಸಿದಿದೆ. ಈ ವೇಳೆ ಭಾರೀ ಗಾತ್ರದ ಎರಡು ಬಂಡೆಗಳು ಬಸಪ್ಪ ಅವರ ಮನೆ ಮೇಲೆ ಉರುಳಿವೆ. ಭಾರೀ ಗಾತ್ರದ ಬಂಡೆಗಳು ಮನೆಗೆ ಅಪ್ಪಳಿಸಿದ್ದರಿಂದ ಮನೆಯ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ. ಆ ವೇಳೆಗೆ ಮನೆಯಲ್ಲೇ ಎಲ್ಲರೂ ಇದ್ದರಾದರೂ ಬಂಡೆಗಳು ಉರುಳಿದ ಭಾಗದಲ್ಲಿ ಯಾರು ಇರಲಿಲ್ಲ. ಹೀಗಾಗಿ ಅದೃವಷಾತ್ ಎಲ್ಲರೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.

    ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯ ಶಂಷುದ್ದಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ನಿಯಮ ಪ್ರಕಾರ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಸ್ಥಳೀಯರು ತಮಗೆ ಸುರಕ್ಷಿತ ಸ್ಥಳದಲ್ಲಿ ಬದಲಿ ನಿವೇಶನ ಅಥವಾ ಮನೆ ನೀಡುವಂತೆ ಒತ್ತಾಯಿಸಿದ್ದಾರೆ.

  • ಆನ್‍ಲೈನ್ ಆಕ್ಸಿಜನ್  ದೋಖಾ ಎಚ್ಚರ ಜನರೇ ಎಚ್ಚರ

    ಆನ್‍ಲೈನ್ ಆಕ್ಸಿಜನ್ ದೋಖಾ ಎಚ್ಚರ ಜನರೇ ಎಚ್ಚರ

    ನೆಲಮಂಗಲ : ಮಹಾಮಾರಿ ಕೋವಿಡ್ 19ರ ಎರಡನೇ ಅಲೆ ಸಂದರ್ಭದಲ್ಲಿ ಆನ್ ಲೈನ್ ಆಕ್ಸಿಜನ್ ದೋಖಾ ನಡೆದ ಘಟನೆಯೊಂದು ಬೆಳಕಿಗೆ ಬಂದಿದೆ.

    ಸಾಮಾಜಿಕ ಜಾಲತಾಣದಲ್ಲಿ ಆಕ್ಸಿಜನ್ ಖರೀದಿಸುವ ಮುನ್ನ ಎಚ್ಚರವಾಗಿರಿ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಕೋವಿಡ್ ರೋಗಿಗಳು ಆಕ್ಸಿಜನ್ ಬೇಕಾಗುವುದು ಸಾಮಾನ್ಯವಾಗಿದೆ. ಆದರೆ ಕೋವಿಡ್ ರೋಗಿಗೆ ಅಕ್ಸಿಜನ್ ಬೇಕು ಎಂದಾಗ ಈ ಅನ್ ಲೈನ್ ದೋಖ ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಘಟನೆ ನಡೆದಿದೆ.

    ಆಕ್ಸಿಜನ್‍ಗಾಗಿ ಫೋನ್ಪೇ ಮುಖಾಂತರ 13 ಸಾವಿರ ರೂಪಾಯಿ ಹಣವನ್ನು ವ್ಯಕ್ತಿಯೊಬ್ಬರು ಕಳಿಸಿದ್ದಾರೆ. ನಂತರ ಹಣವೂ ಇಲ್ಲಾ ಅಕ್ಸಿಜನ್ ಸಹ ಇಲ್ಲದ ಪರಿಸ್ಥಿತಿ ಎದುರಾಗಿದೆ. ಒಂದು ಅಕ್ಸಿಜನ್ ಸೀಲಿಂಡರ್‍ಗೆ 25 ಸಾವಿರ ಕೇಳಿದ ಆನ್‍ಲೈನ್ ವ್ಯಕ್ತಿ ಮೋಸ ಮಾಡಿದ್ದಾನೆ.

    ರೋಗಿ ರಮೇಶ್ ಎಂಬುವವರನ್ನ ಕೆಲ ದಿನದ ಹಿಂದೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸಮಸ್ಯೆ ಉಂಟಾದಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಆ ರೋಗಿ ನೆಲಮಂಗಲ ಸೇರಿದಂತೆ ಬೆಂಗಳೂರಿನ ಕೆಲವು ಆಸ್ಪತ್ರೆಗೆ ದಾಖಲಿಸಲು ಅಲೆದಾಡುತ್ತಿದ್ದರು. ಆದರೆ, ಆಕ್ಸಿಜನ್, ಬೆಡ್ ಯಾವುದೇ ಸಿಗದೇ ಸೋಂಕಿತ ವ್ಯಕ್ತಿ ನರಳಿ ನರಳಿ ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ರೋಗಿಯ ಸಂಬಂಧಿ ನೆಲಮಂಗಲ ಟೌನ್ ಪೊಲೀಸರ ಮೊರೆ ಹೋಗಿದ್ದಾರೆ.

  • ಮಳೆ ಆಶ್ರಿತ ಕಲ್ಯಾಣ ಕರ್ನಾಟಕದಲ್ಲಿ ಜಲಕ್ರಾಂತಿ-35 ಲಕ್ಷ ರೂ. ವೆಚ್ಚದಲ್ಲಿ 2 ಕೆರೆಗಳ ನಿರ್ಮಾಣ

    ಮಳೆ ಆಶ್ರಿತ ಕಲ್ಯಾಣ ಕರ್ನಾಟಕದಲ್ಲಿ ಜಲಕ್ರಾಂತಿ-35 ಲಕ್ಷ ರೂ. ವೆಚ್ಚದಲ್ಲಿ 2 ಕೆರೆಗಳ ನಿರ್ಮಾಣ

    -ಕಲಬುರಗಿಯ ಲಿಂಗರಾಜಪ್ಪ ನಮ್ಮ ಪಬ್ಲಿಕ್ ಹೀರೋ

    ಕಲಬುರಗಿ: ಶರಣಬಸವೇಶ್ವರ ಸಂಸ್ಥಾನ ಅಂದ್ರೆ ಸಾಕು ಈ ಭಾಗದ ಜನ ಅತ್ಯಂತ ಪೂಜನೀಯ ಭಾವನೆಯಿಂದ ನೋಡುತ್ತಾರೆ. ಇದಕ್ಕೆ ತಕ್ಕಂತೆ ಈ ವಂಶಸ್ಥರಾದ ಲಿಂಗರಾಜಪ್ಪನವರು ತಮ್ಮ ಜಮೀನಿಂದಲೇ ಜಲಕ್ರಾಂತಿ ಮಾಡಲು ಮುಂದಾಗಿದ್ದಾರೆ. ಅವರೇ ಇಂದಿನ ನಮ್ಮ ಪಬ್ಲಿಕ್ ಹೀರೋ.

    ಲಿಂಗರಾಜಪ್ಪನವರು ಶರಣ ಸಿರಸಗಿ ಗ್ರಾಮದ ತಮ್ಮ ಸ್ವಂತ ಜಮೀನಿನಲ್ಲಿ ಒಟ್ಟು 4 ಎಕರೆ ಪ್ರದೇಶದಲ್ಲಿ ಸರ್ಕಾರದ ನಯಾಪೈಸೆ ಪಡೆಯದೇ, ತಮ್ಮ ಸ್ವಂತ ಹಣದಿಂದ 35 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ ಒಟ್ಟು 2 ಕೆರೆಗಳನ್ನು ನಿರ್ಮಿಸಿದ್ದಾರೆ. ಲಿಂಗರಾಜಪ್ಪನವರು ಹೀಗೆ ಕೆರೆ ನಿರ್ಮಿಸುವದರ ಹಿಂದೆ ಸಾಮಾಜಿಕ ಕಳಕಳಿಯಿದೆ. ಮಳೆಗಾಲದ ಕೆಲ ದಿನಗಳು ಬಿಟ್ಟರೆ ಈ ಭಾಗದಲ್ಲಿ ಹೆಚ್ಚಿನ ಮಳೆ ಬರಲ್ಲ. ಬಂದರೂ ಸಹ ಆ ನೀರು ಕೆರೆ ಕಟ್ಟೆಗಳಲ್ಲಿ ಹೋಗಿ ಸಂಗ್ರಹವಾಗುವುದಿಲ್ಲ. ಇದರ ಪರಿಣಾಮ ಅಂತರ್ಜಲ ಕುಸಿದು ಬೋರ್‍ವೆಲ್ ಹಾಗೂ ಬಾವಿಗಳು ಬೇಗನೆ ಬತ್ತಿ ಹೋಗುತ್ತಿದ್ದವು. ಇದನ್ನು ಅರಿತ ಲಿಂಗರಾಜಪ್ಪ ಕೆರೆ ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸಿದ್ದಾರೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣರು ನುಡಿದಂತೆ ಲಿಂಗರಾಜಪ್ಪ ಜಲಕ್ರಾಂತಿ ಮಾಡಲು ಮುಂದಾಗಿದ್ದಾರೆ.

    ಈ ಕೆರೆಗಳನ್ನು ನೋಡಿದ ಲಿಂಗರಾಜಪ್ಪನವರ ಸ್ನೇಹಿತರು ತಾಡಪತ್ರೆ ಅಥವಾ ಸಿಮೆಂಟ್ ಕಾಂಕ್ರೆಟ್ ಹಾಕಿದ್ರೆ ವರ್ಷವಿಡಿ ನೀರು ಇರೋದಾಗಿ ಹೇಳಿದ್ದರು. ಆದರೆ ಹೀಗೆ ಮಾಡಿದ್ರೆ ಕೇವಲ ನಮ್ಮ ಜಮೀನಿಗೇ ನೀರು ಸಿಗುತ್ತೆ ವಿನಃ ಬೇರೆ ರೈತರಿಗೆ ಅನೂಕುಲ ಆಗಲ್ಲ ಅಂತಾ ಲಿಂಗರಾಜಪ್ಪನವರು ಅವರ ಸಲಹೆಯನ್ನು ನಯವಾಗಿಯೇ ನಿರಾಕರಿಸಿದ್ದರು. ಇವರ ಈ ಸಮಾಜ ಕಳಕಳಿಯ ಮನೋಭಾವನೆ ಮತ್ತು ರೈತರ ಕುರಿತು ಹೊಂದಿರುವ ಕಾಳಜಿ ಹಿನ್ನೆಲೆ ಇಂದು ಶರಣ ಸಿರಸಗಿ ಗ್ರಾಮದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿರುವ ಬೋರ್ ಮತ್ತು ಬಾವಿಗಳು ಬತ್ತದೆ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಹೀಗಾಗಿ ಇಲ್ಲಿನ ರೈತರು ಬೇಸಿಗೆ ಕಾಲ ಬಂದರೂ ಜಾನುವಾರು ಮತ್ತು ಅವರ ತೋಟಗಾರಿಕಾ ಬೆಳೆಗಳಿಗೆ ಬರಪೂರ ನೀರು ಸಿಗುತ್ತಿದೆ. ಅಷ್ಟೇ ಅಲ್ಲದೇ ಲಿಂಗರಾಜಪ್ಪ ನವರ ಜಮೀನಿನ ಪಕ್ಕದಲ್ಲಿ 200 ಎಕರೆಗೂ ಅಧಿಕ ಇರುವ ಅರಣ್ಯದಲ್ಲಿರುವ ಪ್ರಾಣಿಗಳಿಗೂ ನೀರು ಸಿಗುತ್ತಿದೆ.

    ಶರಣರ ವಚನಕ್ಕೆ ತಕ್ಕಂತೆ ಲಿಂಗರಾಜಪ್ಪನವರು ಕಲಬುರಗಿಯಲ್ಲಿ ತಮ್ಮ ಕೈಲಾದಷ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆ ಸಮಯದಲ್ಲಿ ನೂರಾರು ಕೆರೆಗಳ ನಿರ್ಮಿಸುವದ್ದಾಗಿ ಹೇಳಿ ವಂಚಿಸುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

  • 5 ವರ್ಷದಿಂದ ಬತ್ತಿದ್ದ ಕೊಳವೆಬಾವಿಯಿಂದ ಚಿಮ್ಮುತ್ತಿದೆ ನೀರು

    5 ವರ್ಷದಿಂದ ಬತ್ತಿದ್ದ ಕೊಳವೆಬಾವಿಯಿಂದ ಚಿಮ್ಮುತ್ತಿದೆ ನೀರು

    ಬಾಗಲಕೋಟೆ: ಕಳೆದ 5 ವರ್ಷದಿಂದ ನೀರು ಬತ್ತಿದ್ದ ಕೊಳವೆಬಾವಿಯಿಂದ ಇದೀಗ ಅಚ್ಚರಿ ಎನ್ನುವಂತೆ 20 ರಿಂದ 30 ಅಡಿ ಎತ್ತರಕ್ಕೆ ನೀರು ಚಿಮ್ಮುತ್ತಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ನಡೆದಿದೆ.

    ಬಾದಾಮಿ ತಾಲೂಕಿನಾದ್ಯಂತ ಅಂತರ್ಜಲ ಮಟ್ಟ ರೆಡ್ ಝೋನ್‍ಗೆ ಇಳಿದಿತ್ತು. ಆದರೆ ಮೂರು ಬಾರಿ ಬಂದ ಪ್ರವಾಹ ಹಾಗೂ ಅತಿಯಾದ ಮಳೆಯಿಂದಾಗಿ ಬಾದಾಮಿ ತಾಲೂಕಿನಲ್ಲಿ ಇದೀಗ ಅಂತರ್ಜಲ ಮಟ್ಟ ದಿಢೀರ್ ಹೆಚ್ಚಳವಾಗಿದೆ. ನೀಲಗುಂದ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ರೈತ ದ್ಯಾವಪ್ಪ ಕಾಟನಾಯಕ ಅವರು 6 ವರ್ಷದ ಹಿಂದೆ ಸುಮಾರು 170 ಅಡಿ ಆಳದ ಕೊಳವೆಬಾವಿ ಕೊರಿಸಿದ್ದರು. ಆರಂಭದಲ್ಲಿ ನೀರು ಬಂತಾದರೂ, ಕ್ರಮೇಣ ಕೊಳವೆ ಬಾವಿಯಲ್ಲಿನ ನೀರು ಇಂಗಿತ್ತು. ಹೀಗಾಗಿ ಕೊಳವೆ ಬಾವಿಯನ್ನು ಹಾಗೆಯೇ ಬಿಡಲಾಗಿತ್ತು. ಆದರೆ ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಮಲಪ್ರಭಾ ನದಿ ಪ್ರವಾಹದಿಂದ ನೀಲಗುಂದ ಸುತ್ತಲೂ ಅಂತರ್ಜಲಮಟ್ಟ ಹೆಚ್ಚಳವಾಗಿದೆ.

    ಕಳೆದ 5 ವರ್ಷಗಳಿಂದ ನೀರಿಲ್ಲದೆ ಒಣಗಿದ್ದ ಕೊಳವೆ ಬಾವಿಯಲ್ಲಿ ನೀರು ಚಿಮ್ಮುತ್ತಿರುವುದು ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿದೆ. ಹೀಗಾಗಿ ನೀರು ಚಿಮ್ಮುತ್ತಿರುವುದನ್ನು ಕಣ್ತುಂಬಿಕೊಳ್ಳಲು ಸುತ್ತಲಿನ ಹಳ್ಳಿಗಳ ಜನರು ನೀಲಗುಂದಕ್ಕೆ ಬರುತ್ತಿದ್ದಾರೆ. ಆಕಾಶದೆತ್ತರಕ್ಕೆ ಚಿಮ್ಮುತ್ತಿರುವ ನೀರು ನೋಡಿ ಖುಷಿಪಟ್ಟಿದ್ದಾರೆ. ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

  • 73 ಕೋಟಿ ರೂ. ಮೌಲ್ಯದ ನೀರು ಕಳ್ಳತನ

    73 ಕೋಟಿ ರೂ. ಮೌಲ್ಯದ ನೀರು ಕಳ್ಳತನ

    ಮುಂಬೈ: 73 ಕೋಟಿ ರೂ. ಮೌಲ್ಯದ ಅಂತರ್ಜಲ ಕಳ್ಳತನದ ಪ್ರಕರಣವೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಳ್ಳತನ ಆರೋಪದಡಿಯಲ್ಲಿ ಕಾಲಬಾದೇವಿಯಲ್ಲಿರುವ ಬೋಮಾನಜಿ ಮಾಸ್ಟರ್ ಲೈನ್, ಪಾಂಡ್ಯ ಮೇಂಶನ್ ಮಾಲೀಕನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕಳೆದ 11 ವರ್ಷಗಳಲ್ಲಿ ಆರೋಪಿ ನೀರು ಸರಬರಾಜು ವ್ಯಕ್ತಿಗಳ ಜೊತೆ ಸೇರಿ 73.19 ಕೋಟಿ ರೂ. ಮೌಲ್ಯದ ನೀರು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

    ಆರ್‍ಟಿಐ ಕಾರ್ಯಕರ್ತ ಸುರೇಶ್‍ಕುಮಾರ್ ಎಂಬವರು ಪಾಂಡ್ಯ ಮೇಂಶನ್ ಕಂಪನಿ ವಿರುದ್ಧ ಸಾಕ್ಷಿ ಸಮೇತವಾಗಿ ದೂರು ದಾಖಲಿಸಿದ್ದಾರೆ. ಪಾಂಡ್ಯ ಮೇಂಶನ್ ಕಂಪನಿ ಮಾಲೀಕರಾಗಿರುವ ತ್ರಿಪುರಪ್ರಸಾದ್ ಪಾಂಡ್ಯ ಮತ್ತು ಸಹಭಾಗಿತ್ವದ ಕಂಪನಿಯ ನಿರ್ದೇಶಕರಾದ ಪ್ರಕಾಶ್ ಪಾಂಡ್ಯ ಹಾಗೂ ಮನೋಜ್ ಪಾಂಡ್ಯ ತಮ್ಮ ನಿವೇಶನದಲ್ಲಿ ಅಕ್ರಮವಾಗಿ ಕೊಳವೆ ಬಾವಿ ತೆರೆದು ನೀರು ಕಳ್ಳತನ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.

    6.10 ಲಕ್ಷ ಟ್ಯಾಂಕರ್ ನೀರು ಮಾರಾಟ:
    ಪಾಂಡ್ಯ ಈ ಕೊಳವೆಬಾವಿಗಳಿಗೆ ಪಂಪ್ ಜೋಡಿಸಿ, ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ನೀರು ಎತ್ತಿದ್ದಾರೆ. ಮೇಲ್ಕೆತ್ತಿದ್ದ ನೀರನ್ನು ಟ್ಯಾಂಕರ್ ಮಾಲೀಕರಾದ ಅರುಣ್ ಮಿಶ್ರಾ, ಶ್ರವಣ್ ಮಿಶ್ರಾ ಮತ್ತು ಧೀರಜ್ ಮಿಶ್ರಾ ಎಂಬವರ ಮುಖಾಂತರ ಮಾರಾಟ ಮಾಡಿದ್ದಾರೆ. 2006ರಿಂದ 2017ರ ನಡುವೆ ಒಟ್ಟು 6.10 ಲಕ್ಷ ಲೀ. ಟ್ಯಾಂಕರ್ ನೀರು ಮಾರಿದ್ದಾರೆ ಎಂದು ಎಫ್‍ಐಆರ್ ದಾಖಲಾಗಿದೆ.

    ಒಂದು ಟ್ಯಾಂಕರ್ 10 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದೆ. ಮಾರುಕಟ್ಟೆಯಲ್ಲಿ ಗ್ರಾಹಕರು ಒಂದು ಟ್ಯಾಂಕರ್ ಅಂದಾಜು 12 ಸಾವಿರ ರೂ. ನೀಡಿ ಖರೀದಿಸುತ್ತಾರೆ. ಈ ಬಾವಿಗಳನ್ನು ಶಾಶ್ವತವಾಗಿ ಮುಚ್ಚುವಂತೆ ಹಸಿರು ನ್ಯಾಯಮಂಡಳಿ ಆದೇಶಿಸಿದೆ.

  • ರಕ್ತ ಕೊಟ್ಟೇವು, ನೀರು ಕೊಡೆವು: ಹೋರಾಟಕ್ಕೆ ಸಜ್ಜಾದ ಮಲೆನಾಡಿಗರು

    ರಕ್ತ ಕೊಟ್ಟೇವು, ನೀರು ಕೊಡೆವು: ಹೋರಾಟಕ್ಕೆ ಸಜ್ಜಾದ ಮಲೆನಾಡಿಗರು

    ಶಿವಮೊಗ್ಗ: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಮಲೆನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಂಗಳೂರಿಗರ ಬಾಯಾರಿಸಲು ಶರಾವತಿ ನದಿ ನೀರು ತರುತ್ತೇವೆ ಎಂದ ಪರಮೇಶ್ವರ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

    ಲಿಂಗನಮಕ್ಕಿಯಿಂದ 425 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರಿಗೆ ನೀರನ್ನು ತರುವ ಬಗ್ಗೆ ವಿಸ್ತ್ರತ ಯೋಜನಾ ವರದಿ ತಯಾರಿಸಲು ಸೂಚಿಸಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಬಿ.ಎನ್. ತ್ಯಾಗರಾಜನ್ ಸಮಿತಿ ವರದಿ ಆಧರಿಸಿ, 151 ಅಡಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಿಂದ ಮೊದಲ ಹಂತದಲ್ಲಿ 30 ಟಿಎಂಸಿ ಹಾಗೂ ಎರಡನೇ ಹಂತದಲ್ಲಿ 60 ಟಿಎಂಸಿ ನೀರನ್ನು ಬೆಂಗಳೂರಿಗೆ ಪೂರೈಸಲು ಸರ್ಕಾರ ಉದ್ದೇಶಿಸಿದೆ.

    ಕುಸಿದ ಅಂತರ್ಜಲ ಮಟ್ಟ: ಶರಾವತಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಮಾಡಿದಾಗ ಸುಮಾರು 12 ಸಾವಿರ ಎಕರೆ ದಟ್ಟ ಕಾಡು ಮುಳುಗಡೆ ಆಗಿದೆ. ಇದರಿಂದಾಗಿ ಈ ಭಾಗದಲ್ಲಿ ಮಳೆ ಪ್ರಮಾಣ ಅಗಾಧವಾಗಿ ಕಡಿಮೆ ಆಗಿದೆ. 320 ಇಂಚು ನೀರು ಬರುತ್ತಿದ್ದ ಈ ಪ್ರದೇಶದಲ್ಲಿ ಈಗ ಸರಾಸರಿ 70 ಇಂಚು ಬೀಳುತ್ತಿದೆ. ಇಷ್ಟು ನೀರು ವಿದ್ಯುತ್ ಉತ್ಪಾದನೆಗೆ ಸಾಕಾಗುವುದಿಲ್ಲ. ಇನ್ನು ಬೆಂಗಳೂರಿಗೆ ಕುಡಿಯಲು ನೀರು ಕೊಡಲು ಸಾಧ್ಯವೇ ಎಂದು ಹಿರಿಯ ಸಾಹಿತಿ ನಾ ಡಿಸೋಜಾ ಪ್ರಶ್ನಿಸಿದ್ದಾರೆ.

    ಅಗಾಧ ಜೀವವೈವಿಧ್ಯತೆಯ ತಾಣವಾಗಿರುವ ಶರಾವತಿ ಲಿಂಗನಮಕ್ಕಿ ಪ್ರದೇಶದಿಂದ ನೀರನ್ನು ದೂರದ ಬೆಂಗಳೂರಿಗೆ ಸಾಗಿಸುವ ಬಗ್ಗೆ ಯೋಚಿಸುವುದು ಸರ್ಕಾರದ ಮೂರ್ಖತನ ಎನ್ನುತ್ತಾರೆ ಪರಿಸರವಾದಿಗಳು. ಸರ್ಕಾರ ಇದನ್ನು ಕೈಬಿಡದಿದ್ದಲ್ಲಿ ಮಲೆನಾಡಿನಲ್ಲಿ ಮತ್ತೊಂದು ದೊಡ್ಡ ಚಳವಳಿ ನಡೆಯಲಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಎಚ್ಚರಿಸಿದ್ದಾರೆ.

    ಅಧಿಕ ಹಣ ಬೇಡುವ, ಹೆಚ್ಚು ಅರಣ್ಯ ನಾಶವಾಗುವ ಇಂಥ ಯೋಜನೆಗಳನ್ನು ಕೈಬಿಡಿ, ಮಳೆ ಕೊಯ್ಲು, ಕೆರೆಗಳ ಪುನರುಜ್ಜೀವ ಇನ್ನಿತರ ಅಂಶಗಳ ಬಗ್ಗೆ ಗಮನ ಹರಿಸಿ. ವಿನಾಶಕಾರಿಯಾದ ಇಂಥ ಯೋಜನೆಗಳಿಗೆ ಕೈಹಾಕಬೇಡಿ ಎಂಬುದು ಶರಾವತಿ ನದಿ ಪಾತ್ರದ ಜನತೆ ಆಗ್ರಹಿಸಿದ್ದಾರೆ.

    ಒಟ್ಟಿನಲ್ಲಿ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಪೂರೈಸುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಂಡ ಕನಸು ಆರಂಭದಲ್ಲೇ ಭಾರೀ ವಿರೋಧ ಕೇಳಿಬಂದಿದೆ. ಈ ವಿರೋಧ ಲೆಕ್ಕಿಸದೆ ಸರ್ಕಾರ ಮುಂದುವರಿದಲ್ಲಿ ಮಲೆನಾಡು ಇನ್ನೊಂದು ಚಳವಳಿಗೆ ಸಜ್ಜಾಗಿದೆ.

    2030ಕ್ಕೆ ಬೆಂಗಳೂರು:
    2030ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ 2.5 ಕೋಟಿ ಆಗುವ ಸಾಧ್ಯತೆಗಳಿವೆ. ಬೆಂಗಳೂರಿಗೆ ವಾರ್ಷಿಕ 54 ಟಿಎಂಸಿ ನೀರಿನ ಅಗತ್ಯವಿದ್ದು, ಕಾವೇರಿಯಿಂದ ಈಗಾಗಲೇ 30 ಟಿಎಂಸಿ ನೀರು ಪಡೆಯಲಾಗುತ್ತಿದೆ. ಆದ್ರೆ ಕಾವೇರಿಯಿಂದ ಹೆಚ್ಚಿನ ನೀರು ಪಡೆಯುವುದು ಅಸಾಧ್ಯದ ಮಾತು. ಹಾಗದ್ರೆ 2030ಕ್ಕೆ ಬೆಂಗಳೂರಿಗೆ 24 ಟಿಎಂಸಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಆಗಲಿದೆ.

    ಟಿಎಂಸಿ ಅಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಮರಳಿಗಾಗಿ ಗಡಿ ಪ್ರದೇಶ ನಮ್ಮದು ಅಂತಾ ಹೇಳ್ತಿರೋ ತೆಲಂಗಾಣ!

    ಮರಳಿಗಾಗಿ ಗಡಿ ಪ್ರದೇಶ ನಮ್ಮದು ಅಂತಾ ಹೇಳ್ತಿರೋ ತೆಲಂಗಾಣ!

    ಯಾದಗಿರಿ: ಇಷ್ಟು ದಿನ ಕೃಷ್ಣ ನದಿ ನೀರು ಹಂಚಿಕೆಯಲ್ಲಿ ಕ್ಯಾತೆ ತೆಗೆಯುತ್ತಿದ್ದ ತೆಲಂಗಾಣ ಸರ್ಕಾರ, ಈಗ ಮರಳಿಗಾಗಿ ಗಡಿ ಪ್ರದೇಶ ನಮಗೆ ಸೇರಬೇಕೆಂದು ಪಟ್ಟು ಹಿಡಿದಿದೆ. ಗಡಿ ಪ್ರದೇಶದಲ್ಲಿರೋ ಹಳ್ಳದ ಭಾಗ ನಮ್ಮ ರಾಜ್ಯಕ್ಕೆ ಸೇರಿದೆ. ಹೀಗಾಗಿ ಮರಳು ಸಾಗಿಸುತ್ತೆವೆ ಎಂದು ಪಟ್ಟು ಹಿಡಿದಿದ್ದಾರೆ.

    ಆದ್ರೆ ಕರ್ನಾಟಕದ ಅಧಿಕಾರಿಗಳು ಹಳ್ಳದ ಭಾಗ ನಮ್ಮ ವ್ಯಾಪ್ತಿಗೆ ಬರುತ್ತದೆ ಮರಳು ಸಾಗಣೆ ಮಾಡಲು ಬಿಡುವದಿಲ್ಲವೆಂದು ಖಾಕಿ ಪಡೆಯೊಂದಿಗೆ ಸರ್ಪಗಾವಲು ಹಾಕಿ ತೆಲಂಗಾಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

    ಯಾದಗಿರಿಯ ಗಡಿ ಭಾಗದಲ್ಲಿರುವ ಚೇಲೇರಿ ಗ್ರಾಮದ ಹಳ್ಳದ ಗಡಿ ವಿವಾದ ಇನ್ನು ಕಗ್ಗಾಂಟಾಗಿ ಪರಿಣಮಿಸಿದೆ. ತೆಲಂಗಾಣ ರಾಜ್ಯದ ಮಹೆಬೂಬನಗರ ಜಿಲ್ಲೆಯ ಕಂದಾಯ ಹಾಗೂ ಸರ್ವೆ ಅಧಿಕಾರಿಗಳು ಈಗಾಗಲೇ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಇನ್ನು ಈಗಾಗಲೇ ಗಡಿ ಪ್ರದೇಶ ವಿವಾದಲ್ಲಿದ್ದು, ವಿವಾದಿತ ಪ್ರದೇಶದಲ್ಲಿ ಮರಳು ಗಣಿಗಾರಿಕೆ ಬೇಡವೆಂದು ರಾಜ್ಯದ ಕಂದಾಯ ಅಧಿಕಾರಿಗಳು ಪಟ್ಟುಹಿಡಿದಿದ್ದಾರೆ. ತೆಲಂಗಾಣ ಅಧಿಕಾರಿಗಳು ಕರ್ನಾಟಕದ ಮರಳಿನ ಮೇಲೆ ಕಣ್ಣು ಹಾಕಿ, ಕೋಟ್ಯಾನುಗಟ್ಟಲೆ ಮರಳು ಗಣಿಗಾರಿಕೆಯಿಂದ ಆದಾಯ ಗಳಿಸಲು ಹುನ್ನಾರ ನಡೆಸಿದೆ. ಈಗಾಗಲೇ ಮರಳು ಸಾಗಣೆ ಕೂಡ ನಡೆಸಿದೆ.

    ಮರಳುಗಾರಿಕೆಗೆ ರೈತರ ವಿರೋಧ: ಯಾವುದೇ ಕಾರಣಕ್ಕೂ ಹಳ್ಳದ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸುವುದು ಬೇಡವೆಂದು ಹಳ್ಳದ ತೀರದಲ್ಲಿನ ತೆಲಂಗಾಣದ ಭಾಗದ ಸುತ್ತಲಿನ ರೈತರು ಕೂಡ ಮಹಬೂಬನಗರ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ. ಅದೇ ರೀತಿ ನಮ್ಮ ರಾಜ್ಯದ ಹಳ್ಳದ ಭಾಗದಲ್ಲಿರುವ ರೈತರು ಕೂಡ ಚೇಲೇರಿ ಗ್ರಾಮದ ಹಳ್ಳ ಭಾಗದಲ್ಲಿ ಮರಳು ಗಣಿಕಾರಿಕೆ ನಡೆಸಲು ಅನುಮತಿ ನೀಡಬೇಡಿ. ಒಂದು ವೇಳೆ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ್ರೆ ಅಂತರ್ಜಲ ಕಡಿಮೆಯಾಗಲಿದೆ ಎಂದು ಉಭಯ ರಾಜ್ಯದ ರೈತರು ಒತ್ತಾಯ ಮಾಡಿದ್ದಾರೆ.

    ಒಂದು ಕಡೆ ಚೇಲೇರಿ ಗ್ರಾಮದ ಹಳ್ಳದ ಭಾಗ ಸುಮಾರು 143 ಎಕರೆ ಪ್ರದೇಶ ನಮಗೆ ಸೇರುತ್ತದೆ ಎಂದು ರಾಜ್ಯದ ಕಂದಾಯ ಅಧಿಕಾರಿಗಳ ವಾದವಾಗಿದೆ. ಇನ್ನೊಂದು ಕಡೆ ತೆಲಂಗಾಣದ ಅಧಿಕಾರಿಗಳು ಹಳ್ಳದ ಪ್ರದೇಶ ಸುಮಾರು 40 ಎಕರೆಗೂ ಹೆಚ್ಚು ಪ್ರದೇಶ ನಮಗೆ ಸೇರುತ್ತದೆ ಎಂದು ವಾದಿಸುತ್ತಿದ್ದಾರೆ. ಉಭಯ ರಾಜ್ಯದ ಕಂದಾಯ ನಕಾಶೆಯಲ್ಲಿ ಈ ಬಗ್ಗೆ ಸಾಕಷ್ಟು ಗೊಂದಲವಿದೆ. ನಕಾಶೆ ಪರಿಶೀಲಿಸಿದ್ರೂ, ಗಡಿ ಪ್ರದೇಶ ಕಗ್ಗಂಟು ಸಮಸ್ಯೆ ಪರಿಹಾರ ಕಾಣುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ಖುದ್ದು ಉಭಯ ರಾಜ್ಯಗಳ ಅಧಿಕಾರಿಗಳು ಹಳ್ಳದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು. ಸಮಸ್ಯೆ ಇನ್ನು ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ.

    https://youtu.be/eK_a5jngGWg

  • ಜಮೀನಿನ ಬೆಳೆಗೆ ಅಂತಾ ಬೋರ್ ಕೊರೆಸಿ ಪಕ್ಕದೂರಿನ ಜಲದಾಹ ನೀಗಿಸ್ತಿರೋ ಕೊಪ್ಪಳದ ಶಿವು

    ಜಮೀನಿನ ಬೆಳೆಗೆ ಅಂತಾ ಬೋರ್ ಕೊರೆಸಿ ಪಕ್ಕದೂರಿನ ಜಲದಾಹ ನೀಗಿಸ್ತಿರೋ ಕೊಪ್ಪಳದ ಶಿವು

    ಕೊಪ್ಪಳ: ಕೆರೆಯ ನೀರನ್ನು ಮಾರಿಕೊಂಡು ಹಣ ಗಳಿಸುವವರ ಮಧ್ಯೆ ನಮ್ಮ ಪಬ್ಲಿಕ್ ಹೀರೋ ತುಂಬಾ ವಿಭಿನ್ನವಾಗಿ ಕಾಣುತ್ತಾರೆ. ತಮ್ಮ ಜಮೀನಿನಲ್ಲಿ ಬೆಳೆಗೆ ಅಂತಾ ಬೋರ್ ಕೊರೆಸಿದ್ರೆ ಇಂದು ಅದೇ ನೀರಿನಿಂದ ಪಕ್ಕದೂರಿನ ಜನರ ದಾಹ ನೀಗಿಸುತ್ತಿದ್ದಾರೆ.

    ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ನಿವಾಸಿ ಶಿವು ಮೋರನಾಳ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಸರ್ಕಾರ, ಜನಪ್ರತಿನಿಧಿಗಳು ಮಾಡದೇ ಇರೋ ಕಾರ್ಯವನ್ನ ಶಿವು ಮಾಡ್ತಿದ್ದಾರೆ. ಬಿಸರಹಳ್ಳಿ ಗ್ರಾಮದಲ್ಲಿ ಎಲ್ಲೇ ಬೋರ್‍ವೆಲ್ ಕೊರೆಸಿದ್ರೂ ಫ್ಲೋರೈಡ್ ನೀರೇ ಸಿಗುತ್ತದೆ. ತಮ್ಮ ಜಮೀನಿನಲ್ಲಿ ಸಿಕ್ಕಿರೋ ಸಿಹಿನೀರನ್ನ 8 ಕಿ.ಮೀ. ದೂರದ ಬಿಸರಳ್ಳಿ ಜನರಿಗೆ ನಾಲ್ಕು ವರ್ಷದಿಂದ ನೀಡುತ್ತಿದ್ದಾರೆ.

    ತಮ್ಮ ಬೋರ್‍ವೆಲ್‍ಗೆ ಕಮರ್ಶಿಯಲ್ ಮೀಟರ್ ಅವಳಡಿಸಿ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿ ಬಿಲ್ ಕಟ್ತಿದ್ದಾರೆ. ಬೋರ್‍ವೆಲ್ ಕೆಟ್ಟರೆ ತಮ್ಮ ದುಡ್ಡಿನಿಂದಲೇ ರೆಡಿ ಮಾಡಿಸುತ್ತಾರೆ. ಸರ್ಕಾರ ಕುಡಿಯುವ ನೀರಿಗಾಗಿ ಶುದ್ಧ ನೀರಿನ ಘಟಕ ಮಾಡಿದೆ. ಇದಕ್ಕೆ 3 ರಿಂದ 5 ರೂಪಾಯಿ ಕೊಡಬೇಕು. ಆದರೆ ಶಿವು ಅವರು ಮಾತ್ರ ಗ್ರಾಮಸ್ಥರಿಂದ ನಯಾಪೈಸೆ ಹಣವನ್ನು ತೆಗೆದುಕೊಳ್ಳುವುದಿಲ್ಲ.