Tag: groom

  • ವರನಿಗೆ ಮಾಲೆ ಹಾಕೋವಾಗ ಎತ್ತಿಕೊಂಡಿದ್ದಕ್ಕೆ ಸಂಬಂಧಿಕನ ಕೆನ್ನೆಗೆ ಬಾರಿಸಿದ ವಧು- ವಿಡಿಯೋ ವೈರಲ್

    ವರನಿಗೆ ಮಾಲೆ ಹಾಕೋವಾಗ ಎತ್ತಿಕೊಂಡಿದ್ದಕ್ಕೆ ಸಂಬಂಧಿಕನ ಕೆನ್ನೆಗೆ ಬಾರಿಸಿದ ವಧು- ವಿಡಿಯೋ ವೈರಲ್

    ನವದಹಲಿ: ವರನಿಗೆ ಹಾರವನ್ನು ಹಾಕುವಾಗ ಸಂಬಂಧಿಕನೊಬ್ಬ ವಧುವನ್ನು ಎತ್ತಿಕೊಂಡಿದ್ದಕ್ಕೆ ಆತನ ಕೆನ್ನೆಗೆ ಆಕೆ ಬಾರಿಸಿದ ವಿಡಿಯೋವೊಂದು ವೈರಲ್ ಆಗಿದೆ.

    ಈ ಘಟನೆ ಎಲ್ಲಿ ಯಾವಾಗ ನಡೆದಿದೆ ಎಂಬುದರ ಮಾಹಿತಿ ಇಲ್ಲ. ಆದರೆ ವಧು ತನ್ನ ಸಂಬಂಧಿಕನ ಕೆನ್ನೆಗೆ ಬಾರಿಸಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ಮದುವೆಯ ವೇದಿಕೆಯಲ್ಲಿ ವರ ಹಾಗೂ ವಧು ಒಬ್ಬರಿಗೊಬ್ಬರು ಹೂವಿನ ಹಾರ ಹಾಕಲು ತಯಾರಾಗಿ ನಿಂತಿದ್ದರು. ಈ ವೇಳೆ ವಧುವಿಗೆ ಸ್ವಲ್ಪ ಆಟವಾಡಿಸಲೆಂದು ವರನ ಕಡೆಯವರಲ್ಲಿ ಒಬ್ಬ ವ್ಯಕ್ತಿ ವರನನ್ನು ಎತ್ತಿಕೊಂಡನು. ವರನನ್ನು ಎತ್ತಿಕೊಂಡ ನಂತರ ವಧುವಿಗೆ ವಿಚಿತ್ರ ಅನುಭವವಾಗಿದೆ. ಇದೇ ವೇಳೆ ವರನ ಕುಟುಂಬದವರು ವರ ಮಾಲೆ ಹಾಕು ಎಂದು ಜೋರಾಗಿ ಕೂಗುತ್ತಾ ವರನನ್ನು ಬೆಂಬಲಿಸಿದ್ದಾರೆ.

    ಭಾರತೀಯ ಮದುವೆಗಳಲ್ಲಿ ಹೂವಿನ ಹಾರ ಹಾಕಲು ವರನನ್ನು ಎತ್ತಿಕೊಂಡರೆ ವಧುವಿನ ಕಡೆಯವರು ಕೂಡ ವಧುವನ್ನು ಎತ್ತಿಕೊಳ್ಳುತ್ತಾರೆ. ಇದೇ ರೀತಿ ಈ ಮದುವೆಯಲ್ಲೂ ವರನನ್ನು ಎತ್ತಿಕೊಂಡ ತಕ್ಷಣ ವಧುವನ್ನು ಎತ್ತುಕೊಳ್ಳಲು ಆಕೆಯ ಸಂಬಂಧಿಕನೊಬ್ಬ ಆಕೆಯನ್ನು ಎತ್ತುಕೊಂಡಿದ್ದಾನೆ. ಆಗ ವಧು ವರನಿಗೆ ಹೂವಿನ ಹಾರ ಹಾಕಿದ್ದಾಳೆ. ನಂತರ ವರ ಕೂಡ ವಧುವಿಗೆ ಹೂವಿನ ಹಾರವನ್ನು ಹಾಕಿದ್ದಾನೆ. ಹಾರ ಹಾಕಿದ ಬಳಿಕ ವಧು ಸಂಬಂಧಿಕನ ಕೆನ್ನೆಗೆ ಹೊಡೆದಿದ್ದಾಳೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಜನರು ಈ ವಿಡಿಯೋಗೆ ಪರ ಹಾಗೂ ವಿರೋಧ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ವಧು ಆತನ ಕೆನ್ನೆಗೆ ಬಾರಿಸಿದ್ದು ಕೆಲವರು ಸರಿ ಎಂದು ಹೇಳಿದರೆ ಮತ್ತೆ ಕೆಲವರು ತಪ್ಪು ಎಂದು ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ಕೆನ್ನೆಗೆ ಬಾರಿಸಿಕೊಂಡ ವ್ಯಕ್ತಿ ವಧುವಿನ ಭಾವ ಎಂದು ಹೇಳಲಾಗುತ್ತಿದೆ.

    ಮದುವೆಗೆ ಬಂದಿದ್ದ ಅತಿಥಿಗಳ ಮುಂದೆ ವಧು ಆ ವ್ಯಕ್ತಿಯ ಕನ್ನೆಗೆ ಬಾರಿಸಿದ್ದಾಳೆ. ಇದ್ದರಿಂದ ಅವಮಾನಗೊಂಡು ವ್ಯಕ್ತಿ ಅಲ್ಲೇ ನಿಂತಿದ್ದ ತನ್ನ ಪತ್ನಿ ಎಂದರೆ ವಧುವಿನ ಸಹೋದರಿ ಕೆನ್ನೆಗೆ ಬಾರಿಸಿ ತನ್ನ ಕೋಪವನ್ನು ಹೊರ ಹಾಕಿ ತನ್ನ ಸೇಡನ್ನು ತೀರಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

    https://www.youtube.com/watch?v=D5_LbCb39Y4

  • ಮಿಂಚಿಗೆ ವರ ಹೆದರಿಕೊಂಡಿದ್ದಕ್ಕೆ ಮದುವೆಯನ್ನೇ ಮುರಿದ ವಧು!

    ಮಿಂಚಿಗೆ ವರ ಹೆದರಿಕೊಂಡಿದ್ದಕ್ಕೆ ಮದುವೆಯನ್ನೇ ಮುರಿದ ವಧು!

    ಪಾಟ್ನಾ: ವರನೊಬ್ಬ ಮಿಂಚಿಗೆ ಹೆದರಿಕೊಂಡು ವಿಚಿತ್ರವಾಗಿ ವರ್ತಿಸಿದ್ದಕ್ಕೆ ವಧು ಮದುವೆಯನ್ನೇ ಮುರಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ರೇಣು ಕುಮಾರಿ(ಹೆಸರು ಬದಲಾಯಿಸಲಾಗಿದೆ) ಮದುವೆಯನ್ನೇ ಮುರಿದ ವಧು. ಮಿಂಚಿಗೆ ವರ ಹೆದರಿಕೊಂಡಿದ್ದಕ್ಕೆ ವಧು ಮದುವೆಯನ್ನು ಬೇಡ ಎಂದಿದ್ದಾಳೆ. ಇದರಿಂದ ಇಬ್ಬರ ಕುಟುಂಬದ ನಡುವೆ ಗಲಾಟೆ ಆಗಿದೆ.

    ವರ ಮಿಂಚಿಗೆ ಹೆದರಿಕೊಂಡು ವಿಚಿತ್ರವಾಗಿ ವರ್ತಿಸಿದ್ದಾನೆ. ಇದ್ದನ್ನು ಗಮನಿಸಿದ ವಧು ಮದುವೆ ಬೇಡ ಎಂದಿದ್ದಾಳೆ. ವಧು ಮಾತನ್ನು ಕೇಳಿಸಿಕೊಂಡ ವರನ ಕುಟುಂಬದವರು ಒಂದು ಕ್ಷಣ ದಂಗಾಗಿದ್ದಾರೆ. ಮದುವೆಯ ಕೆಲವು ಶಾಸ್ತ್ರಗಳು ಮುಗಿದ ಮೇಲೆ ವಧು ಮದುವೆಗೆ ನಿರಾಕರಿಸಿದ್ದು ಎಲ್ಲರೂ ಆಶ್ಚರ್ಯಪಡುವಂತಾಯಿತು.

    ಮದುವೆಯನ್ನು ನಿರಾಕರಿಸಿದ್ದಕ್ಕೆ ವರನ ಕುಟುಂಬದವರು ವಧುವಿನ ಕುಟುಂಬದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವರನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಕ್ಕೆ ಪೊಲೀಸರು ವಧುವಿನ ಕುಟುಂಬದ ಮೂವರು ಸದಸ್ಯರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಈ ಹಿಂದೆ ಹಲವು ವಧುಗಳು ಬೇರೆ ಬೇರೆ ಕಾರಣ ನೀಡಿ ಮದುವೆಯನ್ನು ನಿಲ್ಲಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ವಧು ಮಿಂಚಿಗೆ ಹೆದರಿಕೊಂಡ ವರನನ್ನೇ ನಿರಾಕರಿಸಿ ಮದುವೆ ಮುರಿದಿದ್ದಾಳೆ ಎಂದು ವರದಿಯಾಗಿದೆ.

  • ಮದ್ವೆಗೆ ವಿಶೇಷ ವರದಕ್ಷಿಣೆ ಬೇಡಿಕೆಯಿಟ್ಟ ವರ- ಬಂದ ಅತಿಥಿಗಳಿಗೆ ಸಿಕ್ತು ಭರ್ಜರಿ ಉಡುಗೊರೆ!

    ಮದ್ವೆಗೆ ವಿಶೇಷ ವರದಕ್ಷಿಣೆ ಬೇಡಿಕೆಯಿಟ್ಟ ವರ- ಬಂದ ಅತಿಥಿಗಳಿಗೆ ಸಿಕ್ತು ಭರ್ಜರಿ ಉಡುಗೊರೆ!

    ಭುವನೇಶ್ವರ್: ವರನೊಬ್ಬ ತನ್ನ ಮದುವೆಗೆ 1,000 ಸಸಿಗಳನ್ನು ವರದಕ್ಷಿಣೆಯಾಗಿ ಪಡೆದ ಘಟನೆ ಒಡಿಶಾದ ಕೇಂದ್ರಪಾಡಾ ಜಿಲ್ಲೆಯ ಬಲ್‍ಬದ್ರಪುರ ಗ್ರಾಮದಲ್ಲಿ ನಡೆದಿದೆ.

    ಸರೋಜ್ ಪೇಶೆ, ಸಸಿಗಳನ್ನು ವರದಕ್ಷಿಣೆ ಆಗಿ ಪಡೆದ ವರ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಸರೋಜ್ ಅವರಿಗೆ ತಮ್ಮ ಮದುವೆಯಲ್ಲಿ ಪಟಾಕಿ ಸಿಡಿಸುವುದು ಹಾಗೂ ಮಂಟಪವನ್ನು ಹೂವಿನಿಂದ ಅಲಂಕಾರ ಮಾಡುವುದು ಇಷ್ಟವಿಲ್ಲ. ಬದಲಾಗಿ ಸಿಂಪಲ್ ಆಗಿ ಮದುವೆ ಆಗೋ ಇಚ್ಚೆಯಿತ್ತು.

    ತನ್ನ ಮದುವೆ ಮಾತುಕತೆ ನಡೆಯುತ್ತಿದ್ದಾಗ ಸರೋಜ್ ಒಂದು ಷರತ್ತು ಹಾಕಿದ್ದರು. ವಧು ಕಡೆಯವರು 1,000 ಸಸಿಗಳನ್ನು ವರದಕ್ಷಿಣೆ ಆಗಿ ನೀಡಬೇಕೆಂದು ಸರೋಜ್ ಬೇಡಿಕೆ ಇಟ್ಟಿದ್ದರು. ಸರೋಜ್ ಬಿಸ್ವಾಲ್ ‘ಗಾಚಾ ಟಾಯಿ ಸಾಥಿ ಟಾಯಿ (ಮರ ಒಂದು ಸಂಗಾತಿ)’ ಸಂಸ್ಥೆಯ ಸದಸ್ಯರಾಗಿದ್ದಾರೆ. ಈ ಸಂಸ್ಥೆ ಸಸಿ ನೆಡುವ ಜಾಗೃತಿ ಮೂಡಿಸುತ್ತದೆ. ಇದಕ್ಕೆ ವಧು ರಶ್ಮಿರೇಖಾ ಕೂಡ ಸಾಥ್ ನೀಡಿದ್ದರು. ವಿಶೇಷವೆಂದರೆ ರಶ್ಮಿರೇಖಾ ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ.

    ಜೂನ್ 22ರಂದು ಸರೋಜ್ ಹಾಗೂ ರಶ್ಮಿರೇಖಾ ಅವರ ಮದುವೆ ನಡೆಯಿತು. ಮದುವೆ ನಡೆಯುತ್ತಿದ್ದ ಸ್ಥಳದಲ್ಲೇ ವಧುವಿನ ಮನೆಯವರು ಒಂದು ಟ್ರಕ್‍ನಲ್ಲಿ ಸಸಿ ತರಿಸಿದ್ದರು. ಆ ಸಸಿಗಳಲ್ಲಿ ಹೆಚ್ಚು ಹಣ್ಣಿನ ಸಸಿಗಳು ಇದ್ದಿದು ವಿಶೇಷವಾಗಿತ್ತು. ಮದುವೆಯಲ್ಲಿ ಎಲ್ಲ ಶಾಸ್ತ್ರಗಳು ಮುಗಿದ ನಂತರ ಸರೋಜ್ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಆ ಸಸಿಗಳನ್ನು ಮದುವೆಯಲ್ಲಿ ಭಾಗಿಯಾಗಿದ್ದ ಎಲ್ಲ ಅತಿಥಿಗಳಿಗೆ ಉಡುಗೊರೆಯಾಗಿ ನೀಡಿದ್ದರು.

    ವಿವಿಧ ರೀತಿಯಲ್ಲಿ ಕೊಡುವ ವರದಕ್ಷಿಣೆಗೆ ನನ್ನ ವಿರೋಧವಿದೆ. ಆದರೆ ನಾನು ಪರಿಸರವನ್ನು ರಕ್ಷಿಸಲು ಹಾಗೂ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಲು ಇಷ್ಟಪಡುತ್ತೇನೆ. ಹೀಗಾಗಿ ಸಂಬಂಧಿಕರಿಗೆ ಹಾಗೂ ಗ್ರಾಮಸ್ಥರಿಗೆ ಈ ಸಂದೇಶ ನೀಡೋಕೆ ನನ್ನ ಮದುವೆಗಿಂತ ಒಳ್ಳೆಯ ಅವಕಾಶವಿಲ್ಲ ಎಂದು ವರ ಸರೋಜ್ ತಿಳಿಸಿದ್ದಾರೆ.

    ನಾನು ಹಾಗೂ ನನ್ನ ಪತ್ನಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಒಳ್ಳೆಯ ಪ್ರೇರಣೆ ಸಿಗಲಿದೆ. ಸಸಿ ನೆಡುವುದರಿಂದ ಪರಿಸರವನ್ನು ಉಳಿಸಬಹುದು ಎಂದು ವರ ಸರೋಜ್ ಹೇಳಿದ್ದಾರೆ.

  • ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!

    ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!

    ಮಂಗಳೂರು: ಮದುವೆಯನ್ನು ಅಪರೂಪ ಎನ್ನುವಂತೆ ಮಾಡಿಕೊಳ್ಳುವುದು ಕೆಲವರಿಗೆ ಇಷ್ಟ. ಹಾಗೆಯೇ ನೀರಿನಲ್ಲಿ, ವಿಮಾನದಲ್ಲಿ, ಮತ್ತು ರೋಪ್ ವೇನಲ್ಲಿ ಮದುವೆಯಾಗೋದನ್ನು ಕೇಳಿದ್ದೇವೆ. ಅದೇ ರೀತಿ ಮದುವೆ ನಂತರ ಕಾರಿನಲ್ಲಿ, ಕುದುರೆ ಮೇಲೆ ದಿಬ್ಬಣ ಹೋಗುತ್ತಾರೆ. ಆದರೆ ಇಲ್ಲೊಬ್ಬ ವರ ಜೆಸಿಬಿಯಲ್ಲೇ ದಿಬ್ಬಣ ಹೊರಟಿದ್ದಾರೆ.

    ಜೆಸಿಬಿ ಆಪರೇಟರ್ ತನ್ನ ಮದುವೆಯ ದಿಬ್ಬಣವನ್ನು ಜೆಸಿಬಿಯಲ್ಲಿ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಟ್ಯಾರ್ ಎಂಬಲ್ಲಿ ಈ ಪ್ರಸಂಗ ನಡೆದಿದ್ದು, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ಕಿಮೀ ಉದ್ದಕ್ಕೂ ಜೆಸಿಬಿ ಮುಂದೆ ಕುಳಿತುಕೊಂಡು ಮೆರವಣಿಗೆ ನಡೆಸಿದ್ದಾರೆ. ಈ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

    ಚೇತನ್ ಮತ್ತು ಮಮತಾ ದಂಪತಿಯ ಮದುವೆ ಸೋಮವಾರ ನಡೆದಿದ್ದು, ಮದುವೆ ಬಳಿಕ ಮೆರವಣಿಗೆ ಜೆಸಿಬಿ ಮತ್ತು ವಾಲಗದ ಜೊತೆಗೆ ನಡೆದಿದೆ. ಚೇತನ್ ಹಲವು ವರ್ಷಗಳಿಂದ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಸ್ಥಳೀಯವಾಗಿ ಹೆಸರು ಮಾಡಿದ್ದರು. ಆದ್ದರಿಂದ ತಮ್ಮ ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದಿದ್ದಾರೆ.

  • ಮದ್ವೆಯಾಗಿ ಕೆಲವೇ ನಿಮಿಷಗಳಲ್ಲಿ ಪತಿಯ ಮುಂದೆಯೇ ಪ್ರಿಯಕರನ ಜೊತೆ ವಧು ಎಸ್ಕೇಪ್!

    ಮದ್ವೆಯಾಗಿ ಕೆಲವೇ ನಿಮಿಷಗಳಲ್ಲಿ ಪತಿಯ ಮುಂದೆಯೇ ಪ್ರಿಯಕರನ ಜೊತೆ ವಧು ಎಸ್ಕೇಪ್!

    ಲಕ್ನೋ: ಮದುವೆಯಾಗಿ ಕೆಲವೇ ನಿಮಿಷಗಳಲ್ಲಿ ನೋಡನೋಡುತ್ತಿದ್ದಂತೆ ವರನ ಮುಂದೆ ವಧು ಪ್ರಿಯಕರನ ಜೊತೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಸುಲ್ತಾನ್‍ಪುರ್ ನ ಕೋತ್ವಾಲಿಯಲ್ಲಿ ನಡೆದಿದೆ.

    ವಧು ಅದ್ಧೂರಿಯಾಗಿ ಮದುವೆಯಾದ ಮೇಲೆ ತನ್ನ ತವರು ಮನೆಯನ್ನು ಬಿಟ್ಟು ಪತಿಯ ಮನೆಗೆ ಕಾರಿನಲ್ಲಿ ಹೋಗುತ್ತಿದ್ದಳು. ಆ ಕಾರಿನ ಹಿಂದೆ ಕುಟುಂಬದವರು ಹಾಗೂ ಸಂಬಂಧಿಕರು ಕೂಡ ಹೋಗುತ್ತಿದ್ದರು.

    ಕಾರಿನಲ್ಲಿ ಹೋಗುತ್ತಿದ್ದಾಗ ಕೆಲವೇ ನಿಮಿಷದಲ್ಲಿ ವಧು ನನಗೆ ತಲೆನೋವು ಆಗುತ್ತಿದೆ ಹಾಗೂ ವಾಂತಿ ಬರುವ ಹಾಗೇ ಆಗುತ್ತಿದೆ ಎಂದು ಸುಳ್ಳು ಹೇಳಿ ಕಾರನ್ನು ನಿಲ್ಲಿಸಿದ್ದಾಳೆ. ನಂತರ ಕಾರಿನಿಂದ ಇಳಿದು ಫೋನಿನಲ್ಲಿ ಯಾರ ಜೊತೆ ಮಾತನಾಡಿದ್ದಾಳೆ.

    ತನ್ನ ಪತ್ನಿಯ ಆರೋಗ್ಯದ ಬಗ್ಗೆ ವಿಚಾರಿಸಲು ವರ ಕಾರಿನಿಂದ ಇಳಿದಿದ್ದಾನೆ. ಆಗ ವಧು ವರನಲ್ಲಿ ನಾನು ಬರುತ್ತೇನೆ ನೀವು ಈಗ ಕಾರಿನಲ್ಲಿ ಕುಳಿತುಕೊಳ್ಳಿ ಎಂದಿದ್ದಾಳೆ. ತನ್ನ ಪತ್ನಿಯ ಮಾತನ್ನು ಒಪ್ಪಿ ವರ ಕಾರಿನಲ್ಲಿ ಕುಳಿತುಕೊಂಡಿದ್ದಾನೆ.

    ವಧು ಈಗ ಬರುತ್ತಾಳೆ ಎಂದು ವರ ಕಾರಿನಲ್ಲಿ ಕುಳಿತ್ತಿದ್ದರೆ ಆ ಕ್ಷಣದಲ್ಲಿ ಆಕೆಯ ಪ್ರಿಯಕರ ಬೈಕಿನಲ್ಲಿ ಬಂದಿದ್ದಾನೆ. ಪ್ರಿಯಕರ ಬಂದಿದ್ದೆ ತಡ ಆತನ ಬೈಕಿನಲ್ಲಿ ಕುಳಿತು ಇಬ್ಬರು ಪರಾರಿಯಾಗಿದ್ದಾರೆ. ಕಣ್ಣ ಮುಂದೆಯೇ ಈ ಘಟನೆ ನೋಡಿದ ಸಂಬಂಧಿಕರು ಒಂದು ಕ್ಷಣ ದಂಗಾಗಿದ್ದಾರೆ.

    ನಂತರ ವರ, ಸಂಬಂಧಿಕರು ವಧುವಿನ ಪ್ರಿಯಕರನ ಮನೆಗೆ ಹೋಗಿದ್ದಾರೆ. ಅಲ್ಲದೇ ಪೊಲೀಸರಿಗೂ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ವಧುವಿನ ಪೋಷಕರು ಪ್ರಿಯಕರನ ವಿರುದ್ಧ ಕಿಡ್ನಾಪ್ ದೂರನ್ನು ನೀಡಿದ್ದಾರೆ. ಆದರೆ ಪೊಲೀಸರು ಇದುವರೆಗೂ ಕೇಸನ್ನು ದಾಖಲಿಸಿಕೊಳ್ಳಲಿಲ್ಲ ಎಂದು ವರದಿಯಾಗಿದೆ.

  • ವರನ ಮುಖ ನೋಡುತ್ತಿದ್ದಂತೆ ಜೋರಾಗಿ ಕಿರುಚಿ ಮದ್ವೆ ನಿಲ್ಲಿಸಿದ ವಧು!

    ವರನ ಮುಖ ನೋಡುತ್ತಿದ್ದಂತೆ ಜೋರಾಗಿ ಕಿರುಚಿ ಮದ್ವೆ ನಿಲ್ಲಿಸಿದ ವಧು!

    ಲಕ್ನೋ: ಮದುವೆಯಲ್ಲಿ ವಧು ತನ್ನ ವರನ ಮುಖವನ್ನು ನೋಡಿ ಜೋರಾಗಿ ಕಿರುಚಿ ಮದುವೆಯನ್ನು ನಿಲ್ಲಿಸಿದ ಘಟನೆ ಉತ್ತರ ಪ್ರದೇಶದ ಸರಹರಿಯ ಚಿಲ್ಲೂತಾಲ್‍ನಲ್ಲಿ ನಡೆದಿದೆ.

    ಪುಷ್ಪಾ ವರನನ್ನು ನೋಡಿ ಮದುವೆ ನಿಲ್ಲಿಸಿದ ವಧು. ಚಿಲ್ಲೂತಾಲ್ ತಾಲೂಕಿನ ಭಗವಾನ್‍ಪುರ್ ನ ನಿವಾಸಿಯಾದ ರವೀಂದ್ರ ಚೌಹ್ವಾನ್ ಅವರ ಪುತ್ರ ಚೇತಾಯಿ ಚೌಹ್ವಾನ್ ಅವರ ವಿವಾಹ ಅದೇ ಗ್ರಾಮದ ನಿವಾಸಿಯಾದ ಪುಷ್ಪಾ ಜೊತೆ ಭಾನುವಾರ ಚೌಹ್ವಾನ್ ಸಮುದಾಯದಂತೆ ನಡೆಯಬೇಕಿತ್ತು.

    ವರನ ಕುಟುಂಬದವರು ಹಾಗೂ ಸಂಬಂಧಿಕರು ವಧು ಪುಷ್ಪಾ ಮನೆಗೆ ಮೆರವಣಿಗೆ ಮೂಲಕ ಆಗಮಿಸಿದ್ದಾರೆ. ಆಗ ಪುಷ್ಪಾ ವರನ ಮುಖ ನೋಡುತ್ತಿದ್ದಂತೆ ಜೋರಾಗಿ ಕಿರುಚಿ ತನ್ನ ಮದುವೆ ನಿಲ್ಲಿಸಿದ್ದಾಳೆ. ಪುಷ್ಪಾ ಬಳಿ ಕಾರಣ ಕೇಳಿದ್ದಾಗ ಮದುವೆಗೆ ಬಂದಿದ್ದ ಮಂದಿ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.

    ವರ ಸಾಧಾರಣ ಬಣ್ಣ ಹೊಂದಿದ್ದಕ್ಕೆ ನಾನು ಆತನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ಪುಷ್ಪಾ ನಿರಾಕರಿಸಿದ್ದಕ್ಕೆ ಆಕೆಯ ಕುಟುಂಬದವರು ಹಾಗೂ ಸಂಬಂಧಿಕರು ಆಕೆಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಪುಷ್ಪಾ ಮದುವೆಯಾಗಲು ಒಪ್ಪಲೇ ಇಲ್ಲ. ಪುಷ್ಪಾ ಮದುವೆಗೆ ಒಪ್ಪದಿದ್ದಾಗ ಆಕೆಯ ಚಿಕ್ಕಪ್ಪ ಕೂಡ ಮದುವೆ ಬೇಡ ಎಂದು ಹೇಳಿದ್ದಾರೆ.

    ವರನನ್ನು ಸ್ವಾಗತ ಮಾಡಿದ ಮೇಲೆ ಹೂಮಾಲೆಯ ಶಾಸ್ತ್ರ ಕೂಡ ಮುಗಿದಿತ್ತು. ಅದೇ ಸಮಯದಲ್ಲೇ ಪುಷ್ಪಾಳಿಗೆ ವರ ಇಷ್ಟವಾಗಲಿಲ್ಲ. ನಂತರ ಊಟ ಮಾಡಲು ಹೋಗುವಾಗ ವರನ ಕಡೆಯವರು ಹಾಗೂ ವಧುವಿನ ಕಡೆಯವರು ಹೊಡೆದಾಡಿಕೊಂಡಿದ್ದಾರೆ.

    ತಕ್ಷಣ ಅಲ್ಲಿದ್ದ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಮೇಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಗಳ ನಿಲ್ಲಿಸಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲೇ ಪಂಚಾಯ್ತಿ ನಡೆಸಿ, ವರನ ಕುಟುಂಬದವರು ಹಾಗೂ ಸಂಬಂಧಿಕರನ್ನು ವಾಪಸ್ ಕಳುಹಿಸಿದರು.

  • ಮದ್ವೆ ಆದ ಕೆಲವೇ ನಿಮಿಷಗಳಲ್ಲಿ ಪತ್ನಿಯನ್ನು ಆಟೋದಲ್ಲಿ ಬಿಟ್ಟು ಪತಿ ಪರಾರಿ!

    ಮದ್ವೆ ಆದ ಕೆಲವೇ ನಿಮಿಷಗಳಲ್ಲಿ ಪತ್ನಿಯನ್ನು ಆಟೋದಲ್ಲಿ ಬಿಟ್ಟು ಪತಿ ಪರಾರಿ!

    ಭುವನೇಶ್ವರ್: ವರನೊಬ್ಬ ಮದುವೆಯಾದ ಕೆಲವೇ ನಿಮಿಷಗಳಲ್ಲಿ ತನ್ನ ಪತ್ನಿಯನ್ನು ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾದ ಘಟನೆ ಒಡಿಶಾದ ನಯಾಘರ್ ನಲ್ಲಿ ಜಿಲ್ಲೆಯಲ್ಲಿ ನಡೆದಿದೆ.

    ಮಾನಸ್ ಕುಮಾರ್ ಬೆಹೆರಾ(22) ಪರಾರಿಯಾದ ಆರೋಪಿ ಪತಿ. ಮಾನಸ್ ಜೆಸಿಬಿ ಚಾಲಕನಾಗಿದ್ದು, ಮದುವೆಯಾದ ಕೆಲವೇ ನಿಮಿಷಗಳಲ್ಲಿ ತನ್ನ ಪತ್ನಿಯನ್ನು ಆಟೋದಲ್ಲಿ ಕೂರಿಸಿ ಪರಾರಿಯಾಗಿದ್ದಾನೆ.

    ವರದಿಗಳ ಪ್ರಕಾರ ಮಾನಸ್ ಸುರುಕಾಬಾರಿ ಗ್ರಾಮದಲ್ಲಿ ರಸ್ತೆ ದುರಸ್ಥಿ ಕೆಲಸ ಮಾಡುವಾಗ ವಧುವಿನ ಜೊತೆ ಪ್ರೀತಿಯಲ್ಲಿ ಬಿದ್ದನು. ನಂತರ ಮದುವೆ ಆಗುವುದಾಗಿ ಹೇಳಿ ಆಕೆಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದ. ದೈಹಿಕ ಸಂಬಂಧ ಬೆಳೆಸಿದ ನಂತರ ಮಾನಸ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದ. ಆಗ ಗ್ರಾಮಸ್ಥರು ಮಾನಸ್ ತಂದೆಗೆ ವಿಷಯವನ್ನು ತಿಳಿಸಿ, ಬಲವಂತವಾಗಿ ಆತನನ್ನು ಯುವತಿಯ ಜೊತೆ ಮದುವೆ ಮಾಡಿಸಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಮಾನಸ್ ದೇವಸ್ಥಾನದಲ್ಲಿ ವಧುವಿಗೆ ತಾಳಿ ಕಟ್ಟಿದ್ದಾನೆ.

    ತಾಳಿ ಕಟ್ಟಿದ ನಂತರ ಮಾನಸ್ ತನ್ನ ಪತ್ನಿಗೆ ಬಾಡಿಗೆ ಮನೆಯಲ್ಲಿ ವಾಸಿಸೋಣ ಎಂದು ಹೇಳಿ ಬಾಡಿಗೆ ಮನೆಯನ್ನು ಹುಡುಕಲು ಆಕೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ದಾರಿ ಮಧ್ಯೆ ಆಟೋವನ್ನು ನಿಲ್ಲಿಸಿ ಬಾಡಿಗೆ ಮನೆ ಹುಡುಕಿ ಬರುವುದಾಗಿ ಹೇಳಿ ಪರಾರಿಯಾಗಿದ್ದಾನೆ. ಪತ್ನಿ ಮಾನಸ್‍ಗಾಗಿ ಆಟೋದಲ್ಲಿ ಗಂಟೆಗಟ್ಟಲೇ ಕಾಯುತ್ತಾ ಕುಳಿತ್ತಿದ್ದಳು. ಆದರೆ ಮಾನಸ್ ಹಿಂತಿರುಗಿ ಬರಲೇ ಇಲ್ಲ.

    ಮಾನಸ್ ವಾಪಸ್ ಬರದೇ ಇದ್ದಾಗ ಆಟೋ ಡ್ರೈವರ್ ವಧುವನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಿ ನಡೆದ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾನೆ. ಆಗ ಯುವತಿ ನ್ಯೂಗೋನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾಳೆ. ಆದರೆ ಈ ಘಟನೆ ಒಡಾಗಾಂವ್‍ನಲ್ಲಿ ನಡೆದ ಕಾರಣ ಆ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಯುವತಿಗೆ ಸಲಹೆ ನೀಡಿದರು. ಈಗ ಒಡಾಗಾಂವ್ ನಲ್ಲಿ ಪ್ರಕರಣ ದಾಖಲಾಗಿದೆ.

  • ಮದುವೆಯಾದ 15 ನಿಮಿಷಕ್ಕೆ ಪತ್ನಿಗೆ ಡಿವೋರ್ಸ್ ಕೊಟ್ಟ!

    ಮದುವೆಯಾದ 15 ನಿಮಿಷಕ್ಕೆ ಪತ್ನಿಗೆ ಡಿವೋರ್ಸ್ ಕೊಟ್ಟ!

    ದುಬೈ: ವರನೊಬ್ಬ ಮದುವೆಯಾಗಿ 15 ನಿಮಿಷಕ್ಕೆ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ವಧುವಿನ ತಂದೆ ಹಣಕ್ಕಾಗಿ ಅವಸರ ಮಾಡಿದ ಹಿನ್ನೆಲೆಯಲ್ಲಿ ಸಿಟ್ಟಾಗಿ ವರ 15 ನಿಮಿಷಕ್ಕೆ ವಿಚ್ಛೇದನ ನೀಡಿದ್ದಾನೆ.

    ಇಸ್ಲಾಂ ಧರ್ಮದಲ್ಲಿ ವರ ಹಾಗೂ ವಧು ಒಂದು ಕಾಂಟ್ರ್ಯಾಕ್ಟ್ ಸಹಿ ಮಾಡಬೇಕಾಗುತ್ತದೆ. ಈ ಪ್ರಕಾರ ನಿರ್ಧಿಷ್ಟ ಮೊತ್ತವನ್ನು ನೀಡುವುದಾಗಿ ವರ ತನ್ನ ಮಾವನಿಗೆ ತಿಳಿಸಿದ್ದ. ಆದರೆ ಈ ಮದುವೆಯಲ್ಲಿ ಮಾವ ಒಪ್ಪಂದ ಮಾಡಿಕೊಂಡಿದ್ದ ಹಣವನ್ನು ಈಗಲೇ ನೀಡಬೇಕೆಂದು ಹೇಳಿದ ಹಿನ್ನೆಲೆಯಲ್ಲಿ ಈಗ ಮದುವೆ ಮುರಿದು ಬಿದ್ದಿದೆ.

    ಏನಿದು ಪ್ರಕರಣ?
    ವರ ವಧುವಿನ ತಂದೆಗೆ 1 ಲಕ್ಷ ದಿರ್ಹಾಮ್(ಅಂದಾಜು 18.58 ಲಕ್ಷ ರೂ.) ನೀಡುತ್ತೇನೆ ಎಂದು ಒಪ್ಪಿಕೊಂಡಿದ್ದನು. ಹಣ ಪಡೆಯಲು ವಧುವಿನ ತಂದೆ ಅವಸರ ಮಾಡಿದ್ದಕ್ಕೆ ವರ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದಾನೆ.

    ಮದುವೆ ನಡೆಯುವ ಮುಂಚೆ ವರ ವಧುವಿನ ತಂದೆಗೆ ಅರ್ಧ ಹಣವನ್ನು ನೀಡಿದ್ದನು. ನಂತರ ಉಳಿದ ಅರ್ಧ ಹಣವನ್ನು ಮದುವೆಯ ನಂತರ ಮದುವೆ ಮನೆಯಲ್ಲೇ ಕೊಡುವುದಾಗಿ ಹೇಳಿದ್ದ. ದಂಪತಿ ಒಪ್ಪಂದಕ್ಕೆ ಸಹಿ ಮಾಡುತ್ತಿದ್ದಂತೆ ವಧುವಿನ ತಂದೆ ವರ ಕೊಡಬೇಕಾದ ಉಳಿದ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆಗ ವರ ಕಾರಿನಲ್ಲಿ ಉಳಿದ ಹಣವಿದೆ 5 ನಿಮಿಷದಲ್ಲಿ ನೀಡುತ್ತೇನೆ ಎಂದು ಮಾವನಿಗೆ ಹೇಳಿದ್ದಾನೆ.

    ಆದರೆ ವಧುವಿನ ತಂದೆ ವರನ ಮಾತನ್ನು ಒಪ್ಪಲಿಲ್ಲ. ಈಗಲೇ ಹಣವನ್ನು ತಂದುಕೊಡು ಎಂದು ಹಠ ಮಾಡಿದ್ದಾನೆ. ಈಗಲೇ ಹಣ ಕೊಡು ಇಲ್ಲವೆಂದರೆ ಹಣ ತರಲು ನಿನ್ನ ಸ್ನೇಹಿತನಿಗೆ ಕಳುಹಿಸು ಎಂದು ವಧುವಿನ ತಂದೆ ಮದುವೆ ಮನೆಯಲ್ಲೇ ಹೈಡ್ರಾಮಾ ನಡೆಸಿದ್ದಾನೆ. ವಧುವಿನ ತಂದೆಯ ಈ ವರ್ತನೆಯಿಂದ ವರನಿಗೆ ಅವಮಾನವಾಗಿ ತಕ್ಷಣ ತನ್ನ ಮದುವೆಯನ್ನು ಮುರಿಯುತ್ತೇನೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ಪತ್ನಿಗೆ ವಿಚ್ಛೇದನ ನೀಡಿದ್ದೇನೆ ಎಂದು ವಕೀಲರು ತಿಳಿಸಿದ್ದಾರೆ.

    ನನಗೆ ನಿಮ್ಮ ಮಗಳು, ನನ್ನ ಪತ್ನಿ ಬೇಕಾಗಿಲ್ಲ. ನಾನು ಈಗಲೇ ನಿಮ್ಮ ಮಗಳಿಗೆ ವಿಚ್ಛೇದನ ನೀಡುತ್ತೇನೆ. ಒಪ್ಪಂದಕ್ಕೆ ಸಹಿ ಮಾಡಿ 15 ನಿಮಿಷದೊಳಗೆ ನಾನು ನನ್ನ ಪತ್ನಿಗೆ ವಿಚ್ಛೇದನ ನೀಡಿದ್ದೇನೆ ಎಂದು ವರ ತಿಳಿಸಿದ್ದಾನೆ ಎಂದು ವರದಿಯಾಗಿದೆ.

  • ವಧುವಿನ ಸೆಲ್ಫಿಯಿಂದಾಗಿ ಮದುವೆ ಮಂಟಪದಿಂದ ಹೊರ ಬಂದ ವರ!

    ವಧುವಿನ ಸೆಲ್ಫಿಯಿಂದಾಗಿ ಮದುವೆ ಮಂಟಪದಿಂದ ಹೊರ ಬಂದ ವರ!

    ಅಹಮದಾಬಾದ್: ಸೆಲ್ಫಿ ವಿಚಾರಕ್ಕಾಗಿಯೇ ಮದುವೆಯೊಂದು ಮುರಿದು ಬಿದ್ದಿರುವ ವಿಚಿತ್ರ ಘಟನೆಯೊಂದು ಗುಜರಾತ್ ಅಹಮದಾಬಾದ್ ನಗರದಲ್ಲಿ ನಡೆದಿದೆ.

    ಅಹಮದಾಬಾದ್‍ನಲ್ಲಿ ಮೇ 11ರಂದು ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಆಗಿದ್ದು, ಈ ಸಂಬಂಧ ವರ ಹಾಗು ಆತನ ಕುಟುಂಬಸ್ಥರ ವಿರುದ್ಧ ಸ್ಥಳೀಯ ರಾಮೋಲ ಪೊಲೀಸ್ ಠಾಣೆಯಲ್ಲಿ ವಧು ದೂರು ದಾಖಲಿಸಿದ್ದಾರೆ.

    ಅಮರಾಯಿವಾಡಿ ತಾಲೂಕಿನ ಹಬೀಬ ಶೇಠ್ ಚಾಳದ ವಾಸಿವಾಗಿರುವ ಬಿಕಾಂ ಓದುತ್ತಿರುವ ವಿದ್ಯಾರ್ಥಿನಿಯೊಂದಿಗೆ, ವಸ್ತ್ರಾಲ ನಿವಾಸಿ 24 ವರ್ಷದ ಸಂಜಯ್ ಚೌಹಾಣ್ ಎಂಬ ಯುವಕನೊಂದಿಗೆ ಮದುವೆ ನಿಶ್ಚಯಗೊಂಡಿತ್ತು. ಎರಡು ಕುಟುಂಬಸ್ಥರು ಮೇ 11ರಂದು ಇಬ್ಬರ ಮದುವೆಯನ್ನು ನಿಶ್ಚಯಿಸಿದ್ರು. ವಧು ತಂದೆ ಅಹಮಾದಾಬಾದ್ ನಲ್ಲಿ ದೊಡ್ಡ ಮ್ಯಾರೇಜ್ ಹಾಲ್ ಸಹ ಬುಕ್ ಮಾಡಿದ್ರು.

    ಮೇ 11ರಂದು ಮಂಟಪಕ್ಕೆ ವರ ಮತ್ತು ಆತನ ಕುಟುಂಬಸ್ಥರು ಆಗಮಿಸಿದ್ರು. ವರನನ್ನು ಸಹ ಅತ್ಯಂತ ಸಂಭ್ರಮದಿಂದ ವಧುವಿನ ಪೋಷಕರು ಸಹ ಸ್ವಾಗತ ಮಾಡಿಕೊಂಡಿದ್ರು. ಆದ್ರೆ ರಾತ್ರಿ ಇದ್ದಕ್ಕಿದಂತೆ ವಧು ಅನ್ಯ ಯುವಕರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾಳೆ ಹಾಗು ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತಾ ಆರೋಪಿಸಿ ವರ ಮಂಟಪದಿಂದ ಹೊರ ನಡೆದಿದ್ದಾನೆ.

    ವಧು ಹೇಳೊದೇನು: ಆರತಕ್ಷತೆಯ ರಾತ್ರಿ ಊಟದ ಬಳಿಕ ನಾನು ನನ್ನ ಕೋಣೆಯಲ್ಲಿದ್ದಾಗ, ಸಂಜಯ್ ಬಂದ್ರು. ನಂತರ ನನ್ನ ಜೊತೆ ಸ್ಟೈಲ್ ಸ್ಟೈಲ್ ಆಗಿ ಸೆಲ್ಪಿ ತೆಗೆದುಕೊಳ್ಳಲು ಮುಂದಾದ್ರು. ಸೆಲ್ಫಿಗೆ ನಾನು ಸಂಕೋಚ ವ್ಯಕ್ತಪಡಿಸಿದಾಗ, ನಾನು ನಿನ್ನ ಮದ್ವೆಯಾಗಲ್ಲ ಅಂತಾ ಹೊರ ಹೋದ್ರು ಅಂತಾ ದೂರಿನಲ್ಲಿ ವಧು ಉಲ್ಲೇಖಿಸಿದ್ದಾರೆ.

    ಮದುವೆ ನಿಲ್ಲಿಸುವಂತೆ ವರ ಹೇಳಿದಾಗ ವಧುವಿನ ತಂದೆ ಸಮಾಧಾನ ಮಾಡಲು ಮುಂದಾದ್ರು. ಈ ವೇಳೆ ವರ ತನ್ನ ಭಾವಿ ಮಾವನ ಮೇಲೆ ಹಲ್ಲೆ ನಡೆಸಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ವಧುವಿನ ಚಿಕ್ಕಪ್ಪ ಅಣ್ಣನ ಸಹಾಯಕ್ಕೆ ಬಂದಿದ್ದಾರೆ. ವರನಿಗೆ ಆತನ ತಂದೆ ಬುದ್ಧಿ ಹೇಳಿದ್ರೂ ಕೇಳದ ಸಂಜಯ್ ಮದುವೆ ಮಂಟಪದಿಂದ ಹೊರ ಹೋಗಿದ್ದಾನೆ.

    ಘಟನೆ ಸಂಬಂಧ ವಧು ದೂರು ದಾಖಲಿಸಿದ್ದು, ಎರಡೂ ಕುಟುಂಬಸ್ಥರನ್ನು ಕರೆಸಿ ವಿಚಾರಣೆ ನಡೆಸಲಾಗ್ತಿದೆ ಅಂತಾ ರಾಮೋಲ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

  • ಒಂದೇ ದಿನ ಇಬ್ಬರಿಗೆ ತಾಳಿ ಕಟ್ಟಿದ ವರ- ಹುಡುಗನ ನಿರ್ಧಾರಕ್ಕೆ ಅಭಿನಂದನೆಯ ಮಹಾಪೂರ

    ಒಂದೇ ದಿನ ಇಬ್ಬರಿಗೆ ತಾಳಿ ಕಟ್ಟಿದ ವರ- ಹುಡುಗನ ನಿರ್ಧಾರಕ್ಕೆ ಅಭಿನಂದನೆಯ ಮಹಾಪೂರ

    ಮುಂಬೈ: ಮಹರಾಷ್ಟ್ರಾದ ನಂದೋಡ್‍ನ ಕೋಟಾಗ್ಯಾಲಾದಲ್ಲಿ ವ್ಯಕ್ತಿಯೊಬ್ಬರು ಸಹೋದರಿಯರನ್ನು ಒಂದೇ ದಿನ ಖುಷಿಖುಷಿಯಾಗಿ ಮದುವೆಯಾಗಿದ್ದಾರೆ.

    ಸಹೋದರಿಯರಾದ ರಾಜ್‍ಶ್ರೀ ಹಾಗೂ ದುರ್ಪತಾ ಬಾಯಿ, ಸಾಯಿನಾಥ್ ಎಂಬವರನ್ನು ಮದುವೆಯಾಗಿದ್ದಾರೆ. ಕೋಟಾಗ್ಯಾಲಾ ಗ್ರಾಮದ ಗಂಗಾಧರ್ ಶಿರ್ ಗೆರೆ ಅವರಿಗೆ ಮೂವರು ಹೆಣ್ಣುಮಕ್ಕಳು. ರಾಜ್‍ಶ್ರೀ ಮದುವೆ ಮೊದಲು ನಿಶ್ಚಯವಾಗಿತ್ತು. ಮೊದಲ ಮಗಳಾದ ದುರ್ಪತಾ ಬಾಯಿ ಮಾನಸಿಕ ಅಸ್ವಸ್ಥೆ ಆಗಿದ್ದ ಹಿನ್ನೆಲೆಯಲ್ಲಿ ಮದುವೆ ನಿಶ್ಚಯವಾಗಿರಲಿಲ್ಲ.

    ರಾಜ್‍ಶ್ರೀಗೆ ತನ್ನ ಸಹೋದರಿ ದುರ್ಪತಾ ಬಾಯಿ ಎಂದರೆ ಬಹಳ ಇಷ್ಟ ಹಾಗೂ ಆಕೆಯನ್ನು ಬಿಟ್ಟಿರಲು ಸಾಧ್ಯವಾಗುತ್ತಿರಲಿಲ್ಲ. ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ ರಾಜ್‍ಶ್ರೀ ತನ್ನ ಅಕ್ಕನ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದಳು. ಈಗ ನನ್ನ ಮದುವೆಯಾಗುತ್ತಿದೆ. ಆದರೆ ನನ್ನ ಅಕ್ಕ ಮಾನಸಿಕ ಅಸ್ವಸ್ಥೆ ಆಕೆಯನ್ನು ಯಾರು ಮದುವೆಯಾಗುತ್ತಾರೆಂದು ರಾಜ್‍ಶ್ರೀ ತನ್ನ ಭಾವಿ ಪತಿ ಸಾಯಿನಾಥ್ ಉರೇಕರ್ ಬಳಿ ತಿಳಿಸಿ ನಮ್ಮಿಬ್ಬರನ್ನು ಮದುವೆಯಾಗಬೇಕು ಎಂದು ಹೇಳಿದ್ದಳು.

    ಆರಂಭದಲ್ಲಿ ಈ ಷರತ್ತಿಗೆ ಸಾಯಿನಾಥ್ ಒಪ್ಪಿಗೆ ನೀಡಲಿಲ್ಲ. ಆದರೆ ರಾಜ್‍ಶ್ರೀಗೆ ತನ್ನ ಅಕ್ಕನ ಮೇಲಿರುವ ಪ್ರೀತಿ ಕಂಡು ಸಾಯಿನಾಥ್ ಇಬ್ಬರನ್ನು ಮದುವೆಯಾಗಲೂ ಒಪ್ಪಿಕೊಂಡಿದ್ದಾರೆ. ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರದಲ್ಲಿ ವರ ಸಾಯಿನಾಥ್ ಹಾಗೂ ವಧು ರಾಜ್‍ಶ್ರೀ, ದುರ್ಪತಾ ಬಾಯಿ ಎಂದು ಪ್ರಿಂಟ್ ಮಾಡಿಸಿದ್ದರು.

    ಮೇ 2ರಂದು ಅದ್ಧೂರಿಯಾಗಿ ಈ ವಿಶೇಷ ಮದುವೆ ನಡೆದಿದ್ದು, ಈ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ವಿಧವಿಧವಾಗಿ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ.

    ಮದುವೆಯಾಗಲೂ ನಾನು ರಾಜ್‍ಶ್ರೀಯನ್ನು ಒಪ್ಪಿಗೊಂಡಿದೆ. ನಂತರ ಅಕ್ಕನ ಸ್ಥಿತಿಯನ್ನು ನೋಡಿ ರಾಜ್‍ಶ್ರೀ ಇಬ್ಬರನ್ನೂ ಮದುವೆ ಆಗಲು ಷರತ್ತು ಹಾಕಿದ್ದಳು. ರಾಜ್‍ಶ್ರೀಗೆ ತನ್ನ ಅಕ್ಕನ ಮೇಲಿರುವ ಪ್ರೀತಿ ಕಂಡು ನನಗೆ ಇಷ್ಟವಾಯಿತು. ಹಾಗಾಗಿ ನಾನು ಈ ಮದುವೆಗೆ ಒಪ್ಪಿಕೊಂಡೆ ಎಂದು ವರ ಸಾಯಿನಾಥ್ ಪ್ರತಿಕ್ರಿಯಿಸಿದ್ದಾರೆ.

    ದುರ್ಪತಾ ಬಾಯಿ ಹುಟ್ಟಿದಾಗಿಂದಲೂ ಈಕೆಗೆ ಈ ಅನಾರೋಗ್ಯದ ಸಮಸ್ಯೆ ಇದೆ. ಆಕೆಯ ಚಿಕಿತ್ಸೆಗಾಗಿ 2 ಎಕ್ರೆ ಜಮೀನು ಕೂಡ ಮಾರಿದೆ. ಈ ಅನಾರೋಗ್ಯದ ಸಮಸ್ಯೆಯಿರುವ ಕಾರಣ ಯಾರೂ ಆಕೆಯನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಲಿಲ್ಲ. ಅದಕ್ಕಾಗಿ ರಾಜ್‍ಶ್ರೀ ತನ್ನ ಭಾವಿ ಪತಿಗೆ ಷರತ್ತು ಹಾಕಿದ್ದಳು. ಹಾಗಾಗಿ ಸಾಯಿನಾಥ್ ಮದುವೆಯಾಗಲೂ ಒಪ್ಪಿಕೊಂಡರು ಎಂದು ವಧುವಿನ ತಂದೆ ಗಂಗಾಧರ್ ತಿಳಿಸಿದ್ದರು.

    ನನ್ನ ಹಿರಿಮೊಮ್ಮಗಳಿಗೆ ಆರೋಗ್ಯದ ಸಮಸ್ಯೆಯಿದ್ದು, ತಂದೆ-ತಾಯಿ ಬಿಟ್ಟರೆ ಅವಳನ್ನು ನೋಡಿಕೊಳ್ಳಲು ಯಾರಿಲ್ಲ. ಹಾಗಾಗಿ ಅಕ್ಕನ ಜವಾಬ್ದಾರಿಯನ್ನು ತಂಗಿ ತೆಗೆದುಕೊಂಡಿದ್ದಾಳೆ. ದುರ್ಪತಾ ಬಾಯಿಗೆ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ ಇಬ್ಬರು ಮೊಮ್ಮಕ್ಕಳನ್ನು ತನ್ನ ಸಂಬಂಧಿಕರಲೇ ಮದುವೆ ಮಾಡಿಸಿದ್ದೇವೆ. ನಾವು ಅವಿದ್ಯಾವಂತರಾಗಿದ್ದು, ಕಾನೂನಿನ ಬಗ್ಗೆ ಅಷ್ಟು ತಿಳಿದಿಲ್ಲ. ಆದರೆ ಈ ಮದುವೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇರುವುದ್ದಿಲ್ಲ ಎಂದು ಯಾರೋ ತಿಳಿಸಿದ್ದರು. ಈಗ ನಮಗೆ ಭಯವಾಗುತ್ತಿದೆ ಎಂದು ವಧುವಿನ ಅಜ್ಜಿ ಕಾಂತಾಬಾಯಿ ಶಿರ್ ವಾಲೆ ಹೇಳಿದರು.