Tag: Grocery Kit

  • ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

    ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

    ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಆಟೋ ಡ್ರೈವರ್ ಗಳು, ಶಿಕ್ಷಕರು, ಅರ್ಚಕರಿಗೆ ಇಂದು ಕಂದಾಯ ಸಚಿವ ಆರ್.ಅಶೋಕ್ ದಿನಸಿ ಕಿಟ್ ಗಳನ್ನು ವಿತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೋವಿಡ್ ವ್ಯಾಪಿಸಿದ ಸಂದರ್ಭದಿಂದಲೂ ಕ್ಷೇತ್ರದ ಜನರಿಗೆ ನಿರಂತರವಾಗಿ ನೆರವು ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ಯಾರೂ ಉಪವಾಸ ಇರುವಂತೆ ಆಗಬಾರದು. ಲಾಕ್‍ಡೌನ್ ಸಮಯದಲ್ಲಿ ಲಕ್ಷಾಂತರ ಜನರಿಗೆ ಉಚಿತವಾಗಿ ಊಟ ನೀಡಲಾಗಿದೆ. ಹೀಗಾಗಿ ನಾನು ನನ್ನ ಜನರ ಜೊತೆ ಸದಾ ನಿಲ್ಲುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕಲಬುರಗಿ, ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಸಾಧ್ಯತೆ: ಸಚಿವ ಅಶೋಕ್

    ಎಲ್ಲ ವರ್ಗದ ಜನರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗಿದೆ. ಲಾಕ್ ಡೌನ್ ತೆರವುಗೊಳಿಸಿದ ನಂತರವೂ ಕ್ಷೇತ್ರದ ಜನರಿಗೆ ಸತತವಾಗಿ ನೆರವು ನೀಡಲಾಗುತ್ತಿದೆ. ಇಲ್ಲಿಯವರೆಗೂ ಪೌರಕಾರ್ಮಿಕರಿಗೆ, ಆಟೋ ಡ್ರೈವರ್ ಗಳಿಗೆ, ಕೇಬಲ್, ಗ್ಯಾಸ್, ನ್ಯೂಸ್ ಪೇಪರ್, ಹಾಲು ವ್ಯಾಪಾರಿಗಳಿಗೆ, ಮೆಕ್ಯಾನಿಕ್ ಮತ್ತು ಎಲೆಕ್ಟ್ರಿಷಿಯನ್ ಸೇರಿದಂತೆ ಹಲವು ವರ್ಗದವರಿಗೆ ದಿನಸಿ ಕಿಟ್ ಮತ್ತು ಇನ್ನಿತರೆ ನೆರವು ನೀಡಲಾಗಿದೆ. ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಅವರ ಬಳಿ ಹೋಗುವುದಲ್ಲ. ನಿರಂತರವಾಗಿ ಅವರ ಯೋಗಕ್ಷೇಮ ವಿಚಾರಿಸಬೇಕು. ಆ ಕೆಲಸವನ್ನ ಮಾಡುತ್ತಿದ್ದೇನೆ ಎಂದರು.

    ಪದ್ಮನಾಭನಗರ ಕ್ಷೇತ್ರದ 18 ರಿಂದ 25 ವರ್ಷದ ಯುವಕರಿಗೆ ಉಚಿತವಾಗಿ ಲಸಿಕೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೂರನೇ ಅಲೆಗೆ ಈಗಾಗಲೇ ಸಿದ್ಧತೆಗಳು ನಡೆದಿವೆ. ಮಕ್ಕಳಿಗಾಗಿ ವಿಶೇಷ ಆಸ್ಪತ್ರೆಯನ್ನು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ಧಪಡಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳ ಜೊತೆಗೆ ಅವರ ಪಾಲಕರು ಉಳಿದುಕೊಳ್ಳಲು ಸಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

  • ದಿನಸಿ ಕಿಟ್ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಗೋಪಾಲಯ್ಯ

    ದಿನಸಿ ಕಿಟ್ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಗೋಪಾಲಯ್ಯ

    ಬೆಂಗಳೂರು: ಸಂಕಷ್ಟದಲ್ಲಿರುವ ಶಿಕ್ಷಕರಿಗೆ ದಿನಸಿ ಕಿಟ್‍ಗಳನ್ನು ವಿತರಿಸುವ ಮೂಲಕವಾಗಿ ಅಬಕಾರಿ ಸಚಿವ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಗೋಪಾಲಯ್ಯ ಅವರು ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ:  ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ರಾಜ್ಯದಲ್ಲಿ ಎರಡನೆ ಕೊರೊನಾ ಅಲೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿ ಸಾವು-ನೋವು ಸಂಭವಿಸಿದ್ದರಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಸುಮಾರು 2 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿ ಮಾನವೀಯತೆ ಮೆರೆದರು. ಮಹಾಲಕ್ಷ್ಮಿಪುರಂನ ನಾಗಪುರ ವಾರ್ಡ್‍ನಲ್ಲಿರುವ ಬಿಜಿಎಸ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಸೇರಿದಂತೆ ಬೆಂಬಲಿಗರು, ಹಿತೈಷಿಗಳ ಸಮ್ಮುಖದಲ್ಲಿ ಶಿಕ್ಷಕರಿಗೆ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.

    ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಅಶ್ವತ್ಥ ನಾರಾಯಣ್, ಕೊರೊನಾ ಸಂಕಷ್ಟದಲ್ಲಿ ಅಬಕಾರಿ ಸಚಿವರೂ ಆಗಿರುವ ಗೋಪಾಲಯ್ಯ ಅವರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಮಾಜಿಕ ಸೇವೆಗಳು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. ಕ್ಷೇತ್ರದಲ್ಲಿರುವ ಪ್ರತಿಯೊಬ್ಬರಿಗೂ ಜಾತಿ, ಮತ, ಭೇದ ಯಾವುದನ್ನೂ ನೋಡದೆ ಸಂಕಷ್ಟದಲ್ಲಿರುವ ಜನರಿಗೆ ಔಷಧೋಪಚಾರ, ದಿನಸಿ ಕಿಟ್‍ಗಳು, ಆರ್ಥಿಕ ನೆರವು, ಕೊರೊನಾ ಸೋಂಕು ತಗುಲಿದವರಿಗೆ ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಶಿಕ್ಷಣ, ಆರೋಗ್ಯ, ಅನ್ನ, ವಸತಿ ಕ್ಷೇತ್ರಗಳಿಗೆ ವಿಶೇಷವಾಗಿ ಗಮನ ಹರಿಸಿರುವ ಅವರು, ಕ್ಷೇತ್ರದಲ್ಲಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲೆಂದು ಮೂರು ಮಾದರಿ ಸರ್ಕಾರಿ ಶಾಲೆಗಳನ್ನು ನಿರ್ಮಿಸಿದ್ದಾರೆ. ಒಂದೊಂದು ಶಾಲೆಯಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದು. ಭಗವಂತ ಅವರಿಗೆ ಇನ್ನಷ್ಟು ಸಮಾಜಸೇವೆ ಮಾಡುವ ಅವಕಾಶ ನೀಡಲಿ ಎಂದಿದ್ದಾರೆ.

    ಗೋಪಾಲಯ್ಯ ಮಾತನಾಡಿ, ಕೊರೊನಾ ಬಂದ ಸಂದರ್ಭದಲ್ಲಿ ನಾನು ಹುಟ್ಟುಹಬ್ಬ ಆಚರಿಸಬಾರದೆಂದು ನನ್ನ ಕ್ಷೇತ್ರದ ಜನತೆ, ಸಾರ್ವಜನಿಕರು, ಹಿತೈಷಿಗಳು, ಪಕ್ಷದ ಮುಖಂಡರಿಗೆ ಮನವಿ ಮಾಡಿಕೊಂಡಿದ್ದೆ. ಹಾರ, ತುರಾಯಿ, ಶಾಲು ಹಾಕಿಕೊಂಡರೆ ಅರ್ಥ ಬರುವುದಿಲ್ಲ. ಇದರ ಬದಲಿಗೆ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಕಿಟ್‍ಗಳನ್ನು ನೀಡಬೇಕೆಂದು ತೀರ್ಮಾನಿಸಿದ್ದೆನೆ. ಈಗಾಗಲೇ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ದೆಹಲಿಯಲ್ಲಿರುವ ಶಾಲೆಗಳಿಗಿಂತಲೂ ಉತ್ತಮ ಮೂಲಭೂತ ಸೌಕರ್ಯಗಳುಳ್ಳ ಮೂರು ಶಾಲೆಗಳನ್ನು ನಿರ್ಮಿಸಲಾಗಿದೆ. ಕೊರೊನಾ ಕಾರಣದಿಂದ ಅದು ಉದ್ಘಾಟನೆಯಾಗಲಿಲ್ಲ. ಶೀಘ್ರದಲ್ಲೇ ಶ್ರೀಗಳ ಆಶೀರ್ವಾದದೊಂದಿಗೆ ಪ್ರಾರಂಭಿಸುತ್ತೇವೆ ಎಂದಿದ್ದಾರೆ.

    ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಕೊರೊನಾ ಬಂದಾಗ ಜನಪ್ರತಿನಿಗಳು ಜನರನ್ನು ಮರೆಯುವುದೇ ಹೆಚ್ಚು. ಆದರೆ, ಇದಕ್ಕೆ ವ್ಯತಿರಿಕ್ತವೆಂಬಂತೆ ತಮ್ಮ ಪ್ರಾಣ, ಕುಟುಂಬದ ಸದಸ್ಯರನ್ನೂ ಲೆಕ್ಕಿಸದೆ ಗೋಪಾಲಯ್ಯನವರು ಕ್ಷೇತ್ರದ ಜನತೆಗೆ ಸಂಜೀವಿನಿಯಾಗಿ ಪರಿಣಮಿಸಿದ್ದಾರೆ. ದೇವರು ಅವರಿಗೆ ಇನ್ನಷ್ಟು ಶಕ್ತಿಯನ್ನು ನೀಡಿ ಜನಸೇವೆ ಮಾಡುವ ಅವಕಾಶ ಕೊಡಲಿ. ಅದೇ ರೀತಿ ಕೊರೊನಾವೂ ನಮ್ಮಿಂದ ದೂರವಾಗಲಿ ಎಂದು ಶ್ರೀಗಳು ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಒಬಿಸಿ ಅಧ್ಯಕ್ಷ ನೆ ಲ ನರೇಂದ್ರ ಬಾಬು ಮಾಜಿ ಉಪ ಮೇಯರ್ ಗಳಾದ ಹೇಮಲತ ಗೋಪಾಲಯ್ಯ ಹರೀಶ್ ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಜಯರಾಮಯ್ಯ ಸೇರಿದಂತೆ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

  • 1 ಲಕ್ಷ ದಿನಸಿ ಕಿಟ್ ವಿತರಿಸಿದ ಭೈರತಿ ಬಸವರಾಜ್

    1 ಲಕ್ಷ ದಿನಸಿ ಕಿಟ್ ವಿತರಿಸಿದ ಭೈರತಿ ಬಸವರಾಜ್

    ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಡವರು, ಶ್ರಮಿಕ ವರ್ಗದವರು, ಕೂಲಿ ಕಾರ್ಮಿಕರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಮ್ಮ ಕ್ಷೇತ್ರದ ಒಂದು ಲಕ್ಷ ಕುಟುಂಬಗಳಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್ ವಿವರಿಸಿದರು.

    ಕೆ.ಆರ್.ಪುರ ಕ್ಷೇತ್ರದ ಕೊತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಅಗತ್ಯ ಬಿದ್ದಲ್ಲಿ ಬಡಜನರಿಗೆ ಇನ್ನೂ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಕ್ಷೇತ್ರದ ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಹಂತ ಹಂತವಾಗಿ ನೀಡಲಾಗುತ್ತದೆ ಎಂದರು. ಇದನ್ನೂ ಓದಿ: ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ: ಉಪೇಂದ್ರ

    ಕೃಷ್ಣರಾಜಪುರ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರೆಗೆ ಉನ್ನತಿಕರಿಸಲು 13 ಕೋಟಿ ರೂ. ವೆಚ್ಚವಾಗಲಿದೆ. ಐಟಿಐ ಆಸ್ಪತ್ರೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

    ಬಳಿಕ ಮಾತನಾಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ, ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ 130 ಕೋಟಿ ಜನರಿಗೂ ಕೋವಿಡ್ ಲಸಿಕೆಯನ್ನು ನೀಡಲಾಗುವುದು. ಜೂನ್ ಅಂತ್ಯದ ವೇಳೆಗೆ ಕೇಂದ್ರದಿಂದ ರಾಜ್ಯಕ್ಕೆ 50 ಲಕ್ಷ ಡೋಸ್ ಲಸಿಕೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಸಹ 15 ಲಕ್ಷ ಡೋಸ್ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಈ ತಿಂಗಳಲ್ಲಿ ಒಟ್ಟು 65 ಲಕ್ಷ ಡೋಸ್‍ನಷ್ಟು ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ ಎಂದರು.

    ಕೊರೊನಾ ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೆ.ಅರ್.ಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಒಂದು ಲಕ್ಷ ದಿನಸಿ ಕಿಟ್ ನ್ನು ಭೈರತಿ ಬಸವರಾಜ್ ವಿತರಣೆ ಮಾಡುತ್ತಿರುವುದು ಪುಣ್ಯದ ಕೆಲಸ. ಕ್ಷೇತ್ರದ ಜನ ಮತ ಹಾಕುವ ಮೂಲಕ ಅವರಿಗೆ ಆಶೀರ್ವಾದ ಮಾಡಿದ್ದೀರಿ. ಅವರು ನಿಮಗೆ ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದಾರೆ. ಸದಾ ಜನರ ನಡುವೆ ಇರುವ ಬಸವರಾಜ್ ಅಂತಹವರು ಸಮಾಜಕ್ಕೆ ಅವಶ್ಯಕತೆ ಇದೆ. ಅವರಿಗೆ ತಮ್ಮ ಬೆಂಬಲ ಸದಾ ಇರಲಿ ಎಂದರು.

    ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನ ಸಭಾ ಕ್ಷೇತ್ರವಾಗಿದೆ. ಇದನ್ನು ಭೈರತಿ ಬಸವರಾಜ್ ಅವರು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಈ ಭಾಗದ ಲೋಕಸಭಾ ಸದಸ್ಯನಾಗಿ ಮತ್ತು ಕೇಂದ್ರ ಸಚಿವನಾಗಿ ನನ್ನ ಬೆಂಬಲ, ಸಹಕಾರ ಈ ಕ್ಷೇತ್ರಕ್ಕೆ ಯಾವಾಗಲೂ ಇರುತ್ತದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣ ಕುರಿತು ಸಭೆ ಕರೆದಾಗಲ್ಲೆಲ್ಲ ನಾನು ಕೆ.ಅರ್.ಪುರ ಕ್ಷೇತ್ರದ ಬಗ್ಗೆ ಮತ್ತು ಭೈರತಿ ಬಸವರಾಜ ಅವರು ಅಲ್ಲಿ ಕೈಗೊಂಡಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಹೀಗಾಗಿ ಬಸವರಾಜ್ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿದೆ ಎಂದರು.

    ಕೂತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪ, ವಿಜನಾಪುರದ ಸೈನಿಕ ಭವನ, ಕಲ್ಕರೆಯ ಎನ್.ಅರ್.ಐ ಲೇಔಟ್, ಟಿ.ಸಿ.ಪಾಳ್ಯದ ಸಂತ ಅಂತೋಣಿ ಶಾಲೆ, ಕುರುಡುಸೊಣ್ಣೆನಹಳ್ಳಿಯ ಲೇಕ್ ಮೌಂಟ್ ಶಾಲೆ, ಎಚ್.ಎ.ಎಲ್ ನ ವಿಭೂತಿಪುರ ಶಾಲೆ, ಉದಯ ನಗರದ ಜೈನ ಭವನ, ಎ.ನಾರಾಯಣಪುರದ ಎಮ್.ಇ.ಜಿ ಲೇಔಟ್, ದೇವಸಂದ್ರದ ಕೆಂಪೇಗೌಡ ಕ್ರೀಡಾಂಗಣಗಳಲ್ಲಿ ದಿನಸಿ ಕಿಟ್ ವಿತರಿಸಲಾಯಿತು.

    ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕೆ.ಅರ್.ಪುರ ಬಿಜೆಪಿ ಅಧ್ಯಕ್ಷ ಶಿವರಾಜ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ, ಬಿಜೆಪಿ ಹಿರಿಯ ಮುಖಂಡ ಗಣೇಶ, ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀಕಾಂತ್, ಜಯಪ್ರಕಾಶ್, ನಾಗರಾಜ್, ಸುರೇಶ್, ರಮೇಶ್, ಅಂತೋಣಿ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಆಹಾರ ಕಿಟ್ ಕೊಟ್ಟಿದ್ದೇವೆ, ರೇಷನ್ ಇಲ್ಲ- ಸೊಸೈಟಿ ಮುಂದೆ ಧರಣಿ ಕುಳಿತ ಹಳ್ಳಿಗರು

    ಆಹಾರ ಕಿಟ್ ಕೊಟ್ಟಿದ್ದೇವೆ, ರೇಷನ್ ಇಲ್ಲ- ಸೊಸೈಟಿ ಮುಂದೆ ಧರಣಿ ಕುಳಿತ ಹಳ್ಳಿಗರು

    – ಸಿ.ಟಿ.ರವಿ ಕೊಟ್ಟ ಅಕ್ಕಿ ದಾನದ್ದೋ, ಸೊಸೈಟಿಯದ್ದೋ?

    ಚಿಕ್ಕಮಗಳೂರು: ನಿಮಗೆ ರೇಷನ್ ಕಿಟ್ ಕೊಟ್ಟಿದ್ದೇವೆ. ಹಾಗಾಗಿ ಈಗ ಪಡಿತರ ಕೊಡುವುದಿಲ್ಲ ಎಂದ ಸೊಸೈಟಿ ವಿರುದ್ಧ ಹಳ್ಳಿಗರು ಅಲ್ಲೇ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ತಾಲೂಕಿನ ಕಳಸಾಪುರ ಸಮೀಪದ ಕಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಕಳಸಾಪುರ ಸಮೀಪದ ಕಳ್ಳಿಕೊಪ್ಪಲು ಗ್ರಾಮದಲ್ಲಿ ಸಿಳ್ಳೆಕ್ಯಾತ ಸಮುದಾಯಕ್ಕೆ ಸೇರಿದ ಕುಟುಂಬಗಳೇ ಹೆಚ್ಚಿವೆ. ಬೀದಿ-ಬೀದಿ, ಊರೂರಲ್ಲಿ ಹೇರ್‍ಪಿನ್, ಕೂದಲು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಿ ಜೀವನ ಸಾಗಿಸುವ ಕುಟುಂಬಗಳಿವು. ಈ ಗ್ರಾಮದ 47 ಕುಟುಂಬಗಳ 75 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆಗ ಇಡೀ ತಾಲೂಕು ಆಡಳಿತ ಸ್ಥಳಕ್ಕೆ ಹೋಗಿ ನಿಮಗೆ ಬೇಕಾದ ಸೌಲಭ್ಯ ನೀಡತ್ತೇವೆ. ಯಾರೂ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿ ಎಲ್ಲರಿಗೂ ತಾಲೂಕು ಆಡಳಿತದಿಂದ ರೇಷನ್ ಕಿಟ್ ಕೊಟ್ಟಿದ್ದರು. 10 ಕೆ.ಜಿ. ಅಕ್ಕಿ, ಎಣ್ಣೆ, ಬೆಳೆ, ಉಪ್ಪು ಸೇರಿದಂತೆ ವಿವಿಧ ಆಹಾರ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ಕೊಟ್ಟಿದ್ದರು. ಅಲ್ಲಿನ ಜನ ಮನೆಯಿಂದ ಹೊರಬರದೆ ಮನೆಯಲ್ಲೇ ಇದ್ದರು. ಇದನ್ನೂ ಓದಿ: ದಾನ ನೀಡಿದ್ದ ಅಂಬುಲೆನ್ಸ್ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    ಈಗ ಅಲ್ಲಿನ ಸೊಸೈಟಿ ಆ ಗ್ರಾಮದ ಜನರಿಗೆ ರೇಷನ್ ಕೊಡದೆ ಸಾತಾಯಿಸುತ್ತಿದ್ದು, ಪಡಿತರ ಕೊಡಲು ಮೀನಮೇಷ ಎಣಿಸುತ್ತಿವೆ. ನಿಮಗೆ ಅಂದೇ ಅಕ್ಕಿ ಕೊಟ್ಟಿದ್ದೇವೆ. ಈಗ ಮತ್ತೆ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರಂತೆ. ಇದು ಹಳ್ಳಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಮಗೆ 10 ಕೆ.ಜಿ. ಅಕ್ಕಿಯಷ್ಟೆ ಕೊಟ್ಟಿರೋದು. ಅದು ನಾವು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರಲು ದಾನವಾಗಿ ಕೊಟ್ಟಿದ್ದು. ನಮ್ಮ ಅಕ್ಕಿ ನಮಗೆ ಕೊಡಿ ಎಂದು ಸ್ಥಳಿಯರು ಸೊಸೈಟಿಯವರಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ಸೊಸೈಟಿಯವರು ರೇಷನ್ ಕೊಡದ ಕಾರಣ ಸ್ಥಳಿಯರು ಅಲ್ಲೇ ಧರಣಿ ಕೂತು ಆಕ್ರೋಶ ಹೊರಹಾಕಿ ತಾಲೂಕು ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ದಾನ ಕೊಡುವಂತೆ ಸಿ.ಟಿ.ರವಿಯವರೇ ಕಿಟ್ ಕೊಟ್ಟಿದ್ದು, ನಮ್ಮ ಅಕ್ಕಿಯನ್ನ ನಮಗೆ ಕೊಡಲು ದಾನದ ಹೆಸರೇಕೆ ಎಂದು ಸ್ಥಳೀಯರು ಶಾಸಕರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಸೊಸೈಟಿಯವರು ಏಕೆ ಪಡಿತರ ಕೊಡುವುದಿಲ್ಲ ಎಂದು ಕೇಳುತ್ತಿದ್ದಾರೆ. ತಾಲೂಕು ಆಡಳಿತ ಕಿಟ್ ಮೂಲಕ ಕೊಟ್ಟ ಅಕ್ಕಿ ದಾನಿಗಳದ್ದೋ ಅಥವಾ ಸೊಸೈಟಿಯದ್ದೋ ಅನ್ನೋದು ಸ್ಪಷ್ಟವಾಗಬೇಕಿದೆ. ಸೊಸೈಟಿಯವರೇ ಗೋಲ್ಮಾಲ್ ಮಾಡುತ್ತಿದ್ದಾರೋ ಅಥವಾ ತಾಲೂಕು ಆಡಳಿತವೇ ಸೊಸೈಟಿ ಅಕ್ಕಿ ಕೊಟ್ಟಿತ್ತೋ ಅನ್ನೋದು ತನಿಖೆಯ ಮೂಲಕ ಬೆಳಕಿಗೆ ಬರಬೇಕಿದೆ.

  • ಅಗತ್ಯವಿದ್ದವರಿಗೆ ಕಿಟ್ ನೀಡಿ ಮಾದರಿಯಾದ ಮಂಗಳಮುಖಿಯರು

    ಅಗತ್ಯವಿದ್ದವರಿಗೆ ಕಿಟ್ ನೀಡಿ ಮಾದರಿಯಾದ ಮಂಗಳಮುಖಿಯರು

    ಚಿಕ್ಕಮಗಳೂರು: ದಾನಿಗಳು ನೀಡಿದ ದಿನಸಿ ಕಿಟ್ ಸಂಗ್ರಹಿಸಿಟ್ಟುಕೊಂಡು ಬಡವರಿಗೂ ಸಿಗದಹಾಗೆ ಮಾಡುವ ಜನರಿದ್ದಾರೆ. ಆದರೆ ಈ ವಿಚಾರದಲ್ಲಿ ಮಂಗಳಮುಖಿಯರು ಮಾದರಿಯಾಗಿದ್ದು, ದಾನಿಗಳು ತಮಗೆ ನೀಡಿದ ಕಿಟ್‍ನ್ನು ಕಷ್ಟದಲ್ಲಿರುವವರಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಹಲವು ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಧನವಂತರು ಬಡವರಿಗೆ ಸಹಾಯ ಮಾಡುತ್ತಿದ್ದಾರೆ, ಅದೇ ರೀತಿ ಮಂಗಳಮುಖಿಯರಿಗೂ ನೀಡಿದ್ದಾರೆ. ಆದರೆ ಮಂಗಳಮುಖಿಯರು ಸಾಮಾನ್ಯ ಜನರಂತೆ ಸಂಗ್ರಹಿಸಿಟ್ಟುಕೊಳ್ಳದೆ, ಬೇಕಾದಷ್ಟು ಇಟ್ಟುಕೊಂಡು ಉಳಿದಿದ್ದನ್ನು ಮತ್ತೊಬ್ಬರಿಗೆ ನೀಡುತ್ತಿದ್ದಾರೆ. ಸ್ವತಃ ಮಂಗಳಮುಖಿಯರೇ ಕಿಟ್‍ಗಳನ್ನು ಬಡವರಿಗೆ ಹಂಚುತ್ತಿದ್ದಾರೆ.

    ಇಂತಹ ಕೆಲಸ ಸೇವೆಯಾಗಿರಬೇಕು, ಪ್ರಚಾರವಾಗಬಾರದು ಎಂದು ವಿಡಿಯೋ ಕೂಡ ಮಾಡಿಕೊಂಡಿಲ್ಲ. ತಮ್ಮ ನೆನಪು ಹಾಗೂ ಸಮಾಧಾನಕ್ಕಾಗಿ ಫೋಟೋ ಮಾತ್ರ ಕ್ಲಿಕ್ಕಿಸಿಕೊಂಡು ಯಾರಿಗೂ ಹೇಳದೆ ಏನೂ ಗೊತ್ತಿಲ್ಲದಂತೆ ಇದ್ದಾರೆ. ಜಿಲ್ಲೆಯ ಬಹುತೇಕ ಭಾಗಗಳಿಗೆ ತೆರಳಿ ಬಡವರಿಗೆ ಕಿಟ್ ಕೊಡುತ್ತಿದ್ದಾರೆ.

    ಜಿಲ್ಲೆಯ ಮಂಗಳಮುಖಿಯರ ಮಡಿಲು ಸಂಘದಿಂದ ಕಿಟ್ ವಿತರಿಸುತ್ತಿದ್ದಾರೆ. ಕೊರೊನಾ ಆರಂಭವಾದಾಗಿನಿಂದ ಇವರು ಕಿಟ್ ವಿತರಿಸುತ್ತಿದ್ದು, ಇದು ಯಾರಿಗೂ ತಿಳಿದಿಲ್ಲ. ತಮಗೆ ಬೇಕಾದಷ್ಟು ದಿನಸಿ ಇಟ್ಟಿಕೊಂಡು ಇಳಿದದ್ದೆಲ್ಲವನ್ನೂ ದಾನ ಮಾಡಿದ್ದಾರೆ.

  • ಬಡವರ ಹಸಿವು ನೀಗಿಸಲು ಮುಂದಾದ ಯುವಕರ ತಂಡ- ದಿನಸಿ ಕಿಟ್ ವಿತರಣೆ

    ಬಡವರ ಹಸಿವು ನೀಗಿಸಲು ಮುಂದಾದ ಯುವಕರ ತಂಡ- ದಿನಸಿ ಕಿಟ್ ವಿತರಣೆ

    ನೆಲಮಂಗಲ: ಕೊರೊನಾ ಲಾಕ್‍ಡೌನ್‍ನಿಂದಾಗಿ ಇನ್ನೂ ಅನೇಕ ಜನ ಸಂಕಷ್ಟ ಎದುರಿಸುತ್ತಿದ್ದು, ಇಂತಹವರಿಗೆ ಸಹಾಯ ಮಾಡುವತ್ತ ಯುವಕರ ತಂಡ ಹೆಜ್ಜೆ ಇಟ್ಟಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಂಚೀಪುರ ಗ್ರಾಮದ ಯುವಕರು ತಮ್ಮ ಗ್ರಾಮದ ಬಡವರ ಹಸಿವು ನೀಗಿಸಲು ಮುಂದಾಗಿದ್ದು, ಗ್ರಾಮದ ಯುವಕಾರದ ಗೋಪಿ ಮತ್ತು ರವಿ ಅವರ ತಂಡದಿಂದ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಅನೇಕೆ ದಿನಸಿ ಪದಾರ್ಥಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

    ಈ ಕುರಿತು ಯುವಕ ಗೋಪಿ ಮಾತನಾಡಿ, ನಮ್ಮ ಗ್ರಾಮದ ಯುವಕರೆಲ್ಲರೂ ಸೇರಿ ಸಮಸ್ಯೆ ಇದ್ದವರಿಗೆ ಸ್ಪಂದಿಸೋಣ ಎಂದು ತೀರ್ಮಾನಿಸಿದೆವು. ಹೀಗೆ ಎಲ್ಲರ ಸಹಕಾರದಿಂದ ಇಂದು ಆಹಾರ ಕಿಟ್ ವಿತರಣೆ ಮಾಡಿದ್ದೇವೆ ಗ್ರಾಮದ ಪ್ರತಿಯೊಬ್ಬರೂ ಯಾವುದೇ ಸಮಸ್ಯೆ ಇಲ್ಲದೆ ಜೀವನ ನಡೆಸಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು. ಈ ವೇಳೆ ತಾಲೂಕು ಪಂಚಾಯತಿ ಸದಸ್ಯ ರಮೇಶ್, ಬಾಳೆಕಾಯಿ ನಾಗರಾಜು, ಎಪಿಎಂಸಿ ನಿರ್ದೇಶಕ ಗೋವಿಂದರಾಜು, ಗೋಪಾಲಕೃಷ್ಣ, ರಾಮಚಂದ್ರಪ್ಪ, ರವಿಕುಮಾರ್, ರಾಮಕೃಷ್ಣ ನರಸಿಂಹಮೂರ್ತಿ, ಚೇತನ್, ಮಂಜುನಾಥ್ ಮತ್ತಿತರರು ಇದ್ದರು.

  • ಮೃತ ಸೋಂಕಿತನ ಬಳಿ ದಿನಸಿ ಕಿಟ್ ಪಡೆದ ಮಹಿಳೆಗೆ ಕೊರೊನಾ ಪಾಸಿಟಿವ್

    ಮೃತ ಸೋಂಕಿತನ ಬಳಿ ದಿನಸಿ ಕಿಟ್ ಪಡೆದ ಮಹಿಳೆಗೆ ಕೊರೊನಾ ಪಾಸಿಟಿವ್

    – ಚಿಕ್ಕಬಳ್ಳಾಪುರ ನಗರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ಮತ್ತೋರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. 39 ವರ್ಷದ ಮಹಿಳೆಗೆ ಕೊರೊನಾ ದೃಢವಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

    ಮಾರ್ಚ್ 5ರಂದು ಈಕೆ ಕೊರೊನಾ ಸೋಂಕಿಗೆ ಬಲಿಯಾದ ವೃದ್ಧ ರೋಗಿ-250ರ ಮನೆಗೆ ತೆರಳಿ ದಿನಸಿ ಕಿಟ್ ಪಡೆದುಕೊಂಡಿದ್ದರು. ಸದ್ಯ ದಿನಸಿ ಕಿಟ್ ಪಡೆದುಕೊಂಡಿರುವ ಈಕೆಗೆ ಕೊರೊನಾ ಸೋಂಕು ದೃಢವಾಗಿದ್ದು, ದಿನಸಿ ಕಿಟ್ ಪಡೆದ ನೂರಾರು ಮಂದಿಗೆ ಈಗ ಕೊರೊನಾ ಆತಂಕ ಶುರುವಾಗಿದೆ.

    ಸೋಂಕಿತೆ ರೇಷ್ಮೆ ನೂಲಿನ ಕಾರ್ಖಾನೆಯಲ್ಲಿ ರೇಷ್ಮೆ ನೂಲು ಬಿಚ್ಚಣಿಕೆ ಕೆಲಸ ಮಾಡುತ್ತಿದ್ದು, ರೇಷ್ಮೆ ನೂಲು ಕಾರ್ಖಾನೆಯ ಮಾಲೀಕ, ಮಾಲೀಕನ ಹೆಂಡತಿ-ಮಕ್ಕಳು, ಕಾರ್ಖಾನೆಯಲ್ಲಿ ಕೆಲಸ ಮಾಡುವ 6 ಮಂದಿ ಕಾರ್ಮಿಕರು, ಸೋಂಕಿತೆಯ ಅಕ್ಕ-ಭಾವ ಹಾಗೂ ಮಕ್ಕಳು ಸೇರಿದಂತೆ ಒಟ್ಟು 22 ಮಂದಿಯನ್ನು ಪ್ರಥಮ ಸಂಪರ್ಕಿತರೆಂದು ಗುರುತಿಸಲಾಗಿದೆ. ಈ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

    ಇವರೆಲ್ಲರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿ ಆರ್.ಲತಾ ಮಾಹಿತಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಬಲಿಯಾಗುವ ಮುನ್ನ ಈ ಏರಿಯಾದಲ್ಲಿ ಉಚಿತವಾಗಿ ದಿನಸಿ ಕಿಟ್ ವಿತರಣೆ ಮಾಡಿದ್ದ. ಈ ಪಿ-250 65 ವರ್ಷದ ವೃದ್ಧ ಏಪ್ರಿಲ್ 15 ರಂದು ಮೃತಪಟ್ಟಿದ್ದರು.

  • 50 ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಣೆಗೆ ಮುಂದಾದ ಶಿವಲಿಂಗೇಗೌಡ

    50 ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಣೆಗೆ ಮುಂದಾದ ಶಿವಲಿಂಗೇಗೌಡ

    ಹಾಸನ: ಹೆಮ್ಮಾರಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೈಗೊಂಡಿರುವ ಲಾಕ್‍ಡೌನ್‍ನಿಂದಾಗಿ ಜನ ಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ 50 ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಿಸಲು ಶಾಸಕ ಶಿವಲಿಂಗೇಗೌಡ ಮುಂದಾಗಿದ್ದಾರೆ.

    ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರು ಜನರಿಗೆ ಅನುಕೂಲವಾಗಲಿ ಎಂದು ಈಗಾಗಲೇ ಆಹಾರ ಧಾನ್ಯ ತುಂಬಿದ ಸುಮಾರು 50 ಸಾವಿರ ಕಿಟ್‍ಗಳನ್ನು ಸಿದ್ಧಪಡಿಸಿದ್ದಾರೆ. ಕಿಟ್‍ಗಳು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ 530 ಹಳ್ಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಈಗಾಗಲೇ ಶಾಸಕ ಶಿವಲಿಂಗೇಗೌಡ ಕಿಟ್ ಹಂಚಿಕೆ ಮಾಡುತ್ತಿದ್ದಾರೆ.

    ಶಿವಲಿಂಗೇಗೌಡ ಅವರು ಕೆಲವೊಂದು ಹಳ್ಳಿಗಳಿಗೆ ತಾವೇ ಸ್ವತಃ ತೆರಳಿ ಬೆಂಬಲಿಗರೊಂದಿಗೆ ಕಿಟ್ ಹಂಚಿಕೆ ಮಾಡುತ್ತಿದ್ದಾರೆ. ಇನ್ನುಳಿದ ಹಳ್ಳಿಗಳಲ್ಲಿ ತಮ್ಮ ಕಾರ್ಯಕರ್ತರ ಮೂಲಕ ಕಿಟ್ ಹಂಚುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕರು, ಎಷ್ಟು ಜನರಿಗೆ ಅಗತ್ಯವಿದೆಯೋ ಅವರಿಗೆ ತಮ್ಮ ಕೈಲಾದ ಮಟ್ಟಿಗೆ ಆಹಾರ ಧಾನ್ಯದ ಕಿಟ್ ತಲುಪಿಸುತ್ತಿದ್ದೇವೆ. ಒಂದು ವೇಳೆ ಏಪ್ರಿಲ್ ತಿಂಗಳ ನಂತರವೂ ಲಾಕ್‍ಡೌನ್ ಮುಂದುವರಿದರೆ ಕೈಲಾದ ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ.