Tag: Grey

  • ರೂರಲ್ ಗ್ರೇ ವಾಟರ್ ಮ್ಯಾನೇಜ್‍ಮೆಂಟ್- ರಾಜ್ಯದಲ್ಲೇ ಹಾವೇರಿಯಲ್ಲಿ ಪ್ರಥಮ ಪ್ರಯೋಗ

    ರೂರಲ್ ಗ್ರೇ ವಾಟರ್ ಮ್ಯಾನೇಜ್‍ಮೆಂಟ್- ರಾಜ್ಯದಲ್ಲೇ ಹಾವೇರಿಯಲ್ಲಿ ಪ್ರಥಮ ಪ್ರಯೋಗ

    ಹಾವೇರಿ: ಹಳ್ಳಿಗಳ ಕೊಳಚೆ ನೀರು ನದಿ ಹಾಗೂ ಜಲ ಮೂಲಗಳಿಗೆ ಸೇರುವ ಮುನ್ನ ಸಂಸ್ಕರಿಸಿ ಹರಿಸುವ ವಿನೂತನ ಗ್ರೇ ವಾಟರ್ ಮ್ಯಾನೇಜ್‍ಮೆಂಟ್ ವ್ಯವಸ್ಥೆ ಅನುಷ್ಟಾನದ ಜಿಲ್ಲೆಯ ಕಾಮಗಾರಿ ಸ್ಥಳಗಳಿಗೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಜಿಲ್ಲಾ ಪಂಚಾಯತ್ ವತಿಯಿಂದ ವಿನೂತನವಾಗಿ ಸುಸ್ಥಿರ ಬೂದು ನೀರು ನಿರ್ವಹಣೆಗೆ ಮೊದಲ ಹೆಜ್ಜೆಯಾಗಿ ರಾಣೇಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಸಮೀಪದ ಕೋಡಿಹಾಳ ಹಾಗೂ ಬ್ಯಾಡಗಿ ಮತ ಕ್ಷೇತ್ರ ವ್ಯಾಪ್ತಿಯ ಬೆನಕಕೊಂಡ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

    ಗ್ರಾಮಗಳಲ್ಲಿ ಪಾತ್ರೆ ತೊಳೆದ ನೀರು, ಬಟ್ಟೆ ತೊಳೆದ ನೀರು, ಸ್ನಾನ ಗೃಹದ ನೀರು ಸೇರಿದಂತೆ ಕಲುಷಿತ ನೀರು ಚರಂಡಿಗಳಲ್ಲಿ ಗ್ರಾವಿಟಿ ಆಧಾರದ ಮೇಲೆ ಸರಾಗವಾಗಿ ಹರಿದು ಹೋಗುವಂತೆ ಚರಂಡಿಗಳ ನಿರ್ಮಾಣ ಮಾಡಲಾಗಿದೆ. ಸಿಮೆಂಟ್‍ನಿಂದ ನಿರ್ಮಾಣ ಮಾಡಿದ ಕಾಲುವೆಗಳಲ್ಲಿ ನೀರು ಹರಿದು ಈ ಕಾಲುವೆಗೆ ಸಂಪರ್ಕ ಹೊಂದಿದಂತೆ ಕೆಳಹಂತದಲ್ಲಿ ಕಲ್ಲಿನಿಂದ ನಿರ್ಮಾಣಮಾಡಿದ ಚರಂಡಿ ಮೂಲಕ ಹರಿದು ಸಂಸ್ಕರಣಕ್ಕಾಗಿ ನಿರ್ಮಾಣ ಮಾಡಿರುವ ದೊಡ್ಡ ಕಲ್ಲುತೊಟ್ಟಿಗಳಲ್ಲಿ ಸೇರಿ ಸಂಸ್ಕರಣಗೊಳ್ಳುತ್ತದೆ. ನಂತರ ಈ ತೊಟ್ಟಿಯಿಂದ ನದಿಗೆ ಹರಿಸಲು ಕಲ್ಲಿನಿಂದಲೇ ಕಾಲುವೆಗಳನ್ನು ನಿರ್ಮಾಣಮಾಡಲಾಗಿದೆ. ನದಿಗೆ ಕಲುಷಿತ ನೀರು ಸೇರುವ ಮುನ್ನವೇ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿತ ನೀರು ನದಿ ಸೇರಿದಂತೆ ಜಲಮೂಲಗಳಿಗೆ ಸೇರುವಂತೆ ಯೋಜನೆಯನ್ನು ವಿನ್ಯಾಸ ಮಾಡಲಾಗಿದೆ.

    ಗ್ರೇ ವಾಟರ್(ಬೂದು ನೀರು) ಮ್ಯಾನೇಜ್ ಮೇಂಟ್ ವ್ಯವಸ್ಥೆ ರಾಜ್ಯದಲ್ಲೇ ಹಾವೇರಿ ಜಿಲ್ಲೆಯ ಕೋಡಿಹಾಳ ಗ್ರಾಮದಲ್ಲಿ ಪ್ರಥಮವಾಗಿ ಅನುಷ್ಠಾನಗೊಳ್ಳುತ್ತಿದೆ, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. 2050 ಕುಟುಂಬಗಳು (10,252 ಜನರು) ವಾಸಿಸುವ ತುಂಗಭದ್ರಾ ನದಿ ತಟದಲ್ಲಿರುವ ಕೋಡಿಹಾಳ ಗ್ರಾಮದಲ್ಲಿ ವೈಜ್ಞಾನಿಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮದಿಂದ ಐದು ಕಡೆ ಕೊಳಚೆ ನೀರು ನದಿಗೆ ಸೇರುತ್ತಿತ್ತು. ಸರಾಗವಾಗಿ ಚರಂಡಿಯಲ್ಲಿ ನೀರು ಹರಿಯದೆ ಅಲ್ಲಲ್ಲಿ ನಿಂತು ಅನೈರ್ಮಲ್ಯ ವಾತಾವರಣ ಸೃಷ್ಟಿಸುವುದರ ಜೊತೆಗೆ ಅನಾರೋಗ್ಯಕರ ವಾತಾವರಣ ಹರಡುತ್ತಿತ್ತು. ಇದೀಗ ಇದರಿಂದಾಗಿ ನೀರು ಸಂಸ್ಕರಣಗೊಂಡು ನದಿ ಸೇರಲಿದೆ.

    ಈ ಸಂದರ್ಭದಲ್ಲಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಕೋಡಿಹಾಳ ಮತ್ತು ಬೆನಕನಕೊಂಡ ಗ್ರಾಮ ಪಂಚಾಯತಿ ಅಧ್ಯಕ್ಷರು, ಪದಾಧಿಕಾರಿಗಳು ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

  • ಪೈರಸಿ ಹೇಗೆ ಸಿನಿರಂಗದಲ್ಲಿ ಬೇರೂರಿದೆ ಎಂಬುದನ್ನು ಈ ಶಾರ್ಟ್ ಫಿಲ್ಮ್ ನಲ್ಲಿ ನೋಡಿ

    ಪೈರಸಿ ಹೇಗೆ ಸಿನಿರಂಗದಲ್ಲಿ ಬೇರೂರಿದೆ ಎಂಬುದನ್ನು ಈ ಶಾರ್ಟ್ ಫಿಲ್ಮ್ ನಲ್ಲಿ ನೋಡಿ

    ಬೆಂಗಳೂರು: ಪೈರಸಿ ಒಂದು ಚಿತ್ರವನ್ನು ಹೇಗೆ ನಾಶ ಮಾಡುತ್ತದೆ? ಪೈರಸಿಯಿಂದ ಚಿತ್ರತಂಡದ ಮೇಲಾಗುವ ಪರಿಣಾಮ ಎಂಬುದರ ಬಗ್ಗೆ ನಟಿ ಸುಮನ್ ನಗರ್ಕರ್ ಶಾರ್ಟ್ ಫಿಲ್ಮ್ ನಲ್ಲಿ ಮನಸ್ಸಿಗೆ ತಾಗುವಂತೆ ಹೇಳಿದ್ದಾರೆ.

    ಈ ಶಾರ್ಟ್ ಫಿಲ್ಮ್ ನಲ್ಲಿ ಸುಮನ್ ನಗರ್ಕರ್ ನಟನೆಯ `ಮೌನ’ ಸಿನಿಮಾ ಬಿಡುಗಡೆ ಆಗಿರುತ್ತದೆ. ಸಿನಿಮಾ ಬಿಡುಗಡೆ ವೇಳೆ ನಟಿ ಪ್ರೇಕ್ಷಕರ ಬರುವಿಕೆಗಾಗಿ ಚಿತ್ರಮಂದಿರದ ಹೊರಗಡೆಯೇ ಕುಳಿತಿರುತ್ತಾರೆ. ಈ ವೇಳೆ ಸುಮನ್ ಅವರ ಆತ್ಮಸಾಕ್ಷಿ ಎದುರಿಗೆ ಬರುತ್ತದೆ. ಆತ್ಮಸಾಕ್ಷಿಯ ಪ್ರತಿಯೊಂದು ಮಾತುಗಳು ನೋಡುಗರನ್ನು ತಲುಪುತ್ತವೆ. ಒಂದು ವಸ್ತು ಹುಟ್ಟಿದರೆ ಅದರ ಹಿಂದೆ ಕೆಲವೇ ನಿಮಿಷಗಳಲ್ಲಿ ಆ ವಸ್ತುವಿನ ನಕಲು ತಯಾರಾಗುತ್ತದೆ ಎಂಬ ಅರ್ಥಗರ್ಭಿತ ಮಾತನ್ನು ಹೇಳುತ್ತದೆ.

    ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಕೂಡಲೇ ಕೆಲವರು ಅದರ ಪೈರಸಿ ಮಾಡುತ್ತಾರೆ. ಹಾಗೇ ಸಿನಿಮಾ ದಿನವೇ ಸುಮನ್ ನಟನೆಯ `ಮೌನ’ ಚಿತ್ರದ ಪೈರಸಿ ಆಗಿರುತ್ತದೆ. ಮೌನ ಸಿನಿಮಾ ನೋಡಲು ಬಂದವರು ಸಹ ಮೊಬೈಲ್‍ನಲ್ಲಿ ಸಿನಿಮಾದ ಲಿಂಕ್ ನೋಡಿ ಬೇರೆ ಫಿಲ್ಮ್ ನೋಡಲು ಹೋಗುತ್ತಾರೆ. ಕೊನೆಗೆ ಪ್ರೇಕ್ಷಕರ ಕೊರತೆಯಿಂದಾಗಿ ಚಿತ್ರಮಂದಿರದಿಂದ ಸಿನಿಮಾವನ್ನು ತೆಗೆಯಲಾಗುತ್ತದೆ.

    ಕೇವಲ 4 ನಿಮಿಷ 48 ಸೆಕಂಡ್ ಗಳಿರುವ `ಗ್ರೇ’ ಕಿರುಚಿತ್ರ ಅತ್ಯಂತ ಪರಿಣಾಮಕಾರಿಯಾಗಿದೆ. ಸಿನಿಮಾ ತೆರೆಗೆ ತರಲು ಕಷ್ಟಪಟ್ಟ ಚಿತ್ರತಂಡದ ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಗ್ರೇ ಕಿರು ಚಿತ್ರಕ್ಕೆ ಸುಜಯ್ ರಾಮಯ್ಯ ನಿರ್ದೇಶನವಿದೆ. ಕಿರುಚಿತ್ರ ಶುಕ್ರವಾರ ಯುಟ್ಯೂಬ್ ಅಪ್ಲೋಡ್ ಆಗಿದ್ದು, ನೋಡುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.

    ಕಳೆದ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ದೃವ ಸರ್ಜಾ ನಟನೆಯ `ಭರ್ಜರಿ’ ಸಿನಿಮಾಗೂ ಪೈರಸಿಯ ಬಿಸಿ ತಟ್ಟಿತ್ತು.