Tag: Greta Thunberg

  • ಗ್ರೇಟಾ ಟೂಲ್‌ಕಿಟ್‌ ಕೇಸ್‌ – ಬೆಂಗಳೂರಿನಲ್ಲಿ ಯುವ ಹೋರಾಟಗಾರ್ತಿ ಅರೆಸ್ಟ್‌

    ಗ್ರೇಟಾ ಟೂಲ್‌ಕಿಟ್‌ ಕೇಸ್‌ – ಬೆಂಗಳೂರಿನಲ್ಲಿ ಯುವ ಹೋರಾಟಗಾರ್ತಿ ಅರೆಸ್ಟ್‌

    ಬೆಂಗಳೂರು: ಗ್ರೇಟಾ ಥನ್ ಬರ್ಗ್ ಟೂಲ್‌ ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೋರಾಟಗಾರ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಫ್ರೈಡೆ ಫಾರ್ ಫ್ಯೂಚರ್ ಸಂಸ್ಥಾಪಕಿ ದಿಶಾ ರವಿ(21) ಬಂಧಿತ ಆರೋಪಿ. ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಿವಾಸದಲ್ಲಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ಟೂಲ್‌ ಕಿಟ್‌ ಮೂಲಕ ದ್ವೇಷ ಉತ್ತೇಜಿಸಿದ ಆರೋಪದ ಅಡಿ ಬಂಧನ ಮಾಡಲಾಗಿದೆ.

     

    ನಗರ ಪ್ರಸಿದ್ಧ ಕಾಲೇಜಿನಲ್ಲಿ ಎಂಬಿಎ ಪದವಿ ಓದಿರುವ ದಿಶಾ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾಳೆ. ಈಕೆಯ ತಂದೆ ಮೈಸೂರಿನಲ್ಲಿ ಅಥ್ಲೆಟಿಕ್ಸ್‌ ಕೋಚ್‌ ಆಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಪ್ರತಿಭಟನೆ  ಬೆಂಬಲ ನೀಡಲು ಟೂಲ್ ಕಿಟ್ ಸೃಷ್ಟಿಸಿದ  ಪಡೆದ ಆರೋಪ ದಿಶಾ ರವಿ ಮೇಲಿದೆ.

    ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಸಂಬಂದ ಹಲವಾರು ವಿದೇಶಿ ಸೆಲೆಬ್ರಿಟಿಗಳು ಬೆಂಬಲಿಸಿ ಟ್ವೀಟ್‌ ಮಾಡಿದ್ದರು. ಈ ಪೈಕಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌ ಟ್ವೀಟ್‌ ಮಾಡುವುದರ ಜೊತೆ ಜಾಗತಿಕ ಬೆಂಬಲ ನೀಡಬೇಕು ಎಂದು ಹೇಳಿ ಪ್ರತಿಭಟನೆಯ ಟೂಲ್‌ಕಿಟ್‌ ಇರುವ ಗೂಗಲ್‌ ಡಾಕ್ಯುಮೆಂಟ್‌ ಪ್ರಕಟಮಾಡಿದ್ದರು.

     

    ಈ ಡಾಕ್ಯುಮೆಂಟ್‌ ಪ್ರಕಟವಾದ ಬಳಿಕ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 124ಎ , 153 ಎ ಅಡಿ ಎಫ್ಐಆರ್‌ ದಾಖಲಿಸಿದ್ದರು. ಬಳಿಕ ಗೂಗಲ್‌ ಕಂಪನಿಗೆ ಪತ್ರ ಬರೆದು ಟೂಲ್‌ಕಿಟ್‌ ಬಗ್ಗೆ ಮತ್ತಷ್ಟು ಮಾಹಿತಿ ನೀಡುವಂತೆ ಕೋರಿದ್ದರು. ಗೂಗಲ್‌ ತನಿಖೆಗೆ ಸಂಬಂಧಿಸಿದ ಮಾಹಿತಿ ನೀಡುವುದಾಗಿ ತಿಳಿಸಿತ್ತು.

  • ಗ್ರೇಟಾ ಥನ್‌ಬರ್ಗ್‌ ಟೂಲ್‌ ಕಿಟ್‌ ದಾಖಲೆ ಕೇಳಿ ಗೂಗಲ್‌ಗೆ ಪೊಲೀಸರಿಂದ ಪತ್ರ

    ಗ್ರೇಟಾ ಥನ್‌ಬರ್ಗ್‌ ಟೂಲ್‌ ಕಿಟ್‌ ದಾಖಲೆ ಕೇಳಿ ಗೂಗಲ್‌ಗೆ ಪೊಲೀಸರಿಂದ ಪತ್ರ

    – ರಿಹಾನಾ ನೆರವಿಗೆ ಧಾವಿಸಿದ ರಮ್ಯಾ
    – ಮತ್ತೆ ರೈತರ ಪರ ಮೀಯಾ ಖಲೀಫಾ ಟ್ವೀಟ್‌

    ನವದೆಹಲಿ: ರೈತರ ಹೋರಾಟ ಬೆಂಬಲಿಸಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ನೀಡುತ್ತಿರುವ ಪ್ರತಿಕ್ರಿಯೆಗಳ ಹಿಂದೆ ಖಲಿಸ್ತಾನ್ ಪ್ರತ್ಯೇಕವಾದಿಗಳ ಪಾತ್ರವಿರುವ ಬಗ್ಗೆ ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಖಲಿಸ್ತಾನ್ ಚಳವಳಿಯಲ್ಲಿರುವ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಸಂಸ್ಥೆ ಗ್ರೆಟಾ ಥನ್‍ಬರ್ಗ್‍ಗೆ ಯಾವತ್ತು ಏನು ಮಾಡಬೇಕು ಎಂಬ ಗೂಗಲ್‌ ಡಾಕ್ಯುಮೆಂಟ್‌ ಟೂಲ್ ಕಿಟ್ ಕಳಿಸಿತ್ತು. ಇದನ್ನು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿ, ನಂತರ ಡಿಲೀಟ್ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಟೂಲ್‍ಕಿಟ್ ಮಾಹಿತಿಯನ್ನು ಕೋರಿ ದೆಹಲಿ ಪೊಲೀಸರು ಗೂಗಲ್‍ಗೆ ಪತ್ರ ಬರೆದಿದ್ದಾರೆ.

    ರೈತರ ವಿಚಾರವಾಗಿ ಟ್ವೀಟ್ ಮಾಡಲು ರಿಹಾನಾಗೆ ಖಲಿಸ್ತಾನಿಗಳು 18 ಕೋಟಿ ಸಂದಾಯ ಮಾಡಿದ್ದಾರೆ ಎಂಬ ಸುದ್ದಿ ಹರಡಿದ್ದು, ಈ ಕುರಿತ ಟ್ವೀಟನ್ನು ನಟಿ ಕಂಗನಾ ಶೇರ್ ಮಾಡಿದ್ದಾರೆ.

    ಮಾಜಿ ನೀಲಿ ತಾರೆ ಮೀಯಾ ಖಲೀಫಾ ಮತ್ತೊಮ್ಮೆ ಟ್ವೀಟ್ ಮಾಡಿದ್ದು, ನಾನು ರೈತ ಹೋರಾಟದ ಪರವೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮೊನ್ನೆಯ ಟ್ವೀಟ್‍ಗೆ ಕೆಲವರು ಮೀಯಾಗೆ ಪ್ರಜ್ಞೆ ಬಂದಿದೆ ಎಂದು ಕಾಲೆಳೆದಿದ್ದರು. ಇದನ್ನು ಹಂಚಿಕೊಂಡಿರುವ ಮೀಯಾ, ಹೌದು ನಾನು ಪ್ರಜ್ಞೆಗೆ ಮರಳಿದ್ದೇನೆ. ಅಗತ್ಯವಿಲ್ಲದಿದ್ದರೂ ನಿಮ್ಮ ಕಾಳಜಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

    ಪಾಪ್ ಗಾಯಕಿ ರಿಹಾನಾ, ಗ್ರೆಟಾ ಥನ್‍ಬರ್ಗ್ ಬೆಂಬಲಕ್ಕೆ ನಟಿ ರಮ್ಯಾ ಧಾವಿಸಿದ್ದಾರೆ. ಬಾಲಿವುಡ್‍ಗಿಂತ ಇವರ ಬೆನ್ನುಮೂಳೆಯೇ ಗಟ್ಟಿಯಾಗಿದೆ ಎಂದು ಟ್ವೀಟಿಸಿದ್ದಾರೆ. ಕೆನಡಾ ಪ್ರಜೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಬಹುದಾದರೇ ರಿಹಾನಾ ಏಕೆ ಸ್ಪಂದಿಸಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ರಿಹಾನಾ ಮಾತನ್ನು ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೇ ಬೆಂಬಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

    ರೈತ ಹೋರಾಟವನ್ನು ಬೆಂಬಲಿಸಿದ ಸೆಲೆಬ್ರಿಟಿಗಳ ಕುರಿತ ಪ್ರಶ್ನೆಗೆ, ಯಾರು ಆ ವಿದೇಶಿ ಪ್ರಮುಖರು ಎಂದು ರಾಕೇಶ್ ಟಿಕಾಯತ್ ಪ್ರಶ್ನಿಸಿದ್ದಾರೆ. ರಿಹಾನಾ, ಗ್ರೆಟಾ ಹೆಸರು ಹೇಳಿದಾಗ ಅವರ ಬಗ್ಗೆ ತಮಗೇನು ಗೊತ್ತಿಲ್ಲ. ಆದರೆ ಅವರು ಬೆಂಬಲಿಸಿದ್ದರಿಂದ ಉಂಟಾಗಿರುವ ಸಮಸ್ಯೆಯಾದರೂ ಏನು ಎಂದು ಕೇಳಿದ್ದಾರೆ.

  • ಭಾರತದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ – ಗ್ರೆಟಾ ಥನ್‍ಬರ್ಗ್ ವಿರುದ್ಧ ಕೇಸ್

    ಭಾರತದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ – ಗ್ರೆಟಾ ಥನ್‍ಬರ್ಗ್ ವಿರುದ್ಧ ಕೇಸ್

    ನವದೆಹಲಿ: ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್ ವಿರುದ್ಧ ದೆಹಲಿ ಪೊಲೀಸರು ಪಿತೂರಿ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.

    ರೈತ ಹೋರಾಟದ ಪರವಾಗಿ ಹಾಲಿವುಡ್ ಗಾಯಕಿ ರಿಹಾನಾ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ ಮೀನಾ ಹ್ಯಾರೀಸ್ ಸೇರಿದಂತೆ ವಿಶ್ವದ ಹಲವು ಪ್ರಮುಖ ಸೆಲೆಬ್ರಿಟಿಗಳು ದನಿ ಎತ್ತಿದ್ದಕ್ಕೆ ಸ್ವತಃ ಕೇಂದ್ರ ಸರ್ಕಾರ ತಿರುಗಿಬಿದ್ದಿತ್ತು. ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಕೆಲಸ ನಡೀತಿದೆ. ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು ತಿರುಗಿಬಿದ್ದಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಈಗಲೂ ಪರ ವಿರೋಧ ಚರ್ಚೆ ಜೋರಾಗಿ ನಡೆದಿದೆ. ಇದೆಲ್ಲದ ಮಧ್ಯೆ ಇದೀಗ ಗ್ರೆಟಾ ಥನ್‍ಬರ್ಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಸಿದ್ದಾರೆ. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಷಡ್ಯಂತ್ರ? – ಪ್ರತಿಭಟನೆಯ ಟೂಲ್‌ ಕಿಟ್ ಬಹಿರಂಗ ಮಾಡಿದ‌ ಗ್ರೇಟಾ ಥನ್‌ಬರ್ಗ್

    ಈ ಕುರಿತು ಸಹ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಥನ್‍ಬರ್ಗ್, ಇದಕ್ಕೆಲ್ಲಾ ನಾನು ಹೆದರಲ್ಲ. ನಾನು ಈಗಲೂ ರೈತರ ಪರವೇ ಎಂದು ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸಹ ಟ್ವೀಟ್ ಮಾಡಿ, ರೈತರ ಹೋರಾಟವನ್ನು ಸಿನಿಮಾ ನಟ, ನಟಿಯರು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ. ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ಕೇವಲ ರೈತ ಸಂಘಟನೆಗಳು ಅಥವಾ ರಾಜಕೀಯ ಪಕ್ಷಗಳದ್ದಲ್ಲ. ಈ ಮಣ್ಣಿನ ಎಲ್ಲ ಸಾಹಿತಿಗಳು, ಕಲಾವಿದರು ವಿಶೇಷವಾಗಿ ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರನ್ನು ಬೆಂಬಲಿಸಬೇಕು. ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: #IndiaAgainstPropaganda -ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದ ಸಚಿನ್

    ಸ್ವದೇಶಿ ಸೆಲೆಬ್ರಿಟಿಗಳ ಸರಣಿ ಟ್ವೀಟ್ ಪ್ರಶ್ನಿಸಿದ ನಟಿ ತಾಪ್ಸಿ ಪನ್ನುಗೆ ನಟಿ ಕಂಗನಾ ರಣಾವತ್ ಟ್ವಿಟ್ಟರ್ ವೇದಿಕೆಯಲ್ಲಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬೆನ್ನಲ್ಲೇ, ಕಂಗನಾರ ನಿನ್ನೆಯ 2 ಟ್ವೀಟ್‍ಗಳನ್ನು ಅಳಿಸಿ ಟ್ವಿಟ್ಟರ್ ಶಾಕ್ ನೀಡಿದೆ. ದ್ವೇಷ ಹರಡುವ ಟ್ವೀಟ್‍ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಟ್ವಿಟ್ಟರ್ ಸ್ಪಷ್ಟಪಡಿಸಿದೆ.

    ಈ ಮಧ್ಯೆ ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳನ್ನು ಅಮೆರಿಕ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ನೂತನ ಕೃಷಿ ಕಾಯ್ದೆಗಳಿಂದ ದೇಶದ ಮಾರುಕಟ್ಟೆ ಸಾಮಥ್ರ್ಯವನ್ನು ಹೆಚ್ಚಿಸಲಿವೆ. ಹೀಗಾಗಿ ಈ ಕಾಯ್ದೆಗಳಿಗೆ ನಮ್ಮ ಬೆಂಬಲವಿದೆ ಎಂದು ಬೈಡನ್ ಸರ್ಕಾರ ತಿಳಿಸಿದೆ. ಜೊತೆಗೆ ಶಾಂತಿಯುತ ಪ್ರತಿಭಟನೆಗಳು ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವ ದೇಶಗಳ ಮುಖ್ಯಲಕ್ಷಣ. ಏನೇ ಸಮಸ್ಯೆಗಳಿದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದೆ. ಆದರೆ ಅಮೆರಿಕದ ಸಂಸದರಾದ ಹೇಲಿ ಸ್ಟಿವನ್ಸ್, ಇಲ್ವಾನ್ ಓಮರ್ ಸೇರಿದಂತೆ ಹಲವರು ರೈತರ ಹೋರಾಟವನ್ನು ಹತ್ತಿಕ್ಕುತ್ತಿರುವ ರೀತಿಯನ್ನು ನೋಡಲಾಗ್ತಿಲ್ಲ. ಇದು ಸರಿಯಲ್ಲ ಎಂದು ಖಂಡಿಸಿದ್ದಾರೆ.

    ಈ ಮಧ್ಯೆ ಸೆಲೆಬ್ರಿಟಿಗಳ ಟ್ವೀಟ್ ವಾರ್ ಸಂಸತ್ತಿನ ಮೇಲ್ಮನೆಯಲ್ಲಿ ಪ್ರತಿಧ್ವನಿಸಿದೆ. ಯಾವುದೇ ಸೆಲೆಬ್ರಿಟಿಯ ಟ್ವೀಟ್‍ನಿಂದ ದೇಶದ ಪ್ರಜಾಪ್ರಭುತ್ವ ಬಲಹೀನಗೊಳ್ಳುವುದಿಲ್ಲ ಎಂದು ಆರ್‍ಜೆಡಿಯ ಮನೋಜ್ ಝಾ ಅಭಿಪ್ರಾಯಪಟ್ಟಿದ್ದಾರೆ. ಕೇಳುವ ವ್ಯವಧಾನ ಇಲ್ಲದಿದ್ದರೆ ಅವರು ಸರ್ವಾಧಿಕಾರಿಯೇ? ಇದಾಗಬಾರದು. ಕೂಡಲೇ ರೈತರ ಮೊರೆ ಆಲಿಸಿ ಎಂದು ಭಾವೋದ್ವೇಗದಿಂದ ಮನೋಜ್ ಝಾ ಹೇಳಿದ್ದಾರೆ. ಈ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸದಸ್ಯ ಜ್ಯೋತಿರಾಧಿತ್ಯ ಸಿಂಧಿಯಾ, ಪಕ್ಷದ ವೈಖರಿಯನ್ನು ಸಮರ್ಥಿಸಿಕೊಂಡು, ರೈತರ ಅನುಕೂಲಕ್ಕಾಗಿಯೇ ಈ ಕಾಯ್ದೆ ತರಲಾಗಿದೆ. ಈ ಹಿಂದೆ ಇದೇ ಕಾಯ್ದೆಗಳನ್ನು ಬೆಂಬಲಿಸಿದ್ದವರು ಈಗ ದಾರಿ ಬದಲಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಇದಕ್ಕೆ ಸ್ಪಂದಿಸಿದ ದಿಗ್ವಿಜಯ್ ಸಿಂಗ್, ನೀವು ಯಾವುದೇ ಪಕ್ಷದಲ್ಲಿದ್ದರೂ, ನಮ್ಮ ಆಶೀರ್ವಾದ ನಿಮಗೆ ಇದ್ದೇ ಇರುತ್ತೆ ಎಂದು ಕಾಲೆಳೆದರು. ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು, ಗಣತಂತ್ರದಂದು ದೆಹಲಿಯಲ್ಲಿ ನಡೆದ ಘಟನೆ ಖಂಡನೀಯ. ಆದರೆ ಇದಕ್ಕೆ ರೈತರು ಜವಾಬ್ದಾರರಲ್ಲ. ರೈತರ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಾರದು. ರಸ್ತೆಯಲ್ಲಿ ಗೋಡೆ ನಿರ್ಮಿಸಿರುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸರ್ಕಾರ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಅತ್ತ ಲೋಕಸಭೆಯ ಇಡೀ ದಿನದ ಕಲಾಪ ವಿಪಕ್ಷಗಳ ಗದ್ದಲಕ್ಕೆ ಬಲಿ ಆಗಿದೆ. ಈ ಮಧ್ಯೆ, ಚೌರಾಚೌರಿ ಹೋರಾಟಕ್ಕೆ ಶತಮಾನ ತುಂಬಿದ ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ರೈತರೇ ದೇಶದ ಬೆನ್ನೆಲುಬು ಎಂದಿದ್ದಾರೆ. ಚೌರಾಚೌರಿ ಹೋರಾಟದ ವೇಳೆ ಠಾಣೆಗೆ ಬೆಂಕಿ ಹಚ್ಚಿದ್ದು ಬಹುದೊಡ್ಡ ಸಂದೇಶ. ರೈತರು ಇದರಲ್ಲಿ ಮುಖ್ಯಪಾತ್ರ ವಹಿಸಿದ್ದರು ಎಂದು ಮೋದಿ ಹೇಳಿದ್ದಾರೆ.

  • ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಷಡ್ಯಂತ್ರ? – ಪ್ರತಿಭಟನೆಯ ಟೂಲ್‌ ಕಿಟ್ ಬಹಿರಂಗ ಮಾಡಿದ‌ ಗ್ರೇಟಾ ಥನ್‌ಬರ್ಗ್‌

    ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಷಡ್ಯಂತ್ರ? – ಪ್ರತಿಭಟನೆಯ ಟೂಲ್‌ ಕಿಟ್ ಬಹಿರಂಗ ಮಾಡಿದ‌ ಗ್ರೇಟಾ ಥನ್‌ಬರ್ಗ್‌

    ನವದೆಹಲಿ: ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವಿದೇಶದಿಂದ ಹಣ ಬರುತ್ತಿದೆ, ಭಾರತದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಈ ಆರೋಪದ ನಡುವೆ ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಪ್ರತಿಭಟನೆ ಹೇಗೆ ನಡೆಸಬೇಕೆಂಬ ಮಾಹಿತಿಗಳಿರುವ ಡಾಕ್ಯುಮೆಂಟ್‌ನ್ನು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಟ್ವೀಟ್‌ ಮಾಡಿ ಡಿಲೀಟ್‌ ಮಾಡಿದ್ದಾರೆ.

    ಗ್ರೇಟಾ ಥನ್‌ಬರ್ಗ್‌ ಆರಂಭದಲ್ಲಿ ಭಾರತದ ರೈತರ ಪರ ಇರಬೇಕು ಎಂದು ಹೇಳಿ ದೆಹಲಿ ಗಡಿಯಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಿದ್ದ ಸುದ್ದಿಯನ್ನು ಟ್ವೀಟ್‌ ಮಾಡಿದ್ದರು. ಇದಾದ ಬಳಿಕ ರೈತರ ಹೋರಾಟದ ವಿಚಾರವನ್ನು ವಿಶ್ವಮಟ್ಟದಲ್ಲಿ ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ರಹಸ್ಯ ಗೂಗಲ್‌ ಡಾಕ್ಯುಮೆಂಟ್‌ ಅನ್ನು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಮಾಡಿದ ಕೆಲ ಗಂಟೆಯಲ್ಲಿ ಡಿಲೀಟ್‌ ಮಾಡಿದ್ದಾರೆ.

    ಗೂಗಲ್‌ ಡಾಕ್ಯುಮೆಂಟ್‌ನಲ್ಲಿ ಏನಿತ್ತು?
    ವಿಶ್ವದ ಮಾನವ ಇತಿಹಾಸದಲ್ಲಿ ನಡೆಯುವ ಅತಿದೊಡ್ಡ ಪ್ರತಿಭಟನೆಯಲ್ಲಿ ನೀವು ಭಾಗಿಯಾಗುತ್ತಿರಾ ಎಂಬ ಪ್ರಶ್ನೆಯೊಂದಿಗೆ ಈ ಡಾಕ್ಯುಮೆಂಟ್‌ ಆರಂಭವಾಗುತ್ತದೆ.

    ಭಾರತವನ್ನು ಬಿಜೆಪಿ- ಆರ್‌ಎಸ್‌ಎಸ್ ಫ್ಯಾಸಿಸ್ಟ್‌ ಪಕ್ಷ ಆಳುತ್ತಿದೆ ಎಂದು ಹೇಳಿ ಜನವರಿ 21 ರಿಂದ ಫೆಬ್ರವರಿ 26ವರವರೆಗೆ ಎಲ್ಲಿ, ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ವಿವರಗಳನ್ನು ನೀಡಲಾಗಿತ್ತು.

    ಆರಂಭದಲ್ಲಿ ನೀವು ಎಲ್ಲಿದ್ದೀರೋ ಅಲ್ಲಿ ಪ್ರತಿಭಟನೆ ನಡೆಸಬೇಕು ಬಳಿಕ ಜ.23 ರಿಂದ ಟ್ವಿಟ್ಟರ್‌ನಲ್ಲಿ ಪ್ರತಿಭಟಿಸಬೇಕು. ಟ್ವೀಟ್‌ ಮಾಡುವಾಗ ಭಾರತದ ಪ್ರಧಾನಿ, ಕೇಂದ್ರ ಕೃಷಿ ಸಚಿವ ನರೇಂದ್ರ ಥೋಮರ್‌, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಹಣಕಾಸು ನಿಧಿ, ವಿಶ್ವ ಬ್ಯಾಂಕ್‌ ಟ್ವಿಟ್ಟರ್‌ ಖಾತೆಗೆ ಟ್ಯಾಗ್‌ ಮಾಡಬೇಕು.

    ಜ.26 ರಂದು ಭಾರತದ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಬೇಕು. ಬಳಿಕ ನಿಮ್ಮ ಸರ್ಕಾರದ ಪ್ರತಿನಿಧಿಗಳಿಗೆ ಮೇಲ್‌ ಮಾಡಿ ಭಾರತದ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಬೇಕು. ಭಾರತ ಸರ್ಕಾರ ನಡೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಮಾಡಬೇಕು.

    ಗ್ರೇಟ‌ ಥನ್‌ಬರ್ಗ್‌ ಈ ರಹಸ್ಯ ದಾಖಲೆಗಳ ಮಾಹಿತಿನ್ನು ಟ್ವೀಟ್‌ ಮಾಡಿದ್ದ ಬಳಿಕ ಡಿಲೀಟ್‌ ಮಾಡಿದ್ದು ಯಾಕೆ ಎಂಬ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ #GretaThunbergExposed ಟ್ರೆಂಡಿಗ್‌ ಟಾಪಿಕ್‌ ಆಗಿದೆ. ಇದನ್ನೂ ಓದಿ: #IndiaAgainstPropaganda -ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದ ಸಚಿನ್‌ 

    ವಿದೇಶಿ ಸೆಲೆಬ್ರಿಟಿಗಳು ರೈತರ ಪರ ಮಾತನಾಡುತ್ತಿದ್ದಂತೆ ವಿದೇಶಾಂಗ ಸಚಿವಾಲಯ ಖಾರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಕೆಲ ಸ್ವಾರ್ಥಿಗಳು ಹೋರಾಟದ ಹೆಸರಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದಾರೆ. ಇವರ ಸುಳ್ಳುಗಳಿಂದ ವಿದೇಶಗಳಲ್ಲಿ ಗಾಂಧಿ ಪ್ರತಿಮೆಯನ್ನು ಅಪವಿತ್ರ ಮಾಡುವ ಕೆಲಸ ನಡೆದಿದೆ. ಇದು ಭಾರತಕ್ಕೆ ಅತೀವ ನೋವು ತಂದಿದೆ ಎಂದಿದೆ. ಅಲ್ಲದೇ, ಇದಕ್ಕೆ #IndiaAgainstPropaganda #IndiaTogether ಹೆಸರಿನ ಹ್ಯಾಷ್‍ಟ್ಯಾಗನ್ನು ವಿದೇಶಾಂಗ ಸಚಿವಾಲಯ ಜೋಡಿಸಿದೆ.