Tag: greg chappell

  • ಭಾರತ ಕೈಬಿಟ್ಟರೆ ಟೆಸ್ಟ್ ಕ್ರಿಕೆಟ್ ಸಾವನ್ನಪ್ಪುತ್ತದೆ: ಗ್ರೇಗ್ ಚಾಪೆಲ್

    ಭಾರತ ಕೈಬಿಟ್ಟರೆ ಟೆಸ್ಟ್ ಕ್ರಿಕೆಟ್ ಸಾವನ್ನಪ್ಪುತ್ತದೆ: ಗ್ರೇಗ್ ಚಾಪೆಲ್

    ಸಿಡ್ನಿ: ಭಾರತ ಟೆಸ್ಟ್ ಕ್ರಿಕೆಟ್ ಕೈಬಿಟ್ಟರೆ ಆ ಮಾದರಿ ಸಾವನ್ನಪ್ಪುತ್ತದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೇಗ್ ಚಾಪೆಲ್ ಅಭಿಪ್ರಾಯ ಪಟ್ಟಿದ್ದಾರೆ.

    ವಿಶ್ವ ಕ್ರಿಕೆಟ್‍ನಲ್ಲಿ ಎಲ್‍ಬಿಡಬ್ಲೂ ಕುರಿತು ಪ್ರಸ್ತುತ ಇರುವ ನಿಯಮಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿರುವ ಗ್ರೇಗ್ ಚಾಪೆಲ್, ಟೆಸ್ಟ್ ಕ್ರಿಕೆಟ್ ಪ್ರಾಮುಖ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳು ಹೊರತು ಪಡಿಸಿದರೆ ಬೇರೆ ಯಾವ ದೇಶಗಳು ಟೆಸ್ಟ್ ಕ್ರಿಕೆಟ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಚಾಪೆಲ್ ಹೇಳಿದ್ದಾರೆ.

    ಚಾಟ್ ಶೋ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಚಾಪೆಲ್, ಸದ್ಯ ಬಹುತೇಕ ಕ್ರಿಕೆಟ್ ಆಡುವ ರಾಷ್ಟ್ರಗಳು ಟಿ20 ಮಾದರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳು ಮಾತ್ರ ಟೆಸ್ಟ್ ಮಾದರಿಗೆ ಪ್ರಾಮುಖ್ಯತೆ ನೀಡುತ್ತಿವೆ. ಈ ಸಮಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಅತ್ಯುತ್ತಮ ಎಂದು ಹೇಳಿದ್ದಾರೆ. ಟೆಸ್ಟ್ ಮಾದರಿ ಜೀವಂತವಾಗಿರುತ್ತದೆ ಎಂಬ ಆಸೆ ಕೊಹ್ಲಿ ಮಾತುಗಳಿಂದ ಅರ್ಥವಾಗುತ್ತಿದೆ. ಒಂದೊಮ್ಮೆ ಭಾರತ ಟೆಸ್ಟ್ ಕ್ರಿಕೆಟ್ ಕೈಬಿಟ್ಟರೆ ಆ ಮಾದರಿ ಸಾವನ್ನಪ್ಪುತ್ತದೆ ಎಂದು ಹೇಳಿದ್ದಾರೆ.

    ಕೊರೊನಾ ಕಾರಣದಿಂದ ಎಲ್ಲಾ ಕ್ರಿಕೆಟ್ ಬೋರ್ಡ್‍ಗಳು ನಷ್ಟ ಅನುಭವಿಸಿವೆ. ಕೆಲ ಬೋರ್ಡ್‍ಗಳು ಆಟಗಾರರಿಗೆ ಅರ್ಧ ವೇತನ ನೀಡುತ್ತಿವೆ. ಕೊರೊನಾದಿಂದ ಪರಿಸ್ಥಿತಿ ತೇರ್ಗಡೆ ಹೊಂದಿದ್ದ ಬಳಿಕ ಹೆಚ್ಚು ಟಿ20 ಮಾದರಿಯ ಕ್ರಿಕೆಟ್ ಪಂದ್ಯಗಳನ್ನು ನಿರ್ವಹಿಸಲು ಹಲವು ದೇಶಗಳು ಚಿಂತನೆ ನಡೆಸಿವೆ. ಬಿಸಿಸಿಐ ಕೂಡ ಇದೇ ಚಿಂತನೆಯಲ್ಲಿದೆ. ಟೆಸ್ಟ್ ಮಾದರಿಯ ಕ್ರಿಕೆಟ್ ಪಂದ್ಯಗಳಿಗಿಂತ ಏಕದಿನ, ಟಿ20 ಮಾದರಿಯ ಪಂದ್ಯಗಳಿಂದ ಹೆಚ್ಚು ಆದಾಯ ಲಭ್ಯವಾಗ ಕಾರಣ ಇಂತಹ ಚಿಂತನೆ ನಡೆದಿದೆ ಎಂದು ಚಾಪೆಲ್ ವಿವರಿಸಿದ್ದಾರೆ.

    ಇತ್ತೀಚೆಗಷ್ಟೇ ಆಸ್ಟ್ರೇಲಿಯಾ, ಟೀಂ ಇಂಡಿಯಾ ಟೆಸ್ಟ್ ಟೂರ್ನಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚಾಪೆಲ್, ಈ ಬಾರಿ ಟೀಂ ಇಂಡಿಯಾಗೆ ಸಿರೀಸ್ ಗೆಲುವು ಕಷ್ಟವಾಗಲಿದೆ. ಈ ಹಿಂದೆ ಟೀಂ ಇಂಡಿಯಾ ಟೆಸ್ಟ್ ಸೀರಿಸ್ ಗೆಲುವು ಪಡೆದಿದ್ದರು ಕೂಡ ಮುಂದಿನ ಟೂರ್ನಿಯಲ್ಲಿ ಇದು ಅಷ್ಟು ಸುಲಭವಲ್ಲ. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಅವರನ್ನು ಬಹುಬೇಗ ಪೆವಿಲಿಯನ್‍ಗೆ ಕಳುಹಿಸಿದರೆ ಟೀಂ ಇಂಡಿಯಾ ಗೆಲ್ಲುವ ಅವಕಾಶ ಇದೆ ಎಂದಿದ್ದರು.

  • ಗಂಗೂಲಿಗೆ ಚಾಪೆಲ್ ಸಂಚನ್ನು ಮೊದಲು ತಿಳಿಸಿದ ವ್ಯಕ್ತಿ ನಾನು: ಸೆಹ್ವಾಗ್

    ಗಂಗೂಲಿಗೆ ಚಾಪೆಲ್ ಸಂಚನ್ನು ಮೊದಲು ತಿಳಿಸಿದ ವ್ಯಕ್ತಿ ನಾನು: ಸೆಹ್ವಾಗ್

    ಕೋಲ್ಕತ್ತಾ: ಮಾಜಿ ಕೋಚ್ ಗ್ರೇಗ್ ಚಾಪೆಲ್ ಅವರ ಸಂಚಿನ ವಿಚಾರವನ್ನು ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ತಿಳಿಸಿದ ಮೊದಲ ವ್ಯಕ್ತಿ ನಾನು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

    ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2005ರ ಜಿಂಬಾಬ್ವೆ ಪ್ರವಾಸದಲ್ಲಿ ಪಂದ್ಯದ ವೇಳೆ ಹೊಟ್ಟೆನೋವು ಬಂದಿತ್ತು. ಹೀಗಾಗಿ 5 ಓವರ್ ಕಾಲ ನನಗೆ ಬ್ರೇಕ್ ಬೇಕು ಎಂದು ಅಂಪೈರ್ ಗೆ ತಿಳಿಸಿದ್ದೆ. ಬ್ರೇಕ್ ಪಡೆದು ಪೆವಿಲಿಯನ್ ಗೆ ತೆರಳಿದ್ದಾಗ ನನ್ನ ಮುಂದೆ ಚಾಪೆಲ್ ಕುಳಿತ್ತಿದ್ದರು. ಈ ವೇಳೆ ಚಾಪೆಲ್ ಅನುಮಾನಾಸ್ಪದವಾಗಿ ಏನೋ ಬರೆದು ಬಿಸಿಸಿಐಗೆ ಮೇಲ್ ಮಾಡಿದ್ದನ್ನು ಗಮನಿಸಿದೆ. ಕೂಡಲೇ ಈ ವಿಚಾರವನ್ನು ನಾನು ಗಂಗೂಲಿಗೆ ತಿಳಿಸಿದೆ. ಮಹತ್ವದ ವಿಚಾರದ ಬಗ್ಗೆ ಚಾಪೆಲ್ ಮೇಲ್ ಮಾಡಿದ್ದಾರೆ ಎಂದು ಗಂಗೂಲಿ ಅವರಲ್ಲಿ ಹೇಳಿದ್ದೆ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

    ಗಂಗೂಲಿ ಮತ್ತು ಮಾಜಿ ಕೋಚ್ ಜಾನ್ ರೈಟ್ ನನ್ನನ್ನು ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿಸಿದ್ದನ್ನು ಹೇಳಿಕೊಂಡ ಸೆಹ್ವಾಗ್, ನನ್ನ ಯಾಕೆ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕಳುಹಿಸುತ್ತಿದ್ದೀರಿ ಎಂದು ಗಂಗೂಲಿ ಅವರನ್ನು ಕೇಳಿದ್ದೆ. ಅದಕ್ಕೆ ಅವರು, ನಿನ್ನಲ್ಲಿ ಸಾಮರ್ಥ್ಯವಿದೆ ಎಂದು ಉತ್ತರಿಸಿದರು. ಈ ಉತ್ತರ ಬಂದ ಕೂಡಲೇ ನಾನು, 1998ರಿಂದ ನೀವು ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯುತ್ತಿದ್ದೀರಿ. ನಾನು ಮಧ್ಯಮ ಕ್ರಮಾಂಕದಲ್ಲಿ ಬರುತ್ತೇನೆ. ಯಾಕೆ ನೀವು ಸಚಿನ್ ಜೊತೆಗೆ ಇಳಿಯಬಾರದು ಎಂದು ಮರು ಪ್ರಶ್ನೆ ಹಾಕಿದೆ.

    ಈ ಪ್ರಶ್ನೆಗೆ ಜಾಸ್ತಿ ನನ್ನಲ್ಲಿ ಪ್ರಶ್ನೆ ಕೇಳಬೇಡ. ಆರಂಭಿಕ ಆಟಗಾರನಾಗಿ ಇಳಿಯುವುದಿದ್ದರೆ ಇಳಿ. ಒಂದು ವೇಳೆ ಸಾಧ್ಯವಾಗದೇ ಇದ್ದರೆ ಬೆಂಚ್ ಮೇಲೆ ಕುಳಿತಿಕೋ ಎಂದು ಖಡಕ್ ಆಗಿ ಗಂಗೂಲಿ ಹೇಳಿದರು. ಇದಕ್ಕೆ ನಾನು ಅವರಲ್ಲಿ, ಒಂದು ವೇಳೆ ಮೊದಲ ಆಟಗಾರನಾಗಿ ಇಳಿದು ವೈಫಲ್ಯಗೊಂಡರೆ ಮಧ್ಯಮ ಕ್ರಮಾಂಕದಲ್ಲಿ ಕಳುಹಿಸಬೇಕು ಎಂದು ಕೇಳಿಕೊಂಡಿದ್ದೆ. ನನ್ನ ಭರವಸೆಯನ್ನು ದಾದಾ ಒಪ್ಪಿಕೊಂಡರು. ನಂತರ ನಾನು ಕೋಚ್ ಜಾನ್ ರೈಟ್ ಬಳಿ ತೆರಳಿ ಗಂಗೂಲಿ ಅವರ ಆಸೆಯನ್ನು ನಾನು ಈಡೇರಿಸುತ್ತೇನೆ ಎಂದು ತಿಳಿಸಿದೆ ಎಂಬುದಾಗಿ ಸೆಹ್ವಾಗ್ ವಿವರಿಸಿದರು.

    ಇಂಗ್ಲೆಂಡ್ ವಿರುದ್ಧ ನಾನು ಮೊದಲ ಪಂದ್ಯವನ್ನು ಆಡಿದ್ದು 84 ರನ್ ಗಳಿಸಿ ಔಟಾಗಿದ್ದೆ. ಇದಾದ ನಂತರ ಸಚಿನ್, ಗಂಗೂಲಿ, ದ್ರಾವಿಡ್ ನನ್ನನ್ನು `ಸ್ಟುಪಿಡ್’ ಎಂದು ಕರೆದರು. ಯಾಕೆ ಈ ರೀತಿ ಕರೆದಿದ್ದು ಎಂದು ಕೇಳಿದ್ದಕ್ಕೆ ಅವರು, ಲಾರ್ಡ್ಸ್ ಮೈದಾನದಲ್ಲಿ ಯಾರೂ ಮೊದಲ ಪಂದ್ಯದಲ್ಲಿ ಶತಕ ಹೊಡೆದಿರಲಿಲ್ಲ. ಆ ಸುವರ್ಣ ಅವಕಾಶವನ್ನು ನೀನು ಕಳೆದುಕೊಂಡಿದ್ದಿ ಎಂದು ತಿಳಿಸಿದರು. ಅದಕ್ಕೆ ನಾನು, ಕನಿಷ್ಟ ಪಕ್ಷ 84 ರನ್ ಹೊಡೆದಿದ್ದಕ್ಕೆ ನನಗೆ ಸಂಪೂರ್ಣ ತೃಪ್ತಿ ಸಿಕ್ಕಿದೆ ಎಂದು ಅಂದು ನಾನು ಹೇಳಿದ್ದೆ ಎಂದು ತಿಳಿಸಿದರು.

    2005 ರಿಂದ 2007ರವರೆಗೆ ಚಾಪೆಲ್ ಟೀಂ ಇಂಡಿಯಾದ ಕೋಚ್ ಆಗಿ ನೇಮಕವಾಗಿದ್ದರು. ಜಿಂಬಾಬ್ವೆ ಪ್ರವಾಸದಲ್ಲೇ ಸೌರವ್ ಗಂಗೂಲಿ ಅವರನ್ನು ತಂಡದಿಂದ ಚಾಪೆಲ್ ಹೊರಹಾಕಿದ್ದರು. ಇವರ ಅವಧಿಯಲ್ಲಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ವಿಚಾರದಿಂದಲೇ ಹೆಚ್ಚು ಸುದ್ದಿಯಾಗುತಿತ್ತು. ಗಂಗೂಲಿ, ಸೆಹ್ವಾಗ್ ಅಲ್ಲದೇ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಸಹ ಚಾಪೆಲ್ ಹಲವು ವೇದಿಕೆಗಳಲ್ಲಿ ಚಾಪೆಲ್ ಅವರ ವಿರುದ್ಧ ಅಸಮಾಧಾವನ್ನು ವ್ಯಕ್ತಪಡಿಸಿದ್ದರು.