Tag: GreenZone

  • ಹೊಸ ಹೊಸ ಏರಿಯಾಗಳಿಗೆ ಕೊರೊನಾ ಎಂಟ್ರಿ

    ಹೊಸ ಹೊಸ ಏರಿಯಾಗಳಿಗೆ ಕೊರೊನಾ ಎಂಟ್ರಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆತಂಕಕಾರಿ ಸಂಗತಿ ಅಂದರೆ ಬೆಂಗಳೂರಿನಲ್ಲಿ ಹೊಸ ಹೊಸ ಏರಿಯಾಗಳಿಗೆ ಸೋಂಕು ಹಬ್ಬಲು ಶುರುವಾಗಿದೆ. ಈ ಮೂಲಕ ಗ್ರೀನ್‍ಝೋನ್, ಸೇಫ್ ಏರಿಯಾಗಳೆಂದು ಅನ್ನಿಸಿಕೊಂಡಿರುವ ಏರಿಯಾಗಳು ಕೊರೊನಾ ಅಡ್ಡಾಗಳಾಗಿ ಬದಲಾಗ್ತಾವಾ ಅನ್ನೋ ಆತಂಕ ಎದುರಾಗಿದೆ.

    ಇದುವರೆಗೂ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಒಂದು ಎರಡು ದಾಖಲಾಗುತ್ತಿದ್ದವು. ಆದರೆ ಸೋಮವಾರ ಬರೋಬ್ಬರಿ 8 ಪ್ರಕರಣಗಳು ದಾಖಲಾಗಿವೆ. ಅಂತರಾಜ್ಯ ಪ್ರಯಾಣ ಮಾಡಿದವರಲ್ಲಿ, ಅಂತರರಾಷ್ಟ್ರೀಯ ಪ್ರಯಾಣ ಮಾಡಿದವರಲ್ಲಿ ಮತ್ತು ಬೆಂಗಳೂರಿನ ಸ್ಥಳೀಯರಲ್ಲಿ ಸೋಂಕು ಪತ್ತೆಯಾಗಿದೆ. ಪುಟ್ಟೆನಹಳ್ಳಿಯಲ್ಲಿ ಮೂರು, ಯಲಹಂಕ ನ್ಯೂ ಟೌನ್‍ನಲ್ಲಿ ಒಂದು, ನಾಗರಬಾವಿ ಒಂದು, ಲಕ್ಕಸಂದ್ರ ಮತ್ತು ಡಿಜೆ ಹಳ್ಳಿಯಲ್ಲಿ ತಲಾ ಒಂದೊಂದು ಕೇಸ್ ದಾಖಲಾಗಿವೆ.

    ಪುಟ್ಟೆನಹಳ್ಳಿಯಲ್ಲಿ 54 ವರ್ಷದ ವೃದ್ಧನಿಗೆ ಸೋಂಕು ಪತ್ತೆಯಾಗಿದೆ. ಚೆನ್ನೈನಿಂದ ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಅಪಾರ್ಟ್ ಮೆಂಟ್‍ನಲ್ಲಿ ವ್ಯಕ್ತಿಯ ಜೊತೆ ಇದ್ದ ಹೆಂಡತಿ, ಮಗ ಮತ್ತು ಮಗಳಿಗೆ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಕಾರಿನಲ್ಲಿ ಬಂದ 54 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಜೊತೆಗೆ ಯಲಹಂಕ ನ್ಯೂಟೌನ್ ವ್ಯಕ್ತಿಗೆ ಕೊರೊನಾ ವಕ್ಕರಿಸಿದ್ದಾನೆ. ಇವರೆಲ್ಲರನ್ನ ಕ್ವಾರಂಟೈನ್ ಮಾಡಿದ್ದರು. ಕ್ವಾರಂಟೈನ್ ಮಾಡಿದ ಐದು ದಿನದಲ್ಲಿ ಟೆಸ್ಟ್ ಮಾಡಿದಾಗ ಸೋಂಕು ಪತ್ತೆಯಾಗಿದೆ.

    ಲಕ್ಕಸಂದ್ರದಲ್ಲಿ ಪತ್ನಿಯಿಂದಲೇ ಪತಿಗೆ ಸೋಂಕು ತಗುಲಿದೆ. ರಾಮನಗರ ಮೂಲದ ಮಹಿಳೆ ಕ್ಯಾನ್ಸರ್ ಚಿಕಿತ್ಸೆಗೆ ಅಂತ ಬೆಂಗಳೂರಿನ ತಂಗಿ ಮನೆಯಲ್ಲಿ ಉಳಿದಿದ್ದರು. ಅವರಿಗೆ ಸೋಂಕು ಕಾಣಿಸಿಕೊಂಡು ಅವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಪತಿಗೂ ಸೋಂಕು ಕಾಣಿಸಿಕೊಂಡಿದೆ.

    ಗ್ರೀನ್ ಝೂನ್ ವಾರ್ಡ್ ಆಗಿದ್ದ ಡಿ.ಜೆ.ಹಳ್ಳಿಯಲ್ಲಿ ಮುಸ್ಲಿಂ ಮಹಿಳೆಗೆ ಪಾಸಿಟಿವ್ ಬಂದಿದೆ. ಈ ಮೂಲಕ ಈಗ ಕಂಟೈನ್ಮೆಂಟ್ ಝೂನ್ ಆಗಿದೆ. ಈಕೆಯ ಟ್ರಾವೆಲ್ ಹಿಸ್ಟರಿಯೇ ಆರೋಗ್ಯ ಇಲಾಖೆಗೆ ತಿಳಿದಿಲ್ಲ. ಯಾರೆಲ್ಲಾ ಸಂಪರ್ಕದಲ್ಲಿ ಇದ್ದಾರೋ ಎಂಬ ಆತಂಕ ಶುರುವಾಗಿದೆ. ಪಾದರಾಯನಪುರದಲ್ಲಿ ರ್‍ಯಾಂಡಮ್ ಟೆಸ್ಟ್‌ನಲ್ಲಿ 30 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

  • 60 ದಿನಗಳ ಬಳಿಕ ಮತ್ತೆ ಪಾಸಿಟಿವ್ ಪ್ರಕರಣ- ಕೊಡಗಿಗೆ ಮತ್ತೊಂದು ಗಂಡಾಂತರ ಕಾದಿದೆಯಾ?

    60 ದಿನಗಳ ಬಳಿಕ ಮತ್ತೆ ಪಾಸಿಟಿವ್ ಪ್ರಕರಣ- ಕೊಡಗಿಗೆ ಮತ್ತೊಂದು ಗಂಡಾಂತರ ಕಾದಿದೆಯಾ?

    ಮಡಿಕೇರಿ: ಕಳೆದ 60 ದಿನಗಳಿಂದ ಗ್ರೀನ್‍ಝೋನ್‍ನಲ್ಲಿದ್ದ ಕೊಡಗು ಜಿಲ್ಲೆಗೆ ಮತ್ತೆ ಆತಂಕ ಎದುರಾಗಿದೆ. ಮುಂಬೈನಿಂದ ಬಂದಿದ್ದ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮೇ 16 ರಂದು 45 ವಯಸ್ಸಿನ ಮಹಿಳೆಯೊಬ್ಬರು, ಮುಂಬೈನಿಂದ ಮಂಗಳೂರಿಗೆ ಬಂದಿದ್ದರು. ಅಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದ ಮಹಿಳೆ, ಅಲ್ಲಿಂದ ಕ್ಯಾಬ್ ಮಾಡಿಕೊಂಡು ಕೊಡಗು ಜಿಲ್ಲೆಯ ಚೆಕ್ ಪೋಸ್ಟ್ ಸಂಪಾಜೆಗೆ ಬಂದಿದ್ದರು.

    ಸಂಪಾಜೆಯ ಚೆಕ್‍ಪೋಸ್ಟ್‍ನಲ್ಲೂ ಆರೋಗ್ಯ ತಪಾಸಣೆಗೆ ಒಳಗಾಗಿದ್ದ ಪಿ-1,224 ಮಹಿಳೆಯನ್ನು ಅಲ್ಲಿಂದ ನೇರವಾಗಿ ಅಂಬ್ಯುಲೆನ್ಸ್ ಮೂಲಕ ಕೊಡಗಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಮಹಿಳೆಯ ವರದಿಯಲ್ಲಿ ಪಾಸಿಟಿವ್ ಬಂದಿರುವ ಪರಿಣಾಮ ಕೋವಿಡ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಮೇ 5ರಿಂದ ಇದುವರೆಗೂ ಕೊಡಗು ಜಿಲ್ಲೆಗೆ 409 ಮತ್ತು ಹೊರ ಜಿಲ್ಲೆಗಳಿಂದ 7,268 ಜನರು ಆಗಮಿಸಿದ್ದಾರೆ. ಹೊರ ರಾಜ್ಯಗಳಿಂದ ಬಂದಿರುವವರಿಗೆ ಕ್ವಾರಂಟೈನ್ ಮಾಡಲಾಗಿದೆ.

    ಆದರೆ ಹೊರ ಜಿಲ್ಲೆಗಳಿಂದ ಬಂದಿರುವವರಿಗೆ ಹೋಂ ಕ್ವಾರಂಟೈನ್ ಕೂಡ ಮಾಡಿಲ್ಲ. ಅವರು ಜಿಲ್ಲಿಯಲ್ಲೆಲ್ಲಾ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಒಂದು ಪ್ರಕರಣ ಪಾಸಿಟಿವ್ ಬಂದಿರುವಾಗಲೇ ಹೊರ ಜಿಲ್ಲೆಗಳಿಂದ ಬಂದಿರುವವರು ಆರಾಮಾಗಿ ಓಡಾಡಿಕೊಂಡಿರುವುದು ಜನರಿಗೆ ಮತ್ತಷ್ಟು ಆತಂಕ ಮೂಡುವಂತೆ ಮಾಡಿದೆ. ಹೀಗಾಗಿ ಹೊರ ಜಿಲ್ಲೆಗಳಿಂದಲೂ ಬಂದಿರುವವರಿಗೂ ಜಿಲ್ಲಾಡಳಿತ ಹೋಂಕ್ವಾರಂಟೈನ್ ಮಾಡುವ ಮೂಲಕ ಜಿಲ್ಲೆಯನ್ನು ಸಂರಕ್ಷಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.

    ಇತ್ತ ಪಾಸಿಟಿವ್ ಪ್ರರಕರಣದ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮುಂಬೈನಿಂದ ಕೊಡಗಿಗೆ ಬಂದಿದ್ದ 45 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಆದರೆ ಜಿಲ್ಲೆಯ ಜನರಿಗೆ ಯಾವುದೇ ಪ್ರಾಥಮಿಕ ಸಂಪರ್ಕ ಇಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಇನ್ನೂ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಸಾಕಷ್ಟು ಜನರು ಬರುವ ನಿರೀಕ್ಷೆ ಇದ್ದು, ಇನ್ನೂ ಪಾಸಿಟಿವ್ ವರದಿಗಳು ಬಂದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ 220 ಬೆಡ್ ಗಳ ಸಾಮರ್ಥ್ಯವಿದ್ದು, 11 ವೆಂಟಿಲೇಟರ್ ಗಳಿವೆ. ಅವುಗಳ ಮೂಲಕ 120 ಜನರಿಗೆ ಏಕಕಾಲದಲ್ಲಿ ಆಕ್ಸಿಜನ್ ಪೂರೈಸುವ ಸಾಮರ್ಥ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ‘ಸತ್ತರೆ ಅಲ್ಲೇ ಸಾಯಲಿ’, ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬರೋದು ಬೇಡ: ಶಿವಲಿಂಗೇಗೌಡ

    ‘ಸತ್ತರೆ ಅಲ್ಲೇ ಸಾಯಲಿ’, ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬರೋದು ಬೇಡ: ಶಿವಲಿಂಗೇಗೌಡ

    ಹಾಸನ: ಯಾರು ಎಲ್ಲಿ ಬದುಕುತ್ತಿದ್ದಾರೆ ಅಲ್ಲೇ ಬದುಕಲಿ. ಸತ್ತರೆ ಅಲ್ಲೇ ಸಾಯಲಿ, ಬದುಕಿದರೆ ಅಲ್ಲೇ ಬದುಕಲಿ ಎಂದು ಶಾಸಕ ಶಿವಲಿಂಗೇಗೌಡ ಅವರು ಹೇಳಿದ್ದು, ಹೊರರಾಜ್ಯದಿಂದ ಹಾಸನಕ್ಕೆ ಬರುವವರಿಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ.

    ಕೊರೊನಾ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ ಅವರು, ಹೊರರಾಜ್ಯದಿಂದ ಹಾಸನಕ್ಕೆ ಬರುವವರಿಗೆ ಅವಕಾಶ ನೀಡದಂತೆ ಸಚಿವ ಮಾಧುಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.

    ಇಂದು ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಸಭೆ ನಡೆಯುತ್ತಿತ್ತು. ಈ ವೇಳೆ ಮುಂಬೈನಿಂದ ಬಂದವರಿಂದ ಹಾಸನ ಗ್ರೀನ್‍ಝೋನ್ ಪಟ್ಟ ಕಳೆದುಕೊಂಡು ಜಿಲ್ಲೆಯ ಜನ ಆತಂಕಕ್ಕೊಳಪಟ್ಟ ವಿಚಾರವನ್ನು ಶಿವಲಿಂಗೇಗೌಡ ಅವರು ಪ್ರಸ್ತಾಪಿಸಿದರು.

    ಯಾರಿಗೂ ಹೊರರಾಜ್ಯದಿಂದ ಬರಲು ಅವಕಾಶ ನೀಡದಂತೆ ಮನವಿ ಮಾಡುತ್ತಿದ್ದೇನೆ. ಕಳೆದ 25 ವರ್ಷಗಳಿಂದ ಮುಂಬೈಯಲ್ಲಿ ವಾಸವಿದ್ದವರು ಈಗ ನಮ್ಮ ಜಿಲ್ಲೆ ಸೇಫ್ ಆಗಿದೆ ಎಂದು ಬರುತ್ತಿದ್ದಾರೆ. ಆದರೆ ಯಾರು ಎಲ್ಲಿ ಇದ್ದಾರೋ ಅಲ್ಲೇ ಇರಲಿ. ನಮ್ಮ ಜಿಲ್ಲೆ ಸೇಫ್ ಆಗಿದೆ. ಹೊರ ರಾಜ್ಯದವರ ಸಹವಾಸವೇ ಬೇಡ. ಅವರ ಜೀವನ ಅಲ್ಲಿ ಉತ್ತಮವಾಗಿದೆ. ಆದರೆ ಜೀವ ಭಯದಿಂದ ಮಾತ್ರ ಅವರು ಇಲ್ಲಿ ಬರಲು ಮುಂದಾಗುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬೇಕು ಎಂದರೇ ಇದಕ್ಕೆ ಅವಕಾಶ ನೀಡಬಾರದು. ಮೋದಿ ಅವರು ಯಾವ ದೃಷ್ಟಿಯಿಂದ ಈ ಬಗ್ಗೆ ಅವಕಾಶ ನೀಡಿದ್ದರೆ ಎಂದು ತಿಳಿದಿಲ್ಲ. ಆದರೆ ನಮ್ಮ ಜಿಲ್ಲೆ ಸೇಫ್ ಆಗಬೇಕು ಎಂದರೇ ಜಿಲ್ಲಾಧಿಕಾರಿಗಳು ತಮಗೆ ಲಭಿಸಿರುವ ಅಧಿಕಾರವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.