Tag: Green Zone

  • ಗ್ರೀನ್‍ಝೋನ್ ರಾಯಚೂರು ಜಿಲ್ಲೆಯಾದ್ಯಂತ ರಾತ್ರೋರಾತ್ರಿ ನಿಷೇಧಾಜ್ಞೆ ಜಾರಿ

    ಗ್ರೀನ್‍ಝೋನ್ ರಾಯಚೂರು ಜಿಲ್ಲೆಯಾದ್ಯಂತ ರಾತ್ರೋರಾತ್ರಿ ನಿಷೇಧಾಜ್ಞೆ ಜಾರಿ

    ರಾಯಚೂರು: ಗ್ರೀನ್ ಝೋನ್ ನಲ್ಲಿದ್ದ ರಾಯಚೂರು ಜಿಲ್ಲೆಯಾದ್ಯಂತ ಭಾನುವಾರ ರಾತ್ರೋರಾತ್ರಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ಮೇ 31ರವರೆಗೆ ನಿಷೇಧಾಜ್ಞೆ ನಿಷೇಧಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಸಂಜೆ 7 ರಿಂದ ಬೆಳಗ್ಗೆ 7ರವರೆಗೆ ಜನರು ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ. ಂಮಹಾರಾಷ್ಟ್ರದ ಮುಂಬೈ ನಂಟಿನಿಂದ ರಾಯಚೂರಿನಲ್ಲಿ ಆತಂಕ ಸೃಷ್ಟಿಯಾಗಿದೆ. ಮುಂಬೈನಿಂದ ಬಂದ 6 ಮಂದಿಯಲ್ಲಿ ಕೊರೊನಾ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳಿಂದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

    ಮುಂಬೈನಿಂದ ಬಂದ ಕೂಲಿ ಕಾರ್ಮಿಕರಲ್ಲಿ ಪಾಸಿಟಿವ್ ಶಂಕೆ ಇದ್ದು, ದೇವದುರ್ಗದಲ್ಲಿ ಇಬ್ಬರು, ರಾಯಚೂರು ನಗರದಲ್ಲಿ ನಾಲ್ಕು ಜನರಲ್ಲಿ ಸೋಂಕು ಇರುವ ಸಂಬಂಧ ಶಂಕೆ ವ್ಯಕ್ತವಾಗಿದೆ.

    ಅಧಿಕಾರಿಗಳು ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡುತ್ತಿದ್ದಾರೆ. ಈ ಮೂಲಕ ಗ್ರೀನ್ ಝೋನ್ ಜಿಲ್ಲೆಯಲ್ಲಿ ಹಳದಿ ಝೋನ್ ವಾತಾವರಣ ನಿರ್ಮಾಣವಾಗಿದೆ. ಇದೂವರೆಗೆ ಜಿಲ್ಲೆಯಲ್ಲಿ 96 ಜನ ಆಸ್ಪತ್ರೆ ಐಸೋಲೆಷನ್ ನಲ್ಲಿದ್ದಾರೆ. 8,938 ಮಂದಿ ಸರ್ಕಾರಿ ಕ್ವಾರಂಟೈನ್ ನಲ್ಲಿದ್ದಾರೆ. ಇಲ್ಲಿಯವರೆಗೂ ಪ್ರಯೋಗಾಲಯಕ್ಕೆ ಕಳುಹಿಸಿದ್ದ 2,853 ಜನರ ವರದಿ ನೆಗೆಟಿವ್ ಬಂದಿದ್ದು, ಇನ್ನೂ 708 ಜನರ ವರದಿ ಬರಬೇಕಾಗಿದೆ.

  • ಗ್ರೀನ್ ಝೋನ್‍ನಲ್ಲಿಯೇ ಮುಂದುವರಿದ ಕೊಪ್ಪಳ – ನಿಟ್ಟುಸಿರು ಬಿಟ್ಟ ಜಿಲ್ಲೆಯ ಜನ

    ಗ್ರೀನ್ ಝೋನ್‍ನಲ್ಲಿಯೇ ಮುಂದುವರಿದ ಕೊಪ್ಪಳ – ನಿಟ್ಟುಸಿರು ಬಿಟ್ಟ ಜಿಲ್ಲೆಯ ಜನ

    ಕೊಪ್ಪಳ: ಜಿಲ್ಲೆಗೆ ಭೇಟಿ ಕೊಟ್ಟು ಹೋಗಿದ್ದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕೊರೊನಾ ಸೊಂಕಿತ ವ್ಯಕ್ತಿಯ ಪ್ರಕರಣದಿಂದ ಆತಂಕ್ಕಕ್ಕೊಳಗಾದ ಕೊಪ್ಪಳ ಜನತೆ ಈಗ ಬಿಗ್ ರಿಲೀಫ್ ಸಿಕ್ಕಂತಾಗಿದೆ.

    ಕಂಪ್ಲಿ ನಿವಾಸಿಯಲ್ಲಿ ಕೊರೊನಾ ಸೋಂಕು ಧೃಡ ಪಡುತ್ತಿದಂತೆ ಆತನ ಪ್ರಥಮ ಸಂಪರ್ಕ ಹೊಂದಿದ್ದ ಕೊಪ್ಪಳ ಜಿಲ್ಲೆಯ 34 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಎಲ್ಲರ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

    ಮೇ 5ರಂದು ಬೆಂಗಳೂರಿನಿಂದ ಗಂಗಾವತಿಗೆ ಆಗಮಿಸಿದ್ದ ಕಂಪ್ಲಿ ನಿವಾಸಿ ನಂತರ ಕಂಪ್ಲಿಗೆ ವಾಪಸ್ ತೆರಳಿದ್ದರು. ಕಂಪ್ಲಿಗೆ ಸೇರುತ್ತಿದಂತೆ ಅವರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢ ಪಟ್ಟಿದೆ ಎಂದು ವರದಿಯಾಗಿದೆ. ಹೀಗಾಗಿ ಆತನೊಂದಿಗೆ ಬಸ್ಸಿನಲ್ಲಿ ಆಗಮಿಸಿದ ಪ್ರಯಾಣಿಕರು, ಬಸ್ ಚಾಲಕ ಸೇರಿದಂತೆ ಪ್ರಥಮ ಚಿಕಿತ್ಸೇ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿ, ಒಟ್ಟು 34 ಜನರನ್ನ ಕ್ವಾರಂಟೈನ್ ಮಾಡಲಾಗಿತ್ತು.

    ಜಿಲ್ಲೆಯ ಜನತೆಯ ಚಿತ್ತ ಅವರ ವರದಿ ಮೇಲೆ ಇತ್ತು ಈಗ ಅವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆ ಮತ್ತೊಮ್ಮೆ ಕೊರೊನಾದಿಂದ ಸೇಫ್ ಆದಂತಾಗಿದೆ. ಕೊರೊನಾ ಭೀತಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಕಾರ್ಯಕ್ಕೆ ಜಿಲ್ಲೆಯ ಜನತೆ ಶಹಬ್ಬಾಶ್ ಹೇಳುತ್ತಿದ್ದಾರೆ. ಇನ್ನೂ ಜಿಲ್ಲಾಡಳಿತ ಇಲ್ಲಿವರೆಗೆ 1,268 ಜನರ ಸ್ಯಾಂಪಲ್ ಕಳಿಸಿದ್ದು, ಎಲ್ಲರ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆ ಗ್ರೀನ್ ಝೋನ್ ಪಟ್ಟಿಯಲ್ಲಿ ಮುಂದುವರೆದಿದೆ.

  • ಇದ್ದಕ್ಕಿದ್ದಂತೆ ಯಾದಗಿರಿಯಲ್ಲಿ ಲಾಕ್‍ಡೌನ್ ಮತ್ತಷ್ಟು ಬಿಗಿ

    ಇದ್ದಕ್ಕಿದ್ದಂತೆ ಯಾದಗಿರಿಯಲ್ಲಿ ಲಾಕ್‍ಡೌನ್ ಮತ್ತಷ್ಟು ಬಿಗಿ

    ಯಾದಗಿರಿ: ಗ್ರೀನ್ ಝೋನ್ ನಲ್ಲಿರುವ ಯಾದಗಿರಿಯಲ್ಲಿ ಸಡಿಲಿಕೆಯಾಗಿದ್ದ ಲಾಕ್ ಡೌನ್ ಅನ್ನು ದಿಢೀರ್ ಆಗಿ ಮತ್ತಷ್ಟು ಬಿಗಿ ಮಾಡಲಾಗಿದೆ.

    ಜಿಲ್ಲೆಯಲ್ಲಿ ಕೊರೊನಾ ಸೊಂಕು ಹರಡುವ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೊದಲನೆಯ ಹಂತದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿವರೆಗೂ ಮತ್ತೆ ಬೀಗಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

    ಕೇವಲ ತರಕಾರಿ ಮತ್ತು ಆಸ್ಪತ್ರೆ, ಮೆಡಿಕಲ್ ಶಾಪ್ ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ. ಇದರ ಜೊತೆಗೆ ವೈನ್ ಶಾಪ್ ಸಹ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿ ಎಂ ಕೂರ್ಮರಾವ್ ಸೂಚನೆ ಮೇರೆಗೆ ಸಹಾಯಕ ಆಯುಕ್ತ ಶಂಕರಗೌಡ ಈ ಆದೇಶವನ್ನು ಹೊರಡಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಸಹಾಯಕ ಆಯುಕ್ತ ಶಂಕರಗೌಡ ಕೂಡ ಸ್ಪಷ್ಟಪಡಿಸಿದ್ದಾರೆ.

    ಒಟ್ಟಿನಲ್ಲಿ ಇಡೀ ಯಾದಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾದಗಿರಿ ಜಿಲ್ಲಾಡಳಿತದ ಈ ದಿಢೀರ್ ನಡೆ ಗ್ರೀನ್ ಝೋನ್ ಜಿಲ್ಲೆಗೂ ಕೊರೊನಾ ಕಂಟಕ ಎದುರಾಯ್ತಾ ಅನ್ನೊ ಪ್ರಶ್ನೆ ಮೂಡಿದೆ.

  • ಕೋಲಾರಕ್ಕೆ ಕೊರೊನಾ ಭಯ!- ಕೆಜಿಎಫ್‍ಗೆ ಹೊಂದಿಕೊಂಡಿರುವ ವಿ.ಕೋಟಾದಲ್ಲಿ 5 ಪ್ರಕರಣ

    ಕೋಲಾರಕ್ಕೆ ಕೊರೊನಾ ಭಯ!- ಕೆಜಿಎಫ್‍ಗೆ ಹೊಂದಿಕೊಂಡಿರುವ ವಿ.ಕೋಟಾದಲ್ಲಿ 5 ಪ್ರಕರಣ

    ಕೋಲಾರ: ಲಾಕ್‍ಡೌನ್ ಸಡಿಲಿಕೆ ಹಾಗೂ ಗಡಿ ರಾಜ್ಯಗಳಲ್ಲಿ ಪತ್ತೆಯಾಗಿರುವ ಕೊರೊನಾ ಪ್ರರಕಣಗಳ ಸಂಖ್ಯೆಯಿಂದ ಜಿಲ್ಲೆಯ ಜನರದಲ್ಲಿ ಆತಂಕ ಮೂಡಿದ್ದು, ಗ್ರೀನ್ ಝೋನ್‍ನಲ್ಲಿರುವ ಜಿಲ್ಲೆ ತನ್ನ ಬಣ್ಣ ಬದಲಿಸುವ ಭಯ ಶುರುವಾಗಿದೆ.

    ರಾಜ್ಯದಲ್ಲಿ ಗ್ರೀನ್ ಝೋನ್‍ನಲ್ಲಿರುವ ಜಿಲ್ಲೆಗಳ ಪೈಕಿ ಕೋಲಾರವೂ ಒಂದು. ಆದರೆ ಕೋಲಾರ ಗ್ರೀನ್ ಝೋನ್‍ನಲ್ಲಿದ್ದರು ಡೇಂಜರ್ ಝೋನ್‍ನಲ್ಲಿರುವ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿದೆ. ಜಿಲ್ಲೆಯ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಸುತ್ತಲೂ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆಂಧ್ರದ ಗಡಿ ಭಾಗವಾದ ಚಿತ್ತೂರು ಜಿಲ್ಲೆಯ ವಿ.ಕೋಟೆ ಬಳಿ ಐದು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ನಮ್ಮ ರಾಜ್ಯದ ಗಡಿಗೆ ಕೇವಲ ಒಂದು ಕಿ.ಮೀ. ದೂರದ ಪ್ರದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

    ಸೋಂಕಿತ ವ್ಯಕ್ತಿ ಕೋಲಾರ ಜಿಲ್ಲೆಯ ಗಡಿಯ ಮೂರು ಹೋಬಳಿ ಕೇಂದ್ರದಲ್ಲಿ ಓಡಾಡಿರುವ ಟ್ರಾವಲ್ ಹಿಸ್ಟರಿ ಭಯ ಸೃಷ್ಠಿಸಿದೆ. ತರಕಾರಿ ಮಾರಾಟ ಮಾಡುವ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈತ ಚೆನ್ನೈನ ಮಾರುಕಟ್ಟೆಗೆ ಹೋದಾಗ ಸೋಂಕು ತಗುಲಿರಬಹುದೆಂದು ಹೇಳಲಾಗುತ್ತಿದೆ. ಕೋಲಾರ ಜಿಲ್ಲೆಯ ಮೂರು ಹೋಬಳಿಗಳ ರೈತರಿಂದ ತರಕಾರಿ ಖರೀದಿ ಮಾಡಿ, ನಂತರ ಅವರಿಗೆ ಹಣ ಕೊಡಲು ಸೋಂಕಿತ ವ್ಯಕ್ತಿ ಬಂದು ಹೋಗಿರುವುದಾಗಿ ತಿಳಿದು ಬಂದಿದೆ. ಇದರ ಜೊತೆಗೆ ಆಂಧ್ರದ ವಿ.ಕೋಟ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಗುರುತಿಸಲು ಸಿದ್ಧತೆ ಮಾಡುಕೊಂಡಿದ್ದು, ಆ ವ್ಯಾಪ್ತಿಗೆ ನಮ್ಮ ಜಿಲ್ಲೆಯ ಕೆಲವು ಗ್ರಾಮಗಳು ಒಳಪಡುವ ಸಾಧ್ಯತೆ ಹೆಚ್ಚಾಗಿದೆ.

    ಮಾಲೂರು ಮೂಲದ ವ್ಯಕ್ತಿ ಗುಜರಾತ್‍ನ ಗೋದ್ರಾದಿಂದ ಕೋಲಾರಕ್ಕೆ ಬರುತ್ತಿದ್ದ 15 ಜನರ ಪೈಕಿ ಒಬ್ಬರಲ್ಲಿ ಕೊರೊನಾ ಸೋಂಕು ಖಚಿತವಾಗಿದೆ. ಸೋಂಕಿತನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಆತನ ಪ್ರಥಮ ಸಂಪರ್ಕದಲ್ಲಿದ್ದವರನ್ನು ಬೆಂಗಳೂರಿನಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯ ಕೃಷ್ಣಗಿರಿ ಜಿಲ್ಲೆಗೆ ಹೊಂದಿಕೊಂಡಂತೆ ಸೂಳಿಗೆರೆ, ಬೇರಿಕೆ ಪ್ರದೇಶಗಳಲ್ಲೂ ಸೋಂಕಿತ ವ್ಯಕ್ತಿಗಳಿದ್ದು, ಅವರು ಕೂಡಾ ನಮ್ಮ ಜಿಲ್ಲೆಯ ಗಡಿಗೆ ಸಮೀಪವಿರುವ ಕಾರಣ ಈ ಭಾಗದಿಂದಲೂ ಸೋಂಕು ಜಿಲ್ಲೆಗೆ ಹರಡುವ ಆತಂಕ ಹೆಚ್ಚಾಗಿದೆ.

    ಇದು ಅಂತರರಾಜ್ಯ ಗಡಿಗಳ ವಿಚಾರವಾದರೆ, ರೆಡ್‍ಝೋನ್ ನಲ್ಲಿರುವ ಅಂತರ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳನ್ನು ಒಂದು ವಲಯವನ್ನಾಗಿ ಮಾಡಿ ಜನರ ಓಡಾಟಕ್ಕೆ ವಿನಾಯಿತಿ ನೀಡಿರುವುದು ಮತ್ತೊಂದು ರೀತಿಯ ಆತಂಕಕ್ಕೆ ಕಾರಣವಾಗಿದೆ. ಸೋಂಕಿತ ವ್ಯಕ್ತಿಗಳು ಗ್ರೀನ್ ಝೋನ್ ಪ್ರದೇಶದಲ್ಲಿ ಸೋಂಕು ಹರಡುವ ಭೀತಿ ಎಲ್ಲರಲ್ಲೂ ಹೆಚ್ಚಾಗಿದೆ. ಹಾಗಾಗಿ ಗಡಿಯಲ್ಲಿ ಮತ್ತಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗಡಿಯಲ್ಲಿರುವ ಗ್ರಾಮ ಪಂಚಾಯತಿಗಳಲ್ಲಿ ಡಂಗುರ ಹಾಕಿಸಿ ಜಾಗೃತಿ ಮೂಡಿಸುವುದು. ಗಡಿ ಸಂಪರ್ಕ ಸೀಲ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಕೋಲಾರ ಉಪ ವಿಭಾಗಾಧಿಕಾರಿ ಸೋಮಶೇಖರ್ ವರದಿ ಆಧರಿಸಿ ಮುಂದಿನ ಕ್ರಮವಹಿಸುವುದಾಗಿ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದಾರೆ.

  • 14 ದಿನದ ಷರತ್ತಿಗೆ ಒಪ್ಪುವುದಾದ್ರೆ ಉಡುಪಿಗೆ ಸ್ವಾಗತ: ಜಿಲ್ಲಾಧಿಕಾರಿ ಜಿ. ಜಗದೀಶ್

    14 ದಿನದ ಷರತ್ತಿಗೆ ಒಪ್ಪುವುದಾದ್ರೆ ಉಡುಪಿಗೆ ಸ್ವಾಗತ: ಜಿಲ್ಲಾಧಿಕಾರಿ ಜಿ. ಜಗದೀಶ್

    ಉಡುಪಿ: ಹೊರ ದೇಶ ಮತ್ತು ಹೊರ ರಾಜ್ಯದಿಂದ ಬರುವವರು ಸರ್ಕಾರಿ ಕ್ವಾರಂಟೈನ್ ಒಪ್ಪುವುದಾದರೆ ಉಡುಪಿ ಜಿಲ್ಲೆಗೆ ನಿಮಗೆ ಸ್ವಾಗತ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.

    ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊರ ದೇಶ ಮತ್ತು ಹೊರ ರಾಜ್ಯದಿಂದ ಉಡುಪಿ ಜಿಲ್ಲೆಗೆ ಬರುವವರು ಸೇವಾ ಸಿಂಧು ಆ್ಯಪ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್‍ಗೆ ಈ ಪಾಸ್ ಬರುತ್ತದೆ. ತಪಾಸಣೆ ಮಾಡಿ ಉಡುಪಿ ಜಿಲ್ಲಾ ಪ್ರವೇಶ ಮಾಡಬಹುದು ಎಂದು ಡಿಸಿ ಜಗದೀಶ್ ಮಾಹಿತಿ ನೀಡಿದರು.

    ಉಡುಪಿ ಜಿಲ್ಲೆಯಲ್ಲಿ ಕಳೆದ ನಲವತ್ತು ದಿನಗಳಿಂದ ಯಾವುದೇ ಪಾಸಿಟಿವ್ ಕೇಸುಗಳು ಇಲ್ಲ. ಹಾಗಾಗಿ ಕೇಂದ್ರ ಸರ್ಕಾರ ಉಡುಪಿ ಜಿಲ್ಲೆಯನ್ನು ಗ್ರೀನ್ ಝೋನ್ ಎಂದು ಘೋಷಣೆ ಮಾಡಿದೆ. ಜಿಲ್ಲೆಯನ್ನು ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಮುಂದುವರಿಸಲು ಹೊರ ರಾಜ್ಯ ಮತ್ತು ಹೊರ ದೇಶದಿಂದ ಬರುವವರು ಸಹಕರಿಸಿ ಎಂದು ವಿನಂತಿ ಮಾಡಿದ್ದಾರೆ. ಈ ಪಾಸ್ ತೆಗೆದುಕೊಂಡು ಬಂದವರನ್ನು ಹದಿನಾಲ್ಕು ದಿನ ಕಡ್ಡಾಯವಾಗಿ ಸರ್ಕಾರ ಕ್ವಾರಂಟೈನ್ ಮಾಡುತ್ತೇವೆ. ಈಗಾಗಲೇ ಹಾಸ್ಟೆಲ್ ಗಳನ್ನು ನಿಗದಿ ಮಾಡಿದ್ದೇವೆ. ಉಪಹಾರ ಮತ್ತು ಊಟವನ್ನು ಉಚಿತವಾಗಿ ಕೊಡುತ್ತೇವೆ. ಕ್ವಾರಂಟೈನ್ ಅವಧಿ ಮುಗಿಸಿ ಅವರು ಸೇಫ್ ಆಗಿ ಮನೆಗೆ ಹೋಗಬಹುದು ಎಂದು ಡಿಸಿ ಹೇಳಿದರು.

    ಸರ್ಕಾರಿ ವ್ಯವಸ್ಥೆಯಲ್ಲಿ ಉಳಿದುಕೊಳ್ಳುವ ಇಚ್ಛೆ ಇಲ್ಲದಿದ್ದರೆ ಹೋಟೆಲ್ ಅಥವಾ ಲಾಡ್ಜಿಂಗ್ ಅರೇಂಜ್ಮೆಂಟ್ ಮಾಡುತ್ತೇವೆ. ಅಲ್ಲಿನ ಸಂಪೂರ್ಣ ವೆಚ್ಚವನ್ನು ಅವರೇ ಭರಿಸತಕ್ಕದ್ದು ಎಂದು ಅವರು ತಿಳಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರ ತಂಡ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಹೇಳಿದರು.

  • ಮೇ 17ರವರೆಗೆ ಚಿಕ್ಕಮಗಳೂರು ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ

    ಮೇ 17ರವರೆಗೆ ಚಿಕ್ಕಮಗಳೂರು ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ

    ಚಿಕ್ಕಮಗಳೂರು: ಕೆಲವೊಂದು ನಿಯಮಗಳನ್ನು ಹೊರತುಪಡಿಸಿ ಗ್ರೀನ್ ಜೋನ್‍ನಲ್ಲಿರೋ ಜಿಲ್ಲೆಗೆ ಮೂರನೇ ಹಂತದ ಲಾಕ್‍ಡೌನ್ ಅನ್ವಯವಾಗದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾದ್ಯಂತ ಮೇ 4ರಿಂದ ಮೇ 17ರವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಚಿಕ್ಕಮಗಳೂರು ಡಿಸಿ ಸುತ್ತೋಲೆ ಹೊರಡಿಸಿದ್ದಾರೆ.

    ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಐದು ಜನ ಗುಂಪಾಗಿ ಸೇರದಂತೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಸೂಚನೆ ನೀಡಿದ್ದಾರೆ. ಕೊರೊನಾ ಆರಂಭವಾದಾಗಿನಿಂದ ಕಾಫಿನಾಡಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸಿಲ್ಲ. ಹಾಗಾಗಿ ಚಿಕ್ಕಮಗಳೂರು ಗ್ರೀನ್ ಜೋನ್‍ನಲ್ಲಿದೆ. ಈಗ ಸರ್ಕಾರ ಗ್ರೀನ್ ಜೋನ್ ಜಿಲ್ಲೆಗಳಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಲಾಕ್‍ಡೌನ್‍ನನ್ನು ಸಂಪೂರ್ಣ ಸಡಿಲಿಕೆ ಮಾಡಿದೆ.

    ಕೇಂದ್ರ ಸರ್ಕಾರ ಕೊರೊನಾ ಆತಂಕದಿಂದ ದೇಶದಲ್ಲಿ ಇನ್ನೆರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಿಸೋದ್ರಿಂದ ಗ್ರೀನ್ ಜೋನ್‍ನಲ್ಲಿರೋ ಚಿಕ್ಕಮಗಳೂರಲ್ಲಿ ಎರಡು ವಾರಗಳ ಕಾಲವೂ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಮದುವೆ ಹಾಗೂ ಅಂತ್ಯಸಂಸ್ಕಾರದಂತಹಾ ಕಾರ್ಯಕ್ರಮಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಉಳಿದಂತೆ ಜನ ಗುಂಪಾಗಿ ಸೇರುವಂತಿಲ್ಲ ಎಂದು ಡಿಸಿ ಆದೇಶ ಮಾಡಿದ್ದಾರೆ.

    ನಾಳೆಯಿಂದ ಜಿಲ್ಲಾದ್ಯಂತ ಸರ್ಕಾರಿ ಬಸ್‍ಗಳೂ ಓಡಾಡಲಿದ್ದು, ಜಿಲ್ಲಾದ್ಯಂತ 100-120 ಬಸ್‍ಗಳು ತಾಲೂಕು ಕೇಂದ್ರಗಳಿಗೆ ಸಂಚರಿಸಲಿವೆ. ಸರ್ಕಾರದ ಕೆಲವೊಂದು ಷರತ್ತುಗಳನ್ನ ಹೊರತುಪಡಿಸಿದರೆ ಚಿಕ್ಕಮಗಳೂರಿನಲ್ಲಿ ಎಲ್ಲ ಚಟುವಟಿಕೆಗಳು ಎಂದಿನಂತೆ ಆರಂಭವಾಗಲಿದೆ ಎಂದು ತಿಳಿಸಿಲಾಗಿದೆ.

  • ಸೋಮವಾರದಿಂದ 12 ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭ

    ಸೋಮವಾರದಿಂದ 12 ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಹೋಗಲು ರಾಜ್ಯ ಸರ್ಕಾರ ಶನಿವಾರದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬೆನ್ನಲ್ಲೇ ಹಸಿರು ವಲಯದಲ್ಲಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದೆ.

    ಉಡುಪಿಯನ್ನು ಹೊರತುಪಡಿಸಿ ರಾಜ್ಯದ 12 ಹಸಿರು ವಲಯ ಜಿಲ್ಲೆಗಳಲ್ಲಿ ಸೋಮವಾರದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಆದರೆ ಜಿಲ್ಲೆಯ ಒಳಗೆ ಮಾತ್ರ ಬಸ್‍ಗಳು ಸಂಚರಿಸಲಿವೆ. ಅಂತರ್ ಜಿಲ್ಲೆಯ ಬಸ್ ಸಂಚಾರ ಇರುವುದಿಲ್ಲ.

    ಹಾವೇರಿ, ಯಾದಗಿರಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಪ್ಪಳ, ಚಿತ್ರದುರ್ಗ, ಚಾಮರಾಜನಗರ, ಕೋಲಾರ, ರಾಮನಗರ, ಹಾವೇರಿ, ಹಾಸನ, ದಾವಣಗೆರೆ ಜಿಲ್ಲೆಗಳಲ್ಲಿ ಮಾತ್ರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಾಳೆಯಿಂದ ಆರಂಭವಾಗಲಿದೆ. ಆದರೆ ಖಾಸಗಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಯಾವುದೇ ಅನುಮತಿ ನೀಡಿಲ್ಲ.

    ಬಸ್‍ಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸಲೇ ಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಪ್ರಯಾಣಿಕರಿಗೆ ಥರ್ಮಲ್ ಪರೀಕ್ಷೆ ಕಡ್ಡಾಯವಾಗಬೇಕು. ಒಂದು ಬಸ್‍ನಲ್ಲಿ ಸೀಟ್ ಸಂಖ್ಯೆ ಅರ್ಧದಷ್ಟು ಮಾತ್ರ ಜನರು ಪ್ರಯಾಣಿಸಬೇಕು.

    ಚಿಕ್ಕಮಗಳೂರಿನ ಜಿಲ್ಲೆಯೊಳಗೆ ನಾಳೆಯಿಂದ ಶೇಕಡ 25ರಷ್ಟು ಬಸ್ ಓಡಾಡಲು ಅನುಮತಿ ನೀಡಲಾಗಿದೆ. ಒಂದು ಬಸ್‍ನಲ್ಲಿ 27 ಜನ ಮಾತ್ರ ಸಂಚಾರ ಮಾಡಬೇಕು. ಅರ್ಧಗಂಟೆ ಮುಂಚೆ ಬಸ್ ನಿಲ್ದಾಣಕ್ಕೆ ಬರಬೇಕು. ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಸ್ಯಾನಿಟೈಸರ್ ನಿಂದ ಕೈ ತೊಳೆದು ಬಸ್ ಹತ್ತಬೇಕು. ಬಸ್‍ನಲ್ಲಿ ಏನನ್ನೂ ತಿನ್ನುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಹಸಿರು ವಲಯದಲ್ಲಿದ್ದ ದಾವಣಗೆರೆ ಕೆಂಪು ವಲಯದತ್ತ ಹೆಜ್ಜೆ..!

    ಹಸಿರು ವಲಯದಲ್ಲಿದ್ದ ದಾವಣಗೆರೆ ಕೆಂಪು ವಲಯದತ್ತ ಹೆಜ್ಜೆ..!

    ದಾವಣಗೆರೆ: ಕಳೆದ ಮೂವತ್ತು ದಿನಗಳಿಂದ ಒಂದೇ ಒಂದು ಪಾಸಿಟಿವ್ ಪ್ರಕರಣಗಳು ಇಲ್ಲದ ದಾವಣಗೆರೆಯನ್ನು ಹಸಿರು ವಲಯಕ್ಕೆ ಸೇರಿಸಲಾಗಿತ್ತು. ಆದರೆ ಈಗ ಹಸಿರು ಝೋನ್ ನಲ್ಲಿದ್ದ ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದಾವಣಗೆರೆ ಡೇಂಜರ್ ಝೋನ್‍ಗೆ ಒಳಪಟ್ಟಿದೆ. ಕಳೆದ 30 ದಿನಗಳಿಂದಲೂ ಯಾವುದೇ ಸೋಂಕಿತರು ಪತ್ತೆಯಾಗದ ಕಾರಣ ದಾವಣಗೆರೆ ಹಸಿರುವಲಯಕ್ಕೆ ಸೇರ್ಪಟ್ಟಿತ್ತು. ಆದರೆ ನಿನ್ನೆ ಹಾಗೂ ಇಂದು 2 ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಳದಿ ವಲಯಕ್ಕೆ ಸೇರ್ಪಡೆಯಾಗಿದೆ.

    ನಿನ್ನೆ ನಗರದ ಭಾಷಾನಗರದಲ್ಲಿ ಓರ್ವ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿತ್ತು. ಭಾಷಾನಗರ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು ಈಗಾಗಲೇ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಅಲ್ಲದೇ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಜನರನ್ನು ಪ್ರತೇಯಕ ಹೋಟೆಲ್ ಒಂದರಲ್ಲಿ ಐಸೋಲೇಷನ್‍ನಲ್ಲಿ ಮಾಡಲಾಗಿದೆ. 2ನೇ ಹಂತದ ಸಂಪರ್ಕದಲ್ಲಿದ್ದ 45 ಜನರನ್ನು ಪತ್ತೆ ಮಾಡಲಾಗಿದ್ದು, ಈಗಾಗಲೇ ಒಟ್ಟು 56 ಜನರ ಗಂಟಲು ದ್ರವ ಮಾದರಿಯನ್ನು ಇಂದು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇವರು ಕೆಲಸ ಮಾಡುತ್ತಿದ್ದ ನಗರ ಆರೋಗ್ಯ ಕೇಂದ್ರವನ್ನು ಬಂದ್ ಮಾಡಲಾಗಿದೆ.

    ಇಂದು ಬೆಳಗ್ಗೆ ದಾವಣಗೆರೆಯ ಜಾಲಿನಗರದ ನಿವಾಸಿಯೊಬ್ಬರಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 68 ವರ್ಷದ ವ್ಯಕ್ತಿ ಅನಾರೋಗ್ಯದಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಏಪ್ರೀಲ್ 27 ರಂದು ದಾಖಲಾಗಿದ್ದರು. ಕೋವಿಡ್ ವಾರ್ಡ್‍ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ ಗೆ ರವಾನೆ ಮಾಡಲಾಗಿತ್ತು. ಇಂದು ವರದಿ ಲಭ್ಯವಾಗಿದ್ದು ವೃದ್ಧನಿಗೆ ಸೋಂಕು ಇರುವುದು ಖಚಿತವಾಗಿದೆ. ವೃದ್ಧನ ಟ್ರಾವಲ್ ಹಿಸ್ಟರಿಗಾಗಿ ಜಿಲ್ಲಾಡಳಿತ ಶೋಧ ನಡೆಸಿದೆ. ವೃದ್ಧನ ಸಂಪರ್ಕದಲ್ಲಿದ್ದ ಕುಟುಂಬದ ಒಂದೂವರೆ ವರ್ಷದ ಒಂದು ಮಗು ಹಾಗೂ ಮೂರು ವರ್ಷದ ಇನ್ನೊಂದು ಮಗು ಸೇರಿ ಒಂಬತ್ತು ಜನರನ್ನ  ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್‍ಗೆ ರವಾನೆ ಮಾಡಲಾಗಿದೆ.

    ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು 2 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಸೋಂಕಿತರಿಬ್ಬರ ಮಾಹಿತಿ ಪಡೆಯಲಾಗಿದ್ದು ಬಾಷಾನಗರ ಹಾಗೂ ಜಾಲಿನಗರ ಎರಡನ್ನು ಸೀಲ್ ಡೌನ್ ಮಾಡಲಾಗಿದೆ. ನಿನ್ನೆ ಸೋಂಕು ಪತ್ತೆಯಾದ ಸ್ಟಾಫ್ ನರ್ಸ್ ಪ್ರಕರಣಕ್ಕೂ ಈಗ ಪತ್ತೆಯಾದ ವೃದ್ಧನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇಬ್ಬರ ಟ್ರಾವೆಲ್ ಹಿಸ್ಟರಿ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಇಬ್ಬರ ಟ್ರಾವೆಲ್ ಹಿಸ್ಟರಿ ಕಲೆ ಹಾಕುವುದು ಸಾಕಷ್ಟು ಸವಾಲಾಗಿರುವ ಹಿನ್ನೆಲೆ ಯಾರಿಂದ ಇವರಿಗೆ ಸೋಂಕು ತಗಲಿದೆ ಎನ್ನುವುದನ್ನು ಪತ್ತೆ ಮಾಡಬೇಕಿದೆ.

  • ಬೆಂಗ್ಳೂರಿನಲ್ಲಿ ಕಡಿಮೆಯಾಗ್ತಿದೆ ಡಬಲ್ ಟ್ರಬಲ್

    ಬೆಂಗ್ಳೂರಿನಲ್ಲಿ ಕಡಿಮೆಯಾಗ್ತಿದೆ ಡಬಲ್ ಟ್ರಬಲ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೊರೊನಾ ಹಾರ್ಟ್‍ಸ್ಪಾಟ್ ಈಗ ಸುಧಾರಿಸುತ್ತಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ. ಪಾದರಾಯನಪುರ ಹಾಗೂ ಹೊಂಗಸಂದ್ರ ಫುಲ್ ಕ್ಲೀನ್ ಆಗುತ್ತಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ಈಗ 131ಕ್ಕೆ ಏರಿದೆ. ಸೋಂಕಿತರಲ್ಲಿ ಹೊಂಗಸಂದ್ರ, ಪಾದರಾಯನಪುರದ ನಿವಾಸಿಗಳೇ ಹೆಚ್ಚಾಗಿದ್ದಾರೆ. ಹೊಂಗಸಂದ್ರ 29 ಮತ್ತು ಪಾದರಾಯನಪುರದಲ್ಲಿ ಸುಮಾರು 32 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪಾದರಾಯನಪುರ ಮತ್ತು ಹೊಂಗಸಂದ್ರಗಳನ್ನು ರೆಡ್‍ಝೋನ್, ಹಾಟ್‍ಸ್ಪಾಟ್, ಕಂಟೈನ್‍ಮೆಂಟ್ ಎಂದು ಹೆಸರಿಸಲಾಗಿತ್ತು.

    ದಿನಕ್ಕೆ ಹತ್ತಾರು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರದ ವಿಶೇಷ ಕಾಳಜಿ, ಬಿಬಿಎಂಪಿ ಹಾಗೂ ಹೆಲ್ತ್ ವಾರಿಯರ್ಸ್ ಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಹೊಂಗಸಂದ್ರ ಮತ್ತು ಪಾದರಾಯನಪುರದಲ್ಲಿ ಕೊರೊನಾ ಕಂಟ್ರೋಲ್‍ಗೆ ಬರುತ್ತಿದೆ. ಕೊರೊನಾ ಕಂಟ್ರೋಲ್‍ಗೆ ಬಂದಿದೆ ಅನ್ನೋದಕ್ಕೆ ಈ ಎರಡೂ ಏರಿಯಾಗಳಲ್ಲಿ ಇತ್ತೀಚಿನ ವರದಿ ನೋಡಿದರೆ ತಿಳಿದು ಬರುತ್ತಿದೆ.

    ಪಾದರಾಯನಪುರ ಈಗ ಸೇಫ್ ಆಗುತ್ತಿದೆ. ಬುಧವಾರ 48 ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಎಲ್ಲಾ ಸ್ಯಾಂಪಲ್‍ಗಳ ರಿಪೋರ್ಟ್ ನೆಗೆಟಿವ್ ಬಂದಿದೆ. ಮತ್ತೆ 19 ಜನರ ಪರೀಕ್ಷೆ ಮಾಡಲಾಗಿದ್ದು, ರಿಪೋರ್ಟ್ ಬರಬೇಕಿದೆ.

    ಇನ್ನೂ ಹೊಂಗಸಂದ್ರ ನಿವಾಸಿಗಳು ನಿಟ್ಟುಸಿರು ಬಿಡುತ್ತಿದ್ದಾರೆ. 78 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲಾ ರಿಪೋರ್ಟ್ ನೆಗೆಟಿವ್ ಬಂದಿದೆ. ಭಾನುವಾರ 49, ಸೋಮವಾರ 73, ಬುಧವಾರ 72 ಒಟ್ಟು ಮೂರು ದಿನಗಳಲ್ಲಿ 194 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲಾ ರಿಪೋರ್ಟ್ ನೆಗೆಟಿವ್ ಬಂದಿದೆ.

    ಬಿಹಾರಿ ಕಾರ್ಮಿಕರನ್ನು ಬಿಟ್ಟು ಸ್ಥಳೀಯ ನಿವಾಸಿಗಳಲ್ಲಿ ಯಾರಿಗೂ ಸೋಂಕು ಪತ್ತೆಯಾಗಿಲ್ಲ. ಹೊಂಗಸಂದ್ರ ವಿದ್ಯಾಜ್ಯೋತಿ ನಗರದ ಯಾವುದೇ ರಿಪೋರ್ಟ್ ಬಾಕಿ ಇಲ್ಲ. ಹೀಗಾಗಿ ಬೆಂಗಳೂರಿಗೆ ತಲೆನೋವಾಗಿದ್ದ ಹೊಂಗಸಂದ್ರ, ಪಾದರಾಯನಪುರ ಏರಿಯಾಗಳು ಕೊರೊನಾ ಮುಕ್ತವಾಗುತ್ತಿದ್ದು, ಶೀಘ್ರದಲ್ಲೇ ಗ್ರೀನ್ ಝೋನ್‍ ಆಗುವ ಸಾಧ್ಯತೆ ಇದೆ.

  • ಗ್ರೀನ್ ಝೋನ್‍ನಲ್ಲಿದ್ದ ದಾವಣಗೆರೆಗೆ ಶಾಕ್ – ಜಿಲ್ಲೆಯಲ್ಲಿ ಮೊದಲ ಸೋಂಕು ಪತ್ತೆ

    ಗ್ರೀನ್ ಝೋನ್‍ನಲ್ಲಿದ್ದ ದಾವಣಗೆರೆಗೆ ಶಾಕ್ – ಜಿಲ್ಲೆಯಲ್ಲಿ ಮೊದಲ ಸೋಂಕು ಪತ್ತೆ

    ದಾವಣಗೆರೆ: ಗ್ರೀನ್ ಝೋನ್‍ನಲ್ಲಿ ಇದ್ದ ದಾವಣಗೆರೆಗೂ ಕೊರೊನಾ ಮಹಾಮಾರಿ ಎಂಟ್ರಿಕೊಟ್ಟಿದೆ. ಜಿಲ್ಲೆಯ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

    ನಾವು ಗ್ರೀನ್ ಝೋನ್‍ನಲ್ಲಿ ಇದ್ದೇವೆ ಎಂದು ನೆಮ್ಮದಿಯಯಲ್ಲಿದ್ದ ದಾವಣಗೆರೆ ಜಿಲ್ಲೆಯ ಜನತೆ ಭಯದ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 38 ವರ್ಷದ ಮಹಿಳೆಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿದೆ.

    ದಾವಣಗೆರೆ ನಗರದ ಭಾಷಾ ನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಅವರ ಗಂಟಲ ದ್ರವ ಮತ್ತು ಬ್ಲಡ್ ಅನ್ನು ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ ರವಾನೆ ಮಾಡಲಾಗಿತ್ತು. ಆದರೆ ಇಂದು ಬಂದ ವರದಿಯಲ್ಲಿ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ.

    ಸೋಂಕಿತ ಮಹಿಳೆಗೆ ಪತಿ ಹಾಗೂ 18 ವರ್ಷದ ಪುತ್ರ ಇದ್ದು, ಜಿಲ್ಲಾಧಿಕಾರಿಗಳು ಆಕೆ ವಾಸವಿದ್ದ ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರ ಮಾಹಿತಿ ಸಂಗ್ರಹಿಸಿ, ಆ ಪ್ರದೇಶವನ್ನು ಸಂಪೂರ್ಣ ಸೀಲ್‍ಡೌನ್ ಮಾಡಿದ್ದಾರೆ. ಇದಕ್ಕೂ ಮೊದಲು ಆಸ್ಪತ್ರೆಯಲ್ಲಿ ಸೋಂಕಿತೆ ಸೇವೆ ಸಲ್ಲಿಸಿದ್ದು, ಆಸ್ಪತ್ರೆಗೆ ಬರುವ ರೋಗಿಗಳ ಸಂಪರ್ಕದಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಆಕೆಯ ಜೊತೆ ಪ್ರಾಥಮಿಕ ಮತ್ತು ಎರಡನೇ ಹಂತದ ಸಂಪರ್ಕಕ್ಕೆ ಬಂದವರ ಬಗ್ಗೆ ಜಿಲ್ಲಾಡಳಿತ ಮಾಹಿತಿ ಸಂಗ್ರಹ ಮಾಡುತ್ತಿದೆ.