Tag: Grape

  • ಕೊಪ್ಪಳ ಹಣ್ಣುಗಳ ‌ಮೇಳದಲ್ಲಿ ಗಮನ ಸೆಳೆದ ದುಬಾರಿ ದ್ರಾಕ್ಷಿ – ಕೆ.ಜಿಗೆ 8 ಲಕ್ಷ!

    ಕೊಪ್ಪಳ ಹಣ್ಣುಗಳ ‌ಮೇಳದಲ್ಲಿ ಗಮನ ಸೆಳೆದ ದುಬಾರಿ ದ್ರಾಕ್ಷಿ – ಕೆ.ಜಿಗೆ 8 ಲಕ್ಷ!

    ಕೊಪ್ಪಳ: ನಗರದ (Koppal) ತೋಟಗಾರಿಕೆ ಇಲಾಖೆ ಆವರಣದಲ್ಲಿ 5 ದಿನ ನಡೆಯಲಿರುವ ವಿವಿಧ ಹಣ್ಣು ಹಾಗೂ ಜೇನು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ (Shivaraj Tangadagi) ಚಾಲನೆ ನೀಡಿದರು. ಫೆ.27ರ ವರೆಗೆ ಮೇಳೆ ನಡೆಯಲಿದ್ದು, ಮೇಳದಲ್ಲಿ 8 ಲಕ್ಷ ರೂ. ಬೆಲೆಯ ಜಪಾನ್‌ನ ರೂಬಿ ರೋಮನ್ ಎಂಬ ತಳಿಯ ದ್ರಾಕ್ಷಿ (Ruby Roman Grape) ಜನರ ಗಮನ ಸೆಳೆಯಿತು.

    ಗ್ರಾಹಕರಿಗೆ ಯೋಗ್ಯ ದರದಲ್ಲಿ ಗುಣಮಟ್ಟದ ಹಣ್ಣು ದೊರೆಯಬೇಕು ಹಾಗೂ ರೈತರಿಗೆ ಮಾರುಕಟ್ಟೆ ಒದಗಿಸಬೇಕು ಎಂಬ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಶಿವರಾತ್ರಿ ಹಿನ್ನೆಲೆ ಆಯೋಜಿಸಿರುವ ಮೇಳದಲ್ಲಿ ದ್ರಾಕ್ಷಿ, ದಾಳಿಂಬೆ, ಪೇರಲೆ, ಅಂಜೂರ, ಕಲ್ಲಂಗಡಿ, ಬಾಳೆ, ಪಪ್ಪಾಯ, ಹಲಸು, ಅಣಬೆ ಹಾಗೂ ಜೇನು ಲಭ್ಯ‌ ಇದೆ.

    ರೈತರಿಂದ ಮಾರಾಟ: ಮೇಳದಲ್ಲಿ ಜಿಲ್ಲಾದ್ಯಂತ ಸುಮಾರು 30ಕ್ಕೂ ಹೆಚ್ಚು ತೋಟಗಾರಿಕೆ ರೈತರು, 15ಕ್ಕೂ ಹೆಚ್ಚು ಎಫ್ ಪಿಒ, ಹಾಪ್​ಕಾಮ್ಸ್​ ಸ್ಟಾಲ್​ ಹಾಕಿ, ಹಣ್ಣು ‌ಹಾಗೂ ಹಣ್ಣಿನ ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ.

    ಕೆಜಿಗೆ 8 ಲಕ್ಷ ರೂ. ದ್ರಾಕ್ಷಿ ಪ್ರದರ್ಶನ
    ಮೇಳದಲ್ಲಿ ದೇಶಿ ಹಣ್ಣುಗಳ ಮಾರಾಟದ ಜೊತೆಗೆ ‌ವಿದೇಶಿ ಹಣ್ಣುಗಳ ಪ್ರದರ್ಶನ ಗ್ರಾಹಕರನ್ನು ಸೆಳೆಯಿತು. ಈ ಬಾರಿ ಮೇಳದಲ್ಲಿ ಒಂದು ಕೆಜಿಗೆ 8 ಲಕ್ಷ ರೂ. ಬೆಲೆಯ ಜಪಾನ್‌ನ ರೂಬಿ ರೋಮನ್ ಎಂಬ ತಳಿಯ ದ್ರಾಕ್ಷಿ ಪ್ರದರ್ಶನಕ್ಕೆ ಇಡಲಾಗಿತ್ತು. ಜೊತೆಗೆ ಅವಕಾಡೋಫ್ಲಮ್​, ಪೀಚ್​, ಲಿಚ್ಚಿ, ರೆಡ್​ಗ್ಲೋಬ್, ಕಿವಿ ಫ್ರೂಟ್​, ರಾಮಭೂತಾನ, ಮ್ಯಾಂಗೋಸ್ಟೀನ್​, ಜಪಾನ್ ಮ್ಯಾಂಗೋ, ಐಸ್​ಗಾವಾ, ಅಮೇರಿಕನ್​ ಆಪಲ್​, ಗ್ರೀನ್​ ಆಪಲ್​, ವಿದೇಶಿ ಪ್ಯಾಷನ್​ ಪ್ರೂಟ್​, ವೈನ್​ಗ್ರೇಪ್​ ಹಣ್ಣು ಪ್ರದರ್ಶನಕ್ಕೆ ಇಡಲಾಗಿದೆ.

  • ಬೆಳೆಗೆ ಬೆಲೆ ಸಿಗಲೆಂದು ದೇವರ ಮೊರೆಹೋದ ರೈತ – ಕುರುಡುಮಲೆ ವಿನಾಯಕನಿಗೆ 2 ಟನ್ ದ್ರಾಕ್ಷಿ ಅಲಂಕಾರ

    ಬೆಳೆಗೆ ಬೆಲೆ ಸಿಗಲೆಂದು ದೇವರ ಮೊರೆಹೋದ ರೈತ – ಕುರುಡುಮಲೆ ವಿನಾಯಕನಿಗೆ 2 ಟನ್ ದ್ರಾಕ್ಷಿ ಅಲಂಕಾರ

    ಕೋಲಾರ: ಚಿಕ್ಕಬಳ್ಳಾಪುರ ಮೂಲದ ರೈತರೊಬ್ಬರು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗುವಂತೆ ಕೋರಿ ಜಿಲ್ಲೆಯ ಮುಳಬಾಗಿಲು ತಾಲೂಕಿನ ಇತಿಹಾಸ ಪ್ರಸಿದ್ಧ ಕುರುಡುಮಲೆ ವಿನಾಯಕನಿಗೆ ದ್ರಾಕ್ಷಾ ಫಲ ಅಲಂಕಾರ ಮಾಡಿಸಿದ್ದಾರೆ.

    ತಾವು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗುವಂತೆ ಬೇಡಿಕೊಂಡಿದ್ದು, ವಿನಾಯಕನ ಈ ವಿಶೇಷ ಅಲಂಕಾರಕ್ಕಾಗಿ 2 ಟನ್ ದ್ರಾಕ್ಷಿ ನೀಡಿದ್ದಾರೆ. ನೂರಾರು ಭಕ್ತರು ವಿಶೇಷ ಅಲಂಕಾರದ ಗಣೇಶನ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬ ಸದಸ್ಯರಿಗೂ ಇನ್ಮುಂದೆ ಸರ್ಕಾರಿ ನೌಕರಿ

    ಐತಿಹಾಸಿಕ ಹಿನ್ನೆಲೆಯಿರುವ ಈ ದೇವಾಲಯಕ್ಕೆ ಮಹಾಭಾರತದ ಕಾಲದಲ್ಲಿ ಶ್ರೀಕೃಷ್ಣ ಬಂದು ಪೂಜೆ ನೇರವೇರಿಸಿದ್ದರು ಎಂಬ ಪ್ರತೀತಿ ಇದೆ. ಅದಕ್ಕಾಗಿಯೇ ಹಿರಿಯ ರಾಜಕಾರಣಿಗಳು ಚುನಾವಣೆಗೂ ಮುನ್ನ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅದರಂತೆಯೇ ರೈತರು ತಾವು ಬೆಳೆದ ಬೆಳೆಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗಲಿ ಎಂದು ಹರಿಕೆ ಹೊತ್ತು ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಮುಜರಾಯಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಚೆಲುವ ಸ್ವಾಮಿ ತಿಳಿಸಿದ್ದಾರೆ.

  • ರಸ್ತೆಯಲ್ಲಿ ಬಿದ್ದಿದ್ದ ದ್ರಾಕ್ಷಿಗಾಗಿ ಮುಗಿಬಿದ್ದ ಜನ

    ರಸ್ತೆಯಲ್ಲಿ ಬಿದ್ದಿದ್ದ ದ್ರಾಕ್ಷಿಗಾಗಿ ಮುಗಿಬಿದ್ದ ಜನ

    ಮಂಡ್ಯ: ರಸ್ತೆಯಲ್ಲಿ ಎಂತಹ ಬೆಲೆ ಬಾಳುವ ವಸ್ತು ಬಿದ್ದಿದ್ದರೂ, ಜನ ಅದನ್ನು ಎತ್ತಿಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಆದರೆ  ರಸ್ತೆಯಲ್ಲಿ ಅನುಮಾನಸ್ಪದವಾಗಿ ಬಿದ್ದಿದ್ದ ದ್ರಾಕ್ಷಿ ಗೊಂಚಲನ್ನು ಬಾಚಿಕೊಳ್ಳಲು ನಾ ಮುಂದು ತಾ ಮುಂದು ಎಂದು ಜನ ಮುಗಿ ಬಿದ್ದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ಮಂಡ್ಯದ ವಿಸಿ ಫಾರ್ಮ್ ಗೇಟ್ ಬಳಿ ಬಿದ್ದಿದ್ದ ದ್ರಾಕ್ಷಿ ಗೊಂಚಲನ್ನು ಹ್ಯಾಂಡ್ ಕವರ್ ಹಾಗೂ ಚೀಲದಲ್ಲಿ ಜನರು ತಾ ಮುಂದು ನಾ ಮುಂದು ಎಂದು ಬಾಚಿಕೊಂಡರು. ವಿಸಿ ಫಾರ್ಮ್ ಗೇಟ್ ಬಳಿ ಯಾರೋ ಇದಕ್ಕಿದ್ದ ಹಾಗೆ ಕ್ಯಾಂಟರ್‌ ವಾಹನದಲ್ಲಿ ಬಂದು ಸುಮಾರು 100ಕ್ಕೂ ಹೆಚ್ಚು ಕೆಜಿ ದ್ರಾಕ್ಷಿಯನ್ನು ಸುರಿದು ಹೋಗಿದ್ದಾರೆ. ದ್ರಾಕ್ಷಿ ಸುರಿಯುತ್ತಿದ್ದಂತೆ ಜನರು, ಆತ ಯಾಕೆ ಸುರಿಯುತ್ತಿದ್ದಾನೆ ಎಂದು ಕೇಳದೇ  ನಾ ಮುಂದು ತಾ ಮುಂದು ಎಂದು ಬಾಚಿಕೊಳ್ಳಲು ಮುಂದಾಗಿದ್ದಾರೆ.

    ಸದ್ಯ ದ್ರಾಕ್ಷಿಯ ಬೆಲೆ ಕೆಜಿಗೆ 70-80 ರೂಪಾಯಿ ಇದ್ದರೂ ಸಹ ಆ ವ್ಯಕ್ತಿ ರಸ್ತೆಗೆ ದ್ರಾಕ್ಷಿಯನ್ನು ಏಕೆ ಸುರಿದು ಹೋದ ಎಂಬ ಅನುಮಾನಗಳು ಮೂಡುತ್ತಿವೆ. ಇದರ ನಡುವೆಯೂ ಜನರು ದ್ರಾಕ್ಷಿಯನ್ನು ತಮಗೆ ಬೇಕಾದಷ್ಟು ತುಂಬಿಕೊಂಡು ಹೋದರು. ಹಳ್ಳಿಯ ಜನರಲ್ಲದೇ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ದ್ರಾಕ್ಷಿಯನ್ನು ತುಂಬಿಕೊಂಡರು. ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗು ರಕ್ಷಿಸಿದ – ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ

    ದ್ರಾಕ್ಷಿಯನ್ನೆ ಎತ್ತಿಕೊಳ್ಳುತ್ತಿದ್ದ ಜನರನ್ನು ಪ್ರಶ್ನೆ ಮಾಡಿದಾಗ, ಇಲ್ಲಿ ಸುಮ್ಮನೆ ಎಸೆದು ಹೋಗಿದ್ದಾರೆ, ಅವೆಲ್ಲವೂ ಹಾಳಾಗುತ್ತದೆ. ಅದಕ್ಕೆ ನಾವಾದರೂ ತಿನ್ನಬಹುದು ಎಂದು ತುಂಬಿಕೊಂಡು ಹೋಗುತ್ತಿದ್ದೇವೆ ಎಂದರು. ಇದನ್ನೂ ಓದಿ: ಗಂಡನ ಜೊತೆ ಜಗಳ – ಸಾಯ್ತೀನಿ ಅಂತ ಕೆರೆಯಲ್ಲಿ ಕೂತ ಮಹಿಳೆ

  • 1 ಕೆಜಿ ದ್ರಾಕ್ಷಿ 145 ರೂ.ಗೆ ಮಾರಾಟ – ರೈತರಿಗೆ ಸಂತಸ

    1 ಕೆಜಿ ದ್ರಾಕ್ಷಿ 145 ರೂ.ಗೆ ಮಾರಾಟ – ರೈತರಿಗೆ ಸಂತಸ

    – ದಿಲ್ ಖುಷ್ ಕೆಜಿಗೆ 90 ರೂ. ಮಾರಾಟ

    ಚಿಕ್ಕಬಳ್ಳಾಪುರ: ಕೊರೊನಾ ಲಾಕ್‍ಡೌನ್‍ಗೆ ಸಿಲುಕಿ ದ್ರಾಕ್ಷಿಗೆ ಸೂಕ್ತ ಬೆಲೆಯಿಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಬೆಳೆದ ದ್ರಾಕ್ಷಿ ಹಣ್ಣನ್ನು ತಿಪ್ಪೆಗುಂಡಿಗೆ ಸುರಿದು ಮಣ್ಣು ಪಾಲು ಮಾಡಿದ್ದರು. ಆದ್ರೆ ಈಗ ಲಾಕ್‍ಡೌನ್ ಸಡಿಲಿಕೆ ನಂತರ ಜನ ಜೀವನ ಯಥಾಸ್ಥಿತಿಗೆ ಮರಳುತ್ತಿದ್ದಂತೆ, 1 ಕೆಜಿ ದ್ರಾಕ್ಷಿ ಹಣ್ಣಿನ ಬೆಲೆ ಹೆಚ್ಚಾಗಿದೆ. ಇದರಿಂದ ದ್ರಾಕ್ಷಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಚಿಕ್ಕಬಳ್ಳಾಪುರ ಬರದನಾಡಾದ್ರೂ ಇಲ್ಲಿನ ರೈತರು ವಿನೂತನ ತಂತ್ರಜ್ಞಾನ ಹಾಗೂ ಬುದ್ದಿವಂತಿಕೆಯನ್ನು ಬಳಸಿಕೊಂಡು, ತರೇವಾರಿ ಹಣ್ಣು, ತರಕಾರಿ ಹೂ ಬೆಳೆಯುವುದರಲ್ಲಿ ದೇಶದಲ್ಲೇ ಹೆಸರುವಾಸಿ. ಇನ್ನೂ ದ್ರಾಕ್ಷಿ ಬೆಳೆದು ದೇಶ ವಿದೇಶಕ್ಕೆ ರಪ್ತು ಮಾಡುವುದರಲ್ಲಿ ಚಿಕ್ಕಬಳ್ಳಾಪುರ ರೈತರದ್ದು ಎತ್ತಿದ ಕೈ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೆ ಬರೋಬ್ಬರಿ ಎರಡು ಸಾವಿರದ ಐನೂರು ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಕಳೆದೊಂದು ವರ್ಷದಿಂದ ಕೊರೊನಾ ಲಾಕ್‍ಡೌನ್ ಗೆ ಸಿಲುಕಿಗೆ ಬೆಳೆದ ದ್ರಾಕ್ಷಿಗೆ ಸೂಕ್ತ ಬೆಲೆ ಸಿಗದೆ ದ್ರಾಕ್ಷಿಯನ್ನು ತಿಪ್ಪೆಗುಂಡಿಗೆ ಸುರಿಯುಂತಾಗಿತ್ತು.

    ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದ ರೈತ ಕೆ.ಆರ್.ರೆಡ್ಡಿ ಎಂಬುವವರು 5 ಎಕರೆ ಪ್ರದೇಶದದಲ್ಲಿ ರೆಡ್ ಗ್ಲೋಬ್ ತಳಿ ದ್ರಾಕ್ಷಿಯನ್ನು ಬೆಳೆದಿದ್ದು, ಈ ಬಾರಿ ಉತ್ತಮ ಇಳುವರಿ ಬಂದಿದೆ. ವರ್ತಕರು ತೋಟಕ್ಕೆ ಬಂದು 1 ಕೆ.ಜಿ ದ್ರಾಕ್ಷಿಗೆ 145 ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ. 5 ಎಕರೆಯಲ್ಲಿ ಸರಿಸುಮಾರು 50 ಟನ್ ದ್ರಾಕ್ಷಿ ಬೆಳೆದಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ಹರಿದುಬಂದಿದೆ. ಇದರಿಂದ ರೈತ ಕೆ ಆರ್ ರೆಡ್ಡಿಯವರು ಸಂತಸಗೊಂಡಿದ್ದಾರೆ.

    ಕಳೆದ ಎರಡು ವರ್ಷಗಳಿದ ಉತ್ತಮ ಬೆಲೆ ಇಲ್ಲದೆ ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿ ಕಂಡು ಕೇಳರಿಯದ ಬೆಲೆ ಸಿಕ್ಕಿದ್ದು ಸಾಕಷ್ಟು ಸಂತಸ ತಂದಿದೆ ಅಂತ ರೈತ ಕೆ ಆರ್ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಸಂತಸ ಹಂಚಿಕೊಂಡಿದ್ದಾರೆ. ಇನ್ನೂ ರೆಡ್ ಗ್ಲೋಬ್ ದ್ರಾಕ್ಷಿ 145 ರೂಪಾಯಿ ಆದ್ರೆ ದಿಲ್ ಖುಷ್ ಬೆಲೆಯೂ ಸಹ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಆಂಜನೇಯರೆಡ್ಡಿಯವರು ಸಹ ಎರಡು ಎಕರೆ ಪ್ರದೇಶದಲ್ಲಿ ದಿಲ್ ಕುಶ್ ದ್ರಾಕ್ಷಿ ಬೆಳೆದಿದ್ದು ಎರಡು ಎಕರೆಗೆ ಬರೋಬ್ಬರಿ ಸರಿಸುಮಾರು 40 ಟನ್ ದ್ರಾಕ್ಷಿ ಆಗೊ ನಿರೀಕ್ಷೆಯಿದೆ. ಈಗಾಗಲೇ ಮುಕ್ಕಾಲು ಭಾಗ ತೋಟವನ್ನು ವರ್ತಕರು ಕಟಾವು ಮಾಡಿದ್ದು ಕೆ.ಜಿ ಗೆ 90 ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದಾರೆ.

    ಸದ್ಯ ಈಗ ದ್ರಾಕ್ಷಿ ಬೆಳೆಯಲು ಸಿಜನ್ ಅಲ್ಲ, ಅನ್ ಸೀಜನ್. ಸ್ವಾಭಾವಿಕವಾಗಿ ಈಗ ದ್ರಾಕ್ಷಿ ಬೆಳೆಯಲ್ಲ, ಆದ್ರೆ ಚಿಕ್ಕಬಳ್ಳಾಪುರದ ಕೆಲವು ಬುದ್ದಿವಂತ ರೈತರು, ತೋಟಗಾರಿಕೆ ಇಲಾಖೆ ಮಾರ್ಗದರ್ಶನದಲ್ಲಿ ಅಕಾಲಿಕವಾಗಿ ದ್ರಾಕ್ಷಿ ಫಸಲು ಬರುವ ಹಾಗೆ ತಂತ್ರಜ್ಞಾನ ಬಳಸಿಕೊಂಡು ದ್ರಾಕ್ಷಿ ಬೆಳೆದಿದ್ದಾರೆ. ಇದರಿಂದ ದ್ರಾಕ್ಷಿಗೆ ಬೆಲೆ ಬಂದಿದೆ ರೈತರಂತೂ ಸಖತ್ ಖುಷಿಯಾಗಿದ್ದಾರೆ. ಇನ್ನೂ ಈ ದ್ರಾಕ್ಷಿ ಈಶಾನ್ಯ ರಾಜ್ಯಗಳು ಸೇರಿ ನೆರೆಯ ದೇಶಗಳಾದ ನೇಪಾಳ, ಬಾಂಗ್ಲಾದೇಶ ಸೇರಿ ಇತರೆ ದೇಶಗಳಿಗೆ ರಫ್ತಾಗಲಿದೆ.

  • ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    – ಆನ್‍ಲೈನ್ ದ್ರಾಕ್ಷಿ ಮಾರಾಟಕ್ಕೆ ಕ್ರಮ
    – ಪರಿಸ್ಥಿತಿಯ ದುರ್ಲಾಭ ಪಡೆದರೆ ಕಠಿಣ ಕ್ರಮ

    ವಿಜಯಪುರ: ರೈತ ಸಮುದಾಯಕ್ಕಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ. ಹೀಗಾಗಿ ರೈತರಿಗೆ ಅನುಕೂಲವಾಗಲೆಂದು ಕೃಷಿ ಉತ್ಪನ್ನಗಳ ಸುಲಲಿತ ಮಾರಾಟಕ್ಕೆ ಅಂತರಾಜ್ಯ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಸಚಿವರು ಕೊರೊನಾ ಹಿನ್ನಲೆಯಲ್ಲಿ ರೈತ ಮತ್ತು ಕೃಷಿ ಚಟುವಟಿಕೆಗಳ ಕುರಿತು ಜಿಲ್ಲಾ ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ವಿಜಯಪುರ ಜಿಲ್ಲಾ ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿ ರೈತರು, ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು, ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಈ ಚಟುವಟಿಕೆಗಳು ಜೂನ್ ನಂತರ ಪ್ರಾರಂಭವಾಗಲಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆನ್‍ಲೈನ್ ಟ್ರೆಡಿಂಗ್ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದರು. ರೈತರು, ಅಧಿಕಾರಿಗಳು ಮತ್ತು ಜಿಲ್ಲೆಯ ಶಾಸಕರಿಂದ ಅಗತ್ಯ ಮಾಹಿತಿ ಪಡೆದ ನಂತರ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ ಸೂಕ್ತ ನಿರ್ದೇಶನಗಳನ್ನು ನೀಡಿದರು.

    ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಗಳ ಸಭೆ ನಡೆಸಿದ್ದೇನೆ. ಈ ಸಭೆಯ ಮುಖ್ಯ ಉದ್ದೇಶ ರೈತರಿಗೆ ಅನುಕೂಲ ಕಲ್ಪಿಸುವುದಾಗಿದೆ. ವಿಜಯಪುರ ಜಿಲ್ಲೆಗೆ ಬೇಕಾದ ಎಲ್ಲಾ ಬೀಜ, ಗೊಬ್ಬರ ವ್ಯವಸ್ಥೆ ಆಗಿದೆ. ಕಡಲೇ ಖರೀದಿಗೆ ಕೇಂದ್ರಗಳನ್ನು ತೆರೆಯಬೇಕು. ಇಲ್ಲದಿದ್ದರೆ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ. ಸಾರಿಗೆ ಸಮಸ್ಯೆಯೂ ಉಂಟಾಗುತ್ತದೆ. ಆದ್ದರಿಂದ ಖರೀದಿ ಕೇಂದ್ರ ತೆರೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ವ್ಯಾಪಕ ಪ್ರಚಾರವೂ ಅಗತ್ಯವಿದ್ದು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ನೆರವು ಪಡೆಯುವಂತೆ ಸಲಹೆ ನೀಡಿದರು.

    ದ್ರಾಕ್ಷಿ ಬೆಳೆಗಾರರು ಗಮನ ಸೆಳೆದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಅವರು, ದ್ರಾಕ್ಷಿ ಆನ್‍ಲೈನ್ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ತೊಡಕುಗಳಿದ್ದರೂ ನಿವಾರಿಸಲು ಜಿಲ್ಲಾಧಿಕಾರಿಗೆ ಕೃಷಿ ಸಚಿವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದೆ. ಆದರೆ ಕಿಡಿಗೇಡಿಗಳು ಕಲ್ಲಂಗಡಿ ತಿಂದರೆ ರೋಗ ಬರುತ್ತದೆ ಎಂದು ವದಂತಿ ಹಬ್ಬಿಸಿದ್ದಾರೆ. ಇದು ಸುಳ್ಳು, ಹೀಗೆ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದರು.

    ಕಲ್ಲಂಗಡಿ, ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಬಗ್ಗೆ ವೈದ್ಯರು ಹೇಳಿಕೆ ನೀಡಿದ್ದಾರೆ. ಅವರಿಂದ ಮಾಹಿತಿಗಳನ್ನು ಪಡೆಯಲಾಗಿದೆ. ಆದ್ದರಿಂದ ಭೀತಿಯಿಲ್ಲದೇ ಈ ಹಣ್ಣುಗಳ ಸೇವನೆ ಮಾಡುವಂತೆ ಸಚವರು ಸಲಹೆ ನೀಡಿದರು. ಕಲ್ಲಂಗಡಿ ತಿಂದರೆ ಕೊರೊನಾ ಬರುತ್ತೆ ಅಂತ ಅಪಪ್ರಚಾರ ಮಾಡಲಾಗಿದೆ. ಹಾಗಾಗಿ ಕಲ್ಲಂಗಡಿ ಮಾರಾಟ ಆಗುತ್ತಿಲ್ಲ ಎಂದು ದೂರುಗಳು ಬಂದಿವೆ. ಒಂದು ಮೂಲದ ಪ್ರಕಾರ, ಕಲ್ಲಂಗಡಿ ಹಾಗೂ ಸವತೆಕಾಯಿ ತಿಂದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಯಾರೂ ಭಯಪಡಬಾರದು. ರೈತರಿಗೆ ಯಾರೇ ಅಧಿಕಾರಿಗಳು ತೊಂದರೆ ಮಾಡಿದಲ್ಲಿ ಅಂಥವರ ಮೇಲೆ ಹಿಂದುಮುಂದು ನೋಡದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ. ಹಾಪ್ ಕಾಮ್ಸ್ ನಲ್ಲಿ ತರಕಾರಿ, ಹಣ್ಣು, ಮೊಟ್ಟೆ ಮಾರಾಟಕ್ಕೆ ಸೂಚಿಸಲಾಗಿದೆ. ರೈತರೆಲ್ಲ ಹೆದರಬಾರದು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

    ಹಾಗೆಯೇ ಯಾರಾದರೂ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುವುದಾಗಲೀ, ಪಡೆದುಕೊಂಡಿದ್ದಾಗಲಿ ತಮ್ಮ ಗಮನಕ್ಕೆ ಬಂದರೆ ಅವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮಜರುಗಿಸ ಬೇಕಾಗುತ್ತದೆ ಎಂದು ಕೃಷಿ ಸಚಿವರು ಖಡಕ್ ಎಚ್ಚರಿಕೆ ನೀಡಿದರು.

    ತಾವು ಹಾಗೂ ಸರ್ಕಾರ ರೈತರ ಜೊತೆಗೆ ಇದ್ದೇವೆ. ರೈತರು ಹತಾಶರಾಗಬಾರದು. ಕೊರೊನಾ ಹಾವಳಿ ಆದಷ್ಟು ಬೇಗ ಕಡಿಮೆಯಾಗಲಿದೆ, ನಾವೆಲ್ಲರೂ ಇದರಿಂದ ಪಾರಾಗುತ್ತೇವೆ. ಕೊರೊನಾ ಎಂಬ ಸಾಮಾಜಿಕ ಕುತ್ತು ಆದಷ್ಟು ಬೇಗ ನಿವಾರಣೆಯಾಗಲಿದೆ. ಕೊರೊನಾ ಕಂಟಕದಿಂದ ಪಾರಾಗಿ ಜನರನ್ನು ಬದುಕಿಸಿಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು. ಹಾಗೆಯೇ ರಾಜ್ಯದ ಸಹಕಾರ ಸಚಿವರು 1200 ಕೋಟಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಸೊಸೈಟಿಗಳ ಚಟುವಟಿಕೆಗೆ ಯಾವುದೇ ತೊಂದರೆಯೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮುಂಭಾಗದಲ್ಲಿ ರೈತರಿಂದ ನೇರವಾಗಿ ಗ್ರಾಹಕರ ಮನೆಬಾಗಿಲಿಗೆ ತಾಜಾ ಹಣ್ಣು ಮತ್ತು ತರಕಾರಿ ಮಾರಾಟ ಸೇವೆಗೆ ಕೃಷಿ ಸಚಿವರು ಚಾಲನೆ ನೀಡಿದರು. ಶಾಸಕರಾದ ಶಿವಾನಂದ್ ಪಾಟೀಲ್, ಅರುಣ್ ಶಾಪುರ್, ಬಸನಗೌಡ ಪಾಟೀಲ್ ಯತ್ನಾಳ, ಈಶ್ವಂತ್ ರಾಯ್, ದೇವಾನಂದ್ ಚೌಹಣ್, ಮುರುಗೇಶ್ ನಿರಾಣಿ ಸೇರಿದಂತೆ ಇಲಾಖಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

  • ವಾಟ್ಸಪ್ ವಿಡಿಯೋ ಅವಾಂತರ- ದ್ರಾಕ್ಷಿ ತಿನ್ನುವ ವಿಡಿಯೋದಿಂದ ಭಯ ಸೃಷ್ಟಿಸಿದ ಕಿಡಿಗೇಡಿಗಳು

    ವಾಟ್ಸಪ್ ವಿಡಿಯೋ ಅವಾಂತರ- ದ್ರಾಕ್ಷಿ ತಿನ್ನುವ ವಿಡಿಯೋದಿಂದ ಭಯ ಸೃಷ್ಟಿಸಿದ ಕಿಡಿಗೇಡಿಗಳು

    – ಪೊಲೀಸರಿಂದ ತನಿಖೆ, ಕಿಡಿಗೇಡಿಗಳಿಗಾಗಿ ಬಲೆ

    ಹಾಸನ: ಕೊರೊನಾ ಬಗ್ಗೆ ಆತಂಕ ಹೆಚ್ಚುತ್ತಿರುವಾಗಲೇ ಕಿಡಿಗೇಡಿಗಳು ಈ ಕುರಿತು ಇಲ್ಲಸಲ್ಲದ ವಿಡಿಯೋ ಹರಿಬಿಡುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ.

    ಹಾಸನ ನಗರದಲ್ಲಿ ಮೂವರು ದ್ರಾಕ್ಷಿ ಹಣ್ಣನ್ನು ಎಂಜಲು ಮಾಡಿ ವಾಹನಕ್ಕೆ ತುಂಬುತ್ತಿದ್ದಾರೆ ಎಂಬ ಬರಹದೊಂದಿಗೆ ವಿಡಿಯೋವೊಂದು ಹಾಸನದಲ್ಲಿ ವೈರಲ್ ಆಗಿತ್ತು. ಈ ಮೂಲಕ ಕಿಡಿಗೇಡಿಗಳು ಭೀತಿ ಉಂಟು ಮಾಡಲು ಯತ್ನಿಸಿದ್ದರು.

    ಈ ವೇಳೆ ವ್ಯಕ್ತಿಯೊಬ್ಬ ದ್ರಾಕ್ಷಿ ಹಣ್ಣನ್ನು ಬಾಯಿ ಬಳಿ ತೆಗೆದುಕೊಂಡು ಹೋಗುವ ವಿಡಿಯೋವನ್ನು ವಾಟ್ಸಪ್‍ನಲ್ಲಿ ಹರಿ ಬಿಟ್ಟಿದ್ದರು. ವಾಹನದ ನಂಬರ್ ಸಹ ವಾಟ್ಸಪ್‍ನಲ್ಲಿ ಹಾಕಿ ಉದ್ದೇಶ ಪೂರ್ವಕವಾಗಿ ಎಂಜಲು ಮಾಡಿ ನಮಗೆ ಹಣ್ಣು ಮಾರುತ್ತಿದ್ದಾರೆ ಎಚ್ಚರ ಎಂದು ಆತಂಕ ಸೃಷ್ಟಿಸಿದ್ದರು. ಇದು ಹಾಸನ ಜಿಲ್ಲೆಯಾದ್ಯಂತ ಭೀತಿಗೆ ಕಾರಣವಾಗಿತ್ತು.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ವಿಡಿಯೋ ಪರಿಶೀಲನೆ ನಡೆಸಿ, ವಾಹನದ ನಂಬರ್ ಆಧರಿಸಿ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೂವರು, ನಾವು ಮೂವರು ದ್ರಾಕ್ಷಿ ಹಣ್ಣನ್ನು ತಿನ್ನುತ್ತಿದ್ದೆವು. ಅದನ್ನು ಯಾರೋ ಬೇಕಂತಲೇ ಚಿತ್ರೀಕರಿಸಿ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸಾರ್ವಜನಿಕರ ಭಯ ಹೋಗಲಾಡಿಸಲು ಮೂವರನ್ನು ಆಸ್ಪತ್ರೆಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ತಿಳಿದು ಬಂದಿದೆ. ದ್ರಾಕ್ಷಿ ಹಣ್ಣನ್ನು ಆಹಾರ ಪರಿವೀಕ್ಷಕರ ಪರಿಶೀಲನೆಗೆ ಕಳುಹಿಸಲಾಗಿದೆ. ಮೊಬೈಲ್‍ನಲ್ಲಿ ದ್ರಾಕ್ಷಿ ತಿನ್ನುವ ವಿಡಿಯೋ ಚಿತ್ರೀಕರಿಸಿ ಭಯ ಉಂಟು ಮಾಡಿರುವ ಕಿಡಿಗೇಡಿಗಳಿಗಾಗಿ ಪೊಳಿಸರು ಬಲೆ ಬೀಸಿದ್ದಾರೆ.

  • ದ್ರಾಕ್ಷಿ ಬೆಳೆಗಾರರು ಕಂಗಾಲು, ತೋಟಗಳಲ್ಲೇ ಕೊಳೆಯಲಿದೆ ದ್ರಾಕ್ಷಿ

    ದ್ರಾಕ್ಷಿ ಬೆಳೆಗಾರರು ಕಂಗಾಲು, ತೋಟಗಳಲ್ಲೇ ಕೊಳೆಯಲಿದೆ ದ್ರಾಕ್ಷಿ

    – ಮಹಾರಾಷ್ಟ್ರ ಮಾರುಕಟ್ಟೆಗೆ ನಿರ್ಬಂಧ

    ಚಿಕ್ಕಬಳ್ಳಾಪುರ: ಹೂ, ಹಣ್ಣು, ತಾಜಾ ತರಕಾರಿಗಳಿಗೆ ಫೇಮಸ್ ಆಗಿರುವ ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹನಿ ಹನಿ ನೀರುಣಿಸಿ ಬೆಳೆದಿದ್ದ ದ್ರಾಕ್ಷಿ ಬೆಳೆಗೂ ಕೊರೊನಾ ಕಂಟಕ ಎದುರಾಗಿದೆ.

    ಕೊರೊನಾ ಎಫೆಕ್ಟ್ ಹಾಗೂ ಮಹಾರಾಷ್ಟ್ರ ಮಾರುಕಟ್ಟೆ ನಿಯಂತ್ರಣದಿಂದ ರಾಜ್ಯದ ದ್ರಾಕ್ಷಿಯನ್ನು ಕೇಳುವವರೇ ಇಲ್ಲದಂತಾಗಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ತೋಟಗಳಲ್ಲೇ ಕೊಳೆಯುವ ಸ್ಥಿತಿ ಎದುರಾಗಿದೆ. ಇದರಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಚಿಕ್ಕಬಳ್ಳಾಪುರವೊಂದರಲ್ಲೇ ಸುಮಾರು 3- 4 ಸಾವಿರ ಎಕರೆ ಪ್ರದೇಶದಲ್ಲಿ ಬೆಳದ ತರಹೇವಾರಿ ದ್ರಾಕ್ಷಿಯನ್ನು ಇದೀಗ ಕೇಳುವವರೇ ಇಲ್ಲದಂತಾಗಿದ್ದು, ಮಣ್ಣುಪಾಲಾಗುತ್ತಿವೆ.

    ಇದರಿಂದ ಸುಮಾರು 150-200 ಕೋಟಿ ರೂಪಾಯಿ ಮೌಲ್ಯದ ದ್ರಾಕ್ಷಿ ಬೆಳೆ ಹಾನಿಗೊಳಗಾಗುತ್ತಿದೆ. ಬರಪೀಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಹತ್ತಾರು ಕೊಳವೆ ಬಾವಿಗಳನ್ನು ಕೊರೆದು ನೀರು ಸಿಗದೇ ಟ್ಯಾಂಕರ್ ಗಳ ಮೂಲಕ ತೋಟಗಳಿಗೆ ನೀರು ಹಾಯಿಸಿದ್ದರು. ಇದರ ನಡುವೆ ಸಾಲ ಮಾಡಿ ಹನಿ ನೀರಿನಲ್ಲೇ ಸಮೃದ್ಧ ದ್ರಾಕ್ಷಿ ಬೆಳೆದಿದ್ದರು. ಆದರೆ ರಾಜ್ಯದ ದ್ರಾಕ್ಷಿಗೆ ಮಹಾರಾಷ್ಟ್ರ ಮಾರುಕಟ್ಟೆ ನಿಯಂತ್ರಣ ಹೇರಿದೆ. ಇತ್ತ ಮಹಾಮಾರಿ ಕೊರೊನಾ ವೈರಸ್ ಎಫೆಕ್ಟ್ ನಿಂದ ರೈತರು ದ್ರಾಕ್ಷಿ ಕಟಾವು ಮಾಡಲಾಗದೆ ತೋಟಗಳಲ್ಲೇ ಬಿಟ್ಟಿದ್ದಾರೆ.

    ಸರ್ಕಾರ ಸ್ಪೀರಿಟ್ ಕಂಪನಿಗಳ ಸ್ಥಾಪನೆಗೆ ಮುಂದಾದರೆ ಸಂಕಷ್ಟಕ್ಕೊಳಗಾದ ದ್ರಾಕ್ಷಿ ಬೆಳೆಗಾರರು ಆತಂಕದಿಂದ ಪಾರಾಗಬಹುದು ಎಂದು ದ್ರಾಕ್ಷಿ ವ್ಯಾಪಾರಿ ನಾರಾಯಣಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಮಹಾರಾಷ್ಟ್ರದ ಜೊತೆಗೆ ಉತ್ತಮ ನಂಟು ಹೊಂದಿರುವ ತೋಟಗಾರಿಕಾ ಸಚಿವ ನಾರಾಯಣಗೌಡರು ರಾಜ್ಯದ ದ್ರಾಕ್ಷಿ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ.

    ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಅಲ್ಲಿನ ರೈತರು ಯಥೇಚ್ಛವಾಗಿ ದ್ರಾಕ್ಷಿ ಬೆಳೆದಿದ್ದಾರೆ. ಅಲ್ಲದೆ ಕೊರೊನಾ ಎಫೆಕ್ಟ್ ನಿಂದಾಗಿ ಮಹಾರಾಷ್ಟ್ರ ಮಾರುಕಟ್ಟೆ ಪ್ರವೇಶಕ್ಕೆ ರಾಜ್ಯದ ದ್ರಾಕ್ಷಿಗೆ ಕಡಿವಾಣ ಹಾಕಲಾಗಿದೆ. ಇಷ್ಟು ದಿನ ಕೆ.ಜಿಗೆ 60-80 ರೂಪಾಯಿ ಇದ್ದ ದ್ರಾಕ್ಷಿಯನ್ನು ಇದೀಗ 15 ರೂಪಾಯಿಗೂ ಕೇಳೋರಿಲ್ಲದಂತಾಗಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.