Tag: grandson

  • ವೃದ್ಧ ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸಿದ ಮಗ-ಮೊಮ್ಮಗ ಅರೆಸ್ಟ್

    ವೃದ್ಧ ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸಿದ ಮಗ-ಮೊಮ್ಮಗ ಅರೆಸ್ಟ್

    ಮಂಗಳೂರು: ವೃದ್ಧ ತಾಯಿಗೆ ಅಮಾನುಷವಾಗಿ ಹಲ್ಲೆ ಮಾಡಿದ ಮಗ ಹಾಗೂ ಮೊಮ್ಮಗನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸವಣಾಲು ಗ್ರಾಮದ ಹಲಸಿನ ಕಟ್ಟೆ ನಿವಾಸಿ 70 ವರ್ಷದ ವೃದ್ಧೆ ಅಪ್ಪಿ ಶೆಟ್ಟಿಯವರಿಗೆ ಅವರ ಹಿರಿಯ ಪುತ್ರ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಹಿಗ್ಗಾಮುಗ್ಗ ಥಳಿಸಿ ಎತ್ತಿ ನೆಲಕ್ಕೆ ಎಸೆದಿದ್ದರು. ಈ ಅಮಾನವೀಯ ದೃಶ್ಯವನ್ನು ಇನ್ನೋರ್ವ ಮೊಮ್ಮಗ ಮೊಬೈಲ್‍ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ್ದರು.

    ಇದೀಗ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಹಿರಿಯ ನಾಗರಿಕ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ವೃದ್ಧೆ ಅಪ್ಪಿ ಶೆಟ್ಟಿಯವರನ್ನು ಆರೈಕೆಗಾಗಿ ಹಿರಿಯ ನಾಗರಿಕ ಪಾಲನಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

  • ಹೆತ್ತ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿ ಎತ್ತಿ ಬಿಸಾಡಿದ ಮಗ

    ಹೆತ್ತ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿ ಎತ್ತಿ ಬಿಸಾಡಿದ ಮಗ

    ಮಂಗಳೂರು: ವೃದ್ಧೆ ತಾಯಿಗೆ ಮಗ ಹಾಗೂ ಮೊಮ್ಮಗ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸವಣಾಲು ಎಂಬಲ್ಲಿ ನಡೆದಿದೆ.

    ಸವಣಾಲು ಹಲಸಿನಕಟ್ಟೆ ಎಂಬಲ್ಲಿನ ನಿವಾಸಿ ವೃದ್ಧೆ ಅಪ್ಪಿ ಶೆಟ್ಟಿಗೆ ಅವರ ಮಗ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಕಂಠಪೂರ್ತಿ ಕುಡಿದು ಮಲಗಿದಲ್ಲೇ ಮಲಗಿರುವ ಅಪ್ಪಿ ಶೆಟ್ಟಿಯವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಎತ್ತಿ ಬಿಸಾಡಿದ್ದಾರೆ.

    ಈ ದೃಶ್ಯವನ್ನು ಅಲ್ಲೇ ಇದ್ದ ಇನ್ನೋರ್ವ ಮೊಮ್ಮಗ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಅನಾರೋಗ್ಯದಿಂದ ಇರುವ ಅಪ್ಪಿಶೆಟ್ಟಿ ಕಳೆದ ಕೆಲ ವರ್ಷದಿಂದ ಮಲಗಿದಲ್ಲೇ ಇದ್ದಾರೆ. ಹೀಗಾಗಿ ಪ್ರತಿದಿನ ಈ ಇಬ್ಬರು ಇದೇ ರೀತಿ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದು, ಇದರಿಂದ ನೊಂದ ಅಸಹಾಯಕ ಮೊಮ್ಮಗ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಹಲ್ಲೆ ನಡೆಸಿದ ಈ ಇಬ್ಬರ ಮೇಲೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.

  • ಕುಡಿಯಲು ಹಣ ಕೊಡದ್ದಕ್ಕೆ ಕುಡುಗೋಲಿನಿಂದ ಹೊಡೆದು ಅಜ್ಜಿಯನ್ನೇ ಕೊಂದ

    ಕುಡಿಯಲು ಹಣ ಕೊಡದ್ದಕ್ಕೆ ಕುಡುಗೋಲಿನಿಂದ ಹೊಡೆದು ಅಜ್ಜಿಯನ್ನೇ ಕೊಂದ

    ಶಿವಮೊಗ್ಗ: ಮದ್ಯವ್ಯಸನಿ ಯುವಕನೊಬ್ಬ ಕುಡಿಯಲು ಹಣ ಕೊಡಲಿಲ್ಲವೆಂದು ಅಜ್ಜಿಯನ್ನು ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ.

    ಜಿಲ್ಲೆಯ ಭದ್ರಾವತಿಯ ತಾಸ್ಕೆಂಟ್ ನಗರದಲ್ಲಿ ಘಟನೆ ನಡೆದಿದ್ದು, ಕೊಲೆಯಾದವರನ್ನು ಕಿಟ್ಟಮ್ಮ (75) ಎಂದು ಗುರುತಿಸಲಾಗಿದೆ. ಅರುಣ್ ಕುಮಾರ್ (28) ಹತ್ಯೆಗೈದ ಆರೋಪಿ. ಅರುಣ್ ಕುಮಾರ್ ಗಾರೆ ಕೆಲಸ ಮಾಡುತ್ತಿದ್ದನು. ಕೊರೊನಾದಿಂದಾಗಿ ಕೆಲಸ ಸಿಗದ ಕಾರಣ ಮನೆಯಲ್ಲಿಯೇ ಇರುತ್ತಿದ್ದ. ಮದ್ಯವ್ಯಸನಿಯಾಗಿದ್ದ ಆರೋಪಿ, ಕುಡಿಯಲು ಹಣ ನೀಡುವಂತೆ ಪ್ರತಿನಿತ್ಯ ತನ್ನ ಅಜ್ಜಿಯನ್ನು ಪೀಡಿಸುತ್ತಿದ್ದ.

    ಅದೇ ರೀತಿ ಇಂದು ಸಹ ತನ್ನ ಅಜ್ಜಿಗೆ ಹಣ ನೀಡುವಂತೆ ಪೀಡಿಸಿದ್ದಾನೆ. ಹಣ ನೀಡದಿದ್ದಾಗ ಕುಡುಗೋಲಿನಿಂದ ಹೊಡೆದು ಹತ್ಯೆಗೈದಿದ್ದಾನೆ. ಘಟನೆ ಬಳಿಕ ಹೊಸಮನೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಹೊಸಮನೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಟಿಪ್ಪರ್ ಹರಿದು ತಾತ-ಮೊಮ್ಮಗ ಅಪ್ಪಚ್ಚಿ- ಬೈಕ್ ಪೀಸ್ ಪೀಸ್

    ಟಿಪ್ಪರ್ ಹರಿದು ತಾತ-ಮೊಮ್ಮಗ ಅಪ್ಪಚ್ಚಿ- ಬೈಕ್ ಪೀಸ್ ಪೀಸ್

    – ಮರಕ್ಕೆ ಡಿಕ್ಕಿಹೊಡೆದು ಟಿಪ್ಪರ್ ನಜ್ಜುಗುಜ್ಜು

    ಚಿಕ್ಕಮಗಳೂರು: ಬೈಕ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ತಾತ, ಮೊಮ್ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಬೀರೂರು ಬಳಿ ನಡೆದಿದೆ.

    ಬೀರೂರು ಸಮೀಪದ ಬಳಿಗನೂರು ಗ್ರಾಮದ ಮಲ್ಲಪ್ಪ (57) ಹಾಗೂ ಉತ್ಸವ್ (12) ಮೃತ ದುರ್ದೈವಿಗಳು. ಕಡೂರು-ಬೀರೂರು ಮಧ್ಯದ ಪರ್ಲ್ಸ್ ಕ್ಲಬ್ ಸಮೀಪದ ರಂಗನಾಥ್ ಶೋಂ ರೂಂ ಬಳಿ ಈ ಅಪಘಾತ ಸಂಭವಿಸಿದೆ.

    ಬೀರೂರಿನಿಂದ ಕಡೂರು ಕಡೆ ವೇಗವಾಗಿ ಬರುತ್ತಿದ್ದ ಟಿಪ್ಪರ್ ಕಡೂರಿನಿಂದ ಬೀರೂರು ಕಡೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ವೇಗವಾಗಿದ್ದ ಟಿಪ್ಪರ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೇಗವಾಗಿದ್ದ ಟಿಪ್ಪರ್ ಬೈಕಿಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಸ್ತೆಯ ಬದಿಯ ಮರಕ್ಕೆ ಟಿಪ್ಪರ್ ಅದೇ ವೇಗದಲ್ಲಿ ಅಪ್ಪಳಿಸಿದೆ.

    ಲಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್‌ಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಬೀರೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಜ್ಜಿಯ ಹಗ್ ಮಾಡಲು ಪ್ಲಾಸ್ಟಿಕ್ ಪರದೆ ಆವಿಷ್ಕಾರ- ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

    ಅಜ್ಜಿಯ ಹಗ್ ಮಾಡಲು ಪ್ಲಾಸ್ಟಿಕ್ ಪರದೆ ಆವಿಷ್ಕಾರ- ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

    ನವದೆಹಲಿ: ಈ ಹಿಂದೆ ಕ್ಯಾಲಿಫೋರ್ನಿಯಾದ 10 ವರ್ಷದ ಬಾಲಕಿ ಪೈಜ್ ತನ್ನ ಅಜ್ಜನನ್ನು ಹಗ್ ಮಾಡಲು ಪ್ಲಾಸ್ಟಿಕ್ ಪರದೆ ತಯಾರಿಸಿದ್ದಳು. ಈ ಮೂಲಕ ಸಾಮಾಜಿಕ ಅಂತರ ನಿಯಮ ಪಾಲಿಸಿ ತನ್ನ ಅಜ್ಜನನ್ನು ಬಿಗಿದಪ್ಪಿದ್ದಳು. ಈ ಬಾಲಕಿಯಿಂದ ಸ್ಪೂರ್ತಿ ಹೊಂದಿ ಇಂಗ್ಲೆಂಡ್‍ನ ವ್ಯಕ್ತಿಯೊಬ್ಬರು ಅದೇ ರೀತಿಯ ಪರದೆ ತಯಾರಿಸಿ ತನ್ನ ಅಜ್ಜಿಯನ್ನು ತಬ್ಬಿಕೊಂಡು ಸಂತಸ ಪಟ್ಟಿದ್ದಾರೆ. ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಆಂಟೋನಿ ಕವಿನ್ ಈ ಪ್ಲಾಸ್ಟಿಕ್ ಹಾಳೆಯ ಕರ್ಟನ್‍ನ್ನು ತಮ್ಮ ಅಜ್ಜ, ಅಜ್ಜಿ ಇರುವ ಮನೆಯಲ್ಲಿ ಅಳವಡಿಸಿದ್ದು, ಈ ಸೆಟಪ್ ನೋಡಿ ಆಂಟೋನಿ ಅಜ್ಜಿ ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ ಕಣ್ಣೀರು ಹಾಕುವ ಮೂಲಕ ಭಾವನಾತ್ಮಕವಾಗಿ ಆಟೋನಿಯವರನ್ನು ಬಿಗಿದಪ್ಪಿದ್ದಾರೆ. ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಿರಿಯಮ್ ಕಾವಿನ್ ಎಂಬ ಫೇಸ್ಬುಕ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 5.4 ಮಿಲಿಯನ್ ವೀವ್ಸ್ ಪಡೆದಿದೆ. 78 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಅಲ್ಲದೆ ಎರಡುಲಕ್ಷದಷ್ಟು ಜನ ಶೇರ್ ಮಾಡಿದ್ದಾರೆ.

    ಉದ್ಯಮಿ ಆನಂದ್ ಮಹೀಂದ್ರಾ ಸಹ ಈ ವಿಡಿಯೋ ಟ್ವೀಟ್ ಮಾಡಿದ್ದು, ಈ ಡಿವೈಸ್ ತಯಾರಿಸಲು ನೋಬೆಲ್ ಪುರಸ್ಕೃತರೇ ಆಗಬೇಕಿಲ್ಲ. ತಮ್ಮ ಕುಟುಂಬಸ್ಥರನ್ನು ಮಿಸ್ ಮಾಡಿಕೊಳ್ಳುತ್ತಿರುವವರೇ ಸಾಕು. ಈ ಆವಿಷ್ಕಾರವೂ ಜೀವನವನ್ನು ಬದಲಾಯಿಸುವಂಥದ್ದಾಗಿದೆ. ನಾವೆಲ್ಲರೂ ಕಾಯುತ್ತಿರುವ ಕೊರೊನಾ ಲಸಿಕೆಯಷ್ಟೇ ಮುಖ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ.

  • ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ: ಜಗ್ಗೇಶ್

    ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ: ಜಗ್ಗೇಶ್

    – ನನ್ನ ತಾತನೇ ನನಗೆ ಮೊಮ್ಮಗನಾಗಿ ಹುಟ್ಟಿದ್ದಾನೆ

    ಬೆಂಗಳೂರು: ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ. ಅದಕ್ಕೆ ನನ್ನ ತಾತನೇ ನನ್ನ ಮೊಮ್ಮಗನಾಗಿ ಹುಟ್ಟಿದ್ದಾನೆ ಎಂದು ನವರಸ ನಾಯಕ ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.

    ರಾಯರ ಭಕ್ತರಾದ ಜಗ್ಗೇಶ್ ಅವರು ಸದಾ ಆಧ್ಯಾತ್ಮದ ಬಗ್ಗೆ ಮಾತನಾಡುತ್ತಿರುತ್ತಾರೆ. ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸದಾ ಸಕ್ರಿಯವಾಗಿ ಇರುವ ಅವರು, ತಮ್ಮ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಅವರು ಟ್ವೀಟ್‍ಗಳಿಗೆ ಉತ್ತರ ನೀಡುತ್ತಾರೆ. ಕೆಲವೊಮ್ಮೆ ಟ್ವಿಟ್ಟರ್ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತಾರೆ, ಧೈರ್ಯ ತುಂಬುತ್ತಾರೆ.

    ಈಗ ಜಗ್ಗೇಶ್ ಅವರ ಪತ್ನಿ ಪರಿಮಳಾ ಜಗ್ಗೇಶ್ ಅವರು, ತಮ್ಮ ಮುದ್ದಿನ ಮೊಮ್ಮಗ ಜಗ್ಗೇಶ್ ಅವರ ಬೆನ್ನು ಏರಿ ಮಸಾಜ್ ಮಾಡುತ್ತಿರುವ ಕ್ಯೂಟ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಅಭಿಮಾನಿಯೋರ್ವ ಜಗ್ಗೇಶ್ ಅವರಿಗೆ ಟ್ಯಾಗ್ ಮಾಡಿ, ತಾತನಾಗಿ ಒಳ್ಳೆಯ ಅನುಭವ ಅಲ್ವೇ ಸರ್ ಎಂದು ಕಮೆಂಟ್ ಮಾಡಿದ್ದರು.

    ಇದಕ್ಕೆ ಟ್ವಿಟ್ಟರ್ ಮೂಲಕವೇ ಉತ್ತರ ನೀಡಿರುವ ಜಗ್ಗೇಶ್, ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ. ನನ್ನ ತಾತನಿಗೆ ನಾನು ಹೀಗೆ ಬೆನ್ನ ಏರಿ ಮಸಾಜ್ ಮಾಡುತ್ತಿದ್ದೆ. ತಾತನಿಗೆ ಸ್ನಾನಕ್ಕೆ ನೀರು ಕಾಯಿಸುತ್ತಿದ್ದೆ. ಅವರ ಉಗುರು ಕತ್ತರಿಸುತ್ತಿದ್ದೆ. ವಾಕಿಂಗ್‍ಗೆ ಸಹಾಯ ಮಾಡುತ್ತಿದ್ದೆ. ಆಗ ಅವರು ನನಗೆ ಪ್ರೀತಿಯಿಂದ ಮುಂದೆ ನಿನ್ನ ಮೊಮ್ಮಗನಾಗಿ ಹುಟ್ಟಿ ಋಣ ತೀರಿಸುವೆ ಅನ್ನುತ್ತಿದ್ದರು ಎಂದು ತನ್ನ ತಾತನನ್ನು ನೆನೆದಿದ್ದಾರೆ.

    ಇದರ ಜೊತೆ ತನ್ನ ಮುದ್ದಿನ ಮೊಮ್ಮಗನ ಬಗ್ಗೆಯೂ ಟ್ವೀಟ್ ಮಾಡಿರುವ ಜಗ್ಗೇಶ್, ನನ್ನ ಪುಟಾಣಿ ಅರ್ಜುನ ಮಾಸ್ಕ್ ಹಾಕಿ ಅಜ್ಜಿಗೆ ಕೊಟ್ಟ ಪೋಸ್ ಇದು. ನಾನು ಬೇಕಂತ ಮಾಸ್ಕ್ ಇಲ್ಲದಂತೆ ನಟಿಸಿದರೆ, ತಾತ ಮಾಸ್ಕ್ ಇಲ್ಲದಿದ್ದರೆ ನನ್ನ ಹತ್ತರ ಬರಬೇಡಿ. ಕೊರೊನಾ ಇದೆ ಬುದ್ಧಿ ಇಲ್ವಾ ಎಂದು ಕ್ಲಾಸ್ ತೆಗೆದುಕೊಂಡ. ಆಗ ನಾನು ಸ್ವಾರಿ ಮಗನೆ ತಪ್ಪಾಯ್ತು ಅಂದೆ, ಪರವಾಗಿಲ್ಲ ಹುಷಾರಾಗಿ ಇರು ಎಂದು ಬಿದ್ಧಿ ಹೇಳಿದ. ಬಹಳ ಚೂಟಿ ನನ್ನ ಮೊಮ್ಮಗ ಎಂದು ಬರೆದುಕೊಂಡಿದ್ದಾರೆ.

    ಇದರ ಜೊತೆಗೆ ದಿವಂಗತ ಕಾಶಿನಾಥ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಜಗ್ಗೇಶ್, ಉಪೇಂದ್ರ ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿ, ನಿಮ್ಮ ಇವರ ಹಾಗೂ ಮನೋಹರ್ ಅವರ ಒಡನಾಟವನ್ನು ಹತ್ತಿರದಿಂದ ಕಂಡಿರುವೆ. ಅವರಂತೆ ನೀವು ನಟ ನಿರ್ದೇಶಕನಾಗಿ ಅವರ ಹೆಸರು ಉಳಿಸಿದ್ದೀರಿ. ನಮ್ಮ ನಿಮ್ಮ ಆ ದಿನಗಳು ಚಿತ್ರೀಕರಣದ ನಡುವೆ ವಿದ್ಯಾರ್ಥಿ ಭವನದ ದೋಸೆ. ನಾನು ಕಾಶಿನಾಥ್ ನಟಿಸಿದ ಮನ್ಮಥರಾಜ ಸಿನಿಮಾ ಮರೆಯಲಾಗದ ನೆನಪುಗಳು. ಕಾಶಿರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.

  • ಅಜ್ಜನ ಹತ್ಯೆಗೈದಿದ್ದ ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

    ಅಜ್ಜನ ಹತ್ಯೆಗೈದಿದ್ದ ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

    ಶಿವಮೊಗ್ಗ: ತನ್ನ ಅಜ್ಜನನ್ನೇ ಕೊಲೆ ಮಾಡಿದ್ದ ಅಪರಾಧಕ್ಕಾಗಿ ಸಾತ್ವಿಕ್‍ಗೆ 5ನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ ಘಟನೆ ನಡೆದಿತ್ತು. ತನ್ನ ಅಜ್ಜ ರಾಮರಾವ್ ಅವರನ್ನು ಸಾತ್ವಿಕ್ ಕೊಲೆ ಮಾಡಿದ್ದ. ಈ ಸಂಬಂಧ ರಾಮರಾವ್ ಪತ್ನಿ ಬಂಗಾರಮ್ಮ ಮೊಮ್ಮಗ ಸಾತ್ವಿಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

    ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಸಾತ್ವಿಕ್ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶೋಭಾ, ಆರೋಪಿ ಸಾತ್ವಿಕ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ್ ವಾದಿಸಿದ್ದರು.

    ಸಾತ್ವಿಕ್ ಪೋಲಿ ಹುಡುಗರ ಸಹವಾಸ ಮಾಡಿ ಪ್ರತಿನಿತ್ಯ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ. ದುಶ್ಚಟ ಹಾಗೂ ದುಷ್ಟ ಸ್ನೇಹಿತರ ಸಹವಾಸ ಕೈ ಬಿಡುವಂತೆ ಅಜ್ಜ ರಾಮರಾವ್ ಮೊಮ್ಮಗನಿಗೆ ಬುದ್ಧಿ ಮಾತು ಹೇಳಿದ್ದರು. ಮಾತು ಕೇಳದ ಸಾತ್ವಿಕ್ 2018ರ ಮೇ 9 ರಂದು ಎಂದಿನಂತೆ ಕುಡಿದು ಮನೆಗೆ ಬಂದಾದಿದ್ದಾನೆ. ಆಗ ಅಜ್ಜ ರಾಮರಾವ್ ಮೊಮ್ಮಗನಿಗೆ ಬುದ್ಧಿಮಾತು ಹೇಳಿದ್ದಾರೆ. ಇದರಿಂದ ಕೆರಳಿದ ಸಾತ್ವಿಕ್ ಹರಿತವಾದ ವಸ್ತುವಿನಿಂದ ತನ್ನ ಅಜ್ಜನ ತಲೆಗೆ ಹೊಡೆದಿದ್ದ. ಪರಿಣಾಮ ರಾಮರಾವ್ ಮೃತಪಟ್ಟಿದ್ದರು.

  • ಮೊಮ್ಮಗನ ಮದುವೆಗೆ ಬೆಂಗ್ಳೂರಿಗೆ ಬಂದ ರಜನಿಕಾಂತ್ – ನೋಡಲು ಮುಗಿಬಿದ್ದ ಅಭಿಮಾನಿಗಳು

    ಮೊಮ್ಮಗನ ಮದುವೆಗೆ ಬೆಂಗ್ಳೂರಿಗೆ ಬಂದ ರಜನಿಕಾಂತ್ – ನೋಡಲು ಮುಗಿಬಿದ್ದ ಅಭಿಮಾನಿಗಳು

    ಬೆಂಗಳೂರು: ಮೊಮ್ಮಗನ ಮದುವೆಗೆ ಬಂದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    ಇಂದು ಸಿಲಿಕಾನ್ ಸಿಟಿಯ ಸಹಕಾರ ನಗರದ ರಾಧಕೃಷ್ಣ ಕಲ್ಯಾಣ ಮಂಟಪದಲ್ಲಿ ಸಹೋದರನ ಪುತ್ರಿಯ ಮಗನ ಮದುವೆಗೆ ರಜನಿಕಾಂತ್ ಅವರು ಬಂದಿದ್ದರು. ಈ ವೇಳೆ ಅವರನ್ನು ನೋಡಲು ಸಾವಿರಾರು ಜನ ಅಭಿಮಾನಿಗಳು ಬಂದಿದ್ದು, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.

    ರಜನಿಕಾಂತ್ ಸಹೋದರ ಸತ್ಯ ನಾರಾಯಣ್ ಅವರ ಮಗಳ ಮಗ ಎಂದರೆ ರಜನಿಕಾಂತ್ ಅವರ ಮೊಮ್ಮಗನ ಮದುವೆ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಬಂದ ರಜನಿಕಾಂತ್ ಅವರನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದಲ್ಲದೇ ಅವರು ಕಾರಿನಲ್ಲಿ ಹೋಗುವಾಗ ಅವರನ್ನು ಬೈಕಿನಲ್ಲಿ ಫಾಲೋ ಮಾಡಿಕೊಂಡು ಹೋಗಿ ತಲೈವಾ ತಲೈವಾ ಎಂದು ಘೋಷಣೆ ಕೂಗಿದ್ದಾರೆ.

  • ಅಜ್ಜಿ ಧರಿಸಿದ್ದ ಒಳಉಡುಪಿನಿಂದ ಹಣ ದೋಚಿದ್ದ ಮೊಮ್ಮಗ ಅರೆಸ್ಟ್

    ಅಜ್ಜಿ ಧರಿಸಿದ್ದ ಒಳಉಡುಪಿನಿಂದ ಹಣ ದೋಚಿದ್ದ ಮೊಮ್ಮಗ ಅರೆಸ್ಟ್

    ವಾಷಿಂಗ್ಟನ್: ಅಜ್ಜಿಯ ಮೇಲೆ ಹಲ್ಲೆ ನಡೆಸಿ, ಆಕೆಯ ಒಳಉಡುಪಿನಿಂದ 10 ಡಾಲರ್(710.69 ರೂ.) ದೋಚಿದ್ದ ಮೊಮ್ಮಗನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

    ಟೆನ್ನೆಸ್ಸೀ ನಿವಾಸಿ ಜ್ಯಾರೀಡ್ ಒಟ್ಟೆ(19) ಕೃತ್ಯವೆಸೆಗಿದ ಆರೋಪಿ. ಜ್ಯಾರೀಡ್ ಸೆಪ್ಟೆಂಬರ್ ನಲ್ಲಿ ತನ್ನ ಅಜ್ಜಿ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದನು. ಏಕಾಏಕಿ ಅಜ್ಜಿ ಮನೆಗೆ ನುಗ್ಗಿದ ಆರೋಪಿ ಆಕೆಯ ಬಳಿ ಮೊದಲು ಹಣ ಕೇಳಿದ್ದ. ಆದರೆ ಅಜ್ಜಿ ಹಣ ಕೊಡಲು ನಿರಾಕರಿದಾಗ ಹಲ್ಲೆ ನಡೆಸಿ, ಅಜ್ಜಿಯನ್ನು ದೂಡಿ ಹಾಸಿಗೆಯ ಮೇಲೆ ಬೀಳಿಸಿ, ಅಜ್ಜಿ ಧರಿಸಿದ್ದ ಒಳಉಡುಪಿನಲ್ಲಿ ಇಟ್ಟಿದ್ದ 10 ಡಾಲರ್(710.69 ರೂ.) ಹಣವನ್ನು ಕಿತ್ತುಕೊಂಡು ಹೋಗಿದ್ದನು. ಹಲ್ಲೆಯಿಂದ ಅಜ್ಜಿಯ ಮೈಮೇಲೆ ಗಾಯಗಳು ಕೂಡ ಆಗಿದ್ದವು.

    ಮೊಮ್ಮಗನ ಅಟ್ಟಹಾಸವನ್ನು ಸಹಿಸದ ಅಜ್ಜಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ನನ್ನ ಮೇಲೆ ಜ್ಯಾರೀಡ್ ಹಲ್ಲೆ ನಡೆಸಿದ್ದಾನೆ. ಜೊತೆಗೆ ನನ್ನ ಬಳಿ ಇದ್ದ 10 ಡಾಲರ್ ಹಾಣವನ್ನು ದೋಚಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಮಂಗಳವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನಿವೃತ್ತಿ ಹಣಕ್ಕಾಗಿ ಮೊಮ್ಮಗನಿಂದಲೇ ಚಾಕು ಇರಿದು ಅಜ್ಜಿಯ ಬರ್ಬರ ಕೊಲೆ

    ನಿವೃತ್ತಿ ಹಣಕ್ಕಾಗಿ ಮೊಮ್ಮಗನಿಂದಲೇ ಚಾಕು ಇರಿದು ಅಜ್ಜಿಯ ಬರ್ಬರ ಕೊಲೆ

    ಬೀದರ್: ನಿವೃತ್ತಿ ಹಣಕ್ಕಾಗಿ ಸ್ವತಃ ಮೊಮ್ಮಗನೇ ತನ್ನ ಅಜ್ಜಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಕೊಲೆಯಾದ ಅಜ್ಜಿಯನ್ನು ಲೀಲಾವತಿ (62) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಮೊಮ್ಮಗ ಆಕಾಶ್ (21) ನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕಣಜಿ ಬಿಸಿಎಂ ಹಾಸ್ಟೆಲಿನಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಸುತ್ತಿದ್ದ ಲೀಲಾವತಿ ಕೆಲ ದಿನಗಳ ಹಿಂದೆ ನಿವೃತ್ತಿ ಹೊಂದಿದ್ದು, ನಿವೃತ್ತಿಯ ನಂತರ 6 ಲಕ್ಷ ರೂ. ಹಣ ಬಂದಿತ್ತು. ಈ ಹಣದ ಮೇಲೆ ಕಣ್ಣಿಟ್ಟಿದ್ದ ಮೊಮ್ಮಗ ಆಕಾಶ್ ನನಗೆ ಅ ಹಣ ಕೊಡು ಎಂದು ಹಲವು ತಿಂಗಳಿನಿಂದ ಅಜ್ಜಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. ಹಣ ಕೊಡಲು ನಿರಾಕರಿಸಿದ ಅಜ್ಜಿಯನ್ನು ಆಕಾಶ್ ಇಂದು ಕೊಲೆ ಮಾಡಿದ್ದಾನೆ.

    ಈ ಸಂಬಂಧ ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.