Tag: grandmother

  • ತುರ್ತು ಔಷಧಕ್ಕಾಗಿ 15 ಕಿ.ಮೀ. ನಡೆದ ಅಜ್ಜಿ

    ತುರ್ತು ಔಷಧಕ್ಕಾಗಿ 15 ಕಿ.ಮೀ. ನಡೆದ ಅಜ್ಜಿ

    ಮಂಗಳೂರು: ತುರ್ತು ಔಷಧಕ್ಕಾಗಿ ವೃದ್ಧೆಯೊಬ್ಬರು ಬರೋಬ್ಬರಿ 15 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

    ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶ ಕೊಲ್ಲಮೊಗ್ರು ಗ್ರಾಮದ ಅಜ್ಜಿ ಬರೋಬ್ಬರಿ 15 ಕಿ.ಮೀ. ನಡೆದುಕೊಂಡು ಬಂದಿದ್ದಾರೆ. ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ವಾಹನದ ವ್ಯವಸ್ಥೆ ಸಂಪೂರ್ಣ ಸ್ತಬ್ಧಗೊಂಡಿದೆ. ಔಷಧಿ ಮುಗಿದ ಪರಿಣಾಮ ಅಜ್ಜಿ ಕೊಲ್ಲಮೊಗ್ರು ಗ್ರಾಮದಿಂದ 15 ಕಿ.ಮೀ. ದೂರದಲ್ಲಿರುವ ಗತ್ತಿಗಾರಿಗೆ ಬಂದಿದ್ದಾರೆ.

    ಕಾಲ್ನಡಿಗೆಯಲ್ಲಿ ಬಂದಿದ್ದರಿಂದ ತುಂಬಾ ಬಳಲಿದ್ದ ಸ್ಥಿತಿಯಲ್ಲಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ಔಷಧಕ್ಕಾಗಿ ಬಂದಿರುವ ವಿಷಯ ತಿಳಿದು ಬಂದಿದೆ. ಬಳಿಕ ಗ್ರಾ.ಪಂ ಅಧ್ಯಕ್ಷ, ಪಿಡಿಒ ಹಾಗೂ ತುರ್ತು ಕಾರ್ಯಪಡೆ ಸದಸ್ಯರು ಸ್ಥಳಕ್ಕೆ ಆಗಮಿಸಿ ವೃದ್ಧೆಗೆ ಸೂಕ್ತ ಔಷಧದ ವ್ಯವಸ್ಥೆ ಮಾಡಿ ಖಾಸಗಿ ವಾಹನದಲ್ಲಿ ಮನೆಗೆ ಕಳುಹಿಸಿದ್ದಾರೆ.

  • ಹಜ್ ಯಾತ್ರೆಗೆ ಕೂಡಿಟ್ಟಿದ್ದ 5 ಲಕ್ಷ ರೂ. ದೇಣಿಗೆ ನೀಡಿದ ಅಜ್ಜಿ

    ಹಜ್ ಯಾತ್ರೆಗೆ ಕೂಡಿಟ್ಟಿದ್ದ 5 ಲಕ್ಷ ರೂ. ದೇಣಿಗೆ ನೀಡಿದ ಅಜ್ಜಿ

    ಶ್ರೀನಗರ: ಕೊರೊನಾ ವೈರಸ್‍ನಿಂದ ಜಗತ್ತಿನಾದ್ಯಂತ ಹಲವಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಅನೇಕರು ಹಣದ ಸಹಾಯ ಮಾಡುತ್ತಿದ್ದಾರೆ. ಇದೀಗ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಹಜ್ ತೀರ್ಥಯಾತ್ರೆಗಾಗಿ ಕೂಡಿಟ್ಟಿದ್ದ 5 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.

    ಖಲೀದಾ ಬೇಗಂ (87) ಹಜ್ ತೀರ್ಥಯಾತ್ರೆಗಾಗಿ ಕೂಡಿಟ್ಟಿದ್ದ 5 ಲಕ್ಷ ರೂ. ಹಣವನ್ನು ಆರ್‌ಎಸ್‌ಎಸ್ ಅಂಗಸಂಸ್ಥೆಯಾದ ‘ಸೇವಾ ಭಾರತಿ’ಗೆ ದೇಣಿಗೆಯಾಗಿ ನೀಡಿದ್ದಾರೆ. ಕೊರೊನಾ ಭೀತಿಯಿಂದ ಲಾಕ್‍ಡೌನ್ ಆಗಿರುವ ಕಾರಣ ಹಜ್ ತೀರ್ಥಯಾತ್ರೆಯನ್ನು ಮುಂದಾಡಲಾಗಿದೆ. ಮುಸ್ಲಿಮರ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ವಾರ್ಷಿಕ ಹಜ್ ತೀರ್ಥಯಾತ್ರೆ ನಡೆಯುತ್ತದೆ.

    ಕೊರೊನಾ ವೈರಸ್‍ನಿಂದ ಅನೇಕ ಕೂಲಿ ಕಾರ್ಮಿಕರು, ದಿನಗೂಲಿ ಕೆಲಸಗಾರರು ಮಾಡಲು ಊಟವಿಲ್ಲದೆ ಪರದಾಡುತ್ತಿದ್ದರು. ಇಂತಹ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವಾ ಭಾರತಿ ಕಾರ್ಮಿಕರ ನೆರವಿಗೆ ಧಾವಿಸಿದೆ. ಅವರಿಗೆ ಊಟ, ನೀರು, ಆಶ್ರಯ ನೀಡಿದೆ. ಇದನ್ನು ನೋಡಿದ ಖಲೀದಾ ಬೇಗಂ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ ಸಂಸ್ಥೆಗೆ 5 ಲಕ್ಷ ರೂ. ದೇಣಿಗೆ ನೀಡಲು ನಿರ್ಧರಿಸಿದ್ದರು ಎಂದು RSS ಮಾಧ್ಯಮ ವಿಭಾಗ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದ ಮುಖ್ಯಸ್ಥ ಅರುಣ್ ಆನಂದ್ ಹೇಳಿದರು.

    ಈ ಹಣವನ್ನು ಸಂಸ್ಥೆ ಜಮ್ಮು ಮತ್ತು ಕಾಶ್ಮೀರದ ಬಡವರಿಗೆ ಮತ್ತು ನಿರ್ಗತಿಕರಿಗಾಗಿ ಬಳಸಬೇಕೆಂದು ಖಲೀದಾ ಬೇಗಂ ಜೀ ಬಯಸಿದ್ದಾರೆ. ಹಜ್ ಯಾತ್ರೆಗಾಗಿ ಈ ಹಣವನ್ನು ಉಳಿಸಿಕೊಂಡಿದ್ದರು. ಆದರೆ ಪ್ರಸ್ತುತ ಕೊರೊನಾ ಸೋಂಕಿನ ಪರಿಸ್ಥಿತಿಯಿಂದಾಗಿ ಯಾತ್ರೆ ಮುಂದೂಡಲಾಗಿದೆ ಎಂದು ಅರುಣ್ ಆನಂದ್ ಹೇಳಿದರು.

    ಖಲೀದಾ ಬೇಗಂ ಜೀ ಜಮ್ಮು ಮತ್ತು ಕಾಶ್ಮೀರದ ಇಂಗ್ಲಿಷ್ ಮಾಧ್ಯಮದಲ್ಲಿ ಕಾನ್ವೆಂಟ್ ಶಿಕ್ಷಣ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಜನ ಸಂಘದ ಅಧ್ಯಕ್ಷರಾಗಿದ್ದ ಕರ್ನಲ್ ಪೀರ್ ಮೊಹಮ್ಮದ್ ಖಾನ್ ಅವರ ಸೊಸೆಯಾಗಿದ್ದಾರೆ. ಇವರ ಮಗ ನಿವೃತ್ತ ಐಪಿಎಸ್ ಅಧಿಕಾರಿ ಫಾರೂಕ್ ಖಾನ್ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕೂಡ ಜಮ್ಮು ಮತ್ತು ಕಾಶ್ಮೀರದ ಮಹಿಳೆಯರ ಸುಧಾರಣೆ, ದೀನ ದಲಿತರಿಗೆ ಕಲ್ಯಾಣ ಕಾರ್ಯಗಳಲ್ಲಿ ತುಂಬಾ ಸಕ್ರಿಯರಾಗಿದ್ದರು ಎಂದು ಅರುಣ್ ಆನಂದ್ ತಿಳಿಸಿದರು.

    ಕೊರೊನಾದಿಂದ ಲಾಕ್‍ಡೌನ್ ಘೋಷಿಸಿದಾಗಿನಿಂದ ದೇಶಾದ್ಯಂತ ಸೇವಾ ಭಾರತಿ ಸ್ವಯಂಸೇವಕರು ಅಗತ್ಯವಿರುವವರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದಾರೆ.

  • ಒಂದೇ ತಿಂಗಳಲ್ಲಿ 3 ಸಾವು – ಸೂತಕ ಛಾಯೆಯಲ್ಲಿ ರವಿ ಕುಟುಂಬ

    ಒಂದೇ ತಿಂಗಳಲ್ಲಿ 3 ಸಾವು – ಸೂತಕ ಛಾಯೆಯಲ್ಲಿ ರವಿ ಕುಟುಂಬ

    ಬಳ್ಳಾರಿ: ಜಿಲ್ಲೆಯ ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿ ವಿಐಪಿ ಮಗನ ಕಾರು ಅಪಘಾತ ಪ್ರಕರಣದ ಘಟನೆಯಲ್ಲಿ ರವಿನಾಯಕ್ ಮೃತಪಟ್ಟಿದ್ದನು. ಆದರೆ ರವಿನಾಯಕ್ ಸಾವಿಗೀಡಾದ 10 ದಿನದಲ್ಲೇ ಆತನ ಅಜ್ಜಿ ಕೂಡ ಸಾವನ್ನಪ್ಪಿದ್ದಾರೆ.

    ಕೊಟ್ರಿಬಾಯಿ (65) ಮೃತ ರವಿ ಅಜ್ಜಿ. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಫೆಬ್ರವರಿ 10 ರಂದು ರವಿ ನಾಯಕ್ ಸಾವಿನ ನಂತರ ಅಜ್ಜಿ ಕೊಟ್ರಿಬಾಯಿ ಹಾಸಿಗೆ ಹಿಡಿದಿದ್ದರು. ಕೊನೆಗೆ ಮೊಮ್ಮಗನ ದುಃಖದಲ್ಲಿ ಕೊರಗಿ ಕೊರಗಿ ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಕಾರು ಅಪಘಾತ ಮಾಡಿದ್ದ ಆರೋಪಿ ಅರೆಸ್ಟ್ – ನ್ಯಾಯಾಲಯದಿಂದ ಜಾಮೀನು

    ಒಂದು ತಿಂಗಳ ಹಿಂದೆ ಮಂಜುನಾಯಕ್ (24) ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದ. 15 ದಿನದ ನಂತರ 16 ವರ್ಷದ ರವಿನಾಯಕ್ ಕೂಡ ಕಾರು ಅಪಘಾತದಲ್ಲಿ ಮೃತಪಟ್ಟಿದ್ದನು. ಹೀಗಾಗಿ ಒಂದೇ ಕುಟುಂಬದಲ್ಲಿ 1 ತಿಂಗಳ ಅವಧಿಯಲ್ಲಿ ಮೂರು ಜನ ಸಾವಿಗೀಡಾಗಿದ್ದಾರೆ. ಸಾವಿನ ಮೇಲೆ ಸಾವು ಕಂಡು ರವಿ ನಾಯಕ್ ಕುಟುಂಬ ಆತಂಕಕ್ಕೆ ಒಳಗಾಗಿದ್ದಾರೆ. ಮನೆಯಲ್ಲಿ ಆಕ್ರಂದ ಮುಗಿಲು ಮುಟ್ಟಿದೆ.

    ಆಕಾಶ ತಲೆಯ ಮೇಲೆ ಬಿದ್ದಾಂಗಿದೆ ಎನ್ನುತ್ತಾರೆ ಕುಟುಂಬದವರು. ರವಿ ನಾಯಕ್ ಮನೆಯಲ್ಲಿ ಸಾವಿನ ಮೇಲೆ ಸಾವನ್ನು ಕಂಡು ಕುಟುಂಬದವರು ಆತಂಕಗೊಂಡು ಸ್ವಂತ ಮನೆ ಬಿಟ್ಟು ಬೇರೆ ಮನೆಯಲ್ಲಿ ವಾಸಮಾಡಿದ್ದಾರೆ. ಮನೆಯ ಸದಸ್ಯರು ಸೂತಕದ ಛಾಯೆಯಲ್ಲಿ ಜೀವನ ನಡೆಸುತ್ತಿದ್ದಾರೆ.

  • ಯುವಕರನ್ನು ನಾಚಿಸುವಂತೆ ಟಿಕ್‍ಟಾಕ್‍ನಲ್ಲಿ ಅಜ್ಜಿ ಫುಲ್ ಮಿಂಚಿಂಗ್

    ಯುವಕರನ್ನು ನಾಚಿಸುವಂತೆ ಟಿಕ್‍ಟಾಕ್‍ನಲ್ಲಿ ಅಜ್ಜಿ ಫುಲ್ ಮಿಂಚಿಂಗ್

    ಬೆಳಗಾವಿ: ಯುವಕರು, ವೃದ್ಧರು ಎಂಬ ಬೇಧವಿದ್ದದೆ ಎಲ್ಲರೂ ಟಿಕ್‍ಟಾಕ್ ವಿಡಿಯೋ ಮಾಡವುದು ಒಂದು ರೀತಿ ಟ್ರೆಂಡ್ ಆಗಿಬಿಟ್ಟಿದೆ. ಹಾಗೆಯೇ ಬೈಲಹೊಂಗಲದ ಅಜ್ಜಿಯೊಬ್ಬರು ಟಿಕ್‍ಟಾಕ್ ವಿಡಿಯೋ ಮಾಡುವುದರ ಮೂಲಕ ಸಖತ್ ಫೇಮಸ್ ಆಗಿಬಿಟ್ಟಿದ್ದಾರೆ.

    ಯುವಕರು ನಾಚಿಸುವಂತೆ ಟಿಕ್‍ಟಾಕ್ ಮಾಡಿ ಬೈಲಹೊಂಗಲದ ವಕ್ಕುಂದ ಗ್ರಾಮದ ರುಕ್ಮವ್ವ(95) ಭಾರೀ ಫೇಮಸ್ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರುಕ್ಕವ್ವ ಅವರ ಟಿಕ್‍ಟಾಕ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದೆ. ಅಲ್ಲದೆ ಟಿಕ್‍ಟಾಕ್ ವಿಡಿಯೋಗಳಲ್ಲಿ ಅಜ್ಜಿಗೆ ಸಾಥ್ ನೀಡಿದ ಇಬ್ಬರೂ ಯುವಕರು ಕೂಡ ನೋಡುಗರ ಮೆಚ್ಚುಗೆ ಗಳಿಸಿದ್ದಾರೆ.

    ಟಿಕ್‍ಟಾಕ್‍ನಲ್ಲಿ ಅವರ ವಿಡಿಯೋ ಅಂದರೆ ಸಾಕು ಸಾವಿರಾರು ಲೈಕ್ಸ್, ಕಮೆಂಟ್ಸ್ ಬರುತ್ತಿದೆ. ಸಾಕಷ್ಟು ಮಂದಿ ಇವರ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಈಗ ಫೇಸ್‍ಬುಕ್ ಖಾತೆ ಇಲ್ಲದೆ ಇದ್ದರೂ ಪರವಾಗಿಲ್ಲ, ಟಿಕ್‍ಟಾಕ್ ಖಾತೆ ಮಾತ್ರ ತೆರದಿರಲೇಬೇಕು ಎನ್ನುವಂತಹ ಸ್ಥಿತಿ ಬಂದಿದೆ. ಯುವಕರಿಂದ ಇಳಿವಯಸ್ಸಿನವರೂ ಸಾಮಾಜಿಕ ಜಾಲತಾಣದಲ್ಲಿ, ಟಿಕ್‍ಟಾಕ್ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಅದರಲ್ಲೂ ರುಕ್ಕವ್ವ ಅಜ್ಜಿ ಈಗ ಟಿಕ್‍ಟಾಕ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

    ವಕ್ಕುಂದ ಗ್ರಾಮದ ನೇಕಾರಗಲ್ಲಿಯಲ್ಲಿ ಫಕ್ಕಿರಪ್ಪ ಕಾಂಬಳೆ, ಮಂಜುನಾಥ ಬುಚಡಿ ಚಕ್ಕುಂದ ಮತ್ತು ಮಾರುತಿ ಬುಚಡಿ ಅವರು ಟಿಕ್‍ಟಾಕ್‍ನಲ್ಲಿ ಫುಲ್ ಫೇಮಸ್ ಆಗುತ್ತಿದ್ದು, ಪಕ್ಕಾ ಉತ್ತರ ಕರ್ನಾಟಕದ ಭಾಷೆಯ ಸೊಗಡಿನ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಒಂದೇ ಕುಟುಂಬದಂತೆ ಅಜ್ಜಿ ರುಕ್ಮವ್ವ, ಫಕ್ಕಿರ ಕಾಂಬಳೆ, ಮಂಜುನಾಥ ಬುಚಡಿ, ಮಾರುತಿ ಬುಚಡಿ, ಮತ್ತು ಮತ್ತು ರಾಜು ಕಾಂಬಳೆ ಮಾಡಿದ ಟಿಕ್‍ಟಾಕ್ ವಿಡಿಯೋಗಳಿಗೆ ಸಾವಿರಾರು ಲೈಕ್ ಸಿಗುತ್ತಿರುತ್ತದೆ. ಆದ್ದರಿಂದ ಅಜ್ಜಿಯ ಜೊತೆ ಯುವಕರು ಟಿಕ್‍ಟಾಕ್ ಮಾಡಲು ಮುಗಿಬಿದಿದ್ದಾರೆ.

    ಪಕ್ಕಿರ ಕಾಂಬಳೆ ಟಿಕ್‍ಟಾಕ್ ಖಾತೆಯಲ್ಲಿ 1 ಲಕ್ಷ 40 ಫಾಲೋವರ್ಸ್ ಇದ್ದರೆ, ಮಂಜುನಾಥ್ ಬುಚಡಿ ಅವರಿಗೆ 55 ಸಾವಿರ ಫಾಲೋವರ್ಸ್ ಇದ್ದಾರೆ. ಮಾರುತಿ ಬುಚಡಿ 40 ಸಾವಿರ ಫಾಲೋವರ್ಸ್ ಇದ್ದಾರೆ. ಅಜ್ಜಿ ರುಕ್ಮವ್ವ ಲೋಕರಿ, ರಾಜು ಕಾಂಬಳೆ ಇತರರು ಸೇರಿ ಹೆಚ್ಚಾಗಿ ಟಿಕ್‍ಟಾಕ್ ಮಾಡುತ್ತಿರುತ್ತಾರೆ. ಯುವಕರಿಗೆ ಅಜ್ಜಿ ಹೇಳಿವ ಪಂಚಿಂಗ್ ಡೈಲಾಗ್‍ನಿಂದ ಅವರು ಟಿಕ್‍ಟಾಕ್ ಸ್ಟಾರ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಜ್ಜಿ ಟಿಕ್‍ಟಾಕ್ ಹವಾ ಜೋರಾಗಿದೆ.

  • ಚಾಕಲೇಟ್ ಹಂಚಿ ಮತದಾನ ಮಾಡಿದ ಅಜ್ಜಿ – ಚಾಕಲೇಟ್ ಹಿಂದೆ ಇದೆ ಕಥೆ

    ಚಾಕಲೇಟ್ ಹಂಚಿ ಮತದಾನ ಮಾಡಿದ ಅಜ್ಜಿ – ಚಾಕಲೇಟ್ ಹಿಂದೆ ಇದೆ ಕಥೆ

    ಚಿಕ್ಕಬಳ್ಳಾಪುರ: ಇಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಚಿಕ್ಕಬಳ್ಳಾಪುರ ನಗರದ ಮತಗಟ್ಟೆಯಲ್ಲಿ ಅಜ್ಜಿಯೊಬ್ಬರು ಚುನಾವಣಾ ಸಿಬ್ಬಂದಿಗೆ ಚಾಕಲೇಟ್ ನೀಡಿ ಬಳಿಕ ಮತದಾನ ಮಾಡಿದ್ದಾರೆ.

    ನಗರದ ಮತಗಟ್ಟೆ ಸಂಖ್ಯೆ 164ರಲ್ಲಿ ನಿವೃತ್ತ ಶಿಕ್ಷಕಿ ರಾಜಮ್ಮ(82) ಅವರು ಪ್ರತಿ ಬಾರಿ ಮತದಾನ ಮಾಡುವಾಗ ಸಿಬ್ಬಂದಿಗೆ ಚಾಕಲೇಟ್ ಕೊಟ್ಟು ಖುಷಿಪಡುತ್ತಾರೆ. ಮತದಾನಕ್ಕೆ ಬಂದಾಗ ಯಾಕೆ ಚಾಕಲೇಟ್ ಹಂಚುತ್ತೀರಾ ಎಂದು ಪ್ರಶ್ನಿಸಿದಾಗ, ಭದ್ರತಾ ನಿರತ ಪೊಲೀಸರು, ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ಚಾಕಲೇಟ್ ಹಂಚುವುದು ನನಗೆ ಅಭ್ಯಾಸವಾಗಿಬಿಟ್ಟಿದೆ. ಮತದಾನದ ದಿನ ಸಿಬ್ಬಂದಿ ಶ್ರಮಪಟ್ಟು ಕೆಲಸ ಮಾಡುತ್ತಾರೆ ಅವರಿಗೆ ಚಾಕಲೇಟ್ ಕೊಟ್ಟರೆ ನನಗೆ ಖುಷಿಯಾಗುತ್ತದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮಗನಿಗೆ ಮತಗಟ್ಟೆ ತೋರಿಸಿ ಬರ್ತ್ ಡೇ ಗಿಫ್ಟ್ ಕೊಟ್ಟ ಪೋಷಕರು

    ಹಿಂದೆ ನಾನು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಚುನಾವಣಾ ಕೆಲಸಕ್ಕೆ ಹೋಗುತ್ತಿದ್ದೆ. ಸಿಬ್ಬಂದಿ ಪಡುವ ಕಷ್ಟ ನನಗೂ ಗೊತ್ತು. ಅದಕ್ಕೆ ಪ್ರತಿ ಬಾರಿ ಮತದಾನಕ್ಕೆ ಬಂದಾಗಲೂ ಚಾಕಲೇಟ್ ಹಂಚುತ್ತೇನೆ ಎಂದು ರಾಜಮ್ಮ ಅವರು ತಿಳಿಸಿದರು. ಇದನ್ನೂ ಓದಿ: ವಾಸ್ತು ಪ್ರಕಾರ ಮತಯಂತ್ರ ತಿರುಗಿಸಿ ಮತ ಹಾಕಿದ ಜೆಡಿಎಸ್ ಅಭ್ಯರ್ಥಿ

    ಮತಗಟ್ಟೆಯಲ್ಲಿದ್ದ ಸಿಬ್ಬಂದಿಗೆ ರಾಜಮ್ಮ ಅವರು ಚಾಕಲೇಟ್ ಹಂಚಿರುವುದು ಎಲ್ಲರ ಗಮನ ಸೆಳೆದಿದ್ದು, ಸಿಬ್ಬಂದಿ ಕೂಡ ಖುಷಿಪಟ್ಟಿದ್ದಾರೆ. ಇಳಿ ವಯಸ್ಸಿನಲ್ಲೂ ರಾಜಮ್ಮ ಅವರು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಲ್ಲದೆ ಪ್ರೀತಿಯಿಂದ ಸಿಬ್ಬಂದಿಗೆ ಚಾಕಲೇಟ್ ಹಂಚಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ಅಜ್ಜಿ ಧರಿಸಿದ್ದ ಒಳಉಡುಪಿನಿಂದ ಹಣ ದೋಚಿದ್ದ ಮೊಮ್ಮಗ ಅರೆಸ್ಟ್

    ಅಜ್ಜಿ ಧರಿಸಿದ್ದ ಒಳಉಡುಪಿನಿಂದ ಹಣ ದೋಚಿದ್ದ ಮೊಮ್ಮಗ ಅರೆಸ್ಟ್

    ವಾಷಿಂಗ್ಟನ್: ಅಜ್ಜಿಯ ಮೇಲೆ ಹಲ್ಲೆ ನಡೆಸಿ, ಆಕೆಯ ಒಳಉಡುಪಿನಿಂದ 10 ಡಾಲರ್(710.69 ರೂ.) ದೋಚಿದ್ದ ಮೊಮ್ಮಗನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

    ಟೆನ್ನೆಸ್ಸೀ ನಿವಾಸಿ ಜ್ಯಾರೀಡ್ ಒಟ್ಟೆ(19) ಕೃತ್ಯವೆಸೆಗಿದ ಆರೋಪಿ. ಜ್ಯಾರೀಡ್ ಸೆಪ್ಟೆಂಬರ್ ನಲ್ಲಿ ತನ್ನ ಅಜ್ಜಿ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದನು. ಏಕಾಏಕಿ ಅಜ್ಜಿ ಮನೆಗೆ ನುಗ್ಗಿದ ಆರೋಪಿ ಆಕೆಯ ಬಳಿ ಮೊದಲು ಹಣ ಕೇಳಿದ್ದ. ಆದರೆ ಅಜ್ಜಿ ಹಣ ಕೊಡಲು ನಿರಾಕರಿದಾಗ ಹಲ್ಲೆ ನಡೆಸಿ, ಅಜ್ಜಿಯನ್ನು ದೂಡಿ ಹಾಸಿಗೆಯ ಮೇಲೆ ಬೀಳಿಸಿ, ಅಜ್ಜಿ ಧರಿಸಿದ್ದ ಒಳಉಡುಪಿನಲ್ಲಿ ಇಟ್ಟಿದ್ದ 10 ಡಾಲರ್(710.69 ರೂ.) ಹಣವನ್ನು ಕಿತ್ತುಕೊಂಡು ಹೋಗಿದ್ದನು. ಹಲ್ಲೆಯಿಂದ ಅಜ್ಜಿಯ ಮೈಮೇಲೆ ಗಾಯಗಳು ಕೂಡ ಆಗಿದ್ದವು.

    ಮೊಮ್ಮಗನ ಅಟ್ಟಹಾಸವನ್ನು ಸಹಿಸದ ಅಜ್ಜಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ನನ್ನ ಮೇಲೆ ಜ್ಯಾರೀಡ್ ಹಲ್ಲೆ ನಡೆಸಿದ್ದಾನೆ. ಜೊತೆಗೆ ನನ್ನ ಬಳಿ ಇದ್ದ 10 ಡಾಲರ್ ಹಾಣವನ್ನು ದೋಚಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಮಂಗಳವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅಜ್ಜಿಯ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡ ನಟ ರಕ್ಷಿತ್ ಶೆಟ್ಟಿ

    ಅಜ್ಜಿಯ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡ ನಟ ರಕ್ಷಿತ್ ಶೆಟ್ಟಿ

    ಉಡುಪಿ: ಬ್ಯುಸಿ ಶೂಟಿಂಗ್ ನಡುವೆಯೇ ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ ತಮ್ಮ ಅಜ್ಜಿಯ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಬಾಲ್ಯದಲ್ಲಿ ಅಕ್ಕರೆ ತೋರಿದ್ದ ಅಜ್ಜಿಯನ್ನು ನೆನೆದು ರಕ್ಷಿತ್ ಕಣ್ಣುಗಳು ತೇವಗೊಂಡವು.

    ಸ್ವಾತಂತ್ರ್ಯ ಹೋರಾಟಗಾರ ಬೈಕಾಡಿ ವಿಠಲ ಶೆಟ್ಟಿ ಅವರ ಧರ್ಮಪತ್ನಿ, ನಟ ರಕ್ಷಿತ್ ಶೆಟ್ಟಿ ಅಜ್ಜಿ ವನಜಾ ಶೆಟ್ಟಿ ವಾರದ ಹಿಂದೆ ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು. ಮೃತರ ಉತ್ತರಕ್ರಿಯೆ ಅಲೆವೂರು ದೊಡ್ಡ ಮನೆ ಪ್ರಿಯಾ ನಿವಾಸದಲ್ಲಿ ಇಂದು ನಡೆಯಿತು.

    ಅವನೇ ಶ್ರೀಮನ್ನಾರಾಯಣ ಚಿತ್ರದ ಒಡಾಟದಲ್ಲಿರುವ ರಕ್ಷಿತ್‍ಗೆ ಅಜ್ಜಿಯಂದರೆ ಬಹಳ ಪ್ರೀತಿಯಂತೆ. ಬಾಲ್ಯದಿಂದ ಅಜ್ಜಿಯ ಜೊತೆ ಬಹಳ ಒಡನಾಟ ಇತ್ತು ಅಂತ ವನಜಾ ಶೆಟ್ಟಿ ಸಂಬಂಧಿ ರಾಜೇಶ್ ಹೇಳಿದ್ದಾರೆ. ಮೃತ ಅಜ್ಜಿಯ ಅಕ್ಕರೆ ನೆನೆದು ರಕ್ಷಿತ್ ಕಣ್ಣೀರಿಟ್ಟರು ಅಂತ ಅವರು ಮಾಹಿತಿ ನೀಡಿದರು.

    ಶೂಟಿಂಗ್ ಬ್ಯುಸಿ ಇದ್ದದ್ದರಿಂದ ಅಂತ್ಯ ಸಂಸ್ಕಾರದಲ್ಲಿ ರಕ್ಷಿತ್ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿನಿಂದ ಆಗಮಿಸಿದ ಅವರು ಕುಟುಂಬದ ಸದಸ್ಯರ ಜೊತೆ ಉತ್ತರ ಕ್ರಿಯೆಯಲ್ಲಿ ಪಾಲ್ಗೊಂಡರು.

  • ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

    ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

    ಬೆಳಗಾವಿ: ಮಕ್ಕಳು ಮತ್ತು ಸೊಸೆಯರ ಕಿರುಕುಳ ಸಹಿಸಲಾರದೆ ನದಿಗೆ ಹಾರಿದ 80 ವರ್ಷದ ಅಜ್ಜಿಯನ್ನು ಕಿಲ್ಲಾ ತೊರಗಲ್ಲ ಗ್ರಾಮಸ್ಥರು ರಕ್ಷಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ ಚಂದರಗಿ ನಿವಾಸಿ ಯಲ್ಲವ್ವ ಕೌಜಲಗಿ ನದಿಗೆ ಹಾರಿದ 80 ವರ್ಷದ ಅಜ್ಜಿ. ಮಕ್ಕಳ ಮತ್ತು ಸೊಸೆಯಂದಿರ ಕಾಟ ತಾಳಲಾರದೆ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲ ಬಳಿಯ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಯಲ್ಲವ್ವನಿಗೆ ಮೂರು ಗಂಡು ಮಕ್ಕಳು ಮತ್ತು ಆರು ಜನ ಹೆಣ್ಣು ಮಕ್ಕಳಿದ್ದು, ಆಸ್ತಿಯನ್ನು ಕಸಿದುಕೊಂಡ ಮಕ್ಕಳು ಅಜ್ಜಿಯನ್ನು ನಡು ರಸ್ತೆಗೆ ಬಿಟ್ಟಿದ್ದಾರೆ. ಮನೆ ಇಲ್ಲದೆ ಕಳೆದ ಮೂರು ದಿನದಿಂದ ಊಟ ಮಾಡದ ಅಜ್ಜಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಕಡಕೋಳ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

  • ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ 80ರ ವೃದ್ಧೆ

    ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ 80ರ ವೃದ್ಧೆ

    ಚೆನ್ನೈ: ತಮಿಳುನಾಡಿನ ವಡಿವೇಲಪಾಲ್ಯಂ ಗ್ರಾಮದಲ್ಲಿನ 80 ವರ್ಷದ ವೃದ್ಧೆಯೊಬ್ಬರು ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

    ವಡಿವೇಲಪಾಲ್ಯಂ ಗ್ರಾಮದ ನಿವಾಸಿ ಕಮಲಥಾಲ್ ಅವರು ಕಳೆದ 30 ವರ್ಷದಿಂದ ಇಡ್ಲಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ತನ್ನ ಅಂಗಡಿ ಬಾಗಿಲು ತೆಗೆದು, ಸ್ವಾದಿಷ್ಟ ಮತ್ತು ರುಚಿಯಾದ ಸಾಂಬಾರ್, ಚಟ್ನಿ ಜೊತೆಗೆ ಕೇವಲ ಒಂದು ರೂಪಾಯಿ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಾರೆ.

    ವಡಿವೇಲಪಾಲ್ಯಂನಲ್ಲಿ ಕಳೆದ 30 ವರ್ಷಗಳಿಂದ ಅಜ್ಜಿ ಇಡ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರತಿ ಮುಂಜಾನೆ ಇಡ್ಲಿ ತಯಾರಿಸಲು ತಾಜಾ ಹಿಟ್ಟನ್ನು ಬರೋಬ್ಬರಿ 4 ಗಂಟೆ ಸಮಯ ತೆಗೆದುಕೊಂಡು ಕೈಯಾರೆ ಅರೆಯುತ್ತಾರೆ. ಬಳಿಕ ತಾಜಾ ಇಡ್ಲಿ ತಯಾರಿಸಿ ಗ್ರಾಹಕರಿಗೆ ನೀಡುತ್ತಾರೆ. ಪ್ರತಿನಿತ್ಯ ಈ ಅಜ್ಜಿ ಬರೋಬ್ಬರಿ 1000 ಇಡ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಾರೆ.

    ಈ ವ್ಯಾಪಾರ ಆರಂಭಿಸಿದಾಗ ಕೇವಲ 50 ಪೈಸೆಗೆ ಒಂದು ಇಡ್ಲಿ ಮಾರಾಟ ಮಾಡುತ್ತಿದ್ದೆ. ಬಳಿಕ ಸಾಮಾಗ್ರಿಗಳ ಬೆಲೆ ಜಾಸ್ತಿಯಾದ ಬಳಿಕ ಒಂದು ರೂಪಾಯಿಗೆ ಇಡ್ಲಿ ಬೆಲೆಯನ್ನು ಏರಿಕೆ ಮಾಡಿದೆ ಎಂದು ಅಜ್ಜಿ ತಿಳಿಸಿದ್ದಾರೆ.

    ನೀವು ಯಾಕೆ ಇಷ್ಟು ಕಡಿಮೆ ಬೆಲೆಗೆ ಇಡ್ಲಿ ಮಾರುತ್ತೀರಾ? ಬೆಲೆ ಹೆಚ್ಚು ಮಾಡಿ ಎಂದು ಅಜ್ಜಿಗೆ ಹೇಳಿದರೆ, ನನಗೆ ದುಡ್ಡು ಮಾಡುವ ಉದ್ದೇಶವಿಲ್ಲ. ಹಸಿದವರಿಗೆ, ಬಡವರಿಗೆ ಆಹಾರ ನೀಡುವುದು ನನ್ನ ಉದ್ದೇಶ. ನಾನು ಬೆಲೆ ಹೆಚ್ಚಿಸಿದರೆ ನನ್ನ ಅಂಗಡಿಗೆ ಬರುವ ಬಡ ಜನರಿಗೆ ಕಷ್ಟವಾಗುತ್ತದೆ. ಪ್ರತಿನಿತ್ಯ 15ರಿಂದ 20 ರೂ. ಹಣ ಕೊಟ್ಟು ತಿನ್ನಲು ಗ್ರಾಹಕರಿಗೂ ಭಾರವಾಗುತ್ತೆ. ಆದ್ದರಿಂದ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ.

    ಇಳಿ ವಯಸ್ಸಿನಲ್ಲಿ ಯಾರ ಮೇಲೂ ಅವಲಂಬಿಸದೇ ಇಡ್ಲಿ ಮಾರಾಟ ಮಾಡಿಕೊಂಡು ತನ್ನ ಜೀವನ ಸಾಗಿಸುವುದರ ಜೊತೆಗೆ ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡುತ್ತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

  • ಜಮೀನು ನೀರುಪಾಲಾಯ್ತು, ನಾನ್ ಬದ್ಕಿರಲ್ಲ- ಅಳುತ್ತಾ ನೀರಿಗೆ ಧುಮುಕಲು ಹೋದ ಅಜ್ಜಿ

    ಜಮೀನು ನೀರುಪಾಲಾಯ್ತು, ನಾನ್ ಬದ್ಕಿರಲ್ಲ- ಅಳುತ್ತಾ ನೀರಿಗೆ ಧುಮುಕಲು ಹೋದ ಅಜ್ಜಿ

    ಬಾಗಲಕೋಟೆ: ಜೀವನೋಪಾಯಕ್ಕಿದ್ದ ಏಕೈಕ ಜಮೀನು ಜಲಾವೃತವಾಗಿದ್ದರಿಂದ ಅಜ್ಜಿಯೊಬ್ಬರು ಜೋರಾಗಿ ಅಳುವ ದೃಶ್ಯ ಎಂಥವರನ್ನೂ ಮನಕಲಕುವಂತೆ ಮಾಡಿದೆ. ಈ ಘಟನೆ ಬಾಗಲಕೋಟೆ ತಾಲೂಕಿನ ಹಿರೇಸಂಶಿ ಗ್ರಾಮದಲ್ಲಿ ನಡೆದಿದೆ.

    ಹಿರೇಸಂಶಿ ಗ್ರಾಮದ ಪದ್ದವ್ವ ಜೋಗಿನ್ ಎಂಬ ವೃದ್ಧೆಯೇ ಹಾಡಿಕೊಂಡು ಅಳುತ್ತಿರುವ ಅಜ್ಜಿ. ಇವರು ಜೀವನೋಪಾಯಕ್ಕಿದ್ದ ತನ್ನ ನಾಲ್ಕು ಎಕರೆ ಹೊಲದಲ್ಲಿ ಈರುಳ್ಳಿ ಹಾಗೂ ಕಬ್ಬು ಬೆಳೆ ಬೆಳೆದಿದ್ದರು. ಆದರೆ ಘಟಪ್ರಭೆ ನದಿ ಉಕ್ಕಿ ಹರಿದ ಪರಿಣಾಮ ಅಜ್ಜಿಯ ಹೊಲ ಸಂಪೂರ್ಣವಾಗಿ ಜಲಾವೃತಗೊಂಡು ಬೆಳೆ ನಾಶವಾಗಿದೆ.

    ಇದರಿಂದ ನೊಂದ ಅಜ್ಜಿ ನೀರು ಪಾಲಾದ ಜಮೀನಿನ ಜೊತೆಗೆ ನಾನೂ ನೀರುಪಾಲುಗುತ್ತೇನೆ ಎಂದು ಜೋರಾಗಿ ಅಳುತ್ತಾ ತನ್ನ ನೋವು ತೋರ್ಪಡಿಸಿಕೊಂಡಿದ್ದಾರೆ. ಆಗ ಪುತ್ರ ನೀರಲ್ಲಿ ಕೊಚ್ಚಿ ಹೋಗುತ್ತಿದ್ದಾಕೆಯನ್ನು ತಡೆದು, ಮಂಗಳೂರಿಗೆ ದುಡಿಯಲು ಹೋಗೋಣ ಬಾ ಎಂದು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಅಜ್ಜಿಯ ಈ ನರಳಾಟ, ಗೋಳಾಟದ ವಿಡಿಯೋ ನೋಡಿದರೆ ಎಂತವರಿಗೂ ಕರಳು ಕಿತ್ತು ಬರುವಂತಿದೆ.