Tag: granade

  • ಶ್ರೀನಗರದಲ್ಲಿ ಗ್ರೆನೇಡ್ ದಾಳಿ- ಓರ್ವ ಸಾವು, 15 ಮಂದಿಗೆ ಗಾಯ

    ಶ್ರೀನಗರದಲ್ಲಿ ಗ್ರೆನೇಡ್ ದಾಳಿ- ಓರ್ವ ಸಾವು, 15 ಮಂದಿಗೆ ಗಾಯ

    ಜಮ್ಮು-ಕಾಶ್ಮೀರ: ಭಾರತ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಆದರೂ ಅಲ್ಲಿ ಒಂದಲ್ಲ ಒಂದು ರೀತಿಯ ಘಟನೆಗಳು ನಡೆಯುತ್ತಲೇ ಇದೆ.

    ಇಂದು ಮಧ್ಯಾಹ್ನ 1.20ರ ಸುಮಾರಿಗೆ ಶ್ರೀನಗರದಲ್ಲಿರುವ ವೆಜಿಟೆಬಲ್ ಮಾರ್ಕೆಟ್ ಬಳಿ ಗ್ರೆನೇಡ್ ದಾಳಿ ನಡೆದಿದ್ದು, ಘಟನೆಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಇದಕ್ಕೂ ಮೊದಲು ಉತ್ತರ ಕಾಶ್ಮೀರದ ಸೊಪುರ್ ನಲ್ಲಿ ಉಗ್ರರು ನಡೆಸಿದ್ದ ಗ್ರೆನೇಡ್ ದಾಳಿಗೆ 15 ಮಂದಿ ನಾಗರಿಕರು ಗಾಯಗೊಂಡಿದ್ದರು. ಈ ಘಟನೆ ನಡೆದು ಒಂದು ವಾರದ ಬಳಿಕ ಇದೀಗ ಮತ್ತೊಂದು ಘಟನೆ ನಡೆದಿದೆ.

    ಇಂದು ಮಧ್ಯಾಹ್ನ ಹರಿಸಿಂಗ್ ಹೈ ಸ್ಟ್ರೀಟ್ ನಲ್ಲಿರುವ ವೆಜಿಟೆಬಲ್ ಮಾರ್ಕೆಟ್ ಜನಜಂಗುಳಿಯಿಂದ ಕೂಡಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಭದ್ರತಾ ಪಡೆಗಳು ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದ್ದು, ಕೃತ್ಯ ಎಸಗಿದವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

    ಇದು ಕಳೆದ 10 ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಮೂರನೇ ಘಟನೆಯಾಗಿದೆ. ಕಳೆದ ವಾರ ಸೊಪೊರೆಯಲ್ಲಿ ನಾಗರಿಕರು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದು, ಅದರಲ್ಲಿ 15 ಮಂದಿ ಗಾಯಗೊಂಡಿದ್ದರು. ಇದಕ್ಕೂ ಮೊದಲು ಅಕ್ಟೋಬರ್ 26ರಂದು ಸಿಆರ್‌ಪಿಎಫ್ ತಂಡವು ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಉಗ್ರರು ಗ್ರೆನೇಡ್ ದಾಳಿ ಮಾಡಿದ್ದರು. ಪರಿಣಾಮ 6 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.