Tag: Gramavasthya

  • ಗ್ರಾಮವಾಸ್ತವ್ಯಕ್ಕೂ ಮುನ್ನವೇ ಬೀಳುತ್ತೆ ಮೈತ್ರಿ ಸರ್ಕಾರ : ರೇಣುಕಾಚಾರ್ಯ

    ಗ್ರಾಮವಾಸ್ತವ್ಯಕ್ಕೂ ಮುನ್ನವೇ ಬೀಳುತ್ತೆ ಮೈತ್ರಿ ಸರ್ಕಾರ : ರೇಣುಕಾಚಾರ್ಯ

    – ಎಚ್‍ಡಿಕೆ, ಡಿಕೆಶಿ ತಲೆ ಕೆಳಗೆ ಮಾಡಿ ನಿಂತ್ರೂ ಸರ್ಕಾರ ಉಳಿಯಲ್ಲ

    ದಾವಣಗೆರೆ: ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕೂ ಮುನ್ನವೇ ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕರು, ಸಿಎಂ ಕುಮಾರಸ್ವಾಮಿ, ಡಿಸಿಎಂ ಜಿ.ಪರಮೇಶ್ವರ್, ಸಚಿವರಾದ ಡಿಕೆ ಶಿವಕುಮಾರ್ ಹಾಗೂ ಎಚ್.ಡಿ.ರೇವಣ್ಣ ತಲೆ ಕೆಳಗೆ ಮಾಡಿ ನಿಂತರೂ ಮೈತ್ರಿ ಸರ್ಕಾರ ಉಳಿಯಲ್ಲ. ಸಮ್ಮಿಶ್ರ ಸರ್ಕಾರದ ಆಯಸ್ಸು ಮುಗಿಯುತ್ತಿದೆ. ಈ ಸಂಬಂಧ ಕಾಂಗ್ರೆಸ್ ಶಾಸಕರೇ ನನ್ನ ಜೊತೆಗೆ ಮುಕ್ತವಾಗಿ ಮಾತಾಡಿದ್ದಾರೆ. ನಾನು ಅವತ್ತು ಹೇಳಿದ್ದೆ. ಈಗಲೂ ಹೇಳುತ್ತೇನೆ. ಸಮ್ಮಿಶ್ರ ಸರ್ಕಾರ ಪತನ ಗ್ಯಾರಂಟಿ ಎಂದು ಹೇಳಿದರು.

    ಸಚಿವ ಎಚ್.ಡಿ.ರೇವಣ್ಣ ಅವರು ಸೂಪರ್ ಸಿಎಂ. ಬೆಂಗಳೂರು ಉಸ್ತುವಾರಿ ಸಚಿವರಿಗೆ ಗೊತ್ತಿಲ್ಲದೆ ಎಚ್.ಡಿ.ರೇವಣ್ಣ 25 ಸಾವಿರ ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣದ ಟೆಂಡರ್ ಕರೆಯುತ್ತಾರೆ. ಮೆಟ್ರೋ ಖಾತೆಯನ್ನು ಸಿಎಂ ಕುಮಾರಸ್ವಾಮಿ ನೋಡಿಕೊಂಡರೆ ಉಳಿದ ರಸ್ತೆ ಹೆದ್ದಾರಿ ಕಾಮಗಾರಿಗಳನ್ನು ರೇವಣ್ಣ ನೋಡಿಕೊಳ್ಳುತ್ತಾರೆ. ಡಿಸಿಎಂ ಪರಮೇಶ್ವರ್ ಅವರು ನಾಮಕಾವಸ್ತೆ ಎಂದು ಆರೋಪಿಸಿದರು.

    ಸಿಎಂ ಕುಮಾರಸ್ವಾಮಿ ಇಷ್ಟು ದಿನ ತಾಜ್ ವೆಸ್ಟೆಂಡ್ ಹೋಟೆಲ್‍ನ ಐಷಾರಾಮಿ ಜೀವನದಲ್ಲಿದ್ದರು. ಈಗ ಗ್ರಾಮವಾಸ್ತವ್ಯ ನಾಟಕವಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರಿರುವ ಕ್ಷೇತ್ರದಲ್ಲಿ 1 ಸಾವಿರ ಕೋಟಿ ರೂ. ಅನುದಾನ ನೀಡುತ್ತಾರೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲಿ 50 ಕೋಟಿ ರೂ. ಅನುದಾನ ಸಿಗುತ್ತಿಲ್ಲ ಎಂದು ಹೇಳಿದರು.

  • ಸಿಎಂ ಎಚ್‍ಡಿಕೆ ಗ್ರಾಮವಾಸ್ತವ್ಯ ಹೊಸ ನಾಟಕ – ಬಿಎಸ್‍ವೈ ಕಿಡಿ

    ಸಿಎಂ ಎಚ್‍ಡಿಕೆ ಗ್ರಾಮವಾಸ್ತವ್ಯ ಹೊಸ ನಾಟಕ – ಬಿಎಸ್‍ವೈ ಕಿಡಿ

    ಬೆಂಗಳೂರು: ಕಳೆದ ಒಂದು ವರ್ಷದಿಂದ ಪಂಚತಾರಾ ಹೋಟೆಲ್‍ನಲ್ಲಿ ವಾಸ್ತವ್ಯ ಮಾಡಿದ್ದ ಸಿಎಂ ಕುಮಾರಸ್ವಾಮಿ ಅವರು ಇಂದು ಗ್ರಾಮವಾಸ್ತವ್ಯ ಎಂಬ ಹೊಸ ನಾಟಕವನ್ನು ಶುರು ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.

    ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂಗೆ ಒಂದು ಕಿವಿಮಾತು ಹೇಳುತ್ತೇನೆ. ಮುಖ್ಯಮಂತ್ರಿಗಳು ಒಂದು ವರ್ಷ ಫೈವ್ ಸ್ಟಾರ್ ನಲ್ಲಿ ಉಳಿದುಕೊಂಡಿದ್ದರು. ಈ ಬಗ್ಗೆ ನಾವು ಎಷ್ಟೇ ಹೇಳಿದರು ಅವರು ಕೇಳಲಿಲ್ಲ. ಒಂದು ವರ್ಷ ವ್ಯರ್ಥ ಆಯ್ತು. ಈಗ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಒಳಜಗಳ. ಕಾಂಗ್ರೆಸ್ ಪಕ್ಷದ ಆಂತರಿಕ ಕಿತ್ತಾಟದಿಂದ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಸಿಎಂ ಹೆದರಿ ಈಗ ಸ್ವಂತ ಮನೆಗೆ ಹೋಗುವುದಾಗಿ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

    ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕೆ ನಮ್ಮ ಅಭ್ಯಂತರ ಏನೂ ಇಲ್ಲ. ಆದರೆ ಅವರು ನಿಜಕ್ಕೂ ಮಾಡಬೇಕಾಗಿದ್ದದ್ದು ಬರಗಾಲದಿಂದ ತತ್ತರಿಸುತ್ತಿರುವ ರಾಜ್ಯದ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಫದಿಸುವಂತೆ ಅಧಿಕಾರಿಗಳಿಗೆ ಚಾಟಿ ಬೀಸಿ ಜಿಲ್ಲಾ ಪ್ರವಾಸ ಕೈಗೊಳ್ಳುವಂತೆ ಕಳಿಸಲಿ. ಖುದ್ದು ಸಿಎಂ ಸಹ ಜಿಲ್ಲೆಗಳಿಗೆ ಭೇಟಿ ಮಾಡಲಿ. ಈ ಕಾರ್ಯವನ್ನು ಮಾಡದೇ ಸಿಎಂ ಕೇವಲ ಗ್ರಾಮ ವಾಸ್ತವ್ಯವನ್ನು ಜನ ಮೆಚ್ಚಲ್ಲ ಎಂದು ತಿಳಿಸಿದರು.

    ಜೂನ್ 5 ರ ನಂತರ ಬಿಜೆಪಿ ನಾಯಕರು ಬರಪರಿಶೀಲನೆ ಮಾಡುತ್ತೇವೆ. ಬರಪೀಡಿತ ಜಿಲ್ಲೆಗಳಿಗೆ ನಾವು ಪ್ರವಾಸ ಮಾಡಿ ವರದಿ ಸಿದ್ಧಪಡಿಸಿ ಸರ್ಕಾರದ ಮುಂದಿಡುತ್ತೇವೆ ಎಂದರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ ಅವರು, ಒಂದು ವರ್ಷ ಆದ ಮೇಲೆ ಸಿಎಂಗೆ ಜ್ಞಾನೋದಯವಾಗಿದೆ. ಒಂದು ವರ್ಷದಿಂದ ಯಾವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾ ಪ್ರವಾಸ ಕೈಗೊಂಡಿಲ್ಲ. ಮೊದಲು ಬರ ಪೀಡಿತ ಪ್ರದೇಶಗಳಿಗೆ ಸಿಎಂ ಪ್ರವಾಸ ಮಾಡಲಿ. ಆ ನಂತರ ಅವರು ಗ್ರಾಮವಾಸ್ತವ್ಯವಾದರೂ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

  • ಉತ್ತರದತ್ತ ಚಿತ್ತ ಹರಿಸಿದ ಸಿಎಂ ಎಚ್‍ಡಿಕೆ – ಹಿಂದುಳಿದ ಜಿಲ್ಲೆಗಳಲ್ಲಿ ಸಿಎಂ ಗ್ರಾಮವಾಸ್ತವ್ಯ

    ಉತ್ತರದತ್ತ ಚಿತ್ತ ಹರಿಸಿದ ಸಿಎಂ ಎಚ್‍ಡಿಕೆ – ಹಿಂದುಳಿದ ಜಿಲ್ಲೆಗಳಲ್ಲಿ ಸಿಎಂ ಗ್ರಾಮವಾಸ್ತವ್ಯ

    ಬೆಂಗಳೂರು: ಮಂಡ್ಯ, ಹಾಸನಕ್ಕಷ್ಟೇ ಸಿಎಂ ಕುಮಾರಸ್ವಾಮಿ ಸಿಮೀತ ಎಂಬ ಟೀಕೆಯ ಕೊಂಡಿ ಕಳಚಲು ಯತ್ನಿಸಿದಂತೆ ಇರುವ ಮುಖ್ಯಮಂತ್ರಿಗಳು ಜೂನ್ 21 ರಿಂದ ಗ್ರಾಮ ವಾಸ್ತವ್ಯವನ್ನು ಆರಂಭಿಸುತ್ತಿದ್ದಾರೆ. ತಮ್ಮ ಮೊದಲ ಹಂತದ ಗ್ರಾಮವಾಸ್ತವ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕವನ್ನೇ ಕೇಂದ್ರಿಕರಿಸಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ತೀವ್ರ ಹಿನ್ನಡೆಯಿಂದ ಹೊರಬಂದಂತೆ ಇರುವ ಸಿಎಂ ಎಚ್‍ಡಿಕೆ, ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಯಾದಗಿರಿಯ ಗುರುಮಿಠಕಲ್ ತಾಲೂಕಿನಲ್ಲಿ ಮೊದಲ ಗ್ರಾಮವಾಸ್ತವ್ಯ ಮಾಡಲಿದ್ದಾರೆ. ಜೂನ್ 21 ರಂದು ಗುರುಮಿಠಕಲ್ ತಾಲೂಕಿನ ಹಿಂದುಳಿದ ಹಳ್ಳಿಯೊಂದರಲ್ಲಿ ಸಿಎಂ ಗ್ರಾಮವಾಸ್ತವ್ಯ ಮಾಡಲಿದ್ದಾರೆ. ಅಂದು ಇಡೀ ದಿನ, ಹಗಲು ರಾತ್ರಿ ಆ ಗ್ರಾಮದ ಜನರ ಕುಂದುಕೊರತೆ ಆಲಿಸಲಿದ್ದಾರೆ.

    ಆ ಬಳಿಕ ಜೂನ್ 22ರ ಕಲಬುರಗಿಯ ಅಫಜಲಪುರ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ. ಈ ಭಾಗದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿತ್ತು. ಉಳಿದಂತೆ ಜುಲೈ 5 ರಂದು ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲೂಕಿನಲ್ಲಿ ಗ್ರಾಮ ಹಾಗೂ ಜುಲೈ 6ರಂದು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ಗ್ರಾಮದಲ್ಲಿ ಸಿಎಂ ವಾಸ್ತವ್ಯ ಮಾಡಲಿದ್ದಾರೆ.

    ಸದ್ಯ ಸಿಎಂ ಅವರು ಯಾವ ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ ಎಂಬುವುದು ಇನ್ನೂ ನಿಗದಿಯಾಗಿಲ್ಲ. ಈ ಕುರಿತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತೀರ್ಮಾನ ತೆಗೆದುಕೊಂಡು ಗ್ರಾಮಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ತಿಳಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ದಿನಕ್ಕೆ 18 ಗಂಟೆ ಕೆಲ್ಸ: ಮಗನ ಆರೋಗ್ಯದ ಬಗ್ಗೆ ಎಚ್‍ಡಿಡಿ ಆತಂಕ

    ದಿನಕ್ಕೆ 18 ಗಂಟೆ ಕೆಲ್ಸ: ಮಗನ ಆರೋಗ್ಯದ ಬಗ್ಗೆ ಎಚ್‍ಡಿಡಿ ಆತಂಕ

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

    ನಗರದ ಜೆಡಿಎಸ್ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕುಮಾರಣ್ಣ ಬೆಳಗ್ಗೆಯಿಂದ ರಾತ್ರಿವರೆಗೆ ಕೆಲಸ ಮಾಡುತ್ತಿರುವ ಕಾರಣ ಗ್ರಾಮವಾಸ್ತವ್ಯ ಮಾಡಲು ಸಮಯ ಸಿಗುತ್ತಿಲ್ಲ. 18 ಗಂಟೆ ಗಂಟೆಗಳ ಕಾಲ ಕೆಲಸ ಮಾಡುವ ಕಾರಣ ಆರೋಗ್ಯದ ಬಗ್ಗೆ ನನಗೆ ಆತಂಕವಾಗುತ್ತಿದೆ ಎಂದು ಮಗನ ಬಗ್ಗೆ ದೇವೇಗೌಡರು ಕಾಳಜಿ ವ್ಯಕ್ತಪಡಿಸಿದ್ದಾರೆ.

    ನಮ್ಮನ್ನು ಜನ ಕೈಬಿಟ್ಟರೂ, ನಾವು ಕೊಟ್ಟ ಮಾತು ಬಿಡೊಲ್ಲ ಎಂದು ಭಾವಿಸಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ್ದಾರೆ. ಒಂದು ಕಡೆಗೆ ಮಾಜಿ ಸ್ನೇಹಿತರ ಅಸಹಕಾರ, ಮತ್ತೊಂದು ಕಡೆ ವಿಧಾನಸಭೆಯಲ್ಲಿ ಹೋರಾಟ ಮಾಡುವ ಸ್ಥಿತಿ ಇದೆ. ಈ ಬೆಳವಣಿಗೆಯನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿರುವೆ ಎಂದು ದೇವೇಗೌಡರು ಅಸಮಾಧಾನ ಹೊರ ಹಾಕಿದರು.

    ನಾನು ವಿಶ್ರಾಂತಿ ಪಡೆಯಲ್ಲ, ಹೋರಾಟಕ್ಕೆ ಸಿದ್ಧವಾಗಿರುವೆ. ಮತ್ತೆ ನಾವೆಲ್ಲರೂ ಹೋರಾಟ ಮಾಡೋಣ. ಆದರೆ ಮೈತ್ರಿ ಸರ್ಕಾರಕ್ಕೆ ಕುಂದು ಬಾರದಂತೆ ನಡೆದುಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕರೆಕೊಟ್ಟರು.

    ಸಮ್ಮಿಶ್ರ ಸರ್ಕಾರದ ಜವಾಬ್ದಾರಿಯನ್ನು ಕುಮಾರಸ್ವಾಮಿ ಹೊತ್ತಿದ್ದಾರೆ. ಆದರೆ ರಾಜ್ಯದ ಜನರು ಅವರನ್ನು ಗುರುತಿಸಿಲ್ಲ. ಕುಮಾರಸ್ವಾಮಿ ಕಳೆದ 3 ವರ್ಷಗಳಿಂದ ರಾಜ್ಯಾದಂತ ಪ್ರವಾಸ ಮಾಡಿದ್ದಾರೆ. ನಮ್ಮ ಪಕ್ಷ 100 ಕ್ಕೂ ಹೆಚ್ಚು ಮತಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎನ್ನುವ ಭರವಸೆ ಇತ್ತು. ಆದರೆ ಅದು ಆಗಲಿಲ್ಲ. ಈಗ ಜನರ ತೀರ್ಪನ್ನು ತಲೆಬಾಗಿ ಒಪ್ಪಿಕೊಂಡಿದ್ದೇವೆ. ಸೋಲಿಗೆ ಕಾರ್ಯಕರ್ತರಲ್ಲಿ ದೋಷಗಳು ಕಾರಣವಾಗಿದ್ದರೆ ಅದನ್ನು ತಿದ್ದಿಕೊಳ್ಳಬೇಕು ಎಂದು ಸಲಹೆ ನೀಡಿದರು.

    2018ರ ವಿಧಾನಸಭೆ ಚುನಾವಣೆಯಲ್ಲಿ 20 ತಿಂಗಳ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವಲ್ಲಿ ನಮ್ಮ ಕಾರ್ಯಕರ್ತರು ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಬೇಕು. ನಾವು ಕಾಂಗ್ರೆಸ್ ಪಕ್ಷವನ್ನು ದೂರಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರ ನಡೆಸಿಕೊಂಡು ಹೋಗುವುದು ತುಂಬ ಕಷ್ಟ. ವಿರೋಧ ಪಕ್ಷದಲ್ಲಿ 104 ಜನ ಇರುವುದು ಕರ್ನಾಟಕ ಇತಿಹಾಸದಲ್ಲೆ ಇದೇ ಮೊದಲು. ಬಿಜೆಪಿಯವರನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.