Tag: gramavasthavya

  • ಗ್ರಾಮ ವಾಸ್ತವ್ಯದ ವೇಳೆ ಮೂರ್ಛೆ ತಪ್ಪಿ ಬಿದ್ದ ಎಎಸ್‍ಐ

    ಗ್ರಾಮ ವಾಸ್ತವ್ಯದ ವೇಳೆ ಮೂರ್ಛೆ ತಪ್ಪಿ ಬಿದ್ದ ಎಎಸ್‍ಐ

    ಬೀದರ್: ಬಿಸಿಲು ತಾಳಲಾರದೇ ಎಎಸ್‍ಐ ಒಬ್ಬರು ಮೂರ್ಛೆ ತಪ್ಪಿ ಬಿದ್ದ ಘಟನೆ ಗುರುವಾರ ಸಿಎಂ ಗ್ರಾಮ ವಾಸ್ತವ್ಯ ಹೂಡಿರುವ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದಿದೆ.

    ಗುರುಮಠಕಲ್ ಠಾಣೆಯ ಎಎಸ್‍ಐ ರಾಜೇಂದ್ರ ಅವರನ್ನು ಉಜಳಂಬ ಗ್ರಾಮದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ರಾಜೇಂದ್ರ ಅವರು ಉಜಳಂಬ ಗ್ರಾಮದ ಹೊರವಲಯದಲ್ಲಿ ವಾಹನ ಪಾರ್ಕಿಂಗ್ ಹಾಗೂ ತಪಾಸಣೆ ನಡೆಸುತ್ತಿದ್ದರು. ಹೀಗಾಗಿ ಭಾರೀ ಬಿಸಿಲು ಇದ್ದರಿಂದ ಅಸ್ವಸ್ಥಗೊಂಡ ಅವರು ಮೂರ್ಛೆ ತಪ್ಪಿ ಬಿದ್ದಿದ್ದರು. ತಕ್ಷಣವೇ ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆ ಕೊಡಿಸಿದ್ದಾರೆ.

    ರಾಜೇಂದ್ರ ಅವರಿಗೆ ಮಧುಮೇಹ ಹಾಗೂ ಬಿಪಿ (ರಕ್ತದೊತ್ತಡ) ಸಮಸ್ಯೆ ಇತ್ತು. ಬೆಳಗ್ಗೆಯಿಂದ ಅವರು ಬಿಸಿಲಿನಲ್ಲಿಯೇ ಕೆಲಸ ಮಾಡಿದ್ದರಿಂದ ಆಯಾಸಗೊಂಡು ಬಿದ್ದಿದ್ದಾರೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ರಾಜೇಂದ್ರ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಉಜಳಂಬ ಗ್ರಾಮ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅವರಿಗೆ ಅದ್ಧೂರಿಗಾಗಿ ಸ್ವಾಗತ ಕೋರಲು ಆನೆಯನ್ನು ಕರೆತರಲಾಗಿತ್ತು. ಆದರೆ ಆನೆ ಹಾಕಿದ ಹೂವಿನ ಹಾರ ಎರಡು ಬಾರಿಯೂ ಸಿಎಂ ಕೊರಳಿಗೆ ಬೀಳಲಿಲ್ಲ.

    ಸಿಎಂ ಅವರಿಗೆ ಹಾರ ಹಾಕಿಸಲೆಂದೇ ಜಿಲ್ಲಾಡಳಿತ ಕಲಬುರಗಿಯ ಕಡಗಂಚಿ ಮಠದ ಆನೆಯನ್ನು ಗ್ರಾಮಕ್ಕೆ ಕರೆತಂದಿತ್ತು. ಇಂದು ಸಿಎಂ ಗ್ರಾಮಕ್ಕೆ ಹೋದಾಗ ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಿಎಂ ಸ್ವಾಗತ ಕೋರಲು ಆನೆಯಿಂದ ಹೂವಿನ ಹಾರ ಹಾಕಿಸಲು ಗ್ರಾಮಸ್ಥರು ಮುಂದಾದರು. ಈ ಸಂದರ್ಭದಲ್ಲಿ ಆನೆ ಹಾರ ಹಾಕಿದ್ದು, ಈ ಹಾರ ಸಿಎಂ ಕೊರಳಿಗೆ ಬೀಳದೇ ನೆಲಕ್ಕೆ ಬಿದ್ದಿದೆ.

    https://www.youtube.com/watch?v=Vz3pwT5YEWE

    ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಆನೆಯಿಂದ ಹಾರ ಹಾಕಿಸುವಂತೆ ಅಲ್ಲಿದ್ದ ಜನ ಆಗ್ರಹಿಸಿದ್ದಾರೆ. ಆಗ ಒಲ್ಲದ ಮನಸ್ಸಿನಿಂದ ಸಿಎಂ ಹಾರ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಆಗಲೂ ಆನೆ ಹಾಕಿದ ಹಾರ ಸಿಎಂ ಕೊರಳಿಗೆ ಬೀಳದೇ ಎತ್ತಿನ ಬಂಡಿಯ ಮೇಲೆ ಬಿದ್ದಿದೆ.

  • ಸಾಲಮನ್ನಾಕ್ಕೆ ಹಣದ ಕೊರತೆಯೇ ಇಲ್ಲ, ಅಧಿಕಾರಿಗಳು ನನ್ನ ವೇಗಕ್ಕಿಲ್ಲ: ಸಿಎಂ

    ಸಾಲಮನ್ನಾಕ್ಕೆ ಹಣದ ಕೊರತೆಯೇ ಇಲ್ಲ, ಅಧಿಕಾರಿಗಳು ನನ್ನ ವೇಗಕ್ಕಿಲ್ಲ: ಸಿಎಂ

    ರಾಯಚೂರು: ರೈತರ ಸಾಲಮನ್ನಾ ಮಾಡಿದ್ದರಿಂದ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ನನ್ನ ವೇಗಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

    ಗ್ರಾಮವಾಸ್ತವ್ಯ ಮಾಡಲಿರುವ ಕರೇಗುಡ್ಡಕ್ಕೆ ತೆರಳುವ ಮೊದಲು ರಾಯಚೂರಿನ ಸರ್ಕಿಟ್ ಹೌಸ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ 3 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದೇವೆ. ಜಿಲ್ಲೆಯ ಬಸ್ಸಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅದಕ್ಕೆ ಬೇಕಾದ ಸೂಕ್ತ ಕ್ರಮವನ್ನು 15 ದಿನದ ಒಳಗೆ ಸರಿ ಪಡಿಸುತ್ತೇನೆ. ರೈತರ ಸಾಲ ಮನ್ನಾಕ್ಕೆ ಹಣದ ಕೊರತೆ ಇಲ್ಲ. ಆದರೆ ನನ್ನ ಸ್ಪೀಡಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಹೇಳಿದ್ದಾರೆ.

    ಜಿಲ್ಲಾಧಿಕಾರಿ ಹಾಗೂ ಸಿಇಓ ಜೊತೆ ಚರ್ಚೆ ಮಾಡಿ ಇಲ್ಲಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ರಾಯಚೂರು ಜಿಲ್ಲೆಗೆ ಆಗಬೇಕಿರುವ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ಚರ್ಚಿಸಿದ್ದಾರೆ. ಕೇವಲ ಗ್ರಾಮ ವಾಸ್ತವ್ಯಕ್ಕಾಗಿ ಬಂದಿಲ್ಲ. ಜಿಲ್ಲೆಯ ಸಮಗ್ರ ಯೋಜನೆ ಬಗ್ಗೆ ಕಾರ್ಯಕ್ರಮ ರೂಪಿಸಲು ಬಂದಿದ್ದೇನೆ. ವೈದ್ಯಕೀಯ ವಿವಿ ನೀಡುವ ಸಂಬಂಧ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ ಎಂದರು.

    ಕೃಷ್ಣ ಭಾಗ್ಯ ಜಲನಿಗಮದ ಯೋಜನೆಗೆ ಸಾಕಷ್ಟು ಹಣ ನೀಡಿದ್ದೇವೆ. ಸಾರಿಗೆ ನಿಗಮದ ನಷ್ಟದ ಬಗ್ಗೆಯೂ ಚರ್ಚೆ ನಡೆಸಿದ್ದು ಅದಕ್ಕೆ ಮತ್ತೆ ಪುನಶ್ಚೇತನಗೊಳಿಸಲು ನಿರ್ಧರಿಸಿದ್ದೇವೆ. ಬಿಎಂಟಿಸಿಯನ್ನು ಲಾಭದಾಯಕ ಮಾಡಬೇಕಿದೆ. ವೊಲ್ವೋ ನಗರ ಸಾರಿಗೆ ಲಾಭದಾಯಕವಾಗಿಲ್ಲ. 200 ಕಿ.ಮೀ ಒಳಗೆ ಸಂಚರಿಸುವ ವೋಲ್ವೋದಿಂದ ನಷ್ಟವಾಗುತ್ತಿದೆ ಎಂದು ತಿಳಿಸಿದರು.

    ದೇವದುರ್ಗ ಬಿಜೆಪಿ ಶಾಸಕರು ಪಾದಯಾತ್ರೆ ಮಾಡುತ್ತಿದ್ದು ಇದಕ್ಕೆಲ್ಲ ನಾನು ಹೆದರಲ್ಲ. ಅಣ್ತಮ್ಮ ಎಂದು ಮನವಿ ಕೊಟ್ಟಿದ್ದಾರೆ. ನನಗೆ 6 ಕೋಟಿ ಜನರು ಅಣ್ಣ-ತಮ್ಮರೆ ಆಗಿದ್ದಾರೆ. ನನಗೆ ನನ್ನ ಒಡ ಹುಟ್ಟಿದವರು ಮಾತ್ರ ಅಣ್ತಮ್ಮ ಅಲ್ಲ. ಈ ಶಾಸಕ ಯುದ್ಧಕ್ಕೆ ಬರ್ತಾರಾ ಎಂದು ಪ್ರಶ್ನಿಸಿದ ಸಿಎಂ, ನಮ್ಮ ಕುಟುಂಬ ಸೋಲು-ಗೆಲುವು ಎರಡನ್ನೂ ನೋಡಿದೆ. ದೇವೇಗೌಡರು ನೀರಿನ ಯೋಜನೆ ಮಾಡುವಾಗ ಇವರು ಹುಟ್ಟಿದ್ದರೋ ಇಲ್ವೋ ಗೊತ್ತಿಲ್ಲ. ದೇವದುರ್ಗ ಐಬಿಗೆ ಯಡಿಯೂರಪ್ಪನ ಕರೆತಂದು ಡ್ರಾಮ ಮಾಡಿದ್ರಲ್ಲ ಎಲ್ಲಾ ಗೊತ್ತಿದೆ. ಯಡಿಯೂರಪ್ಪನ ಬೈದರು, ನನ್ನನ್ನು ಹೊಗಳಿದ್ರು ಎಲ್ಲಾ ಗೊತ್ತಿದೆ ಎಂದರು.

    ಯಡಿಯೂರಪ್ಪನನ್ನ ಖೆಡ್ಡಾಕ್ಕೆ ಕೆಡವಿದರು. ಜಿಲ್ಲೆಯಲ್ಲಿ ಹಲವಾರು ಇಲಾಖೆಯಲ್ಲಿ 61 ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಮೈತ್ರಿ ಸರ್ಕಾರ ತೆಗೆದುಕೊಂಡ ನಿರ್ಣಯ, ಯೋಜನೆ ಜನರಿಗೆ ಗೊತ್ತಾಗಲು ಐದಾರು ತಿಂಗಳು ಬೇಕಾಗಿದೆ. ಶಿಕಾರಿಪುರಕ್ಕೆ ನೀರಾವರಿಗಾಗಿ 500 ಕೋಟಿ ಕೊಟ್ಟಿದ್ದೇನೆ. ಇವರು ಮಂಡ್ಯ, ರಾಮನಗರದ ಬಗ್ಗೆ ಚರ್ಚೆ ಮಾಡಲಿ. ಹೃದಯ ವೈಶಾಲ್ಯತೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.

    ಗ್ರಾಮವಾಸ್ತವ್ಯಕ್ಕೆ ಸ್ಕೂಲ್ ನಲ್ಲಿ ಶೌಚಾಲಯ ಕಟ್ಟಿದ್ದಾರೆ. ಇದು ಮಕ್ಕಳಿಗೆ ಅನುಕೂಲ ಆಗುತ್ತದೆ. ನನಗಾಗಿ ಮಲಗಲು ಮಂಚವೂ ಬೇಡ ಎಂದಿದ್ದೇನೆ. ವಾಸ್ತವ್ಯಕ್ಕೆ ಒಂದು ಚಾಪೆ-ದಿಂಬು ಸಾಕು ಎಂದಿದ್ದೇನೆ. ಇಲಾಖೆ ಕಾರ್ಯಕ್ರಮಕ್ಕೆ ಇಲಾಖೆಯಿಂದ ಹಣ ಖರ್ಚು ಮಾಡುತ್ತಾರೆ. ಅದಕ್ಕೂ ನನಗೂ ಸಂಬಂಧ ಇಲ್ಲ ಎಂದು ಹೇಳಿದರು.

    ಇದೇ ವೇಳೆ ಸಿಎಂಗೆ ಸಚಿವರಾದ ಸಾ.ರಾ ಮಹೇಶ್, ವೆಂಕಟರಾವ್ ನಾಡಗೌಡ ಮತ್ತು ಮಾಜಿ ಶಾಸಕ ಕೋನರೆಡ್ಡಿ ಸಾಥ್ ನೀಡಿದರು.

  • ಸಿಎಂ ಗ್ರಾಮ ವಾಸ್ತವ್ಯ- ಅವಸರದ ಅಭಿವೃದ್ಧಿಯಲ್ಲಿ ರಾಯಚೂರಿನ ಕರೇಗುಡ್ಡ

    ಸಿಎಂ ಗ್ರಾಮ ವಾಸ್ತವ್ಯ- ಅವಸರದ ಅಭಿವೃದ್ಧಿಯಲ್ಲಿ ರಾಯಚೂರಿನ ಕರೇಗುಡ್ಡ

    ರಾಯಚೂರು: ಸಿಎಂ ಅವರು ಗ್ರಾಮ ವಾಸ್ತವ್ಯ ಮಾಡಲಿರುವ ರಾಯಚೂರಿನ ಕರೇಗುಡ್ಡ ಈಗ ಅವಸರದ ಅಭಿವೃದ್ದಿಯಲ್ಲಿದೆ. ನಾಡಿನ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಶರವೇಗದಲ್ಲಿ ಸಿದ್ಧತೆಗಳು ನಡೆದಿದೆ. ಇಲ್ಲಿನ ಸರ್ಕಾರಿ ಶಾಲೆ ಸುಣ್ಣಬಣ್ಣವನ್ನ ಕಂಡು ಕಂಗೊಳಿಸುತ್ತಿದೆ.

    ಗ್ರಾಮದ ನೀರಿನ ಸಮಸ್ಯೆ ಬಗೆಹರಿಯಿತು. ಯಾರೂ ಕಿವಿಗೆ ಹಾಕಿಕೊಳ್ಳದ ರಸ್ತೆಯ ಸಮಸ್ಯೆಯೂ ತೀರಿತು. ವಿದ್ಯುತ್ ಸಮಸ್ಯೆಯಂತೂ ಇಲ್ಲವೇ ಇಲ್ಲ. ಗ್ರಾಮ ಎಂದೂ ಕಾಣದ ಚರಂಡಿಯೂ ನಿರ್ಮಾಣವಾಯ್ತು. ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಂತೂ ಹೊಳೆಯುತ್ತಿದೆ. ಇದು ರಾಜ್ಯದ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯಕ್ಕೆ ಸಜ್ಜಾಗಿರೋ ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮ.

    ಸಿಎಂ ಆಗಮನ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ರಾಮದ ಚಿತ್ರಣವನ್ನೇ ಬದಲಿಸಲಾಗಿದೆ. ಸುಮಾರು 22 ಎಕರೆ ಜಾಗದಲ್ಲಿ ಮುಖ್ಯಮಂತ್ರಿ ಜನ ಸಂಪರ್ಕ ಸಭೆಗೆ ವೇದಿಕೆ ಸಜ್ಜಾಗಿದೆ. ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ, ವೇದಿಕೆ ಕೆಳಗೆ ಮನವಿ ಕೊಡಲು ಬರುವವರಿಗೆ ಯಾವುದೇ ತೊಂದರೆಯಾಗದಂತೆ ಒಟ್ಟು 14 ಕೌಂಟರ್ ತೆರೆಯಲಾಗಿದೆ. ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಿಎಂ ವಾಸ್ತವ್ಯ ಮಾಡಲಿರುವ ಶಾಲೆಗೆ ಸುಣ್ಣ ಬಣ್ಣ ಬಳಿದು ಸಕಲ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

    ಮಂಗಳವಾರ ರಾತ್ರಿ 8.45ಕ್ಕೆ ಬೆಂಗಳೂರಿನಿಂದ ಉದ್ಯಾನ ಎಕ್ಸ್‍ಪ್ರೆಸ್‍ನಲ್ಲಿ ಹೊರಟಿರೋ ಸಿಎಂ ಇಂದು ಬೆಳಗ್ಗೆ ರಾಯಚೂರು ತಲುಪಿದ್ದಾರೆ. 8 ಗಂಟೆಗೆ ರಸ್ತೆಯ ಮೂಲಕ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಜನತಾದರ್ಶನದಲ್ಲಿ ಜನರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ. ಸಂಜೆ 6.30ರಿಂದ 8.30 ಗಂಟೆವರೆಗೆ ರೈತರೊಂದಿಗೆ ಮಾತನಾಡಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಮಕ್ಕಳೊಂದಿಗೆ ಊಟ ಮಾಡಿ, ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 5 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೀದರ್‍ನ ಉಜಿಳಾಂಬ ಗ್ರಾಮಕ್ಕೆ ತೆರಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

    ರಾಯಚೂರಿನಲ್ಲಿ ಮುಖ್ಯಮಂತ್ರಿಗಳಿಗೆ ಪ್ರತಿಭಟನೆ ಬಿಸಿ ತಾಗೋ ಸಾಧ್ಯತೆ ಇದೆ. ದೇವದುರ್ಗ ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಮೂಲಕ ಕರೇಗುಡ್ಡಕ್ಕೆ ಬಂದು ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಒಟ್ಟಿನಲ್ಲಿ ಸಿಎಂ ಗ್ರಾಮ ವಾಸ್ತವ್ಯಕ್ಕೆ ಒಂದೆಡೆ ಸಿದ್ಧತೆ ನಡೆದಿದ್ದರೆ, ಮತ್ತೊಂದೆಡೆ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ನಡೆಸಲು ವಿವಿಧ ಸಂಘಟನೆಗಳು ಹಾಗೂ ಬಿಜೆಪಿ ಸಿದ್ಧವಾಗಿದೆ.

  • ಗ್ರಾಮ ವಾಸ್ತವ್ಯ ರದ್ದಾಗಿದ್ದಕ್ಕೆ ಕ್ಷಮೆ – ಮಳೆ ಬಂದಿದ್ದಕ್ಕೆ ಸಿಎಂ ಸಂತಸ

    ಗ್ರಾಮ ವಾಸ್ತವ್ಯ ರದ್ದಾಗಿದ್ದಕ್ಕೆ ಕ್ಷಮೆ – ಮಳೆ ಬಂದಿದ್ದಕ್ಕೆ ಸಿಎಂ ಸಂತಸ

    ಯಾದಗಿರಿ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೇರೂರಲ್ಲಿ ನಿಗದಿಯಾಗಿದ್ದ ಗ್ರಾಮ ವಾಸ್ತವ್ಯ ರದ್ದಾಗಿದ್ದಕ್ಕೆ ಸಿಎಂ ಕ್ಷಮೆ ಕೇಳಿದ್ದಾರೆ.

    ಇಂದು ನಡೆಯಬೇಕಿದ್ದ ಕಲಬುರಗಿ ಜಿಲ್ಲೆಯ ಹೇರೂರು ಬಿ ಗ್ರಾಮದ ಗ್ರಾಮ ವಾಸ್ತವ್ಯ ಸ್ಥಗಿತಗೊಂಡ ಬಗ್ಗೆ ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಸಿಎಂ, ನಾನು ಬರುತ್ತೇನೆಂದು ಕಲಬುರಗಿ ಜಿಲ್ಲೆಯ ಜನ ತುಂಬಾ ನಿರೀಕ್ಷೆ ಇಟ್ಟಿದ್ದರು. ಆದರೆ ಅಲ್ಲಿ ಭಾರೀ ಮಳೆಯ ಕಾರಣ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ. ಮಧ್ಯರಾತ್ರಿ 2 ಗಂಟೆಯ ತನಕ ಡಿ.ಸಿ ಮತ್ತು ಸಚಿವರಿಂದ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಎಷ್ಟೇ ಪ್ರಯತ್ನ ಪಟ್ಟರೂ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಇದರಿಂದ ಮೊದಲಿಗೆ ನಾನು ಹೇರೂರು ಗ್ರಾಮ ಜನರಿಗೆ ಕ್ಷಮೆ ಕೇಳುತ್ತೆನೆ. ಆದರೆ ಮಳೆ ಬಂದಿರುವುದು ಖುಷಿಯಾಗಿದೆ ಎಂದು ಹೇಳಿದ್ದಾರೆ.

    ಜುಲೈ ತಿಂಗಳಲ್ಲಿ ನಡೆಯುವ ಅಧಿವೇಶನ ಸಮಯ ನೋಡಿಕೊಂಡು ದಿನಾಂಕ ತಿಳಿಸುತ್ತೇನೆ. ಯಾದಗಿರಿ ಜಿಲ್ಲೆಯ ಗ್ರಾಮ ವಾಸ್ತವ್ಯದಲ್ಲಿ ಸಾಕಷ್ಟು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಶುಕ್ರವಾರದ ಜನತಾದರ್ಶನದಲ್ಲಿ ಕೆಲವನ್ನು ಬಗೆಹರಿಸಿದ್ದೇನೆ ಎಂದರು. ಇದನ್ನೂ ಓದಿ: ಗ್ರಾಮವಾಸ್ತವ್ಯಕ್ಕೆ ವರುಣನ ಅಡ್ಡಿ – ಸಿಎಂರ ಹಳ್ಳಿವಾಸ ಮುಂದೂಡಿಕೆ

    ನಿನ್ನೆ ಸ್ವೀಕರಿಸಿದ ಅರ್ಜಿಗಳ ವರ್ಗಿಕರಣ ಮಾಡಲಾಗಿದೆ. ಕಂದಾಯ ಇಲಾಖೆ ವ್ಯಾಪ್ತಿಯ ಅರ್ಜಿಗಳನ್ನ ಡಿಸಿ, ಸಿಇಒ ವಿಲೇವಾರಿ ಮಾಡಲಿದ್ದಾರೆ. ಉದ್ಯೋಗ ಅವಕಾಶ ನೀಡಬೇಕೆಂದು ಬೇಡಿಕೆ ಇರೋ 100 ಮನವಿಗಳಿವೆ. ಖಾಸಗಿ ವ್ಯಕ್ತಿಗಳೊಂದಿಗೆ ಚರ್ಚಿಸಿ ಉದ್ಯೋಗ ಕಲ್ಪಿಸಲಾಗುತ್ತದೆ. ದೀರ್ಘಾವಧಿಯ ಕಾರ್ಯಕ್ರಮಗಳಿಗೆ ಶೀಘ್ರವೇ ಚಾಲನೆ ನೀಡಲಾಗುತ್ತದೆ. ಶಾಲೆಗೆ ಹೋಗಲು ಬಸ್ ಕೇಳಿದ್ದಾರೆ. ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

    ಇದೇ ವೇಳೆ ಅಪಘಾತದಲ್ಲಿ ದೇಹದ ಸ್ವಾಧೀನ ಕಳೆದುಕೊಂಡ ಭೀಮಾರೆಡ್ಡಿಗೆ 5 ಲಕ್ಷ ರೂ. ಪರಿಹಾರವನ್ನು ಸಿಎಂ ವಿತರಿಸಿದ್ದಾರೆ. ಈ ಪರಿಹಾರದ ಚೆಕ್ ಅನ್ನು ಸಿಎಂ ಅವರು ಭೀಮಾರೆಡ್ಡಿ ಪೋಷಕರ ಕೈಗೆ ನೀಡಿದ್ದಾರೆ. ನಂತರ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಅರಳಿ ಸಸಿ ನೆಟ್ಟು ಸಿಎಂ ನೀರು ಹಾಕಿದರು. ಇದೇ ವೇಳೆ ಗಾರ್ಡ್ ಆಫ್ ಆನರ್ ಮೂಲಕ ಸಿಎಂಗೆ ಯಾದಗಿರಿ ಜಿಲ್ಲಾಡಳಿತ ಗೌರವ ಸಮರ್ಪಣೆ ಮಾಡಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಚಂಡರಕಿಯಲ್ಲಿ ಸಿಎಂ ಗ್ರಾಮವಾಸ್ತವ್ಯ ಅಂತ್ಯ – ಯಾದಗಿರಿಗೆ ಬಂಪರ್ ಕೊಡುಗೆ

    ಚಂಡರಕಿಯಲ್ಲಿ ಸಿಎಂ ಗ್ರಾಮವಾಸ್ತವ್ಯ ಅಂತ್ಯ – ಯಾದಗಿರಿಗೆ ಬಂಪರ್ ಕೊಡುಗೆ

    ಯಾದಗಿರಿ: ಕಲಬುರಗಿಯ ಹೇರೂರಿನಲ್ಲಿ ಗ್ರಾಮ ವಾಸ್ತವ್ಯ ಮಳೆಯಿಂದ ರದ್ದಾಗಿದೆ. ಆದರೆ ನಿನ್ನೆ ಅಂದರೆ ಮೊದಲ ದಿನದ ಸಿಎಂ ಗ್ರಾಮವಾಸ್ತವ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹಲವು ದೂರು-ದುಮ್ಮಾನಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳಿಗೆ ಸಿಹಿ-ಕಹಿಯ ಮಿಶ್ರ ಸ್ಪಂದನೆ ವ್ಯಕ್ತವಾಯ್ತು.

    ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ತಮ್ಮ ಜನಪ್ರಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿರುವ ಮುಖ್ಯಮಂತ್ರಿಗಳು, ಮೊದಲ ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಯಾದಗಿರಿಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಿಎಂ ರಾತ್ರಿ ವಾಸ್ತವ್ಯ ಮಾಡಿದರು. ಸಾಮಾನ್ಯರಂತೆ ಶಾಲೆಯ ಕೊಠಡಿಯಲ್ಲಿ ನೆಲದ ಮೇಲೆ ಚಾಪೆ ಹಾಸಿಕೊಂಡು, ತಲೆಗೊಂದು ದಿಂಬು, ಹಾಕಿಕೊಂಡು ರಾತ್ರಿಯಿಡೀ ಕಳೆದರು.

    ಮುಖ್ಯಮಂತ್ರಿಗಳಿಗೆ ಎಂಎಲ್‍ಸಿ ಭೋಜೇಗೌಡ ಕೂಡ ಸಾಥ್ ನೀಡಿದರು. ಸತತ 8 ಗಂಟೆಗಳ ಕಾಲ ಜನತಾದರ್ಶನ ಮಾಡಿದ ಸಿಎಂಗೆ ಹಲವು ದೂರು ದುಮ್ಮಾನಗಳು ಕೇಳಿಬಂತು. ಬಿಸಿಲ ತಾಪ, ಮಳೆ ನಡುವೆಯೂ ಜನರಿಂದ ಅಹವಾಲು ಸ್ವೀಕರಿಸಿದರು. ಮುನಗಲ್ ಗ್ರಾಮದ ಪೋಷಕರು ಅಪಘಾತದಿಂದ ದೇಹದ ಸ್ವಾಧೀನ ಕಳೆದುಕೊಂಡಿದ್ದ ಮಗನನ್ನು ಕರೆತಂದಿದ್ದರು. ಸುಮಾರು 30 ಲಕ್ಷ ವೆಚ್ಚ ಮಾಡಿದ್ರೂ ಮಗ ಸರಿಹೋಗಲಿಲ್ಲ ಎಂದು ತಂದೆ-ತಾಯಿ ಅಳಲು ತೋಡಿಕೊಂಡರು. ಈ ವೇಳೆ ಜನತಾ ದರ್ಶನದ ವೇದಿಕೆ ಮಮ್ಮಲ ಮರುಗಿತು. ತಕ್ಷಣ ಜನತಾ ದರ್ಶನದಲ್ಲಿ ಸ್ಥಳದಲ್ಲೇ ಸಿಎಂ 5 ಲಕ್ಷ ಘೋಷಿಸಿದರು.

    ಸಿಎಂಗೆ ಶಾಲಾ ಮಕ್ಕಳು ಗಣಪತಿ ಮೂರ್ತಿ ಗಿಫ್ಟ್ ಕೊಟ್ಟರು. ಇದೇ ವೇಳೆ ಮಕ್ಕಳು ಜನತಾದರ್ಶನದ ವೇದಿಕೆ ಮೇಲೆ ಹತ್ತಿ ಸಿಎಂ ಜೊತೆ ಸೆಲ್ಫಿ ತೆಗೆದುಕೊಂಡರು. ಜನತಾದರ್ಶನ ಬಳಿಕ ಮಾತನಾಡಿದ ಸಿಎಂ, ನನ್ನ ದೇಹಕ್ಕೆ ಏನೇ ದಂಡನೆ ಆಗಲಿ. ನನ್ನ ಆರೋಗ್ಯ ಪರಿಸ್ಥಿತಿ ಹೇಗೇ ಇರಲಿ. ನಾನು ಸ್ವೀಕರಿಸಿರುವ ಮತ್ತೊಂದು ಸವಾಲನ್ನು ಎದುರಿಸುತ್ತೇನೆ. ಉತ್ತರ, ದಕ್ಷಿಣ, ಹೈದರಾಬಾದ್, ಮುಂಬೈ ಅಂತ ನನಗೆ ಭೇದ ಇಲ್ಲ. ನನಗೆ ಅಖಂಡ ಕರ್ನಾಟಕದ ಅಭಿವೃದ್ಧಿ ಮುಖ್ಯ ಎಂದರು.

    ಯಾದಗಿರಿ ಜಿಲ್ಲೆ ಸೇರಿದಂತೆ ಚಂಡರಕಿ ಗ್ರಾಮಕ್ಕೂ ಪ್ರತ್ಯೇಕವಾಗಿ ಹಲವು ಯೋಜನೆಗಳನ್ನು ಘೋಷಿಸಿದರು. ಆದರೆ ಇದು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತೆ ಅನ್ನೋದನ್ನ ಕಾದು ನೋಡ್ಬೇಕು. ಒಟ್ಟಾರೆ ಐಶಾರಾಮಿ ವಾಸ್ತವ್ಯ ಎಂದಿದ್ದ ಟೀಕಿಸಿದ್ದ ಪ್ರತಿಪಕ್ಷಗಳಿಗೆ ಸಿಎಂ ಸರಳ ವಾಸ್ತವ್ಯದ ಮೂಲಕ ತಿರುಗೇಟು ನೀಡಿದ್ರು.

    ಜಿಲ್ಲೆಗೆ ಸಿಎಂ ಘೋಷನೆ:
    * ಯಾದಗಿರಿ ಜಿಲ್ಲಾ ಆಸ್ಪತ್ರೆಯನ್ನು 100 ಬೆಡ್‍ನಿಂದ 300 ಬೆಡ್‍ಗೆ ಪರಿವರ್ತಿಸಲು ನಿರ್ದೇಶನ
    * ಯಾದಗಿರಿ ಜಿಲ್ಲಾ ಆಸ್ಪತೆಗೆ ಸಂಪರ್ಕ ರಸ್ತೆ ಕಲ್ಪಿಸಲು 1.5 ಕೋಟಿ ರೂ. ಬಿಡುಗಡೆ
    * ಕಡೇಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ತಕ್ಷಣ ಮೂಲಭೂತ ಸೌಲಭ್ಯ ಕಲ್ಪಿಸಲು ಸೂಚನೆ
    * ಯಾದಗಿರಿ ನಗರದಲ್ಲಿ ಅಪೂರ್ಣವಾಗಿರುವ ಒಳಚರಂಡಿ ಕಾಮಗಾರಿ ತಕ್ಷಣವೇ ಪೂರ್ಣಗೊಳಿಸಲು ಸೂಚನೆ

    * 1 ಸಾವಿರ ಕೋಟಿ ವೆಚ್ಚದಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರತಿ ಹಳ್ಳಿಗೆ ಜಲಧಾರೆ ಯೋಜನೆ ನದಿಯ ಮೂಲದಿಂದ ಕುಡಿಯುವ ನೀರು ಪೂರೈಕೆ
    * ಗ್ರಾಮ ವಾಸ್ತವ್ಯದ ಹಿನ್ನೆಯಲ್ಲಿ ಕಳೆದ 10 ದಿನಗಳಿಂದ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯ ಅದಾಲತ್
    * 104 ಪಿಂಚಣಿ, 126 ಪಡಿತರ ಚೀಟಿ, 500ಕ್ಕೂ ಹೆಚ್ಚು ಪಹಣಿ ತಿದ್ದುಪಡಿ ಮಾಡಲಾಗಿದೆ
    * ಜನತಾದರ್ಶನದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 8.30 ಗಂಟೆಯವರೆಗೆ ಸುಮಾರು 4,000 ಅರ್ಜಿ ಸ್ವೀಕಾರ
    * ಅರ್ಜಿಗಳನ್ನು ಇಲಾಖಾವಾರು ವಿಂಗಡಿಸಿ, ಆದ್ಯತೆಯ ಮೇರೆಗೆ ಪರಿಹಾರ ನೀಡಲು ಸೂಚನೆ
    * ಅಂಗವಿಕಲರ ರಿಯಾಯತಿ ದರದ ಕೆಎಸ್‍ಆರ್‍ಟಿಸಿ ಬಸ್ ಪಾಸ್ ಮುಂದುವರಿಸಲು ಸೂಚನೆ
    * ಪಹಣಿ ತಿದ್ದುಪಡಿ, ವೈದ್ಯಕೀಯ ಚಿಕಿತ್ಸಾ ವೆಚ್ಚ, ವಿದ್ಯುತ್ ಪರಿವರ್ತಕಗಳ ಬದಲಾವಣೆ, ಸಾಲಮನ್ನಾ

    * ಸಾಮಾಜಿಕ ಭದ್ರತೆ ಯೋಜನೆಗಳಿಗೆ ಸಂಬಂಧ ಸುಮಾರು 2 ಸಾವಿರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲು ಸೂಚನೆ
    * ಅಪಘಾತದಲ್ಲಿ ಗಾಯಗೊಂಡಿರುವ ಮುನಗಲ್ ಗ್ರಾಮದ ಇಂಜಿನಿಯರಿಂಗ್ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರಿಗೆ ತಕ್ಷಣ 5 ಲಕ್ಷ ರೂ.ಗಳ ಪರಿಹಾರಕ್ಕೆ ಸೂಚನೆ

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗ್ರಾಮವಾಸ್ತವ್ಯಕ್ಕೆ ವರುಣನ ಅಡ್ಡಿ – ಸಿಎಂರ ಹಳ್ಳಿವಾಸ ಮುಂದೂಡಿಕೆ

    ಗ್ರಾಮವಾಸ್ತವ್ಯಕ್ಕೆ ವರುಣನ ಅಡ್ಡಿ – ಸಿಎಂರ ಹಳ್ಳಿವಾಸ ಮುಂದೂಡಿಕೆ

    ಕಲಬುರಗಿ: ಮುಖ್ಯಮಂತ್ರಿಗಳ ಎರಡನೇ ದಿನದ ಗ್ರಾಮ ವಾಸ್ತವ್ಯಕ್ಕೆ ವರುಣನ ಅಡ್ಡಿಯಾಗಿದೆ. ಹೀಗಾಗಿ ಕಲಬುರಗಿಯ ಅಫಜಲಪುರ ತಾಲೂಕಿನ ಹೆರೂರು(ಬಿ) ಗ್ರಾಮ ಇಂದಿನ ವಾಸ್ತವ್ಯ ಭಾರೀ ಮಳೆಯಿಂದ ರದ್ದಾಗಿದೆ.

    ಸುಮಾರು 13 ವರ್ಷಗಳ ಬಳಿಕ ಸಿಎಂ ಕೈಗೊಂಡ ಮೊದಲ ದಿನದ ಗ್ರಾಮವಾಸ್ತವ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಿಎಂ ಗ್ರಾಮವಾಸ್ತವ್ಯದ ಕಾರಣ ಇಡೀ ಚಂಡರಕಿ ಗ್ರಾಮ ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಚಂಡರಕಿಯಲ್ಲಿ ಜನತಾದರ್ಶನ 3 ಗಂಟೆ ತಡವಾಗಿ ಆರಂಭವಾಗಿದ್ದು, ರಾತ್ರಿ 8 ಗಂಟೆ ತನಕವೂ ಸಿಎಂ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

    ಬಳಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು. ನಂತರ ಮಕ್ಕಳೊಂದಿಗೆ ರಾತ್ರಿಯ ಭೋಜನ ಸವಿದರು. ರಾತ್ರಿಯ ಭೋಜನದ ಬಳಿಕ ಗ್ರಾಮಸ್ಥರು, ಶಾಲಾ ಮಕ್ಕಳ ಜೊತೆಗೆ ಫೋಟೋ ಸೆಷನ್ ಕೂಡ ನಡೆಯಿತು. ಸಿಎಂಗೆ ಶಾಲೆಯ ಕೊಠಡಿಯಲ್ಲಿ ಯಾವುದೇ ಹಾಸಿಗೆ ಇಲ್ಲದೆ ಚಾಪೆ, ದಿಂಬು, ಹೊದಿಕೆಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಮುಖ್ಯಮಂತ್ರಿಗಳ 2ನೇ ದಿನದ ಗ್ರಾಮವಾಸ್ತವ್ಯ ಕಲಬುರಗಿ ಜಿಲ್ಲೆ ಅಫ್ಜಲಪುರದ ಬಿ.ಹೇರೂರು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಆದರೆ ರಾತ್ರಿಯಿಡೀ ಹೆರೂರಿನಲ್ಲಿ ಭಾರೀ ಮಳೆಯಾಗಿದ್ದು, ಸಿಎಂ ಜನತಾದರ್ಶನಕ್ಕಾಗಿ ಹಾಕಿದ್ದ ಪೆಂಡಾಲ್ ಹಾಳಾಗಿದೆ. ಇಂದು ಕೂಡ ಭಾರೀ ಮಳೆಯ ಮುನ್ಸೂಚನೆ ಇರೋದ್ರಿಂದ ಜಿಲ್ಲಾಡಳಿತ ಸಿಎಂ ಅವರ ಹಳ್ಳಿ ವಾಸವನ್ನು ಮುಂದೂಡಿದೆ.

    ಅಲ್ಲದೆ ಮುಂದಿನ ಹೆರೂರು ಗ್ರಾಮದ ವಾಸ್ತವ್ಯದ ದಿನಾಂಕವನ್ನು ಸಿಎಂ ನಿಗದಿಪಡಿಸಲಿದ್ದಾರೆ. ಸದ್ಯ ಯಾದಿಗಿರಿಯ ಚಂಡರಕಿಯಲ್ಲಿರುವ ಸಿಎಂ 8 ಗಂಟೆ ಸುಮಾರಿಗೆ ಹೈದರಾಬಾದ್‍ಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಬೆಳಸಲಿದ್ದಾರೆ. ಒಟ್ಟಿನಲ್ಲಿ ದಿಢೀರನೇ ಸಿಎಂ ಗ್ರಾಮವಾಸ್ತವ್ಯ ರದ್ದಿನಿಂದಾಗಿ ಕಲಬುರಗಿಯ ಹೇರೂರು ಗ್ರಾಮಸ್ಥರಿಗೆ ನಿರಾಸೆಯಾಗಿದೆ. ಸಿಎಂ ಮುಂದಿನ ಗ್ರಾಮವಾಸ್ತವ್ಯದ ದಿನಾಂಕ ಯಾವಾಗ ನಿಗದಿಯಾಗುತ್ತೋ ಕಾದು ನೋಡಬೇಕಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸಿಎಂ ಗ್ರಾಮ ವಾಸ್ತವ್ಯ ಮಾಡುವ ಶಾಲೆಯಲ್ಲಿ ಹೈಟೆಕ್ ಬಾತ್ ರೂಂ

    ಸಿಎಂ ಗ್ರಾಮ ವಾಸ್ತವ್ಯ ಮಾಡುವ ಶಾಲೆಯಲ್ಲಿ ಹೈಟೆಕ್ ಬಾತ್ ರೂಂ

    ಯಾದಗಿರಿ: ಇಂದು ತಮ್ಮ ಗ್ರಾಮ ವಾಸ್ತವ್ಯ ಆರಂಭಿಸುವ ಸಿಎಂ ನಾನು ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತೇನೆ. ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ ಸರಕಾರದ ಖಜಾನೆಯ ದುಡ್ಡು ಉಳಿಸುತ್ತೇನೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದರು. ಅಸಲಿಗೆ ಸಿಎಂ ಗ್ರಾಮ ವಾಸ್ತವ್ಯ ನಿಜಕ್ಕೂ ಸರಳತೆಯಿಂದ ಕೂಡಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ.

    ಸಿಎಂ ಈ ಬಾರಿ ನಾನು ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ, ಕನ್ನಡ ಶಾಲೆಗಳ ಮತ್ತು ಗ್ರಾಮಗಳ ಅಭಿವೃದ್ಧಿ ಮಾಡುತ್ತೆನೆಂದು ಹೇಳಿದ್ದರು. ಅಲ್ಲದೆ ಯಾವ ದುಂದು ವೆಚ್ಚವಿಲ್ಲದೆ ಸರಳವಾಗಿ ಈ ಬಾರಿಯ ಗ್ರಾಮ ವಾಸ್ತವ್ಯ ಇರಲಿದೆ ಎಂದು ಕೂಡ ತಿಳಿಸಿದ್ದರು. ಆದರೆ ಸಿಎಂ ಅವರ ಗ್ರಾಮ ವಾಸ್ತವ್ಯದ ಸರಳತೆ ಬಗ್ಗೆ ಅನುಮಾನ ಮೂಡಿಸಿದೆ. ಇದಕ್ಕೆ ಕಾರಣವಾಗಿರೋದು ಬಾತ್ ರೂಮ್.

    ಹೌದು ಮೊನ್ನೆ ತನಕ ಇಲ್ಲಿ ಯಾವುದೇ ಬಾತ್ ರೂಮ್ ಇರಲಿಲ್ಲ. ಆದರೆ ಗುರುವಾರ ರಾತ್ರೋರಾತ್ರಿ ಸದ್ದಿಲ್ಲದೆ ಹೈಟೆಕ್ ಬಾತ್‍ರೂಂ ತಲೆ ಎತ್ತಿದೆ. ಈ ಬಾತ್‍ರೂಮ್ ಶಾಲೆಯ ಮಕ್ಕಳು ದಿನಾಲೂ ಬಳಸುವ ಶೌಚಾಲಯ ಅಲ್ಲ. ಸಿಎಂ ಬರ್ತಿರೋ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ನಿರ್ಮಾಣವಾಗಿದೆ. ಸರಕಾರಿ ಶಾಲೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ವಾಸ್ತವ್ಯ ಮಾಡುತ್ತೆನೆಂದು ಹೇಳುವ ಸಿಎಂಗೆ ಕೇವಲ ಒಂದು ದಿನಕ್ಕಾಗಿ ಸುಮಾರು 3 ಲಕ್ಷ ವೆಚ್ಚದಲ್ಲಿ ಹೈಟೆಕ್ ಬಾತ್ ರೂಮ್ ನಿರ್ಮಾಣವಾಗಿದೆ. ಇದನ್ನೂ ಓದಿ: ಗ್ರಾಮ ವಾಸ್ತವ್ಯಕ್ಕಾಗಿ ಸಿಎಂ ರೈಲು, ಕೆಎಸ್‌ಆರ್‌ಟಿಸಿ ಯಾನ – ಸಿಎಂ ಸ್ವಾಗತಕ್ಕೆ ಸಜ್ಜಾಗಿದೆ ಚಂಡರಕಿ ಗ್ರಾಮ

    ಹೈಟೆಕ್ ಬಾತ್ ರೂಮ್ ಹೇಗಿದೆ?:
    ಸಿಎಂ ಬಳಕೆಗಾಗಿ ನಿರ್ಮಾಣವಾಗುತ್ತಿರುವ ಸ್ನಾನ ಮತ್ತು ಶೌಚಾಲಯದಲ್ಲಿ ದುಬಾರಿ ಬೆಲೆಯ ಪಿಂಗಾಣಿ ಸಿಂಕ್, ಟೈಲ್ಸ್, ಮತ್ತು ಗ್ಲಾಸ್ ಬಾಗಿಲುಗಳಿವೆ. ನಾನು ಸರಕಾರಿ ಶಾಲೆಯಲ್ಲಿ ಸರಳವಾಗಿ ವಾಸ್ತವ್ಯ ಮಾಡುತ್ತೆನೆಂದು ಹೇಳುವ ಸಿಎಂಗೆ ಈ ದುಬಾರಿ ಬಾತ್ ರೂಮ್ ಬೇಕಿತ್ತಾ ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

    ಗ್ರಾಮದ ಕೆಲ ಪ್ರಜ್ಞಾವಂತರ ಆಕ್ರೋಶಕ್ಕೆ ಸಹ ಈ ಬಾತ್ ರೂಮ್ ಕಾರಣವಾಗಿದೆ. ಈ ಒಂದು ದಿನಕ್ಕೆ ಬಳಸುವ ಬಾತ್ ರೂಮ್ ವೆಚ್ಚದಲ್ಲಿ ನಮ್ಮ ಗ್ರಾಮದಲ್ಲಿ 30 ಶೌಚಾಲಯ ಕಟ್ಟಿಸಬಹುದಿತ್ತು ಎಂಬ ಅಸಮಾಧಾನದ ಮಾತುಗಳು ಜನರಿಂದ ಕೇಳಿಬರುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]