Tag: grama vastavaiya

  • ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಲಿ – ಸಿಟಿ ರವಿ

    ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಲಿ – ಸಿಟಿ ರವಿ

    – ಲೋಕಸಭೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ
    – ಅನುದಾನ ಹಂಚಿಕೆಯಲ್ಲಿ ತಾರತಮ್ಯ ಬೇಡ

    ಬೆಂಗಳೂರು: ನೀವು ಹತಾಶರಾಗಿ ಈ ರೀತಿ ವರ್ತನೆ ಮಾಡುತ್ತಿರುವಿರಿ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಮ್ಮ ಹಾಗೂ ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

    ಪ್ರತಿಭಟನಾಕಾರರ ಮೇಲೆ ಆಕ್ರೋಷ ವ್ಯಕ್ತಪಡಿಸಿದ ವಿಚಾರವಾಗಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಲೋಕಸಭೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ. ಸಿಂಗಲ್ ನಂಬರ್ ಕೂಡ ಅವರಿಗೆ ಬೇಕಾಗಿಲ್ಲ ಅಂತ ಅನ್ನಿಸುತ್ತದೆ. ಹೀಗಾಗಿ ಸಿಎಂ ಹೀಗೆಲ್ಲ ಮಾತಾಡಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಮಗನಿಗೆ ರಾಜೀನಾಮೆ ನೀಡುವ ಸಲಹೆ ನೀಡಲಿ. ಈ ಮೂಲಕ ಸಿಎಂ ರಾಜ್ಯದ ಜನರ ಹಿತ ಕಾಪಾಡಲಿ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ

    ಸಿಎಂ ಅವರಿಗೆ ಅಧಿಕಾರಲ್ಲಿ ಮುಂದುವರೆಯುವ ಯೋಗ್ಯತೆ, ಅರ್ಹತೆ ಏನಿದೆ? ಈ ಬಗ್ಗೆ ರಾಜ್ಯದ ಜನರಿಗೆ ಉತ್ತರ ಕೊಡಲಿ. ಇದು ಕರ್ನಾಟಕ ಸರ್ಕಾರ. ಬಿಜೆಪಿ, ಜೆಡಿಎಸ್ ಸರ್ಕಾರ ಅಂತ ಇರುವುದಿಲ್ಲ. ಸಂವಿಧಾನದತ್ತವಾಗಿ ಸಿಎಂ ಅಧಿಕಾರ ನಿಮಗೆ ನೀಡಲಾಗಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ ಎಂದು ಕಿಡಿಕಾರಿದರು.

    ಸಿಎಂ ಇಂದು ಸಣ್ಣತನದ ಮಾತುಗಳನ್ನು ಆಡಿದ್ದಾರೆ. ಶಾಸಕ ಶಿವನಗೌಡ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿರುವ ಹಿನ್ನೆಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆಯೂ ಸಿಎಂ ಏಕವಚನದಲ್ಲಿ ಮಾತಾಡಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಜೆಡಿಎಸ್ ಮುಖ್ಯಮಂತ್ರಿಯೋ? ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರಾ? ಅಥವಾ ಜೆಡಿಎಸ್ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

    ಹೋರಾಟಗಾರರು ನಿಮ್ಮ ತಂದೆಯ ಆಸ್ತಿ ಕೇಳಿಲ್ಲ. ರಾಜ್ಯದ ಮುಖ್ಯಮಂತ್ರಿ ಆಗಲು ನಿಮಗೆ ಯೋಗ್ಯತೆ ಇಲ್ಲ. ನೀವು ಜೆಡಿಎಸ್ ಮುಖ್ಯಮಂತ್ರಿಗಳಾಗಿದ್ದರೆ ನಿಮಗೆ ನೀಡುತ್ತಿರುವ ಸೌಲಭ್ಯಗಳನ್ನು ರಾಜ್ಯಪಾಲರು ವಾಪಸ್ ಪಡೆಯಲಿ. ನಿಮ್ಮ ಮಾತು ಅಸಂವಿಧಾನಿಕ ಮಾತು. ಜನರನ್ನ ಕೆರಳಿಸುವ ಮಾತುಗಳನ್ನು ಆಡುತ್ತಿರುವಿರಿ ಎಂದು ಸಿಎಂ ವಿರುದ್ಧ ಗುಡುಗಿದರು.

    ಎಚ್‍ಆರ್ ಬಿಆರ್ ಲೇಔಟ್‍ನಲ್ಲಿ 2006ರಂದು ಬಿಡಿಎ ನಿಂದ ನಿವೇಶನ ಪಡೆದಿದ್ದೆ. ಆದರೆ ಈಗ ಅದನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಬಳಿಕ ಬದಲಿ ನಿವೇಶನಕ್ಕೆ ಮನವಿ ಸಲ್ಲಿಸಿದ್ದೆ. ಆದರೆ ಇಲ್ಲಿಯವರೆಗೂ ನಿವೇಶನ ನೀಡಿಲ್ಲ. ಒಂದು ವಾರದಲ್ಲಿ ಬದಲಿ ನಿವೇಶನ ಕೊಡಿ, ಇಲ್ಲವೇ ನನ್ನ ಹಳೆಯ ನಿವೇಶನ ಕೊಡಿ. ಒಂದು ವೇಳೆ ನೀವು ನಿವೇಶನ ನೀಡದಿದ್ದರೆ ಬಿಡಿಎ ಮುಂದೆ ಧರಣಿ ಮಾಡುತ್ತೇನೆ ಎಂದು ಶಾಸಕರು ಎಚ್ಚರಿಕೆ ಕೊಟ್ಟಿದ್ದಾರೆ.

    ಬಿಡಿಎಯಲ್ಲಿ ದಂಧೆ ನಡೆಯುತ್ತಿದೆ. ಸಿಬ್ಬಂದಿ, ಅಧಿಕಾರಿಗಳು ಶ್ರೀಮಂತರಾಗುತ್ತಿದ್ದಾರೆ. ಬಿಡಿಎ ಮಾತ್ರ ಸಾಲದಲ್ಲಿ ಇದೆ. ಈ ದಂಧೆ ನಿಲ್ಲಿಸುವ ಅಧಿಕಾರಿಯೊಬ್ಬನ್ನು ನೇಮಕವಾಗಬೇಕಿದೆ ಎಂದು ಒತ್ತಾಯಿಸಿದರು.

  • ಗ್ರಾಮ ವಾಸ್ತವ್ಯಕ್ಕೆ ರೈಲಿನಲ್ಲಿ ಸಿಎಂ ಪಯಣ

    ಗ್ರಾಮ ವಾಸ್ತವ್ಯಕ್ಕೆ ರೈಲಿನಲ್ಲಿ ಸಿಎಂ ಪಯಣ

    ಬೆಂಗಳೂರು:ಮುಖ್ಯಮಂತ್ರಿ ಅವರ ಗ್ರಾಮವಾಸ್ತವ್ಯಕ್ಕೆ ಭರದ ಸಿದ್ಧತೆ ನಡೆದಿದ್ದು, ಇದೀಗ ಜನರ ಬಳಿಗೆ ಸಿಂಪಲ್ಲಾಗಿ ಹೋಗಲು ಸಿಎಂ ಪ್ಲಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಸಿಎಂ ಜೂನ್ 21ರಂದು ಯಾದಗಿರಿಯ ಗುರುಮಿಠ್ಕಲ್‍ನ ಚಂಡ್ರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮ ವಾಸ್ತವ್ಯಕ್ಕೆ ಹೊರಟ ಸಿಎಂ ಸಿಂಪಲ್ಲಾಗಿಯೇ ಜನರ ಬಳಿಗೆ ಹೋಗಲು ತೀರ್ಮಾನ ಮಾಡಿದ್ದು, ಈ ಗ್ರಾಮಕ್ಕೆ ತೆರಳಲು ಮುಖ್ಯಮಂತ್ರಿಗಳು ರೈಲು ಮಾರ್ಗ ಬಳಸುತ್ತಿದ್ದಾರೆ.

    ಜೂನ್ 20ರಂದು ರಾತ್ರಿ ಬೆಂಗಳೂರಿನಿಂದ ಯಾದಗಿರಿಗೆ ಕರ್ನಾಟಕ ಎಕ್ಸ್ ಪ್ರೆಸ್ ರೈಲಿನಲ್ಲಿ ಪಯಣ ಬೆಳೆಸಲಿದ್ದಾರೆ. ಜೂನ್ 21 ರಿಂದ ಹಳ್ಳಿ ಜನರ ಕಷ್ಟ ಕೇಳುವ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಿದ್ದಾರೆ. ಇಷ್ಟು ದಿನ ಬೇರೆ ಬೇರೆ ಗೊಂದಲಗಳಲ್ಲಿ ಸಿಲುಕಿದ್ದ ಸಿಎಂ, ಈಗ ಜನರ ಬಳಿಗೆ ಸಿಂಪಲ್ಲಾಗೆ ಹೋಗಲು ಮುಂದಾಗಿದ್ದು, ತಾವು ಬದಲಾಗಿದ್ದೇವೆ ಎಂದು ತೋರಿಸುತ್ತಿದ್ದಾರಾ ಅನ್ನೋ ಚರ್ಚೆ ಆರಂಭವಾಗಿದೆ.

    ಮಂಗಳವಾರ ಇಡೀ ದಿನ ಲೋಕೋಪಯೋಗಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆ ಸಭೆ ನಡೆಸಿದ್ದ ಸಿಎಂ ಇಂದು ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಸಿಇಓಗಳ ಸಭೆ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಇಡೀ ದಿನ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ರೈತರ ಸಾಲಮನ್ನಾ, ಬರ ನಿರ್ವಹಣೆ ಕುರಿತು ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಪ್ರತಿ ಜಿಲ್ಲಾವಾರು ಸಭೆ ನಡೆಸಲಿರುವ ಸಿಎಂ, ಜಿಲ್ಲೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

  • ಕೋಲಾರಕ್ಕೂ ಸಿಎಂರನ್ನು ಕರೆ ತಂದು ಗ್ರಾಮ ವಾಸ್ತವ್ಯ ಮಾಡಸ್ತೀನಿ: ಶಾಸಕ ನಾಗೇಶ್

    ಕೋಲಾರಕ್ಕೂ ಸಿಎಂರನ್ನು ಕರೆ ತಂದು ಗ್ರಾಮ ವಾಸ್ತವ್ಯ ಮಾಡಸ್ತೀನಿ: ಶಾಸಕ ನಾಗೇಶ್

    – ಎಚ್‍ಡಿಕೆ ಉತ್ತಮ ಆಡಳಿತ ನೋಡಿ ಬೆಂಬಲ ನೀಡಿರುವೆ

    ಕೋಲಾರ: ಸಿಎಂ ಕುಮಾರಸ್ವಾಮಿ ಅವರನ್ನು ಕೋಲಾರ ಜಿಲ್ಲೆಗೆ ಕರೆ ತಂದು ಗ್ರಾಮ ವಾಸ್ತವ್ಯ ಮಾಡಿಸುತ್ತೇನೆ ಎಂದು ಪಕ್ಷೇತರ ಶಾಸಕ ಎಚ್.ನಾಗೇಶ್ ಹೇಳಿದ್ದಾರೆ.

    ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಾತನಾಡಿದ ಶಾಸಕರು, ಸಿಎಂ ಕುಮಾರಸ್ವಾಮಿ ಅವರು ಕಳೆದ ಒಂದು ವರ್ಷದಲ್ಲಿ ಉತ್ತಮ ಕೆಲಸ, ಆಡಳಿತ ನೀಡಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುತ್ತಾರೆ. ಅವರು ಕಾರ್ಯವೈಖರಿ ನೋಡಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿರುವೆ ಎಂದರು.

    ಉತ್ತಮ ಆಡಳಿತ ನೀಡಲು ಸಿಎಂ ಕುಮಾರಸ್ವಾಮಿ ಅವರಿಗೆ ನೆಮ್ಮದಿ ಬೇಕು. ಈ ನಿಟ್ಟಿನಲ್ಲಿ ಸಚಿವರು, ಶಾಸಕರು ಸಹಕಾರ ನೀಡಬೇಕಿದೆ. ನಮ್ಮ ಕ್ಷೇತ್ರದ ಅಭಿವೃದ್ಧಿ ಉದ್ದೇಶದಿಂದ ನಾನು ಕೂಡ ಕುಮಾರಸ್ವಾಮಿ ಅವರ ಕೈಯನ್ನು ಬಲಪಡಿಸುತ್ತಿರುವೆ ಎಂದು ಹೇಳಿದರು.

    ನನಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದು, ಬುಧವಾರದವರೆಗೂ ಕಾಯುವಂತೆ ತಿಳಿಸಿದ್ದಾರೆ. ಅವರು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹೀಗಾಗಿ ಸುಭದ್ರ ಸರ್ಕಾರಕ್ಕೆ ನಮ್ಮ ಬೆಂಬಲ ಇದೆ. ಸಚಿವ ಸ್ಥಾನ ಸಿಕ್ಕರೆ ಖುಷಿಯಾಗುತ್ತದೆ. ಮಂತ್ರಿಗಿರಿ ಇದ್ದರೆ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

  • ಗಂಭೀರವಾಗಿ ಪರಿಶೀಲಿಸುವೆ – ಪಬ್ಲಿಕ್ ಟಿವಿ ಗ್ರಾಮ ‘ವಾಸ್ತವ’ ವರದಿಗೆ ಸಿಎಂ ಸ್ಪಂದನೆ

    ಗಂಭೀರವಾಗಿ ಪರಿಶೀಲಿಸುವೆ – ಪಬ್ಲಿಕ್ ಟಿವಿ ಗ್ರಾಮ ‘ವಾಸ್ತವ’ ವರದಿಗೆ ಸಿಎಂ ಸ್ಪಂದನೆ

    ಬೆಂಗಳೂರು: ಎಚ್‍ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ನಡೆಸಿದ್ದ ವೇಳೆ ಕೈಗೊಂಡಿದ್ದ ಗ್ರಾಮ ವಾಸ್ತವ್ಯದ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಗ್ರಾಮ ವಾಸ್ತವ್ಯದ ಲೋಪ ದೋಷಗಳು ಏನು? ಯಾವೆಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಆಗಿದೆ. ಇಂದಿಗೂ ಗ್ರಾಮದಲ್ಲಿ ಯಾವೆಲ್ಲಾ ಸಮಸ್ಯೆಗಳು ಇದೆ ಎಂಬುವುದರ ವಾಸ್ತವತೆಯನ್ನು ತೆರೆದಿಟ್ಟಿತ್ತು.

    ಪಬ್ಲಿಕ್ ಟಿವಿಯ ವರದಿಯ ನೋಡಿರುವ ಸಿಎಂ ಕುಮಾರಸ್ವಾಮಿ ಅವರು ವರದಿಯ ಸಕರಾತ್ಮಕ ಅಂಶಗಳನ್ನು ಸ್ವೀಕರಿಸಿ, ಗ್ರಾಮಗಳ ಕುಂದು ಕೊರತೆಗಳ ನಿವಾರಣೆಗೆ ಕಾರ್ಯ ನಿರ್ವಹಿಸುತ್ತೇನೆ. ಅಲ್ಲದೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ವರದಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಾಸ್ತವ್ಯ ಮಾಡಿದ್ದ ಗ್ರಾಮದಗಳಲ್ಲಿ ಇಂದಿಗೂ ಯಾವ ಸಮಸ್ಯೆಗಳಿವೆ ಎಂಬುವುದನ್ನು ವಿಸ್ತಾವರವಾಗಿ ವಿವರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಅಧಿಕಾರಿಗಳು, ಸ್ಥಳೀಯ ನಾಯಕರ ಗಮನಕ್ಕೆ ತಂದು ಕಾರ್ಯಗಳನ್ನು ಮಾಡುತ್ತೇನೆ. ಮುಂದಿನ ಕಾರ್ಯಕ್ರಮಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತ ಪ್ರಯತ್ನಿಸುವೆ ಎಂದಿದ್ದಾರೆ. ಇದನ್ನು ಓದಿ: ಸಿಎಂ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಈಗ ಹೇಗಿದೆ? ಎಷ್ಟು ಭರವಸೆ ಪೂರ್ಣವಾಗಿದೆ? – ಕಂಪ್ಲೀಟ್ ವರದಿ ಓದಿ

    ಸಿಎಂ ಹೇಳಿಕೆಯಲ್ಲಿ ಏನಿದೆ?
    ನಾನು ಗ್ರಾಮ ವಾಸ್ತವ್ಯ ಮಾಡುವೆನೆಂದು ಘೋಷಿಸಿದ ದಿನದಿಂದ ಮಾಧ್ಯಮಗಳಲ್ಲಿ ನಾನು 2006-07 ರ ಅವಧಿಯಲ್ಲಿ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ-ಗತಿ, ಕುಟುಂಬಗಳ ಕುರಿತು ವರದಿಗಳನ್ನು ಪ್ರಕಟಿಸುತ್ತಿರುವುದನ್ನು ಗಮನಿಸುತ್ತಿರುವೆ. ಈ ಹಿನ್ನೆಲೆಯಲ್ಲಿ ಎರಡು ಮಾತು:

    ಗ್ರಾಮ ವಾಸ್ತವ್ಯ ಎನ್ನುವುದು ಯಾವುದೇ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಅಲ್ಲ. ಈ ಪರಿಕಲ್ಪನೆಯ ಮೂಲ ಪುರುಷನೂ ನಾನಲ್ಲ. ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಿದ್ದು ಆಕಸ್ಮಿಕವಾಗಿ, ಪ್ರವಾಹ ಪೀಡಿತ ಕೃಷ್ಣಾ ನದಿ ದಂಡೆಯ ಪಿ.ಕೆ. ನಾಗನೂರಿನಿಂದ ಎನ್ನುವುದು ನಿಮಗೆಲ್ಲಾ ತಿಳಿದ ವಿಚಾರ. ಗ್ರಾಮ ವಾಸ್ತವ್ಯ ಎಂಬ ಪದವನ್ನು ಚಾಲ್ತಿಗೆ ತಂದವರೂ ನಮ್ಮ ಮಾಧ್ಯಮ ಮಿತ್ರರೇ. ಆದರೆ ಈ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ, ವಿಶ್ವಾಸ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ಜನರ ಸಮಸ್ಯೆಗಳು, ಬದುಕಿನ ಕಟು ವಾಸ್ತವಗಳನ್ನು ಅರಿಯಲು ನೆರವಾಗಿದೆ. ಸರ್ಕಾರದಿಂದ ಆಗಬೇಕಾದ್ದು ಏನು ಎಂಬ ಬಗ್ಗೆ ನೇರ, ಸರಳವಾದ ಅತ್ಯುತ್ತಮ ಸಲಹೆಗಳೂ ಬಂದಿವೆ.

    ಸಾರಾಯಿ ನಿಷೇಧ, ಲಾಟರಿ ನಿಷೇಧ, ಸಾಲ ಮನ್ನಾ, ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳು, 500ಕ್ಕೂ ಹೆಚ್ಚು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆ, ಗ್ರಾಮಗಳ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯ ಸುವರ್ಣ ಗ್ರಾಮ ಯೋಜನೆ – ಇವೆಲ್ಲಾ ಗ್ರಾಮವಾಸ್ತವ್ಯದ ಫಲಶ್ರುತಿಗಳು. ನನ್ನ ಅಧಿಕಾರಾವಧಿಯ ನಂತರ ಸುವರ್ಣ ಗ್ರಾಮ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬಾರದೇ ಇರುವುದು ವಿಷಾದನೀಯ.

    ಗ್ರಾಮ ವಾಸ್ತವ್ಯದ ಮುಖ್ಯ ಗುರಿ, ಆಡಳಿತ ಯಂತ್ರದ ಕಾರ್ಯವೈಖರಿ ಅರಿಯುವುದು. ಸರ್ಕಾರ ರೂಪಿಸಿದ ಯೋಜನೆ ಫಲಕಾರಿಯೇ? ಜನರ ಅಭಿಪ್ರಾಯವೇನು ಎಂಬುದನ್ನು ಅರಿಯುವುದು, ಸುತ್ತಲಿನ ಗ್ರಾಮಗಳ ಜನರೂ ಸೇರುತ್ತಾರೆ. ಅವರಿಂದ ಅಹವಾಲು ಸ್ವೀಕರಿಸಿ ಪರಿಹರಿಸುವುದು. ಕಾನೂನು ವ್ಯಾಪ್ತಿಯಲ್ಲಿ ಇವುಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕೆಲವು ಮನವಿಗಳನ್ನು ಪರಿಗಣಿಸಲು ಸಾಧ್ಯವಾಗದೆ ಇರಬಹುದು. ಇಂಥವುಗಳನ್ನು ನೀವು ಮತ್ತೆ ಗಮನಕ್ಕೆ ತರುತ್ತಿದ್ದೀರಿ. ಖಂಡಿತವಾಗಿಯೂ ಅವುಗಳನ್ನು ಗಂಭೀರವಾಗಿ ಪರಿಶೀಲಿಸುವೆ. ಆ ಗ್ರಾಮದ ಅಭಿವೃದ್ಧಿ ಗ್ರಾಮ ವಾಸ್ತವ್ಯದ ಫಲಶ್ರುತಿಯ ಒಂದು ಭಾಗವಷ್ಟೆ. ಅದೇ ಕೇಂದ್ರ ಗುರಿಯಲ್ಲ.

    ಜನರಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸಿದಾಗ ಅವು ಸಹಜವಾಗಿಯೇ ಯಶಸ್ವಿಯಾಗುತ್ತವೆ. ಅದೇ ರೀತಿ ಯೋಜನೆಗಳನ್ನು ರೂಪಿಸಿ, ಸರ್ಕಾರ ಜನರ ಮೇಲೆ ಹೇರಿದರೆ ಯಶಸ್ವಿಯಾಗದು. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನನ್ನ ಅನುಭವ.

    ಅಂತೆಯೇ ಎಚ್‍ಐವಿ ಪೀಡಿತ ಕುಟುಂಬವೊಂದರ ಮನೆಯಲ್ಲಿ ನಾನು ವಾಸ್ತವ್ಯ ಹೂಡಿದ್ದರಿಂದ ಆ ಕುಟುಂಬ ಊರನ್ನೇ ತೊರೆದಿದೆ ಎಂದು ವರದಿಯಾಗಿದೆ. ಇದು ನಿಜಕ್ಕೂ ದುರದೃಷ್ಣಕರ. ಎಚ್‍ಐವಿ/ ಏಯ್ಡ್ಸ್ ಬಗ್ಗೆ ಜನರಿಗಿರುವ ಅಂಧ ವಿಶ್ವಾಸವನ್ನು ದೂರ ಮಾಡುವ ಉದ್ದೇಶದಿಂದ ಏಯ್ಡ್ಸ್ ನಿಯಂತ್ರಣ ಮಂಡಳಿ ಅಧಿಕಾರಿಗಳ ಮನವಿಯ ಮೇರೆಗೆ ಅಲ್ಲಿ ವಾಸ್ತವ್ಯ ಮಾಡಿದ್ದೆ. ಆದರೆ ಸಮಾಜ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ವೈಯಕ್ತಿಕವಾಗಿಯೂ ನಾನು ಆ ಕುಟುಂಬಕ್ಕೆ ನೆರವಾಗಿದ್ದು, ಅದನ್ನು ಇಲ್ಲಿ ಚರ್ಚಿಸಲು ಹೋಗುವುದಿಲ್ಲ. ಮತ್ತೊಮ್ಮೆ ಆ ಕುಟುಂಬ ವನ್ನು ಸಂಪರ್ಕಿಸಿ ಹೇಗೆ ನೆರವಾಗಬಹುದು ಎಂದು ಪರಿಶೀಲಿಸುವೆ.

    https://www.youtube.com/watch?v=YgZ7K9ZSD2E

    ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳಲ್ಲಿರುವ ಸಕಾರಾತ್ಮಕ ಸಲಹೆಗಳನ್ನು ಮುಕ್ತ, ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವೆ. ಮುಂದಿನ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತ ಪ್ರಯತ್ನಿಸುವೆ ಎಂದಿದ್ದಾರೆ.

  • ಗ್ರಾಮ ವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿ ಷರತ್ತು

    ಗ್ರಾಮ ವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿ ಷರತ್ತು

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಇದೇ ತಿಂಗಳು ಉತ್ತರ ಕರ್ನಾಟಕ ಭಾಗದಿಂದ ಚಾಲನೆ ಸಿಗಲಿದೆ. ಆದರೆ ಈ ಬಾರಿಯ ಗ್ರಾಮ ವಾಸ್ತವ್ಯ ಹಿಂದಿನ ಗ್ರಾಮ ವಾಸ್ತವ್ಯಕ್ಕಿಂತ ಸಾಕಷ್ಟು ವಿಶೇಷವಾಗಿರಲಿದೆ. ಜೊತೆಗೆ ಗ್ರಾಮ ವಾಸ್ತವ್ಯಕ್ಕೆ ಷರತ್ತುಗಳನ್ನು ಹಾಕಿದ್ದಾರೆ.

    ಪಂಚಾಯ್ತಿ ಅಥವಾ ಹೋಬಳಿ ಮಟ್ಟದ ಸರ್ಕಾರಿ ಶಾಲೆಯಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಆ ಹೋಬಳಿ ಅಥವಾ ಪಂಚಾಯ್ತಿ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನ ಬಿಟ್ಟು ಬೇರೆ ಹೋಬಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಲ್ಲಿಗೆ ಬರುವಂತಿಲ್ಲ. ಅದೇ ಹೋಬಳಿ ಅಥವಾ ಗ್ರಾಮ ಪಂಚಾಯ್ತಿ ಮಟ್ಟದ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಮುಂದಿಡುವಂತಿಲ್ಲ. ಸಂಪೂರ್ಣವಾಗಿ ಗ್ರಾಮದ ಹಿತಕ್ಕಾಗಿ ಬೇಡಿಕೆ ಮಾತ್ರ ಇರಬೇಕು ಎಂದು ತಿಳಿದು ಬಂದಿದೆ.

    ಒಂದು ವೇಳೆ ಕಾರ್ಯಕರ್ತರ ಬೇಡಿಕೆ ಇದ್ದರೆ ಪ್ರತ್ಯೇಕವಾಗಿ ಮಾತನಾಡಿ ಮನವಿ ಸಲ್ಲಿಸಬಹುದು. ಸಿಎಂ ಉಳಿದುಕೊಳ್ಳುವ ಶಾಲೆ ಹೊಸದಾಗಿ ಸುಣ್ಣ ಬಣ್ಣ ಬಳಿದು ಸಿದ್ಧಪಡಿಸಿ ಆಡಂಬರ ಮಾಡುವಂತಿಲ್ಲ. ಶೌಚಾಲಯ ಮುಂತಾದ ವ್ಯವಸ್ಥೆಗಳು ಮೊದಲು ಹೇಗಿತ್ತೋ ಹಾಗೆ ಇರಬೇಕು. ಮುಖ್ಯಮಂತ್ರಿ ಬರುತ್ತಾರೆ ಅನ್ನೋ ಕಾರಣಕ್ಕೆ ಶಾಲೆಗೆ ಏಕಾಏಕಿ ಸೌಲಭ್ಯ ಕಲ್ಪಿಸುವಂತಿಲ್ಲ. ಸಿಎಂ ಕುಮಾರಸ್ವಾಮಿಗಾಗಿ ಹೊಸದಾಗಿ ವ್ಯವಸ್ಥೆ ಕಲ್ಪಿಸಿ ಸಿಎಂ ಹೋದ ನಂತರ ಅದನ್ನ ಅಲ್ಲಿಂದ ಕೊಂಡೊಯ್ಯುವ ಬೂಟಾಟಿಕೆ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದ್ದಾರೆ.

    2006ರಲ್ಲಿ ಗ್ರಾಮ ವಾಸ್ತವ್ಯ ವೇಳೆ ಅಧಿಕಾರಿಗಳ ಇಂತಹ ವರ್ತನೆಯಿಂದ ಸಿಎಂ ಕುಮಾರಸ್ವಾಮಿಗೆ ಮುಜುಗರ ಆಗಿತ್ತು. ಅದಕ್ಕೆ ಈ ಬಾರಿ ಅಂತದ್ದಕ್ಕೆ ಅವಕಾಶ ಆಗದ ರೀತಿ ಪೂರ್ಣ ಪ್ರಮಾಣದ ಗ್ರಾಮ ವಾಸ್ತವ್ಯ ಆಗುವಂತೆ ನೋಡಿಕೊಳ್ಳಿ ಎಂದು ಸಿಎಂ ಸೂಚಿಸಿದ್ದಾರೆ. ಸಿಎಂ ಕಚೇರಿಯಿಂದ ಇದೇ ಮಾಹಿತಿ ಜಿಲ್ಲಾಡಳಿತಕ್ಕೆ ರವಾನೆಯಾಗಲಿದೆ. ಹೀಗೆ ಈ ಬಾರಿಯ ಗ್ರಾಮ ವಾಸ್ತವ್ಯವನ್ನ ಯಶಸ್ವಿಗೊಳಿಸಲು ಸಿಎಂ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ.